ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ- ನಾಟ್ಯಶಾಸ್ತ್ರೋತ್ಪತ್ತಿ ಭಾಗ 2- ಅಪ್ಸರ ಸೃಷ್ಟಿ

Posted On: Friday, May 29th, 2015
1 Star2 Stars3 Stars4 Stars5 Stars (No Ratings Yet)
Loading...

Author: - ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಪ್ರಥಮ ಅಧ್ಯಾಯ- ನಾಟ್ಯಶಾಸ್ತ್ರೋತ್ಪತ್ತಿ

ಭಾಗ 2- ಅಪ್ಸರ ಸೃಷ್ಟಿ

ಕಳೆದ ಸಂಚಿಕೆಯಲ್ಲಿ ನಾಟ್ಯಶಾಸ್ತ್ರೋತ್ಪತ್ತಿಯ ಮೊದಲ ಭಾಗವನ್ನು ನಿರೂಪಿಸಲಾಗಿತ್ತು. ಬ್ರಹ್ಮನು ಭರತನಿಗೆ ನಾಟ್ಯವೇದವನ್ನು ಕಲಿಸುವ ಕುರಿತಂತೆ ಆಜ್ಞೆ ನೀಡುವ ವರೆಗೆ ಪ್ರಸ್ತಾಪಗೊಂಡಿತ್ತು. ನಾಟ್ಯವೇದವನ್ನು ಬ್ರಹ್ಮನು ಭರತನಿಗೆ ಪ್ರಸಾದಿಸಿದ ನಂತರ ಭರತನ ನೂರುಮಕ್ಕಳಿಗೆ ಈ ವಿದ್ಯೆಯನ್ನು ಕಲಿಸಲು ಇಂದ್ರನು ಅಪ್ಪಣೆ ಮಾಡುತ್ತಾನೆ. ಈ ನೂರುಮಂದಿ ಭರತಪುತ್ರರ ಹೆಸರುಗಳು ಕೆಳಗಿನಂತಿವೆ. ಸರಿಯಾಗಿ ಲೆಕ್ಕ ಹಾಕಿ ನೋಡಿದರೆ 104 ಹೆಸರುಗಳು ಪಟ್ಟಿಯಲ್ಲಿ ಕಂಡುಬರುತ್ತವೆ. ಒಟ್ಟಿನಲ್ಲಿ ಭರತಪುತ್ರರ ಸಂಖ್ಯೆ ಶತಪ್ರಮಾಣದಲ್ಲಿ ಅಸಂಖ್ಯಾತವಾಗಿ ಹಬ್ಬಿತು ಎಂದು ಅರ್ಥಮಾಡಿಕೊಳ್ಳಬಹುದು.

ಶಾಂಡಿಲ್ಯ, ವಾತ್ಸ್ಯ, ಕೋಹಿಲ, ದತ್ತಿಲ, ಜಟಿಲ, ಅಂಬಷ್ಠಕ, ತಂಡು, ಅಗ್ನಿಶಿಖ, ಸೈಂಧವ, ಪುಲೋಮಾನ್, ಶಾಡ್ವಲಿ, ವಿಪುಲ, ಕಪಿಂಜಲ, ಬಾದರಿ, ಯಮ, ಧೂಮ್ರಾಯಣ, ಜಂಬುಧ್ವಜ, ಕಾಕಜಂಘ, ಸ್ವರ್ಣಕ, ತಾಪಸ, ಕೇದಾರಿ, ಶಾಲಿಕರ್ಣ, ದೀರ್ಘಗಾತ್ರ, ಶಾಲಿಕ, ಕೌತ್ಸ, ತಾಂಡಾಯನಿ, ಪಿಂಗಲ, ಚಿತ್ರಕ, ಬಂಧುಲ, ಭಲ್ಲಕ, ಮುಷ್ಟಿಕ, ಸೈಂಧವಾಯನ, ತೈತಿಲ, ಭಾರ್ಗವ, ಶುಚಿ, ಬಹುಲ, ಅಬುಧ, ಬುಧಸೇನ, ಪಾಂಡುಕರ್ಣ, ಕೇರಲ, ಋಜುಕ, ಮಂಡಕ, ಶಂಬರ, ವಂಜುಲ, ಮಾಗಧ, ಸರಲ, ಕತ್ರ್ತಾರ, ಉಗ್ರ, ತುಷಾರ, ಪಾರ್ಷದ, ಗೌತಮ, ಬಾದರಾಯಣ, ವಿಶಾಲ, ಶಬಲ, ಸುನಾಭ, ಮೇಷ, ಕಾಲಿಯ, ಭ್ರಮರ, ಪೀಠಮುಖ, ನಖಕುಟ್ಟ, ಅಶ್ಮಕುಟ್ಟ, ಷಟ್ಪದ, ಉತ್ತಮ, ಪಾದುಕ, ಉಪಾನಹ, ಶ್ರುತಿ, ಚೌಷಸ್ವರ, ಅಗ್ನಿಕುಂಡ, ಆಜ್ಯಕುಂಡ, ವಿತಾಂಡ್ಯ, ತಾಂಡ್ಯ, ಕರ್ತರಾಕ್ಷ, ಹಿರಣ್ಯಾಕ್ಷ, ಕುಶಲ, ದುಸ್ಸಹ, ಲಾಜ, ಭಯಾನಕ, ಬೀಭತ್ಸ, ವಿಚಕ್ಷಣ, ಪುಂಡ್ರಾಕ್ಷ, ಪುಂಡ್ರಾನಾಸ, ಅಸಿತ, ಸಿತ, ವಿದ್ಯುಜ್ಜಿಹ್ವ, ಮಹಾಜಿಹ್ವ, ಶಾಲಂಕಾಯನ, ಶ್ಯಾಮಾಯನ, ಮಾಠರ, ಲೋಹಿತಾಂಗ, ಸಂವರ್ತಕ, ಪಂಚಶಿಖ, ತ್ರಿಶಿಖ, ಶಿಖ, ಶಂಕುವರ್ಣಮುಖ, ಷಂಡ, ಶಂಕುಕರ್ಣ, ಶಕ್ರನೇಮಿ, ಗಭಸ್ತಿ, ಅಂಶುಮಾಲಿ, ಶಠ, ವಿದ್ಯುತ್, ಶಾಂತಜಂಘ, ರೌದ್ರ, ವೀರ.

ಆದರೆ ಈ ನೂರು ಜನ ಮಕ್ಕಳ ಕಲ್ಪನೆ ಅಸಂಗತವೆನ್ನಿಸಿ ಇವರೆಲ್ಲಾ ಭರತಮುನಿಯ ಶಿಷ್ಯರೇ ಹೊರತು ಮಕ್ಕಳಲ್ಲ ಎಂದು ಕೆಲವರು ಹೇಳಿದ್ದೂ ಇದೆ. ಕಾರಣ ಇವರ ಹೆಸರುಗಳ ಪೈಕಿ ಪುರಾಣಗಳಲ್ಲಿ ಪ್ರಸ್ತಾಪಿಸಲಾದ ದೇವತೆ, ರಾಕ್ಷಸ, ಮುನಿ, ಗಣಗಳ ಹೆಸರುಗಳೂ ಕಂಡುಬರುತ್ತವೆ. ಜೊತೆಗೆ ಭಯಾನಕ, ಬೀಭತ್ಸ, ರೌದ್ರ ಮತ್ತು ವೀರ ಎಂಬ ನಾಲ್ಕು ರಸಗಳ ಹೆಸರುಗಳೂ ಕಂಡುಬಂದಿವೆ. ಇದಲ್ಲದೆ ದತ್ತಿಲ, ಕೋಹಿಲ, ಶಾಂಡಿಲ್ಯ-ಇವರುಗಳು ನಾಟ್ಯವೇದವನ್ನು ಭೂಲೋಕಕ್ಕೆ ತಂದರು ಎಂದು ನಾಟ್ಯಶಾಸ್ತ್ರದ ಕೊನೆಯ ಅಧ್ಯಾಯದಲ್ಲಿ ಹೇಳಲಾಗಿದ್ದು ಅವರು ನಂತರದಲ್ಲಿಯೂ ಲಾಕ್ಷಣಿಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ನೂರು ಜನ ಮಕ್ಕಳೇ ನಾಟ್ಯವನ್ನು ಹೀನಾಯವಾಗಿ ಕಂಡು ಪ್ರಯೋಗಿಸಿದ್ದರಿಂದ ಅವರು ಶಾಪಗ್ರಸ್ಥರಾಗಿ ಭೂಮಿಗೆ ಬಿದ್ದು ಭೂಮಿಯಲ್ಲಿ ನಾಟ್ಯದ ಉತ್ಪತ್ತಿಗೆ ಕಾರಣವಾದರೆಂಬ ಉಲ್ಲೇಖ ಕೊನೆಯ ಅಧ್ಯಾಯದಲ್ಲಿದೆ.

ಅದೇನೇ ಇರಲಿ, ಈ ನೂರುಮಂದಿ ಮಕ್ಕಳಿಗೆ ನಾಟ್ಯವೇದವನ್ನು ಕಲಿಸಿದ ತರುವಾಯ ಭರತನು, ಬ್ರಹ್ಮನ ಆಜ್ಞೆ ಮತ್ತು ಜನರ ಇಚ್ಛೆಯ ಮೇರೆಗೆ ಯಾವನು ಯಾವುದಕ್ಕೆ ಯೋಗ್ಯನು ಎಂದು ಅರಿತು ಅವರವರಿಗೆ ಪಾತ್ರಗಳನ್ನು ಹಂಚಿ ಪ್ರಯೋಗವನ್ನು ಮಾಡುತ್ತಾನೆ. ಈ ಪ್ರಯೋಗದಲ್ಲಿ ಭಾರತೀ, ಸಾತ್ತ್ವತೀ, ಆರಭಟೀವೃತ್ತಿಗಳು ನೆಲೆಗೊಂಡಿದ್ದವು. ಆದರೆ ಕೈಶಿಕೀವೃತ್ತಿಯಿಲ್ಲದುದನ್ನು ಗಮನಿಸಿದ ಬ್ರಹ್ಮನು ಕೈಶಿಕೀವೃತ್ತಿಯನ್ನು ಬಳಸು ಮತ್ತು ಅದಕ್ಕೆ ಬೇಕಾದ ಸಾಮಗ್ರಿಗಳು ಯಾವುದೆಂದು ತಿಳಿಸು ಎಂದು ಆಜ್ಞೆ ಮಾಡುತ್ತಾನೆ. ಅದರಂತೆ ಭರತನು- ಕೈಶಿಕೀವೃತ್ತಿಗೆ ಮೂಲವೇ ಶೃಂಗಾರ ರಸ. ಇದರಲ್ಲಿ ಹೆಚ್ಚಾಗಿ ನರ್ತನ, ಲಲಿತವಾದ ಅಂಗೋಪಾಂಗಭಂಗಿಗಳು ಇರುವುದೆಂದೂ, ಇದನ್ನು ತಾನು ನೀಲಕಂಠನಾದ ಮಹೇಶ್ವರನ ನೃತ್ಯದಲ್ಲಿ ನೋಡಿದ್ದೇನೆಂದೂ; ಈ ವೃತ್ತಿಯಲ್ಲಿ ರಸಭಾವಗಳ ಅಭಿವ್ಯಕ್ತಿ ಬಹುಮುಖ್ಯವಾಗಿದ್ದು ಸುಂದರವಾದ ವೇಷಭೂಷಣಗಳಿರಬೇಕು.

ಈ ವೃತ್ತಿಯ ಪ್ರಯೋಗವು ಪುರುಷರಿಂದ ಸಾಧ್ಯವಾಗಲಾರದೆಂದೂ; ಸ್ತ್ರೀಯರ ಅಗತ್ಯವಿರುವುದರಿಂದ ನಟಿಮಣಿಯರನ್ನು ಒದಗಿಸಿಕೊಡಬೇಕು ಎಂದು ಪ್ರಾರ್ಥಿಸುತ್ತಾ ಈ ವೃತ್ತಿಯ ಲಕ್ಷಣಗಳನ್ನೂ ತಿಳಿಸುತ್ತಾನೆ. ಅದರಂತೆ ಅಲಂಕಾರಪ್ರಾಯವಾದ ಕೈಶಿಕೀವೃತ್ತಿಗೆ ಒಪ್ಪುವ 24 ಮಂದಿ ಅಪ್ಸರೆಯರನ್ನು ಮಾನಸೀಸೃಷ್ಟಿಯಿಂದ ಸೃಷ್ಟಿಸುತ್ತಾನೆ. ಹೀಗೆ ಸೃಷ್ಟಿಯಾದವರೇ ಮಂಜುಕೇಶೀ, ಸುಕೇಶೀ, ಮಿಶ್ರಕೇಶೀ, ಸುಲೋಚನಾ, ಸೌದಾಮಿನೀ, ದೇವದತ್ತಾ, ದೇವಸೇನಾ, ಮನೋರಮಾ, ಸುದತೀ, ಸುಂದರೀ, ವಿದಗ್ಧಾ, ವಿಬುಧಾ, ಸುಮಾಲಾ, ಸಂತತಿ, ಸುನಂದ, ಸುಮುಖೀ, ಮಾಗಧೀ, ಅರ್ಜುನೀ, ಸರಲಾ, ಕೇರಲಾ, ಧೃತಿ, ನಂದಾ, ಪುಷ್ಕಲಾ ಮತ್ತು ಕಲಭಾ ಎಂಬ ಅಪ್ಸರೆಯರು. ಅದರಂತೆಯೇ ವಾದ್ಯಮೇಳಕ್ಕೆ ಸ್ವಾತಿ ಮತ್ತವನ ಶಿಷ್ಯರು ಹಾಗು ಗಾಯನಕ್ಕೆ ನಾರದ ಮತ್ತು ಗಂಧರ್ವರು ನಿಯುಕ್ತಿಗೊಳ್ಳುತ್ತಾರೆ.

ಸಂಸ್ಕೃತಭಾಷೆಯಲ್ಲಿ ಅಪ್ಸರೆಯರೆಂದರೆ ಅಪ್ +ಸರ= ನೀರಿನಲ್ಲಿ ಚಲಿಸುವವರು ಎಂದರ್ಥ; ಹಾಗೆಂದ ಮಾತ್ರಕ್ಕೆ ನೀರಿಗೆ ವೇಗದ ಸಾಮಥ್ರ್ಯವೂ ಜೊತೆ ಸೇರಿದೆ. ಆದರೆ ಇಲ್ಲಿ ವೇಗಕ್ಕಿಂತಲೂ ಹೆಚ್ಚಾಗಿ ಜಲಕನ್ನಿಕೆಯರಂತೆ ನರ್ತಕಿಯೂ ತನ್ನ ಅಭಿನಯಾದಿಗಳಲ್ಲಿ ಸರಸಲಾವಣ್ಯವನ್ನು ಹೊಂದಿರಬೇಕು, ನೀರಿನಂತೆ ಪಾತ್ರಗಳಿಗನುಸಾರವಾಗಿ ನಾಜೂಕಿನ ನಡೆ ಹೊಂದಿರಬೇಕು ಎಂದು ಕಂಡುಕೊಳ್ಳಬಹುದು. ಒಟ್ಟಂದದಲ್ಲಿ ಹೇಳುವುದಾದರೆ ‘ಅಪ್ಸರೆಯರು ಹುಟ್ಟಿದರು’ ಎಂದರೆ ನಾಟ್ಯದಲ್ಲಿ ಸುಕುಮಾರವೂ, ಸೌಂದರ್ಯವೂ ಪ್ರಯುಕ್ತವಾಯಿತು ಎಂದು ಅರ್ಥಮಾಡಿಕೊಳ್ಳಬೇಕು. ನರ್ತಕಿಗೆ ಬೇಕಾದ ಕೌಶಲ್ಯ, ರೂಪಲಾವಣ್ಯ, ಬುದ್ಧಿವಂತಿಕೆಯೆಲ್ಲವೂ ಈ ಅಪ್ಸರೆಯರ ಕಥೆಯರ ಜೊತೆಯಲ್ಲಿ ಬೆರೆತಿದ್ದು; ಅಪ್ಸರೆಯರು ನರ್ತನಕ್ಕೆ ಆದರ್ಶಪ್ರಾಯರಂತೆ ಶೋಭಿತರಾಗಿದ್ದಾರೆ.

** ಆವರಣಚಿಹ್ನೆ( )ಯೊಳಗೆ ಬರೆಯಲಾದ ಸಂಗತಿಗಳು ಗತಿ, ತಾಳ, ಪಾಟಾಕ್ಷರ/ಸ್ವರ-ಶಬ್ದಕಲ್ಪನೆ/ಆಲಾಪನೆ/ವಾದ್ಯಸಾಂಗತ್ಯದ ನಿರ್ದೇಶನಕ್ಕೆ ಇರುವ ಸ್ಥಾನ, ಪಾತ್ರೌಚಿತ್ಯ, ನಿರೂಪಣಾ ನೆಲೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ ಹೇಳಲಾಗಿದೆ. ಇದು ಕಲಾವಿದರಿಗೆ ನೃತ್ಯರೂಪಕದ ಸಂಯೋಜನೆಗೆ ಅಳವಡಿಸಿಕೊಳ್ಳುವುದಾದರೆ ಅನುಕೂಲವಾಗಲಿದೆ. ಇನ್ನು ಭಾವಾಭಿವ್ಯಕ್ತಿಗೆ ಹೊಂದುವ ರಾಗದ ಆಯ್ಕೆ, ಕಲಾವಿದರ ಸಂಖ್ಯೆ ಮತ್ತು ಆಂಗಿಕಾದಿ ಅಭಿನಯಗಳಲ್ಲಿ ಸ್ವಾತಂತ್ರ್ಯವನ್ನು ಕಲಾವಿದರಿಗೇ ಬಿಟ್ಟುಕೊಟ್ಟಿದೆ.

(ನಾಟ್ಯಪ್ರಯೋಗದ ಸಂಕೇತಕ್ಕೆ ಸಮೂಹವಾಗಿ ಕಲಾವಿದರು ಉದ್ಧತಸ್ವರೂಪದ (ಆರ್ಭಟೀ, ಸಾತ್ತ್ವತೀ, ಭಾರತೀವೃತ್ತಿಯನ್ನು ತಿಳಿಸುವಂತೆ) ಒಂದು ನೃತ್ತವನ್ನು ಮಾಡಬಹುದು.)
(ಚತುರಶ್ರಗತಿ)
(ಸೂತ್ರಧಾರನ ಪ್ರವೇಶದೊಂದಿಗೆ)
ನೂರುಪುತ್ರರಿಗೆ ತಿಳುಹಿದನಾದರೂ ತೃಪ್ತನಾಗನಿವ ಮುನಿಭರತ !!
ಮೂರುವೃತ್ತಿಗಳು ಆಶ್ರಿತವಾದರೂ ಬೇಕು ಒಂದು ಬಗೆ – ಅನವರತ

ಭರತವಾಕ್ಯ :- ನ ಶಕ್ಯಾ ಪುರುಷೈಃ ಸಾಧು ಪ್ರಯೋಕ್ತಂ ಸ್ತ್ರೀಜನಾಹೃತೇ?

(ಮಿಶ್ರಗತಿ) (ಭರತನು ಬ್ರಹ್ಮನ ಬಳಿ ನಿವೇದಿಸಿಕೊಳ್ಳುತ್ತಾ)
ಕುಸುಮಕೋಮಲ ಸೌಕುಮಾರ್ಯವ ಶಿವನ ನಾಟ್ಯದಿ ನೋಡಿಹೆ
ಕಾಯ ಕರಣವು ಲಲಿತಭಂಗಿಯನಾಂತು ನಿಂತಿಹ ಕಂಡಿಹೆ
ವಸನ-ಭೂಷಣದಿಂದಲೊಪ್ಪುವ ಲಲಿತಭಂಗಿ ಲತಾಂಗಿಯ
ರಚನರಮ್ಯತೆ ರಸದ ನವಲತೆ ಸಲಿಲ ಸರಸಜೆ ಶಾಂತೆಯ /OR ಚಲನ ವಲನದಿ ರಸದ ನವಲತೆ ಸುಧೆಯ ನೀಡುವ ಕಾಂತೆಯ
ಬಾಗು ಬಳುಕಿನ ಕೈಶಿಕೀ ಶೃಂಗಾರವೃತ್ತಿಗೆ ಒದಗುವ
ಚತುರನಟಿಯರನೀವ ಕರುಣೆಯ ತೋರ್ವುದೈ ಚತುರಾನನ

(ಅಪ್ಸರಸೃಷ್ಟಿಗೆ ಸುಕುಮಾರ ಸ್ವರಕಲ್ಪನೆ ಅಥವಾ ಪಾಟಾಕ್ಷರ/ಜತಿಯನ್ನು ಹೊಸೆಯಬಹುದು)

(ಆಲಾಪನೆ ಅಥವಾ ಜತಿ ಅಥವಾ ಸ್ವರಕಲ್ಪನೆಯ ಸಹಿತ 24 ಮಂದಿ ಅಪ್ಸರೆಯರ ಪ್ರವೇಶ)
ಮಂಜುಕೇಶೀ, ಸುಕೇಶೀ ಮಿಶ್ರಕೇಶೀ ಸುಲೋಚನಾಮ್
ಸೌದಾಮಿನೀಂ ದೇವದತ್ತಾ ದೇವಸೇನಾಂ ಮನೋರಮಾಂ
ಸುದತೀಂ ಸುಂದರೀಂ ಚೈವ ವಿದಗ್ಧಾಂ ವಿಭುಧಾಂ ತಥಾ
ಸುಮಾಲಾಂ ಸಂತತಿ ಚೈವ ಸುನಂದಾಂ ಸುಮುಖೀಂ ತಥಾ
ಮಾಗಧೀಮಾರ್ಜುನೀಂ ಚೈವ ಸರಲಾಂ ಕೇರಲಾಂ ಧೃತಿಂ
ನಂದಾಸಪುಷ್ಕಲಾಂ ಚೈವ ಕಲಭಾಂ ಚೈವ ಮೇ ಧಧೌ

(ಬ್ರಹ್ಮ ಅಪ್ಸರೆಯರನು ಸೃಷ್ಟಿ ಮಾಡಿದ ನಂತರ ಭರತನನ್ನು ಕುರಿತು)
ನಾಟ್ಯ-ಮೇಳಕೆ ಸ್ವಾತಿ, ನಾರದ ಬಹನು ಗಾನವಿಭಾಗದಿ
ಸುಮನಸರೆ ಸಹಕಾರ ನೀಡ್ವರು ಗೀತ-ವಾದ್ಯ ಪ್ರಯೋಗದಿ
ಮನಸಿನಲಿ ಮೆಯ್ ಮೂಡಿಬಂದಿಹ ಅಪ್ಸರೋಗಣ ಜೊತೆಯಲಿ
ಮಥನವಾಗಲಿ ಕೂಡಿ ಕಲೆಯಲಿ ನರ್ತನದ ಕಥೆ ನಲಿಯಲಿ
(ಇದಾದ ಬಳಿಕ ಭರತನು ತಿಳುಹಿದ ನಾಟ್ಯವೇದವನ್ನು ಅಪ್ಸರೆಯರು ನರ್ತಿಸಲು ಸ್ವರಕಲ್ಪನೆಯನ್ನು ಬಳಸಬಹುದು.)

(ಮುಂದಿನ ಮಾಲಿಕೆಯಲ್ಲಿ ಇಂದ್ರಧ್ವಜಮಹೋತ್ಸವದಲ್ಲಿ ಪ್ರಥಮನಾಟ್ಯಪ್ರಯೋಗ…ನಿರೀಕ್ಷಿಸಿ)
———

Leave a Reply

*

code