ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ- ಮೂವತ್ತಾರನೇ ಅಧ್ಯಾಯ – ದ್ವಿತೀಯ ಭಾಗ – ಭೂಮಿಯಲ್ಲಿ ನಾಟ್ಯದ ಅವತರಣ

Posted On: Tuesday, February 13th, 2018
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್

ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದರ್ಯಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.

ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.

ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು ೩೬ ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಿದೆ. ಇದು ಕೊನೆಯ ಕಂತು. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ನಾಟ್ಯಚಿಂತನ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ಮಹಾಮುನಿ ಭರತ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗಿದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.

ಮೂವತ್ತಾರನೇ ಅಧ್ಯಾಯ ದ್ವಿತೀಯ ಭಾಗ

ಭೂಮಿಯಲ್ಲಿ ನಾಟ್ಯದ ಅವತರಣ

ಯಜ್ಞವನ್ನಾಚರಿಸಿ ಸ್ವರ್ಗಪದವಿಯನ್ನು ಗೆದ್ದ ನಹುಷರಾಜನು ಸ್ವರ್ಗಲೋಕದಲ್ಲಿ ನಾಟ್ಯದಿಂದ ಹರುಷಗೊಂಡು ಇದನ್ನು ಭೂಲ್ಕೋಕಕ್ಕೆ ಕೊಂಡೊಯ್ಯುವ ಬಗೆಯನ್ನು ಚಿಂತಿಸುತ್ತಾನೆ. ಪೂರ್ವಕಾಲದಲ್ಲಿ ತನ್ನ ಅಜ್ಜ ಪುರೂರವನು ಊರ್ವಶಿಯಲ್ಲಿ ಒಲಿದು ನಾಟ್ಯವನ್ನು ಭೂಮಿಗೆ ತಂದರೂ ಆಕೆ ಮರಳಿ ಸ್ವರ್ಗಕ್ಕೆ ತೆರಳುವಾಗ ಭೂಲೋಕದ ಜನರು ಅತ್ತ ನಾಟ್ಯವನ್ನು ಮರೆಯಲಾಗದೆ, ಇತ್ತ ನರ್ತಿಸಲೂ ಆಗದೆ ವಿಸ್ಮೃತಿಯನ್ನು, ಭ್ರಮೆಯನ್ನೂ ತಾಳಿದ ಕಥೆಯನ್ನು ನೆನಪಿಸಿಕೊಳ್ಳುತ್ತಾನೆ. ಹೀಗೆ ನಾಟ್ಯವು ಪ್ರಯೋಜನವಾಗದೇ ಹೋದ ಸ್ಮರಣೆಯನ್ನು ಮಾಡುತ್ತಲೇ ಬ್ರಹ್ಮನ ಅಪ್ಪಣೆ ಪಡೆದು ಭರತನ ನಿರ್ದೇಶನದಂತೆ ಆತನ ನೂರು ಮಂದಿ ಶಾಪಗ್ರಸ್ಥಪುತ್ರರನ್ನು ಭೂಲೋಕಕ್ಕೆ ಕರೆತಂದು ನಾಟ್ಯವನ್ನು ಪ್ರಚುರಿಸಲು ತೊಡಗುತ್ತಾನೆ. ಭರತನ ಮಕ್ಕಳು ಭೂಲೋಕದಲ್ಲಿ ನಾಟ್ಯ ಬೆಳೆಸಿದ ಪರಂಪರೆಯೂ ಸೂಕ್ಷ್ಮವಾಗಿ ನಿರ್ದೇಶಿತಗೊಂಡು ನಾಟ್ಯವೇದದ ಔನ್ನತ್ಯವನ್ನು ಸೂಚಿಸುವ ಮಂಗಲಶ್ಲೋಕಗಳೊಂದಿಗೆ ನಾಟ್ಯಶಾಸ್ತ್ರಾಧ್ಯಾಯವು ಮುಕ್ತಾಯಗೊಳ್ಳುತ್ತದೆ.

ಏತಚ್ಛಾಸ್ತ್ರಂ ಪ್ರಯುಕ್ತಂ ತು ನರಾಣಾಂ ಬುದ್ಧಿವರ್ಧನಮ್

ತ್ರೈಲೋಕ್ಯತ್ರಿಯಯೋಪೇತಂ ಸರ್ವಶಾಸ್ತ್ರನಿದರ್ಶನಮ್

ಮನುಷ್ಯರಿಗೆ ಬುದ್ಧಿವರ್ಧಿಸುವ ಸಾಧನವಾಗಿ ಈ ಶಾಸ್ತ್ರ ರಚಿಸಲ್ಪಟ್ಟಿದೆ. ಮೂರು ಲೋಕಗಳ ಕರ್ಮಗಳನ್ನೊಳಗೊಂಡ ನಾಟ್ಯವು ಎಲ್ಲ ಶಾಸ್ತ್ರಗಳಿಗೆ ಆದರ್ಶವಾಗಿದೆ.

ಯ ಇದಂ ಶೃಣುಯಾನ್ನಿತ್ಯಂ ಪ್ರೋಕ್ತನ್ಚೇದಂ ಸ್ವಯಂಭುವಾ

ಪ್ರಯೋಗಂ ಯಚ್ಚ ಕುರ್ವೀತ್ ಪ್ರೇಕ್ಷತೇ ಚಾವಧಾನವಾನ್

ಯಾ ಗತಿರ್ವೇದವಿದುಷಾಂ ಯಾ ಗತಿರ್ಯಜ್ಞಕಾರಿಣಃ

ಯಾ ಗತಿರ್ದಾನಶೀಲಾನಾಂ ನಾಂ ಗತಿಂ ಪ್ರಾಪ್ನುಯಾನ್ನರಃ

ನೃಪಧರ್ಮೇಷು ಸರ್ವೇಷು ಕೀರ್ತ್ಯತೇsಸ್ಯ ಮಹಾಫಲಮ್

ಪ್ರೇಕ್ಷಣೀಯಪ್ರದಾನಂ ತು ಸರ್ವದಾನೇಷು ಪೂಜ್ಯತೇ

ಇದನ್ನು ಓದುವವನೂ, ಕೇಳುವವನೂ, ಅದರಂತೆ ಪ್ರಯೋಗವನ್ನು ಮಾಡುವವನೂ, ಸೂಕ್ಷ್ಮವಾಗಿ ಅವಧಾನಪೂರ್ವಕವಾಗಿ ನೋಡುವ ಪ್ರೇಕ್ಷಕನೂ ಇವರೆಲ್ಲರಿಗೂ ವೇದವನ್ನು ಓದಿದವರಿಗೆ, ಯಜ್ಞಗಳನ್ನು, ದಾನ-ಧರ್ಮಗಳನ್ನು ಮಾಡುವವರಿಗೆ ಲಭಿಸುವ ಫಲವೇ ದೊರೆಯುವುದು. ರಾಜರನ್ನೂ ಒಳಗೊಂಡಂತೆ ಎಲ್ಲ ವರ್ಗದವರಿಗೂ ನಾಟ್ಯವನ್ನು ಕೀರ್ತಿಸುವುದರಿಂದ ಉತ್ತಮಫಲವೇ ದೊರಕುವುದು. ಎಲ್ಲ ದಾನಗಳಲ್ಲಿ ಶ್ರೇಷ್ಠದಾನ- ಪ್ರೇಕ್ಷಣೀಯ ಪ್ರದಾನ ಅಂದರೆ ಪ್ರಯೋಗ ನೋಡಲು ಅವಕಾಶ ದಾನಮಾಡುವುದು.

ನ ತಥಾ ಗಂಧಮಾಲ್ಯೇನ ದೇವಾಸ್ತುಷ್ಯಂತಿ ಪೂಜಿತಾಃ

ಯಥಾ ನಾಟ್ಯಪ್ರಯೋಗಜ್ಞೇಸ್ತುಷ್ಯನ್ತಿ ಸ್ತುತಿಮನ್ಡಲೈಃ

ಗಂಧರ್ವಣ್ಚೈವ ನಾಟ್ಯಣ್ಚ ಯಃ ಸಮ್ಯಗನುಪಶ್ಯತಿ

ಲಭತೇ ಸದ್ಗತಿಂ ಪುಣ್ಯಾಂ ಸಮಂ ಬ್ರಹ್ಮರ್ಷಿಭಿರ್ನರಃ

ನಾಟ್ಯಪ್ರಯೋಗದಿಂದ ದೇವತೆಗಳಿಗೆ ಆಗುವಷ್ಟು ಸಂತೋಷ ಗಂಧಮಾಲ್ಯಾದಿಗಳಿಂದೊಡಗೂಡಿದ ಸ್ತುತಿ, ಪೂಜೆಗಳೆಂದಾಗುವುದಿಲ್ಲ. ಗಾಂಧರ್ವವನ್ನೂ (ಸಂಗೀತ), ನಾಟ್ಯವನ್ನೂ ಚೆನ್ನಾಗಿ ಸೇವಿಸುವವನಿಗೆ ಮುಂದೆ ಬ್ರಹ್ಮರ್ಷಿಗಳಿಗೆ ಸಮನಾದ ಸದ್ಗತಿಯು, ಪುಣ್ಯವೂ ದೊರಕುವುದು.

ಕಿಣ್ಚಾನ್ಯತ್ ಸಸ್ಯಪೂರ್ಣಾ ಭವತು ವಸುಮತೀ ಶಾಶ್ವತೀ ನಷ್ಟರೋಗಾ

ಶಾಂತಿರ್ಗೋಬ್ರಾಹ್ಮಣಾನಾಂ ನರಪತಿರವನಿಂ ಪಾತು ಚೇಮಾಂ ಸಮಗ್ರಾಮ್

ಇನ್ನೇನು ಹೇಳುವುದಿದೆ? ದುರ್ಭಿಕ್ಷ-ನಷ್ಟ-ರೋಗಗಳೆಲ್ಲ ನಾಶವಾಗಿ ಭೂಮಿಯು ಸಸ್ಯಪೂರ್ಣೆಯಾಗಿ ಸಮೃದ್ಧವಾಗಿರಲಿ. ಗೋಬ್ರಾಹ್ಮಣರಿಗೆ ಶಾಂತಿ-ಸುರಕ್ಷತೆ ದೊರೆಯಲಿ. ರಾಜರು ಪೃಥ್ವಿಯನ್ನು ಚೆನ್ನಾಗಿ ಪಾಲಿಸುತ್ತಾ ಚಿರವಾಗಿ ಆಳಲಿ – ಎಂಬಲ್ಲಿಗೆ ‘ಲೋಕಾಸಮಸ್ತಾ ಸುಖಿನೋ ಭವಂತು’ ಎಂಬಂತೆ ಮಂಗಲವನ್ನು ಭರತನು ಹೇಳುತ್ತಿದ್ದಾನೆ.

ಇಲ್ಲಿ ಭೂಮಿಯು ಸಸ್ಯಶಾಲಿನಿಯಾಗುವುದಕ್ಕೂ, ಗೋಬ್ರಾಹ್ಮಣರಿಗೆ ಶಾಂತಿ ಸುರಕ್ಷತೆಯೂ, ರಾಜರು ಪೃಥ್ವಿಯನ್ನು ಪಾಲಿಸುವುದಕ್ಕೂ ನಾಟ್ಯಕ್ಕೂ ಏನು ಸಂಬಂಧವೆಂದು ಪ್ರಶ್ನಿಸಬಹುದು. ಆದರೆ ಅದರೊಳಗೂ ನಾಟ್ಯದ ಸರ್ವಾಂಗೀಣ ಪ್ರಗತಿಯ ಸೂಚಕವಾದ ಸೂಕ್ಷ್ಮತಂತುವೊಂದಿದೆ. ರಾಜರು ಪೃಥ್ವಿಯನ್ನು ಚೆನ್ನಾಗಿ ಪಾಲಿಸಿ ಆಶ್ರಯದಾತರಾದರೆ ಮಾತ್ರ ಭೂಮಿಯಲ್ಲಿ ನಾಟ್ಯವು ಸುಶೋಭಿತವಾಗುವುದು. ಭೂಮಿ ಸಂಪದ್ಭರಿತವಾಗಿ ದುರ್ಭಿಕ್ಷ-ರೋಗಗಳೆಲ್ಲ ನಾಶವಾಗಿ, ಗೋವು ಬ್ರಾಹ್ಮಣರಾದಿಯಾಗಿ ಸುಖ-ನೆಮ್ಮದಿಗಳಿಂದ ಬದುಕಿದರೆ ಮಾತ್ರ ನಾಟ್ಯಾದಿ ಕಲೆಗಳು ಬೆಳಗಿ ಬಾಳಲು ಸಾಧ್ಯ. ನಾಟ್ಯಶಾಸ್ತ್ರದ ಸಮಗ್ರ ಸೌಂದರ್ಯಕ್ಕೆ, ನಾಳೆಯ ನೆಮ್ಮದಿಗಾಗಿ ಯೋಚಿಸಿದ ಭರತನ ದೂರದರ್ಶಿತ್ವಕ್ಕೆ ಇದಕ್ಕಿಂತ ಇನ್ನಾವ ಹಿರಿಯ ನಿದರ್ಶನವಿರಲು ಸಾಧ್ಯ?

(ಚತುರಶ್ರ ತ್ರಿಶ್ರಗತಿ-ಸಾಕಿ) ಯಜ್ಞಪಥವ ಅರಿತು ನಡೆದು ಗದ್ದಿಗೆಯನು ಏರ್ದನವನು

ಮನುಜರಾಜ ನಹುಷ ದೇವರಾಜ್ಯಪಟ್ಟ ಗೆದ್ದನು (ಪಾಟಾಕ್ಷರ ನಿರ್ಮಾಣ)

(ಅಪ್ಸರೆಯರ ನಾಟ್ಯ ನೋಡಿ) ಯಾವುದೇ ಜತಿಸ್ವರ/ತಿಲ್ಲಾನದ ಬಳಕೆಯೂ ಆಗಬಹುದು.

ನಹುಷ :- ಬಳುಕು ಬಾಗು ಬೆಡಗು ಭಾವ ಆಂತು ನಟಿಪ ನಾಟ್ಯ ಸೊಗಸು

ಚೆಲುವ ಸುಧೆಯ ಇಳೆಯ ಜರು ಪಡೆವುದೆಂತು? ಕೊಡುವುದೆಂತು ?

(ಚತುರಶ್ರ) ಬೃಹಸ್ಪತಿ :- ಕೂಡದು ನಹುಷ| ಸಲ್ಲದು, ಸಲ್ಲದು ನಿಯಮವಿದೇ ಅನಿಮೇಷರಿಗೆ

ಪಥ್ಯವ ಹೇಳುವೆ, ಮರ್ತ್ಯಕೆ ಕರೆಸುವ ದಾರಿಯು ತಿಳಿದಿದೆ ಭರತನಿಗೆ

(ಮಿಶ್ರ-ಅಷ್ಟತಾಳ)

ನಹುಷ ಭರತನಿಗೆ : ಪ್ರಾಂಜಲದ ಪ್ರಾರ್ಥನೆಯ ಸಲ್ಲಿಪೆ ಅನುನಯದಿ ಅವನಿಯಲಿ ಪಸರಿಸಿ

ನಾಟ್ಯಭಾಗೀರಥಿಯ ಬಗೆಯುಲಿ ಹರಿದು ನಲಿಯಲಿ ಬೆಳೆದು ಉಲಿಯಲಿ

(ನಹುಷನು ನೆನಪಿಗೆ ಸರಿಯುತ್ತಾ ಊರ್ವಶಿ-ಪುರೂರವನ ಕತೆಯನ್ನು ಅಭಿನಯಿಸಬಹುದು.)

ವಿಧಿಯ ಆಟಕೆ ವಚನ ತಪ್ಪಿದ ಚಂದ್ರತನುಜ ಪುರೂರವ

ಒಲಿದು ಬಂದರೂ ವಚನಭಂಗಕೆ ಇಳೆಯ ತೊರೆದಳು ಊರ್ವಶಿ

ಮಾಯಕದ ತೆರೆ ಸರಿಯಲು ನಾಟ್ಯ ಭ್ರಮೆಯನೆ ತಂದಿತು

ಮರೆಯಲಾಗದೆ ಮರೆತರು |ಜನ| ಕುಣಿಯಲಾಗದೆ ನೊಂದರು

ಊರ್ವಶಿಯ ಪಥ ನಷ್ಟವಾಗಿದೆ ಲಲಿತ ಲಾಸ್ಯದ ಸಿದ್ಧಿ ಬೇಕಿದೆ

ಮಾನವನ ಮನದಿಂಪು ತಂಪಿಗೆ ಮನಸು ಮನಸಿನ ಸೇತುಬಂಧಕೆ…

(ಆಲಾಪನೆ/ಸ್ವರಕಲ್ಪನೆ)

ಭರತ ಮಕ್ಕಳನ್ನು ಕರೆಸಿ : ಶಾಪದಿಂದಲಿ ಮುಕ್ತಿ ನಿಮಗೇ ನೆಚ್ಚಿ ನಡೆದರೆ ಖಂಡಿತ

ನೀಚರಾಗದೆ ನಡೆದು ತೋರಿರಿ ನಾಟ್ಯ ನಡೆಯಲಿ ಸಂತತ

(ಭರತಪುತ್ರರು ಭುವಿಯಲ್ಲಿ ಬಂದನಂತರ)

ಮಹಿಯ ಮಹಿಳೆಯರ್ ಒಲಿದು ಪಡೆದರು ವಂಶವಾಯಿತು ನಟರದು

ನಟನ ನಿರ್ಣಯ ಲಾಕ್ಷ್ಯ ಲಕ್ಷಣ ಅರಳಿ ವಿಕಸಿತವಾದುದು

ಭಾರತದ ಕಲೆ ಕಾಣ್ಕೆಯೆಲ್ಲವು ನಾಟ್ಯಶಾಸ್ತ್ರಕೆ ಋಣಿಯು ತಾನ್

ದೇಶದೇಶದಿ ಕಾಲಕಾಲಕೆ ಹೊಸತನವ ತಾಳುತ ಬಾಳುವ

ಭರತವಾಕ್ಯ : ವೇದ ಓದುವ, ಯಜ್ಞಗೈಯುವ, ದಾನಧರ್ಮದ ಸತ್ಫಲ

ದೊರೆವುದೈ ನಾಟ್ಯವನು ಸೇವಿಪ ರಸಿಕಜನಕಿದು ಪುಷ್ಕಳ

ನಾಟ್ಯದಾನವೆ ಶ್ರೇಷ್ಠ ದಾನವು ಪ್ರೇಕ್ಷಣೀಯಪ್ರದಾನವು

ಭವ-ಭಾವದೀಪ್ತವು ನೇತ್ರಯಜ್ಞವು ರಸಶಿಖರದ ನವಸಿದ್ಧಿಯು

ಪಾಪನಾಶಕ ಹ್ಲಾದಪೋಷಕ ಮೋಕ್ಷದೀಕ್ಷಪ್ರದಾಯಕ

ಸರ್ವಶಾಸ್ತ್ರನಿದರ್ಶಕವು ಸಂ-ತೋಷ ಸಂಭ್ರಮದಾಯಕ

ಭರತಕಾರ್ಯಕ್ರಿಯೆಗೆ ಒದಗಿ ಬಂದಿರೆ ವೇದ

ಬೋಧದಿಂ ಒಡಗೂಡೆ ಸಹಜ ಮೋದದ ಸ್ವಾದ

ಅಂತರಂಗದ ರಂಗ ಭವ್ಯವಾಗಲಿ ಸಂಗ

ಆನಂದ ಸೌಗಂಧ ಸಂಭಾವ ರಸರಂಗ

ಲೋಕ ಅರಿತರೆ ಹರಿವುದೈ ರಸದ ಜಸಚಿಲುಮೆ

ಆಗಲೇ ಉಳಿವುದೈ ಕಲೆಯ ನೆಲೆ, ಬೆಲೆ ಬಲುಮೆ

ನಿರೂಪಣೆ/ಸೂತ್ರಧಾರ : ಸುಭಿಕ್ಷವಾಗಲಿ ಭೂಮಿ ಧನಧಾನ್ಯದ ಬಸಿರಾಗಿ

ಸಮೃದ್ಧಿ ಲಭಿಸಲಿ ಧರೆಗೆ, ಗೋಬ್ರಾಹ್ಮಣ ಉತ್ತಮಗೆ;

ಪೊಡವಿ ಪಾಲಕರು ಫೃಥಿವಿಯನು ನಿತ್ಯಸತ್ಯದಲಿ ಪಾಲಿಸಲಿ

ಸತ್ಯ, ಧರ್ಮ, ಮಿತ್ರತ್ವವ ಸಾಧನೆಯ ಬೆಳಕಿನಲಿ ಬಾಳಿಸಲಿ

ಭುವಿಯ ಸೊಬಗು ಹೆಚ್ಚಿದರಲ್ಲವೇ ನಾಟ್ಯವು ಸುಕ್ಷೇಮ?

ಬಾಳ್ವೆಯು ಬೆಳಗಿದರಲ್ಲವೇ ಕಲೆಯೂ ಭವದೋದ್ಯಾನ?

ಸ್ವಸ್ತಿವಾಕ್ಯ :- ಪಡೆಯಿರೈ ಶಾಂತಿಯ, ಸ್ವಸ್ತಿಯ, ಪುಷ್ಠಿಯ, ಆಯುರಾರೋಗ್ಯ ಐಶ್ವರ್ಯಸಮೃದ್ಧಿನೆಲೆಯ..

(ಮುಗಿಯಿತು)

**************************

 

Leave a Reply

*

code