ಅಂಕಣಗಳು

Subscribe


 

ಮತ್ತೆ ಮತ್ತೆ ಕಾಡುವ ನಾವಡರು

Posted On: Thursday, June 17th, 2010
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ನಿಜ ಹೇಳಬೇಕೆಂದರೆ ಕಳೆದೆರಡು ಬಾರಿ ಈ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದ ವಿಠಲ ಶಾಸ್ತ್ರಿಯವರ ರೋಚಕ ಕಥೆಗಳ ಬಗೆಗೆ ಇನ್ನೂ ಹೇಳುವುದಿತ್ತು. ಕಳೆದ ಬಾರಿಯ ಲೇಖನ ಮುಗಿಸುವ ಹೊತ್ತಿಗೆ ಪುನಃ ವಿಠಲ ಶಾಸ್ತ್ರಿಗಳ ಬಗೆಗೇ ಬರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು. ಹಾಗಾಗಿ ಅದೇ ಗುಂಗಿನಲ್ಲಿದ್ದ ನನ್ನನ್ನು ಎಚ್ಚರಿಸಿದ್ದು ಮೊನ್ನೆ ಕಳೆದುಹೋದ ದಿನಾಂಕ ಮೇ ೨೭. ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಅದೇ ದಿನ ನಡೆದುಹೋದ ದುರಂತವೊಂದು ಯಕ್ಷಲೋಕಕ್ಕೆ ಮರ್ಮಾಘಾತವನ್ನೇ ನೀಡಿತ್ತೆಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಲ್ಲ. ಹೌದು, ಯಕ್ಷಲೋಕ ಕಂಡ ಅತ್ಯಪೂರ್ವ ಕಂಠಸಿರಿಯ ಭಾಗವತ ಗುಂಡ್ಮಿ ಕಾಳಿಂಗ ನಾವಡರು ಗತಿಸಿಹೋದದ್ದು ೧೯೯೦ರ ಮೇ ೨೭ರಂದು!

ಕಾಳಿಂಗ ನಾವಡರು ಗತಿಸಿ ಇಪ್ಪತ್ತು ಸಂವತ್ಸರಗಳು ಸರಿದುಹೋಗಿದ್ದರೂ ಅವರ ಪರಿಚಯವಿಲ್ಲದವರು ಇಂದಿಗೂ ಇಲ್ಲ! ಪ್ರಾಯಶಃ ವ್ಯಕ್ತಿಯೊಬ್ಬ ಸತ್ತೂ ಬದುಕುವುದೆಂದರೆ ಇದೇ ಇರಬೇಕು. ನಾವಡರು ಇಂದಿಗೂ ಮನೆಮನೆಗಳ ಟೇಪ್‌ರೆಕಾರ್ಡರ್‌ಗಳಲ್ಲಿ, ಸಿ.ಡಿ., ಡಿ.ವಿ.ಡಿ. ಗಳಲ್ಲಿ ಜೀವಂತವಾಗಿದ್ದಾರೆ. ಕ್ಯಾಸೆಟ್‌ನಲ್ಲೇ ಅವರ ಧ್ವನಿ ಕೇಳುತ್ತಾ ಕೇಳುತ್ತಾ ಮೈ ಮರೆಯುವವರು, ಅವರ ಸಾವಿಗಾಗಿ ಮರುಗುವವರು ಅನೇಕ ಮಂದಿ ಈಗಲೂ ಇದ್ದಾರೆ. ಕಾಳಿಂಗ ನಾವಡರೆಂಬ ವ್ಯಕ್ತಿ ತನ್ನ ಜೀವಿತದ ಕೇವಲ ಮೂವತ್ತೆರಡು ವರ್ಷಗಳಲ್ಲಿ ಸಂಪಾದಿಸಿದ ಅಭಿಮಾನಿ ವೃಂದ, ಒಬ್ಬ ಉತ್ತಮ ವೇಷಧಾರಿ ಎಪ್ಪತ್ತು – ಎಂಭತ್ತು ವರ್ಷಗಳ ತನ್ನಿಡೀ ಜೀವನದಲ್ಲಿ ಗಳಿಸಬಹುದಾದ ಅಭಿಮಾನಿಗಳಿಗಿಂತಲೂ ತುಸು ಹೆಚ್ಚೇ ಅನ್ನಬಹುದೇನೋ!

ತಮಾಷೆಯೆಂದರೆ ನಾವಡರು ಸ್ವರ್ಗಸ್ಥರಾದ ಅನಂತರದಲ್ಲಿ ಯಕ್ಷಗಾನ ಬಗೆಗೆ ತಿಳಿದುಕೊಂಡವರೂ ಅವರ ಅಭಿಮಾನಿಗಳಾಗಿದ್ದಾರೆ ! ಸತ್ತ ನಂತರವೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಭಲೇ ಅಪರೂಪದ, ಮಹಾನ್ ವ್ಯಕ್ತಿ ಅವರು ! ಇಂದಿಗೂ ಅವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇರುವುದು ಅಚ್ಚರಿ ಹಾಗೂ ಸೋಜಿಗದ ಸಂಗತಿ. ನಾವಡರು ನಮ್ಮನ್ನಗಲಿ ಹೋಗುವ ಸಂದರ್ಭದಲ್ಲಿ ಇಂದಿನಂತೆ ಸಿ.ಡಿ., ಡಿವಿಡಿ ಗಳು ಅಭಿವೃದ್ಧಿ ಹೊಂದಿರಲಿಲ್ಲ. ಹಾಗಾಗಿ ಇಂದು ನಮಗೆ ದೊರಕುತ್ತಿರುವ ನಾವಡರ ಬಹಳಷ್ಟು ಸಿಡಿಗಳು ಕ್ಯಾಸೆಟ್‌ನಿಂದ ಮರು ಎರಕ ಹೊಯ್ದವುಗಳು. ಆದಾಗ್ಯೂ ಅವುಗಳಿಗೆಲ್ಲಾ ಅಧಿಕ ಬೇಡಿಕೆಯಿದೆ. ಹೀಗಿರುವಾಗ ಒಂದೊಮ್ಮೆ ಆವಾಗಲೇ ಈ ಪರಿ ಸಿ.ಡಿ, ಡಿ.ವಿ.ಡಿ.ಗಳಿರುತ್ತಿದ್ದರೆ ಅಥವಾ ನಾವಡರು ಇಂದಿರುತ್ತಿದ್ದರೆ ಅವರ ಅವೆಷ್ಟು ಸಿ.ಡಿ.ಗಳು ನಮ್ಮೆಲ್ಲರ ಮನೆಗಳಲ್ಲಿರುತ್ತಿದ್ದವೋ?

ಕೇವಲ ತನ್ನ ಹದಿಮೂರನೇ ವಯಸ್ಸಿನಲ್ಲೇ (ನಾವೆಲ್ಲಾ ಯಕ್ಷಗಾನದ ಬಗ್ಗೆ ಆ ವಯಸ್ಸಿನಲ್ಲಿ ಸರಿಯಾಗಿ ತಿಳಿದುಕೊಂಡಿದ್ದಿರಲಿಕ್ಕಿಲ್ಲ!) ನಾವಡರು ಭಾಗವತರಾಗಿ ಮೇಳ ಸೇರಿದ್ದರು. ಬರೀ ಹತ್ತೊಂಬತ್ತರ ಹರಯಕ್ಕೆ ಆ ಕಾಲದ ಖ್ಯಾತ ಸಾಲಿಗ್ರಾಮ ಮೇಳದಲ್ಲಿ ಮುಖ್ಯ ಭಾಗವತರಾಗಿಬಿಟ್ಟಿದ್ದರು ! ಅಷ್ಟು ಸಣ್ಣ ವಯಸ್ಸಿನಲ್ಲಿ ಮುಖ್ಯ ಭಾಗವತರಾದ ಅವರ ದಾಖಲೆ ಇನ್ನೂ ಹಾಗೇ ಉಳಿದಿದೆ ಅನಿಸುತ್ತದೆ. ಪ್ರಾಯಶಃ ಅದನ್ನು ಅಳಿಸುವುದೂ ಕಷ್ಟವೇ.

ಸಾಮಾನ್ಯವಾಗಿ ಭಾಗವತರು ಎಷ್ಟೇ ಚೆನ್ನಾಗಿದ್ದರೂ ವೇಷಧಾರಿಗಳಿಗಿಂತ ಹೆಚ್ಚಿನ ಮನ್ನಣೆ ಪಡೆಯುವುದು ಕಷ್ಟವೇ. ಉತ್ತಮವಾಗಿ ಭಾಗವತಿಕೆ ಮಾಡಿದ ಆ ಕ್ಷಣದಲ್ಲಿ ಒಮ್ಮೆ ಚಪ್ಪಾಳೆ ಗಿಟ್ಟಿಸಬಹುದಾದರೂ ಜನಮನದಲ್ಲಿ ದೀರ್ಘಕಾಲ ಕಾಡುವುದು ವೇಷಧಾರಿಯೇ. ಹಾಗಾಗಿ ಹಿಂದೆಲ್ಲಾ ಕೆಲವರು ತಮ್ಮ ನೆಚ್ಚಿನ ಕಲಾವಿದ ರಂಗಪ್ರವೇಶ ಮಾಡುವ ಹೊತ್ತಿಗೇ ಯಕ್ಷಗಾನಕ್ಕೆ ಹೋಗುತ್ತಿದ್ದುದುಂಟು. ಉದಾಹರಣೆಗೆ ದೇವಿ ಮಹಾತ್ಮೆಯಲ್ಲಿ ರಕ್ತಬೀಜ ಮಾಡುವಾತ ನೆಚ್ಚಿನ ಕಲಾವಿದನಾಗಿದ್ದರೆ ಕೆಲವರು ರಕ್ತಬೀಜ ಬರುವ ವೇಳೆಗೇ, ಅಂದರೆ ಸುಮಾರು ಬೆಳಗಿನ ಜಾವ ಮೂರಕ್ಕೆ ಯಕ್ಷಗಾನ ನಡೆಯುವಲ್ಲಿಗೆ ಆಗಮಿಸುತ್ತಿದ್ದುದುಂಟು. ಅಂದರೆ ಆ ವೇಷಧಾರಿಗೋಸ್ಕರ ಯಕ್ಷಗಾನಕ್ಕೆ ಬರುವುದು. ಇದು ಕಲಾವಿದರಿಗೆ ಸಲ್ಲುವ ನಿಜವಾದ ಗೌರವವೂ ಹೌದು.

ವಿಶೇಷವೆಂದರೆ ಆಗಿನ ದಿನಗಳಲ್ಲಿ ವೇಷಧಾರಿಗಾಗಿ ಅಲ್ಲ, ಕಾಳಿಂಗ ನಾವಡರಿಗಾಗಿ ಬರುವವರಿದ್ದರು! ಅಂದರೆ ಅವರು ಭಾಗವತಿಕೆಗೆ ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ಅಂದರೆ ಸುಮಾರು ಮಧ್ಯರಾತ್ರಿ ಎರಡರ ವೇಳೆಗೆ ಜನ ಜಮಾಯಿಸುತ್ತಿದ್ದರು! ನಾವಡರು ಸೃಷ್ಟಿಸಿದ ಮಾಯೆಯೇ ಅಂಥಾದ್ದು.

ಖಂಡಿತಾ, ಕಾಳಿಂಗ ನಾವಡರು ಗತಿಸಿಹೋದದ್ದು ನಮ್ಮೆಲ್ಲರ ದುರದೃಷ್ಟ. ಅವರಿದ್ದಿದ್ದರೆ ಈಗ ಸುಮಾರು ಐವತ್ತೆರಡು ವಯಸ್ಸಾಗಿರುತ್ತಿತ್ತು. ಹಾಗೆಯೇ ಯಕ್ಷಗಾನ ಇನ್ನೂ ಎತ್ತರಕ್ಕೇರಿರುತ್ತಿತ್ತು.

Leave a Reply

*

code