ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

muraleedhara rao

muraleedhara rao

ಕಲೆಗಾಗಿ ಸಂಘ ಸ್ಥಾಪನೆ ! ಹತ್ತು ಜನರ ಒಕ್ಕೂಟ ಅದು. ಕೀರ್ತಿ-ಹಣ ಸುಲಭವಾಗಿ ದೊರೆಯುತ್ತದೆ. ಅದು ಕಲೆಯ ಒಳಿತಿಗಾಗಿಯೋ ಅಥವಾ ಸ್ವಂತ ಪ್ರಯೋಜನಕ್ಕಾಗಿಯೋ?

ಇಂದು ಪರೀಕ್ಷೆ, ಪಠ್ಯಪುಸ್ತಕಗಳು, ಅದರಲ್ಲಿರಬೇಕಾದ ವಿಷಯಗಳು- ಇವೆಲ್ಲಾ ನಮ್ಮ ಸ್ವಂತ ಪ್ರಯೋಜನಕ್ಕಾಗಿ ಇವೆ; ಕಲೆಗಾಗಿ ಅಲ್ಲ. ಪಠ್ಯಪುಸ್ತಕದಲ್ಲಿರುವುದನ್ನೇ ಹೇಳಿದರೆ ನೂರಕ್ಕೆ ನೂರು ಅಂಕ ಗಳಿಸಬಹುದು ! ಇದರಿಂದ ನಮ್ಮ ಮನಸ್ಸಿಗೆ, ದೇಹಕ್ಕೇನು ಲಾಭವಾಯಿತು, ಯಾವ ರೀತಿಯಲ್ಲಿ ಜನಮನ್ನಣೆ ಗಳಿಸುತ್ತೇವೆ- ಎಂಬ ವಿಚಾರಗಳು ಆ ಸಂಘ ಸಂಸ್ಥೆಗಳಲ್ಲಿಲ್ಲ.

ಭರತನಾಟ್ಯ ಆದಿಯಾಗಿ ನೃತ್ಯ ಕಲೆಗಳನ್ನು ಬರಿಯ ಹೆಸರು ಅಥವಾ ವಿಧಿನಿಯಮವೆಂದು ಹೇಳುವ ಬದಲಿಗೆ, ಅದನ್ನು ಕೂಲಂಕಷವಾಗಿ ತಿಳಿಯುವುದು ಉತ್ತಮ. ನಾಟ್ಯದ ವಿಚಾರ ತಿಳಿದವರು, ಗುರುಗಳು, ನಾಟ್ಯ ನಡೆಸುವವರು ಹಾಗೂ ಪ್ರದರ್ಶಿಸುವವರು ಒಟ್ಟಾಗಿ ಸೇರಿ; ಉದ್ದೇಶ ಇತ್ಯಾದಿಗಳನ್ನು ಚರ್ಚಿಸಿ, ನಾಟ್ಯದ ರೀತಿನೀತಿಗಳನ್ನು ಒಂದು ನಿಯಮದಲ್ಲಿ ತರುವುದು ಮುಖ್ಯ. ಈ ಸಂದರ್ಭ ಮತ್ತು ಯೋಚನೆ ನಾಟ್ಯ ಪ್ರವರ್ತಕರಿಗೂ, ವಿಮರ್ಶಕರಿಗೂ ಒಂದು ಉತ್ತಮ ನಿದರ್ಶನವಾಗಬಹುದು.

ಭರತನಾಟ್ಯಕಲೆ- ಎಂಬುದು (೧೯೩೦ರಲ್ಲಿ ಚೆನ್ನೈನ ಸಂಗೀತ ಅಕಾಡೆಮಿ ಕಂಡ) ದಾಸೀ ಆಟ್ಟಂ, ಸಾದಿರ್, ಕೂತ್ತು, ಕರ್ನಾಟಕಂ ಎಂಬ ಹೆಸರು ಪಡೆದಿತ್ತು. ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಉದಿಸಿದ ಈ ಕಲೆ ಮುಂದೆ ದೇಶದ ಮೂಲೆಮೂಲೆಗೂ ಹಬ್ಬಿ, ಭಾರತದ ಅತ್ಯಮೂಲ್ಯ ಕಲೆಯೆಂಬ ಪ್ರಚಾರ ಹೊಂದಿತು. ತಂಜಾವೂರು ಚತುಷ್ಪಯರಿಂದ ರೂಪುಗೊಂಡ ಈ ಕಲೆ ಮುಂದಿನ ಕೆಲ ವಿದ್ವಾಂಸರಿಂದ ಉತ್ತಮ ವ್ಯವಸ್ಥಿತ ರೂಪ ಪಡೆಯಿತು. ಇದರ ನಾಟ್ಯಾಂಶಗಳಿಗೆ ‘ಮಾರ್ಗ’ ಎಂಬ ಹೆಸರಿದೆ. ಇದೇ ಮಾರ್ಗದಲ್ಲಿ ಭಾವಪ್ರೇರಣೆ, ಭಾವಸ್ಫುರಣೆ ಹಾಗೂ ಭಾವಗರ್ಭಿತವೆಂಬ ಧ್ವನಿಪೂರ್ಣ ವಸ್ತು ಇರಲೇಬೇಕು. ಅದಕ್ಕೆ ಮಾರ್ಗದರ್ಶಕವಾಗಿ ಅನೇಕ ವಿದ್ವಾಂಸರೆಲ್ಲಾ ಸೇರಿ ಅದಕ್ಕೆ ಹೊಂದುವ ಸಂಗೀತ, ಪದಗಳು, ಕೀರ್ತನೆ, ಶ್ಲೋಕ, ಸಾಹಿತ್ಯಗಳನ್ನು ರಚಿಸಿ ನಾಟ್ಯಕ್ಕೆ ಅಪರಿಮಿತ ಹಿರಿಮೆ ತಂದುಕೊಟ್ಟಿದ್ದಾರೆ.

ನಾಟ್ಯದಲ್ಲಿ ಸಂಗೀತ ಮುಖ್ಯ. ನಾಟ್ಯದ ನಡೆಯಲ್ಲಿ ಸಂಗೀತದ ವಿವಿಧಾಂಶಗಳನ್ನು ಕಾಣುತ್ತಿದ್ದೇವೆ. ಹಿಂದಿನ ಶಾಸ್ತ್ರಗಳಲ್ಲಿ ಸಂಗೀತದ ಸಾಮರಸ್ಯ ಮತ್ತು ಕಲಿಯುವಿಕೆ ನಾಟ್ಯದಷ್ಟೇ ಮೂಲವೆಂದು ಪರಿಗಣಿಸಲಾಗುತ್ತಿತ್ತು. ಅಭಿನಯದಲ್ಲಿ ರಾಗದ ಮೂಲನಡೆಗಳಿಗೆ ಅನುಸಾರವಾಗಿ ಗಮಕಗಳು, ಶ್ರುತಿಗಳು, ನೆರವಲು-ಸ್ವರಪ್ರಸ್ತಾರ ಕ್ರಮಗಳೂ ಅವಿನಾಸಂಬಂಧವಾಗಿ ಸಾಗುತ್ತದೆ. ಸಾಹಿತ್ಯವು ಸಮೀಪದಲ್ಲಿ ಚಲಿಸುತ್ತಾ ನೃತ್ಯಭಾವಕ್ಕೆ ಆಧಾರವಾಗಿರುತ್ತದೆ. ಹಾಗಾಗಿ ಸಂಗೀತವು ನರ್ತನದಿಂದ ಬೇರಾಗಿಲ್ಲ; ಬದಲಾಗಿ ಜತೆಯಲ್ಲೇ ಸಾಗುವ ವಿಶೇಷಸ್ಥಾನ ಹೊಂದಿದೆ. ಇದನ್ನೇ ‘ವಾಚಿಕ’ವೆಂದು ಕರೆಯುತ್ತಾರೆ.

ನಾಟ್ಯಕಲೆಯಲ್ಲಿ ಇತ್ತೀಚೆಗೆ ಸ್ವತಂತ್ರ ಕಲ್ಪನಾಶಕ್ತಿ ಇಲ್ಲದಿರಲು ಕಾರಣ ; ನರ್ತಕರಿಗೆ ಸಂಗೀತದ ಲಕ್ಷಣಗಳೇ ತಿಳಿಯದಿರುವುದು. ನೃತ್ಯಕ್ಕೆ ಅಗತ್ಯವಾದ ಹಾಡುಗಳು ಅಥವಾ ವಸ್ತುಗಳಿಗೆ ಬಾಯಿಪಾಠ ಮಾಡುವುದಲ್ಲದೆ, ಸಂಗೀತದ ಒಳಹೊಗುವ ಸಾಹಸವೇ ಅವರಲ್ಲಿಲ್ಲ. ಸಂಗೀತದ ಜೊತೆಗೆ ಅದರೊಡನಿರುವ ತಾಳ-ಲಯಗಳು, ಅದರಲ್ಲಿ ಅಡಕವಾಗಿರುವ ಅಮೂಲ್ಯ ಹೃದಯಸ್ಪರ್ಶಿ ಸ್ವರಗುಣ ಹಾಗೂ ಆಯಾ ರಾಗಕ್ಕೆ ಒದಗುವ ಕ್ಲಪ್ತ ಸಾಮರ್ಥ್ಯವೆಲ್ಲ ನಮ್ಮಲ್ಲಿನ ಸುಪ್ತವಾದ ಭಾವನೆಗಳನ್ನು ಹೊಡೆದೆಬ್ಬಿಸುತ್ತದೆ; ಹಾಗೂ ಅಭಿನಯಕ್ಕೆ ಸೂಕ್ಷ್ಮತೆಯನ್ನು ನೀಡುತ್ತದೆ. ಇದರಿಂದ ನರ್ತಕಿಯು ತನ್ನ ಅಭಿನಯ- ನಡೆಗಳನ್ನು ಒಂದು ಸುಲಲಿತ ಸ್ಥಿತಿಗೆ ತರುವುದಲ್ಲದೆ; ನಡುನಡುವೆ ಸಾಗರದ ತರಂಗೋಪಾದಿಯಂತೆ ಸ್ಪರ್ಶಸುಖವನ್ನು ನೀಡುತ್ತದೆ.

ಹಾಡುಗಳ ತಿಳಿವಳಿಕೆ ಮತ್ತು ಕಾವ್ಯಗಳ ಅಂತಃಸತ್ವ, ಪ್ರತಿಮಾಶಿಲ್ಪ, ಸ್ಥಳಪುರಾಣ, ಇತಿಹಾಸಗಳೆಲ್ಲ ಈ ಕಲೆಗೆ ನೆರವು ನೀಡುವಂತಹವು. ಭಾವಗಳು ಆವೇಶಭರಿತವಾಗಿದ್ದರೆ ರಸವು ಅಮೂಲ್ಯತೆಯನ್ನು ಹೊಂದುತ್ತದೆ.

Leave a Reply

*

code