ಅಂಕಣಗಳು

Subscribe


 

ಮೈಸೂರು ಭರತನಾಟ್ಯ ನೃತ್ಯಶೈಲಿ- ಒಂದಷ್ಟು ವಿಚಾರ

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಲಲಿತಾ ಶ್ರೀನಿವಾಸನ್, ಹಿರಿಯ ನೃತ್ಯ ಗುರು, ಕರ್ನಾಟಕ ನೃತ್ಯ ಕಲಾ ಪರಿಷತ್ ಅಧ್ಯಕ್ಷೆ, ’ನೂಪುರ’, ಬೆಂಗಳೂರು

ಕಳೆದ ಸಂಚಿಕೆಯ ದೀವಟಿಗೆಯ ಭರತಾಗಮ ಕಾರ್ಯಕ್ರಮದ ಕುರಿತ ವಿಮರ್ಶೆ ಬರೆವಣಿಗೆಗೆ ಪ್ರತಿಕ್ರಿಯೆಯಿದು. ನರ್ತನ ರಂಗದಲ್ಲಿ ವಿಮರ್ಶೆಗಳನ್ನಾಧರಿಸಿ ಚರ್ಚೆ-ಸಂವಾದ-ಪ್ರತಿಕ್ರಿಯೆಗಳು ರೂಪುಗೊಳ್ಳುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ. ರಂಗದ ಸರಿ-ತಪ್ಪು, ಅಪೇಕ್ಷಿತ-ಅನಪೇಕ್ಷಿತ ವಿಚಾರಗಳ ಕುರಿತ ಇಂತಹ ಸಂವಾದಗಳಿಗೆ ನೂಪುರ ಭ್ರಮರಿಯ ಈ ವೇದಿಕೆ ಸದಾ ಸಿದ್ಧ ಎಂದು ತಿಳಿಸಲು ಹರ್ಷಿಸುತ್ತೇವೆ ಮತ್ತು ಹಾರ್ದಿಕವಾಗಿ, ಮುಕ್ತದೃಷ್ಟಿಯಿಂದ ಪ್ರತಿಕ್ರಿಯಿಸಿದ ಗುರು ಲಲಿತಾ ಶ್ರೀನಿವಾಸನ್ ಅವರನ್ನೂ ಅಭಿನಂದಿಸುತ್ತೇವೆ. ಈ ಹಿನ್ನಲೆಯಲ್ಲಿ ಒಂದಷ್ಟು ವಿಚಾರಮಂಥನಗಳನ್ನು ಮುಂದಿನ ದಿನಗಳಲ್ಲಿ ಓದುಗರಾದ ನಿಮ್ಮಿಂದ ನೂಪುರ ಭ್ರಮರಿನಿರೀಕ್ಷಿಸುತ್ತದೆ.

(ವಿ.ಸೂ: ಮಾರ್ಗ, ದೇಸಿಯನ್ನೂ ಒಳಗೊಂಡಂತೆ ಭರತನಾಟ್ಯ ಪದ್ಧತಿಯ ದೀರ್ಘ ವಿಶ್ಲೇಷಣೆ, ವಿವರಣೆ ನೃತ್ಯ ಮಾರ್ಗ ಮುಕುರ ಕೃತಿಯಲ್ಲಿ ಲಭ್ಯ.)

 

ಕರ್ನಾಟಕದ ನೃತ್ಯಶೈಲಿಯ ಬಗ್ಗೆ, ಹಿಂದಿನ ಪರಂಪರೆಯ ಬಗ್ಗೆ ನಿರ್ದಿಷ್ಟ ಮಾಹಿತಿಗಳಿಲ್ಲ. ಆದರೂ ಸಾಹಿತ್ಯದ, ಶಿಲ್ಪದ ಮತ್ತು ಶಾಸನಗಳ ಮೂಲಕ ತಿಳಿಯುವ ರೀತ್ಯಾ, ಕರ್ನಾಟಕದಲ್ಲಿ ಹಿಂದಿನಿಂದಲೂ ವೈಭವೋಪೇತವಾದ, ನಾಟ್ಯಶಾಸ್ತ್ರಾಧಾರಿತವಾದ ನೃತ್ಯಪದ್ಧತಿಯಿತ್ತು ಎಂದು ತಿಳಿದು ಬರುತ್ತದೆ. ಆದರೂ ಏನನ್ನು ಹೇಗೆ ನರ್ತಿಸುತ್ತಿದ್ದರು ಎಂಬ ಕಲ್ಪನೆ ಅಷ್ಟಾಗಿ ಅರಿವಿಗೆ ಬಂದಿಲ್ಲ. ೨೦ನೇ ಶತಮಾನದಿಂದೀಚೆಗೆ ಮೈಸೂರಿನ ಅರಮನೆಯ, ಆಲಯದ, ಸಾರ್ವಜನಿಕ ನೃತ್ಯಪದ್ಧತಿಗಳ ಬಗ್ಗೆ ಅನೇಕ ವಿಷಯಗಳು ತಿಳಿದಿವೆ. ಅನೇಕ ವಿವಿಧ ಅಪರೂಪದ ನೃತ್ಯಬಂಧಗಳು ಪ್ರಚಲಿತವಾಗಿವೆ. ಮೈಸೂರು ಶೈಲಿಯ ಪೂರ್ವರಂಗವಿಧಿ, ಹಲಕೆಲವು ನಿರ್ದಿಷ್ಟ ನೃತ್ಯರಚನೆಗಳಾದ ಪದ, ಜಾವಳಿ, ಶ್ಲೋಕ, ದೇವರನಾಮಗಳಲ್ಲಿ ವೈವಿಧ್ಯತೆಯಿದೆ. ತಮಿಳುನಾಡಿನಲ್ಲಿ ಕಾಣದಂತಹ ಹಲವು ನೃತ್ಯಗಳನ್ನು ಇಲ್ಲಿ ಕಾಣುತ್ತೇವೆ. ಆದರೆ ತಂಜಾವೂರಿನ ಸೋದರರ ಮಾರ್ಗಪದ್ಧತಿ ಕಲಸಿ ಹೋಗಿದೆ ಎಂದರೆ ತಪ್ಪೇನಿಲ್ಲ. ಈಗ ಮೈಸೂರು ಶೈಲಿ ಎಂದುಕೊಳ್ಳುವ ಎಲ್ಲಾ ಕಲಾವಿದರು ನರ್ತಿಸುವುದು ಅಲರಿಪು, ಜತಿಸ್ವರ, ವರ್ಣ, ತಿಲ್ಲಾನ ಮುಂತಾದ ತಂಜಾವೂರಿನ ರಚನೆಗಳನ್ನೇ.

ಭರತನಾಟ್ಯವೆಂಬ ಹೆಸರಿನಲ್ಲಿ ಕಲಿಯುವ, ಕಲಿಸುವ, ಕಾರ್ಯಕ್ರಮ ಕೊಡುವುದು ಮೈಸೂರು ಪದ್ಧತಿಗೂ ರೂಢಿಗತ ಎಂದಮೇಲೆ ಅಡವುಗಳ ರಚನೆ, ಸ್ಥಾನಕಗಳ ನಿಲುವು, ಅಂಗಶುದ್ಧಿ, ತಾಳಬದ್ಧತೆ, ಬಿಗಿಯಾದ ನಟುವಾಂಗ, ಸುಶ್ರಾವ್ಯ ಸಂಗೀತ ಇವುಗಳ ಅವಶ್ಯಕತೆ ಎಲ್ಲಾ ಶೈಲಿಗೂ ಒಂದೇ ಅಲ್ಲವೇ? ಹಿಂದೆ ಕಲಾವಿದರಲ್ಲಿ ಶೈಲಿಯನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಇಲ್ಲದ್ದರಿಂದ ಒಬ್ಬರ ಪ್ರಭಾವ ಇನ್ನೊಬ್ಬರ ಮೇಲೆ ಆಗುತ್ತಿರಲಿಲ್ಲ ನಿಜ. ಈಗ ಹಾಗಲ್ಲ, ಹತ್ತು ಹಲವಾರು ರೀತಿಯ ಕಲಾವಿದರನ್ನು ನೋಡಿ ನಮ್ಮ ಲೋಪ ದೋಷಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ. ಒಂದೇ ಗುರುವಿನಿಂದ ಕಲಿತು ಹೆಸರುವಾಸಿಯಾದ ಕಲಾವಿದರು ತಮ್ಮ ಸ್ವಂತ ಛಾಪನ್ನು ಬೀರಿ ನರ್ತಿಸುವುದು ಅಚ್ಚರಿಯೇನಲ್ಲ. ಸೃಜನಾತ್ಮಕತೆಗೆ ಮಿಡಿಯುವ ಮನ, ಬುದ್ಧಿವಂತಿಕೆಯಿಂದ ಮೂಡುವ ಅರಿವು, ದೇಹದ ಸಾಧ್ಯಾಸಾಧ್ಯತೆ ಈ ರೀತಿ ನೃತ್ಯವನ್ನು ರೂಪಿಸುತ್ತದೆ; ರೂಪುಗೊಳ್ಳಲೇಬೇಕು ಕೂಡಾ. ಅದು ಸಹಜ.

ಶಾಸ್ತ್ರರೀತ್ಯಾ ಗುರುಮುಖೇನ ಕಲಿತ ವಿದ್ಯೆಗೆ ತಮ್ಮ ವ್ಯಕ್ತಿತ್ವದ ಮೆರುಗು ಕೊಡುವುದು ಕಲಾವಿದರ ವೈಶಿಷ್ಟ್ಯ. ಪ್ರಪಂಚ ಕಿರಿದಾಗುತ್ತಿದೆ; ಪಾಶ್ಚಿಮಾತ್ಯ ನೃತ್ಯಗಳನ್ನು, ಸಮಕಾಲೀನ ನೃತ್ಯಗಳನ್ನು ಭಾರತದ ಇತರ ಶಾಸ್ತ್ರೀಯ ನೃತ್ಯಗಳನ್ನು ಸತತವೂ ಕಾಣುವ ಕಣ್ಣು. ಅರಿಯುವ ಮನ ಒಳ್ಳೆಯದನ್ನು ಆರಿಸಿಕೊಳ್ಳುವುದು ಸಹಜ. ಇಂದಿನ ನಮ್ಮ ಜೀವನದ ರೀತಿ ಬದಲಾಗಿಲ್ಲವೇ? ಅದರಂತೆ ಕಲೆಯಲ್ಲೂ ಬದಲಾವಣೆ ಆಗೇ ಆಗುತ್ತದೆ. ಈಗಿನ ರಸಿಕರಿಗೆ, ಓಟದ-ನಾವೀನ್ಯತೆಯ ಸಮೂಹ ನೃತ್ಯಗಳಲ್ಲಿ ಹೆಚ್ಚಿನ ಅಭಿರುಚಿಯಿದೆ. ನೃತ್ತ ಅಭಿನಯಕ್ಕಿಂತ ಬಹಳ ಮುನ್ನಡೆದಿದೆ. ನಾವು ಮೈಸೂರು ಶೈಲಿಯವರು ಇತರರಿಗೆ ಸಾಟಿಯಾಗಿ ಮೆರೆಯಬೇಡವೇ?

ವೈಯಕ್ತಿಕವಾಗಿ ನಮ್ಮ ಪರಂಪರೆಯ ಹಿಂದಿನ ಮತ್ತು ಮುಂದಿನ ನೋಟವನ್ನು ಕಾಣಲು ಕಲಿಸಿದವರು ದಿವಂಗತರಾದ ಖ್ಯಾತ ನೃತ್ಯ ವಿಮರ್ಶಕ ಶ್ರೀ ಬಿ.ವಿ.ಕೆ.ಶಾಸ್ತ್ರಿಗಳು. ಅವರಿಂದಲೇ ನಾನು ಸೂಳಾದಿ ಪ್ರಬಂಧ ಸಂಯೋಜಿಸಿದೆ. ಅವರ ಒತ್ತಾಯದಿಂದಲೇ ನವ ಕನ್ನಡ ಕವಿಗಳ ಗೀತೆಗಳಿಗೆ ನೃತ್ಯ ಸಂಯೋಜಿಸಿದೆ. ಹಿಂದಿನದನ್ನು ಗೌರವಿಸಿ, ಇಂದಿನದನ್ನು ದೃಢಪಡಿಸಿ, ನಾಳೆಗೆ ಹೆಜ್ಜೆಯಿಡಲು ಪ್ರಯತ್ನಿಸಬೇಕಾದದ್ದು ನನ್ನ ಕರ್ತವ್ಯ ಎಂದುಕೊಂಡಿದ್ದೇನೆ. ಆದ್ದರಿಂದ ಮೈಸೂರು ಶೈಲಿಯ ಹೊಸ ಮುಖವೊಂದನ್ನು ನಾನು ಎಲ್ಲರಿಗೂ ಪರಿಚಯಿಸಿದ್ದರೆ ಅದು ನನ್ನ ನಂಬಿಕೆ, ಆದರ್ಶ, ಮುನ್ನಡೆ.

Leave a Reply

*

code