ಅಂಕಣಗಳು

Subscribe


 

ಕಲಾಸಂಶೋಧನೆಯ ಪ್ರಸ್ತುತತೆ ಮತ್ತು ಅಗತ್ಯತೆ

Posted On: Sunday, April 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಲೆಯೆಂದರೇನೇ ಸತ್ತ್ವಸಂಸ್ಫೂರ್ತಿ. ಅದರೊಳಗಿನ ರಸಸೌಂದರ್ಯ ಮೋದ-ಬೋಧಗಳ ಅಖಂಡಾನುಭವ. ಆದ್ದರಿಂದಲೇ ಕಲೆಯೊಂದಿಗಿನ ಒಡನಾಟದಲ್ಲಿ ಎಷ್ಟೇ ವಿಘ್ನಗಳೆದುರಾದರೂ ಅದು ಈಯುವ ಜೀವನವನ್ನು-ನಮ್ಮನ್ನು ಮರುಶೋಧಿಸಿಕೊಳ್ಳುವ ಕಾಣ್ಕೆಯ, ಸೌಭಾಗ್ಯದ ಮುಂದೆ ಉಳಿದದ್ದೆಲ್ಲಾ ಗೌಣವೆನಿಸುತ್ತದೆ. ಭಾವಬುದ್ಧಿಗಳಿಗೆ ಸಂಸ್ಕಾರವನ್ನೂ, ಸತ್ತ್ವೋದ್ರೇಕಗಳಿಗೆ ಪರಮಾವಕಾಶವನ್ನೂ ನೀಡುವ ಬೊಗಸೆಯನ್ನು ಮೊಗೆಮೊಗೆದು ಹೀರುವ ಹಜ್ಜೆ ಹಜ್ಜೆಗೂ ಜೀವನ ಚೈತ್ಯನ್ಯ ಪುಟಿಯುತ್ತಿರುತ್ತದೆ. ಅದರಲ್ಲೂ ಕಲೆಯ ಅಧ್ಯಾತ್ಮನಿಷ್ಠೆಯಾದ ರಸವನ್ನೂ, ಆ ಮೂಲಕ ಭಗವತ್ ದರ್ಶನವನ್ನೂ ಕಾಣುವ ಹೆಜ್ಜೆಯಲ್ಲಿ ನಮ್ಮನ್ನು ತೇಯುವುದು ನಿಜಕ್ಕೂ ಗಂಧದ ಕೊರಡಿನ ಅನುಭವವೇ ಸರಿ. ಅಂತಹ ಸುಸಂದರ್ಭ ಒದಗಿದ್ದು ಮಹಾಶಿವರಾತ್ರಿಯ ಸುದಿನದಂದು.

ಬೆನ್ನತ್ತಿ ಬಂದ ಬೇಗುದಿ, ಅನವರತ ಆತಂಕ, ಗಡಿಬಿಡಿಯ ಓಡಾಟ, ಸಮಯದ ಹೊಂದಾಣಿಕೆಯಲ್ಲಾಗುವ ಸಂದಿಗ್ಥತೆ, ಅಳುಕು, ಅಳು-ನಗು..ಹೀಗೆ ಸಂಘಟನೆಯ ಹಿಂದಿನ ಸಂಕಟಗಳಿಂದಾಚೆಗೂ ಧನ್ಯತೆಯನ್ನೂ; ಕೃತಕೃತ್ಯತೆಯ ನೆನವರಿಕೆಗಳನ್ನು, ಪರಸ್ಪರ ಕೈಹಿಡಿದು ಮುನ್ನಡೆವ ದಾರಿಯನ್ನು, ಸಾಧಿಸುವ ಛಲವನ್ನು, ಕಣ್ಣಂಚಿನಲ್ಲಿ ಆನಂದದ ಹನಿ ನೀರನ್ನು ಇತ್ತದ್ದು ಕರ್ನಾಟಕದ ಮೊದಲ ನೃತ್ಯ ಸಂಶೋಧನಾ ವಿಚಾರಸಂಕಿರಣ. ನಾಲ್ಕು ಪ್ರಬುದ್ಧ ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ವಿಮರ್ಶಾ ಪ್ರಶಸ್ತಿ, ಹಿರಿಯ ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ ಮತ್ತು ಎಲ್ಲಾ ಪ್ರಯತ್ನಕ್ಕೂ ಭವಿತವ್ಯದಲ್ಲಿ ಸಿದ್ಧ ಅಡಿಪಾಯ ಡುವಂತೆ ಒಲುಮೆಯ ಗೆಳೆಯರ ಸದಾಶಯದೊಂದಿಗೆ ಪ್ರಾರಂಭವಾದ ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ. ಒಟ್ಟಿನಲ್ಲಿ ಇಡೀ ದಿನದ ಎಲ್ಲಾ ವಿಚಾರ-ವಿಶೇಷಗಳನ್ನು ಬರೆಯಹೊರಟರೆ ಪುಟಗಟ್ಟಲೆ ಸಾಲದು.

ಹಾಗೆ ನೋಡಿದರೆ ನಮ್ಮೊಳಗಿನ ಕೊರತೆ, ವಿಫುಲತೆ, ಅವಕಾಶ, ಅಗತ್ಯಗಳ ಸಾಕಾರ ದರ್ಶನವಾಗುವುದೂ ಇಂತಹ ಸಂದರ್ಭದಲ್ಲಿಯೇ. ಒಂದರ್ಥದಲ್ಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ಋಷಿವಾಕ್ಯವನ್ನು ಆಗಾಗ್ಗೆ ಮನದಟ್ಟು ಮಾಡಿಕೊಂಡರೆ ಆ ಮೂಲಕವಾಗಿ ನಮ್ಮಿಂದ ಕಲೆಯ ಒಟ್ಟಂದಕ್ಕೆ ಒದಗಬೇಕಾದ ಸೊಬಗಿನ ದರ್ಶನವೂ ಆಗುತ್ತದೆ. ಒಂದೆರಡು ದಿನವೆನ್ನದೆ ತಿಂಗಳಾನುಗಟ್ಟಲೆ ಇಂತಹ ಒಂದು ಧನ್ಯಮಿಲನಕ್ಕೆ ಸ್ಫೂರ್ತಿಯನ್ನೀವ ಕಾರ್ಯಕ್ರಮವನ್ನು ರೂಪಿಸುವಲ್ಲಿ ಅದೇನೇ ಜಂಜಡ-ಒತ್ತಡಗಳಿದ್ದರೂ ಕೂಡಾ, ಕಾತರಿಕೆಯ ಚಡಪಡಿಕೆಗಳು ಮತ್ತಷ್ಟು ಬದ್ಧತೆಯನ್ನು ನೀಡುತ್ತಾ ಸಾಗುತ್ತದೆ; ನಮ್ಮೆಲ್ಲರನ್ನೂ ಜೀವಂತಿಕೆಯಿಂದ ತುಡಿಯುವಂತೆ ಮಾಡುವಲ್ಲಿ; ನವೋನ್ಮೇಷ ನವಚೈತನ್ಯದ ಬುಗ್ಗೆಯನ್ನುಕಿಸುವಲ್ಲಿ ಇಂತಹ ಯೋಚನೆ-ಯೋಜನೆಗಳು ನಮ್ಮನ್ನು ಸದಾ ಕಾರ್ಯತತ್ಪರರಾಗುವ ಅನುಭವ ನಿಜಕ್ಕೂ ಅಸದೃಶ. ಸಮಗ್ರವಾಗಿ ಹೇಳುವುದಾದರೆ ಹನಿಗೂಡೆ ಹಳ್ಳ; ತೆನೆಗೂಡೆ ಬಳ್ಳ ಎಂಬ ಮಾತಿಗೆ ಸಾಕಾರ ರೂಪ.

ಒಟ್ಟಿನಲ್ಲಿ ಕಲಾಸಂಶೋಧನೆಯ ವ್ಯಾಪ್ತಿಯ ಅರಿವನ್ನು ಸ್ಪಷ್ಟಪಡಿಸಿಕೊಳ್ಳುತ್ತಾ ಹೊಸ ಹೊಳಹುಗಳನ್ನು ಕಾಣುತ್ತಾ, ಶೋಧದ ದಾರಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮಿಂದಾದ ಈ ಕಿರುಪ್ರಯತ್ನದ ತುಂಬಾ ಧನ್ಯತೆ ಮನೆಮಾಡಿದೆ. ಇಂತಹ ಸಾರ್ಥಕ ಸನ್ನಿವೇಶಕ್ಕೆ ನೆರವಿತ್ತ ಸಕಲ ಸಹೃದಯರಿಗೂ, ಭಾಗವಹಿಸಿ ಪ್ರೋತ್ಸಾಹಿಸಿದ ಸಮಸ್ತ ಮಹನೀಯರಿಗೂ ಆದರಾಭಿಮಾನದ ಅನಂತ ಅಭಿವಂದನೆ.

ನೂಪುರ ಭ್ರಮರಿ ಪತ್ರಿಕೆಯಾಗಿ, ಪ್ರತಿಷ್ಠಾನವಾಗಿ, ಪ್ರಕಾಶನವಾಗಿ, ಒಕ್ಕೂಟವಾಗಿ ಬೆಳೆಯುವ ಈ ಹಂತಕ್ಕೆ ಸಾಕಷ್ಟು ಮಂದಿ ಕೈಜೋಡಿಸಿದ್ದಾರೆ; ಸಲಹಿದ್ದಾರೆ; ಪೋಷಣೆಯಿತ್ತು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಕಾರಣ, ಇದು ಓರ್ವ ವ್ಯಕ್ತಿಗೆ ಮೀಸಲಾದ ಸಂಸ್ಥೆಯಲ್ಲ. ದುಡಿಯುವ ಸಮಸ್ತರಿಗೂ ಸೇರಿದ್ದು. ಈ ಧೈರ್ಯದಲ್ಲೇ ನಮ್ಮ ನೃತ್ಯ ಸಂಶೋಧಕರ ಒಕ್ಕೂಟದಿಂದ ಮತ್ತೊಂದಷ್ಟು ಯೋಜನೆಗಳು ರೂಪ ಪಡೆದುಕೊಳ್ಳುತ್ತಿವೆ. ಸಂಶೋಧಕರಿಗೆಂದೇ ಗ್ರಂಥಾಲಯ ರೂಪುರೇಷೆ, ಮಾಸಿಕ ಉಪನ್ಯಾಸ-ಕಾರ್ಯಾಗಾರ, ಸಂಶೋಧನಾ ಶೈಕ್ಷಣಿಕ ತರಗತಿಗಳು, ವಿಚಾರಸಂಕಿರಣದ ಸಮಗ್ರ ನೋಟವನ್ನು ದಾಖಲಿಸುವಲ್ಲಿ ಮುಂದಿನ ವರುಷದ ವೇಳೆಗೆ ಕ್ರಮಬದ್ಧವಾದ ಸಂಶೋಧನಾ ಸಂಕಲನ ಒಕ್ಕೂಟದ ಮುಂದಿನ ನಡೆಗಳು.

ಕಲಾಸಂಶೋಧನೆಯ ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಡಾವಳಿಗಳ ಅಗತ್ಯತೆ ಮನಗಂಡು ಭಾರತೀಯ ಸಂಶೋಧನಾ ನೆಲೆಯನುಸಾರವಾಗಿ ಕಲೆಗೆ ಒದಗಬೇಕಾದ ಸಂಸ್ಪರ್ಶಗಳನ್ನೇ ಮುಖ್ಯ ಉದ್ದೇಶವಾಗಿ ಹೊತ್ತು, ವಾಸ್ತವದ ಇತಿಮಿತಿಯನ್ನು ಅರಿತು ಮುನ್ನಡೆಯುತ್ತಿದ್ದೇವೆ. ಕಲೆಗೆ ಎಷ್ಟರಮಟ್ಟಿಗೆ ಕೊಡುಗೆ ನೀಡಬಹುದು ಎಂಬ ದಾರ್ಷ್ಟ್ಯಕ್ಕಿಂತ ಹೆಚ್ಚಾಗಿ ನಮ್ಮೆಲ್ಲರ ಮತ್ತು ಭವಿಷ್ಯದಲ್ಲಿ ಆಶೋತ್ತರ ಹೊತ್ತು ಬರುವ ಹಲವರ ನಡುವಿನ ಶ್ರಮವನ್ನು ಎಷ್ಟರಮಟ್ಟಿಗೆ ಫಲಪ್ರದವಾಗಿಸಿಕೊಳ್ಳಬಹುದು ಎಂಬುದರತ್ತ ನಮ್ಮ ನಿಲುವು.

ಕಲೆ ಮತ್ತು ಸಂಶೋಧನೆಯ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುತ್ತಾ ಕಾಲಕಾಲಕ್ಕೂ ಅಗತ್ಯವಾದ ರಸದೃಷ್ಟಿ, ಕಾಲ-ದೇಶಕ್ಕೆ ಪೂರಕವಾದ ಔಚಿತ್ಯಪ್ರಜ್ಞೆಯನ್ನು ಕಾಯ್ದುಕೊಳ್ಳಬೇಕೆಂಬ ಹಪಹಪಿಕೆ ನಮ್ಮದು. ಜೊತೆಗೆ ಪ್ರದರ್ಶಕ ಕಲೆಯೆಂಬ ಮಾತ್ರಕ್ಕೆ ಶಾಸ್ತ್ರ-ಪ್ರಯೋಗದ ಔಚಿತ್ಯ, ನಾವೀನ್ಯಗಳು ವುರೆಯಾಗುತ್ತಿರುವ ಹೊತ್ತು ಇಂತಹ ಒಂದು ಪ್ರಯತ್ನ ಚಿಗುರೊಡೆಯಬೇಕಗಿದೆ ಎಂಬುದನ್ನೇ ಆಶಯವಾಗಿರಿಸಿ ಒಂದಷ್ಟು ಗುರಿ, ಪರಿಕಲ್ಪನೆಗಳನ್ನು ಜೊತೆಗಿಟ್ಟು ಸಾಹಸಕ್ಕೆ ಮುಂದಾಗುತ್ತಿದ್ದೇವೆ. ನಿಮ್ಮ ಸಲಹೆ-ಸೂಚನೆಗಳು ರಸಸೌಂದರ್ಯವನ್ನು, ಜೀವಚೈತನ್ಯವನ್ನು ಶೋಧಿಸುತ್ತಾ, ದರ್ಶಿಸುತ್ತಾ ನಮಗೆ ಪ್ರೇರಕ, ಪೋಷಕವಾಗಲಿ. ನಮ್ಮೆಲ್ಲರೊಳಗಿನ ಅಮೂರ್ತಶಕ್ತಿಯನ್ನು ಮೂರ್ತರೂಪಕ್ಕಿಳಿಸಲಿ. ಸಂಶೋಧನಾ ಸತ್ರದಲ್ಲಿ ಒಂದಾಗಲಿಚ್ಛಿಸುವ ಮನಸ್ಸುಗಳಿಗೆ ಸೇತು ಬೆಸೆಯುವ ಕಾರ್ಯ ಕರುನಾಡಿನಿಂದಲೇ ಮೊದಲ್ಗೊಳ್ಳಲಿ. ಆಶಯ ನಮ್ಮದು. ಹಾರೈಕೆ ನಿಮ್ಮದು.

Leave a Reply

*

code