ಅಂಕಣಗಳು

Subscribe


 

ಎಚ್ಚರ ತಪ್ಪಿದರೆ ರಾವಣನೂ ಹಾಸ್ಯಗಾರನಾಗುತ್ತಾನೆ!

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ಕ್ಷಗಾನ ಕರಾವಳಿಯ ಜನರ ಮುಖ್ಯ ಮನರಂಜನೆಗಳಲ್ಲೊಂದು. ಈಗೀಗ ಬಹುಮಾಧ್ಯಮಗಳ ಎಡೆಬಿಡದ ದಾಳಿಗಳಿಂದ ಯಕ್ಷಗಾನ ಸೊರಗುತ್ತಿರುವಂತೆ ಕಂಡರೂ ಅದರ ರುಚಿ ಇನ್ನೂ ಬತ್ತಿಹೋಗಿಲ್ಲ. ಈಗಲೂ ಯಕ್ಷಗಾನ ಈ ಹಿಂದಿನಷ್ಟೇ ಚಾಲ್ತಿಯಲ್ಲಿದೆ. ಆದರೆ ಒಂದೇ ಒಂದು ಬೇಸರವೆಂದರೆ ಈಗ ಹಿಂದಿನಂತೆ ತಂಡೋಪಾದಿಯಲ್ಲಿ ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಿಲ್ಲ ಅನ್ನುವುದು.

ಒಂದೆರಡು ದಶಕಗಳ ಹಿಂದಕ್ಕೆ ಪ್ರಯಾಣಿಸಿ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ ಕರಾವಳಿಯ ಮನೆ ಮನೆಗಳಲ್ಲೂ ನೂತನ ಯಕ್ಷಗಾನ ಕಲಾವಿದನೊಬ್ಬನನ್ನು ಕಾಣಬಹುದಿತ್ತು. ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಹೋದರೂ ಹವ್ಯಾಸಿಯಾಗಿ ರಂಗಕ್ಕೆ ಬರುವವರು ಅನೇಕರಿದ್ದರು. ಆದರೆ ಈಗ ಹಾಗಿಲ್ಲ. ಪ್ರತೀ ಮನೆ ಬಿಡಿ, ಹತ್ತು ಮನೆಗೊಂದರಂತೆಯೂ ಕಲಾವಿದ ಕಾಣಿಸುತ್ತಿಲ್ಲ. ಇದೇ ತುಸು ವೇದನೆ ತರಿಸುವ ಸಂಗತಿ.

ಹಾಂ, ಹವ್ಯಾಸಿ ಕಲಾವಿದರು ಅನ್ನುವಾಗ ನೆನಪಾಯಿತು ನೋಡಿ. ಮೊದಲೆಲ್ಲಾ ಈ ಹವ್ಯಾಸಿ ಕಲಾವಿದರು ಆಗಾಗ ಅಲ್ಲಿಲ್ಲಿ ಸೇರಿ ತಾಳಮದ್ದಳೆ, ಯಕ್ಷಗಾನಗಳನ್ನು ಸ್ವಂತ ಆಸಕ್ತಿಯಿಂದ ನಡೆಸುತ್ತಿದ್ದರು. ಒಂದೆಡೆ ಮೇಳಗಳ ಅಬ್ಬರವಾದರೆ ಇನ್ನೊಂದೆಡೆ ಈ ಹವ್ಯಾಸಿಗಳ ಪ್ರವೇಶ. ಈ ಹವ್ಯಾಸಿಗಳಿಗೆ ಯಕ್ಷಗಾನವೇ ಉದ್ಯೋಗ ಅಲ್ಲದೇ ಇದ್ದುದರಿಂದ ಕೆಲವೊಮ್ಮೆ ರಂಗದ ಮೇಲೆ ಬಂದಾಗ ಪಾತ್ರಗಳ ಹೆಸರು, ರಾಜ್ಯದ ಹೆಸರು ತಪ್ಪಾಗುವುದು ಸಹಜ. ಅಂಥಾದ್ದೊಂದು ಉದಾಹರಣೆ ಇಲ್ಲಿದೆ.

ದಕ್ಷಿಣ ಕನ್ನಡದ ಮಿತ್ತನಡ್ಕ ಎಂಬಲ್ಲಿ ಒಬ್ಬರು ಹವ್ಯಾಸಿ ಕಲಾವಿದರಿದ್ದರು. ಆಗೀಗ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವ ಉಮೇದಿ ಅವರಲ್ಲಿತ್ತು. ಅದರಲ್ಲೂ ಹೆಚ್ಚಾಗಿ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಅವರು ಭಾಗವಹಿಸುತ್ತಿದ್ದರು. ಒಮ್ಮೆ ಮಿತ್ತನಡ್ಕದಲ್ಲೇ ತಾಳಮದ್ದಳೆ ಏರ್ಪಾಡಾಗಿತ್ತು. ಲಂಕಾದಹನ ಪ್ರಸಂಗ. ಇವರು ರಾವಣ.

ಸರಿ, ತಾಳಮದ್ದಳೆ ಶುರುವಾಯಿತು. ರಾವಣನ ಪ್ರವೇಶವೂ ಆಯಿತು. ಭಾಗವತಿಕೆ ಮುಗಿದು ಇನ್ನು ರಾವಣ ಪೀಠಿಕೆ ಶುರು ಮಾಡಬೇಕು. ಇವರು ಆರಂಭಿಸಿದರು. ಬಲ್ಲಿರೇನಯ್ಯ? ಹಸ್ತಿನಾವತಿಗೆ ಯಾರೆಂದುಕೊಂಡಿರಿ?

ಆಗ ಚೆಂಡೆ ಬಾರಿಸಲು ನಿಂತಿದ್ದವರು ಈ ಮೊದಲೊಮ್ಮೆ ಇದೇ ‘ರಂಗಸ್ಥಳ’ದಲ್ಲಿ ಮಿಂಚಿ ಹೋದ ನೆಡ್ಲೆ ನರಸಿಂಹ ಭಟ್ಟರು. ಅವರು ಕೂಡಲೇ ರಾವಣನಿಗೆ ಚೆಂಡೆಯ ಕೋಲಿನಿಂದ ಹಿಂದಿನಿಂತ ಕುಟ್ಟಿ ‘ಹಸ್ತಿನಾವತಿ ಅಲ್ಲ, ಲಂಕೆ, ಲಂಕೆ’ ಅಂತ ಎಚ್ಚರಿಸಿದರು.

ಅಂಥಾ ಪ್ರಚಂಡ ರಾವಣನಿಗೆ ತನ್ನ ರಾಜ್ಯದ ಹೆಸರೇ ಗೊತ್ತಿಲ್ಲವೆಂದರೆ ಅದೆಂಥಾ ನಾಚಿಕೆ? ಒಂದೊಮ್ಮೆ ಅವರು ಇನ್ಯಾವುದೋ ರಾಜ್ಯದ ಹೆಸರು ಹೇಳಿದ್ದರೂ ಸಹಿಸಿಕೊಳ್ಳಬಹುದಿತ್ತು. ಆದರೆ ಹಸ್ತಿನಾವತಿ ಅಂದರೆ ಹೇಗೆ? ಯಾಕೆಂದರೆ ಹಸ್ತಿನಾವತಿ ಬರುವುದು ಮಹಾಭಾರತದಲ್ಲಿ, ಈಗಿನ್ನೂ ರಾಮಾಯಣ ನಡೆಯುತ್ತಿದೆಯಷ್ಟೇ! ಛೆ, ಛೆ ಅಬದ್ಧ ಅಬದ್ಧ!!

ರಾವಣನ ಪಾತ್ರಧಾರಿಗೆ ತಾನೆಸಗಿದ ತಪ್ಪಿನ ಅರಿವಾಯಿತು. ಕೂಡಲೇ ತಿದ್ದಿಕೊಳ್ಳಬೇಕೆಂಬ ಭರದಲ್ಲಿ ‘ಅಂದಹಾಗೆ ತಪ್ಪಿತು ತಪ್ಪಿತು, ನಮ್ಮದ್ದು ಹಸ್ತಿನಾವತಿಯಲ್ಲ, ಲಂಕೆ ಆಯ್ತಾ?’ ಎಂದೇಬಿಟ್ಟರು! ಈ ಮೊದಲು ‘ಹಸ್ತಿನಾವತಿಗೆ ಯಾರೆಂದುಕೊಂಡಿರಿ?’ ಅಂದಿದ್ದಾಗ ಹೆಚ್ಚಿನವರಿಗೆ ಅದು ಗೊತ್ತಾಗಿರಲಿಲ್ಲ. ಗೊತ್ತಾದ ಕೆಲವರು ಮಾತ್ರ ಮುಸಿ ಮುಸಿ ನಕ್ಕಿದ್ದರು. ಈಗ ಹಾಗಲ್ಲ, ಎಲ್ಲರಿಗೂ ಗೊತ್ತಾಯಿತು. ಸೇರಿದ ಅಷ್ಟೂ ಮಂದಿ ಬಿದ್ದು ಬಿದ್ದು ನಕ್ಕರು. ಆ ಗಳಿಗೆಯಲ್ಲಿ ರಾವಣನಂಥ ದಶಕಂಠನೇ ಸಭಿಕರ ಮುಂದೆ ಹಾಸ್ಯಗಾರನಾಗಿಬಿಟ್ಟಿದ್ದ. ಹಾಗಾಗಿ ರಂಗದ ಮೇಲೆ ಬರುವಾಗ ಬಹಳ ಜಾಗ್ರತೆಯಿರಬೇಕು.

ಹಾಗಂತ ಎಲ್ಲಾ ಹವ್ಯಾಸಿಗಳೂ ಹೀಗೆ ಅಂತಲ್ಲ. ಬಹಳಷ್ಟು ಹವ್ಯಾಸಿಗಳು ಮೇಳದ ಕಲಾವಿದರಿಗಿಂತಲೂ ಹೆಚ್ಚಿನ ಪ್ರಬುದ್ಧತೆಯನ್ನು ಹೊಂದಿದವರಿದ್ದರು ಮತ್ತು ಇದ್ದಾರೆ. ಆದರೂ ಅಲ್ಲೊಮ್ಮೆ ಇಲ್ಲೊಮ್ಮೆ ಹೀಗೂ ಆಗುತ್ತದೆ!

 

Leave a Reply

*

code