ಅಂಕಣಗಳು

Subscribe


 

ರೂಪಕ- ಕೃಷ್ಣಕಾರುಣ್ಯ

Posted On: Wednesday, August 15th, 2018
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ರಂಗಕ್ಕೂ ರಂಗನಿಗೂ ಬಿಡಿಸಲಾರದ ನಂಟು. ಯಾರೇ ರಂಗನ ಕರೆಯಬಂದವರು, ರಂಗನಾಯಕ ರಾಜೀವಲೋಚನ; ರಂಗಕಲಾಪದ-ಅದು ಯಕ್ಷಗಾನ, ನಾಟಕ, ನೃತ್ಯ, ಸಂಗೀತ ಯಾವುದೇ ಇರಲಿ-ಮುಕ್ಕಾಲು ಪಾಲನ್ನು ಆಳುವುದು ಶ್ರೀರಂಗನೇ. ಶತಾವಧಾನಿ ಡಾ. ಆರ್ ಗಣೇಶರು ಹೇಳುವಂತೆ, ಕೃಷ್ಣನೊಬ್ಬ ಇಲ್ಲದಿದ್ದರೆ ಭಾರತೀಯ ಸಾಹಿತ್ಯ-ಸಂಗೀತ-ಕಲೆ ಮರುಧರೆಯಾಗುತ್ತಿತ್ತು. ಬಾಲ್ಯವೂ ಅಲ್ಲ, ಶೈಶವದಿಂದಲೇ ಕೃಷ್ಣನೆಂಬ ಗಾರುಡಿಗ ರಂಗವನ್ನು ಅವಚುತ್ತಾನೆ, ಆಕ್ರಮಿಸುತ್ತಾನೆ, ಆಳುತ್ತಾನೆ. ಯಾವ ಅಳತೆಗೂ ಒಗ್ಗುವ, ಯಾವುದೇ ಅಳತೆಗೂ ಮಿಕ್ಕುವ ಅತ್ಯಂತ ಪ್ರಾವಣದ (flexible) ಪಾತ್ರ. ಹಾಗಾಗಿಯೇ, ಎಲ್ಲ ಥರದ, ಎಲ್ಲ ಸ್ತರದ ಕಸುಬುದಾರರಿಗೂ ಈತ ಕೈಗೂಸಾಗುತ್ತಾನೆ. ಅವರವರ ಕಲ್ಪನೆ/ಪ್ರತಿಭೆಗಳೊಂದಿಗೆ ರಂಗದಲ್ಲಿ ಮೆಯ್‌ದಾಳುತ್ತಾನೆ. ಕೃಷ್ಣನೊಬ್ಬನನ್ನುಳಿದು ಮಿಕ್ಕೆಲ್ಲ ದೇವ-ಮಾನವ ಪಾತ್ರಗಳೂ ಅಚ್ಚಿನೆರಕದಂತೆ ಮಿತವಾಗುತ್ತವೆ. ಕೃಷ್ಣನಾದರೋ ಅತ್ಯತಿಷ್ಠದ್ದಶಾಂಗುಲಂ ಎಂಬ ಕೆಟಗರಿಯದು. ಅತ‌ಏವ ಎಲ್ಲರೂ ಮುಟ್ಟುವುದು ಮುತ್ತಿಕ್ಕುವುದು ಮುರಾರಿಯನ್ನೇ. ಅಂತಿರುವಾಗ, ನಾವೇಕೆ ಆ ಕಿಲಾಡಿಯನ್ನು ಕೈಬಿಡಬೇಕು? ಕೃಷ್ಣಕಥೆಯ ಎರಡು ಪ್ರಕರಣಗಳನ್ನು ಹೆಣೆದೊಂದು ರೂಪಕದತ್ತ ಚಿತ್ತ ಹರಿಸೋಣ.

ರಂಗದಲ್ಲಿರುವ ದೃಶ್ಯ – ನೀರಿನ ಮಡುವು, ಆಚೀಚೆ ಮರ, ದಿಬ್ಬ. ಪರದೆಯ ಹಿಂದೆ, ಗೋವರ್ಧನ ಪರ್ವತ. ಮೊದಲಿಗೆ ಕಾಳಿಂಗಪ್ರಸಂಗ. ನೀರಿನ ಹೊಳೆಯ ದಂಡೆಯ ಮೇಲೆ ಮೆಯ್ ತೆವಳಿ ಬರುವ ಕಾಳಿಂಗನಿಂದ ದೃಶ್ಯಾರಂಭ.

(ಝಂಪೆತಾಳ) ನೀರಮಡುವಲ್ಲಿದ್ದ ಕಾಳಿಂಗ ಹೊರಹೊರಟ

ತೀರದಲಿ ತಲೆ ಎತ್ತಿ ನಂಜುಗೊರಳನು ತೂಗಿ

ಬೀರುತ್ತ ದಿಟ್ಟಿಯನು ಮೆಲ್ಲಮೆಲ್ಲನೆ ಸರಿದು

ತೋರಿ ಮರೆಯಾಗಿ ಸಾಗಿ

(ತಲೆ ಎತ್ತಿ ತೆವಳುತ್ತಿದ್ದ ಕಾಲಿಯ ಮಡುವಲ್ಲಿ ಅಡಗುತ್ತಾನೆ. ಮುಂದಿನ ವೇದಿಕೆಯಲ್ಲಿ ಹಸುಗಳ ಪ್ರವೇಶ.)

(ಅಷ್ಟತಾಳ) ಮೇssಯುತ್ತ| ಮೇssಯುತ್ತ| ಬಂದಾವು ಬಂದಾವು

ಗೋವುಗಳು || ನಂದಗೋಕುಲದ ಗೋವುಗಳು ||

ಗೋsssಮಾಳದಿ ಸುತ್ತಾಡಿ | ಮೇದುs ಮೇದುs ಬಾಯಾರಿ

ಸಾssಲು ಸಾssಲುss ಹೊಂಟಾವು |

ನೀssರಿಗಾಗಿ|| ಯಮುನೆಯ ದಾರಿ ಹೊಂಟಾವು ||

(ಈಗ ಮಡುವಲ್ಲಿದ್ದ ಕಾಲಿಯ ಹೆಡೆ ಎತ್ತುತ್ತಾನೆ.)

(ಝಂಫೆತಾಳ) ದೂರದಲಿ ನೀರ ಹೀರುವ ಗೋವುಗಳ ಕಂಡೂ

ಕಾರಿದನು ಬುಳುಬುಳಿಸಿ ಘನಘೋರವಿಷವನ್ನು

ಏರೇರಿ ನಂಜು, ಉರುಳುರುಳಿದವು ಅಲ್ಲಲ್ಲಿ

ನೊರೆಯುಗುಳಿ ಮೆಯ್ಯ ಸೆಟೆದು

(ತ್ರಿಪುಟತಾಳ) ಸೊಕ್ಕಿನಲಿ ಹಿಸ್ಸ್ ಎಂದ, ಹಾರುವ

ಹಕ್ಕಿಗಳು ಪಟಪಟನೆ ಬಿದ್ದವು

ತಿಕ್ಕಿದನು ಬಾಲದಲಿ, ಗಬಗಬ ಮುಕ್ಕಿದನು ನೊಣೆದು

ಹೊಕ್ಕು ಹೊಳೆಯನು ಫೂತ್ಕರಿಸಿ ವಿಷ

ಕಕ್ಕಿ, ಜಲಚರಸಂತತಿಯು ಸಾ

ಲಿಕ್ಕಿ ಸತ್ತವು, ದುರ್ಮದದಿ ಮನೆಮಡುವ ಸೇರಿದನು (ಕತ್ತಲು)

(ಗೋಪಾಲಕನ ಪ್ರವೇಶ) ರೂಪಕತಾಳ

ಮೇಯ ಹೋದ ದನಗಳನ್ನು ಹುಡುಕಿ ಹೊರಟ ಗೋವಳ

ಬೆಟ್ಟ ಬಯಲು ಮಜಲು ಕಾಡನೆಲ್ಲ ಅಲೆದು ಸುತ್ತಿದ

ದಡದಿ ಬಿದ್ದ ಹಸುಗಳನ್ನು ಕಂಡು ಹೌsಹಾರಿದ

ಬಾಯ ನೊರೆಯ ನೋಡಿ ಹೆದರಿ ಗೋಕುಲಕ್ಕೆ ಓಡಿದ

(ಕೃಷ್ಣಪ್ರವೇಶ) ಏಕತಾಳ

ಮೋಹನವಂಶೀ ನಾದದಿ ಗೋವಳ

ತೇಲಿಸಿ ಮರೆಸಿದ ಗೋವಿಂದ

ನೇಹದಿ ತಾನೇ ತಾನನ ತನನನ

ನರ್ತಿಸಿದನು ನಾಟ್ಯಾನಂದ (ಇಲ್ಲಿ ಜತಿ-ತಿಲ್ಲಾನ ಬಳಸಬಹುದು.)

(ಝಂಪೆತಾಳ) ಓಡಿ ಬಂದನು ಗೊಲ್ಲ ಏದುತ್ತ ತೊದಲಿದನು

ಯಮುನೆ ದಡ ಹಸುಮಂದೆ ಬಿದ್ದುದನ್ನು

ಗಂಭೀರಭಾವದಿ ನಿಮೀಲಿತಾಂಬಕನಾಗಿ

ಹವಣರಿತು ಶ್ರೀಕೃಷ್ಣ ಧಾವಿಸಿದನು

(ರೂಪಕತಾಳ) ದಟ್ಟಿ ಬಿಗಿದು ಮರವನೇರಿದ |ಕಾಲಿಯನ ನೆಲೆಗೆ|

ದಿಟ್ಟಿಯಿಟ್ಟು ಧುಮುಕಿ ಸೆಣೆಸಿದ ||

(ನೃತ್ತದಲ್ಲಿ ಕಾಲಿಯಮರ್ದನ) (ಕತ್ತಲು)

ಇಂದ್ರಧ್ವಜವನ್ನು ಹಿಡಿದು ಗೋಕುಲದ ಮಂದಿ ಕುಣಿಯುತ್ತಾ ಬರುತ್ತಾರೆ. ತ್ವರಿತವಾಗಿ ಆಗಮಿಸಿದ ಕೃಷ್ಣನು, ಧ್ವಜವನ್ನು ಎಸೆವಂತೆ ಸೂಚಿಸುತ್ತಾನೆ. ಅವರು ಎಸೆಯುತ್ತಾರೆ. ಹಿಂದಿನ ಪರದೆ ಸರಿದಾಗ ಅಲ್ಲಿ ಗೋವರ್ಧನಾದ್ರಿ.

(ತ್ರಿಪುಟತಾಳ) ಕೃಷ್ಣನಾಣತಿಯಂತೆ ಇಂದ್ರಧ್ವಜದ ಉತ್ಸವ ನಿಲ್ಲಿಸಿ

ಪ್ರಕೃತಿಪೂಜನ ಪರ್ವವನು ಆಚರಿಸಿದರು ಗೋಕುಲದಲಿ

(ಸಮೂಹ ನರ್ತನಸಂಭ್ರಮ. ಅಟ್ಟಣಿಗೆಯಲ್ಲಿ ಇಂದ್ರ)

(ಆದಿತಾಳ) ನಮ್ಮನು ಪೊರೆಯುವ ಮಣ್ಣೇ ದೇವರು

ನೆಮ್ಮದಿ ನೀಡುವ ಮರಗಿಡ ದೇವರು

ತನ್ಮಯಗೊಳಿಸುವ ಶುಕಪಿಕ ದೇವರು

ಅಮ್ಮನೊಲಿರುವೀ ಗೋವೇ ದೇವರು (ಇಂದ್ರನ ಅಬ್ಬರ)

(ಏಕತಾಳ) ತನ್ನ ತಿರಸ್ಕರಿಸಿದ ಗೋಕುಲದಿಂ

ಕೆರಳಿ ಕೆಂಡವಾದನು ಇಂದ್ರ

ಕಾಲಮೇಘಗಳನ್ನಟ್ಟಿದ ಕುಂಭ-

ದ್ರೋಣದಿ ಮುಳುಗಿತು ವ್ರಜದೇಶ (ಗುಡುಗು ಸಿಡಿಲು ಹಾಹಾಕಾರ)

(ಏಕತಾಳ) ಬಾನೇ ಹರಿಯಿತು ಜಡಿಮಳೆ ಜಪ್ಪಿತು

ಹುಚ್ಚು ನೆರೆಗೆ ಊರೇ ಕಡಲಾಯಿತು

ಪಶುಜನರಾಕ್ರಂದನ ಮುಗಿಲೇರಿತು

ಜೀವೋದ್ಯಾನವು ಮಸಣಿಸಿತು

(ಝಂಪೆತಾಳ) ವಾಸವನ ಗರ್ವವನು ಭಂಗಿಸಲು ಗೋವಿಂದ

ತಾಳ್ದು ದೈವೀಭಾವವ

ನೆಗಹಿದನು ಏಕೈಕಹಸ್ತದಿಂ ಗೋವರ್ಧ-

ನಾದ್ರಿಯನು ಲೀಲೆಯಿಂದ

(ಬೆಟ್ಟ ಮೇಲೆ ಮೇಲೆ ಏರುತ್ತದೆ. ಜನ-ದನಗಳು ಅದರಡಿ ಆಶ್ರಯಿಸುತ್ತಾರೆ. ಭಜನೆ.)

(ಏಕತಾಳ) ಒಂದೆ ಕೈಯಲಿs ಗೋ|ವರ್ಧನಾದ್ರಿಯ ||

ಧರಿಸಿ ಗೋವ್ರಜ| ಪೊರೆದ ಕಿಟ್ಟಯ್ಯ ||

ಸುರಿವ ವೃಷ್ಟಿಗೆ | ಕರುಣೆಕಟ್ಟೆಯ ||

ನೆರಹಿ ಕಾಯ್ದನು | ನಮ್ಮ ರಂಗಯ್ಯ ||

(ಭಜನೆ ಆಗುತ್ತಿರುವಾಗಲೇ ಇಂದ್ರನು ಕೆಳಗಿಳಿದು ಬಂದು ಕೃಷ್ಣನಿಗೆ ಬಾಗಿ ನಿಲ್ಲುತ್ತಾನೆ.)

 

Leave a Reply

*

code