ಅಂಕಣಗಳು

Subscribe


 

ರಂಗದಲ್ಲಿ ಲಯ-ಗತಿಯ ಔಚಿತ್ಯ

Posted On: Sunday, February 26th, 2017
1 Star2 Stars3 Stars4 Stars5 Stars (No Ratings Yet)
Loading...

Author: ಉಜಿರೆ ಅಶೋಕ ಭಟ್

ಉಜಿರೆ ಅಶೋಕ ಭಟ್ – ನಿ‌ಅಜವಾದ ಅರ್ಥದಲ್ಲಿ ಯಕ್ಷರಂಗದ ಸವ್ಯಸಾಚಿ. ವೇಷಧಾರಿಯಾಗಿ, ಅರ್ಥಧಾರಿಯಾಗಿಯಷ್ಟೇ ಅಲ್ಲ; ನಿರ್ದೇಶಕರಾಗಿ, ಭಾಷಣಗಾರರಾಗಿ, ನಿರೂಪಕರಾಗಿ, ನಿರ್ವಾಹಕರಾಗಿ, ವ್ಯವಸ್ಥಾಪಕರಾಗಿ, ಪುಸ್ತಕಗಳ ಪ್ರಕಾಶಕರಾಗಿ, ಸಂಪಾದಕರಾಗಿ, ಬರೆಹಗಾರರಾಗಿ, ಸಂಘಟಕರಾಗಿ ಹೀಗೆ., ಯಕ್ಷರಂಗಕ್ಕೆ ಬೇಕಾಗಿರುವ ಅಷ್ಟೂ ವ್ಯವಸಾಯಗಳನ್ನು ಮಾಡುತ್ತಲೇ ಬಂದಿರುವ ಯಕ್ಷಬ್ರಹ್ಮಚಾರಿ. ಮೂಲತಃ ಕಾಸರಗೋಡು ಭಾಗದ ಗಡಿನಾಡ ಕರ್ನಾಟಕದವರಾದರೂ ತಾವು ಓದಿ ಬೆಳೆದ ಉಜಿರೆಯಲ್ಲೇ ತಮ್ಮ ವಾಸ್ತವ್ಯವನ್ನೂ, ಅಷ್ಟೇಕೆ ತಮ್ಮ ನಾಮಾಂಕಿತವನ್ನೂ ಕಂಡುಕೊಂಡವರು. ಯಕ್ಷಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಿಕವಾದ ಒಡನಾಟದೊಂದಿಗೆ ನೆಡ್ಳೆ ನರಸಿಂಹಭಟ್ಟರಂತಹ ಹಿರಿಯ ತಲೆಮಾರಿನ ವಿದ್ವಾಂಸರ ಸಂಗ-ಸಾಹಚರ್ಯಗಳು, ಸಮಕಾಲೀನ ಮತ್ತು ಕಿರಿಯ ತಲೆಮಾರಿನ ಸ್ನೇಹ-ಸಂಪರ್ಕಗಳು ಅವರನ್ನು ಯಕ್ಷಾಯಣದ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಳವಾದ ಪರಿಶ್ರಮ ಹೊಂಡುವಂತೆ ಮಾಡಿವೆ. ಹಲವು ಕಾಲ ಯಕ್ಷಕೂಟವೆಂಬ ಉಜಿರೆ ಕಾಲೇಜಿನ ವಿದ್ಯಾರ್ಥಿಗಳ ಯಕ್ಷಗಾನ ತಂಡವನ್ನು ದಿಗ್ಧರ್ಶಕರಾಗಿ ಮುನ್ನಡೆಸಿ ಭವಿಷ್ಯದ ವಿದ್ಯಾರ್ಥಿ ಯಕ್ಷತಂಡಗಳಿಗೆ ಹೊಸ ದಿಶೆಯನ್ನು ಹಾಕಿಕೊಟ್ಟದ್ದಷ್ಟೇ ಅಲ್ಲದೆ; ಹಲವು ಕಲಾವಿದರನ್ನು ರೂಪುಗೊಳಿಸಿದ್ದಾರೆ. ಒಂದಷ್ಟು ವರ್ಷಗಳ ಕಾಲ ಹೊಸನಗರ ರಾಮಚಂದ್ರಾಪುರ ಮಠ ಪೋಷಿತ ಯಕ್ಷಗಾನ ಮೇಳದ ವ್ಯವಸ್ಥಾಪಕರಾಗಿದ್ದುಕೊಂಡು ಹಲವು ವಿನೂತನವಾದ ರಸದೃಷ್ಟಿಯ ಪ್ರಸಂಗನಿರ್ವಹಣೆಗೆ, ಮೇಳದ ಒಟ್ಟಾರೆ ವ್ಯವಸ್ಥಿತ ನಡವಳಿಕೆಗೆ ಕಾರಣೀಕರ್ತರಾಗಿದ್ದಾರೆ. ಇನ್ನು ಯಕ್ಷರಂಗಕ್ಕೆ ಕುರಿಯ ವಿಠಲಶಾಸ್ತ್ರಿಗಳು ಕೊಟ್ಟ ಕೊಡುಗೆಯನ್ನು ತಾವು ಕಣ್ಣಾರೆ ಕಾಣದಿದ್ದರೂ ಅದನ್ನು ಸ್ಮರಿಸಿಕೊಂಡೇ ತಾವೇ ಮುತುವರ್ಜಿಯಿಂದ ಹುಟ್ಟುಹಾಕಿದ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಮೂಲಕ ಅನೇಕ ಗುಣಮಟ್ಟದ ಯಕ್ಷಗಾನ ಕಾರ್ಯಕ್ರಮ, ಉಪನ್ಯಾಸ, ವಿಚಾರಸಂಕಿರಣ, ಕಾರ್ಯಾಗಾರ, ಗಾನವೈಭವ, ಸಪ್ತಾಹಗಳನ್ನು ವರುಷಂಪ್ರತಿ ಆಯೋಜಿಸಿಕೊಂಡೇ ಬರುವುದನ್ನು ಗಮನಿಸಿದರೆ ಅವರ ಸಂಘಟನಾಶೀಲತೆಯ ವಿಸ್ತಾರ ಎಂಥವರಿಗೂ ಅಚ್ಚರಿಯೇ ಸರಿ ! ಹಾಗಾಗಿಯೇ ಅವರ ಕಲಾಕೈಂಕರ್ಯದ ಸಂಘಟನೆಗೆ ಒದಗಿಬರುವ ಸಹೃದಯೀ ಪೋಷಕರೂ, ಪ್ರೇಕ್ಷಕರೂ ಕೂಡಾ ಅಷ್ಟೇ ದೊಡ್ಡ ಗುಣಮಟ್ಟದ ಪ್ರಮಾಣದಲ್ಲಿರುತ್ತಾರೆ. ಆದ್ದರಿಂದಲೇ ಅವರು ಯಕ್ಷಗಾನದ ಘಟಾನುಘಟಿ ಗಟ್ಟಿ ವ್ಯಕ್ತಿತ್ವಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟು ಎಂಥ ಸವಾಲಿನ ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲರು. ಪ್ರಖರ ಚಿಂತನೆ, ಕಟ್ಟುನಿಟ್ಟಿನ ನಡೆ, ನೇರ-ನಿಷ್ಠುರ ನುಡಿಯೊಳಗೂ ಕಂಡೂ ಕಾಣದ ಮೆದುಮನಸ್ಸಿನ ಸಹಕಾರಿ ಧುರೀಣರಾಗಿ ಅಶೋಕ ಭಟ್‌ರದ್ದು ಆಳವಾದ ರಸದೃಷ್ಟಿಯುಳ್ಳ ಚಿಂತನೆ. ಸ್ನೇಹಾದರಗಳಿಗೆ ಸದಾ ತಲೆಬಾಗಿಸುವ ಭಟ್ಟರು ಸಾಮಾಜಿಕವಾಗಿಯೂ ಸೇವಾಗುಣಸಂಪನ್ನರು. ಒಟ್ಟಿನಲ್ಲಿ ಯಕ್ಷಗಾನದ ಸೆಲೆಬ್ರಿಟಿ ವ್ಯಕ್ತಿತ್ವಗಳಲ್ಲಿ ಅವರ ಹೆಸರೂ ಮೂಂಚೂಣಿಯಲ್ಲಿದೆ.

ನೂಪುರ ಭ್ರಮರಿಯ ಪ್ರಾರಂಭಿಕ ದಿನಗಳಿಂದಲೂ ಅದರ ಪ್ರಯಾಣವನ್ನು ಗಮನಿಸುತ್ತಲೇ ಬಂದವರು; ಸಂಪಾದಕಿ ಮನೋರಮಾ ಬಿ.ಎನ್‌ರವರ ಪ್ರಥಮ ಶೋಧಗ್ರಂಥ ಮುದ್ರಾರ್ಣವದ ಪ್ರಕಾಶಕರು ಉಜಿರೆ ಅಶೋಕ ಭಟ್. ಇದೀಗ ಹಲವು ವರುಷಗಳ ಒತ್ತಾಯಕ್ಕೆ ಇಂಬನ್ನಿತ್ತು ಹತ್ತನೇ ವರುಷ ಪ್ರವೇಶಿಸುವ ಸಂದರ್ಭದಲ್ಲಿ ತಮ್ಮ ಯಕ್ಷಯಾನದ ಪಥದಲ್ಲಿ ಅರಿವಿಗೆ ಬಂದ ವಿಶೇಷತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಈ ಸಲದಿಂದ ಅವರ ಯಕ್ಷರಂಗಪಥ ನಿಮ್ಮೆದುರಿಗೆ ಹದಹದವಾಗಿ ತೆರೆದುಕೊಳ್ಳಲಿದೆ.

ಸುಮಾರು ಆರು ಶತಮಾನಕ್ಕಿಂತ ಹೆಚ್ಚಿನ ಹಿನ್ನೆಲೆ ಯಕ್ಷಗಾನಕ್ಕಿದೆ. ಜನಪದವಾಗಿ ಸಾಗಿ ಬಂದಿದೆ. ಕೇರಳದ ಪ್ರಸಿದ್ಧ ಕಲೆ ಕಥಕಳಿ ಹಾಗೂ ಜಾನಪದ ನಂಬಿಕೆಯ ಆರಾಧನಾರೂಪವಾಗಿರುವ ಭೂತಾರಾಧನೆಯ ಅಂಶಗಳು ಯಕ್ಷಗಾನದಲ್ಲಿ ಬಹಳವಾಗಿಕಾಣುತ್ತಿದೆ. ಭಾರತೀಯ ಸಾಂಸ್ಕೃತಿಕ ರಂಗಭೂಮಿಯ ಇನ್ನಿತರ ಸೋದರಕಲೆಗಳ ಪ್ರಭಾವ ಅಥವಾ ಪ್ರಚೋದನೆಯಿಂದ ಯಕ್ಷಗಾನವೂ ಪ್ರೇರಣೆ ಪಡೆದು ಆಯಾ ಕಲೆಗಳ ಅಂಶಗಳನ್ನು ತನ್ನೊಳಗೆ ಮೈಗೂಡಿಸಿಕೊಳ್ಳುತ್ತಲೇ ಬೆಳೆದಿದೆ. ಯಕ್ಷಲೋಕದ ದಂತಕತೆಯಾಗಿರುವ ಮಾತಿನ ಲೋಕದ ಮಹಾಕವಿ ಡಾ.ಶೇಣಿಯವರ ಮಾತಿನಲ್ಲಿ ಹೇಳುವುದಾದರೆ ‘ಸಂಗೀತ ನಾಟ್ಯಾದಿ ಸಕಲಕಲೆಗಳೂ ಮೂಲದಲ್ಲಿ ಜಾನಪದವಾಗಿದ್ದು ಆಮೇಲೆ ವಿದ್ವಾಂಸರಿಂದ ಪರಿಷ್ಕರಿಸಲ್ಪಟ್ಟು ಶಾಸ್ತ್ರೀಯವೆಂದು ಒಪ್ಪುವುದಾದರೆ, ಸದ್ಯ ಯಕ್ಷಗಾನವನ್ನು ಶಾಸ್ತ್ರೀಯವೆನ್ನಲು ಯಾವ ಆತಂಕವೂ ಬೇಡ’.

ಸರಿಸುಮಾರು ಎರಡು ಶತಮಾನಗಳಿಂದ ಯಕ್ಷಗಾನ ರಂಗವ್ಯವಸ್ಥೆಗಳು ಒಂದು ವ್ಯವಸ್ಥಿತ ಮೇಳಪದ್ಧತಿಗೆ ಒಳಪಟ್ಟು ಆಂಗಿಕ, ವಾಚಿಕ, ಆಹಾರ್ಯ, ಸಾತ್ತ್ವಿಕಗಳೆಂಬ ಪ್ರ್ರಧಾನವಾಗಿ ನಾಲ್ಕಂಶಗಳು ಕೂಡಿಕೊಂಡಿದೆ. ಭಾರತೀಯ ರಂಗಭೂಮಿಯಲ್ಲಿ ಇಷ್ಟೊಂದು ದೀರ್ಘ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ರದರ್ಶನಗೊಳ್ಳುವ ಕಲೆ ಬೇರೊಂದಿಲ್ಲ ಎಂದೇ ಅನಿಸುತ್ತದೆ. ಸಂಜೆ ಆರು ಗಂಟೆಗೆ ಕೇಳಿ ನುಡಿಸುವುದರಿಂದ ಮೊದಲ್ಗೊಂಡು, ರಾತ್ರೆ ಎಂಟೂವರೆ ಸುಮಾರಿಗೆ ಚೌಕಿಪೂಜೆಯಾಗಿ ರಂಗಸ್ಥಳಕ್ಕೆ ಕೋಡೆಂಗಿವೇಷದೊಂದಿಗೆ ನಿಂತರೆ, ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಹೊಗಳಿಕೆ, ಪೀಠಿಕೆ ಸ್ತ್ರೀವೇಷದ (ಷಣ್ಮುಖಸುಬ್ರಾಯ, ಅರ್ಧನಾರೀ, ಚಂದಭಾಮಾ, ಚಪ್ಪರಮಂಚ ಇತ್ಯಾದಿ) ಪೂರ್ವರಂಗ ಸಾಗಿ ಸುಮಾರು ಹತ್ತೂವರೆಗೆಲ್ಲಾ ಪ್ರಸಂಗದ ಆರಂಭದಿಂದ ಬೆಳಗ್ಗೆ ಆರು ಗಂಟೆಗೆ ಮಂಗಲದೊಂದಿಗೆ ಪುನಃ ಚೌಕಿಯಲ್ಲಿ ಮುಕ್ತಾಯಗೊಳ್ಳುವುದು ಕ್ರಮ.

ಹೀಗೆ ಎಂಟರಿಂದ ಹತ್ತು ಗಂಟೆಯಷ್ಟು ದೀರ್ಘ ಅವಧಿಯ ಪ್ರದರ್ಶನವು ರಂಗಭೂಮಿಯನ್ನು ಅಥವಾ ರಂಗದಲ್ಲಿ ಪ್ರದರ್ಶನಗೊಳ್ಳುವ ಕಲೆಯ ಸಾಗುವಿಕೆಯನ್ನು ಒಂದು ಕಾಲಗತಿಗೆ ತಕ್ಕಂತೆ ವಿಂಗಡಿಸಿದೆ. ಹಿಂದಿನ ಹಿರಿಯ ಕಲಾವಿದ್ವಾಂಸರು ಪ್ರದರ್ಶನ ಓಟ/ರಂಗದ ನಡೆಯ ಗತಿಯನ್ನು ಒಂದನೇ, ಎರಡನೇ, ಮೂರನೇ, ನಾಲ್ಕನೇ ಕಾಲ ಎಂಬ ವಾಡಿಕೆಯಲ್ಲಿ ನಾಲ್ಕು ಭಾಗವಾಗಿ ವಿಂಗಡಿಸಿದರೆ; ಯಕ್ಷಗಾನದ ಪ್ರಾಚಾರ್ಯ ಕಲಾವಿದರೆನಿಸಿದ ಕೀರ್ತಿಶೇಷ ಗುರು ನೆಡ್ಳೆ ನರಸಿಂಹ ಭಟ್ಟರು ಒಂದನೇ ಕಾಲ, ಎರಡನೇ ಕಾಲ, ಆಮೇಲೆ ಮೂರನೇ ಕಾಲ ಅಂತ ಇದೆಯೇ? ಇದ್ದರೆ ಹೇಗೆ? ಅದರ ಗತಿ ಎಷ್ಟು?- ಇದು ವಿಮರ್ಶಿಸಬೇಕಾದ ಸಂಗತಿ ಎನ್ನುತ್ತಿದ್ದರು. ತಾಳ ಲಯಗಳ ಗತಿ ೧,೨,೪,೮ ಹೀಗೆ ದ್ವಿಗುಣಗೊಳ್ಳುತ್ತಾ ಸಾಗಬೇಕು ಎಂಬ ದೃಷ್ಟಿಯಿಂದ ನೋಡಿದರೆ ಎರಡನೇ ಕಾಲದ ನಂತರ ನಾಲ್ಕನೇ ಕಾಲವೆಂದರೇನೇ ಚೆಂದ ಅಲ್ಲವೇ ಎನ್ನುವುದು ನೆಡ್ಳೆಯವರ ಜಿಜ್ಞಾಸೆಯಾಗಿತ್ತು. ಇದನ್ನು ವರ್ತಮಾನದ ಹಿರಿಯ ವಿದ್ವಾಂಸ ಮದ್ದಳೆಗಾರ ಪದ್ಯಾಣ ಶಂಕರನಾರಾಯಣಭಟ್ಟರೂ ಅನುಮೋದಿಸುತ್ತಾರೆ. ಅದೇನೇ ಇರಲಿ, ಅಂದಿನ ಕಾಲದ ಗತಿ, ಆ ಇತಿಮಿತಿ ಈಗಂತೂ ಎಲ್ಲೆಮೀರಿ ಅತಿವೃಷ್ಟಿಯಾಗಿ ದಡಮೀರಿ ಬಯಲಿನಲ್ಲಿ ಭೋರ್ಗರೆದು ಹರಿಯುವ ನೆರೆಯಂತೆ ಅಂದರೆ ಪ್ರವಾಹದಂತಾಗಿದೆ ಈ ಕಾಲಕ್ಕೆ.

ಪ್ರತೀ ಪ್ರಸಂಗದಲ್ಲೂ ಪ್ರತಿಯೊಂದು ಪಾತ್ರಕ್ಕೂ ಕಲಾತ್ಮಕವಾದ ಸನ್ನಿವೇಶಕ್ಕೆ ತಕ್ಕಂತೆ ಕಾಲಗತಿಯ ಬದ್ಧತೆ ಇರಲೇಬೇಕು. ಪಗಡೀವೇಷ (ಪುಂಡುವೇಷ), ಕಿರೀಟವೇಷ (ರಾಜವೇಷ), ಬಣ್ಣದವೇಷ (ಕೇಶವಾರೀ, ಹೆಣ್ಣುಬಣ್ಣ, ಭೀಮನ ಮುಡಿ) ಹೀಗೆ ವೇಷವಿಧಾನಗಳಿವೆ. ಒಂದೇ ವಿಧಾನದ ವೇಷಗಳಿಗೆ ಅಂದರೆ ಒಂದೇ ತೆರನಾದ ಪಾತ್ರಗಳಿಗೆ ಒಂದೇ ರೀತಿಯ ಕಾಲಗತಿಗಳಿಲ್ಲ. ಪ್ರಸಂಗಕ್ಕೆ ತಕ್ಕಂತೆ ಪಾತ್ರೋಚಿತವಾದ ಸಂದರ್ಭ ಸನ್ನಿವೇಶಗಳಿಗೆ ಪೂರಕ ಮತ್ತು ಪ್ರೇರಕವಾಗಿ ಕಾಲಗತಿ ಅಥವಾ ಲಯಬದ್ಧತೆಯಲ್ಲಿ ನಿಯಮವಿದೆ. ಉದಾಹರಣೆಗೆ; ಅಭಿಮನ್ಯು ಮತ್ತು ಬಭುವಾಹ ಇವೆರಡೂ ಪಗಡೀವೇಷಗಳನ್ನು ಆಭಿನಯಿಸುವ ಪಾತ್ರಧಾರಿಯು ಒಬ್ಬನೇ ಆಗಿರುತ್ತಾನೆ. ಅಂದರೆ ಮೇಳದಲ್ಲಿ ಮುಖ್ಯ ಪುಂಡುವೇಷಧಾರಿಗೆ ಈ ಪಾತ್ರ ಬರುತ್ತದೆ. ಹಾಗೆಂದು ಇದಕ್ಕೆ ರಂಗಭಾಷೆಯಲ್ಲಿ ಎರಡನೇ ಪುಂಡುವೇಷ ಅಂತಲೇ ಹೆಸರು. ಕಾರಣ, ವಿಷ್ಣು, ಕೃಷ್ಣ ಇತ್ಯಾದಿ ಒಂದನೇ ಪುಂಡುವೇಷಗಳಾಗಿವೆ. ಹದಿಹರೆಯದ, ವಿಶೇಷ ಹೊಣೆಗಾರಿಕೆಯಿಲ್ಲದ ಅಥವಾ ಅರಿಯದ ಅತುತ್ಸಾಹಿ ತರುಣವೀರ ಹುಡುಗಾಟಿಕೆಯ ಹೊಂತಕಾರಿ ಅಭಿಮನ್ಯುವಿಗೆ ಯುದ್ಧಾತುರ ಅತೀವವಾಗಿದ್ದು ಇದು ತ್ವರಿತಗತಿಯ ಪಾತ್ರ. ಆದರೆ ಅದೇ ವೇಷವಿಧಾನದ ಬಭುವಾಹ –ಮಣಿಪುರದ ಅರಸ, ಪಾಂಡವರ ಅಶ್ವಮೇಧದ ಕುದುರೆಯನ್ನು ಕ್ಷತ್ರಿಯೋಚಿತವಾಗಿ ಚಿಂತಿಸಿ, ತರ್ಕಿಸಿ ಕಟ್ಟಿದ ವೀರ ವಿಕ್ರಮಿ. ತಾಯಿ ಚಿತ್ರಾಂಗದೆಯಿಂದ ತನ್ನ ತಂದೆ ಅರ್ಜುನ ಎಂದು ತಿಳಿದು ಉಂಟಾಗುವ ಸಂಧಿಗ್ಧತೆಯನ್ನೂ ವಿವೇಕಿಯಾಗಿ ನಿಭಾಯಿಸುವವ. ಹೀಗೆ ಬಹಳ ಹೊಣೆ ಉಳ್ಳ ಪಾತ್ರವಾದ್ದರಿಂದ ಚಕ್ರವ್ಯೂಹಬೇಧನದ ಅಭಿಮನ್ಯುವಿನ ವೇಗ, ತ್ವರಿತಗತಿ ಬಭುವಾಹನದ್ದು ಆಗಿರಬಾರದು. ಹೀಗೆ ವೇಷದ ಹೊರಚಹರೆ ಒಂದೇ ಎಂಬುದಾಗಿ ಭಾಸವಾದರೂ ಪಾತ್ರದ ಕಾಲದ ನಡೆ, ಗತಿಗಳು ಭಿನ್ನ ಸ್ವರೂಪ ಪಡೆದುಕೊಳ್ಳುತ್ತವೆ.

ಇನ್ನೊಂದೆಡೆ ಜನ್ಮಶತ್ರುಗಳಂತೆ ದೈರಥಯುದ್ಧಕ್ಕೆ ನಿಂತ ಕರ್ಣಾರ್ಜುನರ (ಕಿರೀಟವೇಷ) ಸಂದರ್ಭವನ್ನು ನೋಡೋಣ. ಸಂಧಾನಕ್ಕೆ ಬಂದ ಕೃಷ್ಣನಿಂದ ತಾನು ಕುಂತಿಯ ಕಾನೀನಪುತ್ರನೆಂಬ ಜನ್ಮರಹಸ್ಯವನ್ನು ತಿಳಿದು ‘ನಿನ್ನಯ ವೀರರೈವರನ್ನು ನೋಯಿಸಲಾರೆ’ ಎಂದು ವಚನಬದ್ಧನಾದ ಕರ್ಣ, ಅದರ ಬೆನ್ನಲ್ಲೇ ಬಂದ ತಾಯಿ ಕುಂತಿಯಲ್ಲಿ ‘ತೊಟ್ಟಂಬನ್ನು ಪುನಾ ತೊಡುವುದಿಲ್ಲ’ ಎಂಬ ಭರವಸೆ ನೀಡಿದ. ತನ್ನ ಹಿರಿಯಣ್ಣ ಕರ್ಣನೆಂದು ತಿಳಿಯದೆ ಮೂದಲಿಸುತ್ತಿದ್ದ ಅರ್ಜುನನ ಮುಂದೆ ಮಾರಾಂತು ನಿಂತ ಕರ್ಣನಿಗೆ ಆತ ತನ್ನ ಕಿರಿಯ ಸಹೋದರನೆಂಬ ಅರಿವಿರುವಾಗ ಅರ್ಜುನನಷ್ಟು ಸುಲಭವಾಗಿ ರೋಷಾವೇಶ ಭಾವಗಳು ಜಾಗೃತವಾಗಬಹುದೇ? –ಆಗಲಾರದು. ಹೀಗೆ ರಂಗದಲ್ಲಿ ಪ್ರದರ್ಶನಗೊಳ್ಳುವ ಎರಡೂ ಕಿರೀಟವೇಷಗಳಲ್ಲಿ ರೋಷಭರಿತನಾದ ಅರ್ಜುನನ ಲಯ ಸ್ವಲ್ಪ ತ್ವರಿತವೇ ಇದ್ದು, ಕರ್ಣನ ಭಾವ ಕೊಂಚ ನಿಧಾನಗತಿಯಲ್ಲಿದ್ದರೆ ಚೆನ್ನ ಅಲ್ಲವೇ? ವೇಷವಿಧಾನದಿಂದಲೂ ಇದು ರಂಗದ ನಿಯಮವೇ ಆಗಿದೆ. ಅರ್ಜುನ ಪೀಠಿಕೆವೇಷ, ಕರ್ಣ ಇದಿರುವೇಷ. ಪೀಠಿಕೆವೇಷಕ್ಕಿಂತ ಇದಿರುವೇಷದ ಲಯಗತಿ ಸ್ವಲ್ಪ ನಿಧಾನ. ಇವೆಲ್ಲವೂ ಈ ಕಥಾ/ಪಾತ್ರರಹಸ್ಯವನ್ನು ತಿಳಿದರೆ ಸುಲಭವೇದ್ಯ.

ಗಿರಿಜಾಕಲ್ಯಾಣದ ಕೊನೆಯ ಯುದ್ಧಸನ್ನಿವೇಶದಲ್ಲಿ ಮುಖಾಮುಖಿಯಾಗುವ ಷಣ್ಮುಖ ಹಾಗೂ ತಾರಕಾಸುರ ಮತ್ತೊಂದು ಉದಾಹರಣೆ. ಷಣ್ಮುಖ ಪುಂಡುವೇಷ, ತಾರಕ ಕೇಶವಾರಿಕಿರೀಟ ಬಣ್ಣದವೇಷ. ರಾತ್ರೆಯಿಡೀ ನಡೆಯುವ ಪ್ರಸಂಗದಲ್ಲಿ ಈ ಪಾತ್ರಗಳ ಪ್ರಸ್ತುತಿ ಬೆಳಗ್ಗಿನ ಜಾವವಾಗಿರುವುದರಿಂದ ನಾಲ್ಕನೇಯ ಕಾಲವೆಂದು ತಿಳಿದು ಷಣ್ಮುಖನ ವೇಗಕ್ಕೆ ಸಮಸಮನಾಗಿ ತಾರಕನಿಗೆ ಪದ್ಯದ ಲಯ ಕೊಟ್ಟರೆ ರಂಗಾಭಾಸವೇ ಸರಿ. ಕಾರಣ, ಇಲ್ಲಿ ಪುಂಡುವೇಷದ ನಾಲ್ಕನೇಯ ಕಾಲವು ಬಣ್ಣದವೇಷದ ನಾಲ್ಕನೇಯ ಕಾಲವಲ್ಲ. ಆಯಾಯ ಪಾತ್ರಸ್ವಭಾವಕ್ಕೆ ತಕ್ಕಂತೆ ಗತಿಯಲ್ಲಿ ವ್ಯತ್ಯಾಸವಿದೆಯಷ್ಟೇ !

ಅಂತೆಯೇ ದಕ್ಷಾಧ್ವರ ಪ್ರಸಂಗದ ಕೊನೆಯಲ್ಲಿ ದಕ್ಷನ (ಕಿರೀಟವೇಷ) ಲಯಕ್ಕೆ ಅನುಗುಣವಾಗಿ ವೀರಭದ್ರನ (ಭೀಮನಮುಡಿ ವೇಷ) ಪದ್ಯಲಯವಲ್ಲ. ದಕ್ಷನಾದರೋ ಇದಿರುವೇಷ, ವೀರಭದ್ರ ಬಣ್ಣದ ವೇಷ. ಇಂತಹದ್ದು ಪ್ರತೀಪ್ರಸಂಗದಲ್ಲೂ ಸಾಧಿತವಾಗಿದೆ. ಆದರೆ ಈಗಿನ ಅವಸರದ ಕಾಲಕ್ಕೆ ಎಲ್ಲವೂ ಇತಿಹಾಸವಾಗಿ ಉಳಿಯುತ್ತಿದೆ. ರಂಗದಲ್ಲಿ ಅನುಷ್ಠಾನಗೊಳ್ಳದೆ ಕೇವಲ ಗೋಷ್ಠಿ, ಕಮ್ಮಟಗಳಲ್ಲಿ ಭಾಷಣಕ್ಕೋ, ಪ್ರದರ್ಶನಕ್ಕೋ ಸೀಮಿತವಾಗಿರುವುದು ಕಲೋಪಾಸಕರು ಚಿಂತಿಸಿ ಮಾರ್ಪಾಡು ತಂದುಕೊಳ್ಳಬೇಕಾದ ಸಂಗತಿ.

Leave a Reply

*

code