ಅಂಕಣಗಳು

Subscribe


 

ಯಕ್ಷ ಭಾಗವತಿಕೆಯ ಶೈಲಿಪ್ರವರ್ತಕ : ನೆಬ್ಬೂರು ನಾರಾಯಣ ಭಾಗವತರು

Posted On: Saturday, June 15th, 2019
1 Star2 Stars3 Stars4 Stars5 Stars (No Ratings Yet)
Loading...

Author: -ರವಿಶಂಕರ ವಳಕ್ಕುಂಜ, ಪುತ್ತೂರು

(ಡಿಸೆಂಬರ್ ೧೬, ೧೯೩೬ – ಮೇ ೧೧, ೨೦೧೯)

ವೇಗದ ಹಾಡುಗಾರಿಕೆಯಲ್ಲಿ ಕಥೆಯು ಓಡುತ್ತಿರುತ್ತದೆ ವಿನಹಾ ಸ್ಥಾಪನೆಯಾಗುವುದಿಲ್ಲ. ಭಾಗವತಿಕೆಯಲ್ಲಿ ಹಾಡಿನ ಶೈಲಿ ಆಕರ್ಷಕ ವಾಗಿರುವುದಕ್ಕಿಂತ ರಂಗಸ್ಥಳದಲ್ಲಿ ಒಂದು ಕಥೆ, ಪಾತ್ರ, ಪಾತ್ರದ ಭಾವ ಇವಕ್ಕೆ ಹಿಮ್ಮೇಳದವರು ಒದಗಬೇಕಾಗಿರೋದು ಮುಖ್ಯ. ಹಾಡುಗಾರಿಕೆಯಲ್ಲಿ ಭಾವನೆಗಳು ತುಂಬಿರಬೇಕು. ಕರುಣ ಭಕ್ತಿ ದುಃಖರಸಗಳು ಹೆಚ್ಚು ಪರಿಣಾಮವನ್ನು ಬೀರುತ್ತವೆ. ರೌದ್ರ ವೀರರಸಗಳಲ್ಲಿ ಹೆಚ್ಚು ಸ್ಪಷ್ಟತೆ ಇರಲಾರದು. ಆ ಹೊತ್ತಿನಲ್ಲಿ ಒಂದು ಸಲ ವಿಜೃಂಭಿಸಿ ಬಿಡುತ್ತದೆ. ಬಹಳ ಹೊತ್ತು ಪರಿಣಾಮ ಉಳಿಯಲಾರದು. ಕೆರೆಮನೆ ಶಿವರಾಮ ಹೆಗಡೆಯವರು ನಿರೀಕ್ಷಿಸಿದ ಮಟ್ಟಕ್ಕೆ ಮುಟ್ಟಲಾಗಲಿಲ್ಲ ಎಂಬ ಬೇಸರವಿದೆ. ಶೇಣಿಯವರ ಬಗೆಗೆ ಅಪಾರ ಗೌರವವಿದೆ. ಅವರ ತಾಳಮದ್ದಳೆಯ ಅರ್ಥಗಾರಿಕೆಗೆ ಪದ್ಯ ಹೇಳಿದ್ದೇನೆ. ಶೇಣಿ ಪ್ರಶಸ್ತಿಯೂ ನನಗೆ ಬಂದಿತ್ತು. ಶೇಣಿಯವರ ಹೆಸರಿನ ಪ್ರಶಸ್ತಿ ಪಡೆಯುವಾಗ ಯಮ ಕೂಡ ಎದೆ ಮುಟ್ಟಿ ನೋಡಿಕೊಳ್ಳಬೇಕಾಗುತ್ತದೆ. ನಾನು ಶ್ರೇಣಿ ಪ್ರಶಸ್ತಿಗೆ ಅರ್ಹನೇ ಎಂಬ ಭಾವನೆ ಮೂಡಿತ್ತು. ಶೇಣಿಯವರ ಆಯ್ಕೆ ನಾನೇ ಆಗಿದ್ದೆ. ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಮತ್ತು ಶೇಣಿ ಪ್ರಶಸ್ತಿ ಇವೆರಡು ನನ್ನ ಬದುಕಿನ ಆಸ್ತಿ ಇಬ್ಬರೂ ಮೇರು ಮಂಧರ ಸದೃಶ್ಯರು.

ಭಾಗವತರನ್ನು ತಯಾರಿಸಲು ನನ್ನಲ್ಲಿ ಗುಳಿಗೆ ಮಾತ್ರೆಗಳಿಲ್ಲ. ಅವರಾಗಿ ಆಸಕ್ತಿ ತೋರಿ ಬಂದರೆ ಕಲಿಸಬಹುದು. ನನ್ನ ಹತ್ತಿರ ಯಾರೂ ಕೇಳಲಿಲ್ಲ. ಯಾರು ಬರಲೂ ಇಲ್ಲ॒

ಮೇಲಿನವುಗಳು ಇತ್ತೀಚೆಗೆ ನಮ್ಮನ್ನು ಅಗಲಿದ ಬಡಗು ತಿಟ್ಟಿನ ಹಿರಿಯ ಭಾಗವತ ಶ್ರೀ ನೆಬ್ಬೂರು ನಾರಾಯಣ ಭಾಗವತರು ಆಡಿದ್ದ ಮಾತುಗಳು. ಪ್ರಶಸ್ತಿಯನ್ನು ಸ್ವೀಕರಿಸುವ ಕಲಾವಿದನಲ್ಲಿ ಇರಬೇಕಾದ ನಿಜವಾದ ಜವಾಬ್ದಾರಿಯೆಂದರೆ ಹೀಗಿರುತ್ತದೆ. ಮಾತ್ರವಲ್ಲ ಒಂದು ವಿದ್ಯೆಯನ್ನು ಕಲಿಸುವಲ್ಲಿ ಇರಬೇಕಾದ ಗುರುವಿನ ಲಕ್ಷಣವೂ ತಿಳಿಯುತ್ತದೆ.

ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ನೆಬ್ಬೂರರಿಗೆ ಯಕ್ಷಗಾನದಲ್ಲಿ ಆಸಕ್ತಿ. ಅವರು ಕಲಿಯುತ್ತಿದ್ದ ಆಡಳ್ಳಿ ಶಾಲೆಯು ಆಗ ಸೋಗೆ ಮಾಡಿನ ಗುಡಿಸಲಿನಂತೆ ಇತ್ತಂತೆ. ಅಲ್ಲಿ ಶಿವಾನಂದ ಸ್ವಾಮಿಗಳು ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರು. ಅವರ ಮರಣದ ನಂತರ ಆಡಳ್ಳಿ ಶಾಲೆಯು ಜಿಲ್ಲಾ ಬೋರ್ಡ್ ಶಾಲೆಯಾಯ್ತು. ಅಲ್ಲಿಗೆ ಸುಬ್ರಾಯ ಬಸ್ತೀಕರ್ ಎಂಬವರು ಗೋಕರ್ಣದಿಂದ ಅಧ್ಯಾಪಕರಾಗಿ ಬಂದರು. ನೆಬ್ಬೂರರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಇವರೇ ಕಾರಣರು. ಮಕ್ಕಳ ತಂಡವನ್ನು ಕಟ್ಟಿ ಅವರಿಗೆ ನಾಟಕ-ಆಟ-ತಾಳಮದ್ದಳೆ ವಿಚಾರದಲ್ಲಿ ತರಬೇತಿ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟವರು. ಬಸ್ತೀಕರ್ ಮಾಸ್ತರರು ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು. ಶಾಲಾವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿದರು. ನಾಟಕಗಳಲ್ಲೂ ಅಭಿನಯಿಸಿದ್ದರು.

ನಾಣೀ, ನಾಣಿ ಭಾಗವತರೆಂದು ಕರೆಸಿಕೊಳ್ಳುತ್ತಿದ್ದ ನೆಬ್ಬೂರರು ಪ್ರಸಿದ್ಧಿಗಾಗಿ ಬಾಗದೆ ಬಡಗುತಿಟ್ಟಿನ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಹಾಡುಗಾರಿಕೆಯ ಕ್ರಮಕ್ಕೆ ಒಂದು ವಿಶೇಷ ಕೊಡುಗೆಯಿತ್ತವರು. ಕಲಾವಿದರ ನಟನಾಸಾಮರ್ಥ್ಯವನ್ನು ಹೆಚ್ಚಿಸುವ ತರದಲ್ಲಿ ಇವರ ಹಾಡುಗಾರಿಕೆಯಿರುತ್ತಿತ್ತು. ಈಗ ಯಕ್ಷಗಾನದ ಕಳಚಿದ ಕೊಂಡಿಗಳ ಸಾಲಿಗೆ ಇವರೂ ಸೇರ್ಪಡೆಯಾಗಿದ್ದಾರೆ ಎಂಬುದೇ ದುಃಖದ ವಿಚಾರ

Leave a Reply

*

code