ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು ( ಮಾರ್ಚ್ ಏಪ್ರಿಲ್ ೨೦೧೦)

Posted On: Thursday, April 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ಭಾರತೀಯ ನೃತ್ಯದ ವಿಚಾರದ ಕುರಿತು ಇನ್ನೂ ಕೆಲವು ಅಭಿಪ್ರಾಯಗಳು ಪಾಶ್ಚಿಮಾತ್ಯರಿಂದ ಬಂದಿದೆ. ಯಾವಾಗಲೂ ಕಲೆಯನ್ನು ಒಂದು ಮತದ ಆದರ್ಶ, ಒಂದು ಆತ್ಮಾರ್ಪಣೆ ಎನ್ನುವ ಭಾವನೆ ಅದರಲ್ಲೊಂದು. ಆದರೆ ಆ ನರ್ತನದಲ್ಲಿ ಕಾಣುವುದು ಒಂದು ಮತದ ಅರ್ಪಣೆಯಲ್ಲ. ಅದು ಮನಸ್ಸಿನ ಒಂದು ಆಂತರಿಕತ್ವ ಅಂದರೆ ಸುಸಂಸ್ಕೃತ ಸೂಕ್ಷ್ಮಮನೋಭಾವ. ಇದರ ಉದ್ದೇಶವೇ ಬೇರೆ. ಇದನ್ನು ಸಮರಸವೆನ್ನಬಹುದು. ಸುಸಂಗತ, ವಿರಸವಿಲ್ಲದ ಅಲ್ಲದೆ ಕಷ್ಟವಿತ್ಯಾದಿ ದುಃಖಿತವಾದ ಮನಸ್ಸಿಗೆ ಅಥವಾ ಆತ್ಮಕ್ಕೆ ಸುಖಭಾವ ಕೊಡುವಿಕೆ. ಅಂತೆಯೇ ಲೋಕದಲ್ಲಿದು ದುಃಖಿತರಾದವರಿಗೆ ಒಂದು ಸುಖನೆಲೆಯನ್ನು ಕೊಡುವ, ಮನಸ್ಸನ್ನು ಮೇಲೆತ್ತುವ ಹಾಗೂ ಹೊಸದಿಕ್ಕನ್ನು ಕಾಣುವ ಒಂದು ರೀತಿಯನ್ನು ತೋರಿಸುತ್ತಿದೆ.

ಭಾರತೀಯ ನರ್ತನಕಲೆಯಲ್ಲಿ ಅಂಗಾಂಗ ನಿಲುವಿನಲ್ಲಿ, ನಿಂತ ಬಗೆಯಲ್ಲಿ ಅದರ ವಿನ್ಯಾಸದಲ್ಲಿ ನಾವು ಒಂದು ವಿಶೇಷತೆಯನ್ನು ಕಾಣುತ್ತೇವೆ. ಹಾಡುವಿಕೆ, ಸಂಗೀತ, ರಂಗಭೂಮಿ, ಚಿತ್ರಗಾರಿಕೆ, ಶಿಲ್ಪ ಮತ್ತಿತರ ಮನಃಶಾಸ್ತ್ರಗಳೆಲ್ಲ ಒಂದು ಸೇರಿ ನರ್ತಕ ಹಾಗೂ ಪ್ರೇಕಕರ ಮನಸ್ಸಿನಲ್ಲಿ ಪಾರಮಾರ್ಥಿಕತೆ (ಧಾರ್ಮಿಕತೆ) ಯನ್ನುಂಟುಮಾಡುತ್ತದೆ. ಸೌಂದರ್ಯವನ್ನು ಗ್ರಹಿಸುವುದು ನೀಚತನದಿಂದಲ್ಲ. ಆಂತರಿಕ ಸೌಂದರ್ಯ ದೃಷ್ಟಿಯೂ ಧಾರ್ಮಿಕತೆಯೇ ಹೌದು.

ಹಾಗೆಂದು ಭರತನಾಟ್ಯದಲ್ಲಿ ಸಂಪ್ರದಾಯ ಬದಲಿಸಿದೆ ಎಂಬ ಮಾತಿಗೂ ಅರ್ಥವಿದೆ. ಸಂಸ್ಕೃತದಲ್ಲಿ ಸಂಪ್ರದಾಯ ಎಂಬುದು ಒಂದು ಪದ್ಧತಿ ಅಥವಾ ಪೂರ್ವಿಕರಿಂದ ಬಂದಿರುವ ವಿಧ. ಹೀಗೆಯೇ ಕೊನೆಯವರೆಗೂ ಇರಲೇಬೇಕೆಂಬುದು ತಪ್ಪು. ಒಂದು ನದಿಯ ಇಕ್ಕೆಲಗಳಲ್ಲಿ ಇರುವ ದಿಣ್ಣೆಯು ನೀರು ಹರಿಯುವುದಕ್ಕೆ ಒಂದು ಖಚಿತ ತಡೆ. ಅದಿಲ್ಲವಾದರೆ ನದಿಯ ನೀರಿನ ಸೆಳೆತ ಜೋರಾಗಿ ನಮ್ಮ ಅಂಕೆಗೆ ಸಿಲುಕಲಾರದು. ಆದರೆ ನೀರಿನ ಸೆಳೆತ ಬದಲಾದಂತೆಲ್ಲಾ ಬದಿಯಲ್ಲಿದ್ದ ದಿಣ್ಣೆಕಟ್ಟುಗಳು ತಮ್ಮ ಆಕೃತಿಯಲ್ಲಿ ಬದಲಾವಣೆ ಹೊಂದುತ್ತದೆ.

ಆದರೆ ನಮ್ಮ ಕಲಾವಿದರು ಒಂದು ಕ್ರಮದಲ್ಲಿ ನೃತ್ಯದ ಬದಲಾವಣೆ ಮಾಡಿದ್ದಲ್ಲಿ ಅದು ಉತ್ತಮವೆನಿಸುವುದು. ಅನೇಕ ವಿಮರ್ಶಕರ ದೃಷ್ಟಿಗೆ ಈ ವಸ್ತು ಕಾಣಿಸಿದ್ದರೂ ಅದು ಪರಂಪರೆಯನ್ನು ಮೀರಿಸಿದ್ದು, ಮೊದಲಿದ್ದ ಆರ್ಭಟ ಶಕ್ತಿ ಅದಕ್ಕಿಲ್ಲವೆಂಬ ಅಭಿಪ್ರಾಯ ಕೊಡುತ್ತಿದ್ದಾರೆ. ಈ ಕಾರಣದಿಂದಲೇ ನಮ್ಮ ಅನೇಕ ಕಲಾಗಾರರು ಮನಸ್ಸಿಗೆ ಬಂದಂತೆ ನರ್ತಿಸುತ್ತಿದ್ದಾರೆ; ಅವರಲ್ಲಿರಬೇಕಾದ ಸಂತಸದ ಮನಃಸ್ಥಿತಿಯಲ್ಲಿ ಸರಿಯಾದ ಮಾರ್ಗದರ್ಶನವಿಲ್ಲ. ಆದರೆ ಕುಣಿವ ಹುಚ್ಚು ಮಾತ್ರ ಅವರಲ್ಲಿದೆ. ಆದರೆ ಅವರಲ್ಲಿರಬೇಕಾದ ಸತ್ತ್ವಗುಣ ಹಾಗೂ ಕ್ರಮನಿಬಂಧನೆಗಳಿಲ್ಲವಾಗಿ ಆ ದೃಶ್ಯ ಸಮಸ್ಥಿತಿವಿಹೀನವಾಗಿರುತ್ತದೆ. ಇದಕ್ಕೆ ಕಾರಣ ನರ್ತನವಲ್ಲ, ಅದನ್ನು ನಡೆಸುವ ಕಲಾವಂತರ ಸೋಲು ಎನ್ನಬಹುದು. ಹಾಗಾಗಿ ಇಲ್ಲಿ ನರ್ತಕರನ್ನು ಹಿಂದಿನ ಕಲಾಗಾರನನ್ನಾಗಿಯೂ ಮತ್ತು ಆಧುನಿಕ (ಈಗಿನ) ಕಾಲದ ನರ್ತಕರನ್ನಾಗಿಯೂ ವಿಭಾಗಿಸಬಹುದು.

ಭಾರತೀಯ ನರ್ತನವಿಚಾರದಲ್ಲಿ ಈಗೀಗ ನರ್ತಕವ್ಯಕ್ತಿಯ ಭಾವನೆಗಳೇ ಮೇಲುಗೈಯಾಗಿ ಯಾವ ಕಲೆ ಉತ್ತಮ ಹಾಗೂ ಆಧುನಿಕ ದೃಷ್ಟಿಯಲ್ಲಿ ಸೌಂದರ್ಯಶಾಲಿ ಎಂಬ ಯೋಚನೆ ಬರುತ್ತಿದೆ. ಇಲ್ಲಿ ಜನರ ಹೃದಯ ಹಾಗೂ ಮನಸ್ಸು ಹಿಡಿದಿರುವ ಅಂಶಗಳಿಗೂ ಆಧುನಿಕ ಸೌಂದರ್ಯ ಭಾವನೆಗೂ ನಡುವೆ ನಾಟ್ಯವು ‘ಉತ್ತಮ’ ಮತ್ತು ‘ಕನಿಷ್ಠ’ ಎಂಬ ವಿಚಾರ ಬಂದಿರುವುದು ನಿಜ. ಕಲೆಯ ಹೆಸರಿನಲ್ಲಿ ಇಂತಹುದು ಚರ್ಚಾಸ್ಪದವಾಗಕೂಡದು. ಪಾಶ್ಚಿಮಾತ್ಯ ಕಲೆಯ ಕುರಿತ ನಿಷ್ಕರ್ಷೆಗಳೆಲ್ಲಾ ಭಾರತೇಯರ ಗಮನಕ್ಕೆ ಬರತಕ್ಕುದಲ್ಲ. ಆದರೆ ಈಗೀಗ ನಮ್ಮಲ್ಲಿಯ ಉತ್ತಮ ನರ್ತಕರೂ ಇಂತಹ ಭಾವನೆಗೆ ಬೆಲೆಗೊಟ್ಟು, ಅವರ ಪೀಳಿಗೆಗೇ ಬಿದ್ದಿರುತ್ತಾರೆ. ತಮ್ಮ ಪ್ರದರ್ಶನಗಳೆಲ್ಲ ತಾವು ತಿಳಿದ ಮಟ್ಟಿಗೆ ಪಾಶ್ಚಾತ್ಯರದ್ದೇ ಆದ ಹೇಳಿಕೆಗೇ ಬೆಲೆಕಟ್ಟುವಂತಾಗಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ನಿಷ್ಕರ್ಷೆಗೆ ಒಳಗಾಗಿ, ನಮ್ಮಲ್ಲಿಯ ಉತ್ತಮ ನರ್ತಕರಿಗೂ ಆಧುನಿಕ ಎನ್ನಿಸಿದವರೊಳಗೆ ನ್ಯಾಯವನ್ನು ಒದಗಿಸುವ ಸ್ಥಿತಿಗೆ ಬಂದಿದೆ. ಆದರೆ ಇಲ್ಲಿ ನಾವು ಗಮನಕ್ಕೆ ತರುವ ವಿಷಯ-ಕಲೆಯು ನಮ್ಮ ಹೃದಯಕ್ಕೆ ಮುಟ್ಟುವುದೇ, ಅದು ಪರಿಣಾಮವನ್ನುಂಟುಮಾಡಿದೆಯೇ ಹಾಗು ಪ್ರೇರಣೆಯನ್ನೊದಗಿಸುವ ಸ್ಥಿತಿಯಲ್ಲಿದೆಯೇ ಎಂಬುದು !

ನಾಟ್ಯಶಾಸ್ತ್ರದಲ್ಲಿ ಕಲಾವಿದನಿಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ ನಿಜ, ಆದರೆ ಕಲಾಗಾರನಾಗಿದ್ದವನು ತನ್ನದೇ ಮುಖ್ಯಕಲೆ, ಅದನ್ನು ಹೀಗೆಯೇ ಮಾಡಿ ತೋರಿಸಬೇಕು ಎಂಬ ಹಠವಾದಕ್ಕೆ ಬಲಿಯಾಗಬಾರದು. ಇದು ಉತ್ತಮಾಂಶವಲ್ಲ.

‘ನಿಮ್ಮ ಕಲೆ ಸಂಪೂರ್ಣವಲ್ಲ’ ಎಂಬ ಮಾತಿಗೆ ಅರ್ಥವಿಲ್ಲ. ಭರತನಾಟ್ಯ ಸ್ವಸಂಪೂರ್ಣ. ಸಾಂಸ್ಕೃತಿಕ ಮೌಲ್ಯ ಇದರಲ್ಲಿದ್ದಷ್ಟು ಬೇರಾವ ನರ್ತನದಲ್ಲೂ ಇಲ್ಲ. ನಡೆಗಳು ಸಂಗೀತ ಹಾಗೂ ಸಾಹಿತ್ಯಿಕ ರೂಢಿಯಲ್ಲಿರುತ್ತವೆ. ಇದರಲ್ಲಿಯ ಒಂದು ಭಾಷೆ, ಮಾತು ಅಥವಾ ವ್ಯಾಕರಣ, ನಮ್ಮ ಕೃತಿ ಅಥವಾ ನಾಟ್ಯವಿಧಾನದಲ್ಲಿ ಸಾಕಷ್ಟಿದೆ. ಅದು ತೀರಾ ಹೆಚ್ಚಾಗಿರಕೂಡದು ಎಂಬ ಜಾಗೃತಿಯೂ ಇದೆ. ಆದರೆ ನಮಗೆ ಇತರ ಪದ್ಧತಿಯ ನಾಟ್ಯವನ್ನು ಕಂಡಾಗ ಕ್ಷಣಿಕ ಆನಂದವಿದ್ದರೂ, ಆ ಕ್ರಮ ನಮ್ಮ ಭರತನಾಟ್ಯಕ್ಕೆ ಸಾಧುವಲ್ಲವೆಂದೇ ತೀರ್ಮಾನಿಸುತ್ತೇವೆ.

ನಮ್ಮ ನೃತ್ಯಕಲೆ ನಡೆವುದು ನಮ್ಮದೇ ಹಾದಿಯಲ್ಲಿ. ನಮ್ಮ ಕಲೆಯಲ್ಲಿ ಕ್ರಿಯಾತ್ಮಕತೆ ಶಕ್ತಿಯುತವಾಗಿ ಬೆಳೆದುದು ಮಾತ್ರವಲ್ಲ, ಮುಂದಿನ ಯುಗಕ್ಕೂ ಹೊಸ ಪ್ರೇರಕಶಕ್ತಿಯಾಗಿ ನಿಲ್ಲುತ್ತದೆ. ಇಂಥ ಶಕ್ತಿಯು ತಾನಾಗಿ ಇನ್ನೂ ಬೆಳೆದು ಬಂದು ತಮ್ಮ ದೇಹ ಹಾಗೂ ಮನಸ್ಸಿಗೆ ಒಪ್ಪಿಸಿಕೊಂಡು ನಮ್ಮ ಸಂಸ್ಕಾರಬಲಕ್ಕೆ ಒಪ್ಪಿರುವ ಮಹಾಕಲೆಯಾಗಿ ನಿಂತಿರುತ್ತದೆ.

*******

 

Leave a Reply

*

code