ಅಂಕಣಗಳು

Subscribe


 

ಭಟ್ಟರು ಹಿಡಿದ ಪಟ್ಟಿಗೆ ಉತ್ತರಿಸಲು ಶೇಣಿಯವರಿಗೂ ಕಷ್ಟವಾಗಿತ್ತು !

Posted On: Saturday, February 25th, 2012
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ತಿಟ್ಟು ಲೆಕ್ಕಾಚಾರಗಳನ್ನು ಬದಿಗಿಟ್ಟ ನಂತರವೂ ಯಕ್ಷಗಾನವನ್ನು ಎರಡು ರೀತಿಯಲ್ಲಿ ವಿಂಗಡಿಸುವುದಕ್ಕೆ ಸಾಧ್ಯ. ಹೌದು, ಯಕ್ಷಗಾನ ತಾಳಮದ್ದಳೆ ಅನ್ನುವುದು ಯಕ್ಷಗಾನದಷ್ಟಲ್ಲದಿದ್ದರೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದ ಯಕ್ಷಲೋಕದ ಒಂದು ಭಾಗ. ಯಕ್ಷಗಾನಕ್ಕೆ ಜನ ಬರುವುದು ವೇಷಭೂಷಣಗಳನ್ನೊಳಗೊಂಡ ಕುಣಿತ, ನಾಟ್ಯಗಳಿಗಾಗಿ ಮಾತ್ರ ಅನ್ನುವ ಕಲ್ಪನೆಯಿದ್ದರೆ ಅದು ತಪ್ಪು ಅನ್ನುವುದಕ್ಕೆ ಸಾಕ್ಷಿ ತಾಳಮದ್ದಳೆಗಳು. ನಮಗೆಲ್ಲಾ ತಿಳಿದಿರುವಂತೆ ತಾಳಮದ್ದಳೆಗಳಲ್ಲಿ ಯಾವುದೇ ಕುಣಿತ ಇಲ್ಲ, ವೇಷ ಭೂಷಣಗಳಿಲ್ಲ; ಇರುವುದು ಕೇವಲ ಭಾಗವತಿಕೆ ಮತ್ತು ಅರ್ಥಗಾರಿಕೆ. ಆದರೂ ಇದಕ್ಕೆ ಅಸಂಖ್ಯ ಜನ ಸೇರುತ್ತಾರೆಂದರೆ ಯಕ್ಷಗಾನದ ಮೂಲದಲ್ಲಿರುವ ಆಕರ್ಷಣೆಯನ್ನು ಸ್ಪಷ್ಟವಾಗಿ ಗಮನಿಸಬಹುದು.

ಈ ಯಕ್ಷಗಾನ ಮತ್ತು ತಾಳಮದ್ದಳೆಗಳ ನಡುವೆ ಮೇಲ್ನೋಟದ ವ್ಯತ್ಯಾಸಗಳಾಚೆಗೂ ಒಂದು ಗಮನಾರ್ಹ ಸಂಗತಿಯಿದೆ. ಯಕ್ಷಗಾನದಲ್ಲಿ ಮನರಂಜನೆಗೆ ಅಧಿಕ ಒತ್ತನ್ನಿತ್ತರೆ ತಾಳಮದ್ದಳೆಯಲ್ಲಿ ಬೌದ್ಧಿಕ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಆದಾಗ್ಯೂ ಇವೆರಡರಲ್ಲೂ ಮನರಂಜನೆ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ ಅನ್ನುವುದು ಯಕ್ಷಗಾನದ ಹೆಚ್ಚುಗಾರಿಕೆ!

ತಾಳಮದ್ದಳೆ ಅನ್ನುವಾಗ ಅನೇಕ ಪ್ರಸಿದ್ಧರ ಹೆಸರುಗಳು ಹಾದುಹೋಗುತ್ತವೆ. ಅಂತಹವರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಪೆರ್ಲ ಕೃಷ್ಣ ಭಟ್ ಅನ್ನುವ ವಿದ್ವಾಂಸರ ಅರ್ಥಗಾರಿಕೆ ಇಂದಿಗೂ ಅನೇಕರಿಗೆ ನೆನಪಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಅಡ್ಯನಡ್ಕ ಮಾರ್ಗವಾಗಿ ಕೇರಳಕ್ಕೆ ಅಡಿಯಿರಿಸಿ ಸ್ವಲ್ಪ ಮುಂದುವರಿದಾಗ ಸಿಗುವ ಊರೇ ಪೆರ್ಲ. ಇಲ್ಲಿಯ ಸುದ್ದಿ ಬಂದಾಗ ಹಿರಿಯ ಯಕ್ಷಗಾನಾಸಕ್ತರು ಕಿವಿ ನಿಮಿರಿಸುತ್ತಾರೆ. ಮಾತ್ರವಲ್ಲ, ಕೃಷ್ಣ ಭಟ್ಟರ ವಿಚಾರ ಬಂದಾಗ ಅವ್ರ ಅರ್ಥಗಾರಿಕೆ ಅಂದ್ರೆ ಭಯಂಕರ ಅನ್ನುವ ಅನೇಕ ಮಂದಿಯನ್ನು ನಾನು ನೋಡಿದ್ದೇನೆ. ಹಿಂದಿ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ವಿದ್ವತ್ತನ್ನು ಹೊಂದಿರುವ ಅವರು ಅರ್ಥಗಾರಿಕೆಯಲ್ಲೂ ಉತ್ಕೃಷ್ಟತೆಯನ್ನು ಸಾಧಿಸಿದವರು. ಅನೇಕರ ಬಾಯಿಯಲ್ಲಿ ಹಿಂದಿ ಪಂಡಿತ ಎಂದೇ ಖ್ಯಾತರಾಗಿರುವ ಅವರಿಗೆ ಪುರಾಣಗಳ ಕುರಿತು ಸಾಕಷ್ಟು ತಿಳುವಳಿಕೆ, ಜ್ಞಾನವಿರುವುದು ತಾಳಮದ್ದಳೆಯ ಕ್ಷೇತ್ರದಲ್ಲಿ ಅವರಿಗೊಂದು ವಿಶೇಷ ಸ್ಥಾನ ದಕ್ಕಲು ಕಾರಣ ಎಂದರೆ ತಪ್ಪಲ್ಲ.

ಪ್ರಸ್ತುತ ೮೮ರ ಹರೆಯದಲ್ಲಿರುವ ಭಟ್ಟರು ತಾಳಮದ್ದಳೆಗಳಲ್ಲಿ ಅರ್ಥ ಹೇಳುವುದನ್ನು ನಿಲ್ಲಿಸಿದ್ದರೂ ಅವರ ಆ ದಿನಗಳ ಕೌರವ, ಕರ್ಣ, ವಿದುರ, ಅತಿಕಾಯ, ಪರಶುರಾಮ, ಪಂಚವಟಿಯ ರಾಮ…ಮೊದಲಾದ ಪಾತ್ರಗಳು ರಂಗಕ್ಕೊಂದು ಅರ್ಥಕೊಡುತ್ತಿದ್ದವು. ಶೇಣಿ, ದೊಡ್ಡ ಸಾಮಗ(ಶಂಕರನಾರಾಯಣ ಸಾಮಗ) ಮೊದಲಾದ ಘಟಾನುಘಟಿಗಳಿಗೆದುರಾಗಿ ಕೂರುವುದೆನ್ನುವಾಗ ಅನೇಕ ಅರ್ಥಧಾರಿಗಳು ಒಳಗೊಳಗೇ ತಕಬುಕಿ ಅನುಭವಿಸುತ್ತಿದ್ದರೆ ಭಟ್ಟರು ಒಂದಿನಿತೂ ಅಳುಕದೆ ಸಮರ್ಥವಾಗಿ ವಾದಿಸುತ್ತಿದ್ದರು. ಯಾಕೆಂದರೆ ಅಂಥ ಪ್ರಸಿದ್ಧರನ್ನು ಎದುರು ಹಾಕಿಕೊಳ್ಳುವಷ್ಟು ಗಟ್ಟಿತನ ಭಟ್ಟರಲ್ಲೂ ಇತ್ತು. ಅಲ್ಲದೆ ಅಂದಿನ ಪ್ರಮುಖ ಅರ್ಥಧಾರಿಗಳಾಗಿದ್ದ ಪೊಳಲಿ ನಾರಾಯಣ ಶಾಸ್ತ್ರಿ, ಪುತ್ತೂರು ನಾರಾಯಣಕಿಲ್ಲೆ ಮೊದಲಾದವರೆದುರೂ ಅರ್ಥ ಹೇಳಿ ಭಟ್ಟರು ವಾಕ್ಚಾತುರ್ಯ ಮೆರೆದವರು. ಎಪ್ಪತ್ತು ಎಂಬತ್ತರ ದಶಕ ಭಟ್ಟರ ಪರ್ವ ಕಾಲವಾಗಿತ್ತು. ಹಾಂ, ಹಾಗಂತ ಭಟ್ಟರು ಆ ದಶಕಗಳಿಗೆ ಮಾತ್ರ ಸೀಮಿತರೆಂದಲ್ಲ, ಸುಮಾರು ೨೦೦೦ನೇ ಇಸವಿಯವರೆಗೂ ಅವರು ಅರ್ಥವೈಭವವನ್ನು ಸಾಕ್ಷಾತ್ಕರಿಸಿದವರು ಎಂಬುದನ್ನೂ ಗಮನಿಸಬೇಕು !

ಅದೇನೇ ಇರಲಿ, ಅವರ ಆ ದಿನಗಳಲ್ಲಿ ನಡೆದ ಸಂಗತಿಯೊಂದನ್ನು ನಿಮಗೆ ಹೇಳಬೇಕು. ಅದು ಭೀಷ್ಮ ವಿಜಯ ಪ್ರಸಂಗ. ಭಟ್ಟರದು ಪರಶುರಾಮ. ಶೇಣಿಯವರದ್ದು ಭೀಷ್ಮ. ಯುದ್ಧದಲ್ಲಿ ಗೆದ್ದ ಮೇಲೆ ಭೀಷ್ಮ ವಿವಾಹವನ್ನು ನಿರಾಕರಿಸಿದಾಗ ಅಂಬೆ ಪರಶುರಾಮರಲ್ಲಿಗೆ ತೆರಳಿ ದೂರಿಡುವುದು ನಮಗೆಲ್ಲಾ ತಿಳಿದದ್ದೇ. ಶೇಣಿ ಎಷ್ಟು ಚುಟುಕಾಗಿಯೂ ಅರ್ಥ ಹೇಳಿ ಮುಗಿಸುವ ಹಾಗೂ ಅಗತ್ಯ ಬಿದ್ದರೆ ಎಷ್ಟು ದೀರ್ಘ ಅರ್ಥವನ್ನೂ ಹೇಳಬಲ್ಲ ಸಾಮರ್ಥ್ಯ ಇದ್ದವರು. ಅದು ಅವರ ಯೋಗ್ಯತೆಯೂ ಹೌದು, ತಂತ್ರಗಾರಿಕೆಯೂ ಹೌದೆಂದು ಕೆಲವರು ಅಭಿಪ್ರಾಯಿಸುವುದುಂಟು. ಅದೇನೇ ಇರಲಿ, ಆ ದಿನದ ಶೇಣಿ-ಭಟ್ಟರ ಮುಖಾಮುಖಿ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು. ಅಂಬೆ ದೂರಿಟ್ಟ ಮೇಲೆ ಭೀಷ್ಮ-ಪರಶುರಾಮರು ಎದುರಾದರು. ಭಟ್ಟರು ಭೀಷ್ಮನಿಗೆ(ಶೇಣಿ) ಕೇಳಿದ್ದು ಸ್ಪಷ್ಟ ಪ್ರಶ್ನೆ. ಭೀಷ್ಮಾ, ನೀನು ಮದುವೆ ಆಗುವವನಲ್ಲ ಎಂದಾದ ಮೇಲೆ, ಮದುವೆಗೆಂದೇ ಆಯೋಜಿಸಲಾಗಿದ್ದ ಯುದ್ಧದಲ್ಲಿ ಭಾಗಿಯಾಗಿ ಪೌರುಷ ತೋರಿದ್ದೇಕೆ? ಆಯಿತು, ಯುದ್ಧ ಮುಗಿದ ಮೇಲಾದರೂ ನಾನು ಮದುವೆ ಆಗೋದಿಲ್ಲ, ಮದುವೆ ನನ್ನ ತಮ್ಮಂದಿರೊಂದಿಗೆ ಅಂತ ಹೇಳಬೇಕಿತ್ತು. ಅದೂ ಹೇಳದೆ ಅಂಬೆ-ಅಂಬಾಲಿಕೆ-ಅಂಬಿಕೆಯರನ್ನುದ್ದೇಶಿಸಿ ಏರಿರೈರಥವನ್ನು ಅಂದದ್ದೇಕೆ?

ಎದುರುವಾದಿಯೊಂದಿಗೆ ತೀರಾ ಸಿಕ್ಕಿಹಾಕಿಕೊಳ್ಳುವ ಪ್ರಸಂಗ ಬಂದರೆ ಸುದೀರ್ಘ ಅರ್ಥಗಾರಿಕೆಯನ್ನು ಮೆರೆಸಿ ಮೂಲ ಪ್ರಶ್ನೆಯನ್ನು ಮರೆಸಿ, ತಾವು ಸಿಕ್ಕಿಯೂ ಬೀಳದೆ ಕಥೆ ಮುಂದುವರೆಸುತ್ತಿದ್ದವರು ಶೇಣಿ. ಆದರೆ ಆ ದಿವಸ ಮಾತ್ರ ಶೇಣಿಯವರು ಅಂದುಕೊಂಡಂತೆ ಆಗಲಿಲ್ಲ ! ಶೇಣಿ ಆ ಪ್ರಶ್ನೆಗೆ ಸುಮಾರು ಇಪ್ಪತ್ತು ನಿಮಿಷಕ್ಕಿಂತಲೂ ಅಧಿಕ ಸಮಯ ಅರ್ಥ ಹೇಳಿದರೂ ಭಟ್ಟರು ಮಾತ್ರ ಪಟ್ಟು ಬಿಡಲಿಲ್ಲ. ಶೇಣಿ ಪೂರ್ತಿ ಮುಗಿಸಿದ ಮೇಲೆ ಭಟ್ಟರು ಪುನಾ ನನಗೆ ಬೇಕಾದ್ದು ಅದಲ್ಲ, ನೀನು ಮದುವೆ ಆಗುವವನಲ್ಲ ಎಂದಾದ ಮೇಲೆ… ಅಂತ ಮೊದಲಿನ ಪ್ರಶ್ನೆಯನ್ನೇ ಪುನರುಚ್ಚರಿಸಿದರು. ಅರ್ಥ ಹೇಳುತ್ತಾ ಹೇಳುತ್ತಾ ಎದುರುವಾದಿಯ ಪ್ರಶ್ನೆಯನ್ನೇ ಮರೆಸುವ ಶೇಣಿಯವರ ಚಾತುರ್ಯ ಭಟ್ಟರಿಗೂ ಗೊತ್ತಿತ್ತಾದ್ದರಿಂದ ತನ್ನ ಪ್ರಶ್ನೆಯನ್ನು ಅವರು ಮರೆಯಲೇ ಇಲ್ಲ. ಶೇಣಿ ಮತ್ತೊಮ್ಮೆ ಸುದೀರ್ಘ ಅರ್ಥ ಹೇಳಿದರು. ಆಗಲೂ ಭಟ್ಟರು ನನ್ನ ಪ್ರಶ್ನೆ ಅದಲ್ಲ, ನೀನು ಮದುವೆ ಆಗೋದಿಲ್ಲ ಅಂತಾದ ಮೇಲೆ…ಎಂದು ಮೂಲಪ್ರಶ್ನೆಗೇ ಅಂಟಿಕೊಂಡರು ! ಶೇಣಿಯವರಿಗೆ ಈ ಪ್ರಶ್ನೆಯನ್ನು ದಾಟುವುದು ಕಷ್ಟ ಅನ್ನುವ ಅರಿವಾಯಿತೇನೋ. ಯಾಕೆಂದರೆ ಅದು ಶೇಣಿಯವರ ಸೋಲಲ್ಲ, ಪುರಾಣ ಇರುವುದೇ ಹಾಗೆ! ಹೀಗಿರುವಾಗ ಶೇಣಿಯವರು ತಾನೇ ಏನು ಮಾಡಲು ಸಾಧ್ಯ? ತನಗೆ ಉತ್ತರಿಸಲಾಗದು ಅನಿಸತೊಡಗಿದಾಗ ಶೇಣಿ ತಬ್ಬಿಬ್ಬಾದರು. ಮುಖ ಕೆಂಪಡರಿತು. ಯಕ್ಷಜೀವನದಲ್ಲಿ ಶೇಣಿಯವರಿಗೆ ಇಂಥಾ ಅನುಭವ ಆದದ್ದು ತುಂಬಾ ಕಡಿಮೆ !

ಅಂತೂ ಕೊನೆಗೆ ಸ್ವತಃ ಶೇಣಿಯವರಿಗೇ ತನಗೆ ಈ ಪ್ರಶ್ನೆಗೆ ಉತ್ತರಿಸಲಾಗದು ಎಂದು ಗೊತ್ತಾಗಿದೆಯೆಂದು ಗೊತ್ತಾದ ಮೇಲೆ ಭಟ್ಟರು ತಮ್ಮ ಪಟ್ಟನ್ನು ಸಡಿಲಿಸಿದರು. ತಾಳಮದ್ದಳೆ ಮುಂದುವರೆಯಿತು.

ಭಟ್ಟರ ಪುರಾಣಜ್ಞಾನಕ್ಕೆ, ಅವರು ಪುರಾಣವನ್ನು ಗಮನಿಸಿದ ಸೂಕ್ಷ್ಮತೆಗೆ ಬೇರೊಂದು ಉದಾಹರಣೆ ಬೇಕಿಲ್ಲ!

 

 

Leave a Reply

*

code