ಅಂಕಣಗಳು

Subscribe


 

ನಾಟ್ಯಾವಧಾನವೆಂಬ ಅಸಾಮಾನ್ಯ ಸಾಧ್ಯತೆಯೆಡೆಗೆ….

Posted On: Saturday, December 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

…ಈ ವರ್ಷದ ಅಂತ್ಯದ ೨ ತಿಂಗಳಿನ ಸಂಭ್ರಮ ಹೇಳತೀರದು. ಹೇಳಿದಷ್ಟೂ ಕಡಿಮೆಯೆನಿಸುವ, ಹೇಳಹೊರಟರೆ ಮತ್ತಷ್ಟು ಹೇಳುವಂತೆ ಮಾಡುವ, ಭಾಗವಹಿಸಿದ್ದಕ್ಕೆ ಕೃತಾರ್ಥರಾದ ಧನ್ಯತೆ, ಸ್ನೇಹಪರತೆ, ನಿಸ್ಪೃಹತೆ, ಕಣ್ತುಂಬಿಕೊಂಡು ಆಸ್ವಾದಿಸಿದ ಅನನ್ಯತೆಯನ್ನು ಬಹುಷಃ ಈ ಮೊದಲು ಯಾವ ಕಾರ್ಯಕ್ರಮವೂ ಅಷ್ಟೇಕೆ ನಮ್ಮಗಳ ಕೌಟುಂಬಿಕ ಸಾಂಸ್ಥಿಕ ಸಂದರ್ಭಗಳೂ ಕೊಟ್ಟಿರಲಾರದೇನೋ ! ಪದವಿ/ಪುರಸ್ಕಾರ/ಲಾಭ/ಬಿಂಕ-ಬಿನ್ನಾಣಗಳು ದಾಟಿ, ವೈಯಕ್ತಿಕ ಸ್ವಾರ್ಥ- ಸಂತೋಷಗಳು ಕರಗಿ, ಸಿನಿಕತೆಯ ಪರದೆ ಹರಿದು ಸಹೃದಯ ಸಂಸ್ಕಾರ ಆ ಮೂರು ದಿನಗಳಲ್ಲೂ ಮನೆಮಾಡಿತ್ತೆಂದರೆ ಆ ಕಾರ್ಯಕಾರಣ ಶಕ್ತಿ ಎಷ್ಟೊಂದು ಹಿರಿದು ಎಂಬುದು ಅನುಭವಕ್ಕೇ ಬರುತ್ತದೆ.

ಅಷ್ಟಕ್ಕೂ ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮವೆಂಬಂತೆ ತುಂಬುಗನ್ನಡದಲ್ಲಿ ನಡೆದು ಇತಿಹಾಸದಲ್ಲಿ ದಾಖಲಾಗಿಹೋದ ಡಾ. ರಾ.ಗಣೇಶರ ಶತಾವಧಾನದ ಗುಂಗಿನಿಂದ ಹೊರಬರುವುದೆಂದರೆ ಅದೇನು ಸಾಮಾನ್ಯಮಾತೇ? ಹಾಗಾಗಿ ಅವಧಾನ ಕಳೆದು ದಿನಗಳುರುಳಿದರೂ ಅದರ ಸುಗಂಧ ಸಚ್ಚಿದಾನಂದ ಸ್ವರೂಪದ ಆನಂದದಲ್ಲಿ ವರ್ಧಿಸುತ್ತಲೇ ಇದೆ. ಶತಾವಧಾನ ಕೇವಲ ಅವಧಾನಿಗಳಿಗೆ, ಪೃಚ್ಛಕರಿಗೆ, ವಿದ್ವಾಂಸರಿಗೆ ಮಾತ್ರ ಮೀಸಲಾಗದೆ ಪ್ರೇಕ್ಷಕ ಸಹೃದಯರಲ್ಲೂ ಅವಧಾನಶೀಲತೆಯ ಪ್ರಜ್ಞೆಯ ದೀವಟಿಗೆಯನ್ನು ಹೊತ್ತಿಸಬಹುದು ಎಂಬುದಕ್ಕೆ ಈ ಬಾರಿಯ ಅವಧಾನವೇ ಸಾಕ್ಷಿ ಮತ್ತು ನಂತರದಲ್ಲಿಯೂ ಹಲವು ಸ್ತರದ ಪರಿಣಾಮವಿಶೇಷಗಳನ್ನು ಕೇಳಿ-ನೋಡಿದಾಗ ಪ್ರಸಕ್ತಯುಗದಲ್ಲೂ ಬಾಜಾ-ಭಜಂತ್ರಿಗಳಿಲ್ಲದೆ ನಿಜವಾದ ಪ್ರತಿಭಾಪುಷ್ಪಕ್ಕೆ ಆಸ್ವಾದನೆಯ ದುಂಬಿಗಳು ತುಂಬಿಬರುವುದುಂಟು ಎಂಬುದು ಅಕ್ಷರಶಃ ಅರಿವಾಗಿದೆ.

ಅದೇ ಸ್ಮೃತಿಯಲ್ಲಿ ಕುಳಿತಿದ್ದಾಗ ತೋರಿಬಂದದ್ದೇ ನಾಟ್ಯವಧಾನದ ಕಲ್ಪನೆಯ ಇತಿಮಿತಿ, ಸವಾಲು ಮತ್ತು ಸಾಧ್ಯತೆಗಳು. ಎಷ್ಟರಮಟ್ಟಿಗೆಂದರೆ ಚಿತ್ತೈಕಾಗ್ರ್ಯಮವಧಾನಂ– ಮನಸ್ಸಿನ ಏಕಾಗ್ರತೆಯೇ ಅವಧಾನ ಎನ್ನುವುದಾದರೆ ನಾಟ್ಯವಧಾನದ ಕಲ್ಪನೆಯೂ ಮನಸ್ಸಿನೊಳಗಿನ ಅವಧಾನವಾಗಿ ಇಂದಿಗೂ ಹರಿದಾಡುತ್ತಿದೆ. ಆದರೆ ಅದರ ಸವಾಲುಗಳನ್ನು ನೆನೆದಾಗಲೆಲ್ಲ ಇಂದಿನ ನೃತ್ಯಕ್ಷೇತ್ರ ಇಂತಹ ಅತ್ಯದ್ಭುತ ಕಲ್ಪನೆಗೆ ಎಷ್ಟರಮಟ್ಟಿಗೆ ಸಮಕಾಲೀನವಾಗಿ ತೆರೆದುಕೊಳ್ಳಬಹುದು ಎಂಬ ಪ್ರಶ್ನೆ ಉದ್ಭವವಾಗಿ ಅಲ್ಲಿಂದಲೇ ಮಾಯವೂ ಆಗುತ್ತಿದೆ. ಕೊನೇಪಕ್ಷ ಜೀವ ತುಂಬುವ ಕಿಂಚಿತ್ ಪ್ರಯತ್ನವನ್ನಾದರೂ ನಡೆಸಿತೇ, ಆಗುವ ಸವ್ಯಾಪಸವ್ಯಗಳೇನು ಎಂಬ ಕೋಲಾಹಲವೂ ಜಾಗೃತವಾಗುತ್ತದೆ. ಒಂದುವೇಳೆ ಅಂತಹ ಅವಧಾನಶೀಲ ಪ್ರವೃತ್ತಿಯನ್ನು ಕಲಾವಿದರು ತುಂಬಿಕೊಳ್ಳುವುದಾದಲ್ಲಿ ನಿಜಕ್ಕೂ ನಾಟ್ಯಸರಸ್ವತಿ ಧನ್ಯಳೆನಿಸಿಕೊಂಡಾಳು !

ಇಂತಹ ಅತಿಶಯೋಕ್ತಿಗೆ ಕಾರಣವಿದೆ. ಪ್ರಸ್ತುತ ದಶಕಗಳಲ್ಲಿ ನಾಟ್ಯದ ಕಲ್ಪನೆ ಗಣನೀಯವಾಗಿ ಕುಸಿಯುತ್ತಾ ಚರ್ವಿತ ಚರ್ವಣ, ಸವಕಲು ನಾಣ್ಯಗಳೇ ನೃತ್ಯಕ್ಷೇತ್ರದಲ್ಲಿ ಚಲಾವಣೆಯಲ್ಲಿರುವಾಗ ಸಹೃದಯ ಪ್ರೇಕ್ಷಕ ಸಹಜವಾಗಿಯೇ ದೂರಸರಿಯಬೇಕಾದ ಅನಿವಾರ್ಯತೆ. ಆನಂದದ ಪರಮೋದ್ದೇಶವೇ ತಿಳಿಯದ ಕಲಾವಿದರು ಉದಾತ್ತತೆಯ ಆಹಾರ್ಯದೊಳಗೆ ಅಪ್ರಾಮಾಣಿಕ ಬಾಣಸಿಗರಾದರೆ ಬಾಯ್ಮಾತಿನಲ್ಲಿ ಆನಂದದ ಉಪಚಾರ ಗಹಗಹಿಸಿ ಹೇಳುವುದು ಉಪದೇಶ, ತಿನ್ನುವುದು ಬದನೆಕಾಯಿ ಎಂಬುದಕ್ಕೆ ಅನ್ವರ್ಥವೆನಿಸುವ ಅಡುಗೆ ಸಿದ್ಧಗೊಳ್ಳುತ್ತದೆ. ಸಹೃದಯನ ಮುಂದಿಕ್ಕಬೇಕಾದ ಷಡ್ರಸೋಪೇತವೆನಿಸಬೇಕಾದ ಕಲೆಯ ಬಾಳೆಲೆ ಹಳಸಲು ತಿಪ್ಪೆಯಂತಾಗುತ್ತದೆ. ಈ ನಿಟ್ಟಿನಲ್ಲಿ ಅವಧಾನಸ್ವರೂಪದ ಕಿಚ್ಚು ಕೊಂಚಮಟ್ಟಿಗಾದರೂ ನೃತ್ಯವಲಯಕ್ಕೆ ಹಬ್ಬಿದರೆ ಹಸಿ-ಹಸಿಯಾಗಿಯೇ ಉಳಿದ ಅಥವಾ ಅದೆಷ್ಟೋ ಅರೆಬೆಂದ ಪದಾರ್ಥಗಳು ಪಕ್ವಗೊಳ್ಳಲು ಆ ಮೂಲಕ ಸಹೃದಯನ ಪದಾರ್ಥವಾಗಲು ಸಾಧ್ಯವಾದೀತು ಎಂಬುದೇ ಇಲ್ಲಿನ ಕಲ್ಪನೆ. ಈ ಹಂತದಲ್ಲೇ ನೃತ್ಯವೆಂಬುದು ಚಾಕ್ಷುಷ ಯಜ್ಞದ ಸಾರ್ಥಕ್ಯ ಪಡೆದು ಹಸಿವು ನೀಗುವ ಭೋಜನವಾದಿತು. ಇಲ್ಲವಾದರೆ ಸಾಮಾನ್ಯ ಊಟಕ್ಕೆ ಅರೆಕಾಸಿನ ಮಜ್ಜಿಗೆಯೂ ಸಿಗದಂತಾಗಿ ಹುಳಿ ನಾರುವ ಮಜ್ಜಿಗೆ ಕಲೆಯ ಬೇರಿನ ಕತ್ತನ್ನೇ ಕೊಯ್ದೀತು. ರಕ್ತ-ಮಾಂಸಗಳಲ್ಲೇ ಮಿಂದೇಳಬೇಕಾದ ಆಹಾರಪ್ರಜ್ಞೆ ಸಾರ್ವಕಾಲಿಕವಾದೀತು !

ಇಂತಹ ಅರೆಕಾಸಿನ ಮಜ್ಜಿಗೆಯ some-ಸಾರದಿಂದಲೇ ಸಹೃದಂiiನು ನೃತ್ಯಾದಿ ಸಂಗತಿಗಳ ಸ್ವರೂಪ ಆಕರ್ಷಣೀಯವೂ, ಉಲ್ಲಾಸವೂ, ಕುತೂಹಲಕಾರಿಯಾಗಿಯೂ, ಆನಂದಾಶ್ರಿತವೂ ಆಗಬಲ್ಲುದೆಂಬುದನ್ನೇ ಮರೆಯುತ್ತಿದ್ದಾನೆ. ಮೂಗಿಗೆ ತುಪ್ಪ ಹಚ್ಚುವ ಕಾಯಕ ವ್ಯಾಪಕವಾಗುತ್ತಲಿರುವುದರಿಂದ ಪ್ರಯೋಜನಾತೀತ ಆನಂದದ ಹುಡುಕಾಟದಲ್ಲಿರುವ ಪ್ರೇಕ್ಷಕ ಪರದೆ ಸರಿಸಿ ಕಲೆಯ ಪ್ರಯೋಜನ ಹುಡುಕುವ ಕಲಾವಿದರಿಂದ ಮಾರುದೂರ ಹಾರುತ್ತಿದ್ದಾನೆ. ಇದರ ಫಲ-ಶಾಸ್ತ್ರೀಯ(?) ನೃತ್ಯಕಲೆಗಳಿಂದ ಪ್ರೇಕ್ಷಕವರ್ಗ ದೂರ ಉಳಿಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಕವಿತ್ವಶಕ್ತಿಗಳಿಂದ ನಡೆಸುವ ವಿದ್ವತ್ಕಲೆಯ ಸೋಂಕು ವಾಸನಾಮಾತ್ರೇಣ ಸಹಜವಾಗಿ ನಾಟ್ಯಾವಧಾನ ಎಂಬ ಹೆಸರಿನಲ್ಲಿ ತಗುಲಿದರೂ ಸಾಕು; ಕಲೆಯು ಕಲಾವಿದರ ಸಾಂಕ್ರಾಮಿಕ ಖಾಯಿಲೆಗಳಿಂದೆದ್ದು ಸಂಜೀವನೀಶಕ್ತಿ ಪಡೆದೀತು ಎಂಬುದು ಕಲಾದಿಗಂತದ ಕಡೆಯ ಆಶಾಕಿರಣ. ಇದರ ಸಾಕಾರಕ್ಕೆ ಮತ್ತೊಬ್ಬ ಆಂಜನೇಯ ಅವತರಿಸಬೇಕಾದ ಅನಿವಾರ್ಯತೆಯೂ ಇಲ್ಲದಿಲ್ಲ. ಆದಾಗ್ಯೂ ಅಳಿಲುಸೇವೆಯನ್ನೆಳೆಸುವವರು ಮುಂದೆಬಂದರೆ ಒಂದೊಂದು ಮರಳಕಣಗಳೂ ತೇಲುವ, ನಿಲ್ಲುವ ಶಕ್ತಿ ಪಡೆದಾವು. ಅವಧಾನವೆಂಬುದು ವಸ್ತುವಾಗುವುದಕಿಂತಲೂ ಮುಖ್ಯವಾಗಿ ನೃತ್ಯದ ಕ್ರಿಯೆಯಾಗುವ ಸನ್ನಿವೇಶವೇ ಇಲ್ಲಿ ಆಪ್ತ. – ಇದು ಇಲ್ಲಿನ ಇಂಗಿತ.

ನೃತ್ಯದಲ್ಲಿಯೂ ಅವಧಾನಕಲೆ ನಾಟ್ಯಾವಧಾನದ ಹೆಸರಿನಲ್ಲಿ ಅಲ್ಲಲ್ಲಿ ವಸ್ತುರೂಪ ಪಡೆದು ಪ್ರಚಲಿತಕ್ಕೆ ಬಂದದ್ದಿದೆ. ಆಂಧ್ರದಲ್ಲಿ ಧಾರಾ ರಾಮನಾಥಶಾಸ್ತ್ರಿಯವರಿಂದ ಮೊದಲು ಚಾಲ್ತಿಗೆ ಬಂದ ನಾಟ್ಯಾವಧಾನದ ಕಲ್ಪನೆ ; ಅವರ ಕ್ಷಣಮಾತ್ರದ ಆಹಾರ್ಯಚಲನೆ ಮತ್ತು ತಮ್ಮ ಅಭಿನಯಸಾಮರ್ಥ್ಯದಿಂದ ಜನಮನ ಗೆದ್ದಿತೇ ವಿನಾ ನೃತ್ಯದ ಶಾಸ್ತ್ರೀಯ ಪರಿಚಯದ ಮುಖ ವ್ಯವಸ್ಥಿತವಾಗಿ ತೆರೆದುಕೊಳ್ಳದೇಹೋಯಿತು. ಪದ್ಮಾಸುಬ್ರಹ್ಮಣ್ಯಂ ಅವರು ಬಾಲಮುರಳಿಯವರ ರಚನೆಗಳಿಗೆ ಸ್ಥಳದಲ್ಲೇ ಆಶುವಾಗಿ ನರ್ತಿಸಿ ನಾಟ್ಯಾವಧಾನದ ಸ್ವರೂಪವನ್ನು ಕೊಡಲೆತ್ನಿಸಿದ್ದಾರಾದರೂ ಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳುವಂತಹ ಪ್ರಮೇಯ ಅವರಿಗೊದಗಲಿಲ್ಲ. ಕರ್ನಾಟಕದಲ್ಲಿಯೂ ನಾಟ್ಯಾವಧಾನದ ಪ್ರಯತ್ನಗಳು ಅಲ್ಲೊಂದು ಇಲ್ಲೊಂದು ಎಂಬಂತೆ ನಡೆದಿವೆಯಾದರೂ ಅದು ಸ್ವಯಂಪರಿಪೂರ್ಣವಲ್ಲ ಎಂಬುದನ್ನು ವಿದ್ವಾಂಸರೇ ಅನುಮೋದಿಸುತ್ತಾರೆ.

ಅವಧಾನಿಯು ಪೃಚ್ಛಕಪಂಡಿತರು ಒಡ್ಡುವ ಸಮಸ್ಯೆಗಳಿಗೆ ಯಥೋಚಿತವಾಗಿ ಆಶುವಾಗಿ ಯಾವುದೇ ಲೇಖನಸಾಮಗ್ರಿಯಿಲ್ಲದೆ ಛಂದೋಬದ್ಧರೂಪದಲ್ಲಿ ಪರಿಹಾರ ನೀಡುವುದು ಅವಧಾನಕಲೆಯ ವಿಶೇಷ. ಧಾರಣ (ಸ್ಮರಣೆಯಿಂದ ಹೇಳುವಂತಾದ್ದು), ಪೂರಣ(ಸಮಸ್ಯಾಪೂರ್ತಿ) ಅವಧಾನದ ಮೂಲಧಾತುಗಳಾದರೂ ಜನರಂಜನೆ ಮತ್ತು ಅವಧಾನಿಯ ಸೃಷ್ಟಿಶೀಲತೆಯನ್ನು ಕಾಣಿಸಿಕೊಡಲು ಧಾರಾವಿಶೇಷವೂ ಹುಟ್ಟಿಕೊಂಡಿದೆ. ಅಷ್ಟಕ್ಕೂ ನಾಟ್ಯಾವಧಾನದ ಸ್ವರೂಪ ಎಂದಿನ ಅವಧಾನದ ಸ್ವರೂಪಕ್ಕಿಂತ ಸಾಕಷ್ಟು ಭಿನ್ನ ಮತ್ತು ಅಚ್ಚುಕಟ್ಟಾದ ಸಂವಿಧಾನವೂ ಇತರೆ ಅವಧಾನಗಳಂತೆ ಈವರೆಗೆ ಸ್ಪಷ್ಟವಾಗಿ, ಯುಕ್ತನೆಲೆಯಲ್ಲಿ ಒದಗಿಲ್ಲ. ಜೊತೆಗೆ ಕಲಾವಿದರ ಸಾಮರ್ಥ್ಯ, ಪ್ರತಿಭಾವೈಶಾಲ್ಯತೆಯಲ್ಲಿರುವ ಸಮಸ್ಯೆಗಳೂ ಇಂತಹ ಸಾಧ್ಯತೆಗಳನ್ನು ಹುಡುಕುವಲ್ಲಿ ಮನಮಾಡಿಲ್ಲ. ನೃತ್ಯ ದೃಶ್ಯಕಾವ್ಯವಾಗಿರುವುದರಿಂದ ಪೂರಣ, ಧಾರಣಾಂಶಗಳಿಗಿಂತಲೂ ಧಾರೆಯ ಧಾರಾಳತೆ ಇಲ್ಲಿ ಬೇಕು. ಕೋರಿದ ವಸ್ತುವಿನ ಮೇಲೆ ಅಭಿನಯ, ಆಶುನೃತ್ತವಿನ್ಯಾಸ ನೈಪುಣ್ಯತೆ, ನಟುವಾಂಗಾದಿ ವಾದ್ಯಗಳಲ್ಲಿ ಪರಿಣತಿ, ವಿರುದ್ಧ ಭಾವಗಳನ್ನು ಏಕಕಾಲದಲ್ಲಿ ನಿರ್ವಾಹ ಮಾಡುವ ವ್ಯುತ್ಪತ್ತಿ, ನಾಟ್ಯ/ನೃತ್ಯದ ಮೂಲ ಸಿದ್ಧಾಂತ ಹಾಗೂ ಪ್ರಾಯೋಗಿಕಾಂಶಗಳ ಜ್ಞಾನವಿಸ್ತಾರ, ಆಹಾರ್ಯ ಕೌಶಲ್ಯ, ಧ್ವನಿ-ಔಚಿತ್ಯಾದಿ ಸಂಸ್ಕಾರ, ಆಂಗಿಕ ಸಮೃದ್ಧಿ, ವಾಚಿಕಧಾರೆ ..ಹೀಗೆ ಹತ್ತು ಹಲವು ಆಯಾಮಗಳಿಂದ ನಾಟ್ಯಾವಧಾನವನ್ನು ನಡೆಸಬಹುದಾದರೂ ಇಂದಿನ ಶಾಸ್ತ್ರೀಯ ನೃತ್ಯಪದ್ಧತಿಯ ಮಾರ್ಗಚೌಕಟ್ಟಿಗೆ ಸಾಮಾನ್ಯಕ್ಕೆ ಕೈಗೆಟುಕುವಂತಹ ಸರಕಲ್ಲ.

ಕಲಾವಿದರ ಪ್ರತಿಭಾ ನೈಪುಣ್ಯತೆ, ಸಹೃದಯಶೀಲ ವ್ಯಕ್ತಿತ್ವ ಮತ್ತು ನೃತ್ಯಪ್ರಾವೀಣ್ಯ-ಪಾಂಡಿತ್ಯಕ್ಕೆ ಅವಧಾನವೆಂಬ ನಿಕಷವು ಒಡ್ಡುವ ಸವಾಲು ಇಂದಿನ ಯಾವ ಪ್ರತಿಭಾಸ್ಪರ್ಧೆ, ಪ್ರದರ್ಶನಗಳಿಗಿಂತಲೂ ಮಿಗಿಲು. ಈ ನಿಟ್ಟಿನಲ್ಲಿ ಶುಕಪಾಠದಂತೆ ಆಗುತ್ತಿರುವ ನೃತ್ಯಾವರಣಕ್ಕೆ ಅವಧಾನದ ವರ್ಣ ಒದಗಿದರೆ ಹೂರಣ ಸೊಗಸಾಗಿ, ಪಾಕ ಪಕ್ವಗೊಂಡು ಸ್ವಾದಿಷ್ಟವಾದ ಸಿಹಿಯಾಗಬಹುದು. ಒಟ್ಟಾರೆಯಾಗಿ ನಾಟ್ಯಾವಧಾನದ ಸ್ವರೂಪಕ್ಕೆ ಅಲ್ಲದಿದ್ದರೂ ನಾಟ್ಯ/ನೃತ್ಯವನ್ನು ಧಾರೆ(ಆಶು)ಯಾಗಿಸುವ ಮಟ್ಟಿನ ಸಂಕಲ್ಪ ನೃತ್ಯಕಲಾವಿದರಲ್ಲಿ ಮೂಡಿದರೆ ಕಲಾವರಣವು ಕಲಾರ್ಣವವಾಗಿ ನೃತ್ಯಸಾರ ಸರ್ವಸ್ವವನ್ನೂ ಒಳಗಿಳಿಸುವ ದ್ರವ್ಯವಾದೀತು; ರಸೌಷಧವಾದೀತು. ಅಂತಹ ಕಾಲ ನಮ್ಮನ್ನು ಸಂಧಿಸಲಿ.. ಅಲ್ಲವೇ?

ಪ್ರೀತಿಯಿಂದ

ಸಂಪಾದಕರು

3 Responses to ನಾಟ್ಯಾವಧಾನವೆಂಬ ಅಸಾಮಾನ್ಯ ಸಾಧ್ಯತೆಯೆಡೆಗೆ….

 1. ಹರಿಹರ ಭಟ್, ಬೆಂಗಳೂರು.

  ಒಳ್ಳೆ ವಿಚಾರ. ಸಮಾನ ಮನಸ್ಕರನ್ನು ಸೇರಿಸಿ, ಯೋಚಿಸಿ ಕಾರ್ಯರೂಪಕ್ಕೆ ತನ್ನಿ. ಶುಭವಾಗಲಿ .

  ಹರಿಹರ ಭಟ್, ಬೆಂಗಳೂರು.
  hariharbhat .blogspot .in

 2. ಮಂಜುನಾಥ ಕೊಳ್ಳೇಗಾಲ

  ಶತಾವಧಾನದಂಥದ್ದೊಂದು ಮೇರು ಘಟನೆ ಒಮ್ಮೆಗೇ ನಡೆದು ಮುಗಿಯದೇ ಹೇಗೆ ವಿವಿಧ ಕ್ಷೇತ್ರಗಳಲ್ಲಿ ಅನುರಣನವನ್ನೆಬ್ಬಿಸುತ್ತಲೇ ಹೋಗುತ್ತದೆಂಬುದಕ್ಕೆ ಇದು ಉದಾಹರಣೆ. ನಾಟ್ಯಾವಧಾನದ ನಿಮ್ಮ ಕಲ್ಪನೆ ಆಸಕ್ತಿದಾಯಕವಾಗಿದೆ. ಹಾಗೆಯೇ ಬರೆದದ್ದೇ ಬರಹವೆಂದುಕೊಳ್ಳುವ ಈ ಕಾಲದಲ್ಲಿ, ತಮ್ಮ ಭಾಷಾಸೌಷ್ಟವಕ್ಕೆ ಮಾರು ಹೋದೆ. ಅಲ್ಲಿಲ್ಲಿ ಒಮ್ಮೊಮ್ಮೆ ಗರಿಬಿಚ್ಚಿ ಸುಮ್ಮನಾದ ಪರಿಕಲ್ಪನೆಗೆ ಹೊಸ ಗರಿ, ಕಸುವು, ಬಣ್ಣ ಕಟ್ಟುವ ನಿಮ್ಮ ಪ್ರಯತ್ನ ಯಶಸ್ವಿಯಾಗಲೆಂದು ಬಯಸುತ್ತೇನೆ.

 3. ಅನಂತರಾಂ,ಅಧ್ಯಕ್ಷರು, ಬಿಟಿ‌ಎಂ ಕಲ್ಚರಲ್ ಅಕಾಡೆಮಿ, ಬೆ

  ಬಹಳ ಪಾಂಡಿತ್ಯಪೂರ್ಣವಾದ ಸಂಪಾದಕೀಯ. ಇಂತಹ ಸಂಪಾದಕೀಯವನ್ನು ಸದ್ಯ ನಾನೆಲ್ಲೂ ಕಲೆಯ ಕ್ಷೇತ್ರದಲ್ಲಿ ನೋಡಿಲ್ಲ. ತುಂಬಾ ಸಂತಸವಾಯಿತು. ಮನಸ್ಸು ತುಂಬಿ ಬಂದಿತು. ಅಂತೆಯೇ ನಾಟ್ಯಾವಧಾನದ ಕಲ್ಪನೆಯನ್ನು ಸಾಕಾರಗೊಳಿಸಲೇಬೇಕೆಂಬ ಹಪಹಪಿ ನನ್ನನ್ನು ಕಾಡುತ್ತಿದೆ. ಕಲೆಯ ಮತ್ತು ಕಲೆಯ ಬೇರೆ ಬೇರೆ ಆಯಾಮಗಳೆಡೆಗೆ ಮುಕ್ತವಾಗಿ, ನೇರವಾಗಿ ಬರೆಯುತ್ತಿರುವ ಸಂಪಾದಕರ ಪ್ರತಿಭೆ, ಧೈರ್ಯ ನನಗೆ ಬಹಳ ಮೆಚ್ಚುಗೆಯಾಯಿತು. ಕಲೆಯೆಡೆಗೆ ಸ್ವಯಂ ಹಮ್ಮಿಕೊಂಡ ನಿಮ್ಮ ಕರ್ತವ್ಯ ಸದಾ ಅಭಿನಂದನೀಯ. ಸರಿಯಾದ ಅವಕಾಶ, ಪ್ರತಿಭೆಯುಳ್ಳವರಿಗೆ ಅನುಕೂಲವೂ ಸಿಕ್ಕೀತು ಎಂಬ ಆಶಯ ನನ್ನದು.

Leave a Reply

*

code