ಅಂಕಣಗಳು

Subscribe


 

’ನೂಪುರ’ ನಮ್ಮನ್ನು ನಮಗೆ ಮುಖಾಮುಖಿಯಾಗಿಸಿದೆ

Posted On: Thursday, January 15th, 2015
1 Star2 Stars3 Stars4 Stars5 Stars (No Ratings Yet)
Loading...

Author:   - ಕೀರಿಕ್ಕಾಡು ವನಮಾಲಾ ಕೇಶವ ಭಟ್, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಕಾಸರಗೋಡು.

ಕಳೆದ ಸಲದ ಸಂಚಿಕೆಯಲ್ಲಿ ಮಾಯಾರಾವ್ ಮತ್ತು ಅಡೆಯಾರ್ ಲಕ್ಷ್ಮಣ್ ಅವರ ಕುರಿತ ನುಡಿನಮನ ಅಂಜಲಿಯ ಲೇಖನಗಳಿಗೆ ಮತ್ತು ಅವರ ಬದುಕಿನ ವೈಶಿಷ್ಟ್ಯಪೂರ್ಣ ಪರಿಚಯ ಬರೆಹ-ಸಂದರ್ಶನಕ್ಕೆ ಅನೇಕ ಪ್ರಶಂಸನಾರ್ಹ ಪ್ರತಿಕ್ರಿಯೆಗಳು ಬಂದಿವೆ. ಅಗಲಿದ ಚೇತನಗಳಿಗೆ ಸದ್ಗತಿಯನ್ನು ಕೋರಿದ ಓದುಗ ಸಹೃದಯರ ಅಭಿಮಾನಕ್ಕೆ ಅನಂತ ಅಭಿವಂದನೆಗಳು.

ಮುಖಪುಟದಲ್ಲಿ ರೂಪದರ್ಶಿಯಾಗಿ ಮಿನುಗಿ ಸಂಚಿಕೆಯ ಕಳೆಯೇರಿಸಿದ ರೇಖಾ ಹೆಗಡೆಯವರಿಗೆ ಅಭಿನಂದನೆ. ‘ದೂಪಾರತಿಯನು ನೋಡಬನ್ನಿ’ ಎಂದು ಕರೆಕರೆದು ತೆರೆದಿಟ್ಟ ಸಂಚಿಕೆ ಹಾಸ್ಯಲೇಪನದ ಸಂಭಾಷಣೆಗಳಿಂದ ನೃತ್ಯಕಾರ್ಯಕ್ರಮದ ರೀತಿನೀತಿಯೊಂದನ್ನು ಹದವಾಗಿ ಮನಮುಟ್ಟುವಂತೆ ತೆರೆದಿಟ್ಟಿತು. ನಮ್ಮನ್ನು ನಮಗೆ ಮುಖಾಮುಖಿಯಾಗುವಷ್ಟರ ಮಟ್ಟಿಗಿನ ನೈಜತೆ ಇಷ್ಟವಾಯಿತು. ಅದೂ ಸಾಲದೆಂಬಂತೆ ಹಿರಿಯ ಜೀವಗಳ ನಡುವಿನ ಸಂಭಾಷಣಾರೂಪದ ನಿರೂಪಣೆ ಹಿರಿಯ ಕವಿ ಮುದ್ದಣ ಮನೋರಮೆಯರ ನೆನಪನ್ನೂ ತರಿಸಿತು.

ಒಟ್ಟಿನಲ್ಲಿ ನೂಪುರ ಭ್ರಮರಿಯೆಂಬ ಕಿರಿ ನಿಯತಕಾಲಿಕೆಯು ಪರಿಪೂರ್ಣವಾಗಿ ಪ್ರದರ್ಶಕ ಕಲೆಗಳ ಆಳ ಅಗಲಗಳನ್ನು ಬಿಚ್ಚಿಡುವಂತಹದ್ದು ಎಂಬುದು ಸ್ಪಷ್ಟ. ಅಂತರ್ರಾಷ್ಟ್ರೀಯ ಕಲಾವಿದೆ ಡಾ.ಮಾಯಾರಾವ್ ಅವರ ಅಪೂರ್ವವಾದ ಚಿತ್ರಗಳನ್ನು ಪ್ರಾತ್ಯಕ್ಷೀಕರಿಸಿ ನುಡಿನಮನ ನೀಡಿಕೆಯೊಂದಿಗೆ ಪ್ರಕಟಿಸಿದುದು ಯಥೋಚಿತವೂ, ಕರ್ತವ್ಯವೂ ಹೌದೆಂಬುದರ ನೆನವರಿಕೆಗಾಗಿ ಹರಿದುಬಂದಿದೆ. ಓದುಗರ ಕಣ್ಣಾಲಿಗಳೂ ತೇವಗೊಂಡಿವೆ. ಇನ್ನಷ್ಟು ಮಾಯಾದೀದಿಯರನ್ನು ಕರುಣಿಸೆಂಬ ಪ್ರಾರ್ಥನೆ ತಾಯಿ ಭಾರತಿಯಲ್ಲಿದೆ. ಸರ್ವಶಕ್ತಿಸಂಜಾತೆಗೆ ನಮೋ ನಮಃ.

ಕಲಾಜಗತ್ತು ಎಂದರೆ ಏನು? ಕಲೆ ಎಂದು ನಾವು ಯಾವುದನ್ನೆಲ್ಲಾ ಸೇರಿಸಿಕೊಳ್ಳಬಹುದು? ಎಂದು ಎಣಿಕೆ ಕಾಣುತ್ತಿದ್ದ ಹಾಗೆ ಕೆಲಸಾವಳಿಗಳನ್ನು ಮಾಡಿಸುತ್ತಿದ್ದ ಮೇಸ್ತ್ರಿಯೊಬ್ಬ ಹೆಣ್ಮಗಳ ಕೆಲಸಗಳ್ಳತನವನ್ನು ನಾಜೂಕಾಗಿ ಸಾವರಿಸಿ ತನಗೆ ಬೇಕಾದಂತೆ ಕೆಲಸ ಮಾಡಿಸಿದ ಜಾಣತನವನ್ನು ನೋಡಿ ಇದೂ ಒಂದು ಕಲೆಯೇ ಅಲ್ಲವೇ ಎಂದು ಹೊಳೆಯಿತು. ಕೆಲಸ ಮುಡಿಸುವುದೂ ಒಂದು ಕಲೆ. ಕಲೆ ಎಂಬುದು ಒಂದು ಬಲೆ. ಈ ಬಲೆ ನೇಯ್ದ ಹಾಗೆ ಪಕ್ಕನೆ ಮುಗಿಯುವಂಥದ್ದಲ್ಲ. ಮನರಂಜನೆ, ಮನೋವಿಕಾಸ, ಮನಃ ಶಾಂತಿಗಾಗಿ ಇರುವ ನೃತ್ಯಾದಿ ಕಲೆಗಳಂತೆಯೇ ಮಂತ್ರವಾದ, ಅಡುಗೆ, ಪೌರೋಹಿತ್ಯವೂ ಆಯಾಯ ನೆಲೆಯಲ್ಲಿ ಈ ಬಲೆಯ ಕುಣಿಕೆಯಲ್ಲರಳುವ ಜೀವನಕಲೆಗಳು.

ಜೀವನವೇ ಒಂದು ಕಲೆ ಎಂದು ಸುಮ್ಮನೆ ಹೇಳುತ್ತಾರೇನು? ಕೌಟುಂಬಿಕ ಜೀವನದಲ್ಲಿಯೂ ಸಹ ಭಿನ್ನ ಭಿನ್ನ ವ್ಯಕ್ತಿತ್ವದ ಸಂಬಂಧಗಳನ್ನು ಒಟ್ಟಾಗಿ ಒಗ್ಗಟ್ಟಾಗಿ ಸುಧಾರಿಸಿಕೊಂಡು ಬಾಂಧವ್ಯ ಕಾಪಾಡಿಕೊಂಡು ಹೋಗುವುದೂ ಒಂದು ಕಲೆಯೇ ಸರಿ. ಕಾಡುಮೇಡು- ಬೆಟ್ಟ ಗುಡ್ಡ- ಮೃಗಪಕ್ಷಿಗಳ ಚಟುವಟಿಕೆ, ಹೂಂಕಾರ-ಓಂಕಾರನಾದಗಳೂ ಪ್ರಕೃತಿದತ್ತವಾದ ದೈವಸೃಷ್ಟಿಯ ಒಂದು ಕಲೆಯೇ ಹೌದು. ಈ ಬಲೆಯ ಗಾತ್ರ ಎಣಿಸಿದಷ್ಟೂ ಏರುತ್ತಲೇ ಹೋಗುತ್ತದೆ.  ಏನೇ ಇರಲಿ, ಸೃಷ್ಟಿ ವೈಚಿತ್ರ್ಯವೆಲ್ಲವೂ ಕಲೆಯೇ ಸರಿ. ನೀ ಮಾಯೆಯೋ, ನಿನ್ನೊಳು ಮಾಯೆಯೋ ಎಂಬ ಆರ್ಯೋಕ್ತಿ ಅಕ್ಷರಶ ಸತ್ಯ.
ಅಜ್ಞಾನ ಆಲಸ್ಯವೆಲ್ಲವನು ಬದಿಗಿರಿಸಿ
ಸುಜ್ಞಾನ ದೀವಟಿಗೆ ಹಿಡಿದುಬಿಡು ಕಂದಾ
ವಿಜ್ಞಾನ ವೇದಿಕೆಲಿ ಇಹುದು ಇವುಗಳಿಗೆಲ್ಲ
ಬಹುಜ್ಞಾನ ವರ್ಧನೆಯ ಗುಳಿಗೆ ಮಕರಂದಾ

Leave a Reply

*

code