ಅಂಕಣಗಳು

Subscribe


 

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ – ಹೆಜ್ಜೆ : 16

Posted On: Monday, August 15th, 2011
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್


೧೭೧೮ರಲ್ಲಿ ತಿರುನಲ್ವೇಲಿಯ ಕುಟ್ರಾಲಂ ಗ್ರಾಮದ ತಿರಿಕ್ಕುಡ ರಾಸಪ್ಪ ಕವಿರಾಯರ್ ತಿರುಕೂಡನಾಥ ದೇವರ ಬಗ್ಗೆ ಬರೆದ ದೇವದಾಸಿಯರಷ್ಟೇ ಮಾಡುತ್ತಿದ್ದ ಏಕವ್ಯಕ್ತಿ ಅಭಿನಯದ ಕುಟ್ರಾಲ ಕೊರವಂಜಿಗೆ ಹೊಸ ಸ್ಪರ್ಶವನ್ನಿತ್ತದ್ದು ಅವರು ತೋರಿದ ಕೈಮರ. ತಮಿಳ್ನಾಡಿನ ೧೮ನೇ ಶತಮಾನದ ಸಂಗೀತ ಪದ್ಧತಿ ಇದಾಗಿದ್ದರೂ ಮೊದಲೆಲ್ಲಾ ಕುಟ್ರಾಲಂನ ದೇವಸ್ಥಾನಗಳಲ್ಲಿ, ಬೃಹದೀಶ್ವರ ದೇವಾಲಯದ ನವರಾತ್ರಿ ಉತ್ಸವದಲ್ಲಿ ಕೊರವಂಜಿಯನ್ನು ಪ್ರದರ್ಶಿಸಲಾಗುತ್ತಿದ್ದರೂ, ದೇವದಾಸಿ ಕಾಯ್ದೆ ಬಂದ ನಂತರ ಕುಂಠಿತವಾಯಿತು. ಪುನಃ ಕೊರವಂಜಿಯನ್ನು ಪುರುಜ್ಜೀವನಗೊಳಿಸಿದ್ದು ರುಕ್ಮಿಣೀ ೧೯೪೪ರಲ್ಲಿ. ಕೊರವಂಜಿಯನ್ನು ಅಷ್ಟಾಗಿ ಯಾರು ಗಮನಿಸದಿದ್ದ ಕಾಲಕ್ಕೆ ; ಗೌರವದಿಂದ ನೋಡುವಂತೆ ಮಾಡಿ, ಶಾಲಾ ಕಾಲೇಜುಗಳಲ್ಲಿ ಪಠ್ಯವೆಂಬಂತೆ ತಂದವರು ರುಕ್ಮಿಣೀ ಎನ್ನುತ್ತಾರೆ ವಿದ್ವಾಂಸ ಪೀಟರ್ಸನ್.

ಕೊರವಂಜಿಯು ೩೦೦ ವರ್ಷಕ್ಕಿಂತಲೂ ಹಳೆಯ ಪ್ರದರ್ಶಕ ಕಲೆ. ಭಾಗವತ ಮೇಳದಂತೆಯೇ ಉಪರೂಪಕದ ಪರಂಪರೆಯವನ್ನು ಮುಂದುವರೆಸಿಕೊಂಡು ಬಂದ ಚಿತ್ರಕಾವ್ಯದ ಸೊಬಗು. ವಿಪ್ರಲಬ್ಧ ಶೃಂಗಾರದ ಎಳೆ. ಗೀತಗೋವಿಂದದ ಪ್ರಭಾವ ಇದರಲ್ಲಿ ಕಂಡುಬರುತ್ತದೆ. ಕಟ್ಟೈಕಾರನ್ ಎಂಬ ಕಥನನಿರೂಪಣೆ ಮಾಡುವ ಪುರುಷನನ್ನು ಹೊರತುಪಡಿಸಿದರೆ ಸ್ತ್ರೀಯರಿಂದಷ್ಟೇ ಪ್ರದರ್ಶಿಸಲ್ಪಡುವ ರೂಪಕ. ದೇವಸ್ಥಾನಗಳಲ್ಲಿ ಹೆಚ್ಚು ಪ್ರದರ್ಶನಸಲ್ಪಡುತ್ತಿದ್ದ, ಮರಾಠರು, ನಾಯಕರು, ಚೋಳರ ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಕಲೆಯಿದು. ಅದರಲ್ಲೂ ಮರಾಠಾ ದೊರೆ ಶಹಜಿಯ ಕಾಲದಲ್ಲಿ ತ್ಯಾಗೇಶರ್ ಕೊರವಂಜಿಯು ತಿರುವಾರೂರು ದೇವಸ್ಥಾನಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಅದರಲ್ಲೂ ತುಳಜಾಜಿ ಮತ್ತು ಎರಡನೇ ಸರ್ಪೋಜಿಯ ಕಾಲದಲ್ಲಿ ಕೊರವಂಜಿಯ ಬೆಳವಣಿಗೆಯಾಯಿತು. ದಿದ್ದಿತ್ತೈ ಅಡವು ಜಾರಿಗೆ ಬಂದದ್ದು ಈ ಕಾಲದಲ್ಲೆ. ಇದನ್ನು ಕೊರವಂಜಿ ನೃತ್ಯಗಳಲ್ಲಿ, ಬ್ರಹ್ಮೋತ್ಸವದಂಥಹ ಉತ್ಸವಗಳಲ್ಲಿ ಬಳಸುತ್ತಿದ್ದರು.

ತಮಿಳಿನಲ್ಲಿ ಕುರವ ಎಂದರೆ ಬುಡಕಟ್ಟು ಜನಾಂಗ. ವಂಜಿ ಎಂದರೆ ಭವಿಷ್ಯ ನುಡಿಯುವ ಬೆಟ್ಟ ಪ್ರದೇಶದ ಸ್ತ್ರೀ. ರೂಪಕವು ಸಾಹಿತ್ಯ, ಸಂಗೀತ, ನಾಟಕವನ್ನು ಅಳವಡಿಸಿದುದ್ದಾಗಿದ್ದು; ಕುರತ್ತಿ ಎಂಬ ಸ್ತ್ರೀಯಿಂದ ಕುರತ್ತಿಪಟ್ಟು ಎಂಬ ಭವಿಷ್ಯ ಹೇಳುವ ಹಾಡು ಹೊಸೆಯಲಾಗುತ್ತದೆ. ಕಟ್ಟೈಕ್ಕಾರನ್ ಎಂಬ ಸೂತ್ರಧಾರ ಬಂದು ನಾಟಕದ ಉದ್ದೇಶ ಮತ್ತು ಕಥೆ ವಿವರಿಸುವನು. ಅವನು ವಿನಾಯಕನ ವೇಷದಲ್ಲಿ ಬರುವ ಸಂಪ್ರದಾಯವೂ ಇದೆ. ಸಿಂಗನ್ ಮತ್ತು ಸಿಂಗಿ ಎಂಬ ಈರ್ವರ ಮಾತುಗಳು ಸಂಗೀತಮಯವಾಗಿ ಕೂಡಿದ್ದು ಮಧುರ ಭಕ್ತಿ ಉಳ್ಳದ್ದು. ನಾಟಕೀಯವೆನಿಸುವ ಜತಿ ನಿರೂಪಣೆ, ನೃತ್ಯನಾಟಕ-ರಕ್ತಿ ರಾಗಗಳ ಬಳಕೆ ಸೂಕ್ತ. ಪಾತ್ರಪ್ರವೇಶ ಧರು, ಸಂವಾದ ಧರುಗಳ, ಸಾವೇರಿ ರಾಗದ ಉಪಯೋಗ, ಆದಿ, ಮಿಶ್ರ ಛಾಪು, ತಿಶ್ರ ಏಕ ತಾಳ, ವಿಳಂಬ, ಮಧ್ಯ ಕಾಲ ಇದರ ಚಹರೆಗಳು. ಉತ್ತಮ, ಮುಗ್ಧಾ ನಾಯಿಕೆಯ ಸಂಚಾರಿ ಅಭಿನಯ. ನಾಯಿಕೆ ದೇವರ ಮೆರವಣಿಗೆಯಲ್ಲಿ ದೇವರನ್ನು ನೋಡಿ ಪ್ರೇಮಿಸಿ ವಿರಹದಲ್ಲಿರುವಾಗ ಸಖಿಯರು ಆಕೆಯನ್ನು ಸಂತೋಷವಾಗಿರಿಸಲು ಪ್ರಯತ್ನಿಸುವುದು; ಕುರತಿಯನ್ನು ಕರೆದುಕೊಂಡು ಬಂದು ಕೈ ನೋಡಿ ಭವಿಷ್ಯ ಹೇಳಿಸಿ ನಾಯಿಕೆಯನು ತೃಪ್ತಿಪಡಿಸುವುದು ಇದರ ವಸ್ತು. ಕೆಲವು ಕೊರವಂಜಿಗಳಲ್ಲಿ ಸಿಂಗ ಮತ್ತು ಸಿಂಗಿ ಬೇಟೆಗೆ ಹೋಗುವ, ಅಲ್ಲಿ ಅವರಿಬ್ಬರ ವಿರಸ-ಪ್ರಣಯಗಳ ನಿರೂಪಣೆಯೂ ಇದೆ.

ತಮಿಳು ಸಾಹಿತ್ಯದ ಪ್ರಮುಖ ಅಂಗಗಳಲ್ಲಿ ಒಂದಾದ ಉಳ ಮತ್ತು ಕುರಂ ಎಂಬ ಪ್ರಬೇಧಗಳ ಪ್ರಭಾವ ಇದರಲ್ಲಿ ಸಾಕಷ್ಟಿದೆ. ದರುಪದಿ ಕುರಂ, ಮೀನಾಕ್ಷಿಯಮ್ಮೈ ಕುರಂ, ಭವಾನಿ ಕುರಂಗಳು ಕೊರವಂಜಿಯ ಜನಕರು. ಅದರೊದಿಗೆ ಕುಲಾವನಾಟಕಂ ಎಂಬ ಮತ್ತೊಂದು ಪ್ರಬಂಧವು ಕೊರವಂಜಿಯ ರೂಪಿಗೆ ಕಾರಣ. ಹಾಗಾಗಿ ಕೊರವಂಜಿಯನ್ನು ಪ್ರಬಂಧಗಳ ಸಾಲಿಗೆ ಸೇರಿಸಲಾಗಿದೆ. ಕನ್ನಡ, ತೆಲುಗು, ಮರಾಠಿ, ಮಲಯಾಳ, ಗುಜರಾತಿ ಮುಂತಾದ ಭಾಷೆಗಳನ್ನೂ ಒಳಗೊಂಡಂತೆ ೬೦ಕ್ಕಿಂತಲೂ ಹೆಚ್ಚಿನ ಕೊರವಂಜಿಗಳಿವೆ. ಬಹುಪಾಲು ಶೈವಾನುಯಾಯಿ ವಸ್ತುಗಳಿರುವ ಕೊರವಂಜಿಯ ಪೈಕಿ ತ್ಯಾಗೇಶರ್ ಕೊರವಂಜಿಯು ಮುತ್ತು ಕವಿರಾಯರ್ ಎಂಬ ಶಹಜಿ ಆಸ್ಥಾನದ ಕವಿ ಬರೆದಿರುವ ಊಹೆ. ೧೮೪೦ರಲ್ಲಿ ಕವಿ ಕುಂಜರ ಭಾರತಿ ಬರೆದ ಅಳಗರ್ ಕೊರವಂಜಿ ಮಾತ್ರ ವೈಷ್ಣವ ಸಂಪರದಾಯದ್ದು. ಸುಂದರ ರಾಜ ಪೆರುಮಾಳ್ ಎಂಬ ದೇವರು ಮಧುರೈ ಅಳಗರ್ ದೇವಸ್ಥಾನದಲ್ಲಿ ಮೆರವಣಿಗೆಯಲ್ಲಿ ಬಂದಾಗ ಮೋಹನವಳ್ಳಿಯೆಂಬ ನಾಯಿಕೆಯು ದೇವರನ್ನು ನೋಡಿ ಪ್ರೇಮಪಾಶಕ್ಕೆ ಸಿಲುಕುವುದು ಇದರ ಕಥಾವಸ್ತು.

ಪಾಪನಾಶಂ ಮೊದಲಿಯಾರ್‌ರಿಂದ ಕುಂಭಕೋಣದ ಶಿವನ ಬಗ್ಗೆ ರಚಿಸಲ್ಪಟ್ಟ ಕುಂಭೇಶ್ವರ ಕೊರವಂಜಿಯನ್ನು ಸೂಲಮಂಗಲಂ ದೇವಸ್ಥಾನದಲ್ಲಿ ೧೮೩೫-೧೮೭೫ರವರೆಗೆ ನರ್ತಿಸಲಾಗುತ್ತಿತ್ತು. ವಸಂತೋತ್ಸವದ ನಾಲ್ಕನೇ ದಿನ ಭಾಗವತ ಮೇಳಗಳೊಂದಿಗೆ ದೇವದಾಸಿಯರು ಈ ಕೊರವಂಜಿಯನ್ನು ನರ್ತಿಸುತ್ತಿದ್ದರು. ತಿರುಚೆಂದೂರ್ ದೇವಾಲಯದ ದೇವರ ಮೇಲಿರುವ ರಚನೆ ಸೆಂದಿಲ್ ಕೊರವಂಜಿ. ಇಲ್ಲಿನ ನಾಯಿಕೆ ಮದನಮೋಹಿನಿ ಷಣ್ಮುಖನ ಕುರಿತು ಮೋಹಿತಳಾಗುತ್ತಾಳೆ. ೧೮೮೦ರಲ್ಲಿ ನವಳಾರ್‌ರಿಂದ ರಚಿಸಲ್ಪಟ್ಟ ಕಣ್ಣಪ್ಪರ್ ಕೊರವಂಜಿ ಕಥಾಕಾಲಕ್ಷೇಪದ ಸಂಕೀರ್ತನೆ ಮಾದರಿಯಲ್ಲಿದ್ದು ಕನ್ನಡ ಸಾಹಿತ್ಯವು ಹೇಳುವ ಬೇಡರ ಕಣ್ಣಪ್ಪನ ಕಥೆಯ ಧಾಟಿಯಲ್ಲಿದೆ. ಕೊರವಂಜಿಯ ಚೌಕಟ್ಟಿನಿಂದ ಹೊರಗಿನ ವಸ್ತುವಾದ ಇದರಲ್ಲಿ ನಾಯಿಕೆಯಿಲ್ಲ. ಶೃಂಗಾರಕ್ಕಿಂತ ಭಕ್ತಿಯ ಬಳಕೆ ಹೆಚ್ಚಿದ್ದು ; ಕಣ್ಣಪ್ಪನೇ ನಾಯಕನಾಗಿ ಅಭಿನಯಿಸುತ್ತಾನೆ. ಶಾಸ್ತ್ರೀಯ ಮತ್ತು ಜಾನಪದ ತಮಿಳಿನ ಬಳಕೆ ಇಲ್ಲಿ ಹೆಚ್ಚಿದೆ.

ಕಣ್ಣಪ್ಪರ್ ಕೊರವಂಜಿ

ಕೆಲವೊಂದು ಕೊರವಂಜಿಗಳು ಜಮೀನ್ದಾರರ ಮೇಲೆ, ರಾಜರ ಮೇಲೆ ರಚಿತವಾಗಿದ್ದು ಅವುಗಳ ಪೈಕಿ ವಿರಳಿಮಲೈ ಕೊರವಂಜಿಯೂ ಒಂದು. ಇದು ಶರಭೇಂದ್ರ ಭೂಪಾಲ ಸರ್ಫೋಜಿಯ ಕುರಿತಾದದ್ದು. ಕೊಟ್ಟಯ್ಯೂರ್ ದೇಸಿಕರ್ ಬರೆದ ಈ ಕೊರವಂಜಿಯಲ್ಲಿ ಸಂಸ್ಕೃತ ಪದಗಳ ಬಳಕೆ ಹೆಚ್ಚು. ಇದನ್ನು ಪೊನ್ನಯ್ಯ ಪಿಳ್ಳೈ ನೃತ್ಯ ಸಂಯೋಜನೆ ಮಾಡಿದ್ದರಂತೆ. ಇಂದಿಗೂ ಬೃಹದೇಶ್ವರ ದೇವಸ್ಥಾನದ ಬ್ರಹ್ಮೋತ್ಸವದಲ್ಲಿ ಇದನ್ನು ನರ್ತಿಸುವ ಪರಿಪಾಠವಿದ್ದು ; ತಂಜಾವೂರಿನ ಆಸ್ತಿಯೆಂಬಂತೆ ಈ ಕೊರವಂಜಿಯನ್ನು ಪರಿಗಣಿಸುತ್ತಾರೆ. ಒಂದು ಕಾಲಕ್ಕೆ ದೇವಸ್ಥಾನದ ಹೊರತಾಗಿ ಹೊರಗೆಲ್ಲೂ ಅದನ್ನು ನರ್ತಿಸುವ ಹಾಗಿರಲಿಲ್ಲ. ಈ ಕಟ್ಟಾ ಸಂಪ್ರದಾಯ ೧೯೫೦ರ ವರೆಗೂ ಚಾಲ್ತಿಯಲ್ಲಿತ್ತು. ಆದರೆ ಆರ್.ಕೆ. ಷಣ್ಮುಗಂ ಚೆಟ್ಟಿ ಈ ಪರಂಪರೆಗೆ ನಾಂದಿ ಹಾಡಿದ ನಂತರ ಬಾಲಸರಸ್ವತಿ, ಮೃಣಾಲಿನಿ ಸಾರಾಭಾಯ್ ನರ್ತಿಸಿದ್ದಾರೆ. ಕರ್ನಾಟಕದಲ್ಲಿ ಕೊರವಂಜಿ ಪರಂಪರೆಯ ಶ್ರೀಮಂತಿಕೆಯಿದ್ದರೂ ; ತಮಿಳಿನಷ್ಟು ಪ್ರಸಿದ್ಧಿ ಪಡೆದಿಲ್ಲ ಎನ್ನುವುದು ದುರಂತವೇ ಸರಿ. ಪ್ರಚಲಿತ ಬಹಳಷ್ಟು ಕನ್ನಡ ಕೊರವಂಜಿಗಳು ತಮಿಳಿನ ಅನುವಾದವೇ ಆಗಿರುವುದು ಮತ್ತೊಂದು ವಿಪರ್ಯಾಸ.

ದಂಡಾಯುಧ ಪಾಣಿ ಪಿಳ್ಳೈ ಚಿತ್ರಾಂಬಲ ಕೊರವಂಜಿ ಬರೆದಿದ್ದು ; ಇಂದಿಗೂ ಅವರ ಶಿಷ್ಯರು ನರ್ತಿಸುವುದನ್ನು ರೂಢಿಸಿಕೊಂಡಿದ್ದಾರೆ. ಕೃಷ್ಣಮರಿ ಕೊರವಂಜಿ ೧೯೭೧ರಲ್ಲಿ ರುಕ್ಮಿಣೀ ಸಂಯೋಜಿಸಿದರು. ನಂತರ ವೈಜಯಂತಿಮಾಲ, ಪದ್ಮಾ ಸುಬ್ರಹಮಣ್ಯಂ, ಮುಂತಾದವರು ಕೊರವಂಜಿ ಸಂಯೋಜನೆ ಮಾಡಿದ್ದಾರೆ. ವೈಜಯಂತಿ ಮಾಲಾ ಅಳಗರ್ ಕೊರವಂಜಿಯನ್ನು ಸಂಯೋಜಿಸಿದರೆ, ಪದ್ಮಾ ಸುಬ್ರಹ್ಮಣ್ಯಂ ವಿರಳಿಮಲೈ ಕೊರವಂಜಿಯನ್ನು ವಿನ್ಯಾಸ ಮಾಡಿದವರು. ೧೯೭೭ ರಲ್ಲಿ ಗುಜರಾತಿ ಭಾಷೆಯಲ್ಲಿ ಸೌರಾಷ್ಟ್ರದ ಸೋಮನಾಥನ ಕುರಿತಾಗಿಯೂ ಚಂದ್ರಮೌಳೀಶ್ವರ ಕೊರವಂಜಿಯನ್ನು ರುಕ್ಮಿಣಿಯ ಶಿಷ್ಯೆ ಅಂಜಲಿ ಮರ್ಹ್ ರಚನೆ ಮಾಡಿ ಸಂಯೋಜಿಸಿದ್ದಾರೆ.

ದೇವಸ್ಥಾನ ಮತ್ತು ರಾಜರ ಆಸ್ಥಾನದಿಂದ ಧಿಕ್ಕರಿಸಲ್ಪಟ್ಟ ಸಾಂಪ್ರದಾಯಿಕವೆನಿಸುವ ೧೮ನೇ ಶತಮಾನದ ಸಾಹಿತ್ಯ ಕೃತಿಯನ್ನು ೨೦ನೇ ಶತಮಾನದ ಮಧ್ಯಭಾಗದಲ್ಲಿ ಸಾಂಪ್ರದಾಯಿಕ ರಂಗಕಲ್ಪನೆಯನ್ನು ಮೀರದೆ ಸಮಕಾಲೀನವೆನಿಸುವಂತೆ ಮೊದಲು ಅಭಿವ್ಯಕ್ತಿಸಿದ್ದು ರುಕ್ಮಿಣಿ ; ಸಾಹಿತ್ಯ, ನೃತ್ಯ, ನಾಟಕ, ಸಂಗೀತವನ್ನು ಎಚ್ಚರಿಕೆಯಿಂದ ಬಳಸಿ ಸ್ವಯಂ ಚಿಂತನೆಯಲ್ಲಿ ರೂಪುಗೊಂಡ ಈ ರೂಪಕದಲ್ಲಿ ದೇವದಾಸಿಯರ ಪರಂಪರೆಯಿಂದ ಬಂದವರಲ್ಲದ ಕಲಾವಿದರನ್ನು ಒಗ್ಗೂಡಿಸಿ ಕ್ರಮವತ್ತಾದ ಪದಗಳ ಬಳಕೆ, ಪ್ರವೇಶ-ನಿರ್ಗಮನಗಳಲ್ಲಿ ಅಚ್ಚುಕಟ್ಟುತನ, ಹೊಸ ಬಗೆಯ ಸಂಗೀತ, ಹೊಸ ವಸ್ತ್ರವಿನ್ಯಾಸ, ಬೆಳಕನ್ನು ಸಂಯೋಜಿಸಲಾಗಿತ್ತು.. ಇದೇ ಕಾರಣಕ್ಕಾಗಿ ಕೊರವಂಜಿ ಅವರ ಜೀವಮಾನದ ಶ್ರೇಷ್ಠ ಪ್ರದರ್ಶಕ ಕೃತಿಯೆಂದು ಕರೆಸಿಕೊಂಡಿತ್ತು.

(ಸಶೇಷ..)

Leave a Reply

*

code