ಅಂಕಣಗಳು

Subscribe


 

ರಸಾನುಭೂತಿಯೆಂಬ ಬೆಳಕು

Posted On: Monday, March 20th, 2023
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ವಿಭಾ ಕೆ. ಟಿ, ಬೆಂಗಳೂರು.

ನೂಪುರ ಭ್ರಮರಿ (ರಿ.)  IKS Centre– ಶಾಸ್ತ್ರರಂಗ ಅಧ್ಯಯನ ತರಬೇತಿಯ (Internship/Fellowship) ಅಂಗಭಾಗವಾಗಿ  ಪ್ರಕಟವಾದ ಲೇಖನ – 4

ಎಳೆಯ ವಯಸ್ಸಿನಲ್ಲಿ “ರಸ” ಎಂದರೆ ವಿಷಯ ಅಥವಾ ವಸ್ತುವಿನ ಸಾರ ಎಂದು ಅರ್ಥೈಸಿಕೊಂಡಿದ್ದೆ. ನಂತರದ ದಿನಗಳಲ್ಲಿ ಭರತನಾಟ್ಯದ ನವರಸಗಳ ಪರಿಚಯವಾದಾಗ , ‘ಭಾವ’ವನ್ನು ರಸದ ಮೂಲಕ ವ್ಯಕ್ತಪಡಿಸುವುದು ಎಂದು ಅರಿತೆ.  ಆದರೆ ರಸದ ವರ್ಣನೆ  ಇಷ್ಟು ಸರಳ ವಲ್ಲ ಎಂದು ತಿಳಿದದ್ದು  ನಾಟ್ಯಶಾಸ್ತ್ರದಲ್ಲಿ ಭರತನ ವ್ಯಾಖ್ಯಾನವನ್ನು ಮನಗಂಡ ನಂತರವೇ .

ಭರತನು ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ‘ರಸ’ವನ್ನು ‘ವಿಭಾವ’, ‘ಅನುಭಾವ’ ಹಾಗೂ ‘ವ್ಯಭಿಚಾರಿ’ಭಾವಗಳ ಸoಯೋಗ ಎಂದು ತಿಳಿಸಿದ್ದಾನೆ. ಭಾವ, ಭಾವಯಂತಿ, ಕಾರಿಕೆ, ಸಂಗ್ರಹ, ಸೂತ್ರ, ನಿರುಕ್ತಿ, ಇತ್ಯಾದಿಗಳ ಕುರಿತು ಮುನಿಗಳು ಕೇಳಿದ ಪ್ರಶ್ನೆಗಳಿಗೆ ಭರತನ ಉತ್ತರವನ್ನು ಸೂಕ್ಷ್ಮವಾಗಿ ನೂಪುರಭ್ರಮರಿಯ  ಶಾಸ್ತ್ರರಂಗದಲ್ಲಿ ಗಮನಿಸುತ್ತಾ ಸಾಗಿದಾಗ ನನ್ನಲ್ಲಿದ್ದ ಹಲವಾರು ಕೇಳದ ಪ್ರಶ್ನೆಗಳಿಗೆ ವಿವರಣೆ ದೊರೆಯಿತು. ಸೂತ್ರದ ಮೂಲಕ ನೀಡುವ ಸಂಕ್ಷಿಪ್ತ ವಿವರಣೆ ಕಾರಿಕೆಯಾದರೆ, ಶಬ್ದ ಅಥವಾ ವಿಷಯದ ಮೂಲ ರೂಪ ಹಾಗೂ ಕಾಲಕ್ರಮೇಣ ಅದರ ಬದಲಾವಣೆಯ ಕಾರಣ ಇವೆಲ್ಲವು ನಿರುಕ್ತಿ ಎನಿಸಿಕೊಳ್ಳುವುದು.

ಭಾವದಿಂದ ರಸ ಜನ್ಯವಾಗುವುದೋ ಅಥವಾ ನಾವು ವ್ಯಕ್ತಪಡಿಸುವ ರಸಕ್ಕೆ ಆಯಾ ಭಾವ ಪ್ರಕಟವಾಗುವುದೋ ಎಂಬ ಪ್ರಶ್ನೆ ನನ್ನನ್ನು ಆಗ್ಗಾಗ್ಗೆ ಕಾಡುತಿತ್ತು. ಭರತನು ಈ ಕುರಿತು ಪ್ರಕೃತಿಯ ಮೂಲಕ ಉದಾಹರಣೆ ನೀಡಿದ್ದಾನೆ. ಅದುವೇ , ಹೇಗೆ ಬೀಜದಿಂದ ಸಸಿಯೊಡೆದು ಮರವಾಗಿ, ಹೂವಾಗಿ ನಂತರ ಬೀಜಕ್ಕೆ ಮರಳುವುದೋ ಹಾಗೆಯೇ ಒಂದು ಭಾವದಿಂದ ರಸ ಉತ್ಪತ್ತಿಯಾಗಿ ನಂತರ ಅದೇ ರಸದಿಂದ ಭಾವ ಗುರುತಿಸಲ್ಪಡುತ್ತದೆ.

ಭರತನು ಈ ಆರನೇ ಅಧ್ಯಾಯದಲ್ಲಿ ನಾಲ್ಕು ಮೂಲ ರಸ ಹಾಗೂ ಅದರಿಂದ ಜನ್ಯವಾದ ನಾಲ್ಕು ರಸಗಳ ಕುರಿತು ವಿವರಣಾತ್ಮಕ ವಿಶ್ಲೇಷಣೆ ನೀಡಿದ್ದಾನೆ. ಶೃಂಗಾರದಿಂದ ಹಾಸ್ಯ ರಸ, ರೌದ್ರದಿಂದ ಕರುಣ ರಸ, ವೀರದಿಂದ ಅದ್ಭುತ ರಸ ಹಾಗೂ ಬೀಭತ್ಸದಿಂದ ಭಯಾನಕ ರಸವು ಜನ್ಯವಾಗಿದೆ ಎಂದು ತಿಳಿಸಿದ್ದಾನೆ. ಇದರೊಂದಿಗೆ ಎಂಟು ಸ್ಥಾಯಿಭಾವಗಳಾದ ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸ ಮತ್ತು ವಿಸ್ಮಯ ಹಾಗೂ ೩೩ ವ್ಯಭಿಚಾರಿ ಭಾವಗಳನ್ನು ತಿಳಿಸಿದ್ದಾನೆ. ಇದಲ್ಲದೆ ವೃತ್ತಿ, ಪ್ರವೃತ್ತಿ, ಚತುರ್ವಿಧ ಅಭಿನಯ, ನಾಟ್ಯಧರ್ಮಿ ಹಾಗೂ ಲೋಕಧರ್ಮಿಯ ಬಗ್ಗೆಯೂ ಉಲ್ಲೇಖವಿದೆ.

 

  1. ಶೃಂಗಾರ ರಸ

ಮೇಲ್ನೋಟಕ್ಕೆ ನಾಯಕನನ್ನು ನೆನೆದು ನಾಚಿ ನೀರಾಗುವ ನಾಯಕಿಯು ತೋರ್ಪಡಿಸುವ ರಸವೇ ಶೃಂಗಾರ ಎಂದು ಅನಿಸಿದರೂ, ‘ಶೃಂಗಾರ’ ಪದದ ಪ್ರಧಾನ ಪ್ರಯೋಗವನ್ನು ಭರತ ದೃಷ್ಟಾನ್ತದೊಂದಿಗೆ ವಿವರಿಸಿದ್ದಾನೆ. ವ್ಯಕ್ತಿಗಳಿಗೆ ಇಟ್ಟ ಹೆಸರು  ಪಿತೃ/ಮಾತೃ ಪರಂಪರೆ ಇಂದ ಬಂದಂತೆ, ರಸ, ಭಾವ ಹಾಗೂ ಇತರ ನಾಟ್ಯಸಂಬಂಧಿ ಪದಗಳು ಸಹ ಹಿರಿಯರ ಸಂಪ್ರದಾಯದ ಮೂಲಕ ಆಯಾ ಶಾಸ್ತ್ರ ಪರಂಪರೆಯಿಂದ ಬಂದಿದೆ.

ಶೃಂಗಾರವನ್ನು, ಶುದ್ಧ, ಉಜ್ವಲ, ಪವಿತ್ರ ಹಾಗೂ ಸುಂದರವಾದ ಎಲ್ಲ ವಸ್ತುಗಳಿಗೂ ಅನ್ವಯಿಸಲಾಗುತ್ತದೆ. ಸುಖಸಾಧನಗಳಿಂದ ಸಂಪನ್ನನಾದ, ಋತು ಮಾಲ್ಯಾದಿಗಳನ್ನು ಅನುಭವಿಸುವ, ವನಿತಾಯುಕ್ತನಾದ ಪುರುಷನು ಸಹ ಶೃಂಗಾರನೆಂದು ಕರೆಯಲ್ಪಡುವನು. ಶೃಂಗಾರ ರಸದ ವಿಭಾವಗಳು ಪ್ರಶಸ್ತವಾದ ವಸಂತಾದಿ ಋತು, ಸೂಕ್ತ ರೀತಿಯ ಉಜ್ವಲ ಅಲಂಕಾರ, ಸುಖಾನುಭವ ಇತ್ಯಾದಿ. ಅನುಭಾವಗಳು ಕಣ್ಣುಗಳ ಚತುರ ಚಲನೆ, ಓರೆ ನೋಟ, ಒಳ್ಳೆಯ ಮಾತುಗಳು ಮುಂತಾದ ಪ್ರಯೋಗ. ಶೃಂಗಾರ ರಸಕ್ಕೆ ಆದಿದೇವ ವಿಷ್ಣು ಹಾಗೂ ಬಣ್ಣ ಶ್ಯಾಮ ವರ್ಣ ಎಂದು ಹೊಂದಿಸಲಾಗಿದೆ.

2.  ಹಾಸ್ಯರಸ

ಹಾಸವೆಂಬ ಸ್ಥಾಯಿಭಾವದಿಂದ ಕೂಡಿ ಹಾಸ್ಯ ರಸವು ಗೋಚರಿಸುತ್ತದೆ. ವಿಕೃತವಾದ ವೇಷ, ಗರ್ವದಿಂದ ಮೆರೆಯುವುದು, ಅಣಕು ಮಾತು, ವಕ್ರೋಕ್ತಿ ಮುಂತಾದ ವಿಭಾವಗಳಿಂದ  ಹಾಸ್ಯರಸವು ಹುಟ್ಟುತ್ತದೆ. ತುಟಿ, ಮೂಗು, ಕೆನ್ನೆ ಅದುರುವುದು, ದೃಷ್ಟಿಯನ್ನು ವ್ಯಂಗ್ಯವಾಗಿ ಕೊಂಕಿಸುವುದು ಅನುಭಾವಗಳಾದರೆ, ಆಲಸ್ಯ, ನಿದ್ರಾ, ಸ್ವಪ್ನ ಇತ್ಯಾದಿಗಳು ವ್ಯಭಿಚಾರಿ ಭಾವಗಳು. ಹಾಸ್ಯರಸದಲ್ಲಿ ಸ್ಮಿತ ಮತ್ತು ಹಸಿತ(ಉತ್ತಮ ಪ್ರಕೃತಿಯವರಲ್ಲಿ), ವಿಹಸಿತ ಮತ್ತು ಉಪಹಸಿತ(ಮಧ್ಯಮ ಪ್ರಕೃತಿಯವರಲ್ಲಿ ),  ಅಪಹಸಿತ ಹಾಗೂ ಅತಿಹಸಿತ(ಅಧಮ ಪ್ರಕೃತಿಯವರಲ್ಲಿ)ಎಂಬ ಪ್ರಭೇಧಗಳನ್ನು ಸಹ ತಿಳಿಸಲಾಗಿದೆ. ಹಾಸ್ಯರಸಕ್ಕೆ ಬಿಳಿ ಬಣ್ಣ ಹಾಗೂ ಪ್ರಥಮನನ್ನು ದೇವತೆಯಾಗಿ ನಿಗದಿಗೊಳಿಸಲಾಗಿದೆ.

3. ಕರುಣರಸ

ಶೋಕ ಸ್ಥಾಯಿಭಾವದಿಂದ ಹುಟ್ಟುವ ಕರುಣ ರಸವನ್ನು ಮೂರನೇ ರಸವಾಗಿ ಉಲ್ಲೇಖಿಸಲಾಗಿದೆ. ಇದರ ವಿಭಾವಾದಿಗಳು ಹೀಗಿವೆ : ಮುನಿ/ಪಿತೃ ಶಾಪ, ಪ್ರಿಯರ ಅಗಲಿಕೆ, ಆಘಾತ, ಸಂಪತ್ತಿನ ನಾಶ, ಇತ್ಯಾದಿ. ಅನುಭವಾದಿಗಳು- ಅಶ್ರುಪಾತ , ನಿಟ್ಟುಸಿರು, ಸ್ಮರಣ ಶಕ್ತಿ ನಶಿಸುವುದು ಮುಂತಾದವು. ನಿರ್ವೇದ, ಗ್ಲಾನಿ, ಚಿಂತೆ, ಭ್ರಮ, ಮೋಹ, ಇನ್ನಿತರ ಭಾವವು ವ್ಯಭಿಚಾರಿ ಭಾವಗಳು. ಕರುಣ ರಸದ ದೇವತೆ ಯಮ ಹಾಗೂ ಇದನ್ನು ಗುರುತಿಸಲ್ಪಡುವ ಬಣ್ಣ ಬೂದು.

4. ರೌದ್ರರಸ

ರೌದ್ರ ಎಂದಾಕ್ಷಣ ರಾಕ್ಷಸರಿಗೆ ಮಾತ್ರ ಸೀಮಿತವಾದದ್ದು ಎಂಬ ಅಭಿಪ್ರಾಯ ತಪ್ಪಾಗಬಹುದು. ರಾಕ್ಷಸರು ಗುಣ ಸಹಜವಾಗಿ ಎಲ್ಲಾ ಕಾರ್ಯದಲ್ಲೂ ರೌದ್ರರಸವನ್ನು ಬಿಂಬಿಸಬಹುದಾದರೂ, ಇತರರು ಸಹ ಕೆಲವೊಮ್ಮೆ ಗರ್ವ ಹಾಗೂ ಕಾದಾಟದ ಸಂದರ್ಭಗಳಲ್ಲಿ ರೌದ್ರ ರಸವನ್ನು ಸ್ಫುರಿಸುತ್ತಾರೆ. ಕ್ರೋಧ ಸ್ಥಾಯಿ ಭಾವದಿಂದ ಜನಿಸುವ ರೌದ್ರ ರಸವು ಕೋಪ, ಆಪಾದನೆ, ಸುಳ್ಳು ನಿಂದನೆ ಹಾಗೂ ಇತ್ಯಾದಿ ಭಾವದಿಂದ ಮತ್ತು ಕತ್ತರಿಸುವುದು, ಕೈಕಾಲು ಮುರಿಯುವುದು, ಚುಚ್ಚುವುದು ಇನ್ನಿತರ ಅನುಭಾವಗಳಿಂದ ಗುರುತಿಸಲ್ಪಡುತ್ತದೆ. ಇದನ್ನು ಅಭಿನಯಿಸಲು ಬೆಂಕಿ ಉಗುಳುವ ಕಣ್ಣುಗಳು, ಹುಬ್ಬು ಗಂಟಿಕ್ಕುವುದು, ಅಂಗೈಗಳನ್ನು ಮಸೆಯುವುದನ್ನು ಪ್ರಯೋಗಿಸುತ್ತೇವೆ. ಇದರ ವ್ಯಭಿಚಾರಿ ಭಾವ- ಸಮ್ಮೋಹ, ಆವೇಗ, ಗರ್ವ, ಸ್ವೇಧ, ಇತ್ಯಾದಿ. ರೌದ್ರ ರಸದ ಬಣ್ಣ ಕೆಂಪು ಹಾಗೂ ದೇವತೆ ರುದ್ರ.

5. ವೀರ ರಸ

ಉತ್ತಮ ಪ್ರಕೃತಿಯವರಿಗೆ ಸೇರಿದ ಉತ್ಸಾಹವೆಂಬ  ಸ್ಥಾಯಿಭಾವದಿಂದ  ಜನಿಸುವ ಐದನೇ ರಸವೇ ವೀರ. ವೀರ ರಸದಲ್ಲಿ ನಾಲ್ಕು ಬಗೆಯ(ಯುದ್ಧ, ದಾನ, ದಯಾ, ಧರ್ಮ) ವೀರರ ವಿಶ್ಲೇಷಣೆಯನ್ನು ಕಾಣಬಹುದು. ಇದರ ವಿಭಾವವು- ನ್ಯಾಯ, ವಿನಯ, ಬಲ, ಪರಾಕ್ರಮ, ಶಕ್ತಿ ಮತ್ತು ಅನುಭಾವಗಳು-  ಸ್ಥೈರ್ಯ, ಧೈರ್ಯ, ಶೌರ್ಯ ಹಾಗೂ ತ್ಯಾಗ. ಬಂಗಾರದ ಬಣ್ಣ ಇದರ ಸಂಕೇತ ಹಾಗೂ ಮಹೇಂದ್ರನು ವೀರ ರಸದ  ದೇವತೆ.

6. ಭಯಾನಕ ರಸ

ಭಯಾನಕ ರಸವು ಭಯ ಸ್ಥಾಯಿ ಭಾವದಿಂದ ಕೂಡಿದ್ದು ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಐದನೇ ರಸವಾಗಿದೆ. ಅಟ್ಟಹಾಸ ಮೊದಲಾದ ವಿಕೃತ ಧ್ವನಿ, ಕ್ರೂರಜಂತು, ರಾಕ್ಷಸ ಮೊದಲಾದ ಭೀಕರಾಕೃತಿಗಳ ದರ್ಶನ, ಶೂನ್ಯವಾದ ಮನೆಯನ್ನು ಪ್ರವೇಶಿಸುವುದು ಇತ್ಯಾದಿಗಳು ವಿಭಾವಗಳು. ಕೈಕಾಲು ನಡುಗುವುದು, ಕಣ್ಣು ಅದುರುವುದು ಅನುಭಾವವಾದರೆ, ಸ್ಥಂಬ, ಗದ್ಗದ,ರೋಮಾಂಚ, ವೈವರ್ಣ್ಯ, ಸ್ವರಭೇದ ಇವೆಲ್ಲವೂ ಇದರ ವ್ಯಭಿಚಾರಿ ಭಾವಗಳು. ಭಯಾನಕ ರಸಕ್ಕೆ ಕಪ್ಪು ವರ್ಣ ಹಾಗೂ ಕಾಲನನ್ನು ಹೊಂದಿಸಲಾಗಿದೆ.

7. ಬೀಭತ್ಸರಸ

ಜಿಗುಪ್ಸೆ ಎಂಬ ಸ್ಥಾಯಿ ಭಾವದಿಂದ ಉದ್ಬೋಧವಾಗುವ ಏಳನೆಯ ರಸವೇ ಬೀಭತ್ಸ. ಮುಖ ಹಾಗೂ ಕಣ್ಣುಗಳನ್ನು ವಿಲಕ್ಷಣವಾಗಿ ತಿರುಗಿಸುವುದು, ಮೂಗು ಮುಚ್ಚಿಕೊಳ್ಳುವುದು, ವಾಂತಿ ಮಾಡುವುದು ಮುಂತಾದ ಅನುಭಾವಗಳಿಂದ ನಾವು ಈ ರಸವನ್ನು ಪ್ರಕಟಿಸುತ್ತೇವೆ. ಇದರ ವಿಭಾವಗಳು ಅಹೃದ್ಯ, ಅಪ್ರಶಸ್ತ  ಹಾಗೂ ಅಪ್ರಿಯ ವಿಚಾರಗಳಿಂದ ಹುಟ್ಟುತ್ತದೆ. ವ್ಯಭಿಚಾರಿ ಭಾವವು- ಅಪಸ್ಮಾರ, ಮೋಹ,ಉದ್ವೇಗ, ಆವೇಗ, ಇತ್ಯಾದಿ. ಮಹಾಕಾಲ ಇದರ ದೇವತೆ ಹಾಗೂ ನೀಲಿ ಬಣ್ಣದಿಂದ ಇದನ್ನು ಗುರುತಿಸಲಾಗುವುದು.

8. ಅದ್ಭುತ ರಸ

ನಾಟ್ಯಶಾಸ್ತ್ರದಲ್ಲಿನ ಕೊನೆಯ ಹಾಗೂ ವಿಸ್ಮಯ ಸ್ಥಾಯಿಭಾವದಿಂದ ಹುಟ್ಟುವ ರಸವೇ ಅದ್ಭುತ. ಇದರಲ್ಲಿ ದಿವ್ಯದರ್ಶನದಿಂದುಂಟಾದ ದಿವ್ಯಜ ಮತ್ತು ಹರ್ಷದಿಂದುಂಟಾದ ಆನಂದಜ ಎಂಬ ಎರಡು ಪ್ರಭೇಧವಿದೆ. ದಿವ್ಯಜನರ ದರ್ಶನ, ದೇವಕುಲಾದಿಗಮನ ಇತ್ಯಾದಿ ವಿಭಾವಗಳು. ಅನುಭಾವಗಳು- ಕಣ್ಣರಳಿಸಿ ನೋಡುವುದು, ಕಣ್ಣು ಮಿಟಕಿಸದೆ ನೋಡುವುದು, ಸಂತಸ, ಹಾ ಹಾ ಎಂದು ಉದ್ಗರಿಸುವುದು. ಇದರ ಬಣ್ಣ ಹಳದಿ ಹಾಗೂ ಅಧಿದೇವತೆ ಬ್ರಹ್ಮ.

9. ಅಭಿನವಗುಪ್ತನು ಶಮವೆಂಬ ಸ್ಥಾಯಿಭಾವದಿಂದ ಹುಟ್ಟಿ, ಮೋಕ್ಷವನ್ನು ಪ್ರವರ್ತಿಸುವ ರಸ ಎಂದು ಶಾಂತ ರಸವನ್ನು(ನಾಟ್ಯಶಾಸ್ತ್ರದಲ್ಲಿ ಇದರ ಉಲ್ಲೇಖವಿಲ್ಲ) ವರ್ಣಿಸಿದ್ದಾನೆ.

‘ಭಾವದಿಂದ ರಸನಿಷ್ಪತ್ತಿಯೇ ಹೊರತು ರಸದಿಂದ ಭಾವ ಉಧ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ ಆರನೇ ಅಧ್ಯಾಯದ  ಅಷ್ಟರಸಗಳ ಸಂಕ್ಷಿಪ್ತ ವಿವರಣೆ ಇದಾಗಿದೆ.

 

ಗ್ರಂಥಸೂಚಿ

  1. Natya Shastra : Bharat Muni : Free Download, Borrow, and Streaming : Internet Archive
  2. Natya Shastra of Bharata Muni with Abhinava Bharati I – Madhsusudhan Shastri
  3. Mahamuni Bharata – Dr Manorama, Sri Bharati publications.

Leave a Reply

*

code