ಅಂಕಣಗಳು

Subscribe


 

ಅರವತ್ತಾರರಲ್ಲೂ ಅಬ್ಬರಿಸುತ್ತಿರುವ ಅಭಿಮನ್ಯು!

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

 


ಪುತ್ತೂರು ಶ್ರೀಧರ ಭಂಡಾರಿ ಎಂದರೆ ರಂಗಸ್ಥಳವೂ ಒಮ್ಮೆ ಜಿಗಿಯುತ್ತದೆ! ಅವರೊಮ್ಮೆ ರಂಗಕ್ಕೆ ಬಂದರೆ ಸಾಕು ರಂಗವೇ ಉನ್ಮಾದಗೊಳ್ಳುತ್ತದೆ. ಸುಸ್ತೇ ಅರಿಯದ ಕಲಾವಿದ ಅವರು. ಹಾಗಾಗಿಯೇ ಸಿಡಿಲ ಮರಿ, ಪುಂಡುವೇಷದ ಗಂಡುಗಲಿ ಎಂಬೆಲ್ಲಾ ಬಿರುದುಗಳು ಅವರಿಗೆ ಸಂದಾಯವಾಗಿವೆ. ಇಂದಿಗೂ ಸಕ್ರಿಯವಾಗಿ ರಂಗದಲ್ಲಿ ತೊಡಗಿಸಿಕೊಳ್ಳುತ್ತಿರುವ ಭಂಡಾರಿಯವರ ವಯಸ್ಸು ನಾಡಿದ್ದು ಅಕ್ಟೋಬರ್ ಒಂದಕ್ಕೆ ಅರವತ್ತಾರು!

ಬೇರೆಲ್ಲಾ ಪಾತ್ರಗಳಲ್ಲಿ ಸಾಕಷ್ಟು ಮಿಂಚಿರುವುದು ಹೌದಾದರೂ ಭಂಡಾರಿಯವರ ಹೆಸರು ಕೇಳಿದಾಕ್ಷಣ ನೆನಪಾಗುವುದು ಅಭಿಮನ್ಯು. ಜೊತೆಜೊತೆಗೇ ಬಬ್ರುವಾಹನ, ಪರಶುರಾಮ, ಚಂಡ ಮುಂಡ, ಬಾಲಲೀಲೆಯ ಕೃಷ್ಣ ಇತ್ಯಾದಿ ಕೆಲವು ಪಾತ್ರಗಳು. ಅವರ ಈ ಪಾತ್ರಗಳನ್ನು ನೋಡಿದ ಮೇಲೆ ಬೇರೆ ಯಾರೇ ಆ ಪಾತ್ರಗಳನ್ನು ಮಾಡಿದರೂ ಈ ಪರಿ ಖುಷಿ ಸಿಗುವುದಿಲ್ಲ. ಅದರಲ್ಲೂ ಭಂಡಾರಿಯವರ ಅಭಿಮನ್ಯುವಿನ ಉತ್ಸಾಹ, ಅಬ್ಬರ, ಶೌರ್ಯ, ಕೌರವ ಮಹಾಸೈನ್ಯದೆಡೆಗೆ ನೋಡಿ ಇದೇನು ಮಹಾ ಅನ್ನುವ ಭಾವ ಮಹಾಭಾರತದ ಅಭಿಮನ್ಯುವಿಗೂ ಇತ್ತಾ ಗೊತ್ತಿಲ್ಲ! ಹಾಗಾಗಿ ಅಭಿಮನ್ಯುವಿನ ಬಗೆಗೆ ಜನರ ಅಭಿಮಾನ ಹೆಚ್ಚುವುದರಲ್ಲಿ ಶ್ರೀಧರ ಭಂಡಾರಿಯವರ ಪಾತ್ರವೂ ಇದೆ! ದೊಡ್ಡಪ್ಪಾ ಕೊಡಿ ಅಪ್ಪಣೆ, ಕೌರವ ಸೈನ್ಯವನ್ನು ಪುಡಿಗಟ್ಟಿಬರುತ್ತೇನೆ ಎಂದು ಭಂಡಾರಿಯವರ ಅಭಿಮನ್ಯು ಧರ್ಮರಾಯನಲ್ಲಿ ಹೇಳುವಾಗ ಧರ್ಮಜನಿಗೇನು ಕೂತಿರುವ ಪ್ರೇಕ್ಷಕನಿಗೂ ಇವ ಗೆದ್ದೇ ಬರುತ್ತಾನೆ ಅನ್ನುವ ವಿಶ್ವಾಸ ಮೂಡುತ್ತದೆ ; ಒಂದು ಪಾತ್ರವನ್ನು ಆ ರೀತಿಯಲ್ಲಿ ಪ್ರಸ್ತುತಪಡಿಸುವುದೆಂದರೆ ತಮಾಷೆಯ ಮಾತಲ್ಲ.

ಶ್ರೀಧರ ಭಂಡಾರಿಯವರ ಧೀಂಗಿಣ ಬಹಳಷ್ಟು ಪ್ರಸಿದ್ಧ. ಶ್ರೀಧರ ಭಂಡಾರಿ ಬಿಡಿ, ಅವ್ರು ಕಮ್ಮಿ ಅಂದ್ರೂ ಮುನ್ನೂರು ಕುತ್ತು(ಧೀಂಗಿಣ) ಹಾಕ್ತಾರೆ ಅನ್ನುವುದು ಪ್ರತಿಯೊಬ್ಬರೂ ಹೇಳುತ್ತಿದ್ದ ಮಾತು. ಆದರೆ ಭಂಡಾರಿಯವರು ಕೇವಲ ಕುತ್ತು ಹಾಕುವುದಕ್ಕಷ್ಟೇ ಸೀಮಿತರಾಗಲಿಲ್ಲ. ಆದ್ದರಿಂದಲೇ ಕುತ್ತಿನ ಹೊರತಾಗಿಯೂ ಅವರ ತಾಕತ್ತು ಅಭಿಮನ್ಯುವನ್ನು ಗೆಲ್ಲಿಸಿಬಿಡುತ್ತದೆ. ತಮ್ಮ ಇಪ್ಪತ್ತರ ಹರಯದ ಆಸುಪಾಸಿನಲ್ಲೇ ಅಭಿಮನ್ಯುವಾಗಿ ರಂಗಕ್ಕಿಳಿದು ಅಬ್ಬರಿಸತೊಡಗಿದ್ದ ಶ್ರೀಧರ ಭಂಡಾರಿ ಈಗ ಅರವತ್ತಾರರಲ್ಲೂ ಅಭಿಮನ್ಯುವಾಗಿಯೇ ಕಣಕ್ಕಿಳಿಯುವುದರಲ್ಲಿ ಬಹಳಷ್ಟು ಉತ್ಸಾಹ, ಆಸಕ್ತಿ ತೋರಿಸುತ್ತಿದ್ದಾರೆನ್ನುವುದು ವಿಶೇಷ. ಸುಮಾರು ನಾಲ್ಕು ದಶಕಗಳ ನಂತರವೂ ಸಾಕಷ್ಟು ಸುಸ್ತು ಹೊಡೆಸುವ ಅಭಿಮನ್ಯು, ಬಬ್ರುವಾಹನವೇ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಅವರ ಹಂಬಲ ನಿಜಕ್ಕೂ ಸೋಜಿಗ, ತೆಂಡೂಲ್ಕರ್ ಟ್ವೆಂಟಿ ಟ್ವೆಂಟಿ ಆಡಿದಂತೆ!!


ಅವರ ಹಿಂದಿನ ಅಭಿಮನ್ಯುವಿಗೆ ಹೋಲಿಸಿದರೆ ಈಗಿನ ಅಭಿಮನ್ಯು ಅಷ್ಟು ಧೀಂಗಿಣ ಹಾಕುವುದಿಲ್ಲ. ಸುಮಾರು ನಲವತ್ತು ಕುತ್ತು ಕುಣಿದಲ್ಲಿಗೆ ಸುಸ್ತಾಗುತ್ತದೆ. ಆದರೆ ಗಮನಿಸಿ, ತನ್ನ ಅರವತ್ತಾರನೆಯ ವಯಸ್ಸಿನಲ್ಲೂ ಭಂಡಾರಿಯವರು ನಲವತ್ತು ಧೀಂಗಿಣ ಹಾಕಿ ತಕ್ಷಣ ಮತ್ತೊಂದು ಏರುಪದಕ್ಕೆ ತಯಾರಾಗುತ್ತಾರೆಂದರೆ ಅವರ ಶಕ್ತಿ ಅದೆಂತಹದ್ದಿರಬಹುದು? ಈಗಿನ ಕೆಲವು ಯುವ ಅಭಿಮನ್ಯುಗಳೇ ನಲವತ್ತು ಧೀಂಗಿಣ ಹೊಡೆಯುವುದಿಲ್ಲ! ಈ ನಡುವೆ ಭಂಡಾರಿಯವರಿಗೂ ತಾನು ಮೊದಲಿನಂತೆ ಧೀಂಗಿಣ ಹೊಡೆಯಲು ತನ್ನ ವಯಸ್ಸು ಬಿಡುತ್ತಿಲ್ಲ ಅನ್ನುವುದು ಅರ್ಥವಾದಂತಿದೆ. ಹಾಗಾಗಿಯೇ ಅವರು ತನ್ನ ಬೇರೆಲ್ಲಾ ಪ್ರತಿಭೆಗಳನ್ನು ಬಳಸಿ ಅಭಿಮನ್ಯುವನ್ನು ಈಗಲೂ ರೋಚಕಗೊಳಿಸುತ್ತಿದ್ದಾರೆ. ಅವರ ಮುಖಭಾವ, ಮಾತಿನ ವೇಗ, ಅಭಿನಯ ಇವುಗಳೆಲ್ಲವೂ ಸೇರಿ ಅವರು ಮೊದಲಿನಷ್ಟು ಧೀಂಗಿಣ ಹಾಕದಿರುವುದನ್ನು ಮರೆಸಿಬಿಡುತ್ತವೆ. ಅಭಿಮನ್ಯುವಿನ ಗತ್ತು ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ. ಆದ್ದರಿಂದಲೇ ಈ ಅರವತ್ತಾರರಲ್ಲೂ ಭಂಡಾರಿಯವರ ಅಭಿಮನ್ಯುವಿಗೆ ಎದುರಾದ ಇನ್ನೊಂದು ಅಭಿಮನ್ಯು ಇಲ್ಲ ಎಂದು ಧಾರಾಳವಾಗಿ ಹೇಳಬಹುದು.

ಈ ನಡುವೆ ತಮಾಷೆಯ ಸಂಗತಿಯೆಂದನ್ನು ನಿಮಗೆ ಹೇಳಬೇಕು. ಆರಂಭದ ದಿನಗಳಲ್ಲಿ ಅಂದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಭಂಡಾರಿಯವರ ಅಭಿಮನ್ಯುವಿಗೆ ಪಾತಾಳ ವೆಂಕಟ್ರಮಣ ಭಟ್ಟರು ಸುಭದ್ರೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಭಂಡಾರಿಯವರ ಈಗಿನ ಅಭಿಮನ್ಯುವಿಗೆ ಪಾತಾಳರ ಮಗ ಅಂಬಾಪ್ರಸಾದರು ಸುಭದ್ರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ! ಪ್ರಾಯಶಃ ಈ ನಲವತ್ತು ವರ್ಷಗಳಲ್ಲಿ ಭಂಡಾರಿಯವರ ಅಭಿಮನ್ಯುವಿಗೆ ವಯಸ್ಸೇ ಆಗಿಲ್ಲ!! ಹೌದು, ಶ್ರೀಧರ ಭಂಡಾರಿಯವರಿಗೂ ಅವರ ಅಭಿಮನ್ಯುವಿಗೂ ವಯಸ್ಸಾಗದಿರಲಿ!

 

ಅಂದಹಾಗೆ ಅಭಿಮನ್ಯು ಅನ್ನುವಾಗ ಹೊಸಹಿತ್ಲು ಮಹಾಲಿಂಗ ಭಟ್ಟರೂ ನೆನಪಾಗುತ್ತಾರೆ. ಅವರ ಕಥೆ ಇನ್ನೊಮ್ಮೆ ಹೇಳಿಯೇನು..

Leave a Reply

*

code