ಅಂಕಣಗಳು

Subscribe


 

ನಾಯಕಾಭಿನಯ- ನಿರೀಕ್ಷಕ

Posted On: Monday, April 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ಆರ್. ಗಣೇಶ್

ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ರಾಗ-ತಾಳಗಳನ್ನೂ ಸ್ವತಃ ಶತಾವಧಾನಿ ಗಣೇಶರೇ ಸಂಯೋಜಿಸಿದ್ದು ; ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ. ಪಾಂಥ, ಭಾಮೀನೀಭೀತ, ಅಭಿಸಾರಕರ ನಂತರ ಇದೀಗ ನಿರೀಕ್ಷಕನ ಸರದಿ. ನಮ್ಮ ಈ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…

ಹೆಸರೇ ಸೂಚಿಸುವಂತೆ ನಾಯಿಕೆಯನ್ನು ಅರಸಿ ಬಂದ ಅಭಿಸಾರಕ ಇದೀಗ ನಿರೀಕ್ಷಕನಾಗಿದ್ದಾನೆ. ಇವನು ವಿಪ್ರಲಬ್ಧಾ ಅವಸ್ಥೆಯ ಸಮಾನಾಂತರ ಪ್ರತಿರೂಪ. ಪ್ರಸ್ತುತ ಕಾವ್ಯದಲ್ಲಿ ನಾಯಿಕೆಯು ದೂತಿಯ ಮೂಲಕ ವಾಗ್ದಾನ ನೀಡಿದ್ದಾಳೆ. ಅದರಂತೆ ಎಲ್ಲ ಕಾರ್ಯಭಾರಗಳನ್ನು ಬದಿಗೊತ್ತಿ, ಸಂಕೇತಸ್ಥಳದಲ್ಲಿ ಕಾಯುತ್ತಿರುವ ನಾಯಕನೇ ನಿರೀಕ್ಷಕ. ಆದರೆ ಆಕೆಯ ಆಗಮನವಾಗಿಲ್ಲ; ಎಲ್ಲಿಯೂ ಅವಳ ಸುಳಿವಿಲ್ಲ. ಇದರಿಂದ ನಿರೀಕ್ಷಕ ಬೇಸರ, ಹತಾಶೆ, ಅಸಮಾಧಾನ, ವಿನಾಕಾರಣ ಭೀತಿ-ಯೋಚನೆಗೊಳಗಾಗುತ್ತಾನೆ. ನಿಟ್ಟುಸಿರು, ವ್ಯಥೆ, ಬಳಲಿಕೆ ಈತನನ್ನು ಆವರಿಸುತ್ತದೆ. ಮತ್ತಾರಿಗಾದರೂ ಮರುಳಾದಳೋ ಎಂಬ ಶಂಕೆ ಕಾಡುತ್ತದೆ. ತನ್ನೆಲ್ಲಾ ಬಿಂಕ-ಬಿಗುಮಾನ-ಪುರುಷ ಸಹಜ ಗಾಂಭೀರ್ಯವನ್ನು ತೊರೆದು ಅವಳಿಗಾಗಿ ಓಡೋಡಿ ಬಂದರೂ ಆಕೆಯ ಪತ್ತೆಯಿಲ್ಲ ಎಂಬ ಕೊರಗು ಜೊತೆಗೆ. ಅದರ ಬೆನ್ನಿಗೇ ಮನೆಯವರು, ಸುತ್ತಮುತ್ತಲ ಜನರ, ಗೆಳತಿಯರ ಮಾತುಗಳು ಅವಳಲ್ಲಿ ಬದಲಾವಣೆ ತಂದಿತೇ ಎಂಬ ಆತಂಕ ಬೇರೆ ! ಒಟ್ಟಿನಲ್ಲಿ ನಾಯಿಕಾಗಮನದ ನಿರೀಕ್ಷೆಯೇ ಆತನನ್ನು ಉದ್ವಿಗ್ನಗೊಳಿಸಿ ನಿಂತಲ್ಲಿ ನಿಲ್ಲದೆ; ಕುಳಿತಲ್ಲಿ ಕೂರದೆ ಚಡಪಡಿಸುವಂತೆ ಮಾಡಿದೆ.

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಪ್ರೀತಿ-ನಡವಳಿಕೆ, ಸುತ್ತಮುತ್ತಲ ಪ್ರಕೃತಿ, ಜನರ ನಡವಳಿಕೆಗಳು ಈತನಿಗೆ ಉದ್ದೀಪನ ವಿಭಾವ. ಶಂಕೆ, ಆತಂಕ, ಚಿಂತನ, ಅಂಜಿಕೆ, ವ್ಯಥೆ, ನಿರೀಕ್ಷೆ ಈತನಲ್ಲಿ ಕಂಡುಬರುವ ವ್ಯಭಿಚಾರಿಭಾವಗಳು. ಸಸ್ಯಸಂಪತ್ತಿನ ಭೂಮಿ, ನಿರ್ಜನಪ್ರದೇಶ, ಜೀರ್ಣಾವಸ್ಥೆಯ ದೇವಾಲಯ, ದೂತಿಯ ಮನೆ, ಅರಣ್ಯ, ನದೀ ತಟಾಕ, ಉಪವನ, ಉದ್ಯಾನ, ಸ್ಮಶಾನ, ಸಮುದ್ರತೀರ, ಸೇತುವೆ ಈತನ ನಿರೀಕ್ಷೆಯ ಸ್ಥಾನಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

 

 ರಾಗ : ಪಹಾಡಿ ; ತಾಳ : ಆದಿ

 

ಸಂಕೇತಸ್ಥಳ ಸಂಗತ

ನಂಕುರಿತಾಶಂಕೆಯಿಂದೆ ನೊಂದ ವಿಶೇಷಾ-

ಲಂಕಾರ ನಾಯಕನೆನಲ್

ಸಂಕಲ್ಪಜವಿದ್ದನೀ ನಿರೀಕ್ಷಕಸಂಜ್ಞಂ ||

 

ಇಲ್ಲಿಗೆ ಬಾರೆಂದು ಸೊಲ್ಲಿಸಿದವಳೆಲ್ಲಿ?

ನಲ್ಲನನೇಂ ಮರೆತಳೇ- ಪ್ರಫುಲ್ಲೆಯು ||ಪ||

 

ಕಾರ್ಯಭಾರಗಳನ್ನು ಜರಿದು ಬಂದೆ

ಆರ್ಯಧೀರತೆಯನ್ನು ತೊರೆದು ಬಂದೆ |

ವಾರ್ಯವಾಕ್ಯಗಳನ್ನು ಮರೆತುಬಂದೆ ವಿ-

ಚಾರ್ಯಮನೋಜ್ಞೆಯ ಗುರುತೆಲ್ಲಿ ? || ೧ ||

 

ದೂತಿಯ ಮೂಲಕ ಮಾತನಿತ್ತವಳು

ಪ್ರೀತಿಯ ಮೂಲಕ ಪಾಲಿಸಿದವಳು |

ಏತಕಿಂದಿಗೂ ಸುಳಿಯದಾದಳು !

ಸೋತಳೇನು ಮತ್ತಾರಿಗಾದರೂ ? || ೨ ||

 

ಮನೆಯ ಮಂದಿ ಮತ್ತೇನೇನೆಂದರೋ ?

ಜನತೆಯ ನಂಜಿನ ನುಡಿಯಂಜಿಸಿತೋ |

ಅನುನಯದಾಲಿಯರೇನುಸಿರಿದರೋ

ಮನವ ಬದಲಿಸಿತೆನೊ- ಮತ್ತೇನೋ ? || ೩ ||

Leave a Reply

*

code