ಅಂಕಣಗಳು

Subscribe


 

ನೃತ್ಯ ಪಠ್ಯ

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ನೃತ್ಯ ಗುರುಗಳು, ಪುತ್ತೂರು

ಕಳೆದ ಸಂಚಿಕೆಯ ಮಂಜೀರದಿಂದ ಪ್ರೇರಿತನಾಗಿ ನಾನು ಬರೆದ ಲೇಖನವಿದು. ಪ್ರಾಥಮಿಕ ಶಿಕ್ಷಣ ಮಗುವಿನ ಮಾತೃಭಾಷೆಯಲ್ಲಾಗುವಂತೆ ಕಲೆಯ ಪ್ರಾಥಮಿಕ ಶಿಕ್ಷಣವೂ ಮಾತೃಭಾಷೆಯಲ್ಲಾದರೆ ಆ ಪ್ರದೇಶದ ಹೆಚ್ಚಿನ ಪ್ರೇಕ್ಷಕರೂ ಶಿಕ್ಷಿತರಾಗುತ್ತಾರೆ ಎಂಬುದನ್ನು ನಾನು ಅನುಮೋದಿಸುತ್ತೇನೆ.

ಎಲ್ಲದರೊಳಗೂ, ಪ್ರತಿಯೊಬ್ಬರಲ್ಲೂ ತನ್ನತನ ಇರುತ್ತದೆ. ಅದು ಸಹಜ. ಅದನ್ನು ಸಾರ್ವರ್ತಿಕವಾಗಿ ಒಂದಾಗಿ ಹೇಳುವುದು ಅಸಾಧ್ಯವಾದರೂ ನಮ್ಮತನ ಎಂದು ಗುಂಪು ಮಾಡಿಕೊಂಡು ಸಾಧನೆಯನ್ನು ಮುಂದುವರೆಸಲಾಗುವುದು. ಉದಾಹರಣೆಗೆ, ಪ್ರತಿಯೊಬ್ಬ ಗುರುಗಳೂ ಭರತನಾಟ್ಯದ ಪರೀಕ್ಷೆಗಳಿಗೆ ಶಿಷ್ಯರನ್ನು ಅಧ್ಯಯನ ಮಾಡಿಸುವಾಗ ಅವರವರ ಭರತನಾಟ್ಯದ ಪರಂಪರೆಗಳಿಗೆ ಅನುಸಾರವಾಗಿ ಬಗ್ಗಿಸಿ ಒಗ್ಗಿಸಲು ಶ್ರಮವಹಿಸುತ್ತಾರೆ. ಅವರು ತಮ್ಮ ಪರಂಪರೆಯಲ್ಲಿ ಎಷ್ಟು ಸಾಧನೆ ಮಾಡಿದ್ದಾರೆ ಮತ್ತು ಎಷ್ಟು ಸಾಧಿಸಿದ್ದಾರೆ ಎಂಬ ಅಳತೆ ಸುಲಭ ಸಾಧ್ಯವಲ್ಲ. ಆದರೆ ಒಬ್ಬ ಪ್ರತಿಭಾವಂತ ಮೂಲ ವ್ಯಕ್ತಿಯಿಂದ ಪರಂಪರೆ ಸಂಪ್ರದಾಯಕ್ಕೆ ಮಹತ್ತ್ವ ಬಂದು ಅದು ಆ ಸಮಾಜದ ಒಟ್ಟು ಗೌರವಕ್ಕೆ ಪಾತ್ರವಾಗಿ ಬೆಳೆಯುತ್ತದೆ ಎಂಬುದು ಸ್ಪಷ್ಟ. ಈ ವ್ಯವಹಾರವನ್ನು ನಮ್ಮ ನೃತ್ಯ ಸಂಗೀತ ಮೊದಲಾದ ಲಲಿತಕಲೆಗಳಿಗೆ ಅನ್ವಯಿಸಿ ಹೇಳುವಾಗ ಈ ಬಾನಿ, ಮಟ್ಟು, ತಿಟ್ಟುಗಳು ಗೋಚರಿಸುತ್ತವೆ. ಇವು ಒಂದು ವ್ಯವಸ್ಥೆಗೆ ಒಳಪಟ್ಟಾಗ ಬೇರೆ-ಬೇರೆ ಪ್ರಭಾವ, ಪ್ರಚಾರಗಳ ಕಾರಣದಿಂದ ಕೆಲವು ತಾತ್ಕಾಲಿಕವಾಗಿ ಬೆಳೆಯುತ್ತವೆ ಮತ್ತು ಅಳಿದು ಹೋಗುತ್ತವೆ. ಪರಸ್ಪರ ಪ್ರಭಾವ ಪಡೆಯುವಂತಹ ಕೊಡು-ಕೊಳ್ಳುವಿಕೆಗಳು ಇರುವುದಿದೆ. ಈ ಉಳಿಯುವಿಕೆ-ಅಳಿಯುವಿಕೆಗೆ ಜನಾಶ್ರಯ, ಅಧಿಕಾರದ ಆಶ್ರಯ, ಕಲಾವಿದರ ಆರಾಧನೆಯ ಶ್ರಮದಾನ ಮುಖ್ಯ ಹೇತು.

ನಮ್ಮತನದೊಳಗಿನ ತನ್ನತನಕ್ಕೆ ಉದಾಹರಣೆಯಾಗಿ : ಡಾ. ಶಿವರಾಮ ಕಾರಂತರ ಸೋಮಿಯ ಸೌಭಾಗ್ಯ ಗೀತ ರೂಪಕವಾಗಿ ಕನ್ನಡದಲ್ಲಿ ರಂಗದ ಮೇಲೆ ಬಂದುದನ್ನು ಚುಲ್ಲೆಲ್ ತುಲ್ಲೆಲ್ ( ಮದುವೆಯ ಕುಣಿತ) ಎಂಬುದಾಗಿ ಕಾರಂತರ ಒಪ್ಪಿಗೆ ಪಡೆದು ತುಳುವಿನಲ್ಲಿ ಭಾಷಾಂತರಿಸಿ ನೃತ್ಯರೂಪಕವಾಗಿ ದುಡಿಯ ಹಿಮ್ಮೇಳದಲ್ಲಿ ಭರತನಾಟ್ಯ ಕಲಾವಿದರು ತುಳುನಾಡಿನ ಜಾನಪದ ಶೈಲಿಯಲ್ಲಿ ಪ್ರದರ್ಶನಗಳನ್ನಿತ್ತಾಗ ಅದೊಂದು ಹೊಸ ಶೈಲಿಯ ಪ್ರದರ್ಶನವಾಯಿತು. ಅಂತೆಯೇ ಅದೇ ಸಾಹಿತ್ಯವನ್ನು ಪ್ರದರ್ಶಿಸುವ ಬೇರೆ ಬೇರೆ ತಂಡಗಳು, ಬೇರೆ ಬೇರೆ ನಿರ್ದೇಶಕರ ಕಲ್ಪನೆಯೊಂದಿಗೆ, ಬೇರೆ-ಬೇರೆ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಪ್ರೆಕ್ಷಕರನ್ನು ಅನುಸರಿಸಿಯೂ ಅದರ ಪ್ರಭಾವ ಬೇರೆಯಾಗಿರುತ್ತದೆ. ಅಂತೆಯೇ ಜಯದೇವನ ಗೀತಗೋವಿಂದವನ್ನು ಶಾಸ್ತ್ರೀಯವೆನ್ನುವ ಮಾನ್ಯತೆ ಪಡೆದುಕೊಂಡ ಏಳು ನೃತ್ಯ ಸಂಪ್ರದಾಯಗಳಲ್ಲಿ ಪ್ರಯೋಗ-ಪ್ರದರ್ಶನವಾದಾಗಲೂ ಇದೇ ಬಗೆಯಲ್ಲಿ ವಿವಿಧತೆಯಿದೆ. ಅಂತೆಯೇ ಒಂದೇ ಗುರುಗಳಲ್ಲಿ ಕಲಿತ ಹತ್ತು ಮಂದಿ ಕಲಾವಿದರಲ್ಲಿ ಸ್ವಲ್ಪ ಸ್ವಲ್ಪವಾದರೂ ಭಿನ್ನತೆ ಇದ್ದೇ ಇರುತ್ತದೆ. ಆದರೆ ನರ್ತನವನ್ನು ಸಮೂಹವಾಗಿ ರಂಗದ ಮೇಲೆ ತಂದಾಗ ಈ ಭಿನ್ನತೆಯನ್ನು ಅಭಿನಯದ ಇತರ ಪರಿಕರಗಳು ಕಡಿಮೆ ಮಾಡಿಸಿಕೊಡುತ್ತದೆ.

ಒಬ್ಬನ ಹಾಗೆ ಇನ್ನೊಬ್ಬ ಇರುವುದಿಲ್ಲ. ಒಂದರ ಹಾಗೆ ಇನ್ನೊಂದು ಇರುವುದಿಲ್ಲ. ಒಬ್ಬನ ಬುದ್ಧಿ ಮಟ್ಟದಂತೆ ಇನ್ನೊಬ್ಬನದಿರುವುದಿಲ್ಲ. ಒಬ್ಬನ ದೇಹರಚನೆಯಂತೆ ಇನ್ನೊಬ್ಬನ ದೇಹವಿರುವುದಿಲ್ಲ. ಆದರೂ ಮಾನವರೆಲ್ಲಾ ಒಂದೇ ಎಂಬುದು ಕಲ್ಪನೆ. ಆದರೆ ಇಂತಹ ಭಿನ್ನತೆ, ಬೇರೆ ಬೇರೆ ಜಾತಿ, ಜನಾಂಗ, ಬುಡಕಟ್ಟು, ಬಣ್ಣ, ದೇಶ, ಭಾಷೆ, ರಚನೆ, ಧರ್ಮ, ಕರ್ಮಗಳಿಗನುಸಾರವಾಗಿ ಪ್ರತ್ಯೇಕಿಸಿ ನೋಡುವುದು ನಾವು ಗುರುತಿಸಿಕೊಳ್ಳುವ ಸೌಕರ್ಯಕ್ಕಾಗಿ. ಅಂತೆಯೇ ಕಾಲಕ್ಕೆ ಅನುಸಾರವಾಗಿ ಈ ಗುರ್ತಿಸುವ ಹೆಸರುಗಳು ಬದಲಾವಣೆಗೊಳ್ಳುತ್ತಾ ಬೇರೆ ಹೆಸರನ್ನು ಪಡೆಯುತ್ತದೆ. ಮೇಲ್ವರ್ಗ, ಕೆಳವರ್ಗ, ಶ್ರೀಮಂತ, ಬಡವ ಎಂದು ಸ್ಥಾನಗಳು ಮುಂದೆ-ಹಿಂದೆ ಸರಿಯುವುದೂ ಆಗುತ್ತದೆ. ಇದು ಮನುಷ್ಯನ ಹುಡುಕುವಿಕೆಯ ಫಲ.

ಕುದ್ಕಾಡಿ ವಿಶ್ವನಾಥ ರೈ, ಹಿರಿಯ ನೃತ್ಯ ಗುರುಗಳು, ಪುತ್ತೂರು., ದ.ಕ

Leave a Reply

*

code