ಅಂಕಣಗಳು

Subscribe


 

ನೃತ್ಯದಲ್ಲಿ ಕನ್ನಡ ಸಾಹಿತ್ಯದ ಬಳಕೆ ಎಷ್ಟು ಸರಿ?

Posted On: Tuesday, May 26th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ-ಮರಾಠೀ ಪ್ರಾಂತಗಳ ಗಡಿತೀರ್ಮಾನದ ಕಿಚ್ಚು-ಕದನ, ಇತ್ತ ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎಂಬ ಹಲವು ದಶಕಗಳ ಚಿಂತನೆ-ಹೋರಾಟ. ಅಂತೆಯೇ ನೆರೆಯ ಆಂಧ್ರ, ತಮಿಳ್ನಾಡು ಗಡಿ ಪ್ರದೇಶಗಳಲ್ಲಿ ನೆಲಕ್ಕಾಗಿ, ನೀರಿಗಾಗಿ ನಡೆಯುತ್ತಲೇ ಇರುವ ರಾಜಕೀಯ ಪ್ರೇರಿತ ಕಾದಾಟಗಳು…ಹೀಗೆ ಕರ್ನಾಟಕದ ಜನÀ ತಮ್ಮ ತಾಯ್ನೆಲದ ಪ್ರೀತಿಯಿಂದ, ಆಯಾಯ ಬೇರೆ ಪ್ರಾಂತಗಳ ಜನ ಅವರವರ ಭಾಷೆ-ನಡೆ-ನುಡಿಯ ಮೇಲಿನ ಮಮಕಾರದಿಂದ ಒಂದಲ್ಲ ಒಂದು ವಿಷಯಕ್ಕೆ ಕ್ಯಾತೆ, ರೊಳ್ಳೆ ತೆಗೆಯುತ್ತಾ, ತೆಗೆಸುತ್ತಲೇ ಇವೆ.

ಸ್ವಾತಂತ್ರ್ಯಪೂರ್ವಕ್ಕೆ ರಾಜರ ಆಳ್ವಿಕೆಯಲ್ಲಿ ಅಷ್ಟಾಗಿ ಕಾಡದ ಈ ತೊಂದರೆ ಉಲ್ಬಣಗೊಳ್ಳಲು ಕಾರಣ- ಅವೈಜ್ಞಾನಿಕವಾಗಿ ಭಾಷೆಯನ್ನಾಧರಿಸಿ ರಾಜ್ಯವಿಂಗಡಣೆ ಮಾಡಿದ್ದು ಎಂದು ಅದೆಷ್ಟೋ ಚಿಂತಕರು ಇದೀಗ ಕೈಕೈ ಹಿಸುಕಿಕೊಳ್ಳುವುದೂ ಇದೆ. ಹಾಗಂತ ಆವರೆಗೂ ಭಾಷೆಯನ್ನಾಧರಿಸಿ ಇಂತಹ ತೊಂದರೆಗಳು, ಒಳಜಗಳಗಳು ಇರಲೇ ಇಲ್ಲವೆಂದಲ್ಲ; ಇದ್ದರೂ ಅವುಗಳ ಸಂಖ್ಯೆ ಎಲ್ಲೋ ಒಂದೆರಡು ಎಂಬಷ್ಟಿರಬಹುದು. ಇದರ ನಡುವೆಯೇ ಇತ್ತೀಚೆಗೆ ಸುಪ್ರೀಂಕೋರ್ಟ್ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ಕಡ್ಡಾಯ ಮಾಡಬೇಕಿಲ್ಲ ಎಂದು ಆದೇಶ ಹೊರಡಿಸುವ ಹೊತ್ತಿಗೆ ಹಲವು ವಿಷಯಗಳು ಕಾಡತೊಡಗಿದವು.

ಕನ್ನಡ ಭಾಷಾ ಮಾಧ್ಯಮದ ಕೈತುತ್ತು ಉಂಡು ಬೆಳೆದ ದೇಹ ಮತ್ತು ಆತ್ಮ ಸ್ವಾಭಾವಿಕವಾಗಿ ಮಾತೃಭಾಷೆಯ ನಂಟಿನತ್ತಲೇ ಮುಖ ಮಾಡುವುದು ಸಹಜ. ಹಾಗೆ ನೋಡಿದರೆ ‘ವಿದ್ಯಾಭ್ಯಾಸದ ಕಲಿಕೆಯ ಮಾಧ್ಯಮವಾಗಿ ಕನ್ನಡ’- ಎಂಬುದು ಹಲವು ಆಯಾಮದ ಚರ್ಚೆಯ ವಿಷಯ. ಆದರೆ ಅದೇ ವಿಷಯವನ್ನು ನಮ್ಮ ಕಲಾವರಣದೊಳಗಿನ ಪರಿಸ್ಥಿತಿಗೆ ಸಮಕಾಲೀನವಾಗಿ ಕಂಡುಕೊಳ್ಳುವಾಗ ‘ವಿದ್ಯಾಭ್ಯಾಸದ ಕಲಿಕೆಯಲ್ಲಿ ಕನ್ನಡ’ ಮತ್ತು ‘ಕಲಾಮಾಧ್ಯಮವಾಗಿ ಕನ್ನಡ’–ಈ ಎರಡೂ ವಿಷಯವನ್ನು ಏಕಕಾಲಕ್ಕೆ ಜಿಜ್ಞಾಸೆಗೊಳ ಪಡಿಸುವುದು ಕೊಂಚ ದೀರ್ಘವಾಗಬಹುದು. ಹಾಗಾಗಿ ಕಲಾನಿಯತಕಾಲಿಕೆಯಾಗಿ ‘ಕಲೆಯಲ್ಲಿ ಮಾತೃ ಯಭಾಷೆ ಬಳಕೆ ಹಾಗೂ ಮಿತಿ-ಸಾಧ್ಯತೆಗಳನ್ನೂ ಮಾತ್ರ ವಿವೇಚಿಸುವ ಕರ್ತವ್ಯಕ್ಕೆ ಇಲ್ಲಿ ಮುಂದಾಗುತ್ತಿದ್ದೇವೆ.

ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪ.. ಹೀಗೆ ಯಾವುದೇ ಕಲೆಯಾಗಿರಲಿ ಅದಕ್ಕೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಗಾದರೂ ಕಾಲಾಂತರದಲ್ಲಿ ಅಳಿವಿರಬಹುದು. ಆದರೆ ಕಲೆಯೆನ್ನುವುದು ಅನಂತ, ಅನಾದಿ, ಅಜರಾಮರ. ಅದರದ್ದು ವಿಶ್ವಭಾಷೆ. ಆದ್ದರಿಂದಲೇ ಅದು ದೇಶ-ಭಾಷೆಗಳನ್ನೂ ಮೀರಿ ನಿಂತಿದೆ, ಬೆಳೆದಿದೆ, ಎಲ್ಲರನ್ನೂ ಎಲ್ಲ ಕಾಲಕ್ಕೂ ಸೆಳೆದಿದೆ, ಸೆಳೆಯುತ್ತಲೇ ಇದೆ.

ಅದೇ ಕಲೆಯ ಶಕ್ತಿ. ಕಲೆಯೊಂದನ್ನುಳಿದು ಬೇರಾವ ಮಾಧ್ಯಮಕ್ಕೂ ಈ ಅಪೂರ್ವ, ವಿಶಿಷ್ಟ, ಅಸಾಧಾರಣ ಶಕ್ತಿಯಿಲ್ಲ. ಅಷ್ಟಕ್ಕೂ ಭಾಷೆಯ ಹಂಗು ಪ್ರಥಮತಃ ಬೇಕಿರುವುದು ಶಾಬ್ದಿಕ ಸಂವಹನಕ್ಕೆ. ಆದ್ದರಿಂದಲೇ ಕಲೆಯ ಭಾಷೆಯೇ ಬೇರೆ ಎಂಬುದಾಗಿ ನಂತರದಲ್ಲಿ ತತ್ತ್ವ, ಮೀಮಾಂಸೆ, ಸಿದ್ಧಾಂತಗಳು ಬೆಳೆದಿವೆ. ಅದಕ್ಕೆ ಭಾಷೆಯ ಹಂಗನ್ನು ಒಳಪಡಿಸುವುದು ಮೂರ್ಖತನದ ಕೆಲಸ ಜೊತೆಗೆ ಕಲೆಯನ್ನು ಭಾಷೆಯ ಮಿತಿ-ಬಂಧನದೊಳಗೆ ಸೇರಿಸುವುದು ಸರ್ವಥಾ ಸಾಧುವಲ್ಲ ಮತ್ತು ಸಾಧ್ಯವೂ ಇಲ್ಲ.

ಹಾಗಾದರೆ ಕಲೆಯೆನ್ನುವುದು ಆಯಾಯ ದೇಶಭಾಷೆಗಳ ಆವರಣದಲ್ಲಿ ಬೆಳೆದಿರುವುದು, ಆಯಾಯ ಸಂಸ್ಕೃತಿಯ ಸಂಕೇತವಾಗಿರುವುದು, ಯಾವುದೇ ಭಾಷೆಯ ಅವಿಭಾಜ್ಯ ಅಂಗವಾಗಿರುವುದು ಹೇಗೆ?- ಎಂಬ ಈ ಪ್ರಶ್ನೆಗೆ ಸರಳವಾಗಿಯೂ ಉತ್ತರ ಕೊಡಬಹುದು; ಅಂತೆಯೇ ಪುಟಗಟ್ಟಲೆ ಪ್ರಬಂಧವನ್ನೂ ಬರೆಯಬಹುದು. ಕಲಾಜಗತ್ತಿನ ಇತಿಹಾಸ, ಮೀಮಾಂಸೆಗಳ ಅಧ್ಯಯನದಲ್ಲಿ ಇದಕ್ಕೆ ಉತ್ತರ ವಿಷದವಾಗಿರುತ್ತದೆ.

ಸೂಕ್ಷ್ಮವಾಗಿ ಹೇಳುವುದಾದರೆ ದೇಶೀ ಸಂಸ್ಕೃತಿಗೆ ಅಳವಟ್ಟು ಅದೆಷ್ಟೋ ನೃತ್ಯ, ಸಂಗೀತ, ವಾದ್ಯ, ಚಿತ್ರ ಮಾಧ್ಯಮಗಳು ಬೆಳೆದಿವೆ. ನಿಜ. ಆದರೆ ಅವು ಏಕಕಾಲಕ್ಕೆ ಆಯಾಯ ಸಂಸ್ಕೃತಿಯ, ಭಾಷೆಯ ಅಂಗವಾಗಿರುವ ಹೊತ್ತಿಗೇ ಆ ಆವರಣದಿಂದಾಚೆಗೂ ಬೆಳೆದು ಕೊಡುಕೊಳ್ಳುವಿಕೆಗಳೊಂದಿಗೆ ಶ್ರೀಮಂತವಾಗಿದೆ.

ಶಿಕ್ಷಣ ಮಾಧ್ಯಮದಂತೆ ಕಲೆಗೂ ಮಾತೃಭಾಷೆ ಎಂಬ ಸ್ವರೂಪವೇ ಇಲ್ಲ. ಕಲೆಯಲ್ಲಿ ಭಾಷೆ ಮುಖ್ಯವಲ್ಲ. ಭಾವ ಮುಖ್ಯ. ಸಂಗೀತದಲ್ಲಿ ರಾಗಕ್ಕೆ ತಕ್ಕಂತೆ ಭಾಷೆ ಬದಲಾಗುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಥವಾ ಭಾಷೆಗೆ ತಕ್ಕಂತೆ ರಾಗ ಹೆಣೆಯುವುದಿದೆಯಾ? ಭಾಷೆಗೆ ಒಗ್ಗುವ/ಒಗ್ಗದ ರಾಗ ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ? ತೀರಾ ಭಿನ್ನ ಸನ್ನಿವೇಶಗಳಲ್ಲಿ ಅಂದರೆ ಪಾಶ್ಚಾತ್ಯ, ಭಾರತೀಯ ಸಂಗೀತ ಸಂಪ್ರದಾಯಗಳಲ್ಲಿ ಇಂಗ್ಲೀಷ್ ಮತ್ತು ಭಾರತದ ದೇಶೀಯ ಭಾಷೆಗಳು ಎಂಬ ಭಿನ್ನತೆ ಬಿಟ್ಟರೆ (ಅದೂ ಈಗ ಕಡಮೆಯಾಗಿದೆ) ಸಂಗೀತದ ಮೂಲ ಅಭ್ಯಾಸದಲ್ಲಿರುವುದು ಭಾಷೆಯಲ್ಲ. ಬದಲಾಗಿ ಸ್ವರಕಲ್ಪನೆಗಳು ಮಾತ್ರ.

ಅಂತೆಯೇ ನೃತ್ಯದಲ್ಲಿ ಚಲನೆಗಳು, ಭಾವನೆಗಳು ಮಾತ್ರ ಮುಖ್ಯ. ಅವರವರ ಸಂಸ್ಕೃತಿ ಸಂಪ್ರದಾಯಕ್ಕೆ ತಕ್ಕಂತೆ, ಸಂವಹನದ ಅಗತ್ಯ, ಚೆಂದಕ್ಕೆ ತಕ್ಕಂತೆ ವೇಷಭೂಷಣ, ಸಾಹಿತ್ಯರಚನೆ ಕಂಡುಬಂದಿವೆಯಷ್ಟೇ. ಉದಾಹರಣೆಗೆ: ಸಾಮಾನ್ಯ ಜನಕ್ಕೆ ಹತ್ತಿರವಾಗಿ ಸಂದೇಶ, ಹಿತೋಕ್ತಿಗಳನ್ನು ಹೇಳಲು ದಾಸರು, ವಚನಕಾರರು ಕರ್ನಾಟಕದಲ್ಲಿ ಕನ್ನಡ ಬಳಸಿದಂತೆ; ಆಲಾಪನೆ, ಸ್ವರಕಲ್ಪನೆಗೆ ಹೊಂದಲು ಅನುಕೂಲವಾಗುವ ತೆಲುಗನ್ನು ತ್ಯಾಗರಾಜರಾದಿಯಾಗಿ ಅನೇಕ ವಾಗ್ಗೇಯಕಾರರು ಕೃತಿಗಳಲ್ಲಿ ಬಳಸಿದಂತೆ.

ಆದರೆ ಸಂಗೀತ ಮತ್ತು ನೃತ್ಯಮಾಧ್ಯಮದ ಅಭಿವ್ಯಕ್ತಿಯಲ್ಲಿ ಭಾಷೆಯೊಂದರ ಬಳಕೆಯನ್ನು ಕಂಡೇ ಕಾಣುತ್ತೇವಲ್ಲಾ? ಅದು ಆ ಕಲಾಮಾಧ್ಯಮವನ್ನು ಆಳುವುದಿಲ್ಲವೇ? ಎಂದರೆ -ಇಲ್ಲಿ ‘ಭಾಷೆಯ ಬಳಕೆ’ ಯನ್ನು ಕಾಣುವುದು ಅದರ ಸಾಹಿತ್ಯ ಅಥವಾ ಅದರ ಅಭಿವ್ಯಕ್ತಿಗೆ ಅವಲಂಬಿಸುವ ಕಾವ್ಯದ ರೂಪದಲ್ಲಿ. ಹಾಗಂತ ಈ ಸಾಹಿತ್ಯದ ಭಾಷೆ ಕಲಾಮಾಧ್ಯಮವನ್ನು ಆಳುತ್ತದೆ ಎನ್ನುವ ಮಾತೇ ಸುಳ್ಳು. ಇದ್ದರೂ ಇಂತಹುದೊಂದು ಗ್ರಹಿಕೆಯಿರುವುದು ಮನುಷ್ಯರ/ಮೂಲಭೂತವಾದಿಗಳ ಮನಸ್ಸಿನಲ್ಲಿಯೇ ಹೊರತು ಕಲೆಯ ಸ್ವರೂಪ-ರೂಪವನ್ನು ಆಸ್ವಾದಿಸುವ ಸಹೃದಯನಲ್ಲಿ ಅಲ್ಲ. ಕಲೆ ತನ್ನ ಸ್ವರೂಪದ ಅಭಿವ್ಯಕ್ತಿಗೆ ಒಂದೊಂದು ರೂಪವನ್ನು ತಾಳುತ್ತದೆ.

ಒಂದೊಂದು ಆವರಣವನ್ನು ಅಪ್ಪಿಕೊಳ್ಳುತ್ತದೆ. ಉದಾಹರಣೆಗೆ ಕರ್ಣಾಟಕ ಸಂಗೀತದ ಅಭಿವ್ಯಕ್ತಿಯಲ್ಲಿ ತೆಲುಗು, ತಮಿಳು, ಕನ್ನಡ, ಸಂಸ್ಕೃತ ಭಾಷೆಗಳ ಸಾಹಿತ್ಯರೂಪ ಹೆಚ್ಚು ಕಂಡುಬರುತ್ತದೆ. ಅದೇ ಹಿಂದೂಸ್ಥಾನಿ ಸಂಗೀತದಲ್ಲಿ ಹಿಂದಿ, ಮರಾಠಿ ಇತ್ಯಾದಿ ಉತ್ತರ ಭಾರತದ ಭಾಷೆಗಳ ಸಾಹಿತ್ಯರೂಪ ಹೆಚ್ಚು ಗೋಚರಿಸುತ್ತದೆ. ಅಂತೆಯೇ ನೃತ್ಯವೂ ಕೂಡಾ. ಆಯಾಯ ಪ್ರಾಂತೀಯ ಚಲನೆಗಳಲ್ಲಿ ರೂಪ ತಳೆದ ನೃತ್ಯಗಳು ಆಯಾಯ ದೇಶೀಭಾಷೆಗಳನ್ನು ತನ್ನ ಸ್ವರೂಪಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತದೆ. ಇದು ರೂಪ-ಸ್ವರೂಪದಲ್ಲಿನ ಹೊಂದಾಣಿಕೆಯೇ ಹೊರತು ಆಳ್ತನ, ಕೀಳುತನಗಳ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ.

‘ಭಾರತೀಯ ಸಂಸ್ಕೃತಿ ಮತ್ತು ಕಲೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಭಾರತೀಯ ಭಾಷೆÀಗಳ ಪೈಕಿ ಯಾವುದಾದರೊಂದು ಭಾಷೆಯನ್ನು ಕರಗತ ಮಾಡಿಕೊಂಡು ತಕ್ಕಮಟ್ಟಿನ ಪ್ರಭುತ್ವ ಸಾಧಿಸುವುದು ಪ್ರಾಥಮಿಕ ಅಗತ್ಯ’ ಎನ್ನುತ್ತಾರೆ ಶತಾವಧಾನಿ ಡಾ.ಆರ್.ಗಣೇಶ್. ಆ ಮಟ್ಟಿಗೆ ಯಾವುದೇ ಭಾರತೀಯ ಭಾಷೆಯ ಕಲಿಕೆ ಅಪೇಕ್ಷಿತ. ಆದರೆ ಈ ಭಾಷೆ ಕನ್ನಡವೇ ಏಕಾಗಬಾರದು ಅಥವಾ ಏಕಾಗಬೇಕು? ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ ಕಲೆಯ ಮೇಲೆ ಕೆಲವೊಂದು ಭಾಷೆಯ ಹೆಚ್ಚಿದ ಪ್ರಭುತ್ವ, ಇದರಿಂದಾಗಿ ಭಾಷಾಬಳಕೆಯಲ್ಲಿ ತರತಮ, ಮೇಲುಸ್ತುವಾರಿಕೆಯ ದೋಷಗಳನ್ನು ಕಾಣುತ್ತಲಿದ್ದೇವೆ. ಆಗೆಲ್ಲಾ ಮಾತೃಭಾಷೆಯನ್ನು ನಮ್ಮ ವಿದ್ಯಾಭ್ಯಾಸದ ಚೌಕಟ್ಟಿಗೇ ತರದೇ ಹೋದರೆ, ಇನ್ನು ಮುಂದಿನ ತಲೆಮಾರಿಗೆ ಕನ್ನಡ ಕಲೆಯಲ್ಲಿ ಕಾಣುವುದು ಸಾಧ್ಯವೇ ಎಂಬ ಚಿಂತೆಯೂ ಕಾಡುತ್ತದೆ. ಅದರ ಕುರಿತು ಮತ್ತಷ್ಟು ವಿವೇಚಿಸೋಣ.. ಮುಂದಿನ ಸಂಚಿಕೆಯಲ್ಲಿ. ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತವಿದೆ.

Leave a Reply

*

code