ಅಂಕಣಗಳು

Subscribe


 

ನೃತ್ಯದಲ್ಲಿ ರಸಾಯನಶಾಸ್ತ್ರ- ‘ರಸೋತ್ಕರ್ಷ’ ಪ್ರಯೋಗಾನುಭವ

Posted On: Tuesday, March 1st, 2016
1 Star2 Stars3 Stars4 Stars5 Stars (No Ratings Yet)
Loading...

Author: ವಿದುಷಿ ಯಶಾ ರಾಮಕೃಷ್ಣ, ಉಡುಪಿ

ನೃತ್ಯದ ಮುಖಾಂತರ ಏನನ್ನು ಬೇಕಾದರೂ ಸಂವಹಿಸಬಹುದು ಎಂಬ ನಂಬಿಕೆಯಿಂದ, ಮತ್ತು ಸ್ವತಃ ನಾನೋರ್ವ ಅಧ್ಯಾಪಿಕೆಯೂ ಆಗಿರುವುದರಿಂದ ರಸಾಯನಶಾಸ್ತ್ರವನ್ನು ಆಧರಿಸಿ ಈ ಪ್ರಯೋಗಕ್ಕೆ ಇಳಿದೆ. ಹಿಮ್ಮೇಳದ ಸಹಿತ ಮಾಡುವುದಕ್ಕಿಂತ ಧ್ವನಿಮುದ್ರಿತ ಸಂಗೀತದ ಬಳಕೆ ಸೂಕ್ತವೆಂದು ಮೊದಲೇ ಸೂಕ್ತ ಹಿಮ್ಮೇಳ, ವಾದ್ಯಪರಿಣಾಮಗಳನ್ನು ನೀಡಿ ಧ್ವನಿಮುದ್ರಿತ ಸಿಡಿಯನ್ನು ಮಾಡಿಸಿಟ್ಟಿದ್ದೆವು. ವಿದ್ವಾನ್ ರವಿಕಿರಣ್ ಅವರು ರಾಸಾಯನಿಕ ಕ್ರಿಯೆಗಳಿಗೆ ತಕ್ಕ ಹಾಗೆ ಸಂಗೀತ ಸಂಯೋಜನೆ ಮಾಡಿದ್ದರು. ದೀಕ್ಷಾ ರಾಮಕೃಷ್ಣ ಮತ್ತು ಸುಮಂತ್ ಭಟ್ ಹಿನ್ನೆಲೆ ಗಾಯನದಲ್ಲಿ ಸಹಕರಿಸಿದ್ದರೆ; ಸಾರಂಗ್ ಸ್ಟುಡಿಯೋನ ಜಯಂತ್ ಐತಾಳ್ ಧ್ವನಿಮುದ್ರಣಕ್ಕೆ ನೆರವು ನೀಡಿದ್ದರು. ಈ ಪ್ರಯೋಗಕ್ಕೆ ಸಾಹಿತ್ಯವನ್ನು ಬೆಂಗಳೂರಿನ ಜಿ. ಆನಂದ್ ಅವರು ಕನ್ನಡ ಮತ್ತು ಇಂಗ್ಲೀಷ್‌ನ ಹದವಾದ ಬಳಕೆಯೊಂದಿಗೆ ಜನರಿಗೆ ಅರ್ಥವಾಗುವಂತೆ ರಚಿಸಿಕೊಟ್ಟಿದ್ದರು. ಒಟ್ಟು ೩೫ ನಿಮಿಷಗಳ ಈ ನೃತ್ಯಪ್ರಯೋಗದಲ್ಲಿ ರಾಗಸಂಯೋಜನೆ ಹಿಂದೂಸ್ಥಾನೀ ಶೈಲಿಯಲ್ಲಿದ್ದುದರಿಂದ ಭರತನಾಟ್ಯದೊಂದಿಗೆ ಕಥಕ್, ಜಾನಪದ ನೃತ್ಯ, ಲಘುಶಾಸ್ತ್ರೀಯನೃತ್ಯದ ಚಲನೆಗಳನ್ನು ಹೊಂದಿಸಲಾಗಿತ್ತು. ನಾಟ್ಯಧರ್ಮಿ ಮತು ಲೋಕಧರ್ಮೀಗಳ ಹದವಾದ ಪಾಕದಲ್ಲಿ ಸ್ವತಃ ನಾನು ನೃತ್ಯಸಂಯೋಜನೆ, ನಿರ್ದೇಶನ ಮಾಡಿದ್ದೆ. ಸುಮಾರು ಒಂದೂವರೆ ಲಕ್ಷದಷ್ಟು ವೆಚ್ಚದಲ್ಲಿ ನಿರ್ಮಿಸಲಾದ ಈ ಪ್ರಯೋಗದಲ್ಲಿ ನಮ್ಮದೇ ಸಂಸ್ಥೆ ‘ಹೆಜ್ಜೆ-ಗೆಜ್ಜೆ’ಯ ಸುಮಾರು ೫೦ ವಿಧ್ಯಾರ್ಥಿಗಳು ಕಲಾವಿದರಾಗಿ ಪಾಲ್ಗೊಂಡಿದ್ದರು.

DSC_0251

ಪ್ರತಿಯೊಂದು ವಸ್ತುವೂ ಅಣುವಿನಿಂದ ರಚಿತವಾಗಿವೆ. ಜಡ, ದ್ರವ, ಅನಿಲ ಎಂಬ ಮೂರು ಬಗೆಯ ವಸ್ತುಪ್ರಪಂಚದ ಅಣುಗಳ ರಚನೆಯೂ ಭಿನ್ನ. ಉದಾಹರಣೆಗೆ ಅನಿಲವನ್ನು ತೆಗೆದುಕೊಂಡರೆ ಅದರ ಅಣುಗಳು ನಿರ್ದಿಷ್ತವಾಗಿರದೆ, ಎಲ್ಲಾ ಕದಿಕ್ಕುಗಳಲ್ಲಿಯೂ ಚಲಿಸುತ್ತಿರುತ್ತದೆ. ವಸ್ತುವಿನ ಅಣುವಿನ ಚಲನೆಗಳಿಂದಲೇ ವಸ್ತುವಿನ ರೂಪಾಂತರ ಪ್ರಕ್ರಿಯೆ ಜರುಗುತ್ತಿರುತ್ತದೆ. ಇದನ್ನು ನೀರು, ಗಾಳಿ ಎಂದೆಲ್ಲಾ ನೃತ್ಯದಲ್ಲಿ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ತೋರಿಸಬಹುದು.

ಮುಂದೆ ಅಣುವಿನ ರಚನೆ, ನ್ಯೂಕ್ಲಿಯಸ್ ನಲ್ಲಿ ಪ್ರೊಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳು ಸುತ್ತುವಂತಹುದು. ಉದಾಹರಣೆಗೆ : ಇಂಗಾಲಾಮ್ಲವನ್ನು ಪ್ರತಿನಿಧಿಸುವ ನರ್ತಕಿಯ ಜೊತೆಗೆ ಪಿ-೬, ಎನ್-೬ ಎಂಬ ಮತ್ತಿಬ್ಬರು ನರ್ತಕಿಯರು ಇದ್ದು; ಒಟ್ಟು ೬ ಎಲೆಕ್ಟ್ರಾನ್‌ಗಳು ಇವರನ್ನು ಸುತ್ತುವುದು. ಇದಕ್ಕೆ ಸಹಕಾರಿಯಾಗಿ ರೇಡಿಯಂ ಸ್ಟಿಕ್ಕರ್ಸ್‌ನ ಬಳಕೆ, ಆ ಸಮಯಕ್ಕೆ ಬೆಳಕನ್ನು ಆಫ್ ಮಾಡಿದಾಗ ಅಣುವಿನ ರಚನೆಯನ್ನು ಕಾಣಿಸುವುದು ಇತ್ಯಾದಿ ಅನುಕೂಲತೆಗಳಿದ್ದವು. ಹೀಗೆಯೇ ಎಲೆಮೆಂಟ್, ಕಾಂಪೋಂಡ್ ಮತ್ತು ಅದಕ್ಕೆ ಸಂಬಂಧಿಸಿದ ಉದಾಹರಣೆಗಳನ್ನು ನೃತ್ಯದಲ್ಲಿ ತರಲಾಯಿತು. ನಿಯಾನ್, ಆಗ್ರಾನ್, ಕ್ರಿಪ್ಟಾನ್, ಕ್ಸೆನಾನ್ ಮತ್ತು ರೇಡಾನ್ ಗಳಂತೆ ತಾವೂ ಕೂಡಾ ನಿರ್ದಿಷ್ಟತೆ ಪಡೆಯಬೇಕು ಎಂಬ ಉದ್ದೇಶದಿಂದ ಬಾಂಡಿಂಗ್‌ಗೆ ಒಳಪಡುತ್ತದೆ. ಉಳಿದ ಎಲ್ಲಾ ಎಲಿಮೆಂಟ್‌ಗಳು ಎಲೆಕ್ಟ್ರಾನ್‌ನ್ನು ಕೂಡುವುದರ ಅಥವಾ ಹಂಚಿಕೊಳ್ಳುವ ಮೂಲಕ ಅಯಾನ್‌ಗಳಾಗಿ, ಸಿಂಗಲ್-ಡಬ್ಬಲ್-ಟ್ರಿಪಲ್ ಕೋವಲಂಟ್ ಬಾಂಡ್‌ಗಳಾಗುತ್ತವೆ. ಇದನ್ನು ರಂಗ ಪರಿಕರ (ಪ್ರಾಪ್ಸ್)ದ ಸಹಾಯದಿಂದ ಪರಿಣಾಮಕಾರಿಯಾಗಿ ತರಲು ಸಾಧ್ಯವಾಯಿತು.

DSC_0296ಶಾಸ್ತ್ರೀಯನೃತ್ಯಕ್ರಮದಲ್ಲಿ ನವರಸಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ರಾಸಾಯನಿಕ ವಸ್ತುಗಳು ಈ ನವರಸಾಭಿವ್ಯಕ್ತಿಗೆ ಬಹಳ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎನ್ನುವುದು ನನ್ನ ಬಲವಾದ ಗ್ರಹಿಕೆ. ನಮ್ಮ ನಿತ್ಯದ ಬಳಕೆಯಲ್ಲಿರುವ ರಾಸಾಯನಿಕ ವಸ್ತುಗಳಾದ ಸೌಂದರ್ಯವರ್ಧಕಸಾಧನಗಳು, ನೈಲಾನ್-ರೇಯಾನ್ ನಂತಹ ಉಡುಪುಗಳು, ಹೂವುಗಳಲ್ಲಿರುವ ಸೌಗಂಧದಲ್ಲಿರುವ ರಾಸಾಯನಿಕ ಆರೋಮಾಗಳು, ಆಭರಣಗಳು ಶೃಂಗಾರರಸದ ಅಭಿವ್ಯಕ್ತಿಗೆ ಹೇಳಿ ಮಾಡಿಸಿಟ್ಟಂತಿವೆ. ರಸಾಯನಶಾಸ್ತ್ರದಲ್ಲಿರುವ ಕಿಂಗ್ ಆಫ್ ಕೆಮಿಕಲ್ಸ್–ಗಂಧಕಾಮ್ಲ ರಾಸಾಯನಿಕ ವಸ್ತುವಿನಲ್ಲಿರುವ ನೀರನ್ನು ಪೂರ್ಣವಾಗಿ ತೆಗೆದು ಹೊರಹಾಕುವಂತಿದ್ದು ಡೀ ಹೈಡ್ರೇಟಿಂಗ್ ಏಜೆಂಟ್ ಆಗಿ ಕೆಲಸ ಮಾಡುವುದರಿಂದ ವೀರರಸಕ್ಕೆ ಪೂರ್ಣ ಹೊಂದಾಣಿಕೆಯಾಗುತ್ತದೆ. ಎಂಡೋಸಲ್ಫಾನ್ ನ ವಿಷಗಾಳಿ, ಯಾವಾಗ ಬಾಂಬ್ ಬ್ಲಾಸ್ಟ್ ಆಗುತ್ತದೋ ಎಂಬಲ್ಲಿಗೆ ಭಯಾನಕರಸ; ರೌದ್ರ ರಸಕ್ಕೆ ಬಾಂಬ್ ಬ್ಲಾಸ್ಟ್; ಅದಾದ ಬಳಿಕದ ವೈಪರೀತ್ಯಪ್ರಿಣಾಮಕ್ಕೆ ಕರುಣರಸದ ಪೋಷಣೆ. ಹಾಸ್ಯಕ್ಕೆಂದೇ ಹುಟ್ಟಿರುವ ನಗೆಗಾಳಿ ನೈಟ್ರಸ್ ಆಕ್ಸೈಡ್, ಕೊಳೆತ ಮೊಟ್ಟೆ-ಮೀನು ವಾಸನೆಯ ನೆನಪು ಕೊಡುವ ಹೈಡ್ರೋಜನ್ ಸಲ್ಫೈಡ್ ಮತ್ತು ಅಮೈನ್‌ಗಳ ಭೀಭತ್ಸ ವಾತಾವರಣ, ಪ್ರಪ್ರಂಚದ ಯಾವುದೇ ವಸ್ತುವನ್ನೂ ತೆಗೆದುಕೊಂಡರೂ ಅದರೊಳಗೆ ಅಡಗಿರುವ ರಸಾಯನಶಾಸ್ತ್ರದ ಸಂಗತಿಗಳಿಂದ ಉಂಟಾಗುವ ಅದ್ಭುತ- ಉದಾಹರಣೆಗೆ ಬೆಣ್ಣೆಯಲ್ಲಿರುವ ಬಟೈರಿಕ್ ಆಸಿಡ್, ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್, ಕ್ರಿಮಿಕೀಟಗಳಲ್ಲಿರುವ ಫಾರ್ಮಿಕ್ ಆಸಿಡ್, ಪೆನ್-ಪಿನ್-ಪೆನ್ಸಿಲ್‌ನಿಂದ ಮೊದಲ್ಗೊಂಡು ಕಟ್ಟಡ, ಔಷಧಿಗಳಲ್ಲಿ ಕಂಡುಬರುವ ಕೆಮಿಸ್ಟ್ರಿಯ ಮಿಸ್ಟ್ರಿ-ಮಿರಾಕಲ್ ಕಾನ್ಸೆಪ್ಟ್; ರಾಸಾಯನಿಕ ವಸ್ತುಗಳ ಇತಿಮಿತಿಯ ಬಳಕೆಯಿಂದ ವಸುಂಧರೆಯನ್ನು ಕಾಪಾಡಬೇಕು ಎಂಬ ಅರಿವನ್ನು ಸೂಸುವಲ್ಲಿಗೆ ಗ್ರೀನ್ ಕೆಮಿಸ್ಟ್ರಿಯಿಂದ ಶಾಂತರಸ – ಹೀಗೆ ಆಶಯವನ್ನು ‘ರಸೋತ್ಕರ್ಷ’ದಲ್ಲಿ ತರಲಾಗಿತ್ತು.

ಇದರೊಂದಿಗೆ ಸೂಕ್ತವಾಗಿ ಹೊಂದುವ ಬೆಳಕು-ನೆರಳುಗಳ ಸಂಯೋಜನೆ, ಸರಳವಾದ ಉಡುಪು-ಆಭರಣ ಮತ್ತು ಕೇಶಾಲಂಕಾರ, ತಲೆಗೆ ರೇಡಿಯಂ ಸ್ಟಿಕ್ಕರ್ಸ್ ಬಳಕೆ, ರಂಗಪರಿಕರಗಳೊಂದಿಗೆ ಹಿನ್ನೆಲೆಯಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಪವರ್ ಪಾಯಿಂಟ್‌ಪ್ರೆಸೆಂಟೇಶನ್‌ಗಳನ್ನು ಹೊಂದಿಸಲಾಗಿತ್ತು. ಆಯಾಯ ಸನ್ನಿವೇಶಕ್ಕೆ ಮತು ರಾಸಾಯನಿಕಕ್ರಿಯೆಗಳಿಗೆ ಹೊಂದುವಂತೆ ಬಣ್ಣದ ಉಡುಪುಗಳ ಆಹಾರ್ಯ ಅಂದರೆ ಮೋಡಕ್ಕೆ ಬೂದು ಬಣ್ಣ, ನೀರಿಗೆ ತಿಳಿ ನೀಲಿ, ಇಂಗಾಲಾಮ್ಲಕ್ಕೆ ಕಪ್ಪು, ತಾಮ್ರಕ್ಕೆ ತಾಮ್ರ ಬಣ್ಣ, ಮೈಲುತುತ್ತಕ್ಕೆ ನೀಲಿ, ಅಮೋನಿಯಂ ಡೈಕ್ರೊಮೇಟ್‌ಗೆ ಕೇಸರಿ, ಬೆಂಕಿಗೆ ಕೆಂಪುಮಿಶ್ರಿತ ಕೇಸರಿ, ಗಂಧಕಕ್ಕೆ ಹಳದಿ…,ಹೀಗೆ ಬಣ್ಣಗಳನ್ನು ಪರಿಣಾಮಕ್ಕೊಪ್ಪುವಂತೆ ಬಳಸಿ, ಪೂರ್ಣ ಶಾಸ್ತ್ರೀಯವೆನ್ನದ ಆದರೆ ಸನ್ನಿವೇಶಕ್ಕೆ ಹೊಂದುವ ವೇಷಭೂಷಣಗಳ ಬಳಕೆ ಮಾಡಲಾಗಿತ್ತು. ಅಂತೆಯೇ ವೇಗವಾಗಿ ಉಡುಪುಗಳನ್ನು ಬದಲಾಯಿಸುವಂತೆ ರೂಪಿಸಲಾಗಿತ್ತು.DSC_0261

ಕಾರ್ಯಕ್ರಮಕ್ಕೆ ಆಗಮಿಸಿದ್ದ ನೃತ್ಯಶಿಕ್ಷಕರು ನೃತ್ಯದ ಮೂಲಕವೇ ವಸ್ತುವಿನ ಆಶಯ ಮನಮುಟ್ಟಿತೆಂದರೆ; ರಸಾಯನಶಾಸ್ತ್ರದ ಶಿಕ್ಷಕರು ವಿಶೇಷವಾದ ಯಾವೊಂದು ನೆರವು ಇಲ್ಲದೆ ಅರ್ಥವಾಯಿತೆಂದರು. ಇನ್ನೂ ಕೆಲವರು ಬಳಸಲಾಗಿದ್ದ ಪರಿಕರ, ಉಡುಪು ಮತ್ತು ಪಿಪಿಟಿಯಿಂದ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಾಯಿತೆಂದರು. ಈ ಪ್ರಯೋಗದ ಸಫಲತೆ ನನ್ನನ್ನು ಭವಿಷ್ಯದಲ್ಲಿ ಮತ್ತೊಂದಷ್ಟು ವಿಶೇಷ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿದ್ದು; ಹೈಯರ್ ಕೆಮಿಸ್ಟ್ರಿಯನ್ನು ಬಳಸಿ ನೃತ್ಯಪ್ರಯೋಗ ಮಾಡುವುದೂ ನನ್ನ ಕನಸುಗಳಲ್ಲೊಂದು.

( ಲೇಖಕರು ಹುಡುಪಿಯ ನೃತ್ಯಸಂಸ್ಥೆ ಹೆಜ್ಜೆ-ಗೆಜ್ಜೆಯ ನಿರ್ದೇಶಕಿ, ಭರತನಾಟ್ಯ ಗುರು, ವೃತ್ತಿಯಲ್ಲಿ ಶಿಕ್ಷಕಿ)

Leave a Reply

*

code