ಅಂಕಣಗಳು

Subscribe


 

ಕಲಾ ವಿಮರ್ಶೆಯ ಗುಣಮಟ್ಟ ಹೆಚ್ಚಬೇಕಿದೆ

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ನಿಡುವಜೆ ರಾಮ ಭಟ್, ಉಡುಪಿ

ಶ್ವಯುಜ-ಕಾರ್ತಿಕ ಮಾಸದ ಸಂಚಿಕೆಯಲ್ಲಿನ ಸಂಪಾದಕೀಯ ಉತ್ತಮವಾಗಿ ಮೂಡಿಬಂದಿದೆ. ಇಂದು ಸಮೂಹ ಮಾಧ್ಯಮಗಳಲ್ಲಿ ಕಲೆಯ ಕುರಿತಾದ ವಿಚಾರಗಳಲ್ಲಿ ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಬಹಳ ಮಂದಿ ಸಂಗೀತ, ಭರತನಾಟ್ಯ, ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಮೊದಲಾದ ಕಲಾ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರುತ್ತಿದ್ದರೂ, ಅವರ ಪ್ರತಿಭೆಯ ವಿಕಾಸಕ್ಕೆ ಪೂರಕವಾಗುವಂತಹ ರೀತಿಯಲ್ಲಿ ವಿಮರ್ಶೆಗಳು ಪ್ರಕಟವಾಗುತ್ತಿಲ್ಲ. ಕಲಾ ಪ್ರತಿಭೆ ಇನ್ನಷ್ಟು ಬೆಳೆಯಲು ಸಹಕಾರಿಯಾಗಬಲ್ಲ ಮಾಹಿತಿಗಳನ್ನು ಕಲಾ ಪುಟಗಳಲ್ಲಿ ತಜ್ಞರಿಂದ ನೀಡಬಹುದು. ಆದರೂ ಸಾಕಷ್ಟು ಮಾಹಿತಿಗಳು ಪ್ರಕಟಗೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ಸಮಾಜಕ್ಕೆ ಮಾರಕವಾಗಬಲ್ಲಂತಹ, ಕಲೆಗೆ ಅಪಚಾರವಗಬಲ್ಲಂತಹ ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿರುವುದು ವಿಷಾದಕರ.

ಓಶೋ ರಜನೀಶ್ ಅವರು ಪತ್ರಿಕೋದ್ಯಮದ ಕುರಿತು ಬರೆದ ಪುಸ್ತಕದಲ್ಲಿ “ಪತ್ರಕರ್ತನಾದವನು ಮುಕ್ತ ಮನಸ್ಸನ್ನು ಹೊಂದಿರಬೇಕು. ನಮ್ಮಲ್ಲಿ ಬಹಳ ಮಂದಿ ಕವಿ, ಕಲಾವಿದ, ಬರಹಗಾರ, ಸಂಗೀತಗಾರ., ಆಧ್ಯಾತ್ಮಿಕ ಗುರುಗಳಿದ್ದಾರೆ. ಪತ್ರಕರ್ತರು ಅವರನ್ನೆಲ್ಲ ಪರಿಚಯಿಸಬೇಕು. ಪತ್ರಿಕೆಗಳಲ್ಲಿ ಬರುವ ವಿಚಾರಗಳಿಂದ ಹಳೆಯ ಪತ್ರಿಕೆಗಳೂ ಕೂಡ ನಮಗೆ ಉಪಯುಕ್ತವಾಗಿರಬೇಕು. ವರದಿಗಳನ್ನು ನೀಡುವಾಗ ರೋಚಕ ವರದಿಗಳಿಗಿಂತಲೂ ಕಲೆ ಸಾಹಿತ್ಯ ಮೊದಲಾದ ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವಂತಹ, ಸಮಾಜಕ್ಕೆ ಹಿತವೆನಿಸುವ, ಶಿಕ್ಷಣ ನೀಡುವಂತಹ ವರದಿಗಳಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ”.

ಅದೇ ರೀತಿ ಖ್ಯಾತ ಕಲಾ ವಿಮರ್ಶಕ ಶ್ರೀ ಈಶ್ವರಯ್ಯನವರು, ’ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆಯ ನೆಪದಲ್ಲಿ ಕೇವಲ ತಪ್ಪುಗಳನ್ನು ಮಾತ್ರ ಬೊಟ್ಟು ಮಾಡುವುದು ಸರಿಯಲ್ಲ. ಆ ರೀತಿಯ ದೃಷ್ಟಿಕೊನವಿಟ್ಟುಕೊಂಡಲ್ಲಿ ಟೀಕೆ ಮಾತ್ರ ಕಾಣಿಸುತ್ತದೆ. ಇದರಿಂದ ಕಲೆಯನ್ನು ಆಸ್ವಾದಿಸುವುದು ಸಾಧ್ಯವಿಲ್ಲ. ಆದ್ದರಿಂದ ವಿಮರ್ಶೆಯು ಕಲೆಯನ್ನು ಪ್ರೋತ್ಸಾಹಿ ಸುವಂತಿರಬೇಕು. ಕಲೆಗೆ ಅಪಚಾರವಾಗಕೂಡದು’ ಎಂದಿದ್ದಾರೆ. ಆದ್ದರಿಂದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಎಚ್ಚರ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನಿಮ್ಮ ಮಂಜೀರ (ಸಂಪಾದಕೀಯ) ಅರ್ಥಪೂರ್ಣವಾಗಿದೆ.

Leave a Reply

*

code