ಅಂಕಣಗಳು

Subscribe


 

ಕಲಾಶಿಕ್ಷಣವೆಂದರೆ ಕೇವಲ ಹವ್ಯಾಸದ ಉದ್ಯೋಗವೇ?

Posted On: Wednesday, November 5th, 2008
1 Star2 Stars3 Stars4 Stars5 Stars (1 votes, average: 1.00 out of 5)
Loading...

Author: ಮನೋರಮಾ. ಬಿ.ಎನ್

ಪ್ರಿಯರೇ,

ಅದು ಪಾಶ್ಚಾತ್ಯರ ಪ್ರಸಿದ್ಧ ಬ್ಯಾಲೆ ಕಾರ್ಯಕ್ರಮ.. ರೋಮಿಯೋ ಅಂಡ್ ಜೂಲಿಯೇಟ್…ಜೂಲಿಯೇಟ್ ಪಾತ್ರದ ವಯಸ್ಸು ೧೪.. ಆದರೆ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದೆಯ ವಯಸ್ಸು ೪೫ !

ಇದೇಕೆ ಹೀಗೆ..? ತಾರುಣ್ಯದ ಹೊಸಿಲಲ್ಲಿ ನಿಂತ ಬಾಲೆಯ ಪಾತ್ರ ಮಧ್ಯ ವಯಸ್ಸಿನ ಮಹಿಳೆ ಮಾಡುವುದೇ..?ಕಾರಣವಿದೆ…

ಯಾವುದೇ ಕಲೆ ಕರಗತವಾಗಬೇಕಾದರೆ ಮೈ, ಮನಸ್ಸು ವಿಕಾಸಗೊಳ್ಳಬೇಕು. ಲೋಕ ವ್ಯವಹಾರ, ತಿಳಿವಳಿಕೆ, ಜೀವನಾನುಭವದ ವೈವಿಧ್ಯ ಅನುಭವಗಳು ಮೇಳವಿಸಬೇಕು. ಪಾಶ್ಚಾತ್ಯರಲ್ಲಿ ಸಾಮಾನ್ಯವಾಗಿ ಬಾಲ ಕಲಾವಿದರನ್ನು ಎಂದೂ ಕಲಾಪ್ರದರ್ಶನದಲ್ಲಿ ರಂಗಸ್ಥಳಕ್ಕೆ ತರುವುದು ಕಡಿಮೆ. ಬ್ಯಾಲೆ ಪಾಠಗಳು ಚಿಕ್ಕಮಕ್ಕಳಿರುವಾಗಲೇ ಆರಂಭವಾದರೂ ಕಠಿಣ ಶ್ರಮ-ಶಿಸ್ತಿನಿಂದ ಅವರು ಏಳೆಂಟು ವರ್ಷಗಳ ಕಾಲ ದೇಹವನ್ನು ದುಡಿಸಬೇಕು; ಮನಸು ಬಯಸಿದಂತೆಲ್ಲಾ ದೇಹ ಬಳುಕುವಂತಾಗಬೇಕು. ಇಂತಹ ತರಬೇತಿಗಳೆಲ್ಲ ಮುಗಿದ ಮೇಲೆ ಮೊದಲು ಯಾವುದಾದರೂ ಬ್ಯಾಲೆಯಲ್ಲಿ ಚಿಕ್ಕ ಪಾತ್ರ ಸಿಗುವ ಅವಕಾಶಕ್ಕೆ ಕಾಯಬೇಕು. ಅದಕ್ಕೆ ಮೊದಲು ಬ್ಯಾಲೆಗಳಲ್ಲಿ ನಾಯಕಿಯಿರಲಿ, ರಂಗಕ್ಕೆ ಬರುವುದೂ ಸುಲಭಸಾಧ್ಯವಿಲ್ಲ. ಆದ್ದರಿಂದಲೇ ೧೪ ವರ್ಷದ ಜೂಲಿಯೆಟ್ ಪಾತ್ರದ ಪ್ರೇಮವನ್ನು ಪರಿಣಮಕಾರಿಯಾಗಿ ವ್ಯಕ್ತಪಡಿಸಲು, ಪ್ರೇಕ್ಷಕರಿಗೆ ಮುಟ್ಟಿಸಲು ಮಧ್ಯವಯಸ್ಸಿನ ಅನುಭವಸ್ಥ ಕಲಾವಿದೆಗೆ ಮಾತ್ರವೇ ಸಾಧ್ಯ ಎನ್ನುವುದು ಅವರ ಅಭಿಪ್ರಾಯ. ಮೊದಲು ಪರಿಪೂರ್ಣತೆ..ನಂತರ ಪ್ರಸಿದ್ಧಿ…

ಆದರೆ ಸಾಮಾನ್ಯವಾಗಿ ಭರತನಾಟ್ಯವನ್ನೂ ಒಳಗೊಂಡಂತೆ ಭಾರತಿಯ ನೃತ್ಯ ಪ್ರಕಾರಗಳಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿ. ಬುದ್ಧಿ-ಭಾವ ತಿಳಿಯದ ವಯಸ್ಸಿಗೆ ರಂಗದ ಆಕರ್ಷಣೆ, ಅದಕ್ಕೆ ತಕ್ಕಂತೆ ಗುರು-ಪೋಷಕರ ಪ್ರೋತ್ಸಾಹ, ಪ್ರತಿಯೊಬ್ಬರಿಗೂ ಛಿhiಟಜ ಠಿಡಿoಜigಥಿ ಎಂದೆನಿಸಿಕೊಳ್ಳುವ ಹಂಬಲ. ಎಸ್‌ಎಸ್‌ಎಲ್‌ಸಿ ವರೆಗೋ, ಪಿಯುಸಿ ವರೆಗೋ ಕಲಿತು ನಂತರ ಬೇರೆ ಬೇರೆ ನೆಪವೊಡ್ಡಿ ತಿಲಾಂಜಲಿ ಬಿಡುವ ವಿದ್ಯಾರ್ಥಿಗಳು; ವಿದ್ವತ್ ಪರೀಕ್ಷೆ ಉತ್ತೀರ್ಣರಾದ ಮಾತ್ರಕ್ಕೆ ಕಲಿಯುವ, ಅರಿಯುವ ಅಭ್ಯಾಸವನ್ನೇ ಕೈಬಿಡುವ ಭೂಪರು; ಹತ್ತು ಹದಿನೈದು ವರ್ಷ ಕಲಿತೆವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಂತರ ಎಲ್ಲೋ ಮಾಯವಾಗುವ, ಕಳೆದು ಹೋಗುವ ಕಲಾವಿದರು. ಒಟ್ಟಿನಲ್ಲಿ ಆಡಂಬರ, ಹಣ ಮಾಡಿಕೊಳ್ಳುವ ಹುಚ್ಚು, ಹೆಸರು ,ಮನ್ನಣೆ ಗಳಿಸಿಕೊಳ್ಳುವ ಕೆಚ್ಚು, ಪ್ರತಿಷ್ಟಿತ ಎಂಬ ಹೆಸರಲ್ಲಿ ಕಲೆಯನ್ನೇ ಮಾರುವುದು ಅಂತವರಿಗೆ ಅಚ್ಚುಮೆಚ್ಚು.

ಆಂತರಂಗಿಕ ಕಲೆಯನ್ನು ತಿಳಿದುಕೊಳ್ಳುವ ಪ್ರಯತ್ನ ಒತ್ತಟ್ಟಿಗಿರಲಿ, ಸೌಜನ್ಯಪೂರ್ವಕ ನಡವಳಿಕೆಗೂ ಕೊನೆಗೆ ಕತ್ತರಿ ! ದೇಹ ಸೌಂದರ್ಯವೇ ಕಲೆಯ ಅವಿಭಾಜ್ಯ ಅಂಗವೆನ್ನುವ ಅನಿವಾರ್ಯತೆ. ಒಂದು ವೇಳೆ ನೃತ್ಯಕ್ಷೇತ್ರದಲ್ಲಿ ಮುಂದುವರಿದರೂ ಅಲ್ಲಿ ಕಾಸಿದ್ದವರಿಗೆ ಮನ್ನಣೆ, ಸರ್ಟಿಫಿಕೇಟುಗಳೇ ಯಶಸ್ಸಿನ ಕೊನೆ, ಪ್ರದರ್ಶನ-ಪರೀಕ್ಷೆ-ಪ್ರವೇಶಗಳೇ ವಿದ್ವತ್ತು-ಸಾಧನೆ, ಕೊನೆಗೆ ಕಲೆಯ ಬಗೆಗೆ ಕನಸು ಕಂಡವರ ಅವಗಣನೆ !

ನೃತ್ಯ ಕಲಿಯುವುದು ಸಮಯ ಕಳೆಯಲೋ? ಬೊಜ್ಜು ಕರಗಲೋ? ಪ್ರತಿಷ್ಟೆಗೋ ? ಲಾಭಕ್ಕೋ? ಹೊಟ್ಟೆಪಾಡಿಗೋ ಅಥವಾ ಕಲೆಯ ಮೇಲಿನ ಆಸಕ್ತಿಗೋ?

ಎಲ್ಲವೂ ಹೌದು… (ಆದರೂ ಅಲ್ಲೊಂದು, ಇಲ್ಲೊಂದು ಇವೆಲ್ಲವಕ್ಕೂ ಅಪವಾದಗಳಿರುವುದು ನಮ್ಮ ಭಾಗ್ಯ.!)

ಹಾಗಂದ ಮಾತ್ರಕ್ಕೆ, ಪಾಶ್ಚಾತ್ಯ ಕಲೆಗಳೆಲ್ಲ ನಮ್ಮವಕ್ಕಿಂತ ಉತ್ಕೃಷ್ಟ ಎಂಬ mindset ನಮ್ಮದಲ್ಲ. ಎರಡೂ ವಿಭಿನ್ನ ಸಂಸ್ಕೃತಿಗಳನ್ನು ಹೋಲಿಸಿ ಶ್ರೇಷ್ಟ ಸ್ಥಾನ ಕೊಡುವ ಪೈಪೋಟಿಯೂ ಅಲ್ಲ. ಬದಲಾಗಿ ಇಂತಹ ಸಂಸ್ಕೃತಿಗಳ ಹೋಲಿಕೆಗಳ ಮೂಲಕ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಯಾಕಾಗಬಾರದು?

ಪ್ರತಿಯೊಂದು ಸಂಸ್ಕೃತಿಗಳಿಗೂ ಅದರದ್ದೇ ಆದ ವೈಶಿಷ್ಟ್ಯ, ಭೇಧ, ಅನುಕೂಲಗಳಿವೆ. ಅಲ್ಲೂ ಸಾಕಷ್ಟು ಭಿನ್ನತೆ, ತಾರತಮ್ಯ, ರಾಜಕೀಯಗಳಿವೆ. ಆದರೆ ಸಂಗೀತ-ನೃತ್ಯಾದಿ ಕಲೆಗಳ ಮಟ್ಟಿಗೆ ನಮ್ಮವರಿಗಿಂತ ಅವರು ಸ್ವಲ್ಪ ಮಟ್ಟಿಗೆ flexible ಅನ್ನುವುದನ್ನು ಒಪ್ಪಬಹುದು. ನಮ್ಮಲ್ಲಿ ಇಂದಿಗೂ ಅಲ್ಲಲ್ಲಿ ಉಳಿದುಕೊಂಡುಬಂದಿರುವ ಪೂರ್ವಕಲ್ಪಿತ ಸಾಂಪ್ರದಾಯಿಕ ನಿರ್ಧಾರಗಳು, ಸ್ವಾರ್ಥ- ಪೂರ್ವಾಗ್ರಹಗಳು, ದೈವೀಕ ಎನ್ನುತ್ತಲೇ ಕಲೆಯನ್ನು ಕೈಗೊಂಬೆಯೆಂದು ಪರಿಗಣಿಸುವ ಪ್ರಭೃತಿಗಳ ಸಂಖ್ಯೆ ಹೆಚ್ಚುವಾಗ ಸಮಕಾಲೀನ, ಪಾಶ್ಚಾತ್ಯ ಅಥವಾ ಯಾವುದೇ ಬುಡಕಟ್ಟು ನೃತ್ಯ ಕಲೆಗಳಲ್ಲಿ ತಮ್ಮಲ್ಲಿನ ಕಲೆಗೆ ಅನುಗುಣವಾದ ಸಾತ್ವಿಕವೋ, ಆಂಗಿಕವೋ ಆದ ಅವಶ್ಯಕತೆಗಳನ್ನು ಪರಿಪೂರ್ಣಗೊಳಿಸಿಕೊಳ್ಳುವಲ್ಲಿ ಪರಿಪಾಲಿಸುವ ಒಂದು ಬಗೆಯ ಶಿಸ್ತನ್ನು ಕಂಡೂ ಕಲಿತುಕೊಳ್ಳಲಾರದ ಮನಸ್ಸುಗಳೆಡೆಗೆ ಬೇಸರ, ಹೇಸಿಗೆ, ಭಯ ಹುಟ್ಟುತ್ತದೆ.

ಪಾಶ್ಚಾತ್ಯರಿಂದಲೂ ಸಾಕಷ್ಟು ಮನ್ನಣೆ ಗಳಿಸಿರುವ ಕಲೆಯೆಂದರೆ ಅದು ಭಾರತೀಯ ಲಲಿತಕಲೆಗಳು. ಶ್ರೀಮಂತ, ಸುಂದರ ಸುಮನೋಹರ, ಆನಂದಮಯ ಅರಳುವಿಕೆ ಇಲ್ಲಿನದು. ವರ್ಷವರ್ಷಕ್ಕೂ ನಮ್ಮಲ್ಲಿ ಸಾವಿರಾರು ನೃತ್ಯ ಕಲಾವಿದರು ತಯಾರಾಗುತ್ತಲೇ ಇದ್ದಾರೆ, ಪ್ರತಿಯೊಂದು ಕಲಾಪ್ರಕಾರಕ್ಕೂ ಸಾವಿರಾರು ಗುರುಗಳಿದ್ದಾರೆ, ಸಂಸ್ಥೆಗಳಿವೆ. ಆದರೆ ಪಾಶ್ಚಾತ್ಯ ನೃತ್ಯ ಕಲಾವಿದರ ಬಗ್ಗೆ ಅಲ್ಲಿನ ಜನತೆಗೆ ಇರುವ ಭಕ್ತಿ, ವಿಶ್ವಾಸ, ಸಮಾಜದಲ್ಲಿ ಕಲಾವಿದರಿಗಿರುವ ಅಗ್ರಸ್ಥಾನ, ಉತ್ತೇಜನ, ಅಸಾಮಾನ್ಯ ಪ್ರೋತ್ಸಾಹ, ಜೊತೆಗೆ ದೇವಾಂಶ ಸಂಭೂತರೆಂಬಂತೆ ಪೂಜಿಸುವ ಕಲಾಭಕ್ತರು ನಮ್ಮಲ್ಲಿ ಯಾಕೆ ವಿರಳ ? ಸಿನಿಮಾ ಒಂದನ್ನು ಹೊರತುಪಡಿಸಿದರೆ ಭಾರತೀಯ ನೃತ್ಯ ಕಲಾವಿದರು ಯಾಕಿಂತಹ ಮನೋಭಾವ ಹುಟ್ಟುಹಾಕುವಲ್ಲಿ ಎಡವುತ್ತಿದ್ದಾರೆ? ಅರ್ವಾಚೀನ ನಂಬಿಕೆ-ಗುರು ಪರಂಪರೆಗಳು ಬಾಯಿ ಮಾತೇ? 

ಮೊನ್ನೆ ಮೊನ್ನೆ ಬಡ ಪೋಷಕರೊಬ್ಬರು ಹೇಳಿದ ಮಾತು ನೆನಪಾಗುತ್ತದೆ. ಡ್ಯಾನ್ಸ್ ಎಲ್ಲಾ ನಮ್ಮಂತವರಿಗಲ್ಲ. ಕಲಿಯೋದಕ್ಕೂ, ಕಲಿತುಕೊಂಡು ಮುಂದುವರಿಸಲಿಕ್ಕೂ ಕೈಯ್ಯಲ್ಲಿ ಕಾಸು ಬೇಕು, ಪ್ರತಿಭೆಯಲ್ಲ!

ಯೋಚಿಸಬೇಕಲ್ಲವೇ?

ಪ್ರೀತಿಯಿಂದ ನಿಮ್ಮ

-ಸಂಪಾದಕರು

Leave a Reply

*

code