ಅಂಕಣಗಳು

Subscribe


 

ಫ್ಯೂಷನ್ – ಅಪ್ರಯೋಗಗಳ ರಕ್ಷಣೆಯೇ?

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸಂಪಾದಕೀಯ ಬರೆಯಹೊರಟಾಗಲೆಲ್ಲಾ ಕಲೆಯ ವಿಸ್ತಾರದೊಳಗೆ ಆಗಿರುವ ಹುಳುಕುಗಳೇ ಏಕೆ ಕಣ್ಣ ಮುಂದೆ ಧುತ್ತನೆ ಬಂದು ನಿಲ್ಲುತ್ತವೋ ತಿಳಿಯದು. ಆದರೆ ಈ ಹುಳುಕುಗಳ ಮುಂದೆ ಕೆಲವೇ ಕೆಲವು ಒಳ್ಳೆಯತನಗಳೂ ಮುಚ್ಚಿ ಹೋಗುವ ಮಟ್ಟಿಗೆ ಸ್ಥಿತಿಯಿದೆ ಎಂದಾದರೆ, ಏನೋ ಎಡವಟ್ಟು ನಡೆಯುತ್ತಿದೆ ಎಂದು ಅಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕಲೆಯ ಕುರಿತು ಯೋಚನೆ ಮಾಡುವಾಗೆಲ್ಲಾ ನಮ್ಮೊಳಗೆ ಕಂಡು, ಕೇಳಿದ, ಅನುಭವಿಸಿದ, ಆಗಿಹೋದ, ಆಗುತ್ತಿರುವ ಎಷ್ಟೋ ನಕಲುಗಳು, ಆಡಂಬರಗಳು, ಸಮಯಸ್ಫೂರ್ತಿಯಿಲ್ಲದ ಪ್ರಯೋಗಗಳು (?) ಅಣಕಿಸುವಾಗಲೆಲ್ಲಾ, ‘ಬರೆದೇ ಬಿಡುವ’ ಎಂಬ ಉತ್ಕಟಾಕಾಂಕ್ಷೆಯೊಂದು ಪಡಿಮೂಡುತ್ತದೆ. ಕಲೆ, ಕಲಾವಿದ, ಪೋಷಕ, ವಿದ್ಯಾರ್ಥಿ, ಸಭಿಕ, ಮಾಧ್ಯಮ.., ಹೀಗೆ ಎಲ್ಲದರ ಬಗೆಗೊಂದು ಭವಿಷ್ಯದ ಕುರಿತಾಗಿ ಸಣ್ಣ ಆತಂಕದ ಸುಳಿ ಝಲ್ಲನೆ ಹಾದುಹೋಗುತ್ತದೆ. ಕೈಯ್ಯಲ್ಲಿ ಹಿಡಿದ ಪೆನ್ನು ಅದಾಗಿಯೇ ಹುಳುಕು-ಕೆಡುಕುಗಳ ಬಗ್ಗೆಯೇ ಬರೆಯತೊಡಗುತ್ತದೆ.

ಕಳೆದೆರಡು ಬಾರಿಯೂ ವಿಭಿನ್ನ ಸ್ತರಗಳಲ್ಲಿ ನಡೆಯುತ್ತಿರುವ ‘ಫ್ಯೂಷನ್’ ಎಂದು ಕರೆಸಿಕೊಂಡರೂ, ಅದು ಆಗಲಾರದೇ ಹೋಗುತ್ತಿರುವ, ವರ್ತಮಾನ ಮತ್ತು ಭವಿಷ್ಯದ ಆತಂಕಗಳನ್ನು ದುಪ್ಪಟ್ಟು ಮಾಡುತ್ತಿರುವ ಕುರಿತಾಗಿ ಬರೆದಿದ್ದೆ. ಮೊದಲನೇಯದು ಶಾಸ್ತ್ರೀಯ ನೃತ್ಯ ರಂಗಪ್ರವೇಶ ಎಂಬ ಎಡಬಿಡಂಗಿ ಸ್ಥಿತಿ; ಮತ್ತೊಂದು ಜಾನಪದದ ಸಹಜತೆಯನ್ನು ಧಿಕ್ಕರಿಸಿ ಶಾಸ್ತ್ರೀಯ ಅಂಶಗಳನ್ನು ಬೆರಕೆಪಾಕ ಮಾಡುತ್ತಾ ಎಲ್ಲೂ ಸಲ್ಲದ ಸಂಧಿಗ್ಧತೆಯನ್ನು ತರುತ್ತಿರುವ ಸೋಗಲಾಡಿತನ. ಎರಡೂ ತಮ್ಮಲ್ಲಿನ ಪರಂಪರೆಗಳನ್ನು, ಅದರ ಗಾಢ ಅಸ್ತಿತ್ವವನ್ನು ಧಿಕ್ಕರಿಸಿದ ಸಂಗತಿಗಳೇ. ಇತ್ತೀಚೆಗೆ ಧಾಡಸೀತನ ಇನ್ನೊಂದು ನೆಲೆಯಲ್ಲಿಯೂ ಅನಾವರಣಗೊಂಡಿದ್ದು ಮತ್ತೊಂದು ದೊಡ್ಡ ವಿಪರ್ಯಾಸ.

ಖ್ಯಾತನಾಮರೆನಿಸಿದ ನೃತ್ಯಪಟು. ನೃತ್ಯದ ವಿವಿಧ ಅಂಗ-ಅಂಶಗಳ ಬಗೆಗೆ ಅರಿವು-ಪಾಂಡಿತ್ಯವುಳ್ಳವರೆಂಬ ಹೆಗ್ಗಳಿಕೆ. ಆದರೆ ಪ್ರದರ್ಶನದ ವೇಳೆ ಕಂಡದ್ದೇನು? ಭರತನಾಟ್ಯ, ಕಥಕ್, ಕಥಕಳಿ- ಹೀಗೆ ಒಂದಷ್ಟು ವಿವಿಧ ನೃತ್ಯದ ಆಯಾಮಗಳ ಕಲಸುಮೇಲೋಗರ. ಕಾರಣ; ತಾವು ಕಲಿತ ಪಾಂಡಿತ್ಯವನ್ನೆಲ್ಲಾ ರಂಗಕ್ಕೆ ತರಬೇಕೆಂಬ ಹಠದಲ್ಲಿ ಕಲಾನುಭವ ಸೊನ್ನೆ ! ನಾಲ್ಕೈದು ದೋಣಿಗಳಿಗೆ ಕಾಲಿಟ್ಟು ಎಲ್ಲೂ ತಮ್ಮ ನೆಲೆಯನ್ನು ಕಂಡುಕೊಳ್ಳಲಾರದ ಇತ್ತಂಡ ! ಜೊತೆಗೆ ರಂಗದಲ್ಲೇ ಇರಿಸುಮುರಿಸಿನ ವರ್ತನೆ ; ವೇಷ-ಭೂಷಣಗಳನ್ನು ಸರಿಪಡಿಸುವುದು, ಬೆವರೊರೆಸುವುದು, ತಾದಾತ್ಮ್ಯತೆಯನ್ನು ಬಲವಂತವಾಗಿ ತರಿಸಿಕೊಳ್ಳುವುದು; ರಸ-ಭಾವದ ಒತ್ತಟ್ಟಿಗಿರಲಿ, ತಾಳ-ಲಯ ತಪ್ಪುವುದು ಕೂಡಾ ಮಾಮೂಲಿಯೆನ್ನಿಸುವಷ್ಟು ! ವಿಪರ್ಯಾಸವೆಂದರೆ, ನಂತರದ ದಿನದಲ್ಲಿ ಮಾಧ್ಯಮಗಳಲ್ಲಿ ಅದ್ಭುತವೆನಿಸುವ ವರ್ಣನೆ !

ಕಲಾವಿದ ಕುಸಿಯುವುದು ಇಲ್ಲಿಯೇ? ಮಾತ್ರವಲ್ಲ ವಿಮರ್ಶೆ, ಕಲಾಪ್ರಯತ್ನಗಳು ಸೋಲುವುದೂ ಇಲ್ಲಿಯೇ ! ವಿಮರ್ಶೆಗಳು ವ್ಯಕ್ತಿಯ ಕಲಾವಂತಿಕೆ, ಪ್ರಜ್ಞೆಯನ್ನು ಹೆಚ್ಚು ಮಾಡಬೇಕೇ ವಿನಾ ಅಣಕ ಮಾಡುವುದಲ್ಲ. ಆದರೆ ಹೆಸರು, ಸ್ಥಾನ, ಪ್ರದೇಶದ ನಡವಳಿಕೆಗಳು ಉನ್ನತವಾಗಿದೆ ಎಂಬ ಮಾತ್ರಕ್ಕೆ ಕಳಪೆಯೆನಿಸುವ ಕಾರ್ಯಕ್ರಮವನ್ನೂ ಮರು ಮಾತಿಲ್ಲದೇ ಒಪ್ಪಿಕೊಂಡರೆ ಪ್ರಗತಿಯ ಸೋಪಾನಕ್ಕೆ ಇಟ್ಟ ಮುಳ್ಳು ; ಮಾತ್ರವಲ್ಲ, ನಮಗೆ ನಾವೇ ಮಾಡಿಕೊಳ್ಳುವ ಅಪಚಾರ. ಹೊಸ ಪ್ರಯೋಗವೆಂದ ಮಾತ್ರಕ್ಕೆ ಅದರ ಔಚಿತ್ಯ ನೋಡದೇ ಒಪ್ಪಿಕೊಳ್ಳುವುದು, ಹಳತು ಎಂದಾಕ್ಷಣ ಮೂಗು ಮುರಿಯುವುದು, ಇವೆರಡರ ನಡುವೆ ಪರಂಪರೆ, ಶಾಸ್ತ್ರವೆನ್ನುತ್ತಲೇ ಅದನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಕಲೆಯನ್ನು ಹೆಣವನ್ನಾಗಿಸುವುದು.., ಒಟ್ಟಿನಲ್ಲಿ ನೃತ್ಯವೆಂದರೆ ಪ್ರದರ್ಶನದ ಉದ್ದೇಶವೇ ಪ್ರಾಥಮಿಕ ಮತ್ತು ಅಂತಿಮ ಗುರಿ ! ಇದು ಖ್ಯಾತನಾಮರ ತೆವಲಷ್ಟೇ ಅಲ್ಲ; ಬದಲಾಗಿ ಪುಟ್ಟ ಮಕ್ಕಳಾದಿಯಾಗಿ ಅವರ ಪೋಷಕರು, ಗುರುಶಿಕ್ಷಕರು ಎಲ್ಲರದ್ದೂ ಒಂದೇ ದೃಷ್ಟಿ ಏನೋ !

ಪ್ರತಿಭಾಹೀನರಿಗೆ ಶಾಸ್ತ್ರ ಒಂದು ರಕ್ಷಣೆ ; ಹಾಗೆಯೇ ಪ್ರತಿಭಾಹೀನರಿಗೆ ಪ್ರಯೋಗವೂ ಒಂದು ರಕ್ಷಣೆ. ಇದರ ಹೊರತಾಗಿಯೂ ಅಭ್ಯಾಸ ಮಾಡಿಕೊಳ್ಳಲಾಗದ ಉದಾಸೀನ, ರಂಗ ಮತು ಪ್ರೇಕ್ಷಕನೆಡೆಗಿನ ನಿರ್ಲಕ್ಷ್ಯ, ನೃತ್ಯ ಸಾಧ್ಯತೆಗಳಲ್ಲಿ ತಾವು ಈಗಾಗಲೇ ಕಂಡುಕೊಂಡ ಯಶಸ್ಸು, ಅತಿ ಆತ್ಮ ವಿಶ್ವಾಸ ; ಇವಿಷ್ಟಿದ್ದರೂ ಸಾಕು, ರಂಗದಲ್ಲಿ ಕಲಾವಿದ ಸೋತನೆಂದೇ ಅರ್ಥ.

ಆದರೂ ಬಹುಪಾಲು ಕಲಾವಿದರು ಸುರಕ್ಷಿತ ಜಾಗದಲ್ಲಿ ನಿಲ್ಲಲು ಬಯಸುತ್ತಾರೆ. ಅವರಿಗೆ ಎಲ್ಲಿ ತಮ್ಮ ಅಸ್ತಿತ್ವಕ್ಕೇ ಕುತ್ತು ಬರಬಲ್ಲುದೋ ಎಂಬ ಭಯ ! ಆದ್ದರಿಂದ ಶಾಸ್ತ್ರದ ಮೇಲೆ ಗೂಬೆ ಕೂರಿಸುತ್ತಾರೆ. ನಮ್ಮ ತಪ್ಪಲ್ಲ; ಅದು ಶಾಸ್ತ್ರೀಯತೆಯ ‘ಶ್ರೇಷ್ಟತೆ’ ಎಂದೆಲ್ಲಾ ಸಮಜಾಯಿಷಿ ಕೊಡುತ್ತಾರೆ. ಇದಕ್ಕೆ ಕುಣಿಯಲಾರದ ನರ್ತಕಿ ನೆಲ ಡೊಂಕು ಎನ್ನದೇ ವಿಧಿಯಿಲ್ಲ.

ಪ್ರತಿಭಾಶಾಲಿಯಾದವನು ಶಾಸ್ತ್ರಕ್ಕೆ ವಿರುದ್ಧವಾಗದಂತೆ ಶಾಸ್ತ್ರವನ್ನು ಬೆಳೆಸುತ್ತಾನೆ, ತಾನೂ ಬೆಳೆಯುತ್ತಾನೆ. ಪ್ರಯೋಗಗಳು ಶಾಸ್ತ್ರವಿರೋಧವಾಗಬಾರದು ; ಅಂತೆಯೇ ಶಾಸ್ತ್ರ ಪ್ರಯೋಗವಿರೋಧವಾಗಬಾರದೂ ಕೂಡಾ. ಹಾಗೆಂದು ಕಲಿತದ್ದನ್ನು ಬಿಡಬೇಕೆಂದು ಅರ್ಥವಲ್ಲ. ಆದರೆ ಕಲೆಗೆ ತರ್ಪಣ ಬಿಡುವ ಕೆಲಸವನ್ರ್ನೆಂದು ಮಾಡಬಾರದು. ಒಚಿದಂತೂ ನಿಜ; ಸತ್ತ್ವಶುದ್ಧಿಯಿರುವ ಕಲಾವಿದನಿಗೆ ಪರಂಪರೆಯ ಬಗ್ಗೆ ನಮ್ರತೆಯೂ ಇರುತ್ತದೆ; ಸ್ವಾನುಭವನಿಷ್ಠವಾಗಿ ಮಾಡಬೇಕೆನ್ನುವುದರ ಬಗ್ಗೆ ಆತ್ಮವಿಶ್ವಾಸವೂ ಇರುತ್ತದೆ. ನಮ್ಮ ನಡುವೆ ಅಂತಹುದೊಂದು ಪ್ರಜ್ಞೆ ನಿರಂತರ ಎಚ್ಚರವಿರಲಿ.

ಪ್ರೀತಿಯಿಂದ,

ಸಂಪಾದಕರು

Leave a Reply

*

code