ಅಂಕಣಗಳು

Subscribe


 

ಸಾರಸ್ವತಲೋಕಕ್ಕೆ ಹೊಸ ಕೊಡುಗೆ- ‘ಮಹಾಮುನಿ ಭರತ’ ನೂತನ ಪುಸ್ತಕ

Posted On: Tuesday, October 28th, 2014
1 Star2 Stars3 Stars4 Stars5 Stars (No Ratings Yet)
Loading...

Author: - ‘ವಿಪ್ರಭಾ’, ಪುತ್ತೂರು

ಭಾರತೀಯ ಪರಂಪರೆಯ 60 ಮಹಾಪುರುಷರ ಜೀವನಕಥನವನ್ನು ಒಳಗೊಂಡ 60 ಕನ್ನಡ ಪುಸ್ತಕಗಳ ಲೋಕಾರ್ಪಣೆಯಲ್ಲಿ ‘ಮಹಾಮುನಿ ಭರತ’ ಎಂಬ ಪುಸ್ತಕವೂ ಒಂದು. 23 ಬುಧವಾರ, 2014ರಂದು ಸಾರಸ್ವತಲೋಕಕ್ಕೆ ಸೇರ್ಪಡೆಯಾದ ಈ ಕೃತಿಯು ನಾಟ್ಯ-ನೃತ್ಯಕ್ಷೇತ್ರದಲ್ಲಿ ಈವರೆಗೆ ಇದ್ದ ಭರತಮುನಿಯ ಕುರಿತ ಪುಸ್ತಕಗಳ ಕೊರತೆಯನ್ನು ತುಂಬಿದೆಯೆಂದೇ ಹೇಳಬಹುದು.

ಭರತಮುನಿ ಕೇವಲ ಒಬ್ಬ ಲಾಕ್ಷಣಿಕನಲ್ಲ, ಶಾಸ್ತ್ರಕಾರನಾಗಿರುವಲ್ಲಿಗೋ ಅಥವಾ ಸಮನ್ವಯಕಾರನಾಗುವಲ್ಲಿಗೋ ಆತನ ಕರ್ತವ್ಯ ಮುಗಿದಿಲ್ಲವೆಂದು ಅರ್ಥವಾಗಲಿಕ್ಕಾದರೂ ಒಮ್ಮೆ ಆತನ ನಾಟ್ಯಶಾಸ್ತ್ರವೆಂಬ ಕೃತಿಯೊಳಗೆ ಇಣುಕಿ ನೋಡಬೇಕು. ಕಾರಣ, ಭರತಮುನಿಯನ್ನು ಅರಿಯಲು ನಾಟ್ಯಶಾಸ್ತ್ರ-ಮತ್ತದರ ಭಾಷ್ಯಗಳನ್ನುಳಿದು ಬೇರಾವುದೇ ಆಕರ ಇಲ್ಲ.

ಆದರೆ ಇಂತಹ ಅನುಕೂಲ ಕನ್ನಡದಲ್ಲಿ ಅಷ್ಟಾಗಿ ಲಭ್ಯವಿಲ್ಲ. ಜೊತೆಗೆ ನೃತ್ಯಕ್ಷೇತ್ರವನ್ನೂ ಒಳಗೊಂಡಂತೆ ಕನ್ನಡದ ಸಮಗ್ರ ಸಾಹಿತ್ಯ ವಾಙ್ಮಯದಲ್ಲಿ ಅದರಲ್ಲೂ ಇತ್ತೀಚೆಗಿನ ದಶಕಗಳಲ್ಲಿ ಭರತನ ಬಗ್ಗೆ ಸಮಗ್ರ ಪರಿಚಯವನ್ನೀಯುವ ಕೃತಿಗಳು ಬಂದದ್ದು ವಿರಳಕ್ಕೇ ವಿರಳ. ಭರತಮುನಿ ವಿರಚಿತ ನಾಟ್ಯಶಾಸ್ತ್ರವು ಕೂಡಾ ಎಲ್ಲರಿಗೂ ತಲುಪಬಲ್ಲಂತಹ ರೀತಿಯಲ್ಲಿ ಸಮ್ಯಕ್ ದರ್ಶನ ನೀಡುವ ಮತ್ತು ಸಾಮಾನ್ಯ ಓದುಗರಿಗೂ ಕಡಿಮೆ ದರದಲ್ಲಿ ದೊರೆಯುವ ಪ್ರಕಟಣೆಯಾಗದೆ ಕಾಲವದೆಷ್ಟೋ ಕಳೆದುಹೋಗಿದೆ.

ನಾಟ್ಯಶಾಸ್ತ್ರದ ಬೃಹತ್ ಸಂಪುಟಗಳಲ್ಲಿ ಭರತನ ಕುರಿತು ವಿವರಗಳು ದೊರೆಯುತ್ತವಾದರೂ; ಬಹುಮೊತ್ತದ ಬೆಲೆಯಿತ್ತು, ಆಯಾಯ ಭಾಷೆಯಲ್ಲಿ ಕೊಂಚಹಿಡಿತವನ್ನಾದರೂ ಸಾಧಿಸಿ, ಓದುವ ತಾಳ್ಮೆಗೆ ಜನ ಮನ ಮಾಡುವುದಿಲ್ಲ; ಅಲ್ಲಲ್ಲಿ ಮಿಂಚಿ ಮರೆಯಾಗುವ ವಿದ್ವತ್ಪೂರ್ಣ ಉಪನ್ಯಾಸಗಳ ಇರವು-ಸೆಳೆವು ಸರ್ವರಿಗೂ ಸಕಾಲಕ್ಕೆ, ಅರ್ಥಗರ್ಭಿತವಾಗಿ ದೊರೆಯುವುದಿಲ್ಲ.

ಅಷ್ಟೇಕೆ, ಪಾಶ್ಚಾತ್ಯ ಮೀಮಾಂಸೆಗಳಿಗೆ ತಮ್ಮ ಭಾರತೀಯ ಪ್ರಜ್ಞೆಯನ್ನು ಮಾರಿಕೊಂಡು ಏನೇನೋ ದ್ವಂದ್ವಗಳನ್ನು ಕಲ್ಪಿಸುತ್ತಾ, ಹಲವು ವಿದ್ವಾಂಸರು, ಸಂಶೋಧಕರೂ ಗೊಂದಲಕ್ಕೀಡಾಗುತ್ತಿದ್ದಾರೆ. ಭರತನ ಕಾಲ-ದೇಶ-ವ್ಯಾಪ್ತಿ-ಕೃತಿಯ ಸಂಬಂಧವಾಗಿ ಭಾರತೀಯ ಸಂಸ್ಕಾರದಿಂದ ತೀರಾ ಹೊರಗುಳಿದು ; ಅಲ್ಲೇ ತಮ್ಮ ತಮ್ಮ ಹಿತಾಸಕ್ತಿಯ ಚರ್ಚೆಗಳಿಗೆ ಮೇಲ್ಪಂಕ್ತಿಯ ಹಾಸಿಗೆಯನ್ನು ಹಾಸಿಕೊಂಡು ಭರತಮಾರ್ಗವನ್ನು ಬೀದಿಗೆ ಎಳೆದು ತಂದು ನಿಲ್ಲಿಸಿದ್ದೂ ಇದೆ. ಹೀಗಾಗಿ ಭರತನ ಬಗೆಗೆ ಬರೆಯುವುದೆಂದರೆ ಅದು ದುಸ್ತರ, ಗೊಂದಲಗಳ ಗೂಡು, ಸವಾಲಿನ ಸರಕು ಎಂದೇ ಸಾಹಿತ್ಯ-ನೃತ್ಯಕ್ಷೇತ್ರದಲ್ಲಿ ಗಣಿತವಾಗಿದೆ.

ಹಾಗಾಗಿ ಭರತನ ಬಗ್ಗೆ ತಿಳಿಯಬೇಕೆಂದಿರುವ ಹಲವು ಆಸಕ್ತರಿಗೆ ಅವಕಾಶಗಳು ದೊರೆಯದೆ ; ಭರತನ ಬಗೆಗೆ ಸಾಕಷ್ಟು ಪ್ರಶ್ನೆಗಳು ಒಗಟು ಒಗಟಾಗಿಯೇ ಉಳಿದಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ದುರ್ಲಭವೆನಿಸುವ ಭರತಮುನಿಯ ಸಂಕ್ಷಿಪ್ತ ಪರಿಚಯ-ಪ್ರತಿಭೆಗಳ ಕುರಿತಂತೆ ಕಲಾವಿದರಿಗೆ-ವಿದ್ಯಾರ್ಥಿಗಳಿಗೆ- ಅಧ್ಯಯನಾಸಕ್ತರಿಗೆ- ಸಹೃದಯ ಓದುಗರಿಗೆ ಏಕಕಾಲಕ್ಕೆ ಆಪ್ತವೆನಿಸುವ ಸಮಗ್ರ ಕೃತಿಯ ಅಗತ್ಯ ಇಂದಿಗೆ ಖಂಡಿತಾ ಇದೆ. ಅದನ್ನು ಶ್ರೀಮತಿ ಮನೋರಮಾ ಅವರು ‘ಮಹಾಮುನಿ ಭರತ’ ಎಂಬ ಕೃತಿಯ ಮೂಲಕ ಸಂಕ್ಷಿಪ್ತವಾಗಿ, ಓದಲು ಅನುಕೂಲವಾಗುವಂತೆ ಸರಳಮಾದರಿಯಲ್ಲಿ ನೀಡುತ್ತಾ ನೆರವೇರಿಸಿದ್ದಾರೆ. ಹಿರಿಯ ವಿದ್ವಾಂಸ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್ ಅವರು ಭಾರತೀಯ ಗುರುಪರಂಪರೆಯ ಕುರಿತು ಬರೆದಿರುವ ಮುನ್ನುಡಿ ಇಡಿಯ ಪುಸ್ತಕಕ್ಕೆ ಶೋಭೆಯನ್ನಿತ್ತಿದೆ.

ಈ ಕೃತಿಯಲ್ಲಿ ಭರತನೆಂದರೆ ಯಾರು? ಯಾವ ಕಾಲದವನು? ಎಲ್ಲಿ ಬಾಳಿ ಬದುಕಿದವನು? ಅವನನ್ನು ಅರಿಯುವ ಬಗೆ ಹೇಗೆ? ಅವನ ಹಿಂದಿನ ಪರಂಪರೆ ಹೇಗಿತ್ತು? ಸಮಕಾಲೀನರು ಯರು? ಅವನ ಗುರುತ್ವ, ಸಾರ್ವಕಾಲೀನ ಪ್ರಜ್ಞೆಗೆ ಇರುವ ಸಾಕ್ಷಿಗಳು ಯಾವುವು? – ಎಂಬಂತಹ ಹಲವು ಕಾಲಗಳಿಂದ ಚಾಲ್ತಿಯಲ್ಲಿರುವ ವಾದ-ವಾಗ್ವಾದದ ಚರ್ಚೆ, ನಿರ್ಣಯಗಳಿಂದ ಮೊದಲ್ಗೊಂಡು ಭರತನ ನಾಟ್ಯಶಾಸ್ತ್ರದ ಮುಖ್ಯ ಅಂಶ, ಸೂಕ್ತಿ-ಉಕ್ತಿಗಳು ಯಾವುವು? ನಾಟ್ಯಶಾಸ್ತ್ರದ ರಚನೆಯ ದಿಕ್ಕು-ದಿಶೆ-ಲಕ್ಷಗಳು ಹೇಗಿವೆ? ನಾಟ್ಯಶಾಸ್ತ್ರದ ಅಧ್ಯಾಯಸಂಕ್ಷೇಪ ಮತ್ತು ಅವುಗಳ ಮಹತ್ತ್ವ, ವ್ಯಾಖ್ಯಾನ ಪರಂಪರೆ ಸಾಗಿಬಂದ ದಾರಿ, ನಾಟ್ಯಶಾಸ್ತ್ರ ಮತ್ತು ಭರತರು ಹೇಗೆ ಪ್ರಸ್ತುತರಾಗುತ್ತಾರೆ? ಆಧುನಿಕ ಕಾಲದಲ್ಲಿ ನಾಟ್ಯಶಾಸ್ತ್ರದ ಸಂಪಾದನೆ ಹೇಗೆ-ಯಾರಿಂದ ನಡೆಯಿತು? ನಾಟ್ಯಶಾಸ್ತ್ರದ ಆವೃತ್ತಿಗಳ ನೆಲೆ ಹೇಗಿದೆ? ಇಂದಿನ ನಾಟ್ಯಪದ್ಧತಿಗೂ ಭರತನ ನಾಟ್ಯಶಾಸ್ತ್ರಕ್ಕೂ ಇರುವ ಸಂಬಂಧ, ವ್ಯತ್ಯಾಸ-ಹೋಲಿಕೆಗಳು ಯಾವುವು? ಭರತಮತಕ್ಕೆ ಅನ್ವಯಿಸಿದರೆ ಇಂದಿನ ಸಾಂಸ್ಕೃತಿಕ ಪರಂಪರೆ ಹೇಗಿದೆ? ಭರತಮಾರ್ಗದಿಂದ ಕಲಿಯಬೇಕಾದದ್ದು- ಅನುಸರಿಸಬೇಕಾದದ್ದು ಏನು? ಭರತನ ಹಾದಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ಜರುಗಿದ ಉತ್ತಮ ಸಂಶೋಧನೆಗಳು ಯಾವುವು? ಅವುಗಳ ವೈಶಿಷ್ಟ್ಯತೆ ಏನು? ಭರತನ ಬಗೆಗೆ ಇರುವ ಸಂದೇಹ-ಆರೋಪಗಳು ಯಾವುವು? ವಿದ್ವಾಂಸರ ಅಭಿಪ್ರಾಯವೇನು?… ಹೀಗೆ ಭೂತ-ವರ್ತಮಾನ-ಭವಿಷ್ಯತ್ತಿನ ಸಮಗ್ರ ನೆಲೆಯಲ್ಲಿ ಈಗಾಗಲೇ ಕಾಡುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಅಧ್ಯಯನ ನಡೆಸಿ ಉತ್ತರಗಳನ್ನು ಶೋಧಮಾರ್ಗದಲ್ಲಿ ಸಮರ್ಪಕವಾಗಿ ಕಂಡುಕೊಂಡು ಯುಕ್ತಮಾರ್ಗದಲ್ಲಿ ಪ್ರತಿಪಾದಿಸಲಾಗಿದೆ.

ಜೊತೆಗೆ ಅಧ್ಯಯನವೊಂದನ್ನು ತೀರಾ ಶುಷ್ಕವಾಗಿ ಬರೆಯುವ ಗೋಜಿಗೆ ಹೋಗದೆ; ಯಾವುದೇ ಓದುಗರಿಗೆ ಸರಳವಾಗಿ, ಸಂಕ್ಷಿಪ್ತವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಉತ್ತಮಕೃತಿಗೆ ಇರಬೇಕಾದ ಎಲ್ಲ ಸಲಕ್ಷಣಗಳೂ ಇದಕ್ಕಿವೆ ಎಂಬುದು ಗಮನಾರ್ಹ ಅಂಶ. ಈ ನೆಲೆಯಲ್ಲಿ ಭರತನಂತಹ ಅಸಾಮಾನ್ಯ ವ್ಯಕ್ತಿ ಮತ್ತು ನಾಟ್ಯಶಾಸ್ತ್ರದಂತಹ ಬೃಹತ್ ವಿಶ್ವಕೋಶವನ್ನು ಏಕಕಾಲಕ್ಕೆ ಸಮಗ್ರವಾಗಿ, ಅಂಗೈಯಗಲಕ್ಕೆ ತಕ್ಕಂತೆ ನೀಡಿದ ಲೇಖಿಕೆ ಮತ್ತು ಪ್ರಕಾಶನ ಅಭಿನಂದನಾರ್ಹರು.

ಪುಸ್ತಕಗಳಿಗೆ ಶ್ರೀ ಭಾರತೀ ಪ್ರಕಾಶನದ ಅನೂರಾಧಾ ಪಾರ್ವತೀ ಬೆಂಗಳೂರು (ಮೊಬೈಲ್: 9880455776) ಇವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ;  www.noopurabhramari.comhttp://hareraama.in/;

https://www.facebook.com/shreebharathiprakashana?fref=ts

Leave a Reply

*

code