ಅಂಕಣಗಳು

Subscribe


 

ಮೃಗಶೀರ್ಷ ಹಸ್ತ

Posted On: Saturday, October 17th, 2009
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

ಲಕ್ಷಣ: ಸರ್ಪಶಿರದ ಕಿರು ಮತ್ತು ಹೆಬ್ಬೆರಳನ್ನು, ಮೇಲಕ್ಕೆ ನೀಡಿ, ಉಳಿದ ಬೆರಳುಗಳನ್ನು ಮಧ್ಯಭಾಗ ನೇರವಾಗಿ ಬಗ್ಗಿಸುವುದು. ಮೃಗಶೀರ್ಷವೆಂದರೆ ಜಿಂಕೆಯ ತಲೆ ಎಂದರ್ಥ.  ನರ್ತನ ನಿರ್ಣಯದಲ್ಲಿ  ಇದನ್ನು ‘ಗೋಮುಖ ಹಸ್ತ’ ಎನ್ನುತ್ತಾರೆ.
ಗೌರಿಯು ಮದನದಹನದ ಬಳಿಕ ಶಿವನನ್ನು ಅರಾಧಿಸುವಾಗ, ಭಸ್ಮಲೇಪಕ್ಕೆ ವಿನಿಯೋಗಿಸಿದ ಹಸ್ತವಿದು. ಇದು ಸ್ತ್ರೀ ಹಸ್ತಗಳ ಪೈಕಿ ಒಂದು. ಋಷಿ ವರ್ಣ, ಬಿಳಿ ಬಣ್ಣ, ಋಷಿ : ಮಾರ್ಕಾಂಡೇಯ, ಅಧಿದೇವತೆ : ಮಹೇಶ್ವರ.
ಒಡಿಸ್ಸಿಯಲ್ಲಿ ಮೃಗಶೀರ್ಷವನ್ನು ಹಂಸಪಕ್ಷವೆಂದೂ, ಮಣಿಪುರಿ ನೃತ್ಯದಲ್ಲಿ ಧೇನುವೆಂದೂ ಕರೆಯುತ್ತಾರೆ. ಕಿರು ಮತ್ತು ಹೆಬ್ಬೆರಳನ್ನು ನಿಡಿದಾಗಿರಿಸಿ ಉಳಿದ ಬೆರಳನ್ನು ನೇರವಾಗಿ (೧೮೦ ಕೋನದಲ್ಲಿ) ಬಗ್ಗಿಸುವ ಮೃಗಶೀರ್ಷ ವಿನ್ಯಾಸದ ಪಾಶ ಮುದ್ರಾ  ಶಾಸ್ತ್ರೀಯ ಧಾರ್ಮಿಕ ವಿಧಿಗಳಲ್ಲಿ ಮುಖ್ಯವಾದುದು.mrigasirsha-hasta

ವಿನಿಯೋಗ: ಸ್ತ್ರೀ, ಕೆನ್ನೆ, ರಥದ ಚಕ್ರ, ಗೌರವ ಸೂಚನೆ, ಭಯ, ವಾದಮಾಡುವುದು, ನೇಪಥ್ಯ, ಇರುವ ಸ್ಥಳ, ವಿಭೂತಿ ಧಾರಣೆ, ಭೇಟಿ (ಎದುರು ಬದುರಾಗುವಿಕೆ), ರಂಗೋಲಿ ಹಾಕುವುದು, ಕಾಲು ಒತ್ತುವುದು, ಎಲ್ಲವನ್ನು ಸೇರಿಸುವಿಕೆ, ಮನೆ, ಛತ್ರಿ ಹಿಡಿಯುವುದು, ಮೆಟ್ಟಿಲು, ಹೆಜ್ಜೆ ಇಡುವಿಕೆ, ಪ್ರೀತಿಯಿಂದ ಕರೆಯುವುದು, ನಡೆಯುವುದು, ಜಿಂಕೆ ಅಥವಾ ಮೃಗ ಮುಖ.
ಇತರೆ ವಿನಿಯೋಗ: ‘ಇಲ್ಲಿ’, ‘ಇದೆ’, ‘ಈಗ ಸಾಧ್ಯ’ವೆನ್ನುವುದು, ಯೋಗ್ಯ, ದಾಳವನ್ನೆಸೆಯುವುದು, ಅಳತೆ ಮಾಡುವುದು, ಬೆವರನ್ನು ಒರೆಸುವುದು, ಗಂಧ ಲೇಪನ, ಪರದೆ, ಅತಿಮಾನುಷ ಶಕ್ತಿಗಳನ್ನು ಸ್ತುತಿಸುವುದು ಅಥವಾ ತೃಪ್ತಿಪಡಿಸುವುದು, ಆಜ್ಞೆ, ಯೋಚಿಸುವುದು, ತನ್ನನ್ನು ಸೂಚಿಸುವುದು, ದೇಹ, ಸಂಜ್ಞಾಭಾಷೆ, ಋಷಿ ಜಾತಿ, ಬಿಳಿ ಬಣ್ಣ, ಸೂಕ್ತವಾದ ಸಮಯ ಅಥವಾ ಅವಕಾಶ, ಮಂದ, ಇಂದು, ಸಮರ್ಥ, ಉಲ್ಲಾಸ, ಮೊಲ, ಇದು, ಕೋಪ ಮುಚ್ಚಿಡುವುದು, ಕೂದಲು ಕೆದರು, ಹಣೆಯ ಬೆವರು ಒರೆಸುವುದು, ಬರೆವ ಲೇಖನಿ ಹಿಡಿಯುವುದು, ಭಸ್ಮಲೇಪನಕ್ಕೆ ಉಪಯೋಗಿಸುವುದು, ಮಿಥ್ಯಾಕೋಪ, ಕ್ರಮ, ದಪ್ಪ ಹೊಟ್ಟೆ ತೋರಿಸುವುದು, ವಸ್ತ್ರ, ತಿರಸ್ಕಾರ, ಮಕ್ಕಳಿಗೆ ತಿಳಿಯಹೇಳುವುದು, ಮುಂಗುರಳನ್ನು ಸರಿಪಡಿಸುವುದು, ಸನ್ಮಾರ್ಗ ಪ್ರದರ್ಶನ, ಅಂಗೀಕಾರ, ಸರಸ-ಸಲ್ಲಾಪ, ಕುಳ್ಳ, ಸೂರ್ಯನನ್ನು ನೋಡುವುದು, ಬೋಧಿಸುವುದು, ‘ಮೆಲ್ಲಗೆ ಮಾತನಾಡು’ ಎನ್ನುವುದು, ಗೋಡೆ, ಯುದ್ಧ, ಶಾಂತಿ, ದೇವರು, ಹಿಂದಕ್ಕೆ ಬಾ ಎಂದು ಕರೆಯುವುದು, ಶಿವಲಿಂಗ ಧರಿಸುವುದು, ಬಾಲಕ, ನಾಚಿಕೆ, ಶಕ್ತ್ಯಾಯುಧದ ಠೇಂಕಾರ ಮಾಡಲು, ಬಾಣಗಳನ್ನು ಒಗೆಯಲು, ಕಾಲಿಗೆ ರಂಗನ್ನು ಹಚ್ಚಿಕೊಳ್ಳುವುದು, ಮೃಗಾಸನ(ಜಿಂಕೆಯ ಚರ್ಮದಿಂದ ರಚಿಸಿದ್ದು), ವಿವಿಧ ಬಗೆಯ ಯೋಚನೆ-ಭಾವಗಳನ್ನು ತೋರಿಸುವುದು, ದೂರದಿಂದ ಹತ್ತಿರ ಕರೆಯುವುದು, ಪ್ರಿಯನನ್ನು ತಿರಸ್ಕರಿಸುವ ಸೋಗುಮಾಡುವಾಗ, ಗೌರಿಯು ಮದನದಹನದ ಬಳಿಕ ಶಿವನನ್ನು ಆರಾಧಿಸುವಾಗ, ನಾಲ್ಕು ನಾಯಕಿಯರ ಬಣ್ಣನೆಗೆ ಬಳಕೆಯಾಗುತ್ತದೆ.
‘ದೀರ್ಘಾಯುವಾಗು’ ಎಂಬ ಆಶೀರ್ವಾದ, ಸಣ್ಣ ವಸ್ತು, ಕಳ್ಳ, ಶರಣು ಬರುವುದು, ಗೂಬೆ, ಹಲ್ಲು, ಪವಿತ್ರತೆ, ಮುಖ, ರಸ್ತೆ, ಲೇಪನ, ಮೊಸರು, ಕುಡಿಯುವುದು, ನಿದ್ರಿಸುವುದು, ಕೊಡಲಿರುವುದು, ಈಗಾಗಲೇ ಹೇಳಲಾದ ವಾಕ್ಯ, ಕೊಳಲೂದುವುದು, ಯುವಕ, ಸಾಮವೇದ, ಯಜುರ್ವೇದ, ಅಥರ್ವವೇದ, ಪ್ರಯಾಣ, ಹೊಗಳುವುದು,  ನಮಸ್ಕಾರ, ಗುರು, ‘ಇದು ಈಗಿರುವಂತದ್ದು’ ಎನ್ನಲು, ತಣ್ಣನೆಯ ಮೃದುವಸ್ತುಗಳಿಂದ ಉಜ್ಜುವುದು, ಸ್ವೇದ, ತ್ವಚೆ, ತಾವರೆ, ಎಲೆ, ಮೊಗ್ಗು, ಮೃಗವದನ, ವೈಶಾಖ ಮಾಸ, ಸೌಂದರ್ಯ, ರಕ್ಷಣೆ, ಪ್ರಾರ್ಥನೆ, ನೀತಿ, ಕನ್ನಡಿ ನೋಡುವುದು, ಶರಚ್ಚಂದ್ರ, ಚಂದ್ರನ ಬೆಳಕು, ಸುಂದರವಾದುದು, ಹೇಳಿಕೊಳ್ಳುವುದು, ಬಿಳಿವಸ್ತು, ಒಗ್ಗೂಡುವಿಕೆ, ಶೃಂಗಾರ, ಚಂಚಲ, ಕುಲ, ಮಗು, ಆಜ್ಞಾನುವರ್ತಿ, ಪರಿತ್ಯಾಗ, ಧ್ಯಾನ, ಇಷ್ಟದ ವಸ್ತು, ಪದ್ಮಿನಿ ನಾಯಕಿ, ಮಹಿಳೆ, ಕುದುರೆಯ ಸ್ನಾಯುಗಳು, ಯಜ್ಞೋಪವೀತ, ಬಾಯಲ್ಲಿ ನೀರೂರಿಸುವುದು, ವಜ್ರಾಯುಧ, ಭೂಮಿಗೆ ಮೃತ್ತಿಕಾಲೇಪನ, ನವಗುಣ, ವರ್ತಮಾನ, ದೃಢತ್ವಗಳ ಸಂವಹನಕ್ಕೆ ಈ ಹಸ್ತ ಅನುಕೂಲಕರ.
ಸಂಕರ ಹಸ್ತ ವಿಭಾಗದಲ್ಲಿ ಮೃಗಶೀರ್ಷ ಹಸ್ತಗಳನ್ನು ಕಿವಿಗಳ ಸಮೀಪ ಹಿಡಿದರೆ ಎರಡು ಕಿವಿಗಳು ಎಂದೂ, ಬಾಯಿಯ ಬಳಿ ಹಿಡಿದರೆ ಅಳುವುದು ಎಂದೂ, ಮುಖವನ್ನು ತೋರಿಸುವ ಅರ್ಥದಲ್ಲೂ, ಎರಡು ಮೃಗಶೀರ್ಷ ಹಸ್ತಗಳನ್ನು ಎದೆಯಿಂದ ೮ ಅಂಗುಲ ದೂರದಲ್ಲಿ ಒಂದು ಹಸ್ತದ ಮುಖವು ಇನ್ನೊಂದು ಹಸ್ತದ ಮುಖಕ್ಕೆ ಸೇರುವಂತೆ ಹಿಡಿದರೆ ಕೋಟೆ, ಸೆರೆ ಹಿಡಿದಿಡುವುದು ಎಂಬರ್ಥದಲ್ಲೂ, ತುದಿಗಳನ್ನು ತೋರಿಸುವ ಅರ್ಥದಲ್ಲೂ, ಆಡುವ ಕೊಳವೆಂದೂ ಅರ್ಥೈಸಬಹುದು.
ಬಾಲ್ಯವಯಸ್ಸನ್ನು ಮೃಗಶೀರ್ಷ ಹಸ್ತ ಸಂಕೇತಿಸುತ್ತದೆ.  ನಾನಾರ್ಥ ಹಸ್ತ ವಿಭಾಗದಲ್ಲಿ ಈ ಹಸ್ತವನ್ನು ಭುಜಾಂತರದ ಪ್ರದೇಶದಲ್ಲಿ ಅಡ್ಡವಾಗಿಯೂ ಸ್ಥಿರವಾಗಿಯೂ ನಿಲ್ಲಿಸಿದಲ್ಲಿ ಗಂಡ-ಹೆಂಡತಿಯ ಮನಸ್ಸು-ಶರೀರದ ಮಿಲನ ಎಂಬರ್ಥಗಳನ್ನು ಸೂಚಿಸುತ್ತದೆ ಮತ್ತು ಕೆಳಗೆ ಹಿಡಿದರೆ, ‘ಕ್ವ’ ಎಂಬ ಪ್ರತ್ಯಯವೆಂದೂ ಅಥರ್ವವೇದವೆಂದೂ, ಅಡ್ಡಲಾಗಿ ಹಿಡಿದರೆ ಸಾಮೋಪಾಯವೆಂದೂ, ಮುಂದೆ ಚಾಲಿಸಿದರೆ ದಾನೋಪಾಯವೆಂದೂ, ಮೇಲ್ಮುಖವಾಗಿ ಹಿಡಿದರೆ ಹೂವಿನ ತೆರೆದಿರದ ಒಳ ಭಾಗವೆಂದು ಸಂವಹಿಸಬಹುದು.
ಸಪೂರ ದೇಹ, ವಸ್ತುಗಳಲ್ಲಿ ಸಮಾನ ಭಾವ, ಮೂರ್ಛೆ, ಸಮಜಾಯಿಷಿ, ಜಿಂಕೆ, ಕುದುರೆ, ಪೂರಕ ಸ್ಥಿತಿ, ವಿಶ್ರಾಂತ ಮನಸ್ಥಿತಿಯ ಸೂಚನೆಗೆ ಮೃಗಶೀರ್ಷ ಹಸ್ತಗಳನ್ನು ಜೋಡಿಸುವುದರಿಂದ ಸಾಧ್ಯ.
ಮೃಗಶೀರ್ಷ ಹಸ್ತಗಳನ್ನು ಎರಡು ಭುಜಗಳ ಬಳಿ ಅನ್ಯೋನ್ಯಭಿಮುಖವಾಗಿ ಹಿಡಿದರೆ ಅದು ಶ್ರೀಕೃಷ್ಣಾವತಾರ ಹಸ್ತ. ಉಳಿದಂತೆ ಚಂದ್ರಶೇಖರ ಹಸ್ತ, ಈಶಾನಹಸ್ತ, ಬೃಹಸ್ಪತಿ ಹಸ್ತ, ದಂಪತಿ ಹಸ್ತ, ಮಾತೃ ಹಸ್ತ, ಶ್ವಶ್ರು ಹಸ್ತ (ಅತ್ತೆ), ನನಾಂದೃ ಹಸ್ತ (ಗಂಡನ ಸಹೋದರಿ; ನಾದಿನಿ), ಸ್ನುಷಾ ಹಸ್ತ (ಸೊಸೆ), ಸಪತ್ನೀ (ಸವತಿ) ಹಸ್ತ, ಯಾತಾರಿಹಸ್ತ(ಸಹೋದರನ ಅಥವಾ ಸಹೋದರಿಯ ಸೊಸೆ), ಪುತ್ರೀಪುತ್ರ ಹಸ್ತಗಳಲ್ಲಿ, ವೇಣು, ಕನ್ಯಾರಾಶಿ, ಶಯನಾಗಾರ, ದಂಪತಿಕೇಶೀಶಾಲಾ, ಹರಿಣ ಎನ್ನುವಲ್ಲಿ ಮೃಗಶೀರ್ಷದ ಉಪಯೋಗವಾಗುತ್ತದೆ.
ನೃತ್ಯ ಸ್ಥಾನಕಗಳ ಪೈಕಿ ಬ್ರಹ್ಮಸ್ಥಾನಕಕ್ಕೆ ಮೃಗಶೀರ್ಷ ಉಪಯೋಗವಿದೆ.
ಉಪಸರ್ಗ ಇಲ್ಲದ ಕ್ರಿಯಾಪದವನ್ನು ಮತ್ತು ಅಥರ್ವಣವೇದ ಸೂಚಿಸಲು ಮೃಗಶೀರ್ಷ ಹಸ್ತವನ್ನು ಕೆಳಮುಖವಾಗಿ ಹಿಡಿದರೆ, ಮೃಗಶೀರ್ಷ ಹಸ್ತವನ್ನು ಹಿಡಿದು ಕಂಪಿಸುವುದು ರಿಷಭ ಸ್ವರದ ಸಂಕೇತ. ಚತುರೋಪಾಯಗಳಲ್ಲಿ ಮೃಗಶೀರ್ಷ ಹಸ್ತವನ್ನು ಅಡ್ಡಲಾಗಿ ಹಿಡಿಯುವುದು ಸಾಮೋಪಾಯವೆಂದೂ, ಮೃಗಶೀರ್ಷ ಹಸ್ತವನ್ನು ಅಡ್ಡಲಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಅತ್ತಿತ್ತ ಚಲಿಸುವುದು ಬೇಧೋಪಾಯವೆಂದೂ ಅರ್ಥ.
ಶುಕತುಂಡ ಹಸ್ತ ಅಥವಾ ಮೃಗಶೀರ್ಷ ಮುದ್ರೆಯನ್ನು ಮುಖದೆದುರಿನಲ್ಲಿ ಚಲಿಸದೆ ನಿಲ್ಲಿಸುವುದು ಪದ್ಮಿನಿ ನಾಯಕಿಯ ಸಂಕೇತವಾದರೆ, ಮೃಗಶೀರ್ಷ  ಅಥವಾ ಅರ್ಧ ಮೃಗಶೀರ್ಷ ಹಸ್ತವನ್ನು ಭುಜದ ಹತ್ತಿರ ಚಲಿಸದೆ ಹಿಡಿದರೆ ಚಿತ್ತಿನಿ ನಾಯಕಿಯೆಂದೂ, ಹಂಸಪಕ್ಷಹಸ್ತ ಅಥವಾ ಮೃಗಶೀರ್ಷವನ್ನು ಎದೆಯ ಮುಂದೆ ನಿಲ್ಲಿಸಿದರೆ ಶಂಕಿನಿ ನಾಯಕಿಯೆಂದೂ ಅರ್ಧಚಂದ್ರಹಸ್ತ ಅಥವಾ ಮೃಗಶೀರ್ಷವನ್ನು ಹೊಟ್ಟೆಯ ಬಳಿ ಹಿಡಿಯುವುದು ಹಸ್ತಿನಿ ನಾಯಕಿಯೆಂದೂ ಅರ್ಥ.
ಯಕ್ಷಗಾನದಲ್ಲೂ ಹೆಣ್ಣು, ಗಂಡು, ಭಸ್ಮದಾರಣೆ, ಮನೆ ಇತ್ಯಾದಿಯಾಗಿ ಬಳಸಲ್ಪಡುತ್ತದೆ.
ನಿತ್ಯ ಜೀವನದಲ್ಲೂ ಬಾ, ಪ್ರಾಣಿಗಳನ್ನು ಸವರುವಾಗ, ವಿಭೂತಿ ಹಚ್ಚಿಕೊಳ್ಳುವುದು…  ಇತ್ಯಾದಿಯಾಗಿ ಬಳಕೆಯಾಗುತ್ತದೆ.
ಮೃಗಶೀರ್ಷ ಹಸ್ತದಲ್ಲಿ ಉಂಗುರ ಬೆರಳನ್ನು ಪ್ರತ್ಯೇಕಿಸಿ ಅಗಲವಾಗಿ ಹಿಡಿಯುವುದು ಅರ್ಧಮೃಗಶೀರ್ಷ ಎನಿಸಿಕೊಳ್ಳುತ್ತದೆ. ಭರತಾರ್ಣವದಲ್ಲಿ ಉಲ್ಲೇಖಿತ.
ಇದರ ವಿನಿಯೋಗ : ಬಾಲಸ್ತ್ರೀಯನ್ನು ತೋರಿಸಲು, ಸಮಾಧಾನ ಅಥವಾ ಉಪಶಮನದ ಮಾತು ಎಂಬ ಅರ್ಥದಲ್ಲಿ ಉಪಯೋಗಿಸಲ್ಪಡುತ್ತದೆ. ಅರ್ಧ ಮೃಗಶೀರ್ಷವನ್ನು ಕೆಳಹೊಟ್ಟೆಯ ಬಳಿ ಹಿಡಿದಾಗ ತಂಗಿಯೆಂದೂ ಅರ್ಥ.ಇದರ ಬಳಕೆ ಕಡಿಮೆ.
ಮೃಗಶೀರ್ಷ ಹಸ್ತಗಳನ್ನು ಎದೆಯ ಮುಂಭಾಗದಲ್ಲಿ ಮೇಲ್ಮುಖವಾಗಿ ಮಾಡಿ ಒಂದರ ಪಕ್ಕದಲ್ಲೊಂದು ಹಿಡಿಯುವುದು ಭಾರತೀ ಹಸ್ತ. ಭಾರತೀ ಎಂದರೆ ಸರಸ್ವತಿ ಎಂದರ್ಥ. ಬಾಲರಾಮಭರತದಲ್ಲಿ ಉಲ್ಲೇಖಿತ.
ವಿನಿಯೋಗ: ಸರಸ್ವತೀಧ್ಯಾನ, ಗ್ರಂಥಪಠನ, ಕೃಷ್ಣನು ಬೆಣ್ಣೆಯನ್ನು ಹಿಡಿದುಕೊಂಡಿರುವುದು, ಸರ್ವಾಂಗ ಭಸ್ಮಲೇಪ, `ತಪಸ್ಸನ್ನು ಮಾಡಿದ್ದೇನೆ, ವರವನ್ನು ಅನುಗ್ರಹಿಸು’ ಎಂದು ಯಾಚಿಸುವ ಭಾವ, ಏನಾಗಬೇಕು? ಕಾರಣವೇನು? ಎಂದು ಕೇಳುವುದು, ಮಗುವನ್ನು ಮಲಗಿಸುವುದು, ಮನಸ್ಸಿನಲ್ಲಿಯೇ ಶಿಶುವನ್ನು ಲಾಲನೆ ಮಾಡುತ್ತಿರುವಂತೆ ಕಲ್ಪಿಸಿಕೊಳ್ಳುವುದು. ನಿತ್ಯಜೀವನದಲ್ಲಿ ಮಗುವನ್ನು ಎತ್ತಿಕೊಳ್ಳುವುದು ಎಂದು ಸಂಕೇತಿಸಲು ಬಳಸುತ್ತಾರೆ.
ಮೃಗಶೀರ್ಷ ಹಸ್ತಗಳ ತೋರುಬೆರಳುಗಳನ್ನು ಮೇಲಕ್ಕೆತ್ತುವುದನ್ನು ಚಂದ್ರಮೃಗಹಸ್ತ ಎನ್ನಲಾಗಿದೆ. ಇದರ ವಿನಿಯೋಗ: ಮುಳ್ಳುಹಂದಿ.
ಕಥಕಳಿಯಲ್ಲಿ ಮೃಗಶೀರ್ಷವನ್ನು ಜಿಂಕೆ, ಪರಮಾತ್ಮ, ಯೋಗಿ, ಮಾವುತ, ಬಾವಿ, ಹೊಕ್ಕುಳು, ಜಲಶಕ್ತಿ ಎಂಬ ವಿಷಯಗಳ ಸಂವಹನಕ್ಕೆ ಉಪಯೋಗಿಸುತ್ತಾರೆ. ಮಿಶ್ರ ಮುದ್ರೆಗಳ ಪೈಕಿ ಮೃಗಶೀರ್ಷ ಮತ್ತು ಕಟಕವು ಉಲ್ಲೇಖಿತವಾಗಿದ್ದು ಶಿವ ಎಂಬುದನ್ನು ಸಂಕೇತಿಸುತ್ತದೆ.

Leave a Reply

*

code