ಅಂಕಣಗಳು

Subscribe


 

ಪುಣ್ಯಕೋಟಿ- ಹಳೆ ಕಥೆಗೆ ಹೊಸ ಕಾವ್ಯಭಾಷ್ಯ

Posted On: Wednesday, August 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ಕವಿಗಳು, ಅವಧಾನ ಪೃಚ್ಛಕರು, ಬೆಂಗಳೂರು

ಪುಣ್ಯಕೋಟಿ- ಕನ್ನಡದ ಸಾರ್ವಕಾಲಿಕ ಮೇರುಕಾವ್ಯ. ಛಂದಸ್ಸು, ಮಾತ್ರಾಗಣ, ಅಲಂಕಾರಭರಿತ ಈ ಕಾವ್ಯದ ಕಥೆ ಬಹುಲೋಪಾಖ್ಯಾನವೆಂಬುದಾಗಿ ಪುರಾಣಕಥಾಕೋಶಗಳ ಎಳೆಗಳಲ್ಲೂ ಕಂಡುಬರುತ್ತದೆ. ಆದರೆ ರಸಸ್ಪಂದಿ ಕಾವ್ಯವಾಗಿ ಎಳೆಯರಿಂದ ಹಿರಿಯರ ವರೆಗೆ ಸಾಮಾನ್ಯರಿಂದ ವಿದ್ವಾಂಸರ ವರೆಗೆ ಜನಮಾನಸದಲ್ಲಿ ಎಂದೆಂದಿಗೂ ಗುನುಗುನಿಸುವಂತಾಗಿರುವುದು ಕನ್ನಡದ ಕವಿಮನಸ್ಸಿನ ಹೆಗ್ಗಳಿಕೆ. ಈ ಗೋವಿನ ಹಾಡು; ಕೇವಲ ಬಾಲಬೋಧೆಯಷ್ಟೇ ಅಲ್ಲದೆ, ಕಾವ್ಯವೊಂದು ಹೇಗೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮಾದರಿಗಳನ್ನು ನಿರ್ಮಿಸಬಹುದೆಂಬುದಕ್ಕೆ ಸಾಕ್ಷಿ. ಯಕ್ಷಗಾನದಲ್ಲಂತೂ ಪುಣ್ಯಕೋಟಿಯು ಪ್ರತ್ಯೇಕವಾದ ಪ್ರಸಂಗರಚನೆಯೂ ಆಗಿದ್ದು ಹೊಸನಗರ ಯಕ್ಷಗಾನ ಮೇಳವು ನೂತನವೆನಿಸುವ ಯಕ್ಷಗಾನೀಯ ದೃಷ್ಟಿಯನ್ನೂ ಕೊಟ್ಟಿದೆ. ಹೀಗೆ.., ಈ ಗೋವಿನ ಹಾಡು ಓದಿಗೆ-ಹಾಡಿಗಷೆ ಸೀಮಿತವಾಗದೆ ಹಲವು ಬಗೆಯಲ್ಲಿ ರಂಗಪ್ರಯೋಗಗಳಾಗಿ, ನೃತ್ಯನಿರ್ಮಿತಿಯಾಗಿ ತೆರೆಗೆ ಬಂದಿದ್ದು; ಪ್ರಸ್ತುತ ಬದಲಾದ ಸಂದರ್ಭಗಳಲ್ಲೂ ಸಮಕಾಲೀನ ಅಭಿರುಚಿಗಳ ನಡುವೆಯೂ ಹೊಸ ಚಿಂತನೆಗಳಿಗೆ, ವಿಮರ್ಶೆಗಳಿಗೆ ಅವಕಾಶ ಒದಗಿಸುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ನಮ್ಮ ಸನ್ಮಿತ್ರರೂ, ವಿದ್ವಾಂಸರೂ, ಅವಧಾನ ಪೃಚ್ಛಕರೂ, ಕವಿಗಳೂ, ವಿಮರ್ಶಕರೂ, ಕಲಾವಿದರೂ ಆದ ಶ್ರೀಯುತ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಪುಣ್ಯಕೋಟಿಯ ಕಥೆಗೆ ಹೊಸ ಆವರಣವನ್ನು ತಮ್ಮ ಕವಿತ್ವದ ಮೂಲಕ ಕಟ್ಟಿಕೊಟ್ಟಿದ್ದಾರೆ. ಮೂಲ ಗೋವಿನ ಹಾಡುಗಳ ಕೆಲವು ಸಾಲುಗಳನ್ನು ಸಂದರ್ಭೋಚಿತವಾಗಿ ತೆಗೆದುಕೊಂಡರೂ ನಿರೂಪಣೆಯಲ್ಲಿ ಹೊಸ ದೃಷ್ಟಿಕೋನ, ಸಾಧ್ಯತೆಯನ್ನಿತ್ತದ್ದು ಈ ಪುಣ್ಯಕೋಟಿಯ ವಿಶೇಷ.

ಗೋವಿನ ಕರುಣಪೂರಿತ ದೃಷ್ಟಿಕೋನದಿಂದ ಆಪ್ತವಾಗುತ್ತಾ, ವ್ಯಾಘ್ರನ ಆತ್ಮಹತ್ಯೆಯೇ ಸೂಕ್ತವೆನ್ನುತ್ತದೆ ಆ ಪುಣ್ಯಕೋಟಿಯ ಕಥನಕವನ. ಆದರೆ ನಿಸರ್ಗಸಹಜ ಹಸಿವಿನ ಧರ್ಮಕ್ಕೆ ಅನುಗುಣವಾಗಿ ನಡೆದುಕೊಂಡರೂ ನಂತರ ಅದನ್ನು ತಡೆಹಿಡಿದು ಗೋವಿನ ಸತ್ಯತೆಯನ್ನು ಕೊಂಡಾಡುವ ವ್ಯಾಘ್ರನೂ ಆದರ್ಶಪ್ರಾಯನೇ ಹೌದು; ಹೀಗೆ ಧೀರೋದಾತ್ತ ನಾಯಕನಾಗುವ ಆತನಿಗೆ ಆತ್ಮಹತ್ಯೆಯ ಮಾಡಿಕೊಳ್ಳುವ ಪಾಪ, ದುಷ್ಟನೆಂಬ ಹಣೆಪಟ್ಟಿಯ ಹೇರಿಕೆಯೇತಕೆ ಎಂದು ಪ್ರಶ್ನಿಸುವ ಉಪಾಧ್ಯಾಯರು; ರಂಗರೂಪಕಕ್ಕೆ ಹೊಂದುವಂತೆ ಗೋವು- ವ್ಯಾಘ್ರನ ಸಹಜ ನಡೆಗಳನ್ನು, ಧರ್ಮಸೂಕ್ಷ್ಮವನ್ನು ಚಿಕ್ಕದಾಗಿ-ಚೊಕ್ಕದಾಗಿ ಈ ಪುಣ್ಯಕೋಟಿಯಲ್ಲಿತ್ತಿದ್ದಾರೆ. ಈಗಾಗಲೇ ಹಲವು ವರುಷಗಳ ಹಿಂದೆ ಯಕ್ಷಗಾನೀಯ ನೆಲೆಯಲ್ಲಿ ಕೊರ್ಗಿ-ಮಂಟಪ ಪ್ರಭಾಕರ ಉಪಾಧ್ಯಾಯರ ಸಾಂಗತ್ಯದಲ್ಲಿ ರಂಗರೂಪದಲ್ಲಿ ಪ್ರದರ್ಶಿತವಾದ ಈ ಕಾವ್ಯವು ದಿ.ಸುಂದರೀ ಸಂತಾನಂ ಅವರ  ಅಭಿವ್ಯಕ್ತಿಯಲ್ಲಿ ಹೆಚ್ಚಿನ ಸಾಧ್ಯತೆ, ನೋಟ, ಪ್ರಯೋಗಾನುಕೂಲತೆ, ಯಶಸ್ಸನ್ನು ನಾಡಿನೆಲ್ಲ್ಲೆಡೆಯಷ್ಟೇ ಅಲ್ಲದೆ ಹೊರನಾಡುಗಳಲ್ಲೂ ಸಾಧಿಸಿತು.

ಪ್ರಯೋಗಾಸಕ್ತರು ಸೂಕ್ತವಾದ ರೀತಿಯಲ್ಲಿ ರಂಗ-ನಾಟ್ಯಕ್ಕೆ ಬಳಸಿಕೊಳ್ಳಬಹುದು ಎಂಬ ಆಶಯದಡಿಯಲ್ಲಿ ನೂಪುರದ ಓದುಗರಿಗೆ ನೀಡಿದ್ದಾರೆ. ಈ ಸದಭಿರುಚಿ ಸದ್ವಿನಿಯೋಗವಾಗಲಿ.

-ಸಂಪಾದಕಿ

 

ಪುಣ್ಯಕೋಟಿ

ಧರಣಿಮಂಡಲ ಮಧ್ಯದೊಳಗೇ |
ಮೆರೆದ ಕರ್ಣಾಟಕದಿ ಪ್ರಜೆಗಳು |
ಸ್ಮರಿಸಿ ನಮಿಸುವ ಪುಣ್ಯಕೋಟಿಯ |
ಚರಿತ ಪುಟವನು ತೆರೆವೆನು ||

(ವ್ಯಾಘ್ರ ಪ್ರವೇಶ)
ತ್ರಿಪುಟ ತಾಲ
ಅಡವಿಯಂಚಲಿ ಹರಿವ ಕಿರುತೊರೆ | ದಡದಿ ಕಗ್ಗವಿ ಮುಡುಕಿನಲಿ ಕಸು |
ವುಡುಗಿ ಮೈ ನೆಲಕೊರಗಿ ಕೊರಗಿದ | ಧಡಿಗ ವ್ಯಾಘ್ರ ||

ಅಷ್ಟ ತಾಲ
ತಾಳಿಕೊಳ್ಳುವುದೆಂತು ಹಸಿವೆಯನು | ಏಳೆಂಟು ದಿನದಿಂ |
ಗಾಳಿ ನೀರನು ಕುಡಿದು ಬದುಕಿಹೆನು ||
ಕೀಲಿಸುತ ಕಣ್ಣನ್ನು ಹುಡುಕಿದೆ | ಬೀಳದಾಯಿತು ಬೇಟೆ, ಮಾಂಸದ |
ಕೂಳನೇತಕೆ ವಿಧಿಸಿದನೊ ವಿಧಿ | ಕಾಳು ಹುಲ್ಲನು ತಿನ್ನಗೊಡದೇ ||

ರೂಪಕ ತಾಲ
ಹರಕೆ ಹೊರುವೆ ಕೇಳು ದೈವವೇ | ಇಂದಿಗುಣಿಸು | ದೊರಕಲದರೊಳರ್ಧವೀಯುವೆ || ಕರುಣೆಗಣ್ಣು ತೆರೆಯದಿದ್ದರೆ | ಪ್ರಾಣವನ್ನು | ತೊರೆವೆನಾಸೆ ಬಿಡುವೆನೀಧರೆ||
(ನಿರ್ಗಮನ)

(ಪುಣ್ಯಕೋಟಿಯ ಪ್ರವೇಶ)
ತ್ರಿಪುಟ ತಾಲ
ಮೂಡಣವು ಕೆಂಪೇರೆ ತಟ್ಟುತ |
ಕೋಡಿನಲಿ ಕಂದನನು ಮೊಲೆಹಾ |
ಲೂಡಿಸಿದಳಾ ಪುಣ್ಯಕೋಟಿಯು | ತೀಡಿ ನೆಕ್ಕಿ ||

ಏಕ ತಾಲ
ಪಡೆಗಳ ಜೊತೆ ಮೇ | ಲಡವಿಲಿ ಮೇಯುವ | ಸಡಗರದಲಿ ಮುಂ |ದಡಿಯಿಡಲು ||
ನಡೆದವಳೊಮ್ಮೆಲೆ | ತುಡಿತದಿ ಮರಳುತ | ಬಡಕರುವಿಗೆ ಹಾಲ್ | ಕುಡಿಸಿದಳು ||

ಸಾಂಗತ್ಯ
ಹಸಿದರೆ ಹಸಿ ಹುಲ್ಲಿ | ನೆಸಳ ತಿನ್ನಲೆ ಕಂದ | ತೃಷೆಗಾಗಿ ಬಾಣಿ ನೀರಿಹುದು ||
ಬಸವಳಿದರೆ ನೀ ನಿ | ದ್ರಿಸು ಭೀತಿ ಬೇಡವೆ | ನ್ನಸುವೆ ನಿನ್ನಲ್ಲಿ ನೆಟ್ಟಿಹುದು ||

(ಪುಣ್ಯಕೋಟಿ ಇತರ ಹಸು ಕರುಗಳೊಂದಿಗೆ ಮೇಯಲು ಹೊರಡುತ್ತಾಳೆ. ದಾರಿಯಲ್ಲಿ ಕೆಲವು ಕರುಗಳು ಗುದ್ದಾಡಲು ಪ್ರಾರಂಭಿಸುತ್ತವೆ. ಆಗ ಪುಣ್ಯಕೋಟಿಯು ಹೇಳುವ ಹಿತವಾದ )

ಝಂಪೆ ತಾಲ
ಮಕ್ಕಳಾಟದಿ ಮೊಳೆತ | ತಿಕ್ಕಾಟ ಮುಂದೆ ತಂ | ದಿಕ್ಕೀತು ಹಗೆತನವನು ||
ಮುಕ್ಕಾಗದಂತೊಲವು | ಚಕ್ಕಂದವಿರಲಿ ಮೈ | ನೆಕ್ಕಿ ಸೂಸಿರಿ ಜಾಣನು ||

ಅಷ್ಟ ತಾಲ
ಹುಟ್ಟು ಕೊಟ್ಟಿಹ ದೇವ ಹುಲ್ಲನಿತ್ತಿಹನು ||
ಹೊಟ್ಟೆ ತುಂಬಿಸಿಕೊಳ್ಳಿ ಹುಡುಕಿ ಮೇವನ್ನು ||
ಬಿಟ್ಟು ಪೋಗದಿರಿ ಗುಂಪನು ಮೈಯ ಮರೆತು ||
ಗುಟ್ಟಾಗಿ ಹೊಂಚುವ ಹುಲಿರಾಯ ಮರೆತು ||

(ಪುಣ್ಯಕೋಟಿಯ ಸ್ವಗತ)

ಏಕತಾಲ
ನೆಲದಲಿ ತಂಪಿದೆ | ತಲೆ ಮೇಗಡೆ ಬಾ | ನಲಿ ಸುಡುತಿಹನಲ | ನೇ…ಸರ ||
ಒಳ ಧಗೆ ತಣಿಸಲು | ಸಲುವಂತಿಹ ನೀ | ರ್ಕೊಳುವೆನು ನೀಗುವೆ | ಬೇ…ಸರ ||

(ಪುಣ್ಯಕೋಟಿ ನೀರು ಕುಡಿಯಲು ತೊರೆ ಬಳಿ ಬಂದಾಗ ವ್ಯಾಘ್ರ ನೋಡುತ್ತದೆ)
ಝಂಪೆ ತಾಲ
ಕಂಡು ಬೇಟೆಯ ದೂರದಿ | ಉತ್ಸಾಹ | ಗೊಂಡು ಹೊಂಚಿದನು ಮನದಿ ||
ಹಿಂಡನಗಲಿಹ ಹಸುವನು | ಬಿಡಲುಂಟೆ | ಹಿಂಡಿ ಹೀರುವೆನಸುವನು ||

ಏಕ ತಾಲ
ನಿಲು ನಿಂತಲ್ಲಿಯೆ ಹಸುವೆ | ಒಡ | ಲೊಳು ಭುಗಿಲೆದ್ದಿದೆ ಹಸಿವೆ ||
ತಿಳಿಯದೆ ವ್ಯಾಘ್ರನ ಹೊಲವು | ಹಿ |ನ್ನೆಲೆಯಲಿ ಸಾವಿನ ನೆಲವು ||

ತ್ರಿಪುಟ ತಾಲ
ಒಂದು ಬಿನ್ನಹ ಹುಲಿಯೆ ಕೇಳೈ | ನೊಂದೆಯೇನೈ ಹಸಿವಲಿ ||
ಕೊಂದು ತಿನದಿರೆ ಗತಿಯು ಬೇರಿ | ಲ್ಲೆಂದು ಬಲ್ಲೆನು ನೀ ತಿಳಿ ||
ಕಂದನಿಹ ದೊಡ್ಡಿಯಲಿ ತುದಿಗಾ | ಲಿಂದ ಕಾಯುವ ನನ್ನನು ||
ಹಿಂದೆ ಬಹೆನಿತ್ತವಗೆ ನಾ ಕೊನೆ | ಬಿಂದು ಕೆಚ್ಚಲ ಹಾಲನು ||

ಝಂಪೆ ತಾಲ
ಕಳ್ಳನಿಗೆ ಪಿಳ್ಳೆ ನೆವ | ಸಲ್ಲುವುದು ನಾಡಲ್ಲಿ |
ಬಲ್ಲೆಯಾ ಕಾಡು ಬ | ಲ್ಪುಳ್ಳವನ ಹೊಲಬು ||
ಜೊಳ್ಳು ಮಾತಿಗೆ ಜೋತು | ಕೊಳ್ಳುವನು ನಾನಲ್ಲ |
ಒಳ್ಳೆ ಬೇಟೆಯ ಮೆದ್ದು | ಚೆಲ್ಲುವೆನು ಎಲುಬು ||

ಅಷ್ಟ ತಾಲ
ಮಾತೇನು ಜಾರುವ ಜೊಲ್ಲಲ್ಲ | ಗೋ | ಮಾತೆ ಎಂಬರು ಮಾತೆ ಸುಳ್ಳಲ್ಲ ||
ಮಾತೆಂದರದುವೆ ದೈವದ ರೂಪ | ಕೊಟ್ಟ ಮಾತು ತಪ್ಪಿದರೆ ನಾರಕ ಕೂಪ ||

ರೂಪಕ ತಾಲ
ನನ್ನ ಹಾಗೆ ಹಸಿದು ಕುಳಿತ | ನಿನ್ನ ಕಂದಗಾಗಿ ಸಿಕ್ಕ | ಅನ್ನ ಬಿಡುತಲಿರುವೆ ಮರೆಯದೇ ||
ಮರಳಿ ಸೇರು | ಗನ್ನಗತಕವನ್ನು ಗೈಯದೇ ||ಇಲ್ಲೆ ಕಾಯ್ವೆ | ಇನ್ನು ಬೇರೆ ಬೇಟೆ ಹೊಂಚದೇ ||

(ವ್ಯಾಘ್ರ ನಿರ್ಗಮನ)
( ಪುಣ್ಯಕೋಟಿ ಹಟ್ಟಿಗೆ ಬರುತ್ತಾಳೆ. ಕರುವಿಗೆ ವಿದಾಯ ಹೇಳುತ್ತಾ…)
ಅಷ್ಟ ತಾಲ
ಕುಡಿಯೊ ಹಾಲನು ಕರುಳ | ಕುಡಿಯೆ ನಾನಿನ್ನು ನಿ | ನ್ನೊಡನೆ ಬಾಳೆನು ಹುಲಿಗೆ ||
ನುಡಿಯಿತ್ತು ಬಂದೆ ನೀ | ಗಡವಿಗೆ ಪೋಪೆ ಸಂ | ಗಡಿಗರಿಪ್ಪರು ಬಾಳ್ಕೆಗೆ ||
(ಮರೆಯಲ್ಲಿ ನಿಂತು ಪುಣ್ಯಕೋಟಿಯ ಮಾತು ಕೇಳಿಸಿಕೊಂಡ ಗೌಡ ಹತ್ತಿರ ಬಂದು ಹೇಳುತ್ತಾನೆ)

ಝಂಪೆ ತಾಲ
ನೀ ನುಡಿದುದನು ಕೇಳ್ದೆನು | ಗೋಮಾತೆ | ಹೀನವ್ಯಾಘ್ರನ ಕೊಲುವೆನು ||
ಹಾನಿ ಹಿಂಸೆಯ ಗೈವಗೆ | ನ್ಯಾಯಪ್ರ | ಮಾಣಚರಿತವೆ ಕೇಡಿಗೆ ||

ಅಷ್ಟ ತಾಲ
ಬರಿದೆ ಆವೇಶ ಸಲ್ಲ | ನನ್ನೊಡೆಯ, ದೇ | ವರ ಚಿತ್ತದಂತೆ ಎಲ್ಲ ||
ಅರಿಯಬೇಕು ನಿಸರ್ಗ ಧರ್ಮದ | ತಿರುಳ ಸೂಕ್ಷ್ಮದಿ ಜೀವ ಜಗಕಿದೆ |
ನಿರತ ಸಾಪೇಕ್ಷತೆಯು ಹಿಂಸೆಯು | ದುರಿತವಾಗದು ನಿಯತಿನಿಯಮದಿ ||

ಝಂಪೆ ತಾಲ
ತಿಳಿದವನು ನಾನಲ್ಲ | ತಿಳಿದು ಮುಗಿಯುವುದಿಲ್ಲ |
ಹುಲಿಯ ಬಾಯಿಯ ಹೊಗಲು ಹೊರಟ ನಿನ್ನ ||
ಕಳೆದುಕೊಳುವುದನಷ್ಟೆ | ಹೊಳೆಗಣ್ಣು ಕಾಣುವುದು |
ಉಳಿದುಬಿಡು ಹುಲಿಯಿಹುದೆ ನಂಬಿ ನಿನ್ನ ||

ಪಲ್ಲವ
ಸತ್ಯ ನಮ್ಮಯ ತಾಯಿ ತಂದೇ | ಸತ್ಯ ನಮ್ಮಯ ಬಂಧು ಬಳಗ |
ಸತ್ಯವಾಕ್ಯಕೆ ತಪ್ಪಿ ನಡೆದರೆ | ಮೆಚ್ಚನಾ ಪರಮಾತ್ಮನು ||

(ಪುಣ್ಯಕೋಟಿ ಗವಿಯ ಬಾಗಿಲಲ್ಲಿ ನಿಂತು ಹೇಳುತ್ತಾಳೆ )

ಪಲ್ಲವ
ಖಂಡವಿದೆ ಕೋ ಮಾಂಸವಿದೆ ಕೋ | ಗುಂಡಿಗೆಯ ಬಿಸಿ ರಕ್ತವಿದೆ ಕೋ |
ಚಂಡವ್ಯಾಘ್ರನೆ ನೀನಿದೆಲ್ಲವ | ನುಂಡು ಸಮ್ತಸದಿಂದಿರು ||

(ವ್ಯಾಘ್ರ ಗವಿಯಿಂದ ಹೊರಬಂದು)
ಪುಣ್ಯಕೋಟಿಯ ದನಿಗೆ | ಕಣ್ಣು ಬಿಡುತೆಂದ ಸಂ |
ಪನ್ನ ಹಸುವೆದುರು ನಿಂತುದು ಕನಸೆ ನಿಜವೆ ||
ಗನ್ನಗೈಯದೆ ಬಂದ | ಹೆಣ್ಣೊಡಲ ಬಗೆಬಗೆದು |
ಉಣ್ಣಲದು ದಕ್ಕೀತೆ | ಗಣ್ಯವೇ ಹಸಿವೆ ||

ಏಕ ತಾಲ
ನಿಂತಿಹೆನೆದುರಲ್ಲಿ | ತಿನ್ನಲು | ಚಿಂತೆಯೆ ಮನದಲ್ಲಿ ||
ಭ್ರಾಂತಿಯ ಬಿಡು ಗುಣ | ವಂತನೆ ಮೂಳೆಯ |
ಕಂತೆಯ ಹರಿದೊಗೆ | ನೋಂತಿಹೆ ಮೃತ್ಯುವ ||

ಝಂಪೆ ತಾಲ
ಅಪರಾಧ ಕ್ಷಮಿಸು ಮಾತೆ | ಪಶುಧರ್ಮ | ಕಪವಾದ ನಿನ್ನ ನಡತೆ ||
ಶಪಥದಲಿ ಕೆಡಹಿ ಬೇಟೆ | ಕುಳಿತುಣ್ಣ | ಲುಪಹಾಸವರ್ಥವುಂಟೇ ||

(ವ್ಯಾಘ್ರನಿರ್ಗಮನ )
(ಭರತ ವಾಕ್ಯ ಪುಣ್ಯಕೋಟಿಯಿಂದ)

ಝಂಪೆ ತಾಲ
ತತ್ತ್ವದಾಚರಣೆಗಿಂತತ್ತ್ಯಂತ ಮುಖ್ಯ ಪರ |
ರುತ್ತಮಿಕೆ ಗೌರವಿಸಿ ಗುರುತಿಸುವುದಲ್ತೆ ||
ಕ್ಷುತ್ತಿನಲು ಪರಧರ್ಮ ಮಾನಿಸಿದ ವ್ಯಾಘ್ರನ ಮ |
ಹತ್ತು ಕನ್ನಡಿ ಸನಾತನದ ಧರ್ಮಕ್ಕೆ ||


ಮಂಗಲಾಶಂಸನಮ್
ರೂಪಕ/ತ್ರಿಪುಟ ತಾಲ
ಪುಣ್ಯಕೋಟಿಯ | ಪುಣ್ಯಚರಿತೆಯು || ಮಣ್ಣ ಮಂದಿಯ | ಚೆನ್ನ ಬಾಳಲಿ ||
ಮುನ್ನ ಚೋದನೆ | ಯನ್ನು ನೀಡಲಿ || ಧನ್ಯ ಮಾರ್ಗದಿ | ಕಣ್ಣ ತೆರೆಸಲಿ ||

Leave a Reply

*

code