ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು – ಭಾಗ 6

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ಕಲೆಯು ತನ್ನಲ್ಲಿರುವ ರೂಪಿನಲ್ಲಿ ಹಲವು ಹೆಚ್ಚು ಕಡಿಮೆ ಮಾಡಿರುವುದಕ್ಕೆ ಕಾರಣಗಳಿವೆ. ತನಗೆ ಎದುರಾಗಿರುವ ಸಾಮಾಜಿಕ ಅಂಶ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ಈ ಸಮಾಜದಲ್ಲಿ ತನ್ನ ಬದಲಾವಣೆ ಆಯಿತೆನ್ನುತ್ತದೆ. ಅದೂ ಸಾಲದೆ ಮಾನವನ ಮನಸ್ಸಿನ ರಸಾನುಭುತಿ ಕೂಡಾ ! ಜೀವನ ಕ್ರಮ ನಿಬಂಧನೆಯೇ ಹೆಚ್ಚು ಕಡಿಮೆಗಳನ್ನು ಕಲಾಭಿವ್ಯಕ್ತಿಯಲ್ಲಿ ಕಾಣಿಸುವುದು ನಿಜ. ಜೀವನದ ಸ್ಥಿತಿಯೂ ಅಂತಹ ಅವಸ್ಥೆಯನ್ನು ನಿರೀಕ್ಷಿಸುತ್ತಿದೆ. ಹರಿಕಥೆ ಮುಂತಾದ ಧಾರ್ಮಿಕ ಚರ್ಚಾ ವಿಷಯಗಳು, ಸಾಹಿತ್ಯ ಕುರಿತಾದ ನಿಯಮಗಳು, ತಮಿಳು, ತೆಲುಗು, ಕನ್ನಡ ಹಾಗೂ ಸಂಸ್ಕೃತದ ಪದವಿಶೇಷಗಳು, ದೇವಲದಲ್ಲಿ ಕಂಡ ಶಿವನ ದೃಶ್ಯ. ನುಡಿಸುವ ನಾದವೈಭವ, ಕೇಳಿಸುವ ಮೃದಂಗಧ್ವನಿ, ಪೂಜಾಸಮಯದಲ್ಲಿ ಕಿವಿಗೆ ಬೀಳುವ ಮಂತ್ರಗಳಲ್ಲದೆ, ಭಕ್ತರ ಆಂತರ್ಯದ ಸ್ಥಿತಿಗಳು-ಇಷ್ಟೆಲ್ಲಾ ಭರತನಾಟ್ಯದಲ್ಲಿ ಕಾಣಿಸುತ್ತಿದ್ದ ದೃಶ್ಯಚಿತ್ರಗಳು.

ಆದರೆ ಪರಂಪರೆಯು ಹೊರಹೊರಡಲು ಸಿದ್ಧವಾಯಿತು, ದೇವದಾಸಿಯರು ತಮ್ಮ ಇರವನ್ನು ಇತರರಿಗೂ ತೋರಿಸಹತ್ತಿದರು ; ನೃತ್ಯ ನಡೆಯುತ್ತಿದ್ದ ದೇವಲದಲ್ಲಿ, ರಾಜರಿರುವ ನಡೆವ ಸಭೆಯಲ್ಲಿ ಉತ್ತಮರೆದುರು ಪ್ರದರ್ಶನ ಮಾಯವಾಯಿತು. ಆ ಸಹೃದಯರ ಗುಂಪಿನಲ್ಲಿ ನರ್ತಿಸುವವರ ಮನಸ್ಥಿತಿಯಿರುವ ರಸಿಕರೆಲ್ಲಾ ಹೊರಟುಹೋಗಿ ಈಗ ಪ್ರಾಪಂಚಿಕ ಸಂಕುಚಿತ ಜನಗಳ ಎದುರಿಗೆ ಕುಣಿಯಬೇಕಾಯಿತು. ನರ್ತಿಸುವವರ ಮನದ ಅವಸ್ಥೆಯನ್ನು ಪರಿಭಾವಿಸಿ ಆನಂದ ಪಡೆಯದ ಜನರಿದಿರು ಗೆಜ್ಜೆ ಕಟ್ಟಬೇಕಾಯಿತು. ನರ್ತಕಿ ಹಾಗೂ ಅದನ್ನು ಗ್ರಹಿಸಿ ನೋಡುವ ಪ್ರಿಯರ ನಡುವಿನ ಸಂಬಂಧ ಕುಲಗೆಟ್ಟಿತು. ರಸಿಕಜನರ ಭಾವನೆಯನ್ನು ಹೊಡೆದೆಬ್ಬಿಸುವ ನರ್ತಕಿ ಈಗ ಸೋತುಹೋದಳು.

ಇಂದಿಗೂ ತನಗಿದಿರಾದ ದುರವಸ್ಥೆಯಿಂದ ಪಾರಾಗಲು ವಿಶ್ವದ ಯಾವುದೋ ಒಂದು ಭಾಗದ ನಿಶ್ಚಲ ಏಕಾಂತ ಸ್ಥಿತಿಯಲ್ಲಿ ಆ ಕಲಾವಸ್ತುವೀಗ ಸಂಗೀತ ನೃತ್ಯಗಳ ಸಹವಾಸವಿರದ, ಇತರ ಕ್ಷೇತ್ರದವರಿಗಾಗಿ ಮುಖ ತೋರಿಸುವುದಾಗಿದೆ. ಅಂದರೆ ತನ್ನ ಪ್ರದೇಶದ ಉತ್ತಮಿಕೆಯನ್ನು ಕಳೆದು ತಾನೀಗ ಮುಖಸೌಂದರ್ಯ ಹಾಗೂ ದೇಹದ ಸಿರಿಯನ್ನು ಮಾತ್ರ ಅನುಭವಿಸುವವರ ಇದಿರಿಗೆ ಕುಣಿವ ವಸ್ತುವಾಗಿದ್ದಾಳೆ.

ಕಲೆಯನ್ನು ಚೆನ್ನಾಗಿ ಕಲಿವ ಲಕ್ಷಣ ಹೊಂದಿದ ಅನೇಕರು ಹಲವು ಗುರುಗಳಿಂದ ಉಪದೇಶ ಪಡೆದುಕೊಂಡಿದ್ದಾರೆ. ಆದರೆ ವೃದ್ಧಾಪ್ಯ ತಾಳಿದ ಗುರುಮಹಾಶಯರು, ಕಲೆಗಾಗಿ ಪೂರ್ಣ ಆರಾಧನೆಯನ್ನು ಮಾಡುವವರ ಕೈಬಿಟ್ಟ ಶಾಸ್ತ್ರೋಕ್ತ ರೀತಿಯ ವಿಚಾರವೇನೂ ತಿಳಿಯದ ನೃತ್ಯಶಿಕ್ಷಕರು ಮತ್ತು ಗುರು ವಿದ್ಯಾರ್ಥಿಗಳ ನಡುವೆ ನಡೆವ ಕದನ ಬಹಳ ಸೂಕ್ಷ್ಮವಾದುದು. ಶಾಲೆ ಹಾಗೂ ಬಾನಿ (ಕ್ರಮ ಮರ್ಯಾದೆ)ಗಳ ನಡುವೆ ಕಂದಕ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಹಲವಾರು ತರದ ಶಾಸ್ತ್ರೀಯ ನರ್ತನಗಳೆಲ್ಲ ಹೇಳಹೆಸರಿಲ್ಲದೆ ಮಾಯವಾಗುವ ಲಕ್ಷಣವೀಗೀಗ ಕಾಣಿಸುತ್ತಿದೆ. ಈಗ ಮೂಡಲ-ಪ್ರಾಚ್ಯ-ಪೌರಾತ್ಯ ಸಂಸ್ಕೃತಿಯ ನೆಲೆಗಟ್ಟೇ ಅವರಿಗೆ ಬೇಕಾದುದಲ್ಲದೆ, ಆ ಕಲೆಯನ್ನು ಕಲಿಯಬೇಕಾದ ಲಕ್ಷಣವೇ ಅವರಲ್ಲಿ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಶಾಸ್ತ್ರೀಯ ಕಲೆಯ ಅವನತಿಯ ಸೂಚನೆ ಹೆಚ್ಚಾಗುತ್ತಿದೆ !

ಇಂದಿಗೆ ‘ಆಂಗಿಕ’ದಲ್ಲಿ ದೇಹದ ವಿವಿಧ ಅಂಗಭಾಗಗಳ ಚಲನೆಯೇ ಚೋದ್ಯವೆನಿಸುತ್ತದೆ. ಶಾಸ್ತ್ರೀಯ ನೃತ್ಯದಲ್ಲಿ ಇರಲೇಬೇಕಾದ ಮುಖ್ಯ ಚಲನೆಯೇ ಇವರಲ್ಲಿಲ್ಲ. ಎಲ್ಲಕ್ಕೂ ಮೊದಲು ಆ ಕ್ರಮಕ್ಕೆ ಹೊಂದಿರುವ ದೇಹಕ್ಷೇತ್ರಗಳು, ಘನಾಕೃತಿಗಳ ಪ್ರಮಾಣ-ಸಂಬಂಧಗಳ ಶಾಸ್ತ್ರ, ಜ್ಯಾಮಿತಿ ಇವುಗಳೆಲ್ಲವುಗಳ ಪರಿಜ್ಞಾನವಿರಬೇಕು. ಇದನ್ನು ತಿಳಿದ ವ್ಯಕ್ತಿ ಮಾಡುವ ನೃತ್ಯ ಹಲವು ಕಡೆ ಆದರವನ್ನು ಪಡೆಯುತ್ತದೆ. ಆದರೆ ಉಳಿದವರೆಲ್ಲಾ ಆ ಮಟ್ಟಕ್ಕೆ ಏರಿದ ಸಂದರ್ಭ ಬಹಳ ಕಿರಿದು.

ಆಂಗಿಕದಲ್ಲಿ ನೃತ್ತಭಾಗವು ಕೊನೆಯೇ ಇಲ್ಲವೆನ್ನುವಷ್ಟು ರೀತಿಗಳಲ್ಲಿದೆ. ಒಂದು ಜತಿಯ ತೀರ್ಮಾನಗಳು ತಮ್ಮ ನಡೆಯ ಹಲವು ವಿಭಾಗದ ತಾಳಾವರ್ತಗಳನ್ನು ಕೂಡಿಸಿರುವುದುಂಟು. ತಾಳಾವರ್ತಗಳು ಹಿಂದಿಗಿಂತಲೂ ಈಗ ಇನ್ನಷ್ಟು ಚಾಣಾಕ್ಷ ಸ್ಥಿತಿಯಲ್ಲಿದ್ದು, ಹಲವು ತಾಳಗಳಿಗೆ ಅನುಸಾರವಾಗಿ ಹೆಣೆಯಲ್ಪಟ್ಟಿದೆ. ಈ ದಿಶೆಯಲ್ಲಿ ಪದವರ್ಣಗಳಿಗೆ ಬೇರಿತರ ವರ್ಣಗಳನ್ನು ಬೆರೆಸಿ, ಕಲಾ ಮರ್ಯಾದೆಯನ್ನು ಕುಂಠಿತಗೊಳಿಸುವಲ್ಲಿಗೆ ಬಂದಿದ್ದೇವೆ. ಒಂದು ವರ್ಣದ ಅಭಿನಯದಲ್ಲಿ ಸಂಗೀತದ ನೆರವಿನಲ್ಲಿ ನಡೆಯತಕ್ಕ ವಸ್ತುವಿಗೆ ಅಭಿನಯದ ಸಂಚಾರಿ ಭಾವಗಳನ್ನು ಕೊಡತಕ್ಕದ್ದು. ಆದರೆ ಇಂದು ನರ್ತಕಿ ಸಾಹಿತ್ಯದ ಮಾತುಗಳಿಗೇ ಮಾತ್ರವೇ ಅರ್ಥ ತೋರಿಸುತ್ತಾಳೆ ; ಸಂಚಾರಿ ಭಾವಗಳಿಗೆ ಒಂದು ಶುಷ್ಕ ಕಥೆಯನ್ನು ಮಾತ್ರ ಕಾಣಿಸುತ್ತಾಳೆ.

ನಾಯಕಿ ಇಂದು ತಾನೇ ಒಬ್ಬ ನರ್ತಕಿಯಾಗಿದ್ದಾಳೆ. ಅವಳಿಗೆ ಸಹಾಯಕ ವಸ್ತುವಿರದೆ ತನ್ನ ಮಾತಿನ ಅಥವಾ ಯೋಗ್ಯತೆಯನ್ನು ಕಾಣಿಸುವ ಸನ್ನಿವೇಶವಿದೆ. ಅವಳು ಅತಿರೇಕವಾಗಿ ಉಪಯೋಗಿಸುವ ಸಾಹಿತ್ಯವನ್ನೇ ಆಧರಿಸಿದ್ದಾಳೆ. ಹೊಸದಾರಿಗೆ ಹೋದರೆ ಜನರ ಕಠಿಣ ವಿಮರ್ಶೆಗೆ ಗುರಿಯಾಗುವ ಸಂದರ್ಭ ಕಾಣಿಸುತ್ತದೆ.

ಪದವರ್ಣಗಳಿಗೆ ಅಭಿನಯಿಸುವಾಗ ಪಲ್ಲವಿಯಲ್ಲಿ ಯಾವುದೋ ಒಂದು ಸನ್ನಿವೇಶವಿದೆ; ಉದಾ : ಹೆಚ್ಚಿನ ವರ್ಣಗಳಲ್ಲಿ ಪ್ರಾರಂಭವಾಗುವ ವಾಸಕಸಜ್ಜಾ ಅಥವಾ ಮೋಹಿತಳಾದ ನಾಯಕೀ ಲಕ್ಷಣದಿಂದ ಅವಳ ಸ್ವಭಾವ ಕ್ರಮವೇನೆಂದು ಎಲ್ಲರಿಗೂ ತಿಳಿದ ವಿಷಯವೇ . ಆದರೆ ನಾವು ತೆಗೆದುಕೊಳ್ಳುವ ವರ್ಣದ ಸಾಹಿತ್ಯದಲ್ಲಿ ಆ ನಾಯಕಿಗೆ ಬೇರೆ ತರದ ಮಾತಿದ್ದರೂ, ಹೆಚ್ಚಿನವರೆಲ್ಲರೂ ಹಿಂದೆ ತಾವು ಅಭಿನಯಿಸಿದ ಚಿತ್ರಣವನ್ನೇ ಪುನಾ ತೋರಿಸುತ್ತಾರೆ. ಇತರ ನಾಯಕಿಯ ಗುಣ ಬೇರೆಯಾಗಿದ್ದರೂ ನವು ನೋಡುವುದು ಇನ್ನೊಬ್ಬ ನಾಯಕಿಯ ವೃತ್ತಾಂತ. ಇಂತಹ ಅಭಿನಯವೇ ಪದಾಭಿನಯದಲ್ಲಿರುತ್ತದೆ. ಭಾವ ಗೊತ್ತಿರದಿದ್ದರೂ ಪಲ್ಲವಿಯನ್ನು ಮುಗಿಸಿಬಿಟ್ಟೇವೆಂಬ ಕೃತಾರ್ಥತೆ ! ?

Leave a Reply

*

code