ಅಂಕಣಗಳು

Subscribe


 

ಕಲಾದಾಸೋಹದ ನುಡಿಕಾರ : ಮೃದಂಗ ವಿದ್ವಾನ್ ವಿ.ಆರ್. ಚಂದ್ರಶೇಖರ್

Posted On: Sunday, December 29th, 2019
1 Star2 Stars3 Stars4 Stars5 Stars (No Ratings Yet)
Loading...

Author: -ಡಾ.ಮನೋರಮಾ ಬಿ.ಎನ್

‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸವಾಣಿಗೆ ಅನುರೂಪವೆಂತಿದ್ದವರು ವಿದ್ವಾನ್ ವಿ.ಆರ್.ಚಂದ್ರಶೇಖರ್. ಕರ್ನಾಟಕದ ಮಾರ್ದಂಗಿಕ ಪ್ರಮುಖರಲ್ಲಿ ಕೇವಲ ವಾದ್ಯದ ಕೈವಾರಿಕೆಯಲ್ಲಷ್ಟೇ ಅಲ್ಲದೆ, ತಿಳಿದುದನ್ನು ಹಂಚಿಕೊಳ್ಳುವ, ಅವಧಾರಿಸುವ ವಿಷಯದಲ್ಲಿಯೂ ಅವರಿಗೆ ಆದ್ಯಸ್ಥಾನ. ವರುಷವಿಡೀ  ವೃತ್ತಿಯೆಂದು ಕಲಾಯಾಪನದಲ್ಲಿ ದುಡಿದ ಜೀವವು ವರುಷಾಂತ್ಯಕ್ಕೆ ತನ್ನ ದುಡಿಮೆಯನ್ನು ಋಣಮುಕ್ತತೆಗೆಂದು ಕಲೋತ್ಸವವಾಗಿಸಿ ವಿನಿಯೋಗಿಸುತ್ತಿದ್ದ ಪರಿಯೇ ‘ಅನನ್ಯ’ವಾದುದು. ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ವಿಆರ್ಸಿ ಅವರು ತಮ್ಮ ಸಂಸ್ಥೆಯಿಂದಲೂ ಅನೇಕ ಮಂದಿ ಕಲಾವಿದರಿಗೆ ಸನ್ಮಾನ ನಡೆಸಿ ಕಾರ್ಯಕ್ರಮ ಅವಕಾಶವನ್ನಿತ್ತಿದ್ದರು. ಡಿಸೆಂಬರ್ ೨೯ ಅವರ ಜನ್ಮದಿನ.

ಅಂತಹ ಸರಳ ಸಜ್ಜನಿಕೆಯ ನಗುಮೊಗದ ಅವರ ಮೊಬೈಲ್ ನಂಬರ್‌ನಿಂದಲೇ ಅಕ್ಟೋಬರ್ ೬, ೨೦೧೯ರ ಬೆಳ್ಳಂಬೆಳಗ್ಗೆ  ‘ವಿ ಆರ್ ಸಿ ನಮ್ಮೊಡನಿಲ್ಲ’ -ಹಾಗೆಂದು ಬಂದ ಸಂದೇಶ ನೋಡಿದಾಕ್ಷಣವೇ ಅವಾಕ್ಕಾಗಿದ್ದೆ. ಆವರೆಗೂ ಬದುಕಿ ಸಂಭಾಷಿಸಿದ್ದ ಯಾವುದೇ ವ್ಯಕ್ತಿಯ ಚರಮಯಾತ್ರೆಯ ವಿವರ ಮತ್ತದೇ ವ್ಯಕ್ತಿಯ ಸಾಹಚರ್ಯದಲ್ಲಿದ್ದ ಸಂಖ್ಯೆಯಿಂದಲೇ ಬಂದಾಗ ಆಗುವ ತಳಮಳ ವಿಚಿತ್ರವಾದದು. ಪ್ರತೀ ಸಲ ಭೇಟಿಯಾದಾಗಲೂ ಇಲ್ಲವೇ ನಮ್ಮದೇ ಕಲಾಕೀಲಕ ವಾಟ್ಸಾಪ್ ಗುಂಪಿನಲ್ಲಿ ನಗು ಚೆಲ್ಲಿ ಮಾತಾಡಿಸುತ್ತಿದ್ದ ಆ ಮುಖ ಇನ್ನು ನೆನಪು ಎಂಬುದನ್ನು ಒಪ್ಪಿಕೊಳ್ಳಲು ಮನಸ್ಸು ಕಸಿವಿಸಿಪಡುತ್ತಿತ್ತು. ಅವನದ್ಧವಾದ್ಯವೆಂಬ ಜೀವನಸಾ(ರ)ಥಿಯನ್ನು ತಬ್ಬಿ ಆಲಂಗಿಸಿದ ಆ  ಛಾಯಾಚಿತ್ರವೇ ಕಣ್ಣಂಚಿನಲ್ಲಿ ಹನಿಯೂಡಿಸುತ್ತಿತ್ತು.

ಮಹಾರಾಜಪುರಂ ಸಂತಾನಂ, ಬಾಂಬೆ ಸಹೋದರಿಯರು, ವಾಣಿ ಗಣಪತಿ, ಶ್ರೀಧರ್, ಪದ್ಮಿನಿ ರಾಮಚಂದ್ರನ್, ಪ್ರತಿಭಾ ಪ್ರಹ್ಲಾದ್, ಶಂಕರ್ ಕಂದಸ್ವಾಮಿ ಮೊದಲಾದ ಸಂಗೀತ- ನೃತ್ಯದ ಖ್ಯಾತನಾಮರಿಗಷ್ಟೇ ಅಲ್ಲದೆ ಅಲ್ಲದೆ ಎಳೆಯರಿಗೂ ನುಡಿಗಾರಿಕೆಯನ್ನು ತೋರಿದ ’ಕಲಾಯೋಗಿ’ ವಸಂತಪುರಂ ರಾಮಮೂರ್ತಿ ಚಂದ್ರಶೇಖರ್. ಹಾಗೆಂದರೆ ಬಹುಜನರಿಗೆ ತಿಳಿಯದೇನೋ. ಕಾರಣ, ಎಲ್ಲರ ಬಾಯಲ್ಲಿ ಅವರು ಮೆಚ್ಚಿನ ವಿ.ಆರ್.ಸಿ ! ೧೯೯೨ರಿಂದ ಮೊದಲ್ಗೊಂಡು ಸುಮಾರು ೨೫ ಕ್ಕೂ ವರ್ಷಕ್ಕೂ ಮಿಕ್ಕಿದ ಅನವರತ ಕಲಾ ಕಾಯಕ ಅವರದ್ದು.  ಎ. ರಾಜಾಚಾರ್ ಮತ್ತು ಎ.ರಾಜಗೋಪಾಲನ್ ಅವರ ಬಳಿ ಪ್ರಾಥಮಿಕ ಅಭ್ಯಾಸ ಪಡೆದು ಟಿ.ಎಸ್.ಮಣಿ ಅವರಲ್ಲಿ ಮೃದಂಗದ ಉನ್ನತ ಶಿಕ್ಷಣ ಪಡೆದಿದ್ದರು.

ದೇಹದಲ್ಲಿ ಹೊಕ್ಕಿ ನೊಣೆಯುತ್ತಿದ್ದ ಖಾಯಿಲೆ ಅವರ ಕ್ರಿಯಾಶೀಲತೆಯನ್ನು ಜಗ್ಗಿ ಹೆರೆಯುತ್ತಿತ್ತಾದರೂ ತಮ್ಮ ಕಲೆಯ ಪಟ್ಟುಗಳನ್ನು ಅವರು ಬದುಕಿಗೂ ಹೆಣೆದುಕೊಂಡು ಜೀವಂತಿಕೆಯ ಜ್ಯೋತಿಯನ್ನು ಆರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂಬುದಕ್ಕೆ ಅವರ ಕಾರ್ಯತತ್ಪರತೆಯೇ ಸಾಕ್ಷಿ. ‘ಮನೋರಮಾ. ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಬೇಕು’ ಎಂದು ಕಟ್ಟಪ್ಪಣೆ ಮಾರ್ಚ್ – ಎಪ್ರಿಲ್ ೨೦೧೯ರ ಹೊತ್ತಿಗೆ ಮಾಡುವಾಗಲೇ  ಮಾಡಿದ್ದರು. ’ಯಾವಾಗ’ ಎಂಬ ಕುತೂಹಲಕ್ಕೆ ‘ಮುಂದಿನ ಜನವರಿ ೧೦, ೨೦೧೯ಕ್ಕೇ’ ಎಂದಿದ್ದರು.  ‘ಅಬ್ಬಾ. ಎಷ್ಟೋಂದು ಪೂರ್ವ ತಯಾರಿ ಸರ್ ಅದೂ ಈವಾಗಿನಿಂದಲೇ. ’ ಎಂದು ಬೆರಗಾಗಿ ಪಡಿನುಡಿದಿದ್ದೆ. ಆ ಹೊತ್ತಿಗೆಲ್ಲಾ ನನ್ನ ತಂದೆಯವರ ಆರೋಗ್ಯವೂ ಕ್ಷೀಣಿಸಿತ್ತಾದ್ದರಿಂದ ಯಾವ ಕಾರ್ಯಕ್ರಮಕ್ಕೂ ಮುಂಗಡ ಒಪ್ಪಿಗೆ ನೀಡುವುದೇ ಕಷ್ಟವಾಗುತ್ತಿತ್ತಾದ್ದರಿಂದ- ’ಖಂಡಿತ ಬರುವೆ. ಆದರೆ ಏನಾದರೂ ಕೊನೆಯ ಕ್ಷಣದ ವ್ಯತ್ಯಾಸಗಳಿದ್ದಲ್ಲಿ ಮನ್ನಿಸಿ’ ಎಂದು ಹಿನ್ನಡೆಯಿಟ್ಟೇ ಕ್ಷಮೆ ಕೋರಿದ್ದೆ.  ವಿಪರ್ಯಾಸವೆಂದರೆ, ಈಗ ಅವರೇ ನಮ್ಮೆಲ್ಲರಿಗಿಂತ ಮುಂದಡಿಯಿಟ್ಟು ನಡೆದಿದ್ದಾರೆ. ಅವರೇ ಪ್ರೀತಿಯಿಟ್ಟು ಆಹ್ವಾನಿಸಿದ ಕಾರ್ಯಕ್ರಮದಲ್ಲಿ ನಾನಿದ್ದೇನೆ.., ಅವರಿಲ್ಲ.. ಆದಾಗ್ಯೂ ಅವರ ಕೋರಿಕೆಯನ್ನು ಅವರೇ ಈಡೇರಿಸಿಕೊಳ್ಳುವಂತೆ ಕುಟುಂಬಕ್ಕೆ ತಮ್ಮ ಆಶಯಗಳನ್ನು ಹಸ್ತಾಂತರಿಸಿ ಅದು ಅನೂಚಾನವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.

೨೦೧೧-೧೨ ರ ಒಂದು ಮಧ್ಯಾಹ್ನ- ನಟುವಾಂಗ ಮತ್ತು ಮೃದಂಗ ಸಾಹಚರ್ಯದ ಕುರಿತ ಅಕಾಡೆಮಿ ಪ್ರಾಯೋಜಿತ ಅಧ್ಯಯನ ಸಂದರ್ಶನಕ್ಕೆಂದು ಕೊರ್ಗಿ ಉಪಾಧ್ಯಾಯರ ಸಲಹೆಯಂತೆ ವಿ.ಆರ್.ಸಿ ಅವರ ಸಿಂಗಸದ್ರದ ಮನೆಗೆ ತೆರಳಿದ್ದೆ. ದಾರಿಬದಿಗೇ ಮುಂಚಿತವಾಗಿ ಬಂದು, ಪ್ರೀತಿಯಿಂದ ಸ್ವಾಗತಿಸಿ, ಬೇಡಬೇಡವೆಂದರೂ ಕೈಯಾರೆ ಊಟವಿಕ್ಕಿ, ಅವರು ಮೆಚ್ಚುತ್ತಿದ್ದ ಶಂಕರ್ ಕಂದಸ್ವಾಮಿ ಅವರ ಹನುಮ ವರ್ಣವನ್ನು ಬಗೆಗಣ್ಣಾಗಿ ನೋಡುವಂತೆ ವಿಡಿಯೋ ಹಾಕಿ, ಹರಟೆ ಹೊಡೆದು, ಸಂದರ್ಶನವಿತ್ತಿದ್ದು ಇನ್ನೂ ಹಸಿರಾಗಿದೆ. ಆ ಸಂದರ್ಶನದ ಕೆಲವು ಭಾಗಗಳನ್ನು ಅಧ್ಯಯನ ಪ್ರಕಟಣೆಯಾಗಿಸಿ ಅವರ ಕೈಗೀಯಬೇಕಿದ್ದ ನಾನು ಇಂದಿಗೆ ಈ ನುಡಿನಮನ ಅಂಜಲಿಯಲ್ಲಿ ಹಂಚಿಕೊಳ್ಳುವಂತಾಗಿರುವುದಕ್ಕೆ ಏನನ್ನಬೇಕೋ ತಿಳಿಯದಾಗಿದೆ. ನವರಾತ್ರದ ಪುಣ್ಯಕಾಲದಲ್ಲಿ ಅಗಲಿದ ಆ ಅದಮ್ಯ ಉತ್ಸಾಹದ ಚೈತನ್ಯಕ್ಕೆ ಅಂಜಲಿಬದ್ಧ ಪ್ರಣಾಮಗಳು ಈ ಮೂಲಕವಾಗಿ.

ವಿದ್ವಾನ್ ವಿ.ಆರ್.ಚಂದ್ರಶೇಖರ್ ಅವರ ಜೊತೆ ಡಾ.ಮನೋರಮಾ ಬಿ‌ಎನ್ ಕರ್ನಾಟಕದ ನಟುವಾಂಗ ಪರಂಪರೆಯ ಅಧ್ಯಯನಕ್ಕೆ ನಡೆಸಿದ ಸಂದರ್ಶನದ ಆಯ್ದಭಾಗ.

‘ಸಾಮಾನ್ಯವಾಗಿ ನಟುವಾಂಗ ಮಾಡುವ ಬಹಳಷ್ಟು ಮಂದಿಗೆ ಲಯ, ಎಣಿಕೆಗಳು ಗೊತ್ತಿರುವುದಿಲ್ಲ. ಆ ಸಮಯಕ್ಕೆ ಮೃದಂಗದವರೇ ಸಹಕರಿಸಿ ಹೊಂದಿಕೊಂಡು ಹೋಗುತ್ತಾರೆ. ಹಾಗಾಗಿ ನಟುವಾಂಗ ಮೃದಂಗಕ್ಕೆ ಪರಸ್ಪರ ಸಂಬಂಧ ಇದೆ ಎಚಿದಾಗಿದೆ. ನಟುವಾಂಗ ಮಾಡುವವರಿಗೆ ಅಕ್ಷರ, ಆವರ್ತನ, ಎಣಿಕೆಗಳು ಚೆನ್ನಾಗಿ ಗೊತ್ತಿದರೆ ಬೇರೆ ಬೇರೆ ಅಡವು, ಮುಕ್ತಾಯಗಳನ್ನು ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಮೃದಂಗದವರನ್ನು ಜೊತೆ ಕೂರಿಸಿಕೊಂಡು ಪಾಠ ಹೇಳಿಸಿಕೊಳ್ಳುವುದು ವಿಹಿತ.

ಮೃದಂಗದ ಸೊಲ್ಲುಗಳಿಂದಲೇ ಇಂದಿನ ಭರತನಾಟ್ಯಾದಿ ನೃತ್ಯಕ್ರಮದ ಪಾಟಾಕ್ಷರಗಳು ಪ್ರಭಾವಿತವಾಗಿರುವುದು. ಆದರೆ ಕೊನೆಗೋಲುವಿನಲ್ಲಿ ವಿಭಿನ್ನತೆಯಿದೆ. ಮೃದಂಗದಲ್ಲಿ ನರ್ತನದ ಸಮಯದಲ್ಲುಂಟಾಗುವ ಖಾಲಿಜಾಗವನ್ನು ನುಡಿಕಾರಗಳ ಮೂಲಕ ತುಂಬಬಹುದು. ಅದು ಆಕರ್ಷಣೆಯೂ ಹೌದು; ಕೇಳಲು ಹಿತವೂ ಕೂಡಾ. ಆದರೆ ಮೃದಂಗದಲ್ಲಿ ತೋರಿಸುವುದನ್ನೆಲ್ಲಾ ನಟುವಾಂಗದಲ್ಲಿ ನುಡಿಸಹೊರಟರೆ ಅದು ಅಸಂಬದ್ಧವೆನಿಸುತ್ತದೆ. ನರ್ತನಕ್ಕೆ ಅನುಕೂಲವಾಗಿ ನಟುವಾಂಗ ಇರಬೇಕು. ಅಡವುಗಳನ್ನು ತಿಳಿದುಕೊಂಡು ಮೃದಂಗದವರು ಕೂಡಾ ವೈವಿಧ್ಯವನ್ನು ನುಡಿಕಾರಗಳಲ್ಲಿ ಕೊಡಬೇಕು. ಉದಾಹರಣೆಗೆ ದಿದ್ದಿತೈಗೆ ಮೃದಂಗದವರು ಕಿಟತಕದೀಂ ಎಂದೋ ತೈತೈದಿದ್ದಿತೈಗೆ ಬದಲಾಗಿ ತದ್ದೀಂಗಿಣತೋಂ, ತದ್ದೀಂ ತರಿಕಿಟತೋಂ, ತಕ್ಕಿಟತಕತರಿಕಿಟತೊಂ ಇತ್ಯಾದಿಯಾಗಿ ನುಡಿಸಬಹುದು. ಆದರೆ ಯಾವುದೇ ನುಡಿಕಾರಗಳ ಬಳಕೆಯಿಂದ ನರ್ತನಕ್ಕೆ ತೊಂದರೆ ಆಗಬಾರದು. ಉಳಿದಂತೆ ಮೃದಂಗದವರು ಗಾಯನಕ್ರಮವನ್ನೂ ಅನುಸರಿಸಬೇಕು. ಸಂಗೀತ Pಛೇರಿಗೆ ನುಡಿಸಿದಂತೆ ಸಾಹಿತ್ಯಭಾಗಕ್ಕೆ ನುಡಿಸಿದರೆ ಕೇಳಲು ಅನುಕೂಲ.

ತಮಿಳ್ನಾಡಿನ ಕಲಾವಿದರ ಪ್ರಭಾವ ಕರ್ನಾಟಕದ ಮೇಲೆ ಹೆಚ್ಚಾಗಿಯೇ ಬೀರಿದೆ. ತಿರುವಾನ್ಮಿಯೂರಿನ ಕಲಾಕ್ಷೇತ್ರದಲ್ಲಿ ಸೊಲ್ಕಟ್ಟಿನ ನಡುವಿನ ಮೌನಕ್ಕೆ ಹೆಚ್ಚು ಅವಕಾಶ. ಸೊಲ್ಕಟ್ಟಿನ ಅಥವಾ ಸಾಹಿತ್ಯದ ನಡುವಿನ ಅಂತರವನ್ನು ತುಂಬಿಸಲು ಹೆಚ್ಚು ಅವಕಾಶವಿಲ್ಲ. ಈ ಬಗೆಯ ಪದ್ಧತಿ ಚೆಂದವೇ ಆದರೂ ಬಿಡುವನ್ನು ಸೌಂದರ್ಯಸೂಚಕವಾಗಿ ತುಂಬಿಸಿಕೊಡುವಲ್ಲಿ ಅವಕಾಶ ದಕ್ಕದೆ, ಸೊಲ್ಕಟ್ಟಿನಲ್ಲಿ ತೀರಾ ಅಂತರ ಸಿಕ್ಕರೆ ಜನರು ಕಛೇರಿ ಮುಗೀತು ಅಂತಂದುಕೊಳ್ಳಬಹುದು. ತಮಿಳ್ನಾಡಿನ ನಟುವನ್ನಾರ್‌ಗಳು ‘ತಕಿಟ’ ಎಂಬಂತಹ ಅಕ್ಷರವಿನ್ಯಾಸಗಳಲ್ಲಿ ‘ಟ’ ಕೊನೆಯ ಅಕ್ಷರಕ್ಕೆ ಮುಚ್ಚಿ ನುಡಿಸುತ್ತಾರೆ. ಈ ಶಬ್ದ ಒಂದು ಅಡವು ಸಮಾಪ್ತಿಯಾಯಿತು ಎನ್ನುವುದರ ಸಂಕೇತ. ಆದರೆ ಕರ್ನಾಟಕದ ಒಳಭಾಗಗಳಲ್ಲಿ ನಟುವಾಂಗ ಎನ್ನುವುದು ಭಜನೆಯಂತೆಯೇ ಆಗುವುದಿದೆ. ಹಲವು ಬಾರಿ ನರ್ತನದ ಪದಘಾತಗಳನ್ನು ಅಥವಾ ಸೊಲ್ಕಟ್ಟನ್ನು ಪೂರ್ಣವಾಗಿ ನುಡಿಸುವುದೇ ಇಲ್ಲ. ಬಾಯಿಯಲ್ಲಿ ಹೇಳುವ ಅಕ್ಷ್ಷರಗಳು ನುಡಿಸಾಣಿಕೆಯಲ್ಲಿ ಬರುವುದಿಲ್ಲ. ಕಾಲ, ಹೆಜ್ಜೆಗಳನ್ನು ಅರಿತು ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ನಟುವಾಂಗ ನುಡಿಸುವವರು ಕರ್ನಾಟಕದಲ್ಲಿ ಕಡಿಮೆ.

‘ನೃತ್ಯ ಕಾರ್ಯಕ್ರಮದ ಪೂರ್ವಾರ್ಧಗಳೇ ನಟುವಕಾರನಿಗೆ ಹೆಚ್ಚು ಸವಾಲೆನಿಸುವಂತಾದ್ದು. ಸೊಲ್ಕಟ್ಟು ಹೇಳುವುದರಲ್ಲಿ ಮೆಲು, ದೃಢದ ಏರಿಳಿತ, ವೈವಿಧ್ಯತೆ ಇರಬೇಕು. ಮುಕ್ತಾಯಗಳನ್ನು ಅರಿತು ನುಡಿಸುವುದನ್ನು ಕಲಿಯಬೇಕು. ಬ್ಭೆರೆಯವರ ಕಾರ್ಯಕ್ರಮಗಳಿಗೆ ಹೋಗಿ ನೋಡಿ ಕಲಿತುಕೊಳ್ಳುವ ಸೌಹಾರ್ದತೆ ಇರಬೇಕು. ಇದಕ್ಕೆ ಕನಿಷ್ಟಪಕ್ಷ ೨ ವರ್ಷವಾದರೂ ನಟುವಾಂಗ ಕಲಿಕೆಯಾಗಬೇಕು. ಗುರುಮುಖೇನ ಕಲಿಯುವುದು ಒಳ್ಳೆಯ ಕ್ರಮ. ಆದಾಗ್ಯೂ ಕಲಿಯುವ ಆಸಕ್ತಿಯಿರುವವರಿಗೆ ಲಯದ ಮೇಲೆ ಹಿಡಿತ, ಸಂಗೀತ ಜ್ಞಾನ, ಸೊಲ್ಕಟ್ಟು- ಅಡವುಗಳನ್ನು ತ್ರಿಕಾಲಗಳಲ್ಲಿ ಹೇಳಲು ಬರುವಂತೆ ಅಭ್ಯಾಸ ಬೇಕೇ ಬೇಕು. ಆಗಲೇ ಉತ್ತಮ ನಟ್ಟುವನ್ನಾರ್ ಆಗಿ ರೂಪುಗೊಳ್ಳಲು ಸಾಧ್ಯ.

ನಟುವಾಂಗಕ್ಕೆ ಪುರುಷರೇ ಇದ್ದರೆ ಸೊಲ್ಕಟ್ಟು ಹೇಳುವ ಗಡಸುತನಕ್ಕೆ ಒಳ್ಳೆಯದು. ಗಡಸು ಧ್ವನಿ ಇರುವ ಹೆಣ್ಣುಮಕ್ಕಳಿದ್ದರೂ ನಟುವಾಂಗ ಕಳೆಗಟ್ಟುಗುತ್ತದೆ. ತಾಳ, ಸೊಲ್ಕಟ್ಟಿನ ಆ ರಭಸಕ್ಕೆ ಶಾರೀರ, ಸ್ಪಷ್ಟತೆ, ಅನುಸರಣಾರ್ಹ ಮನೋಧರ್ಮ ಬೇಕು. ಗುರುಗಳು ನಟುವಾಂಗ ಮಾಡಿದರೆ ತಾಳ-ಲಯ ನೇರ-ನಿರ್ದಿಷ್ಟವಾಗಿರುತ್ತದೆ; ಶಿಷ್ಯರು ಮಾಡುವ ಕ್ರಮ; ಅಡವುಗಳ ಸರಣಿಯ ಕ್ರಮ ತಿಳಿದಿರುತ್ತದೆ ಎಂಬ ಕಾರಣಕ್ಕೇ ಗುರುಗಳಿಂದ ನಟುವಾಂಗ ಮಾಡಿಸಲಾಗುತ್ತಿತ್ತು.

ಈಗಿನವರಿಗೆ ಹುಮ್ಮ್ಮಸ್ಸು ಜಾಸ್ತಿ. ಮೃದಂಗದಲ್ಲಿ ಏನು ನುಡಿಸುತ್ತಾರೆ ಅನ್ನೋ ಗಮನವೇ ಹೆಚ್ಚಿಗಿರುವುದರಿಂದ ನಟುವಾಂಗ ಮಾಡುವವರೂ ನಮ್ಮಂತೆಯೇ ನುಡಿಸಲು ಶುರು ಮಾಡುತ್ತಾರೆ. ಇದರಿಂದ ಬಿಗಿ, ಹದ ತಪ್ಪುತ್ತದೆ. ನಟುವಾಂಗವನ್ನು ನುಡಿಸುವ ವೃತ್ತಿ ಮಾಡಿಕೊಳ್ಳುವವರು ಆಯಾ ಕಲಾವಿದರ ಶೈಲಿಗಳನ್ನು ಅಭ್ಯಾಸ ಮಾಡಬೇಕು. ಮೃದಂಗದ ಪಾಠಗಳನ್ನು ಕೆಲವೊಂದಷ್ಟಾದರೂ ಕಲಿಯಬೇಕು. ಅಂತೆಯೇ ಸ್ವಂತ ಶೈಲಿಗಳನ್ನು ಗುರುತಿಸಿಕೊಂಡು ರೂಢಿಸಿಕೊಳ್ಳಬೇಕು.

Leave a Reply

*

code