ಅಂಕಣಗಳು

Subscribe


 

ಶಾಸ್ತ್ರೀಯ ನೃತ್ಯದಲ್ಲಿ ನಾಯಕಾಭಿನಯ

Posted On: Wednesday, August 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ಆರ್. ಗಣೇಶ್, ಬೆಂಗಳೂರು

ಕಳೆದ ಸಂಚಿಕೆಯಲ್ಲಿ ನಾಯಕಪ್ರಭೇಧಗಳ ನಿರೂಪಣೆಯ ಸಾಧ್ಯತೆ ಮತ್ತು ಸಾಹಿತ್ಯ ಚಿಂತನೆಯನ್ನು ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ನಾಯಕಾಭಾವ, ಅಭಿನಯ ಮತ್ತು ಅದನ್ನು ನರ್ತಿಸುವ ಕಲಾವಿದರ ಸವಾಲು-ಸಾಧ್ಯತೆ- ಅರ್ಹತೆ- ಅನುಕೂಲ- ಆವಶ್ಯಕತೆಗಳ ಕುರಿತು ದೀರ್ಘಚರ್ಚೆಯನ್ನು ಶತಾವಧಾನಿ ಗಣೇಶರು ಮುಂದಿಟ್ಟಿದ್ದಾರೆ. ಓದಿನ ಅರ್ಥವಂತಿಕೆ ಮತ್ತು ಔಚಿತ್ಯವರಿತ ಆಚರಣೆ ನಮ್ಮೆಲ್ಲರದ್ದಾಗಲಿ.

..ನಾಯಿಕಾಪ್ರಬೇಧಗಳು ಸುಪ್ರಸಿದ್ಧ. ಅಂತೆಯೇ ನಾಯಿಕಶ್ರಿತವಾದ ಶೃಂಗಾರರಸನೃತ್ಯರೀತಿಗಳೂ ತದುಪಯೋಗಿ ಸಾಹಿತ್ಯಾದಿಗಳೂ ಅಮಿತ, ವ್ಯಾಖ್ಯಾತ ಮತ್ತು ಚಿರಪರಿಚಿತ. ಆದರೆ ನೃತ್ಯದ ಶೃಂಗಾರರಸಪ್ರಕಟಭಾಗಗಳನ್ನು ನಿರೂಪಿಸಲು ಪುರುಷರು ನರ್ತಕರಾಗಿ ರಂಗಸ್ಥಳವನ್ನೇರಲಾರಂಭಿಸಿದ ಮೇಲೆ ಸ್ವಲ್ಪ ಕ್ಲೇಶ ಬಂದಿತೇನೋ. ಮೂಲತಃ ಸ್ತ್ರೀಯಾಗಲೀ, ಪುರುಷನಾಗಲೀ ನರ್ತಿಸಲು ತೊಡಗಿದಾಗ ಲಿಂಗವಿವಕ್ಷೆಯಿಲ್ಲದೆ ಸಾಹಿತ್ಯೋಚಿತಾಭಿನಯವನ್ನು ತೋರಿಸುವುದು ಸುವಿದಿತ, ಸಾಧು.

ಆದರೆ ಭಿನ್ನಲಿಂಗಿಗಳ ಶೃಂಗಾರಾಭಿನಯವನ್ನು ತೋರುವಾಗ (ಇದು ಎಲ್ಲ ರಸಗಳಿಗೂ ಅನ್ವಯಗೊಳ್ಳುತ್ತದೆ.)ಅನಿವಾರ್ಯವಾಗಿಯೂ ಅಪೇಕ್ಷಿತವಾಗಿಯೂ ಹದಗೆಡದಂತೆ ಬರಬೇಕಾದ ಅಲ್ಪಸ್ವಲ್ಪ ಲೋಕಧರ್ಮಿಯು ಆಯಾ ನರ್ತಕರನ್ನು ಆಯಾ ನರ್ತಕರನ್ನು ಆಹಾರ್ಯಾದಿ ವೈಷಮ್ಯಗಳಿಂದಾಗಿ ಇಬ್ಬಂದಿಗೊಳಿಸುತ್ತದೆ. ಅಲ್ಲದೆ ಎಲ್ಲ ನರ್ತಕ-ನರ್ತಕಿಯರೂ ಪರಕಾಯ ಪ್ರವೇಶದಂತೆ ತತದ್ಭೂಮಿಕೆಗಳ ಮನೋವ್ಯಾಪಾರಗಳನ್ನು ದೇಶ-ಕಾಲ-ಲಿಂಗಾದಿವಿವಿಧೋಪಾದಿನಿರಪೇಕ್ಷವಾಗಿ ಸಾಧಿಸಿಕೊಂಡು ಸಮರ್ಥವಾಗಿ ವ್ಯಂಜಿಸಬಲ್ಲ ಕೃತವಿದ್ಯರಾಗಿರುವುದಿಲ್ಲ. ಹೀಗಾಗಿ ಪರಿಚಯಸೌಲಭ್ಯದಿಂದ ಸ್ತ್ರೀಯರನ್ನು ನರ್ತಕಿಯರೂ, ಪುರುಷರನ್ನು ನರ್ತಕರೂ ಅನುಕರಿಸುವುದು ಸುಲಭ. ಅನುಕೀರ್ತನಕ್ಕೆ ಇಷ್ಟು ಕ್ಲೇಶವಿಲ್ಲ. ಅದು ಶಾಸ್ತ್ರಸಿದ್ಧವಿಧಾನಗಳಿಂದ ತನ್ಮಯೀಭವನಪ್ರತಿಭಾನದಿಂದ ಸಾಧ್ಯ. ಈ ಕಾರಣದಿಂದ ನರ್ತಕರಿಗೆ ನಾಯಿಕಾಭಿನಯಕ್ಕಿಂತಲೂ ನಾಯಕಾಭಿನಯವು ನೈಜವೆಂದೆನಿಸಬಹುದು (ಆದರೆ ಇದು ಪರಿಪಕ್ವ ಕಲಾವಿದನಿಗಲ್ಲ).

ಪ್ರೇಕ್ಷಕರಲ್ಲಿಯೂ ಸಹೃದಯತ್ವದ ಸರ್ವಾರ್ಹತೆಗಳನ್ನು ಹೊಂದಿರುವವರು ಈ ಅತ್ಯಲ್ಪರಾದ ಕಾರಣ ಎಷ್ಟು ನಾಟ್ಯಧರ್ಮಿಯನ್ನವಲಂಬಿಸಿದರೂ ನರ್ತಕರು ನಾಯಕನಲ್ಲಿಯಂತೆ ನಾಯಿಕೆಯಲ್ಲಿ ರಸಾವಿಷ್ಕರಣವನ್ನು ಮಾಡಲಾರರು ( ಇದೂ ಪುನಃ ಕಲಾವಿದನ ಶಕ್ತ್ಯಾಶ್ರಿತವೇ!).ಪುರುಷನು ಸ್ತ್ರೀವೇಷವನ್ನು ಧರಿಸಿದಾಗ ಆತನ ನಾಯಿಕಾಭಿನಯವು (ಆಹಾರ್ಯಾಭಿನಯಪುಷ್ಟವಾದ ಕಾರಣ) ಸಾಮಾನ್ಯರನ್ನು ತಲಪುವಷ್ಟು ಪರಿಣಾಮಕಾರಿಯಾಗಿ ಪುರುಷವೇಷದಲ್ಲಿಯೇ ಆತನಿದ್ದಾಗ ತಲಪದು. ಇದಕ್ಕೆ ಮುಖ್ಯಕಾರಣ ಸಾಧಾರಣೀಕರಣಕ್ಕೆ ಬೇಕಾದಷ್ಟು ಸಾಮಗ್ರಿಯು ಸಹೃದಯರಲ್ಲಾದವರಲ್ಲಿರುವಷ್ಟು ಸಾಮಾಜಿಕಸಾಮಾನ್ಯನಲ್ಲಿಲ್ಲದುದೇ ಆಗಿದೆ. ಇದಲ್ಲದೆ ಅನೇಕ ನರ್ತಕರು ವ್ಯಕ್ತಿಗತವಾಗಿ ಸ್ಪ್ರೈಣವನ್ನು ಅಭಿನಯಿಸಲು ಇಚ್ಛಿಸರೆಂಬುದೂ ವಿದಿತವೇ ( ಇದೂ ಸಹ ಕಲಾವಿದನ ತಾತ್ತ್ವಿಕ ನಿಲುವಾಗದು. ಏಕೆಂದರೆ ಅದು ನೃತ್ಯವಸ್ತುವನ್ನೂ ವಾಸ್ತವಜಗದ್ವಿಚಾರವನ್ನೂ ಬೆರೆಸುವುದಿಲ್ಲ. ಆದರೆ ಇಂಥ ನಿಲುವು ಅತೀವವಿರಳ).

ಇವೆಲ್ಲಕ್ಕೂ ಮಿಗಿಲಾಗಿ ರಸದೃಷ್ಟಿಯಿಂದ , ಕಲಾಭಿವೃದ್ಧಿಯ ದೃಷ್ಟಿಯಿಂದ ಸಲ್ಲುವ ಕಾರಣವೊಂದಿದೆ. ಅದೇನೆಂದರೆ ಅಭಿನೀತವಾಗುವ ವಸ್ತುವು ಲಾಸ್ಯಪ್ರಧಾನನೃತ್ಯದಲ್ಲಿ ಸದಾ ನಾಯಿಕಾತ್ಮಕವೇ ಆದರೆ ಏಕತಾನತೆ ಎಲ್ಲೆ ಮೀರುತ್ತದೆ; ವೈವಿಧ್ಯವು ಇಲ್ಲವಾಗುತ್ತದೆ. ಇಡಿಯ ಸೃಷ್ಟಿಯಲ್ಲಿರುವ ಸ್ತ್ರೀಪುಂಸ್ವರೂಪಾತ್ಮಕವಾದ ಸೌಂದರ್ಯದಲ್ಲಿ ಒಂದು ಮುಖವನ್ನು ಮಾತ್ರ ಬಿಂಬಿಸಿದ ಅರಕೆ ಉಳಿಯುತ್ತದೆ.

ವಿಶ್ವವೆಲ್ಲವೂ ನರನಾರೀಮಯತ್ವದ ವಿವಿಧಸ್ತರ ವಿಭಿನ್ನಸಂಮಿಶ್ರಣದ ವಿನ್ಯಾಸವೇ ಆಗಿರುವುದರಿಂದ ಸಾಂಕೇತಿಕವಾಗಿ ಅದರ ಸ್ತ್ರೀತ್ವವನ್ನು ನಾಯಿಕಾಭಿನಯವೂ, ಪುಂಸ್ತ್ವವನ್ನು ನಾಯಕಾಭಿನಯವೂ ರಸರಾಜನೆನಿಸಿದ, ಅಹಂತಾಮೂಲವಾಗಿ ಆತ್ಮಪ್ರತ್ಯಯವನ್ನು ಉದ್ಭೋಧಿಸುವ ಶೃಂಗಾರರಸದಲ್ಲಿ ಪ್ರತಿನಿಧಿಸುವುದರ ಮೂಲಕ ವ್ಯಂಜಿಸಬಹುದಾಗಿದೆ. ಆದರೆ ಇಲ್ಲಿ ಆಧ್ಯಾತ್ಮಿಕಸ್ತರದ ಪ್ರಶ್ನೆಯಾಗಿ ಬರುವ ಜೀವಾತ್ಮ-ಪರಮಾತ್ಮಗಳ ದೈವಿಕಶೃಂಗಾರದ ಪ್ರಶ್ನೆಯನ್ನೆತ್ತಿದರೆ ಪುಂಸ್ತ್ವವನ್ನು ಪರಮಾತ್ಮನು ಪ್ರತಿನಿಧಿಸುವುದರಿಂದ ಆತನು ನಿಷ್ಕಲ, ನಿರಂಜನ ಮತ್ತು ನಿರ್ವಿಕಾರನೆಂಬ ಕಾರಣದಿಂದ ಅಭಿನಯಾತೀತನೆಂದು ನಿಷ್ಕರ್ಷೆಯಾಗಿ ಪುರುಷಭೂಮಿಕಾಭಿನಯವು ಅಸಾಧ್ಯವೇ ಎನ್ನಿಸುವುದು.

ಇಂತಿದ್ದರೂ ಈ ಅನುಭಾವದ ಸ್ತರವನ್ನುಳಿದು ಕೇವಲ ಮಾನವೀಯಭಾವಗಳ ನೆಲೆಯಲ್ಲಿ ನಿಂತಾಗ ಇಂಥ ಕ್ಲೇಶಗಳಿಲ್ಲವಾಗುತ್ತದೆ. ಅಷ್ಟುಮಾತ್ರವಲ್ಲದೆ ಎಂಥ ಪಾರಲೌಕಿಕವೂ ಅವಲೌಕಿಕವೂ ಆದ ವಸ್ತು ಕೂಡಾ ಮಾನವಭಾವಶಬಲಿತವೂ ಮನುಜಚಿತ್ತವೃತ್ತ್ಯುಪಾಧಿಗ್ರಸ್ಥವೂ ಆದಾಗ ಮಾತ್ರ ನಮಗೆಲ್ಲ ಆತ್ಮೀಯವಾಗುತ್ತದೆ. ಇಷ್ಟೇಕೆ, ಅತೀಂದ್ರಿಯವಾದ ಜೀವ-ಬ್ರಹ್ಮಸಂಬಂಧವನ್ನು ಶೃಂಗಾರಚ್ಛದ್ಮವಾಗಿ ಹೇಳುವುದೆಂಬ ಖ್ಯಾತಿಯನ್ನು ಹೊಂದಿದ ಗೀತಗೋವಿಂದಾದಿ ಪ್ರಬಂಧಗಳೂ ತಮ್ಮ ಐಂದ್ರಿಯಸ್ತರವನ್ನು ಬದಿಗಿಡಲಾಗಲಿಲ್ಲ. ಆದುದರಿಂದ ಇಂಥ ಆಕ್ಷೇಪಗಳು ಪ್ರಯೋಗದ ಹಂತದಲ್ಲಿ ನಿಲ್ಲಲಾರವು. ಪರಿಣಾಮದಲ್ಲಿ ಧ್ವನಿತವಾಗುವ ತತ್ತ್ವಕ್ಕಾಗಿ ನಿರ್ವಹಣಕಾಲದಲ್ಲಿ ಮಾನವೀಯವ್ಯವಹೃತಿಯನ್ನು ಸರ್ವರಸಮೌಲಿಭೂತವಾದ ಶಾಂತರಸ ( ಇದನ್ನೇ ಅಖಂಡರಸವೆನ್ನುವರು ;ಇದೇ ಪ್ರಕೃತಿ. ಉಳಿದ ರಸಗಳು ವಿಕೃತಿಗಳು)-ದಲ್ಲಿಯೇ ಅವಲಂಬಿಸುವಾಗ ಅನ್ಯವಿಚಾರಗಳ ಮಾತೇನು? ಹೀಗೆ ನಾಯಕಾಭಿನಯದ ಆವಶ್ಯಕತೆಯನ್ನು ಲಾಸ್ಯಮಯನೃತ್ಯದಲ್ಲಿಯೂ ಕಂಡುಕೊಳ್ಳಬಹುದು. ಇನ್ನುಳಿದದ್ದು ನಾಯಕವಿಚಾರವೊಂದೇ.

…ಪ್ರಸಿದ್ಧನಾಯಕರನ್ನು ಅವರ ಪೂರ್ವ ಕಲ್ಪಿತ ಚರಿತ್ರೆಗೆ ಭಂಗ ಬರದಂತೆ ರಸಹಾನಿಯಾಗದಂತೆ ನಿರೂಪಿಸಬೇಕಾಗುತ್ತದೆ. ಉದಾಹರಣೆಗೆ ಶ್ರೀರಾಮನನ್ನು ಧೀರೋದಾತ್ತನೂ ಅನುಕೂಲನೂ ಆದ ಪತಿ ಮತ್ತು ಉತ್ತಮನಾಯಕನೆಂದು ತಿಳಿದು ಆ ಪಾತ್ರವನ್ನು ಅಭಿನಯಿಸಬೇಕು. ಅದನ್ನು ಬಿಟ್ಟು ಧೀರಲಲಿತನಾದ ಶಠಸ್ವಭಾವದ ಅಧಮನಾಯಕನಂತೆ ನಟಿಸಿದರೆ ರಸಪಾಕ ಕೆಡುತ್ತದೆ. ಶ್ರೀರಾಮನಂಥ ನಾಯಕನ ಯಾವುದೇ ಚರ್ಯೆಯಲ್ಲಿಯೂ ಸಂಯಮ, ಗಾಂಭೀರ್ಯ, ಸೌಜನ್ಯ ಮತ್ತು ಸಂಸ್ಕೃತಿಗಳು ಎದ್ದು ಕಾಣಬೇಕು. ಆದುದರಿಂದಲೇ ಶ್ರೀರಾಮನನ್ನು ಧೀರಲಲಿತನೆಂಬಂತೆ ಚಿತ್ರಿಸಿರುವ ಗೀತಗೋವಿಂದದ ಅನುಕರಣಗಳಾದ ಸಂಗೀತರಾಘವವೇ ಮೊದಲಾದ ಕೃತಿಗಳು ಸಫಲವಾಗಲಿಲ್ಲ.

ನಾಯಕರು ಅಪ್ರಸಿದ್ಧರಾಗಿದ್ದಲ್ಲಿ ಉತ್ತಮ-ಮಧ್ಯಮಾದಿ ಸ್ವಭಾವಗಾಂಭೀರ್ಯವನ್ನೂ, ಜ್ಯೇಷ್ಠಾದಿ ವಯೋನುರೂಪತೆಯನ್ನೂ ಆ ಸಾಹಿತ್ಯದಿಂದಲೇ ತಿಳಿದು ಆತನು ಪತಿಯೇ, ಉಪಪತಿಯೇ ಅಥವಾ ವೈಶಿಕನೇ ಎಂದು ನಿಶ್ಚಯಿಸಿ ತದನುಸಾರವಾಗಿಯೇ ಅಭಿನಯಿಸಬೇಕು. ಕೂಡಿದ ಮಟ್ಟಿಗೂ ರಸಾಭಿನಯದಲ್ಲಿ ಉತ್ತಮ ಮತ್ತು ಮಧ್ಯಮನಾಯಕರನ್ನೇ ಆರಿಸಿಕೊಳ್ಳುವುದು ಒಳಿತು. ಈ ಅಭಿನಯಾವಸರದಲ್ಲಿ ಕಾಮಶಾಸ್ತ್ರದ ದಶಾವಸ್ಥೆಗಳೂ ಅಷ್ಟವಿಧಸಾತ್ತ್ವಿಕಭಾವಗಳೂ ವಿವಿಧವ್ಯಭಿಚಾರಿಭಾವ-.ವಿಭಾವಗಳೂ (ಆಲಂಬನ-ಉದ್ದೀಪನಾದಿಗಳು) ಮತ್ತಿತರ ಅಂಶಗಳೂ ನಾಯಿಕೆಯರಿಗೆ ಹೇಗೋ ನಾಯಕರಿಗೂ ಹಾಗೆಯೇ ಸಮವೇ ಆಗಿವೆ. ಜೊತೆಗೆ ದೂತಿ, ವಿಟ, ಚೇಟ, ವಿದೂಷಕ, ಪೀಠ-ಮರ್ದಾದಿಗಳೂ ಬರಬಹುದು. ಹಾಸ್ಯ, ಕರುಣ, ವೀರ, ಭಯಾನಕ, ಅದ್ಭುತರಸಗಳನ್ನೂ ಅಂಗಿಗಳಾಗಿ ಅಲ್ಲಲ್ಲಿ ತರಬಹುದು. ಆದರೆ ರೌದ್ರ-ಭೀಭತ್ಸ-ಶಾಂತಗಳಲ್ಲಿ ಹೆಚ್ಚಿನ ಅವಕಾಶವಾಗಲಾರದು.

…ಮುಖ್ಯವಾಗಿ ಶೃಂಗಾರನಾಯಕನನ್ನು ಅಭಿನಯಿಸುವ ನರ್ತಕ (ನರ್ತಕಿಯಾದರೂ ಆಗಬಹುದು)ನು ಮೂಲಭೂತಾಂಶಗಳಲ್ಲಿ ನುರಿತಿರಬೇಕು. ನೃತ್ಯದಲ್ಲಿ ತಾಲಪ್ರಾಧಾನ್ಯವಿಲ್ಲವೆಂದುಕೊಂಡು ತತ್ಕಾರಣದಿಂದಲೇ ಅದು ಸುಲಭವೆಂದೂ, ಆಶ್ರಮನಿರ್ವಹಣೀಯವೆಂದೂ ತಿಳಿಯುವುದು ಅವಿವೇಕ. ವಿಳಂಬಗತಿಯಲ್ಲಿ ಭಾವವನ್ನು ಹಿಡಿದಿಟ್ಟುಕೊಂಡು ತಡೆಯಿಲ್ಲದೆ ವಿಕಾಸೋನ್ಮುಖವಾಗಿ ವ್ಯಕ್ತಪಡಿಸಲು ಸಾಕಷ್ಟು ಆಂಗಿಕಾಭಿನಯಭ್ಯಾಸ ಬೇಕು. ಇಲ್ಲಿ ಅಡವುಗಳಿಗಿಂತ ಹಸ್ತಗಳಿಗೆ ಪ್ರಾಶಸ್ತ್ಯ. ಹಸ್ತಗಳಿಗಿಂತ ನೇತ್ರ-ಗ್ರೀವಾದಿಚಾಲನಾ ಮುಖ್ಯ. ಶರೀರವನ್ನು ಪಟುತೆಯಿಂದ ಲಘುವಾಗಿಸಿಕೊಂಡು ಸಂಯಮದಿಂದ ರಂಗಚಲನವನ್ನು ನಿರ್ವಹಿಸುವ ಯತ್ನವಿರಬೇಕು. ವಿಶೇಷತಃ ಕೆನ್ನೆಗಳ, ತುಟಿಗಳ ಹಾಗೂ ನೇತ್ರಗಳ ಆಕುಂಚನ, ಪ್ರಸರಣ, ಆಂದೋಲನ, ಪರಿವರ್ತನಗಳಲ್ಲಿ ಪಳಗಿರಬೇಕು.

ವಸ್ತುತಃ ಆಂಗಿಕ-ಸಾತ್ತ್ವಿಕಗಳು ಅವಿನಾಭಾವದಿಂದಿರುತ್ತವೆ. ಇವುಗಳನ್ನು ಪ್ರತ್ಯೇಕವೆಂದೆಣಿಸುವುದು ಅಧ್ಯಯನಾನುಕೂಲತೆಗೆ ಮಾತ್ರ. ತತ್ತ್ವತಃ ಚತುರ್ವಿಧಾಭಿನಯವೆಲ್ಲ ಒಂದೇ. ಆದುದರಿಂದ ನೃತ್ತಹಸ್ತ, ಚಾರಿ, ಸ್ಥಾನಕ, ಕರಣಾದಿಗಳೆಲ್ಲ ರಸಪೊಷಕವಾಗಿದ್ದಲ್ಲಿ ಸಾತ್ತ್ವಿಕಾಭಿನಯವಾಗುತ್ತವೆ. ಆದರೂ ಮೊದಲಿಗೆ ಮುಖ್ಯವಾದುದ್ದು ಸಾಹಿತ್ಯಜ್ಞಾನ. ಒಂದು ನೃತ್ಯವಸ್ತುವಿನ ರಸಾಭಿನಯಸಂದರ್ಭದಲ್ಲಿ ಅದರ ಸಾಹಿತ್ಯವನ್ನು ಪದಶಃ ಮಾತ್ರ ತಿಳಿದುಕೊಂಡು ನರ್ತಿಸುವಾಗ ಅದಕ್ಕೆ ಭಂಗಬಾರದಂತೆ ನಿರ್ವಹಿಸುವುದು ಮಾತ್ರವೇ ಸಾಹಿತ್ಯಜ್ಞಾನವಲ್ಲ. ಭರತಮುನಿಯ ನಾಟ್ಯಶಾಸ್ತ್ರದ ಮುಖ್ಯಭಾಗಗಳನ್ನಾದರೂ ಕನಿಷ್ಠಪಕ್ಷದಲ್ಲಿ ಅಭ್ಯಸಿಸಿ, ವಿಶೇಷತಃ ಭಾವಾಧ್ಯಾಯ ಹಾಗೂ ರಸಾಧ್ಯಾಯಗಳಲ್ಲಿ ಅಭಿನವಗುಪ್ತರು ನೀಡುವ ವಿವರಣೆಗಳನ್ನು ಮನನಿಸಬೇಕು. ಜೊತೆಗೆ ರಸಮಂಜರಿ, ದಶರೂಪಕ, ಅಭಿನಯದರ್ಪಣಗಳ ಪರಿಚಯವೂ ಅವಶ್ಯ. ಈ ಲಕ್ಷಣಶಾಸ್ತ್ರಗ್ರಂಥಗಳಿಗಿಂತಲೂ ಮಿಗಿಲಾಗಿ ಲಕ್ಷ್ಯವೆನಿಸಿದ ಕಾವ್ಯಾದಿಪ್ರಬಂಧಗಳ ಗಾಢಪರಿಚಯ, ಆಳವಾದ ಅಭ್ಯಾಸ, ನಿಶಿತವಾದ ಅಂತರ್ವೀಕ್ಷಣೆ ಅತ್ಯಗತ್ಯ. ಶ್ರೀಮದ್ರಾಮಾಯಣ, ಮಹಾಭಾರತಾದಿಗಳಲ್ಲದೆ ಶಾಕುಂತಲ, ಸ್ವಪ್ನವಾಸವದತ್ತ, ವಿಕ್ರಮೋರ್ವಶೀಯಾದಿ ನಾಟಕಗಳ ಒಳ್ಳೆಯ ಅನುವಾದವನ್ನಾದರೂ ಹಲವುಬಾರಿ ಪರಿಶೀಲಿಸಿರಬೇಕು.

ಪ್ರಧಾನವಾಗಿ ತನ್ನನ್ನು ಆಯಾ ಸನ್ನಿವೇಶಗಳಲ್ಲಿ ನಿಲ್ಲಿಸಿಕೊಂಡು ಊಹಿಸಬಲ್ಲ ವಿಭಾವನಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಲೋಕಧರ್ಮಿಯನ್ನೇ ಪ್ರಧಾನವಾಗಿ ನಚ್ಚಿದ ನಾಟಕದವರು ಸುತ್ತುಮುತ್ತಲ ಪ್ರಪಂಚದಿಂದಲೇ ಪರಿಶೀಲನೆಯಿಂದಲೇ ಅಭಿನಯಿಸಲು ಕಲಿಯಬಹುದು. ಆದರೆ ನಾಟ್ಯಧರ್ಮೀಯರಾದ ನರ್ತಕರಿಗೆ ಲೋಕಾವೇಕ್ಷಣವು ಎಷ್ಟೇ ಪ್ರಯೋಜಕವಾಗಿದ್ದರೂ ಶಾಸ್ತ್ರವ್ಯಾಸಂಗ, ಕಾವ್ಯವಿವೇಕಗಳು ಮಾರ್ಗಪದ್ಧತಿಯಲ್ಲಿ ಮೈಗೂಡದಿದ್ದಲ್ಲಿ ಅವರ ಪ್ರದರ್ಶನವು ಪಾಮರರಂಜನಾಸ್ಪದ, ಚಿರಂತನಸತ್ತ್ವವಿಲ್ಲದ, ಹಲವೆಡೆ ಗ್ರಾಮ್ಯವೂ ಆಗುವ ಲೋಕವೃತ್ತಾನುಕೃತಿಯಾದೀತೇ ಹೊರತು ಅನುಕೀರ್ತನವಾಗದು. ಇಂಥ ನೃತ್ಯವು ನಾಟಕವೂ ಆಗದೆ, ರಸಾಭಿನೀತಿಯೂ ಆಗದೆ ಉಭಯತ್ರ ಭ್ರಷ್ಟವೆನಿಸುತ್ತದೆ. ಆದುದರಿಂದ ಹದಮೀರಿದ ಲೋಕಚಮತ್ಕಾರವನ್ನು ಸಂಯಮದಿಂದ ಹದ್ದಿನಲ್ಲಿರಿಸಿ ಶೈಲೀಕೃತವಾದ ಅಭಿಜಾತ ()ಸ್ವರೂಪವನ್ನು ಸಾಧಿಸಲು ನರ್ತಕರಿಗೆ ಅಂತರ್ದೀಪಕವಾದ ಸಂಸ್ಕೃತಸಾಹಿತ್ಯಜ್ಞಾನ ಅವಶ್ಯ. ಉಳಿದಂತೆ ಅಭಿನೇಯಾಂಶಗಳು ರೂಪಿತವಾಗುವಾಗಲೂ ದೃಷ್ಟಿ ಬೇಕು.

ಕೃತಿಯೊಂದನ್ನು ನಾಯಕಾಭಿನಯಕ್ಕೆ ಸ್ವೀಕರಿಸುವಾಗ ಮೇಲೆ ತಿಳಿಸಿದ ಅರ್ಹತೆಗಳ ಹಿನ್ನೆಲೆಯಲ್ಲಿ ಅದನ್ನು ಪರೀಕ್ಷಿಸಿ ಅಳವಡಿಸಬೇಕು. ಮೊದಲಿಗೆ ಸಾಹಿತ್ಯವು ಈಗಾಗಲೇ ರಾಗ-ತಾಲಬದ್ಧವಾಗಿದ್ದಲ್ಲಿ ಆ ಗೀತದ ಚೌಕಟ್ಟಿನಲ್ಲಿ ಅದನ್ನು ಅನುಸಂಧಾನಿಸಿ ಅರ್ಥವನ್ನು ಮನನಮಾಡಬೇಕು ಅಥವಾ ಅದು ರಾಗ-ತಾಳಬದ್ಧವಾಗಿರದಿದ್ದಲ್ಲಿ ಕೇವಲ ಅವರ ಛಂದೋಗತಿಯಿಂದಲೇ ತಾಳವನ್ನು ಗ್ರಹಿಸಿ ಬಳಿಕ ಸಾಹಿತ್ಯದ ಪ್ರಧಾನಧ್ವನಿಗೆ ಅನುಸಾರವಾಗಿ ರಾಗವನ್ನಾಯ್ದುಕೊಳ್ಳಬಹುದು. ಸಾಮಾನ್ಯವಾಗಿ ವಿಳಂಬ ಮತ್ತು ಮಧ್ಯಮಕಾಲಗಳೇ ಪ್ರಶಸ್ತ. ಆದರೆ ಅದು ಅಂಧಾನುಸರಣೆಯಲ್ಲ. ಅವಶ್ಯ ಕಂಡಲ್ಲಿ ದ್ರುತಗತಿಯೂ ಸ್ವಾಗತಾರ್ಹ. ಸಾಹಿತ್ಯವನ್ನು ಪದಪದವಾಗಿಯೂ ಪಂಕ್ತಿಪಂಕ್ತಿಯಾಗಿಯೂ ವಿವೇಚಿಸಿ ಅದನ್ನು ಉಚ್ಚರಿಸುವ ವೇಳೆಯಲ್ಲಿ ತಲೆದೋರಬಹುದಾದ ಎಲ್ಲ ನುಡಿಗಟ್ಟಿನ ವಿಶೇಷಗಳನ್ನು ಕಾಕುಚಮತ್ಕೃತಿಯನ್ನೂ ವಕ್ರೋಕ್ತಿವೈಚಿತ್ರ್ಯವನ್ನೂ ಗಮನಿಸಿಕೊಂಡು ಇಡಿಯ ಗೇಯವು ಪ್ರತಿನಿಧಿಸಲಿರುವ ನಾಯಕನು ಯಾವ ವರ್ಗದವನೆಂದು ಸಾಹಿತ್ಯ ಸೂಚನೆಯಿಂದಲೇ ತಿಳಿಯಬೇಕು. ಈ ನಿರ್ಣಯವು ಪೂರ್ವಸಾಹಿತ್ಯಾಭ್ಯಾಸದ ಫಲವಾಗಿಯೇ ಬರಬೇಕು.

ಒಂದೇ ಸಾಹಿತ್ಯವು ಹಲವು ಬಗೆಯ ನಾಯಕರಿಗೆ, ಹಲವು ಅವಸ್ಥೆಗಳ ನಿರೂಪಣೆಗಾಗಿಯೂ ಬಳಕೆಯಾಗುವಂತಿರುವುದುಂಟು. ಆಗ ಮತ್ತಷ್ಟು ಜಾಗರೂಕತೆಯಿಂದ ನಿರ್ಣಯಿಸಿಕೊಳ್ಳಬೇಕು. ಹೀಗೆ ನಿರ್ಣೀತವಾದ ನಾಯಕನ ಪ್ರಧಾನಚರ್ಯೆಯನ್ನೂ ಕೃತಿಯ ಪಲ್ಲವಿಯನ್ನೂ ಅಭಿನಯದ ಜೀವಾತುವಾಗಿ ಸಮನ್ವಯಿಸಿಕೊಂಡು ಆದಿಯಲ್ಲಿ ಸಾಹಿತ್ಯದ ವಾಚ್ಯಾರ್ಥವನ್ನೂ ತದನಂತರ ಸೋಪಾನಕ್ರಮದಿಂದ ಅದರ ಲಕ್ಷ್ಯಾರ್ಥ-ಧ್ವನ್ಯರ್ಥಗಳನ್ನು ನಿರೂಪಿಸಬೇಕು. ಪ್ರತಿಚರಣದ ಅಭಿನಯವೂ ಪಲ್ಲವಿಯ ಪ್ರಧಾನಘಟನೆ-ನಿರೂಪಣೆಗಳಿಗೆ ನೈಜವಾಗಿ ಹೊಂದುವಂತೆ ಸಂಚಾರಿಗಳನ್ನು ಅಣಿಯಾಗಿಸಿಕೊಳ್ಳಬೇಕು. ಹೀಗೆ ನಾಯಕಾಭಿನಯವು ನಾಯಿಕಾಭಿನಯದ ಪದ್ಧತಿಯಲ್ಲೇ ಸಾಗುತ್ತದೆ. ಆದರೆ ಇಲ್ಲಿ ಶೃಂಗಾರದ ಕಿಂಚಿದ್ಗಾಢ ರೂಪವನ್ನೂ ಹಾಸ್ಯವೀರಗಳನ್ನೂ ತೋರಿಸಬೇಕಾದ ಕಾರಣ ವೈವಿಧ್ಯವೂ, ಜವಾಬ್ದಾರಿಯೂ ಹೆಚ್ಚೇ.

ಸಾರತಃ ತಿಳಿಸುವುದಾದರೆ ಶಾಸ್ತ್ರೀಯನೃತ್ಯದಲ್ಲಿ ನಾಯಕಾಭಿನಯವು ನಾಯಿಕಾಭಿನಯಕ್ಕಿಂತಲೂ ಪ್ರೌಢ, ಕ್ಲಿಷ್ಟ, ರಂಜನೀಯ. ಏಕೆಂದರೆ ರಸಗಳೆಲ್ಲವೂ ನಾಯಕಾಶ್ರಿತವೆಂದೇ ಆರ್ಯೋಕ್ತಿಯುಂಟು. (ನಾಯಕಾಶ್ರಿತಾಃ ರಸಾಃ) ಆದುದರಿಂದ ಇಂಥ ಮಹತ್ತ್ವಾಂಶವನ್ನು ನರ್ತನದಲ್ಲಿ ಪ್ರಧಾನವಸ್ತುವನ್ನಾಗಿಸಿ ನಮ್ಮ ನರ್ತಕಿಯರೂ- ವಿಶೇಷತಃ ಅತ್ಯವಶ್ಯವಾಗಿ, ಅನ್ಯಾಲೋಚನೆಯಿಲ್ಲದೆ ನಮ್ಮ ನರ್ತಕರೂ ನರ್ತಿಸಿ ಸಹೃದಯರಿಗೆ ಆನಂದವನ್ನಿತ್ತು ತಾವೂ ನಾಟ್ಯವೇದದ ಪರಮೋಚ್ಚಸ್ತರದ ಸಾತ್ತ್ವಿಕರಸಾಭಿನಯದಲ್ಲಿ ವಿಜೃಂಭಿಸಲೆಂದು ಹಾರೈಸುತ್ತೇನೆ.

 

ಮುಂದುವರಿಯುವುದು

ಮುಂದಿನ ಸಂಚಿಕೆಯಲ್ಲಿ : ಅಷ್ಟನಾಯಕರ ಚಿತ್ತವೃತ್ತಿಯ ಪ್ರಾರಂಭ…ನಿರೀಕ್ಷಿಸಿ..


Leave a Reply

*

code