ಅಂಕಣಗಳು

Subscribe


 

ರಂಗ-ಅಂತರಂಗದ ಅರಿವಿನೆಡೆಗೆ ಸಾರ್ಥಕ ಪ್ರಯತ್ನ ನೃತ್ಯಾಂತರಂಗ

Posted On: Thursday, March 26th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಈಗಿನ ದಿನಗಳಲ್ಲಿ ಭರತನಾಟ್ಯದಂತಹ ಶಾಸ್ತ್ರೀಯನೃತ್ಯ ಕಾರ್ಯಕ್ರಮವನ್ನು ಹಿಮ್ಮೇಳ-ವೇದಿಕೆ-ಬೆಳಕು-ಧ್ವನಿವರ್ಧಕ ಮುಂತಾದ ಹಲವು ಯೋಜನೆಗಳ ಸಹಿತ ನಿರ್ವಹಿಸಿ ಏರ್ಪಡಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಲಿದೆ. ಹೆಚ್ಚುತ್ತಿರುವ ಹಿಮ್ಮೇಳದ ಅಗತ್ಯಗಳು, ಗುಣಮಟ್ಟದ ಹಿಮ್ಮೇಳ ಒದಗಿಸುವಲ್ಲಿ ಸಮಸ್ಯೆಗಳು ಮತ್ತು ರಂಗದ ಇತರೆ ಖರ್ಚುಗಳಿಂದಾಗಿ ಕೊನೇಪಕ್ಷ 1 ಗಂಟೆಯ ಒಂದು ಪರಿಪೂರ್ಣ ನೃತ್ಯಕಾರ್ಯಕ್ರಮವನ್ನು ಏರ್ಪಡಿಸಬೇಕೆಂದರೂ ವೆಚ್ಚ ಇಪ್ಪತ್ತು ಸಾವಿರದ ಮೇಲೆ ದಾಟುತ್ತದೆ. ಜೊತೆಗೆ ವರುಷದಿಂದ ವರುಷಕ್ಕೆ ನೃತ್ಯಾಸ್ವಾದ ಪಡೆಯುವ ಆಸಕ್ತ ಸಹೃದಯರ ಸಂಖ್ಯೆಯೂ ಕಾರಣಾಂತರಗಳಿಂದ ಕ್ಷೀಣಿಸುತ್ತಲೇ ಸಾಗಿದೆ.

‘ಭರತನಾಟ್ಯ ಅರ್ಥವಾಗುವುದಿಲ್ಲ’ ಎಂಬ ಸಂವಹನದ ಕೊರತೆಯೂ ಇದಕ್ಕೆ ಪ್ರಧಾನ ಕಾರಣ. ಹೀಗಿರುವಾಗ ಆಸಕ್ತ ನೃತ್ಯಾಪೇಕ್ಷಿ ಎಳೆಯ, ಕಿರಿಯ, ಅಷ್ಟೇಕೆ ಹಿರಿಯ ಕಲಾವಿದರಿಗೆ ಒಂದು ರಂಗಾಭಿವ್ಯಕ್ತಿಗೆ ಅನುಕೂಲ ಮಾಡಿಕೊಡುವುದೆಂದರೆ ಭರತಮುನಿಯೇ ನಾಟ್ಯಶಾಸ್ತ್ರದಲ್ಲಿ ಹೇಳಿದಂತೆ ‘ದಾನಗಳಲ್ಲಿ ಶ್ರೇಷ್ಟವಾದುದೇ ಪ್ರೇಕ್ಷಣೀಯ ಪ್ರದಾನ’. ಅಂತಹ ಒಂದು ಮಹತ್ಕಾರ್ಯಕ್ಕೆ ಇಂಬು ಕೊಡುವಂತಹ ನಡೆ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯದ್ದು.

ಕರಾವಳಿಯ ಪಾಲಿಗೆ ವಿನೂತನವೆನಿಸುವ ಈ ಕಲ್ಪನೆಯ ರೂವಾರಿ ದಶಕಗಳಿಂದಲೂ ಅನೇಕ ಗುಣಾತ್ಮಕ, ಪರಿಣಾಮಾತ್ಮಕ ಕಲಾಸಂಘಟನೆಯಲ್ಲಿ, ಪರಿಸರ-ಸಂಸ್ಕೃತಿ ಜಾಗೃತಿಯ ಕಾರ್ಯಕ್ರಮಗಳಲ್ಲಿ ಪ್ರಧಾನ ಪಾತ್ರ ವಹಿಸಿರುವ ಅಕಾಡೆಮಿಯ ನಿರ್ದೇಶಕ, ಗುರು ವಿದ್ವಾನ್ ಬಿ.ದೀಪಕ್ ಕುಮಾರ್. ಭರತನಾಟ್ಯ-ಕಥಕ್-ಕೂಚಿಪುಡಿ ಪರಿಣತರಾಗಿರುವ ದೀಪಕ್ ಕುಮಾರರಿಗೆ ಹಲವಾರು ಹೆಸರುವಾಸಿ ಪ್ರದರ್ಶನ-ಪ್ರಶಸ್ತಿಗಳು-ಶೈಕ್ಷಣಿಕ ಮಾನ್ಯತೆ- ಹೆಸರಾಂತ ಗುರುಹಿರಿಯರ ಪೋಷಣೆಗಳು ಸಲ್ಲುತ್ತಲೇ ಬಂದಿವೆ.

ಇವರ ನೃತ್ಯಪಯಣಕ್ಕೆ ಜೊತೆಯಾಗಿದೆ ಇವರ ಇಡೀ ಕುಟುಂಬ. ಪತ್ನಿ ವಿದುಷಿ ಪ್ರೀತಿಕಲಾ ನೃತ್ಯ-ಸಂಗೀತಗಳೆರಡರಲ್ಲೂ ವಿದ್ವತ್ತನ್ನು ಪಡೆದ ಪ್ರತಿಭಾವಂತೆಯಾಗಿ; ಕರಾವಳಿಯ ಪಾಲಿನ ನೃತ್ಯಕ್ಷೇತ್ರದ ಹಾಡುಗಾರಿಕೆಗೆ ಹೊಸ ಆಶಾಕಿರಣವಾಗಿ ಮೂಡಿಬರುತ್ತಲಿರುವವರು. ದೀಪಕ್ ಅವರ ಸಹೋದರ ಗಿರೀಶ್ ಕುಮಾರ್ ಸ್ವತಃ ಉತ್ತಮ ನೃತ್ಯಪಟು, ದೂರದರ್ಶನ ಕಲಾವಿದ, ನೃತ್ಯಪ್ರದರ್ಶನಗಳ ಸಂಘಟನೆ, ಆಯೋಜನೆ, ಕಲಿಸುವಿಕೆಯಲ್ಲಿ ಪಳಗಿದವರು.

ತಂದೆ ಭವಾನಿಶಂಕರ್ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಯಶಸ್ವಿ ಆಯೋಜಕರು, ತಾಯಿ ಶಶಿಪ್ರಭಾ ನೃತ್ಯದ ಆಹಾರ್ಯಾಭಿನಯವಾದ ವೇಷಭೂಷಣ- ಪ್ರಸಾದನಗಳನ್ನುಹೊಲಿಯುವುದು, ರೂಢಿಸುವುದು, ವಿನ್ಯಾಸ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಇಡೀ ಕುಟುಂಬ ನೃತ್ಯದ ಅಂತರಂಗವನ್ನು ಶೋಧಿಸುವ ಕಾರ್ಯಕ್ಕೆ ಜೊತೆಗೂಡಿದ್ದಾರೆ. ಈ ಕಲಾಪರ್ಯಟನೆಗೆ ಮಂಗಳಾಮೃತ ಸಭಾಂಗಣವು ಅವಕಾಶ ಕಲ್ಪಿಸುತ್ತಾ ಬಂದಿದ್ದು; ಇದರ ನಿರ್ವಹಣೆಯಲ್ಲಿ ವಿಪಿನ್ ಅವರೂ ಉದಾರವಾಗಿ ಕೈಜೋಡಿಸುತ್ತಿದ್ದಾರೆ.

ನೃತ್ಯಾಂತರಂಗದ ತಿಂಗಳ ಪ್ರದರ್ಶನದಲ್ಲಿ ಈಗಾಗಲೇ ಹಲವು ಪ್ರತಿಭೆಗಳು ರಂಗಕ್ಕೂ, ಪ್ರೇಕ್ಷಕರ ಅಂತರಂಗಕ್ಕೂ ಪ್ರವೇಶಿಸಿಯಾಗಿದೆ. ವಿವೇಕಾನಂದ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿರುವ ಸಿಂಚನಾ ಕಂದೇಲು, ಒಂಭತ್ತನೇ ತರಗತಿಯ ವೈಷ್ಣವಿ ಭಟ್, ಸುದಾನ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಇಶಾ ಸುಲೋಚನಾ ಮುಳಿಯ ಅವರು ಅಧಿಕೃತವಾಗಿ ರಂಗಪ್ರವೇಶದಷ್ಟೇ ಸಲೀಸಾಗಿ ವೈಯಕ್ತಿಕವಾಗಿ ತಲಾ ಒಂದೊಂದು ಗಂಟೆಯ ನೃತ್ಯಾಭಿವ್ಯಕ್ತಿಯನ್ನು ನೀಡಿದ್ದಾರೆ. ಅದಕ್ಕೂ ಮೊದಲೇ ಹಲವು ಪ್ರೌಢ ಕಲಾವಿದರೂ ನೃತ್ಯಪ್ರದರ್ಶನ ನೀಡಿ ಜನಮನ ಮೆಚ್ಚುಗೆ ಪಡೆದಿದ್ದಾರೆ.

ಅಂಗಶುದ್ಧವಾದ ಹೆಜ್ಜೆಗಾರಿಕೆ, ಕ್ಲಪ್ತವಾದ ಜತಿವಿನ್ಯಾಸಗಳು, ಒಂದು ಗಂಟೆಯನ್ನು ಸಲೀಸಾಗಿ ಸುಧಾರಿಸಬಲ್ಲ ಪ್ರತಿಭೆ, ದೈಹಿಕ ಕ್ಷಮತೆ, ತಮ್ಮ ನೃತ್ಯಗಳನ್ನು ತಾವೇ ವಿನ್ಯಾಸ ಮಾಡಿಕೊಳ್ಳುವಷ್ಟರ ಮಟ್ಟಿಗಿನ ಪ್ರಬುದ್ಧತೆ, ರಂಗನಿರ್ವಹಣೆಯ ಬದ್ಧತೆ, ಆಹಾರ್ಯಾಭಿನಯವನ್ನು ತಾವೇ ಸುಧಾರಿಸುವ ಜಾಣ್ಮೆ ಮತ್ತು ಅಭಿನಯದಲ್ಲಿ ವಯಸ್ಸಿಗೆ ಮೀರಿದ ಪ್ರೌಢ ಅಭಿವ್ಯಕ್ತಿಯನ್ನು ನೀಡುವುದರೊಂದಿಗೆ ನೃತ್ಯಪ್ರದರ್ಶನಕ್ಕೆ ಸಮಸಮವಾಗಿ ಶಾಸ್ತ್ರಾಭ್ಯಾಸವನ್ನೂ ಚೊಕ್ಕಟವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಳೆಯ ಕಲಾವಿದರು ಯಶಸ್ವಿಯಾಗುತ್ತಿದ್ದಾರೆ.
ಕಲೆಯನ್ನು ಆಳವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಮರ್ಥವಾದ ಒಂದು ಪ್ರಯತ್ನವೆನಿಸಿಕೊಂಡಿರುವುದು ನೃತ್ಯಾಂತರಂಗದ ಹೆಗ್ಗಳಿಕೆ.

ಹಿಮ್ಮೇಳದ ಹೆಚ್ಚುತ್ತಿರುವ ಖರ್ಚಿನಲ್ಲಿ ಬಡ, ಮಧ್ಯಮ ನೃತ್ಯವಿದ್ಯಾರ್ಥಿಗಳು ಸುಧಾರಿಸಿಕೊಳ್ಳುವುದೇ ಕಷ್ಟವಾಗುತ್ತಿರುವಾಗ ಕಡಿಮೆ ಖರ್ಚಿನಲ್ಲಿ, ಕಡಿಮೆ ಹಿಮ್ಮೇಳದಲ್ಲಿ ಮೂಡಿಬರುವಂತೆ ಈ ನೃತ್ಯಾಂತರಂಗವನ್ನು ತಿಂಗಳಿಗೊಂದಾವರ್ತಿ ವಿನ್ಯಾಸ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸಾಮಾನ್ಯ ಪ್ರೇಕ್ಷಕರಿಗೂ ತಲುಪುವಂತೆ ಆಯಾಯ ನೃತ್ಯ ಪ್ರದರ್ಶನದೊಂದಿಗೆ ಅದರ ಶಾಸ್ತ್ರದ ಪರಿಚಯವೂ ನಡೆಯುತ್ತಿರುವುದು ಕುತೂಹಲವನ್ನು ಅರಳಿಸುತ್ತಲಿದೆ.

ಆಗ ತಾನೇ ಬೆಳೆಯುತ್ತಿರುವ ನೃತ್ಯ ಕಲಾವಿದರಿಗೆ ಉತ್ತಮ ಅವಕಾಶವನ್ನು ಕೊಡುವ ಜೊತೆಗೆ ಶಾಸ್ತ್ರೀಯ ನೃತ್ಯವನ್ನು ಜನರಿಗೆ ಅದರದ್ದೇ ಆದ ಸನ್ನಿವೇಶಗಳೊಳಗೇ ಅರ್ಥ ಮಾಡಿಸುತ್ತಾ ಪ್ರೇಕ್ಷಕರ ಅಂತರಂಗಕ್ಕೂ ಸುಲಭವಾಗಿ ಲಗ್ಗೆಯಿಡುವ ಪ್ರಯತ್ನ ಸ್ಪಷ್ಟವಾಗಿ ಒಡಮೂಡಿದೆ. ವಿದ್ಯಾರ್ಥಿಗಳಿಗೆ ಸಭೆಯನ್ನು ಸಂಭಾಳಿಸುವ ಮತ್ತು ಏಕವ್ಯಕ್ತಿ ನೃತ್ಯಪ್ರದರ್ಶನ ನೀಡುವ ಸವಾಲು, ಅಭಿವ್ಯಕ್ತಿಯ ಮರ್ಮಗಳನ್ನು ತಿಳಿಯಪಡಿಸುತ್ತಲಿದೆ.

‘ನೃತ್ಯಾಂತರಂಗದಿಂದ ರಸಿಕ ಸಹೃದಯರ ಪ್ರಮಾಣವೂ ಗುಣಾತ್ಮಕವಾಗಿ ಹೆಚ್ಚುವುದು ಗಮನಕ್ಕೆ ಬಂದಿದೆ. ಪೋಷಕರಿಗೂ ಕೂಡಾ ನೃತ್ಯದ ಅಮೂಲಾಗ್ರ ಪರಿಚಯವಾಗಿ, ಅವರ ಮಕ್ಕಳು ಅಥವಾ ಇನ್ನಾವುದೇ ಕಲಾವಿದರು ನರ್ತಿಸುವ ಅಲರಿಪು, ಜತಿಸ್ವರ, ಶಬ್ದ, ವರ್ಣದಂತಹ ಅನೇಕ ನೃತ್ಯಬಂಧಗಳನ್ನು ಅರ್ಥೈಸಿಕೊಳ್ಳಲು ಅನುಕೂಲ ಒದಗಿದೆ. ಹಾರ್ದಿಕವಾದ ಅನೌಪಚಾರಿಕವಾದ ರಂಗಾಭಿವ್ಯಕ್ತಿಯಿಂದಾಗಿ  ಮಕ್ಕಳಿಗೆ ಸಭಾಕಂಪನವೂ ಕಡಿಮೆಯಾಗುತ್ತದೆ. ಮುಂದಿನ ಹಂತಗಳಲ್ಲಿ ನೃತ್ಯಾಸಕ್ತರಿಂದ ನಿಶ್ಚಿತ ವಿಷಯಾಧಾರಿತ ಕಾರ್ಯಕ್ರಮವನ್ನುಅಳವಡಿಸುವ ಯೋಚನೆಗಳಿವೆ.- ವಿದ್ವಾನ್ ದೀಪಕ್ ಕುಮಾರ್

Leave a Reply

*

code