ಅಂಕಣಗಳು

Subscribe


 

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

Posted On: Wednesday, February 3rd, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣ ಸಧಭಿರುಚಿಯ ಪ್ರೇಕ್ಷಕರಿಂದ, ಸಾಹಿತಿಗಳಿಂದ ತುಂಬಿ ಹೋಗಿತ್ತು. ಶ್ರೀ ರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮೇಳದಿಂದ ನಿರ್ಮಿತವಾದ ಅದ್ಧೂರಿ ವೇದಿಕೆ. ಅಸೀಮರೆನಿಸಿದವರು ವೇದಿಕೆಯಲ್ಲಿ ಅಲಂಕೃತರಾಗಿದ್ದ ಅರ್ಥಗರ್ಭಿತ ಕ್ಷಣ. ಅದು ‘ನೂಪುರ ಭ್ರಮರಿ’ಯ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ ‘ಮುದ್ರಾರ್ಣವ’ ಅನಾವರಣದ ದಿನ.

ಅನಾವರಣಕ್ಕೆ ಇನ್ನೇನು ಕೆಲವೇ ಕ್ಷಣ..

*********

ಕೃತಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ಬಿ. ಯಶೋವರ್ಮ. ಅವರಾಡಿದ ಮಾತುಗಳೆಡೆಗೆ ಒಂದು ನೋಟ ಇಲ್ಲಿದೆ :

‘ಪುಸ್ತಕ ಹೊರತರುವುದು ಎಂದರೆ ಹೆರಿಗೆ ನೋವು ಅನುಭವಿಸಿದಂತೆ. ಆದರೆ ಮಗುವಿನ ಜನನವಾಗಿ ಮುಖ ನೋಡಿದಾಕ್ಷಣ ಹೇಗೆ ತಾಯಿ ಖುಷಿ ಪಡುತ್ತಾಳೋ ಹಾಗೆಯೇ ಲೇಖಕ. ಹೇಗೆ ಮಗು ಹೊಸ ಭರವಸೆಯೊಂದನ್ನು ಕೊಡುತ್ತದೆಯೋ ಹಾಗೆಯೇ ಪುಸ್ತಕವೂ ಸಮಾಜದಲ್ಲಿ ಭರವಸೆಯೊಂದನ್ನು ತರಬೇಕು. ಅಂತಹ ಕೆಲಸ ಮುದ್ರಾರ್ಣವದಲ್ಲಾಗಿದೆ.

ಸಿನಿಮಾ ಮಾಧ್ಯಮದಲ್ಲಿ ಹೂ ಕೊಡುವುದನ್ನು ಅಭಿನಯಿಸಬೇಕಿದ್ದರೆ ನಾಯಕ, ನಾಯಕಿ, ಸುತ್ತಮುತ್ತಲ ಸೆಟ್ಟಿಂಗ್, ಹೂವು, ನೂರಾರು ಜನರು, ಹಾಡು ಇತ್ಯಾದಿ ಅಗತ್ಯ. ಅದೇ ನಾಟಕದಲ್ಲಿ ಬೆಳಕು, ರಂಗಸಜ್ಜಿಕೆ, ಹೂವು, ಹುಡುಗ, ಹುಡುಗಿ ಎಲ್ಲರೂ ಬೇಕು. ಅದೇ ಭರತನಾಟ್ಯದಂತಹ ನೃತ್ಯಮಾಧ್ಯಮದಲ್ಲಾದರೋ ಹೂವೂ ಬೇಡ, ಬೇರಾವುದೇ ಪರಿಕರಗಳೂ ಬೇಡ, ಖರ್ಚೂ ಇಲ್ಲ. ನರ್ತಕಿ ಅಥವಾ ನರ್ತಕ ಭಾವಾಭಿನಯದಿಂದ ಹೂವಿನ ಮುದ್ರೆಯನ್ನು ಕೈಯ್ಯಲ್ಲಿ ಹಿಡಿದು ಅಭಿನಯಿಸಿ ಕೊಟ್ಟಂತೆ ಮಾಡಿದರೂ ಸಾಕು; ಕಲಾರಸಿಕನಿಗೆ ಸಂವಹನವಾಗುತ್ತದೆ. ಜೊತೆಗೆ ಸಂತಸವೂ ಕೂಡಾ ! ಹಾಗೆ ನೋಡಿದರೆ ಹೆಚ್ಚು ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸಣ್ಣ ಪದಗಳಲ್ಲಿ ಹೆಚ್ಚು ಅರ್ಥವನ್ನು ಗ್ರಹಿಸುವಂತದ್ದು ಕಷ್ಟ. ಆದರೆ ಅದರಿಂದಾಗುವ ಸಂತಸದ ಅನುಭವ ಹೆಚ್ಚು.

ಡಾ. ಯಶೋವರ್ಮ ಅವರಿಂದ ಹಾರೈಕೆ

ನಾವು ದಿನನಿತ್ಯ ೨೦ ಶೇಕಡಾ ಮಾತಿನ ಮೂಲಕ ಸಂವಹನ ಮಾಡುತ್ತೇವೆ. ಉಳಿದ ಶೇಕಡಾ ೮೦ನ್ನು ಭಾವ, ಸಂಜ್ಞೆ, ಮುದ್ರೆಗಳೇ ಆಧಿಪತ್ಯ ಸಾಧಿಸುತ್ತವೆ. ಭರತನಾಟ್ಯದಲ್ಲಿ ಅಲ್ಲೊಂದು ಇಲ್ಲೊಂದು ಶಬ್ದಗಳು, ಮುದ್ರೆಗಳು ಅರ್ಥವಾದರೂ ಅದರಿಂದ ಅವರ್ಣನೀಯ ಆನಂದವಾಗುತ್ತದೆ. ಒಂದುವೇಳೆ ಎಲ್ಲವೂ ಅರ್ಥವಾಗುವಂತಾದರೆ ಎಷ್ಟು ಸಂತಸ, ಆನಂದವಾಗಬಹುದು? ಸಂಗೀತವನ್ನು ದೃಶ್ಯಮಾಧ್ಯಮದಲ್ಲಿ ಕಲಿಸುವಂತದ್ದೇ ನೃತ್ಯ. ಅದನ್ನು ಅರಿಯುವಲ್ಲಿ ಅವಕಾಶ ನೀಡಿದೆ ಮುದ್ರಾರ್ಣವ. ಇಂತಹ ಹೆಚ್ಚು ಹೆಚ್ಚು ಸಾಧನೆಗಳು ಮೂಡಿಬರಲಿ.

ಇವತ್ತಿನ ಯುವಕರಿಗೆ, ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಮೇಲೆ ಆಸಕ್ತಿ ಗತಿಸಿಹೋಗುತ್ತಿದೆ. ಆಸಕ್ತಿ ಹುಟ್ಟಿಸುವ ಅವಕಾಶ ಮತ್ತು ಮಾಹಿತಿಯನ್ನು ಕೊಡುತ್ತಿಲ್ಲವೆಂಬುದು ಕಾರಣಗಳಲ್ಲೊಂದು. ಅದಕ್ಕೆ ಸಂಬಂಧಿಸಿದ ಚೇತೋಹಾರಿಯಾದ ಪುಸ್ತಕಗಳು ಅವರ ಕೈಗೆಟುಕುವಂತಾಗಿಲ್ಲ. ಈ ನಿಟ್ಟಿನಲ್ಲಿ ವಿದ್ವಜ್ಜನರಿಗಷ್ಟೇ ಅಲ್ಲ, ಸಾಮಾನ್ಯರಿಗೂ ಓದಿ ತಿಳಿದುಕೊಳ್ಳಲು ಅವಕಾಶವಾಗುವಂತೆ, ನೃತ್ಯ ಸಂದರ್ಭಗಳಲ್ಲಿ ತನ್ಮಯತೆಯಿಂದ ಅರ್ಥಪೂರ್ಣವಾಗಿ ಭಾಗವಹಿಸಲು, ನೋಡಲು ಅನುಕೂಲವಾಗುವಂತೆ ಪುಸ್ತಕವನ್ನು ಸಾರಸ್ವತಲೋಕಕ್ಕೆ ಕೊಟ್ಟಿದ್ದಾರೆ.’

***********

ಮುದ್ರಾರ್ಣವಕ್ಕೆ ಸುಂದರ ಬೆನ್ನುಡಿಯನ್ನಿತ್ತ ಬಹುಶ್ರುತ ವಿದ್ವಾಂಸ, ಯಕ್ಷಗಾನ ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ. ಅವರು ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ್ದರ ಒಂದು ಝಲಕ್ ಇಲ್ಲಿದೆ :

ಡಾ. ಪ್ರಭಾಕರ ಜೋಷಿ ಅವರಿಂದ ಪುಸ್ತಕ ಪರಿಚಯ-ವಿಮರ್ಶೆ

‘ಭಾರತದ ಆರ್ಷೇಯ ಪರಂಪರೆಗಳು ಮುದ್ರೆಗಳನ್ನು ಸ್ಪಷ್ಟಪಡಿಸುತ್ತವೆ. ಹೋಮಾದಿ ಪೂಜೆ ಪ್ರಾರ್ಥನೆಗಳಾದಿಯಾಗಿ ಮುದ್ರೆಗಳ ಬಳಕೆ ಮೊದಲಿನಿಂದಲೂ ಇತ್ತು. ಇಂತಿಂಥ ಮುದ್ರೆಗಳಿಗೆ ಇಂತಿಂಥ ಫಲಗಳು ಎಂಬ ಧಾರ್ಮಿಕ ಪ್ರಜ್ಞೆ ಮತ್ತು ಅದಕ್ಕೆ ಸಾಕ್ಷಿ ಕೂಡಾ ಇತ್ತು. ಇಂತಹ ಮುದ್ರಾಪ್ರಪಂಚದ ಕುರಿತಂತೆ, ಅದರ ಹುಟ್ಟು, ಬೆಳವಣಿಗೆ, ವಿವಿಧ ಆಯಾಮ, ಉಪಯೋಗ, ವಿನಿಯೋಗದ ಕುರಿತಂತೆ ವಿಸ್ತಾರವಾದ ಗ್ರಂಥವಿದು. ಶಬ್ದಕ್ಕೆ ಶಕ್ತಿಯಿದೆ ನಿಜ. ಆದರೆ ಸಂವಹನ ಎಂದಾಗ ಮಾತಿನ ಹೊರತಾಗಿಯೂ ಹೇಗೆಲ್ಲಾ ಇತರ ಸಾಧ್ಯತೆಗಳಿವೆ ಎಂಬುದನ್ನು ಪುಸ್ತಕ ತಿಳಿಸಿಕೊಡುತ್ತದೆ.

ಮುದ್ರೆಗಳ ಬಗ್ಗೆ ಬಂದಿರುವ ಪುಸ್ತಕಗಳ ಪೈಕಿ ಅಂತರ್‌ಶಿಸ್ತೀಯ ನೆಲೆಯಲ್ಲಿ ಹೊರಬಂದಿರುವ ಭಾರತದ ಮೊದಲ ಪುಸ್ತಕವಿದು. ಒಂದೇ ನೋಟಕ್ಕೆ ಓದಿ ಮುಗಿಸುವ ಪುಸ್ತಕವಲ್ಲ. ನೃತ್ಯದಲ್ಲಿನ ಅನೇಕ ಹಿರಿ- ಕಿರಿಯ ಅಧ್ಯಾಪಕರಿಗೆ, ಗುರುಗಳಿಗೆ, ವಿದ್ಯಾರ್ಥಿಗಳಿಗೆ ದಶಕ ದಶಕಗಳ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲಂತದ್ದು. ಯಾವ ಪಿಹೆಚ್‌ಡಿ ಸಂಶೋಧನೆಗಳಿಗೂ ಕಡಿಮೆಯಿಲ್ಲದಂತಿದೆ.

ಭಾರತೀಯ ಕಾವ್ಯ ಮೀಮಾಂಸೆ, ಕಲಾಮೀಮಾಂಸೆಯು ಜಗತ್ತಿಗೆ ಬೇರಾವ ಸಂಸ್ಕೃತಿಯೂ ಅಷ್ಟಾಗಿ ನೀಡದ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದೆ. ಬೇರೆ ಯಾವುದೇ ದೇಶ-ಸಂಸ್ಕೃತಿಗಳಲ್ಲೂ ಇಲ್ಲದ, ಅಭಿಪ್ರಾಯ ವ್ಯತ್ಯಾಸಗಳು ಬಾರದ, ವಾದಕ್ಕೆ ಎಡೆಯಿರದ ಸಂಪೂರ್ಣವಾಗಿ ಆದರಿಸಬೇಕಾದ ಬಗೆಯ ಕಲಾತತ್ವಗಳನ್ನು ಕೊಟ್ಟಿದೆ. ಇಲ್ಲಿ ಕಾವ್ಯ ಎಂದರೆ ಕೇವಲ ಠಿoeಣಡಿಥಿ ಮಾತ್ರ ಅಲ್ಲ. ಗೀತ, ವಾದ್ಯ, ನೃತ್ಯ, ಪಠ್ಯ, ಸಂಗೀತಗಳನ್ನು ಒಳಗೊಂಡ ನಿತ್ಯ ನಿರಂತರವೆನಿಸುವ ಪರಿಕಲ್ಪನೆ. ಇಲ್ಲಿನ ಮಣ್ಣಿನ ನೃತ್ಯ, ನಾಟಕ, ಗೀತ, ವಾದ್ಯಗಳ ಪರಿಕಲ್ಪನೆ ಓದಿದಷ್ಟೂ, ಅನುಭವಿಸಿದಷ್ಟೂ ಹೊಸ ಹೊಳಹುಗಳನ್ನು ಕೊಡುವಂತದ್ದು; ದೂರದೃಷ್ಟಿಯುಳ್ಳವು ; ಸಮಗ್ರವೆನಿಸುವಂತದ್ದು. ಅದರಲ್ಲಿ ‘ರಸೋವೈಸಃ’ ಭಾರತೀಯ ಸಂಸ್ಕೃತಿಯು ನೀಡಿದ ಆಧ್ಯಾತಿಕವಾಗಿಯೂ, ಕಲಾದೃಷ್ಟಿಯಿಂದಲೂ ಸಂಪೂರ್ಣವೆನಿಸುವ ರಸಪರಿಕಲ್ಪನೆ. ಅಂತಹ ರಸ ಆಧರಿತ ನೃತ್ಯಕ್ಕೆ ಸಂಬಂಧಿಸಿದ ವಿದ್ವತ್ಪೂರ್ಣ ಸಂಶೋಧನಾ ಅಧ್ಯಯನಗಳಲ್ಲಿ ಮುದ್ರಾರ್ಣವ ಮೊದಲನೇಯ ದರ್ಜೆಯದು.

ಭಾರತೀಯ ನೃತ್ಯಗಳ ಪೈಕಿ ಭರತನಾಟ್ಯಕ್ಕೆ ಎಲ್ಲದಕ್ಕಿಂತ ಮೇಲ್ದರ್ಜೆಯ, ಅತ್ಯುನ್ನತ ಸ್ಥಾನವಿದೆ. ಆದರೆ ಇಂದಿನ ಭರತನಾಟ್ಯ ಕಾರ್ಯಕ್ರಮ, ತರಗತಿಗಳು ಕೇವಲ ಪ್ರದರ್ಶನದ ಉದ್ದೇಶವಷ್ಟೇ ಹೊಂದಿ ಗುಣಾತ್ಮಕವಾದ ಅಧ್ಯಯನಗಳು ಬೆರಳೆಣಿಕೆಯಾಗುತ್ತಿವೆ. ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ನೃತ್ಯ ಸಂಗೀತಗಳು ಹೆಚ್ಚು ತಪಸ್ಸನ್ನು ಬಯಸುವ ಕ್ಷೇತ್ರ. ಆದರೆ ಇಂದು ೮ ದಿನದಲ್ಲಿ ಕಲಿತು, ೧೬ ದಿನದೊಳಗೆ ಸ್ಟೇಜ್ ಹತ್ತಬೇಕು ಎಂದೇ ಆಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಪರವಾದ ಯಶಸ್ಸನ್ನು ಬದಿಗಿರಿಸಿ ಇಂತಹ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಭರತನಾಟ್ಯ ಸ್ವರೂಪದ ಆಂಗಿಕ ವಿಷಯಗಳಲ್ಲಿ ಬರುವ ಮುದ್ರಾವಿಭಾಗದ ಬಗ್ಗೆ ಗಂಭೀರವಾದ, ಪರಿಣಾಮಕಾರಿಯಾದ ಸಂಶೋಧನೆ ನಿಜಕ್ಕೂ ಶ್ಲಾಘನೀಯ.

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ; ಆಯಾಯ ಕ್ಷೇತ್ರಕ್ಕೆ ಪ್ರಯೋಜನ ಕೊಡಬೇಕು ; ಅದರಲ್ಲಿ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಬೇಕು ; ಆ ಕ್ಷೇತ್ರಕ್ಕೆ ಪ್ರಯೋಜನ, ಅರಿವು ನೀಡುವ ಕೆಲಸವಾಗಬೇಕು ; ಕೇವಲ ಗ್ರಂಥಾಲಯಕ್ಕೋ, ಪ್ರಕಾಶಕರಿಗೋ ಸೀಮಿತವಾಗಿ ಉಳಿಯದೆ ಉಪಯುಕ್ತ ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಗಮನಿಸಿದರೆ ಮುದ್ರಾರ್ಣವ ಸಾರ್ಥಕತೆ ಪಡೆದಿದೆ. ಈ ಕೃತಿಯಲ್ಲಿ ಬಹುಮುಖ್ಯವಾಗಿ ಸಮಾಜದಲ್ಲಿ ಮುದ್ರೆಗಳ ಬಳಕೆಯ ಬಗ್ಗೆ, ಪ್ರೇಕ್ಷಕರ ಗ್ರಹಿಕೆ ಹೇಗಿದೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇಂದಿನ ಬಹುಪಾಲು ಸಂಶೋಧನೆಗಳ ರೀತಿ-ನೀತಿ, ಸ್ಥಿತಿ-ಗತಿ ಸಮಾಜಕ್ಕೆ ಆದರ್ಶಪ್ರಾಯವಾಗುವಂತಿಲ್ಲ. ಈಗಲೂ ‘ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ’ ಎಂಬಂತ ಚರ್ವಿತ ಚರ್ವಣ ವಿಷಯಗಳನ್ನೇ ಇನ್ನೂ ಕೂಡಾ ಸಂಶೋಧನೆ ಮಾಡಿದರೆ ಅದರ ಸಾಮಾಜಿಕ ಬಳಕೆಯ ವ್ಯಾಪ್ತಿ ಕುಸಿಯುತ್ತದೆ. ಅದರಲ್ಲೂ ಗುಣಮಟ್ಟದ ಸಂಶೋಧನೆಗಳು ನೃತ್ಯಕ್ಕೆ ಸಂಬಂಧಿಸಿದಂತೆ ಭಾರೀ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಯಕ್ಷಗಾನದಲ್ಲಿ ನಾಟ್ಯಶಾಸ್ತ್ರ ತಿಳಿಸುವ ಚಾರಿ, ಕರಣ, ಭೇದಗಳೆಲ್ಲವೂ ಇದ್ದರೂ ; ವ್ಯವಸ್ಥಿತವಾಗಿಲ್ಲ. ಆದರೆ ಇಂದಿನವರೆಗೂ ಯಕ್ಷಗಾನದಲ್ಲಿ ಬಂದಿರುವ ಅಷ್ಟೂ ಸಂಶೋಧನೆಗಳೂ ಗುಣಮಟ್ಟವುಳ್ಳವೇ ಆಗಿದೆ.

ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರೆ ಹೆಚ್ಚು ಬೆಳವಣಿಗೆಯಿದೆ ಎಂಬುದಕ್ಕೆ ಮುದ್ರಾರ್ಣವವೇ ಸಾಕ್ಷಿ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ಈ ಕೃತಿ ಓದುಗರು ಅಗತ್ಯ ಪರಾಮರ್ಶಿಸಲೇಬೇಕಾದದ್ದು.’

*******

ಶ್ರೀ ಶಾಮ ಭಟ್ ಅವರಿಂದ ಅಧ್ಯಕ್ಷೀಯ ನುಡಿ

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ. ಶಾಮ ಭಟ್ ಅವರು ಮಾತನಾಡಿ, ನೃತ್ಯ ಕಲಾವಿದರು ಪುಸ್ತಕವನ್ನು ಅಧ್ಯಯನ ಮಾಡಿ ನಾಟ್ಯ ಮಾಡುವಾಗ ಅನುಸರಿಸಿದರೆ ಚೆನ್ನ. ಇನ್ನು ಮುಂದೆಯೂ ಉತ್ತಮ ಕೃತಿಗಳು ಹೊರಬರಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಕಾರ್ಯವೂ ಈ ನಿಟ್ಟಿನಲ್ಲಿ ಶ್ಲಾಘನೀಯ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ. ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಸಮ್ಮಾನ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮನೋರಮಾ ಅವರನ್ನು ಪ್ರತಿಷ್ಠಾನದ ವತಿಯಿಂದ ಡಾ. ಬಿ. ಯಶೋವರ್ಮ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ. ಸಾ. ಪ. ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿ ಮಾತನಾಡಿದರು. ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಶ್ರೀ ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್ ಭಾಗವಹಿಸಿದ್ದರು.

ಕಲಾವಿದ, ಸಂಶೋಧಕ ಶ್ರುತಕೀರ್ತಿರಾಜ್ ಅವರ ನಿರೂಪಣೆಯಲ್ಲಿ ಆರಂಭಗೊಂಡ ಕಾರ್ಯಕ್ರಮದ ಆಶಯ, ಸ್ವಾಗತವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಿಚ್ಚಿಟ್ಟವರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ, ಕಲಾವಿದ, ಹೊಸನಗರ ಮೇಳದ ಮೆನೇಜರ್ ಶ್ರೀ ಉಜಿರೆ ಅಶೋಕ್ ಭಟ್. ಪುಸ್ತಕ ನಿರೂಪಣೆಯ ಹಿಂದಿನ ಶಕ್ತಿ-ಸ್ಫೂರ್ತಿಗಳನ್ನು, ನೋವು-ನಲಿವನ್ನು, ಧನ್ಯವಾದ-ಕೃತಜ್ಞತೆ ಅರ್ಪಣೆಯೊಂದಿಗೆ ನೆರವೇರಿಸಿದವರು ಮನೋರಮಾ. ನಂತರ ಅದ್ಧೂರಿಯಿಂದ ಜರುಗಿದ ಯಕ್ಷ ಸಪ್ತಾಹ ಪ್ರಯುಕ್ತದ ಎರಡು ಯಕ್ಷಗಾನ ಬಯಲಾಟಗಳು ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾದದ್ದಲ್ಲದೆ ; ಪರಂಪರೆ-ಆಧುನಿಕ ಪ್ರಜ್ಞೆಗಳಿಗೆ ಸಾಕ್ಷಿ ಹೇಳಿತ್ತು ! ಭ್ರಮರಿಗೆ ಭವಿತವ್ಯದೆಡೆಗಿನ ಭರವಸೆಗಳನ್ನು ಭದ್ರಗೊಳಿಸುವ ಅಮಿತ ಪ್ರೋತ್ಸಾಹ, ಆಶೀರ್ವಾದ ದೊರಕಿತ್ತು.

ಲೇಖಕಿ ಮನೋರಮಾ ಅವರಿಂದ ಧನ್ಯವಾದ ಅರ್ಪಣೆ

‘ ಮುದ್ರಾರ್ಣವ ‘- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ, ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ; ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ, ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು ಆಯಾಮಿ ಅಧ್ಯಯನವಾಗಿದೆ.

‘ ಮುದ್ರಾರ್ಣವ ‘;- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು, ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ, ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ. ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೫೧೦೬೬೬ ಸಂಪರ್ಕಿಸಬಹುದು.

————–

Leave a Reply

*

code