ಅಂಕಣಗಳು

Subscribe


 

ಪಾರಿಭಾಷಿಕ ಪದ ಪರಿಚಯ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ವೈಷ್ಣವೀ ಮಂಗಳೂರು

ನೃತ್ಯ, ನಾಟ್ಯದಲ್ಲಿ ಬಳಕೆಯಾಗುವ ಅದೆಷ್ಟೋ ಶಬ್ದಗಳ ಪರಿಚಯ ವಿದ್ಯಾರ್ಥಿಗಳಿಗೋ, ಪ್ರೇಕ್ಷಕರಿಗೋ ಇಲ್ಲದೆ ನೃತ್ಯ-ನಾಟ್ಯಗಳ ಆಮೂಲಾಗ್ರ ಸಂಗತಿಯನ್ನು, ಸಂದರ್ಭವನ್ನು ತಿಳಿಯುವಲ್ಲಿ ಅಸಮರ್ಥರಾಗುವುದಿದೆ. ನೃತ್ಯ ಪ್ರದರ್ಶನಗಳ ಸಂದರ್ಭದಲ್ಲೋ, ಅಥವಾ ವಿಮರ್ಶೆಯನ್ನು ಓದುವಾಗಲೋ ಇಂತಹ ಸಾಧ್ಯತೆಗಳು ಹೆಚ್ಚು. ಹೀಗಾಗಿ ಜನಸಾಮಾನ್ಯರ ನಾಡಿಮಿಡಿತವಾಗುವ ನೃತ್ಯವು ಕ್ರಮೇಣ ಹುಳಿ ದ್ರಾಕ್ಷಿಯೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದುಡಿಯುತ್ತಿರುವ ನೂಪುರಭ್ರಮರಿಯ ಪ್ರಯತ್ನಕ್ಕೆ ವೈಷ್ಣವಿಯವರು ಮತ್ತೊಮ್ಮೆ ಕೈಜೋಡಿಸಿದ್ದಾರೆ. ಈ ಸಂಚಿಕೆಯಿಂದ ಅವರ ಅಂಕಣ ನರ್ತನ ಸುರಭಿಯಲ್ಲಿ ಭರತನಾಟ್ಯದ ಕೆಲವು ಪಾರಿಭಾಷಿಕ ಶಬ್ದಗಳನ್ನು ಪರಿಚಯ ಮಾಡಿಕೊಳ್ಳೋಣವೇ?
(ಸೂಚಿಯನ್ನು ಕೊಡಲಾಗಿದ್ದು ವಿವರಿಸಲಾಗುವ ಶಬ್ದಗಳು ಗ್ರಂಥಗಳಿಂದ ಉದ್ದರಿಸಲ್ಪಟ್ಟವಾಗಿರುತ್ತವೆ.)
(ಅಭಿನಯ ದರ್ಪಣ : ಅ.ದ ; ನಾಟ್ಯಶಾಸ್ತ್ರ : ನಾ.ಶಾ)


ಅಂಕುರ (ನಾ.ಶಾ) : ಹಸ್ತವಿನ್ಯಾಸಗಳಿಂದ ಅಭಿನಯ ಮಾಡುವಂಥದ್ದು. ಆಂಗಿಕಾಭಿನಯದಲ್ಲಿ ಇದೊಂದು ಕ್ರಮ. ವಾಕ್ಯದ ಒಳಾರ್ಥ ಮತ್ತು ಅದರ ಮನೋಭಾವಗಳನ್ನು ಪ್ರಕಟಗೊಳಿಸುವ  ವಾಕ್ಯಾರ್ಥಾಭಿಯವೆಂಬ ವಿಷಯದಲ್ಲಿ ಇದೂ ಒಂದು ಮಾಧ್ಯಮ.
ಅಂಗ (ನಾ.ಶಾ) : ತಲೆ, ಕೈ, ಸೊಂಟ, ಎದೆ, ಪಕ್ಕೆ, ಕಾಲು ಇವು ಆರು ಅಂಗಗಳು. ಮಾನವನ ದೇಹಭಾಗಳು. ನೃತ್ಯಕಾರ್ಯದಲ್ಲಿ ಪ್ರಧಾನವಾಗಿರುವಂಥದ್ದು. ಇದನ್ನು ಉಪಯೋಗಿಸಿಯೇ ನೃತ್ಯವನ್ನು ಕೈಗೊಳ್ಳಲಾಗುತ್ತದೆ. ಆಂಗಿಕಾಭಿನಯಕ್ಕೆ ಇವೇ ಆಧಾರ.
ಅಂಗಭ್ರಮರಿ (ಅ.ದ) : ಹನ್ನೆರಡು ಅಂಗುಲಗಳ ಅಂತರದಲ್ಲಿ ಪಾದಗಳನ್ನಿಟ್ಟು ದೇಹವನ್ನು ಚಕ್ರಾಕಾರವಾಗಿ ಸುತ್ತುವುದು.
ಅಂಗಶುದ್ಧ (ನಾ.ಶಾ) : ಆಂಗಿಕಾಭಿನಯಕ್ಕೆ ಅಗತ್ಯವಾದ ದೇಹದ ಭಾಗಗಳು ಖಚಿತವಾಗಿ ನಿರೂಪಿಸಲ್ಪಟ್ಟಿದ್ದರೆ ಅಂಗಶುದ್ಧವಿದೆ ಎಂದರ್ಥ.
ಅಂಗಾಹಾರ (ನಾ.ಶಾ) : ದೇಹದ ಅಂಗಾಂಗಗಳನ್ನು  ವಿಶಿಷ್ಟ ಸ್ಥಾನಗಳಲ್ಲಿ ಚಲಿಸುವುದು. ಆರರಿಂದ ಒಂಭತ್ತು ಕರಣಗಳು ಸೇರಿದರೆ ಒಂದು ಅಂಗಾಹಾರವಾಗುತ್ತದೆ. ಮುಖ್ಯವಾಗಿ ೩೨ ಪ್ರಕಾರದ ಅಂಗಾಹಾರಗಳಿವೆ.
ಅಗ್ರಗ (ನಾ.ಶಾ) : ಇದೊಂದು ಪಾದ ಕ್ರಮ. ವೇಗವಾಗಿ ಕಾಲ್ಬೆರಳನ್ನು ಮುಂದಿಟ್ಟು ನಡೆಯುವುದು.
ಅಗ್ರತಲ ಸಂಚರ (ನಾ.ಶಾ) : ಇದೊಂದು ಪಾದ ಕ್ರಮ. ಹಿಮ್ಮಡಿಯನ್ನು ಮೇಲಕ್ಕೆತ್ತಿ ಅಂಗುಷ್ಠವನ್ನು ಸೇರಿಸಿದಂತೆ ಬೆರಳುಗಳನು ಬಗ್ಗಿಸುವುದು. ನೆಲಕ್ಕೆ ಅಪ್ಪಳಿಸಲು, ಗಾಯವಾದಾಗ ನಡೆಯಲು ಎಂಬುದಾಗಿ ಉಪಯೋಗಿಸುವುದು.
ಅಂಚಿತ (ನಾ.ಶಾ) : ಗ್ರೀವಾ ಮತ್ತು ಶಿರೋ ಭೇದ ಅಂದರೆ ಕುತ್ತಿಗೆಯನ್ನು ಮತ್ತು ತಲೆಯನ್ನು ಚಲಿಸುವ ರೀತಿಗಳಲ್ಲಿ ಒಂದು ಬಗೆ. ಗಲ್ಲಿಗೇರಿಸುವ ಅಭಿನಯ, ಮೇಲಕ್ಕೆ ನೋಡಲು, ಜ್ವರ, ಕೂದಲನ್ನು ಸರಿಪಡಿಸುವಾಗ ಇದರ ಬಳಕೆಯಾಗುತ್ತದೆ.
ಅಂಚಿತ (ನಾ.ಶಾ) : ಇದೊಂದು ಪಾದ ಕ್ರಮ. ಹಿಮ್ಮಡಿಯನ್ನು ನೆಲದ ಮೇಲೂರಿ, ಕಾಲಿನ ಮುಂಭಾಗ ಮತ್ತು ಕಾಲ್ಬೆರಳುಗಳನ್ನು ಮೇಲಕ್ಕೆತ್ತುವುದು. ಕಾಲಿನ ಮುಂಭಾಗಕ್ಕೆ ಗಾಯವಾದಾಗ ನಡೆಯುವ ಸಂದರ್ಭದಲ್ಲಿ ಇಂತಹ ಪಾದಸ್ಥಾನ ಬಳಕೆಯಾಗುತ್ತದೆ.
ಅಂಜಲಿ (ನಾ.ಶಾ, ಅ.ದ) : ಸಂಯುತ ಹಸ್ತ ಪ್ರಕಾರದಲ್ಲಿ ಅಂದರೆ ಎರಡೂ ಹಸ್ತಗಳನ್ನು ಉಪಯೋಗಿಸಿ ಮಾಡುವ ಮುದ್ರೆಗಳ ಪೈಕಿ ಮೊದಲನೇಯದು. ಇದರ ಲಕ್ಷಣ ತಲೆಯ ಮೇಲೆ ಹಸ್ತಗಳನ್ನು ಜೋಡಿಸಿ ನಮಸ್ಕರಿಸುವುದು.
(ಮುಂದುವರೆಯುವುದು………. )

Leave a Reply

*

code