ಅಂಕಣಗಳು

Subscribe


 

‘ಥಾಟ್’: ಒಂದು ಪರಿಚಯ

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಅನೂಷಾ ಭಟ್, ಶಿರಸಿ, ಉತ್ತರಕನ್ನಡ

ಗಾಯನದ ಅಧೀನ ವಾದನ. ವಾದನದ ಅಧೀನ ನರ್ತನವಾಗಿದೆ. ಆದ್ದರಿಂದ ಈ ಕಲೆಗಳಲ್ಲಿ ಗಾಯನಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ.
ಗಾಯನಕ್ಕೆ ಸಪ್ತ ಸ್ವರಗಳೇ ಆಧಾರ. ಸ,ರಿ,ಗ,ಮ,ಪ,ದ,ನಿ. ಅವುಗಳಲ್ಲಿ ರೆ,ಗ,ಮ,ದ,ನಿ ಸ್ವರಗಳು ಸ್ಥಾನ ಪಲ್ಲಟಗೊಳ್ಳುವದರಿಂದ ಈ ಸ್ವರಗಳನ್ನು ವಿಕೃತ ಸ್ವರಗಳೆನ್ನುವರು. ಸ ಮತ್ತು ಪ ಅಂದರೆ ಷಡ್ಜ, ಪಂಚಮಗಳು ಅಚಲ ಸ್ವರಗಳು. ಅವು ಪ್ರಕೃತಿ ಸ್ವರಗಳು.
ಹಿಂದೂಸ್ತಾನೀ ಸಂಗೀತ ಪದ್ಧತಿಯಲ್ಲಿ ಸ್ವರಗಳಾದ ರೆ,ಗ,ದ,ನಿ ತನ್ನ ಸ್ಥಾನದಿಂದ ಕೊಂಚ ಕೆಳಗಿಳಿದಾಗ ‘ಕೋಮಲ’ ಸ್ವರಗಳೆನಿಸಿಕೊಳ್ಳುತ್ತವೆ. (ಕರ್ನಾಟಕ ಸಂಗೀತದ ಸ್ವರ ‘ರಿ’ ಇದ್ದದ್ದು ಹಿಂದೂಸ್ಥಾನಿಯಲ್ಲಿ ‘ರೆ’ ಎಂದು ಕರೆಯಲ್ಪಡುತ್ತದೆ.) ‘ಮ’ ತನ್ನ ಸ್ಥಾನದಿಂದ ಸ್ವಲ್ಪ ಮೇಲೇರಿ ತೀವ್ರ ‘ಮ’ ಎನಿಸಿಕೊಳ್ಳುತ್ತದೆ. ಸಂಗೀತದಲ್ಲಿ ನಾದದಿಂದ ಶ್ರುತಿ, ಶ್ರುತಿಯಿಂದ ಸ್ವರ, ಸ್ವರದಿಂದ ಸಪ್ತಕದ ಉತ್ಪತ್ತಿಯಾಗುತ್ತದೆ.ಸಪ್ತಕದ ಶುದ್ಧ , ಕೋಮಲ, ತೀವ್ರ ಸ್ವರಗಳು ಸೇರಿ ೧೨ ಸ್ವರಗಳಾಗುತ್ತವೆ.
ಥಾಟ್;
ಸಪ್ತ ಸ್ವರಗಳು ವಿವಿಧ ಕ್ರಮಗಳಲ್ಲಿ ಒಂದಾದಾಗ ಆ ಒಂದೊಂದು ಸಮುದಾಯದಿಂದ ರಾಗಗಳು ಜನಿಸುತ್ತವೆ. ಇಂತಹ ಸಮುದಾಯದ ಸ್ವರ ಸಮೂಹವನ್ನು  ‘ಥಾಟ್’ಎನ್ನುವರು. ಇದಕ್ಕೆ ‘ಮೇಳ’ ಎಂಬ ಹೆಸರೂ ಇದೆ. ಇವೆಲ್ಲವೂ ಆಧಾರವೆನಿಸುವ ಜನಕ ರಾಗಗಳು. ಯಾವ ಥಾಟ್‌ನಿಂದ ಅಥವಾ ಸ್ವರ ಸಮುದಾಯದಿಂದ ರಾಗದ ಉತ್ಪತ್ತಿಯಾಗುವುದೋ ಆ ರಾಗವನ್ನು ಥಾಟ್ ರಾಗ ಅಥವಾ ಜನ್ಯರಾಗ ಎನ್ನುವರು.
ಥಾಟ್ ನಿಯಮ;
೧)ಥಾಟ್ ಯಾವಾಗಲೂ ಸಂಪೂರ್ಣವಾಗಿರುತ್ತದೆ. ಒಂದು ವೇಳೆ ಏಳೂ ಸ್ವರಗಳೂ ಇಲ್ಲದಿದ್ದರೆ, ಅದು ಏಳು ಸ್ವರಗಳ ರಾಗವನ್ನು ಉತ್ಪನ್ನ ಮಾಡಲಾರದು. ಹಾಗಾಗಿ ಥಾಟ್‌ನಲ್ಲಿ ಏಳೂ ಸ್ವರಗಳೂ ಇರಬೇಕು.
೨)ಸಪ್ತಕದ ಏಳೂ ಸ್ವರಗಳೂ ಕ್ರಮಾನುಸಾರವಾಗಿಯೇ ಇರಬೇಕು.
೩)ಥಾಟ್ ಆಗಲು ಆರೋಹವಿದ್ದರೆ ಸಾಕು. ಅವರೋಹದ ಅವಶ್ಯಕತೆ ಇರದು.
೪)ಥಾಟ್‌ನಲ್ಲಿ ರಂಜಕತೆಯ ಅಗತ್ಯ ಇಲ್ಲ. ಅದು ರಾಗದಲ್ಲಿರುತ್ತದೆ .ಏಕೆಂದರೆ ರಾಗವು ಹಾಡಲ್ಪಡುತ್ತದೆ. ಥಾಟ್ ಹಾಡಲ್ಪಡುವದಿಲ್ಲ.
೧೦ ಥಾಟ್‌ಗಳು ;
ಹಿಂದೂಸ್ಥಾನೀ ಸಂಗೀತ ಪದ್ಧತಿಯಲ್ಲಿ ೧೦ ಥಾಟ್‌ಗಳಿವೆ. ಪಂ.ವಿಷ್ಣು ನಾರಾಯಣ ಭಾತ್‌ಖಂಡೆ ಅವರಿಂದ ಹಿಂದೂಸ್ತಾನೀ ರಾಗಗಳು ಬಂಧಿಸಲ್ಪಟ್ಟಿವೆ. ಅವು ಹೀಗಿವೆ, ಯಮನ್, ಬಿಲಾವತ್, ಖಮಾಜ್, ಆಸಾವರಿ, ಭೈರವಿ, ತೋಡಿ, ಭೈರವ, ಪೂರ್ವಿ, ಮಾರವಾ, ಕಾಫಿ.
ಥಾಟ್ ನ ಸ್ವರೂಪ:
ಥಾಟ್
೧. ಯಮನ್    ೨. ಬಿಲಾವತ್    ೩. ಖಮಾಜ್
೪. ಆಸಾವರಿ    ೫. ಭೈರವಿ    ೬. ತೋಡಿ
೭. ಭೈರವ    ೮. ಪೂರ್ವಿ    ೯. ಮಾರವಾ
೧೦. ಕಾಫಿ
೧೫ನೇ ಶತಮಾನದ ಅಂತ್ಯದಲ್ಲಿ ‘ರಾಗ ತರಂಗಿಣಿ’ ಬರೆದ ‘ಲೋಚನ ಕವಿ’ಯು ರಾಗಗಳ ವರ್ಗೀಕರಣದ ಪರಂಪರಾಗತ ಶೈಲಿಯಾದ ಗ್ರಾಮ ಮೂರ್ಛನೆಗಳ ಪರಿಷ್ಕರಣೆ ಮಾಡಿ, ‘ಮೇಳ’ ಅಥವಾ ‘ಥಾಟ್’ ಎಂಬ ಕಲ್ಪನೆಯನ್ನು ಮುಂದಿಟ್ಟನು. ಲೋಚನ ಕವಿಯ ಲೇಖನದ ಅನುಸಾರ ಆ ಸಮಯದಲ್ಲಿ ೧೬೦೦ ರಾಗಗಳಿದ್ದವು. .೧೭ನೇ ಶತಮಾನದಲ್ಲೇ ಥಾಟ್‌ನ ಅಂತರ್ಗತ ರಾಗಗಳ ವರ್ಗೀಕರಣ ಪ್ರಚಾರವಾಗಿಬಿಟ್ಟಿತ್ತು ಎಂಬ ಉಲ್ಲೇಖವು, ಆ ಸಮಯದ ಪ್ರಸಿದ್ಧ ಗ್ರಂಥಗಳಾಗಿದ್ದ ‘ಸಂಗೀತ ಪಾರಿಜಾತ’ ಹಾಗೂ ‘ರಾಗ ವಿಬೋಧ’ಗಳಲ್ಲಿ ಸಿಗುತ್ತದೆ.
೧೭ನೇ ಶತಮಾನದ ಅಂತ್ಯದ ವರೆಗೆ ಥಾಟ್‌ನ ಸಂಖ್ಯೆಗೆ ಸಂಬಂಧಪಟ್ಟಂತೆ ಬಹಳ ಮತ ಬೇಧಗಳಿದ್ದವು. ‘ಶ್ರೀನಿವಾಸ’ನು ಮೇಳದ ಲಕ್ಷಣ ವಿವರಣೆ ಮಾಡುತ್ತಿರುವಾಗ ‘ರಾಗದ ಉತ್ಪತ್ತಿಯು ಥಾಟ್‌ನಿಂದಾಗುತ್ತದೆ. ಥಾಟ್‌ನಲ್ಲಿ ೩ ರೂಪಗಳಾಗಿರಬಹುದು. ಅವು ಔಢವ, ಷಾಢವ, ಸಂಪೂರ್ಣ’ ಎಂದನು. ಆದರೆ ಈಗ ಸಂಪೂರ್ಣ ಅಂದರೆ ಸಪ್ತ ಸ್ವರಗಳೂ ಇದ್ದರೆ ಮಾತ್ರ ಥಾಟ್ ಎಂದು ನಿರ್ಧರಿಸಲಾಗಿದೆ.
ವಿವಿಧ ಗ್ರಂಥಗಳ ಪ್ರಕಾರ, ರಾಗ ವಿಬೋಧದ ಲೇಖಕ ೨೩ ಥಾಟ್ ಎಂದೂ, ಸ್ವರ ಮೇಳ ಕಲಾನಿಧಿಯ ಲೇಖಕ ೨೦ ಥಾಟ್ ಎಂದೂ , ಚತುರ್ದಂಡಿ ಪ್ರಕಾಶಿಕಾದಲ್ಲಿ ಲೇಖಕ ೧೯ ಥಾಟ್ ಎಂದೂ ಹೇಳಿರುವನು. ನಂತರ ೧೯ ನೆಯ ಶತಮಾನದಲ್ಲಿ ಸ್ವ.ಪಂ.ವಿಷ್ಣು ನಾರಾಯಣ ಭಾತ್ ಖಂಡೆಯವರು  ಆಳವಾದ ಅಧ್ಯಯನ ನಡೆಸಿ ೧೦ ಥಾಟ್ ಗಳನ್ನು ನೀಡಿದರು. ಸಂಗೀತ ಜಗತ್ತಿಗೆ ಇದು ಬಹಳ ಅನುಕೂಲವಾಯಿತು.
ಇದನ್ನು ಹೊರತುಪಡಿಸಿದರೆ ಇಂದಿಗೂ ಥಾಟ್‌ಗೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಲೇ ಇವೆ. ಕಾರಣವೆಂದರೆ, ಬಹಳಷ್ಟು ರಾಗಗಳು ಈ ೧೦ ಥಾಟ್‌ಗಳ ಅಂತರ್ಗತ ಇಡಲಾಗದಂಥವೂ ಇವೆ. ಆದ್ದರಿಂದ ಥಾಟ್‌ಗಳ ಸಂಖ್ಯೆ ಹೆಚ್ಚಿಸುವ ಅವಶ್ಯಕತೆ ಉಂಟಾಗಿದೆ. ಇದರ ಪ್ರಯತ್ನ ನಡೆದಿದೆ. ಸರ್ವಮಾನ್ಯ ಪರಿಹಾರದ ಅನ್ವೇಷಣೆಯಾಗಬೇಕಿದೆ.

(ಲೇಖಕಿ : ಆಕಾಶವಾಣಿಯ ‘ಬಿ ಹೈ’ ಕಲಾವಿದೆ, ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿನಿ)

Leave a Reply

*

code