ಅಂಕಣಗಳು

Subscribe


 

ಶಾಸ್ತ್ರಿಗಳು ಎಷ್ಟು ಶ್ರೇಷ್ಟ ಕಲಾವಿದರೋ ಅಷ್ಟೇ ಕೋಪಿಷ್ಟ!

Posted On: Thursday, April 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ಹೂಂ, ಆಗುತ್ತಿಲ್ಲ ; ಕಳೆದ ಬಾರಿ ಯಾವ ಕ್ಷಣದಲ್ಲಿ  ಕರಾವಳಿಯ ಗಂಡುಕಲೆ ಯಕ್ಷಗಾನದ ಹೆಮ್ಮೆಯ ಗಂಡುಮಗ ವಿಠಲ ಶಾಸ್ತ್ರಿಯವರ ಬಗೆಗೆ ಬರೆದೆನೋ ಅಲ್ಲಿಂದ ಶಾಸ್ತ್ರಿಗಳದೇ ಕನವರಿಕೆ. ಒಮ್ಮೆಯೂ ವಿಠಲಶಾಸ್ತ್ರಿಗಳನ್ನಾಗಲೀ, ಅವರ ರಂಗಸ್ಥಳದ ವೈಭವವನ್ನಾಗಲೀ ನೋಡದಿದ್ದರೂ ಶಾಸ್ತ್ರಿಗಳು ಹೀಗೆ ಇದ್ದಿರಬಹುದಾ? ಹಾಗೆ ಕುಣಿದಿರಬಹುದಾ? ಅನ್ನುವ ಯೋಚನೆಗಳು ಅವ್ಯಾಹತವಾಗಿ ಮೂಡಿಕೊಳ್ಳುತ್ತಿವೆ. ಮನಸಿನ ರಂಗಸ್ಥಳದ ತುಂಬೆಲ್ಲಾ ಶಾಸ್ತ್ರಿಗಳದೇ ಅಬ್ಬರ! ಅವರದೇ ಅರ್ಥಗಾರಿಕೆ. ಬರಿ ಅವರದೊಂದು ಮಾಸಿದ ಭಾವಚಿತ್ರವನ್ನು ಎದುರಿಗಿಟ್ಟುಕೊಂಡು ಕಲ್ಪನೆಯ ಬಣ್ಣ ತುಂಬಿ ಗತಕಾಲದ ಆ ಅದ್ವಿತೀಯ ರಂಗ ಸಾಕ್ಷಾತ್ಕಾರವನ್ನೇ ಎಣಿಸುತ್ತಾ ಕೂರುವುದು!

ಶಾಸ್ತ್ರಿಗಳ ಅಭಿನಯಗಳ ಬಗೆಗೆ, ರಂಗದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಪರಿಗೆ, ಆ ರಾತ್ರಿಗಳ ಕಥೆಗಳನ್ನು ಹೇಳುವ ಯಕ್ಷಕಲಾಭಿಮಾನಿಗಳೇ ಸಾಕ್ಷಿ. ಶಾಸ್ತ್ರಿಗಳ ಬಗೆಗೆ ಅವೆಷ್ಟು ರೋಚಕ ಕಥೆಗಳಿವೆಯೆಂದರೆ ಅಂತಹ ಕಥೆಗಳು ಸೇರಿ ಸೇರಿ ಶಾಸ್ತ್ರಿಗಳು ಯಕ್ಷಲೋಕದ ದಂತಕಥೆಯೇ ಆಗಿಬಿಡುತ್ತಾರೆ. ಜೊತೆಗೆ ಇಂಥಾ ಕಲಾವಿದರನ್ನೆಲ್ಲಾ ನೋಡದ ನತದೃಷ್ಟರು ನಾವು ಅನ್ನುವ ವೇದನೆಯೂ, ನಮ್ಮ ಹಿರಿಯರಿಗೆ ಈ ಪ್ರಚಂಡ ಕಲಾವಿದರುಗಳನ್ನು ನೋಡುವ ಸೌಭಾಗ್ಯ ಇತ್ತಲ್ಲಾ ಅನ್ನುವ ಸಾತ್ವಿಕ ಅಸೂಯೆಯೂ ಹುಟ್ಟಿಕೊಳ್ಳುತ್ತದೆ!

ಅಂದಹಾಗೆ  ನಿಮಗೆ ಶಾಸ್ತ್ರಿಗಳ ಬಗೆಗೆ ಇನ್ನೂ ಒಂಚೂರು  ಹೇಳಬೇಕು. ಶಾಸ್ತ್ರಿಗಳು ಎಷ್ಟು ಶ್ರೇಷ್ಟ ಕಲಾವಿದರೋ ಅಷ್ಟೇ ಕೋಪಿಷ್ಟ! ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದಕ್ಕೆ ಕಾರಣನಾದವನಿಗೆ ಬಾಸುಂಡೆಯೇ!

ಅದು ಶಾಸ್ತ್ರಿಗಳು ರಂಗ ವೈಭವದ ಉತ್ತುಂಗದಲ್ಲಿದ್ದ ಕಾಲ. ಅವರಿಗೆ ಎಲ್ಲವೂ ಪಕ್ಕಾ ಇರಬೇಕು. ಅಂಥಾ ಶಾಸ್ತ್ರಿಗಳಿಗೆ ಚೆಂಡೆ ಬಾರಿಸುವುದೆಂದರೆ ಸಾಹಸದ ಕಾರ್ಯವೇ. ಯಾಕೆಂದರೆ ಶಾಸ್ತ್ರಿಗಳು ಒಂದೊಂದು ಹೆಜ್ಜೆ ಇಡುವಾಗಲೂ ಅದಕ್ಕೆ ಸರಿಯಾಗಿ ಚೆಂಡೆ ಸದ್ದು ಕೇಳಿಸಬೇಕು. ಸ್ವಲ್ಪ ಹೆಚ್ಚುಕಮ್ಮಿಯಾದರೆ ಮತ್ತೆ ಆಪತ್ತು! ಈ ಹಿನ್ನೆಲೆಯಲ್ಲಿ ನೆಡ್ಲೆ ನರಸಿಂಹ ಭಟ್ಟರು ಮಾತ್ರ ಶಾಸ್ತ್ರಿಗಳಿಗೆ ಚೆಂಡೆ ಬಾರಿಸಿ ಸೈ ಎನಿಸಿಕೊಳ್ಳುತ್ತಿದ್ದರು. ಆದ್ದರಿಂದ ಯಾವಾಗಲೂ ಶಾಸ್ತ್ರಿಗಳ ವೇಷಕ್ಕೆ ನೆಡ್ಲೆಯವರದೇ ಚೆಂಡೆ ಇರುತ್ತಿತ್ತು. ದಕ್ಷಾಧ್ವರ ಪ್ರಸಂಗದ ಶಿವ ಪಾರ್ವತಿ ತಾಂಡವ ನೃತ್ಯದ ವೇಳೆಯಂತೂ ನರಸಿಂಹ ಭಟ್ಟರ ಚೆಂಡೆ ಹಾಗೂ ಶಾಸ್ತ್ರಿಗಳ ಹೆಜ್ಜೆ ಎರಡೂ ಅದ್ಭುತ ಸಂಯೋಜನೆಗೊಳಪಡುತ್ತಿದ್ದವು.

ಒಮ್ಮೆ  ಏನಾಯಿತೆಂದರೆ ; ತಾಂಡವ ನರ್ತನದ ವೇಳೆ ನರಸಿಂಹ ಭಟ್ಟರ ಬದಲಿಗೆ ದಿವಾಣ ಭೀಮ ಭಟ್ ಚೆಂಡೆಗೆ ನಿಂತುಬಿಟ್ಟರು. ಸರಿ, ನರ್ತನ ಶುರುವಾಯಿತು. ನರ್ತಿಸುತ್ತಿದ್ದ ವೇಳೆ ಗ್ರಹಚಾರವಶಾತ್ ಒಮ್ಮೆ ಶಾಸ್ತ್ರಿಗಳು ಹೆಜ್ಜೆ ಇಡುವ ಮೊದಲೇ ಚೆಂಡೆಪೆಟ್ಟು ಬಿದ್ದಾಯಿತು! ಶಾಸ್ತ್ರಿಗಳ ಶಿವನಿಗೆ ನಿಜವಾಗಿಯೂ ಆ ಕ್ಷಣ ಮೂರನೇ ಕಣ್ಣು ಇದ್ದಿದ್ದರೆ ಅಲ್ಲಿ ಇದ್ದವರೆಲ್ಲರೂ ಭಸ್ಮವಾಗಿಬಿಡುತ್ತಿದ್ದರೇನೋ ! ಅಂತಹ ಸಿಟ್ಟಿನಿಂದ ತಿರುಗಿ ನೋಡಿದ್ದೇ ತಡ, ಅಲ್ಲೆಲ್ಲೋ ಇದ್ದ ನರಸಿಂಹ ಭಟ್ ಓಡಿ ಬಂದು ಚೆಂಡೆಗೆ ನಿಂತರು ! ಮತ್ತೆ ಪುನಃ ಸಸೂತ್ರವಾಗಿ ಸಾಗತೊಡಗಿತು.

ಇನ್ನು, ಶಾಸ್ತ್ರಿಗಳಿಗೆ ಈಶ್ವರನಷ್ಟೇ ಪ್ರಸಿದ್ಧಿಯನ್ನು ತಂದುಕೊಟ್ಟ ಇನ್ನೊಂದು ಪಾತ್ರವೆಂದರೆ ಅದು ಭಸ್ಮಾಸುರ ಮೋಹಿನಿಯ ಭಸ್ಮಾಸುರ. ಶಿವನಿಂದ ಅನಲ ಹಸ್ತವನ್ನು ಪಡಕೊಂಡು ಅನಿಲ ವೇಗದಲ್ಲಿ ಸಾಗಿ ಕಂಡ ಕಂಡವರ ಶಿರದ ಮೇಲೆ ತನ್ನ ಕರವಿಡುತ್ತಾ ಸಾಗುತ್ತಿರುವಾಗ ಮೋಹಿನಿ ಕಾಣಿಸುತ್ತಾಳೆ ನೋಡಿ. ಆಗಿನ ಶಾಸ್ತ್ರಿಗಳ ಅಭಿನಯವನ್ನು ಸತ್ತರೂ ಮರೆಯುವಂತಿಲ್ಲ ಅನ್ನುತ್ತಾರೆ ಆ ದೃಶ್ಯವನ್ನು ಕಂಡವರು. ಒಮ್ಮೆ ಭಸ್ಮಾಸುರ ತನ್ನ ಕೈಯನ್ನು ತನ್ನ ತಲೆಯ ಮೇಲೆಯೇ ಇಟ್ಟುಕೊಂಡು ಸತ್ತಾಯಿತೋ ಅಷ್ಟು ಹೊತ್ತು ಆ ಪರಿ ಕುಣಿಯುತ್ತಿದ್ದಾಗಲೂ ಕಾಣಿಸಿಕೊಳ್ಳದ ಸುಸ್ತು ಶಾಸ್ತ್ರಿಗಳಿಗೆ ಕಾಣಿಸಿಕೊಳ್ಳುತ್ತಿತ್ತು. ಆಮೇಲೆ ಅವರು ಚೌಕಿಗೆ ಹಿಂತಿರುಗುತ್ತಿರಲಿಲ್ಲ. ಬದಲಿಗೆ ರಂಗಸ್ಥಳದಿಂದ ಹಿಂದೆ ಹಿಂದೆ ಸರಿಯುತ್ತಾ ಚೌಕಿಗಿಳಿಯುವ ಮೆಟ್ಟಿಲ ಬಳಿ ಬಂದು ದೊಪ್ಪನೆ ಬಿದ್ದುಬಿಡುತ್ತಿದ್ದರು. ಆಗ ಅಲ್ಲಿ ಅವರನ್ನು ಹಿಡಿದುಕೊಳ್ಳಲು ನಾಲ್ಕೈದು ಜನ ಸಿದ್ಧರಾಗಿ ನಿಂತಿರುತ್ತಿದ್ದರು! ಆಮೇಲೆ ಶಾಸ್ತ್ರಿಗಳನ್ನು ಹೊತ್ತುಕೊಂಡು ಹೋಗಿ ವೇಷವನ್ನು ಕಳಚಿ ಮಲಗಿಸುವವರೆಗಿನ ಜವಾಬ್ದಾರಿ ಆ ನಾಲ್ಕೈದು ಜನರದ್ದು !

ಹುಂ, ಶಾಸ್ತ್ರಿಗಳ ಕಥೆ ಹೇಳಿದಷ್ಟೂ ಮುಗಿಯುವುದಿಲ್ಲ !

Leave a Reply

*

code