ಅಂಕಣಗಳು

Subscribe


 

ನೃತ್ಯ ಸಂಶೋಧನೆಯ ಪ್ರಸ್ತುತತೆ

Posted On: Monday, July 28th, 2014
1 Star2 Stars3 Stars4 Stars5 Stars (No Ratings Yet)
Loading...

Author: - ಡಾ. ಪ್ರಭಾಕರ ಜೋಷಿ, ಹಿರಿಯ ಯಕ್ಷಗಾನ ವಿದ್ವಾಂಸರು ಮತ್ತು ಅರ್ಥಧಾರಿ, ಲೇಖಕ-ಸಂಶೋಧಕರು, ಮಂಗಳೂರು.

ಪತ್ರಿಕೆಯ ಸಂ 8/2 ಚೈತ್ರವೈಶಾಖ ಸಂಚಿಕೆಯಲ್ಲಿ ಮಹತ್ತ್ವದ ಹಲವು ವಿಚಾರಗಳಿವೆ. ಈ ಕುರಿತು ಮತ್ತು ನಮ್ಮ ಮೂಲಕ ಸಂಶೋಧನ ಚರ್ಚೆಗಳಿಗಾಗಿ ಅಭಿನಂದನೆ, ಕೃತಜತೆ.

 ಹಿರಿಯ ವಿದ್ವಾಂಸರಾದ ಡಾ.ಎಚ್.ಎಸ್.ಗೋಪಾಲರಾಯರು ಮತ್ತು ಶತಾವಧಾನಿ ಡಾ.ಆರ್. ಗಣೇಶರು ಮುಖ್ಯವಾದ ಕೆಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ. ನೃತ್ಯಸಂಶೋಧನೆಯ ಅಕೆಡೆಮಿಕ್ ಮಹತ್ತ್ವ, ಏಕಾಹಾರ್ಯಪ್ರದರ್ಶನದ ಅನಿವಾರ್ಯತೆಗಳ ಕುರಿತು ಅವರ ವಿಚಾರಗಳು ಮನನೀಯ. ನೃತ್ಯನಾಟಕ (ಪಾರಂಪರಿಕಾ ಆಟಗಳು, ಕೂತ್ತು ಕಲಾಪಗಳು)ಗಳಿಗೆ ಸ್ಥಿತ್ಯಂತರ ದುಸ್ಥಿತಿ ಬಗ್ಗೆ ಆರ್ ಗಣೇಶರು ಬರೆಯುವುದು ಸಾರಭೂತ, ಸೂತ್ರಪ್ರಾಯ. ನಮ್ಮಲ್ಲಿ ರಸಾಭಿವ್ಯಕ್ತಿ ಉದ್ದೇಶದ, ಗಂಭೀರ ಸುಧಾರಣೆ ಪ್ರಯೋಗ ಬಂದಾಗ ‘ಇದು ಪರಂಪರೆ ಅಲ್ಲ’ ಅನ್ನುವವರು ಪರಂಪರಾಗತರಂಗಗಳನ್ನು ಅಂಗಭಂಗ ಮಾಡುವ ಉಧ್ವಸ್ತಕ್ರಿಯೆಯ ಬಗ್ಗೆ ಮಾತಾಡುವುದಿಲ್ಲ. ಐಟಂ’ರೂಪದ ಫ್ಯಾನ್ಸಿ ತಯಾರಿ ಪ್ರಾಡಕ್ಟ್‍ಗಳ ಬಗ್ಗೆ ಹೇಳುವುದಿಲ್ಲ. ‘ಎಲ್ಲರನ್ನೂ ಬಿಡಿ, ಒಳ್ಳೆ ಕೆಲಸ ಮಾಡಿದವನನ್ನು ಹೊಡಿ’ ಎಂಬಂತಿದೆ.

ರಂಗಾನುಗತ ಸಂಗೀತ ಹೋಗಿ, ತೀರಾ ಕಲಾವಿದಕೇಂದ್ರಿತವಾಗುತ್ತಿದೆ. ಉದ್ದೇಶಗಳು ಅಸ್ಪಷ್ಟ. ಆರಾಧನೆ, ತೋರ್ಪಡಿಕೆ ಮುಖ್ಯವಾಗಿದೆ. ಕೌಶಲ ಇದೆ, ಪರಿಣತಿ ಇದೆಯಾ? ಎಷ್ಟು? ಗೋಪಾಲರಾಯರು, ಗಣೇಶರು ಬಂದರೂ-ನಿಶ್ಚಿತ ವಿನ್ಯಾಸ (ಫಿಕ್ಸಡ್ ಪಾರ್ಮಟ್), ಮೈಂಡ್ ಸೆಟ್, ರೆಡಿಮೇಡ್‍ಗಳಿಗೇನು ಮದ್ದು ಸಾಧ್ಯವೇ? ಯೋಚನೀಯ, ಚಿಂತನೀಯ.
ಡಾ.ಬಿ.ವಿ.ವೆಂಕಟಾಚಲ ಶಾಸ್ತ್ರಿ, ಪ್ರೊ ಪಿ.ವಿ ಕೃಷ್ಣಭಟ್ಟರು ನೀಡಿದ ಸಲಹೆ- ಐತಿಹಾಸಿಕ ದ್ರವ್ಯ, ಗಂಭೀರ ಉದ್ದೇಶದ ಕೆಲಸಗಳು ತುಂಬಾ ಚಿಂತನೀಯ. ಅಂಗೀಕಾರಾರ್ಹ. ಈ ಕುರಿತು ಎಲ್ಲರೂ ಮನನ –ಮನ ಮಾಡಲಿ.

ಕಲೆ ಸಾಹಿತ್ಯಗಳ ಬಗೆಗೆ ನಮ್ಮ ನಡುವಿನ ಓರ್ವ ಭರವೆಸೆಯ ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು- ಕಲಾರಹಸ್ಯವನ್ನು ಪ್ರದರ್ಶನದ ಅಂತರಂಗವನ್ನು ಹೊಕ್ಕು ನೋಡುವ ಮರ್ಮಗ್ರಾಹಿ ಲೇಖಕ. ಅವರ ಎರಡೂ ಲೇಖನಗಳು ಚೊಕ್ಕ, ತೀಡಿದ ಬರೆಹಗಳು. ಆದರೆ ಅದೇಕೋ ಅವರ ಭಾಷೆ ತುಸು ಒಂದಷ್ಟು ಕೃತಕ ಅನ್ನಿಸಿದೆ ನನಗೆ. ಡಾ.ಆರ್.ಗಣೇಶರು ಇಂತಹ ಭಾಷೆಯಿಂದ ಬುದ್ಧಿಪೂರ್ವಕ ಹೊರಬರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಒಟ್ಟು ನಿಮ್ಮ ಸಂಘಟನೆಯ, ಪತ್ರಿಕೆಯ ಕೆಲಸ ಉತ್ತಮಮಟ್ಟದ್ದು. ಎಲ್ಲೆಲ್ಲೂ ‘ಪಿಕ್ಚರ್’ಸಂಕ್ರಾಂತಿಯಲ್ಲಿ ಮರೆತ ಮಾಧ್ಯಮಗಳಲ್ಲಿ ಅದರದ್ದೇ ಆರಾಧನೆ ಆಗುತ್ತಿರುವಾಗ ನಿಮ್ಮ ಯತ್ನ ದೊಡ್ಡ ಸವಾಲು.

ಅಕೆಡೆಮಿಕ್ ಪತ್ರಿಕೆಯ ಭಾಷೆ ಇನ್ನಷ್ಟು ಸೌಮ್ಯ, ಶೈಕ್ಷಣಿಕ ಇರಲಿ ಎಂಬುದು ನನ್ನ ಅನಿಸಿಕೆ. ಪ್ರಶಸ್ತಿ ಬಗ್ಗೆ ಒಂದು ಮಾತು. ಬಿರುದು ಕೊಡುವಿಕೆ ಬೇಕೇ? ಅದು ಈ ಕಾಲಕ್ಕೊಪ್ಪುವ ಪರಿಕಲ್ಪನೆಯೇ? ಬಿರುದುಗಳಲ್ಲಿ ಭೂಷಣಗಳಾಗಿ ಹೆಸರುಗಳ ಭಾಗವಾಗಿ ರಾರಾಜಿಸುತ್ತಿರುವುದನ್ನು ನೋಡುತ್ತಿದ್ದೇವೆ. ಅದೇಕೋ ಕಸಿವಿಸಿಯಾಗುತ್ತದೆ.

Leave a Reply

*

code