ಅಂಕಣಗಳು

Subscribe


 

ನೃತ್ಯ ರಂಗದ ರಾಣಿ : ರುಕ್ಮಿಣಿ… ಹೆಜ್ಜೆ : 20

Posted On: Monday, October 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

Rukmini devi arundale

ಬಾಲ್ಯದಿಂದಲೂ ರುಕ್ಮಿಣಿಗೆ ಪ್ರಾಣಿಗಳ ಮೆಲೆ ಅತೀವಪ್ರೀತಿ. ಅವರಿಗೆ ನೃತ್ಯದ ಮೇಲೆ ಎಷ್ಟು ಒಲವೋ ಅದೇ ಬಗೆಯಲ್ಲಿ ಜೀವಿಗಳ ಮೇಲೂ ಒಲವು, ಆಪ್ತತೆ. ಅದಕ್ಕೆ ತಕ್ಕಂತೆ ಅವರು ಶುದ್ಧಸಸ್ಯಾಹಾರಿ. ಪ್ರತಿಯೊಂದು ಜೀವಿಗಳಲ್ಲೂ ಭಗವಂತನಿರುತ್ತಾನೆ ಎಂಬುದನ್ನು ಅವರು ತಮ್ಮ ನಡೆನುಡಿಯ ಮೂಲಕ ಸಾಕ್ಷೀಕರಿಸಿದ್ದರು. ಅವರ ಅಕ್ಕ ಶಿವಕಾಮು ಕೂಡಾ ಪ್ರಾಣಿದಯೆಯುಳ್ಳವರು. ಬ್ರಾಹ್ಮಣರಾದ್ದರಿಂದ ಸಸ್ಯಾಹಾರದ ಬಗ್ಗೆ ಇದ್ದ ಬದುಕಿನ ಶೈಲಿ ಪ್ರಾಣಿಗಳ ಕುರಿತು ಮತ್ತಷ್ಟು ತುಡಿಯುವಂತೆ ಮಾಡಿತ್ತು. ಮಸಾಲೆ, ಖಾರದ ಆಹಾರವೆಂದರೆ ಅವರಿಗೆ ಅಚ್ಚುಮೆಚ್ಚು. ಆದರೂ ವಿದೇಶ ಪ್ರಯಾಣಗಳಲ್ಲೂ ತಮ್ಮ ವ್ರತ ಕೆಡಿಸಿಕೊಳ್ಳಲಿಲ್ಲ.. ಸಸ್ಯಾಹಾರವು ವ್ಯಕ್ತಿ ಧಾರ್ಮಿಕವಾಗಿ, ಆರೋಗ್ಯವಾಗಿ, ಆರ್ಥಿಕವಾಗಿರಲು ಸಹಕಾರಿಯಾಗಿದೆ. ದೇಹವು ಸಸ್ಯಾಹಾರಕ್ಕಷ್ಟೇ ಸೂಕ್ತ. ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ದೇಹವು ಸ್ಮಶಾನವಾಗುತ್ತದೆ  ಎನ್ನುವವರು ರುಕ್ಮಿಣೀ. ಇದರಿಂದಾಗಿ ಹಲವು ವಿದೇಶಿಯರು ಪ್ರಭಾವಿತಗೊಂಡು ಮಾಂಸಹಾರ ತ್ಯಜಿಸಿದರು. ಇಂತಹ ಚಳುವಳಿಯೇ ಜಾಗತಿಕವಾಗಿ ಮುಂದುವರಿದು ಅಂತರ್ರಾಷ್ಟೀಯ ಜಾಗೃತಿಯನ್ನು ಇಂದಿಗೆ ಹುಟ್ಟುಹಾಕಿದೆ.

ಹಿರಿಯ ವಿದ್ಯಾರ್ಥಿಯೊಬ್ಬರು ಹೀಗೆ ನೆನಪಿಸಿಕೊಳ್ಳುತ್ತಾರೆ. ಆಲದ ಮರದ ಕೆಳಗೆ ಪ್ರಾರ್ಥನೆ ಮಾಡುತ್ತಿದ್ದೆವು. ನಮ್ಮನ್ನೇ ಹಿಂಬಾಲಿಸುವ ಅಲ್ಲಿನ ಬೀದಿನಾಯಿಗಳನ್ನು ಅಟ್ಟುವ ಕೆಲಸ ನಮ್ಮದಾಗುತ್ತಿತ್ತು. ಅದನ್ನು ಗಮನಿಸಿದ ರುಕ್ಮಿಣಿ ಅತ್ತೈ ವಿದ್ಯಾರ್ಥಿಗಳನ್ನು ಪಕ್ಕಕ್ಕೆ ಕರೆದು ಹೇಳಿದ್ದರು- ಪ್ರಾಣಿಗಳು ಯಾವ ಬಗೆಯಲ್ಲೂ ತೊಂದರೆ ಮಾಡದಿರುವಾಗ ಯಾಕೀ ಮನೋಭಾವ? ಈಗಷ್ಟೇ ಜಗತ್ತಿನ, ಸಕಲ ಜೀವಿಗಳ ಒಳಿತಿಗೆ ಪ್ರಾರ್ಥನೆ ಮಾಡಿದಿರಿ. ಆ ಪ್ರಾರ್ಥನೆಯ ಪ್ರಭಾವ ಕೆಲವೇ ಕ್ಷಣಗಳೂ ಉಳಿಯಲಿಲ್ಲವೇ? ಅದೂ ಕೂಡಾ ಭಗವಂತನಿಂದ ಸೃಷ್ಟಿಸಲ್ಪಟ್ಟದ್ದು; ಅದಕ್ಕೂ ಬದುಕುವ ಹಕ್ಕಿದೆ. ಅದರ ಪಾಡಿಗೆ ಅದು ಬಂದು ಹೋಗುತ್ತದೆ.

ಒಮ್ಮೆ ಶಿಷ್ಯೆ ಶೋಭನಾಸ್ವಾಮಿ ರುಕ್ಮಿಣಿಗೆ ಕ್ರಿಸ್‌ಮಸ್ ಸಮಯದಲ್ಲಿ ಶುಭಾಷಯ ಕೋರಿದ್ದರಂತೆ. ಎಲ್ಲಾ ಮತಧರ್ಮಗಳನ್ನು ಸಮಾನವಾಗಿ ಗೌರವಿಸುತಿದ್ದ ರುಕ್ಮಿಣಿ ಪ್ರತಿಯಾಗಿ ಶುಭಾಷಯ ಕೋರಿ ತಕ್ಷಣವೇ ವಿಷಾದ, ನೋವಿನಿಂದ ನುಡಿದರಂತೆ. ಕ್ರಿಸ್ಮಸ್‌ನ್ನು ಆಚರಿಸಲು ಎಷ್ಟು ಬೇಜಾರಾಗುತ್ತಿದೆ ಎಂದರೆ ಇದೇ ದಿನ ರಾತ್ರಿ ವಿದೇಶಗಳಲ್ಲಿ ನೂರಾರು ಜನ ಅವರ ಊಟದ ಟೇಬಲ್ ಮೇಲೆ ಮಾಂಸವನ್ನಿಟ್ಟು ಕ್ರಿಸ್ಮಸ್ ಆಚರಿಸುತ್ತಿರುತ್ತಾರೆ  .

೧೯೫೨ರಲ್ಲಿ ರಾಜ್ಯಸಭಾ ಸದಸ್ಯೆಯಾದಾಗ ೧೮೯೦ರಲ್ಲಿದ್ದ ಪ್ರಾಣಿಹಿಂಸಾಪ್ರತಿರೋಧದ ಶಾಸನವನ್ನು ಮರುಜಾರಿ ಮಾಡಬೇಕೆಂದು ಕೋರಿ ಒತ್ತಾಯಿಸಿ ತಾವೇ ಒಂದು ಮಸೂದೆಯನ್ನು ಮಂಡಿಸಿದರು. ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ನೇತೃತ್ವದ ರಾಜ್ಯಸಭೆಯಲ್ಲಿ ಅದು ಪ್ರಸ್ತಾಪ ಆದಾಗ ರುಕ್ಮಿಣಿದೇವಿಯನ್ನು ಶ್ಲಾಘಿಸಿ ಇಂತಹ ಕ್ರಮವನ್ನು ಸರ್ಕಾರ ತರುವುದು ನಿಜಕ್ಕೂ ಸಂತಸದ, ಹೆಮ್ಮೆಯ ವಿಷಯವೆಂದು ನೆಹರೂ ಹೇಳಿದ್ದರಂತೆ. ಅದಕ್ಕೆ ಸ್ಪಂದಿಸಿದ ರುಕ್ಮಿಣೀದೇವಿ ಹೀಗೆ ಹೇಳಿದ್ದರಂತೆ ; ಪ್ರಾಣಿಗಳನ್ನು ಹೀನವಾಗಿ ಕಾಣುವುದು ಮಾನವೀಯತೆಯ ವಿರುದ್ಧ ವರ್ತನೆ. ನಾಗರೀಕತೆಯ ಬೆಳವಣಿಗೆಯ ಪರೀಕ್ಷೆ ಎಂದರೆ ಭಾವನೆಗಳ ಬೆಳವಣಿಗೆ ಮತ್ತು ಪ್ರೇಮಮಯೀ ನಡವಳಿಕೆ. ಅದಾದ ಕೆಲವು ಸಮಯದ ನಂತರ ಸರ್ಕಾರ ಈ ಕುರಿತಂತೆ ಶಾಸನವನ್ನು ರೂಪಿಸಿತ್ತು.

ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಮನರಂಜನೆಯ ಉದ್ದೇಶದಿಂದ ಬಳಸುವುದರ ಬಗ್ಗೆ ರುಕ್ಮಿಣೀಗೆ ವಿರೋಧವಿತ್ತು. ಜೊತೆಗೆ ಧರ್ಮದ ಹೆಸರಿನಲ್ಲಿ ಪ್ರಾಣಿಬಲಿಯ ಕುರಿತೂ ಅವರು ಕಿಡಿಕಿಡಿಯಾಗಿದ್ದರು. ಅವರ ಕ್ರಾಂತಿಕಾರಿ ಮುನ್ನಡೆ ಇಂದಿಗೆ ಎಷ್ಟೋ ಪ್ರಾಣಿದಾಯಾಪರರಿಗೆ ಆದರ್ಶವಾಗಿದೆ. ಅದರಲ್ಲೂ ೧೯೬೦ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಾಣಿ ಕ್ಷೇಮಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ; ಪ್ರದರ್ಶನ, ಮನರಂಜನೆ ಮತ್ತು ಸಂಶೋಧನೆಯ ಹೆಸರಿನಲ್ಲಿ ಪ್ರಾಣಿಗಳ ಬಳಕೆಯ ವಿರುದ್ಧ ಶಿಸ್ತನ್ನು ರೂಪಿಸಲಾಯಿತು. ಇಂದಿಗೆ ಭಾರತದಲ್ಲಿ ಮಾತ್ರ ಇಂತಹ ಒಂದು ಪ್ರಾಧಿಕಾರ ಇರುವುದು ಎನ್ನಲು ಹೆಮ್ಮೆಯಾಗುತ್ತದೆ. ಈ ಪ್ರಾಧಿಕಾರವು ಶಿಫಾರಸ್ಸು ಮಾಡುವ ವಿಷಯಗಳ ಔಚಿತ್ಯ ಗಮನಿಸಿ ಸಮಿತಿಯನ್ನು ರಚನೆ ಮಾಡಲಾಗುತ್ತಿತ್ತು. ಶಾಸನಕ್ಕೆ ತಕ್ಕಂತೆ ಪ್ರಾಣಿಗಳನ್ನು ನಡೆಸಿಕೊಳ್ಳಲಾಗುತ್ತಿದೆಯೇ ಇಲ್ಲವೇ ಎಂಬುದು ತಿಳಿಯುವುದು ಇದರ ಕರ್ತವ್ಯ. ಇದರ ಶಿಫಾರಸ್ಸಿನ ಮೇರೆಗೆ ಮೊದಲ ಸಮಿತಿ ೧೯೬೪ರಲ್ಲಿ purpose of control and supervision of experiments on animals ಎಂಬ ಉದ್ದೇಶದಡಿಯಲ್ಲಿ ರೂಪ ತಾಳಿತು. ಅದು ಕೊಟ್ಟanimal experimentation  ವರದಿ ಪ್ರಾಣಿಗಳನ್ನು ಹೇಗೆಲ್ಲಾ ಹಿಂಸಿಸುತ್ತಾರೆ ಎಂಬುದು ಸವಿವರವಾಗಿ ವಿವರಿಸಿತ್ತು.

ಮಾತು ಬಾರದ ಪ್ರಾಣಿಗಳಿಗೆ ರುಕ್ಮಿಣಿ ಮಾತಾಗಿದ್ದರು. ಜನರಿಗೆ ಔಷಧಾಲಯಗಳಲ್ಲಿ ಆಗುವ ಪ್ರಾಣಿಹಿಂಸೆ ಮತ್ತು ಔಷಧಗಳಲ್ಲಿ ಪ್ರಾಣಿಗಳ ಬಳಕೆ ಬಗ್ಗೆ ತಿಳಿದರೆ ಖಂಡಿತಾ ಅಂತಹ ಔಷಧಗಳನ್ನು ತೆಗೆದುಕೊಳ್ಳಲು ಮನಸ್ಸು ಬರಲಿಕ್ಕಿಲ್ಲ. ಈ ಕ್ರೂರತೆ ಸರಿಯಾಗಿ ಜನರಿಗೆ ಗೊತ್ತಾಗಬೇಕು. ಜೀವಂತವಾಗಿದ್ದಾಗಲೇ ಪ್ರಾಣಿಗಳನ್ನು ನಾನಾ ಬಗೆಯಾಗಿ ವಿಧವಿಧವಾಗಿ ಕತ್ತರಿಸಿ ಹಿಂಸೆ ಮಾಡುವುದು ಹಲವು ಕಡೆ ನಡೆಯುತ್ತಿದೆ. ಇದಕ್ಕೆಂದೇ ಭಾರತದಿಂದ ಪ್ರಾಣಿಗಳ ರಫ್ತು ಕೂಡಾ ಅಗುತ್ತಿದೆ. ಇವೆಲ್ಲವನ್ನೂ ಭಾರತ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದಿದ್ದರು ರುಕ್ಮಿಣಿ.

೧೯೬೪ರಲ್ಲಿ ಬ್ಲೂಕ್ರಾಸ್ ಇಂಡಿಯಾವು ಬೀದಿನಾಯಿಗಳ ಸಂಖ್ಯೆ ಕಡಿಮೆ ಮಾಡುವ ದೃಷ್ಟಿಯಿಂದ ನಾಯಿಗಳನ್ನು ಹಿಡಿದು ಕೊಲ್ಲುವುದಕ್ಕಿಂತಲೂ ಅವುಗಳನ್ನು ಬಂಧಿಸಿ ಚುಚ್ಚುಮದ್ದು ನೀಡಿ ಬಿಡುವುದೇ ಒಳ್ಳೆಯದು ಎಂದು ಹೋರಾಟಕ್ಕಿಳಿದಾಗ ಅದಕ್ಕೆ ಸಹಕಾರ ಕೊಟ್ಟವರು ರುಕ್ಮಿಣಿ ಒಬ್ಬರೇ ! ಈ ಕುರಿತಂತೆ ಮುಂಬೈ ಮುನಿಸಿಪಲ್ ಕಾರ್ಪೋರೇಷನ್‌ಗೆ ತಾಕೀತು ಕೂಡಾ ಮಾಡಿದ್ದರು. ಆದರೆ ಇದನ್ನು ಕಾರ್ಪೋರೇಷನ್ ಪರಿಗಣಿಸಲಿಲ್ಲ. ಸುಮಾರು ೨೫ ವರ್ಷಗಳ ನಂತರ ವಿಶ್ವ ಆರೋಗ್ಯ ಸಂಸ್ಥೆಯು ಬೀದಿನಾಯಿಗಳ ಸಂಖ್ಯೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಜನನನಿಯಂತ್ರಣ ಮತ್ತು ರೋಗನಿಯಂತ್ರಣಕ್ಕೆ ಚುಚ್ಚುಮದ್ದು ಹಾಕುವ ನಿಯಮಾವಳಿ ಸಿದ್ಧಪಡಿಸಿತು. ರುಕ್ಮಿಣೀ ಅವರ ದೂರದರ್ಶಿತ್ವಕ್ಕೆ ಇದು ಉತ್ತಮ ಉದಾಹರಣೆ.

೧೯೭೧ರಲ್ಲಿ ನಡೆದ ರಾಷ್ಟ್ರಮಟ್ಟದ ಪ್ರಾಣಿ ಕ್ಷೇಮಾಭುಧ್ಯಯದ ಪ್ರಥಮ ಸಮ್ಮೇಳನದಲ್ಲಿ ರುಕ್ಮಿಣಿ ಮಾತನಾಡುತ್ತಾ ನಾನು ನಿವೃತ್ತಿ ಜೀವನ ನಡೆಸುವಾಗಲೂ ಪ್ರಾಣಿಗಳ ಹಿತರಕ್ಷಣೆಗಾಗಿ ದುಡಿಯುವುದನ್ನು ನಿಲ್ಲಿಸಲಾರೆ. ನನ್ನ ದೇಹದಲ್ಲಿ ಅತ್ಯಲ್ಪ ಶಕ್ತಿಯಷ್ಟೇ ಉಳಿದರೂ ರಸ್ತೆಯಲ್ಲಿ ಹೋಗುವಾಗ ಪ್ರಾಣಿಯೊಂದು ಕಷ್ಟದಲ್ಲಿರುವುದನ್ನು ಕಂಡರೆ ಖಂಡಿತಾ ಸುಮ್ಮನೆ ಹೋಗಲಿಕ್ಕಾಗದು.  ಎಂದಿದ್ದರು. ಫೆಬ್ರವರಿ ೨, ೧೯೮೬ರಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ತಮ್ಮ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾಗಲೂ ಲಯನ್ಸ್ ಆಯೋಜಿಸಿದ್ದ ಅಂತಾರಾಷ್ಟ್ರಿಯ ಪ್ರಾಣಿದಯಾ ವಿಚಾರಸಂಕಿರಣದ ಸಂಬಂಧ ಲಯನ್ಸ್ ಜಿಲ್ಲಾ ನಿರ್ದೇಶಕರಿಗೆ ಬರೆಯಬೇಕಿದ್ದ ಪತ್ರದ ಬಗ್ಗೆ ಆಗಾಗ್ಗೆ ಕಾಳಜಿಯಿಂದ ವಿಚಾರಿಸುತ್ತಿದ್ದರಂತೆ; ಜೊತೆಗೆ ತಾವೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ರುಕ್ಮಿಣಿ ಹೆಸರು, ಹಣ, ಕೀರ್ತಿ, ಅಧಿಕಾರಕ್ಕೆ ಬಯಸಿದವರಲ್ಲ. ಪರಿಧಿಗಳನ್ನು ಮೀರಿ ಬೆಳೆದವರು. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ದೇಶದ ಸಾಂಸ್ಕೃತಿಕ ರಾಯಭಾರಿಯಾದ ನಂತರ ರುಕ್ಮಿಣಿ ನೃತ್ಯಕಾರ್ಯಕ್ರಮ ನೀಡುವುದನ್ನು ನಿಲ್ಲಿಸಿದ್ದರು. ಏಪ್ರಿಲ್ ೧೯೫೨ರಲ್ಲಿ ರಾಜ್ಯಸಭಾದ ಸದಸ್ಯೆಯಾಗಿ, ಮತ್ತೊಮ್ಮೆ ೧೯೫೬ರಲ್ಲೂ ಮರು ನಾಮಕರಣಗೊಂಡರು. ಅವರ ಪ್ರಕಾರ ಉಪನಿಷತ್ತು ಹೇಳುವಂತೆ ತ್ಯಾಗದಿಂದಷ್ಟೇ ವ್ಯಕ್ತಿ ಅಮರನಾಗುತ್ತಾನೆ. ಹಣ, ಅಧಿಕಾರದಿಂದಲ್ಲ. ಅಂಥವರನ್ನು ದೇಶದ ಅತ್ಯುನ್ನತ ಹುದ್ದೆ- ರಾಷ್ಟ್ರಪತಿ ಹುದ್ದೆ ಹುಡುಕಿಕೊಂಡು ಬಂದಿತ್ತು! ಸಾಮಾನ್ಯರಾಗಿದ್ದರೆ ಯಾರು ತಾನೇ ತಿರಸ್ಕರಿಸಿಯಾರು? ಆದರೆ ರುಕ್ಮಿಣಿ ಮನಸ್ಸು ಮಾಡಿರಲಿಲ್ಲ!!

    

(ಸಶೇಷ)

Leave a Reply

*

code