ಅಂಕಣಗಳು

Subscribe


 

ಸೀತೆಯ ಸ್ವಗತ ಅಥವಾ ಮತ್ತೆ ಹುತ್ತಗಟ್ಟಿತೆ ಸೀತೆಯ ಚಿತ್ತ?

Posted On: Friday, October 15th, 2010
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ವಿದ್ವಾನ್ ಉದ್ಯಾವರ ಮಾಧವ ಆಚಾರ್ಯ, ಕವಿಗಳು, ವಿದ್ವಾಂಸರು, ಉಡುಪಿ

ಪರಿಕಲ್ಪನೆ ಸಾಹಿತ್ಯ: ಪ್ರೊ| ಉದ್ಯಾವರ ಮಾಧವ ಆಚಾರ್ಯ
ಸಂಗೀತ, ನೃತ್ಯಸಂಯೋಜನೆ ಮತ್ತು ಪ್ರಸ್ತುತಿ: ಶ್ರೀಮತಿ ಭ್ರಮರಿ ಶಿವಪ್ರಕಾಶ್, ಯು‌ಎಸ್‌ಎ

ವಾಲ್ಮೀಕಿಯ ಆಶ್ರಮದಲ್ಲಿ ಕುಶ-ಲವರ ಜನ್ಮದ ಪೂರ್ವದಲ್ಲಿ ರಾಮನಾಣತಿಯಂತೆ ತಮ್ಮ ಲಕ್ಷಣ ಕರೆತಂದು ತೊರೆದಾಗ ಕವಿ ಮನಸ್ಸಿನ ಮುನಿ ವಾಲ್ಮೀಕಿಯಿಂದ ಆಶ್ರಯ ಪಡೆದ ಗರ್ಣಿಣಿ ಸೀತೆಯ ಮನದ ಲಹರಿಯನ್ನು ಕಲ್ಪನಾತ್ಮಕವಾಗಿ ಚಿತ್ರಿಸಲಾಗಿದೆ. ಇದೊಂದು ಮೆಲುಕು. ಇದೊಂದು ಸ್ವಗತ. ಅಳಲಿನ ಆಕ್ರಂದನ. ಯಾರು ಸರಿಯೋ, ಯಾರದು ತಪ್ಪೋ ಎಂಬ ತೀರ್ಮಾನವಿಲ್ಲ. ಕೇವಲ ಪೌರಾಣಿಕ ಸ್ಥಿತಿಯ ಬಗೆಗೆ ಒಂದು ಸ್ಪಂದನ. ಪುರಾಣ ಶಿಲ್ಪದ ಮೌಲ್ಯಕ್ಕೆ ಧಕ್ಕೆ ತಾರದೆ ಮಾನವೀಯ ನೆಲೆಯಲ್ಲಿ ವಿಶ್ಲೇಷಣೆ ನಡೆದಿದೆ. ಮಣ್ಣು, ಕಾಡು, ಏಕಾಕಿತನ, ಹೆಣ್ತನದ ಅವಸ್ಥಾಂತರಗಳೆಲ್ಲ ಸೀತೆಯ ಬಾಳಿನಲ್ಲಿ ಹಾದುಹೋದುದರ ಒಂದು ಅವಲೋಕನ. ಮನೋಧರ್ಮದ ನೆಲೆಯಲ್ಲಿ ರಾಮಾಯಣದ ಕೆಲವು ಚಿತ್ರಣಗಳನ್ನು ನೃತ್ಯ ಭಾಷೆಯಾಗಿಸುವ ಪ್ರಯತ್ನ.
*****

ಉಡುಪಿಯಲ್ಲಿ ನೆಲೆಸಿರುವ ಕವಿ, ವಿದ್ವಾಂಸ ಶ್ರೀ ಉದ್ಯಾವರ ಮಾಧವ ಆಚಾರ್ಯರ ಲೇಖನಿಯಿಂದ ಹೊರಬಂದ ರೂಪಕವಿದು. ಈಗಾಗಲೇ ವಸುಂಧರಾ ದೊರೈಸ್ವಾಮಿ ಅವರಿಗೆ ಹಲವು ಏಕವ್ಯಕ್ತಿ ರೂಪಕಗಳನ್ನು ನೀಡಿದ ಹೆಮ್ಮೆ ಇವರದ್ದು.
ಮಾಧವ ಆಚಾರ್ಯರ ಪುತ್ರಿ ಯು‌ಎಸ್‌ಎಯಲ್ಲಿ ನೆಲೆಸಿರುವ ಭ್ರಮರಿ ಶಿವಪ್ರಕಾಶ್ ತಂಡದವರಿಂದ ಮೊದಲ ಪ್ರದರ್ಶನ: ಎಪ್ರಿಲ್ ೧೭, ೨೦೧೦ ಅಮೇರಿಕಾ ಸಂಸ್ಥಾನದ ನ್ಯೂ ಜೆರ್ಸಿ ರಾಜ್ಯದ ತ್ರಿವೇಣಿ ಕನ್ನಡ ಸಾಂಸ್ಕೃತಿಕ ವೇದಿಕೆಯ ಯುಗಾದಿ ಆಚರಣೆಯಲ್ಲಿ. ೨ನೇ ಪ್ರದರ್ಶನ ನ್ಯೂಜೆರ್ಸಿಯ ಬ್ರಿಡ್ಜ್‌ವಾಟರ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮ ನಾದನೃತ್ಯ ದಿವಸ ಜುಲೈ ೩೧, ೨೦೧೦ರಂದು. ೩ನೇ ಪ್ರದರ್ಶನ ಆಗಸ್ಟ್ ೨೨, ೨೦೧೦ರಂದು ಪ್ರಾವಿಡೆನ್ಸ್, ರೋಡ್ ಐಲ್ಯಾಂಡಿನ ಪೆರಿಶೇಬಲ್ ಥಿಯೇಟರ್‌ನಲ್ಲಿ ನೃತ್ಯಾಸಕ್ತರ ಸಮಕ್ಷಮ.]
**********

[ಸೀತೆಯ ಪ್ರವೇಶ]
ಮಹಾಕಾವ್ಯದೊಳಗೊಂದು ಮನಸ್ಸಿದೆ. ಆ ಮನಸ್ಸಿನಾಳದಲ್ಲೊಂದಷ್ಟು ಪ್ರಶ್ನೆಗಳು ಮಡುಗಟ್ಟಿವೆ. ಹುತ್ತದಿಂದ ಹೊರಗೆ ಬಂದು ಒಳಗಿನ ಧ್ವನಿಗೆ ಜೀವಕೊಟ್ಟ ಕವಿ ವಾಲ್ಮೀಕಿಯಲ್ಲದೆ ಕಾವ್ಯದ ನಾಯಕಿಗೆ ಇನ್ಯಾರು ಸಾಂತ್ವನ ಹೇಳಿಯಾರು? ಸೀತೆಯ ಸ್ವಗತದೊಳಗೆಲ್ಲ ಆ ಸಾಂತ್ವನವೇ ಹಾಡಾಗಿದೆಯೇ. . . . . (ಹಮ್ಮಿಂಗ್) ಅಣ್ಣ ರಾಮನಾಜ್ಞೆಯಂತೆ ತಮ್ಮ ಲಕ್ಷ್ಮಣ ಭೂಜಾತೆಯನ್ನು ವಲ್ಮೀಕಗಳ ನಡುವೆ ರಥದಿಂದಿಳಿಸಿ ಮರಳಿದಾಗ ಬಸುರಿ ಸೀತೆಗಾಯಿತು ವಾಲ್ಮೀಕಿಯಾಶ್ರಮವೇ ಆಶ್ರಯ. . .
[ರಂಗದ ಒಂದು ಬದಿಯಿಂದ ದೂರದೂರ ಸಾಗುತ್ತಿರುವ ಲಕ್ಷ್ಮಣನನ್ನೇ ಮರೆಯಾಗುವವರೆಗೆ ಕಾಣುತ್ತ ಹಿಮ್ಮುಖವಾಗಿ ಸೀತಾ ಮಾತೆ ರಂಗದ ನಡುವಿಗೆ ಬರುತ್ತಿದ್ದಂತೆ ಮೇಲಿನ ಮಾತುಗಳು ಹಿನ್ನೆಲೆಯಿಂದ ಮೂಡಿಬಂದು, ರಂಗದ ನಡುವೆ ಆಘಾತಗೊಂಡಂತೆ ಪರಿತ್ಯಕ್ತೆ ಸೀತೆ ನಿಂತಾಗ ನಿಧಾನವಾಗಿ ಮೂರು ಸ್ತರಗಳಲ್ಲಿ ’ಕುಹೂ’ ಕುಕಿಲು ಕೇಳಿಬರುತ್ತದೆ.]

ಕುಹೂ . . . . ಕುಹೂ. . . . ಕುಹೂ. . .

[ತುಸು ಮೌನ – ನಂತರ ಶ್ಲೋಕ]

ರಾಗ: ತಿಲ್ಲಂಗ್, ರೂಪಕ ತಾಳ
ಹಾಡು: ಕೂಜಂತಂ ವಾಲ್ಮೀಕಿ ಕೋಕಿಲಂ||
ಹುತ್ತದಿಂದ ಹೊರಗೆ ಬಂದು ಕವಿಯ ಚಿತ್ತ ಪಡೆದವನೆ|
ಕೇಳು ನನ್ನ ಕಥೆಯ| ಹಾ. . .ಡು ನನ್ನ ವ್ಯಥೆಯ|
ಆಲಿಸುತ್ತ ಆ ಹಾಡ| ಕಳೆವೆ ಬಾಳ ಪಥವ ||

[ಸೀತೆ ದಿಣ್ಣೆಯ ಮೇಲೆ ಕುಸಿಯುತ್ತಿದ್ದಂತೆ ಅಲೆ‌ಅಲೆಯಾಗಿ ರಾಮನಾಮದ ನಾದ]

ರಾಮ ರಾಮ . . . ರಾಮ ರಾಮ . . . ರಾಮ ರಾಮ . . . ರಾಮ ರಾಮ . . .

[ಸೀತೆ ರಂಗದ ಸುತ್ತೆಲ್ಲ ಹರಿದಾಡಿ ಆ ನಾದದಲೆಯನ್ನು ಕೇಳುತ್ತ ನೋವು ನಲಿವಿನ ಭಾವ ವ್ಯಕ್ತ ಪಡಿಸುತ್ತಾಳೆ]

ರಾಗ: ಹಂಸಾನಂದಿ
ಹಾಡು: ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ|
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ . . . ||

ಮಾತು: ಪರಿತ್ಯಕ್ತೆ ಈ ಮಾತೆಗೆ ದಾರ್ಶನಿಕ ಕವಿಯಾಶ್ರಮದ ಕಾನನವೇ ಕನಸು ಕಾಣುವ ತಾಣವಾಗುತ್ತಿದೆಯೇ. . . . [ಸೂಕ್ತ ಅಭಿನಯ]

ರಾಗ: ಹಂಸಾನಂದಿ, ಆದಿತಾಳ
ಹಾಡು: ಆಲಿಸಿದಳು ಸೀತೆ| ಮಾತೆ ||
ಮಾತಿಲ್ಲದೆ ಆಲಿಸಿದಳೆ | ಸೀತೆ||
ವಾಲ್ಮೀಕಿ ಕೋಗಿಲೆ ವನದಾಳದಲ್ಲಿ|
ಉಲಿದ ರಾಮನ ನಾಮವ| ಆಲಿಸಿದಳು ಸೀತೆ | ಮಾತೆ||
ಕವಿ ಮನದ ಮೌನದಲಿ ಚಿತ್ತ ಹುತ್ತದ ಪದರಿನಲಿ|
ಮೂಡಿ ಮಡುಗಟ್ಟಿರುವ ||
ಮಧುಮಧುರ ಮಧುರಾಕ್ಷರವ| ಆಲಿಸಿದಳೆ ಸೀತೆ| ಮಾತೆ||

ಮಾತು: ಆಲಿಸುವುದಲ್ಲದೆ ಇನ್ನೇನುಳಿದಿದೆ ಈ ಮೈಥಿಲಿಯ ಬಾಳಿನಲ್ಲಿ [ ರಾಮ ರಾಮ ಮಂದ್ರವಾಗಿ]ಈ ರಾಮ ನಾಮ ಈಗ ಆಧಾರ ಶ್ರುತಿ ಮಾತ್ರವೇ? ಎದೆಯೊಳಗೆ ಬೆಳಕಾಗಿ ತುಂಬಿದೆ ರಾಮನಾಮದ ಹಾಡು. ಹೊರಗೆಲ್ಲ ಕತ್ತಲಾಗಿ ಕಾಡುತ್ತಿದೆ ಕಾಡು. ಚಿತ್ರಕೂಟ, ದಂಡಕಾರಣ್ಯ, ಅಶೋಕವನ. . . ಮತ್ತೆ ಈಗ ವಲ್ಮೀಕಗಳ ಸುತ್ತಿರುವ ಕಾಡು. [ಒಂದು ಹಿಡಿ ಮಣ್ಣನ್ನೆತ್ತಿ ಆಘ್ರಾಣಿಸಿ. . ]ಹಿಡಿ ಮಣ್ಣಿನಿಂದ ಮೂಡಿಬಂದೆ ನಾನು ಭೂಜಾತೆ. . .ಹಿಡಿ ಹಿಡಿ ಮಣ್ಣು ಹುತ್ತವಾಗಿ ಅದರಾಳದಿಂದ ಮೂಡಿ ಬಂತು ನನ್ನ ಕವಿತೆ. . . ಈಗ ಮತ್ತೆ ಆ ಹುತ್ತದೊಳಗೇ ನಾನಾಗಬೇಕೇ ಭೂಗತೆ? ಎಲ್ಲ ಎಲ್ಲ ನೆನಪುಗಳು. . .

[ಸೀತೆಯ ಬಾಳಿನ ಹಿನ್ನೋಟ]

ರಾಗ: ಹಿಂದೋಳ, ಖಂಡಛಾಪು ತಾಳ
ಹಾಡು: ಮಿಥಿಲೆಯ ಮಣ್ಣು ಮಗುವಾಗಿ ನಗುವಾಗಿ|
ಮುಗುಳಾಗಿ ಮಗಳಾಗಿ ಹಗುರಾಗಿ ಚಿಗುರಾಗಿ |
ರಾಜರ್ಷಿ ಜನಕನ| ಮನೆಯ ಬೆಳಕಾಗಿ| ನಲಿದಾಡಿದೆ. . . . ||
ಯಜ್ಞ ಭೂಮಿಯ ಖನನದಿಂದುದಿಸಿ||
[ಮೌನ]
ಈಗ
[ಬಾಲ್ಯದ ನಲಿದಾಟವನ್ನು ಅಭಿವ್ಯಕ್ತಿಸಿ ಒಮ್ಮೆಲೆ ಸದ್ಯದ ಸ್ಥಿತಿಯ ಸ್ಮರಣೆಯಲ್ಲಿ ಆಘಾತಗೊಂಡವಳಂತೆ]

ಜೀವನ ಯಜ್ಞದಲಿ ಪೂರ್ಣಾಹುತಿಯಾದೆನೆ||

ಮಾತು: ಅಪ್ಪನ ನೇಗಿಲು ನೋವು ನೀಡಲಿಲ್ಲ. ಜಗತ್ತಿಗೇ ಈ ಜಗನ್ಮಾತೆಯನ್ನು ನೀಡಿತು. ಆದರೆ ಶಿವಧನುವ ಮುರಿದ ಕೋದಂಡ ರಾಮನ ಬತ್ತಳಿಕೆಯ ಬಾಣ ತಾಯ್ತನದ ತಾಣಗಳನ್ನೆಲ್ಲ ತತ್ತರಿಸುವಂತೆ ಮಾಡಿತೇ. ಎಲ್ಲವೂ ನೆನಪುಗಳೇ.

ರಾಗ: ಷಣ್ಮುಖಪ್ರಿಯ, ಆದಿ ತಾಳ
ಹಾಡು: ಯಜ್ಞ ರಕ್ಷಣೆಗಾಗಿ ಬಂದವನೆ ಶ್ರೀ ರಾಮ|
ಯಜ್ಞಕಾಹುತಿಯ ನೀಡಿದನೆ |ಜೀವನ |
ಯಜ್ಞಕರ್ಪಿಸಿದನೆ ತಾಟಕಿಯ ರೂಪದಲಿ|
ಹೆಣ್ತನವ ಕೋದಂಡ ರಾಮ|

ಮಾತು: ಅದೇ ರಾಮ ತ್ಯಜಿಸಿದ ಸೀತೆ ನಾನು. ಈ ಏಕಾಂತದಲ್ಲಿ ಆ ತಾಟಕಿಯನ್ನೇಕೆ ನೆನೆಯುತ್ತಿದ್ದೇನೆ? ರಾಕ್ಷಸಿ ಎಂದು ರಾಮ ಭಂಗಿಸಿದ . ರಕ್ಕಸಿಯಾದರೇನು ಹೆಣ್ಣಲ್ಲವೆ ಎಂದು ಸೀತೆಯ ಮನ ಆತಂಕಪಡುತ್ತಿದೆ. ಹೌದು. ಕವಿ ಹೃದಯದ ಮುನಿ ವಾಲ್ಮೀಕಿಯ ಮಹಾ ಕಾವ್ಯದ ಕೊನೆಯ ಪುಟದಲ್ಲೀಗ ಸೀತೆ ಹೆಣ್ಣಲ್ಲ. ಹೆಂಡತಿಯಲ್ಲ. ಪಟ್ಟದರಸಿಯಲ್ಲ. ಒಂದು ಪ್ರಶ್ನೆ ಮಾತ್ರ. ಬಸುರಿಯಾಗಿ ಪರಿತ್ಯಕ್ತಳಾದ ನನ್ನ ಮನ ರಾಮ ಕೊಂದ ತಾಟಕಿಯನ್ನು ಮಾತ್ರ ನೆನೆಯುತ್ತಿದೆಯೇ? ನನ್ನ ಶ್ರೀ ರಾಮನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆಯೇ? ಇಲ್ಲ. ಇಲ್ಲ. ಸಲ್ಲ. ಸಲ್ಲ. ಕರುಣಾಳು ರಾಘವನಲಿ ತಪ್ಪಿಲ್ಲ. ಶಿಲೆಯ ಅಂತಃಕರಣಕ್ಕೆ ಸ್ಪಂದಿಸಿದವನಲ್ಲವೇ ನನ್ನ ಭುವನಾಭಿರಾಮ. . . .

ರಾಗ: ವಲಚಿ, ಆದಿ ತಾಳ
ಹಾಡು: ವಿರಸ ದಾಂಪತ್ಯವನು
ಸರಸಗೊಳಿಸಿದ ಸೊಗಸುಗಾರ
ನನ್ನ ಶ್ರೀ ರಾಮ| ಭುವನಾಭಿರಾಮ||
ಕಲ್ಲಾಗಿ ಕರಗಿದಹಲ್ಯೆಯ ಬಳಿಸಾಗಿ|
ಬಿಲ್ಲಾಗಿ ಬಾಗಿ ಸಿಡಿಯದೆ ಸವಿ |
ಸೊಲ್ಲಾಗಿ ಸತಿ ಪತಿಯನೊಂದಾಗಿಸಿದವ|
ನನ್ನ ಶ್ರೀ ರಾಮ| ಭುವನಾಭಿರಾಮ||

ಮಾತು: ಹೌದಲ್ಲ. ಭಗ್ನ ಪ್ರೇಮದ, ದಗ್ಧ ದಾಂಪತ್ಯದ ಅಹಲ್ಯೆಯನುದ್ಧರಿಸಿ ನೇರ ಬಂದುದು ನನ್ನ ಸ್ವಯಂವರ ಮಂಟಪಕ್ಕೆ. ಏಕೆ ಬಂದೆ? ತೊರೆಯಲೆಂದೆ ನನ್ನ ಪಡೆಯಲು ಬಂದೆಯಾ? ನೀನೀಗ ನನ್ನ ಬಳಿಯೊಳಿರಬೇಕಿತ್ತು ರಾಮ. . ತುಂಬಿದ ಉದರದೊಳಗೆ ನಿನ್ನ ಶಿವಶಕ್ತಿ ಅಡಗಿಸಿದ ಜೀವಶಕ್ತಿ ತೊಟ್ಟಿಲಾಡುವುದರ ಸ್ಪರ್ಷ ಸುಖವನ್ನನುಭವಿಸಲು ನೀ ನನ್ನ ಬಳಿಯೊಳಿಲ್ಲ. ನನ್ನ ಪಡೆಯಲೆಂದೇ ಶಿವಧನುವ ಮುರಿದವನೇ ಅಂದಿನ ಕಲ್ಯಾಣೋತ್ಸವ ಮತ್ತೆ ಈ ಕಾಡಿನಲ್ಲಿ ನನ್ನನ್ನು ಕಾಡುತ್ತಿದೆಯಲ್ಲ. . .

ರಾಗ: ರೀತಿಗೌಳ, ಖಂಡಛಾಪು ತಾಳ
ಹಾಡು: ನೀ ಬಂದೆ ಕೋದಂಡ ರಾಮ|
ಅದಕೆಂದೆ ನಾ ಕಾದೆ ಸೀತಾ ರಾಮ|
ಪೃಥ್ವಿ ಪ್ರಮದೆಯ ಪಣದಿ ಸೋತವನ ನೀ|
ಗೆಲಿದೆನ್ನ ಗೆಲ್ಲಲು ಮುರಿದು ಬಿಲ್ಲನು ನೀ|
ಬೆಳಕಾದೆಯಾ . . . |
[ತಾಳರಹಿತ]
ಮಿಥಿಲೆಯರಮನೆಯದರ ಕರಿನೆರಳು|
ಕಾಡುತಿದೆ ಕಾಡಿನಲಿ ರಾಮ||

ಮಾತು: ನಿನ್ನೊಳಗೆ ಬೆಳಕಾದೆ. ಹೊರಗೆ ನೆರಳಾದೆ. ಪಟ್ಟದರಸಿಯಾದವಳು ಪಟ್ಟೆ ಪೀತಾಂಬರ ತೊರೆದು ನಾರುಡುಗೆಯ ನಾರಿಯಾದೆ. ಅತ್ತೆ ಕೈಕೆಯ ಮಾತೃ ಹೃದಯವನ್ನರಿತ ಓ ನನ್ನ ರಾಮ. . ದಶರಥರಾಮ. . ಕೋಸಲೆಯ ಕುರುಡುತನದಲ್ಲಿ ಈ ಕೋಮಲೆಗೆ ದಾರಿ ಕಾಣದೆ ಹೋಯಿತಲ್ಲ. ಸರ್ವ ಲೋಕ ಪ್ರಿಯನೆ ನೆನಪಾಗುತ್ತಿದೆ ಎಲ್ಲ.

ರಾಗ: ಅಮೃತವರ್ಷಿಣಿ, ತಿಶ್ರ ನಡೆ ಆದಿತಾಳ
ಹಾಡು: ಕೆರಳಿ ಕೈಕೆ ವರವ ಕೇಳಿ ಕೋಸಲೆಯ ಕೊರಳ ಕೊಯ್ದು|
ಪಟ್ಟ ಭರತಗೆನಲು ಅರಸ ಮೌನಿಯಾಗೆ|
ಯಾರಿಗಾಗಿ ಮಿಡುಕಿದೆ ಓ ಕೋಸಲೇಂದ್ರ ಗುಣಾಭ್ಧಿಯೇ|
ತಾಯಿಗಾಗಿ ಮಿಡುಕಿದ ನೀ ಅರಿಯದಾದೆ ನನ್ನ ಕನಸ|
ಪಿತೃವಾಕ್ಯ ಪರಿಪಾಲನೆ||

ಮಾತು: ಮಿಥಿಲೆಯಿಂದ ಮದುಮಗಳಾಗಿ ಹೊರಟಾಗ ಎಷ್ಟೊಂದು ಕನಸುಗಳನ್ನು ಹೊತ್ತಿದ್ದೆ.[ಅಲ್ಲಲ್ಲಿ ಅಲಾಪನೆ] ಕೋಸಲೆಯ ಕಣಜವನ್ನು ತುಂಬುವ ಭಾಗ್ಯಲಕ್ಷ್ಮಿ ನಾನೆಂದೆ ಭ್ರಮಿಸಿದ್ದೆ. ಆದರೇನಾಗಿ ಹೋಯಿತು? ನಾಡು ದೂಡಿತು. ಕಾಡು ಕೈಬೀಸಿ ಕರೆಯಿತು. ಅಂದು ಇಂದು ಸೀತೆಯ ಕನಸುಗಳೆಲ್ಲ ಕಾಡಿನ ಕನವರಿಕೆ ಮಾತ್ರವೇ? ಅರಣ್ಯರೋದನ ಮಾತ್ರವೇ? ಅಂದಿನ ಚಿತ್ರಕೂಟವೂ ಅರಣ್ಯದ ಒಂದು ಭಾಗವೆ. ಆದರೂ ನನ್ನ ಹೃದಯ ಗೆದ್ದವ ಅದನ್ನೊಂದು ಮಧುರ ನೆನಪಾಗಿಸಿದ್ದನ್ನು ಹೇಗೆ ಮರೆಯಲಿ? ದೇವಗಂಧರ್ವರಂತೆ ನಾವು ನಲಿದಾಡಿದ ತಾಣವಲ್ಲವೇ ಅದು. ನೆನಪಿದೆಯಾ ರಾಮ ಅಲ್ಲಿ ನೀನು ಉಲಿದದ್ದು?. . .

ರಾಗ: ಕದನಕುತೂಹಲ, ತಿಶ್ರನಡೆ ಆದಿತಾಳ
ಹಾಡು: ನೋಡು ನೋಡು ನಲ್ಲೆ ನೋಡು|
ಜೋಡು ನವಿಲ ನಾಟ್ಯ ನೋಡು||

ಮಾತು: ಆಗ ನಾನು ಹೇಳಿದ್ದೆ. .

ಹಾಡು: ನೋಡು ನೋಡು ನಲ್ಲ ನೋಡು|
ಸಿಂಹ ಜೋಡಿಯ ಆಟ ನೋಡು||

ಮಾತು: ಇಬ್ಬರೂ ಕೈಕೈ ಹಿಡಿದು ಎದೆಯ ಹಾರವೂ ತಡೆಯಾಗದಿರಲೆಂದು ತೆಗೆದಿರಿಸಿ ಮೈಮೈ ತಾಗಿಸಿ ಒಂದೆ ಮನದಿಂದ ಕೂಡಿ ಹಾಡಿದ್ದೆವಲ್ಲ ನಾವು ರಾಮ. . .

ರಾಗ: ಕದನ ಕುತೂಹಲ, ಮಿಶ್ರಛಾಪು ತಾಳ
ಹಾಡು: ಅರಳಿದ ಕೆಂದಾವರೆ|
ತಳಿರು ತೋರಣ ಹಸಿರ ಮಾಲೆ|
ಚಿತ್ರಕೂಟ ಪರ್ಣ ಶಾಲೆ|
ಮುಗಿಲ ತುಂಬ ಪ್ರೇಮದೋಲೆ|

ಮಾತು: ನಾವು ಮಾತ್ರವೇ! ದೇವಮಾನವ ಯಕ್ಷ ಗಂಧರ್ವರೆಲ್ಲ ಒಂದೆ ಕೊರಳಾಗಿ ಹಾಡಿದರಲ್ಲ ರಾಮ . . .ಅದರ ಪ್ರತಿಧ್ವನಿ ಕೇಳಿಸುತ್ತಿದೆಯಾ ಈ ರಾಮತೊರೆದ ಹೆಣ್ಣಿಗೆ ವಾಲ್ಮೀಕಿಯ ಕಾವ್ಯ ತರಂಗಿಣಿಯಲ್ಲಿ. . .

ರಾಗ: ಹಮೀರ್ ಕಲ್ಯಾಣಿ
ಹಾಡು: ಜನಕಸ್ಯ ಕುಲೇಜಾತಾ | ದೇವ ಮಾಯೇವ ನಿರ್ಮಿತಾ|
ಸರ್ವಲಕ್ಷಣ ಸಂಪನ್ನಾ| ನಾರೀಣಾಮುತ್ತಮಾ ವಧೂ:||

ಮಾತು: ಲೋಕ ಹಾಡುತ್ತಿದೆಯೇ ನಾನು ಸರ್ವಲಕ್ಷಣ ಸಂಪನ್ನೆ ಎಂದು – ನಾರೀ ಕುಲದಲ್ಲಿ ಶ್ರೇಷ್ಠಳು ಎಂದು – ಪರಮ ಸುಂದರಿ ಎಂದು. ಆಜಾನುಬಾಹು ರಾಮನನ್ನು ಈ ಮುಗ್ಧೆ ಅರಮನೆ ತೊರೆದು ಹಿಂಬಾಲಿಸಿದಳು. . .

ರಾಗ: ಹಮೀರ್ ಕಲ್ಯಾಣಿ, ತಾಳರಹಿತ
ಹಾಡು: ಸೀತಾಪ್ಯನುಗತಾ ರಾಮಂ | ಶಶಿನಂ ರೋಹಿಣೀ ಯಥಾ. . .

ಮಾತು: ರೋಹಿಣಿಯಂತೆ ಚಂದ್ರನನ್ನು, ರಾಮಚಂದ್ರನನ್ನು ಹಿಂಬಾಲಿಸಿದೆ ನಾನು. . .ನಡುವೆ ಕಾಡಿನಲ್ಲಿ ಕಥೆ ವ್ಯಥೆಯಾಯಿತು. ನಮ್ಮಿಬ್ಬರ ನಡುವೆ ಮೋಡ ಕಾಡಾಯಿತು. ದಂಡಕಾರಣ್ಯ ಎಂಬ ಕಾಡು ನೋವಿನ ಹಾಡಾಯಿತು. . ಶೂರ್ಪನಖಿ ಎಂಬ ಹೆಣ್ಣನ್ನು ನೀನು ವಿರೂಪಗೊಳಿಸಿದ್ದು ನನ್ನ ಬಾಳಿನ ಅಂದವನ್ನು ವಿಕಾರಗೊಳಿಸಿತಲ್ಲ ರಾಮ. ಹೆಣ್ಣಿಗೆ – ಅಗ್ನಿಯಲ್ಲಿ ನೊಂದು ಬೆಂದು ಹೊರಬಂದ ಹೆಣ್ಣು, ನಾನು ಕೇಳುತ್ತಿದ್ದೇನೆ – ಹೆಣ್ಣಿಗೆ ಸೌಂದರ್ಯ ಒಂದು ಶಾಪವೇ?!

ರಾಗ: ಕುಂತಲವರಾಳಿ, ಮಿಶ್ರಛಾಪು ತಾಳ
ಹಾಡು: ಚಂದದಿಂದ ಬಂದ ಶೂರ್ಪಣಖೆ|
ಲಂಕಾಧಿಪನ ತಂಗೆ|
ಕಂಡು ನಿನ್ನ ವರಿಸಲೆಂದು |
ಮುಂದೆ ನಿಂದು ನಕ್ಕು ನಲಿಯೆ|
ಅವಳ ರೂಪ ನನ್ನ ರೂಪ|
ರೂಪ ರೂಪ ರೂಪ ರೂಪ|
ಶಾಪವಾಗಿ ತಾಪವಾಯಿತೆ ಹೆಣ್ಣ ಬಾಳಿಗೆ||

ಮಾತು: ನಿನ್ನನ್ನು ನೋಡಿ ಶೂರ್ಪಣಖೆ ನಕ್ಕಳು. ಅವಳನ್ನು ನೋಡಿ ನಾನು ನಕ್ಕೆ. ಎರಡು ನಗುಗಳ ತಾಕಲಾಟದಲ್ಲಿ ನನ್ನ ನಿನ್ನ ಬಾಳಿನ ನಗುವೇ ಕಳೆದುಹೋಯಿತಲ್ಲ. ಅಂದು ಅವಳನ್ನು ನನಗಾಗಿ ದೂಡಿದೆ. ಇಂದೀಗ ಯಾರಿಗಾಗಿ ನನ್ನನ್ನೀ ಕಾಡಿಗೆ ದೂಡಿದೆ . . .ಸ್ವರ್ಣ ಜಿಂಕೆ ಸ್ವರ್ಣಲಂಕೆಯ ನಡುವೆ ನಾವು ಕಳೆದುಕೊಂಡದ್ದೆಲ್ಲವನ್ನು ಅರಸಲು ಅಡವಿಗೆ ಅಟ್ಟಿದೆಯಾ ಅರಸನೆ. ಎಲ್ಲಿ ಆ ಜಿಂಕೆ? ಏನು ಆ ಜಿಂಕೆ? . . .

ರಾಗ: ವೃಂದಾವನ ಸಾರಂಗ, ತಿಶ್ರನಡೆ ಆದಿತಾಳ
ಹಾಡು: ಜಿಂಕೆ ಬಂತು| ಚಿನ್ನದ ಜಿಂಕೆ ಬಂತು|
ಚಂಚಲ ಮನಸಿಜ ಮಾಯೆಯ ಸುಳಿಯಲಿ|
ಲಂಕೆಯ ದಹಿಸಿದ ಜಿಂಕೆ ಬಂತೇ|
ಚಿನ್ನದ ಜಿಂಕೆ ಬಂತೇ|| (ಮೌನ)
[ತಾಳರಹಿತ]
ಮಡದಿ ಮಂಡೋದರಿ ದಾಸಿ ಸರಮೆಯ ನಡುವೆ
ಒಡಲ ಒಲವ ಬೇಡಿದಂಥ
ಹತ್ತು ಮುಖಗಳಾಡಿದಂಥ ನುಡಿಯ ನಡೆಯ ಧಿಕ್ಕರಿಸಿ
ಮುದ್ರೆಯುಂಗುರ ಪಡೆದ ನನಗೆ
ಜಿಂಕೆ ಸಿಗದೇ ಹೋಯಿತು
ರಾಮಾ. . . ರಾಮಾ. . . ಬಣ್ಣದ ಜಿಂಕೆ ಸಿಗದೇ ಹೋಯಿತು||

ಮಾತು: ಹೆಣ್ಣಿನ ಮನದಾಸೆಯ ಬಂಗಾರದ ಜಿಂಕೆಯನ್ನು ನೀನು ತರಲು ಹೋದಾಗ ಮೈದುನ ಲಕ್ಷ್ಮಣ ರಕ್ಷಣೆ ಒದಗಿಸಿದ್ದ. ಪ್ರತಿಭಟಿಸಿದೆ ನಾನು. ಲಕ್ಷ್ಮಣ ರೇಖೆಯನ್ನು ದಾಟಿದ ನನ್ನನ್ನು ಶಿಕ್ಷಿಸಲೆಂದೆ ಅದೇ ಲಕ್ಷ್ಮಣನೊಡನೆ ನನ್ನನ್ನು ಕಾಡಿನಲ್ಲಿ ತ್ಯಜಿಸಿಬರಲು ಹೇಳಿದೆಯಾ ಓ ನನ್ನ ರಾಮಾ. . . ಸೀತೆಯ ಬಾಳಿನ ಋತುಚಕ್ರ ಹೀಗೆ ಮುಗಿಯಿತೇ? ರಾಮಾ ನಾನು ಹೆಣ್ಣು. ಬಸುರಿನ ಭಾರ ನನಗೆ ಭಾರವಲ್ಲ. ಅದು ಸೊಗದ ಹಂದರ. ಅಲ್ಲಿ ಅಶೋಕವನದಲ್ಲೂ ನನ್ನದು ಏಕವ್ಯಕ್ತಿ ಪ್ರದರ್ಶನ. ಇಲ್ಲೀಗ ವಲ್ಮೀಕದ ನೆರಳಿನಲ್ಲೂ ನಾನು ಏಕಾಕಿ. ಅಲ್ಲ . . . ಅಲ್ಲ. . .

ರಾಗ: ಕಾನಡ, ರೂಪಕ ತಾಳ
ಹಾಡು: ರಾಮನೆಂಬ ಪುರುಷ ಶಕ್ತಿ| ಹರುಷದಿಂದ ನೀಡಿದಂಥ|
ಬಸಿರ ಉಸಿರು ಹಸುರಾಗಿಸಲು| ಮನಸು ತುಂಬಿದೆ| ರಾಮ|
ತಾಯ್ತನದ ಕನಸು ತುಂಬಿದೆ | ರಾಮ||

ಮಾತು: ಸಾರ್ವಭೌಮತ್ವದ ಅಶ್ವಮೇಧವನ್ನು ನೀನು ಸಂಕಲ್ಪಿಸಿದರೆ ರಾಮ, ನೀರೆರೆಯಲು ಇನ್ನು ನಿನ್ನ ಬಳಿಗೆ ನಾ ಬರಲಾರೆ. . . ಚಿನ್ನದ ಜಿಂಕೆ ತರಲು ಸೋತು ಚಿನ್ನದ ಲಂಕೆಯನ್ನು ಗೆದ್ದು ಕೈಹಿಡಿದವಳನ್ನು ಅಗ್ನಿಪರೀಕ್ಷೆಗೊಳಪಡಿಸಿದ ನನ್ನ ರಾಮನಿಗೆ. . .

[ಕ್ಷಣ ಕಾಲ ಮೌನ. ತೀವ್ರ ಆಲಾಪನೆ. ಸೀತೆ ಅಗ್ನಿಯ ನಡುವೆ ಇದ್ದಂತೆ]

ರಾಗ: ಕಾನಡ, ಖಂಡಛಾಪು ತಾಳ
ಹಾಡು: ಸುಟ್ಟಿತೇ ಸೀತೆಯ ಕೆನ್ನಾಲಗೆಯ ಸುಳಿ ಸುಳಿ ಸುಳಿ|
ಸುಟ್ಟಿತೇ ಸಂಶಯದ ಮನದಬೇಗುದಿಯ ಒಳಸುಳಿಯ ಬಾಳ ಬೆಂಕಿ||

ಮಾತು: ನನ್ನ ರಾಮನ ಯಜ್ಞ ಸಂಕಲ್ಪಕ್ಕೆ ದಕ್ಕುವವಳು ಈ ಸೀತೆಯಲ್ಲ. ಈ ಜೀವನ ಸಂಗಾತಿಯಲ್ಲ. ಎದೆಬೆಸುಗೆಯ ಜತೆಗಾತಿಯಲ್ಲ. ರಾಮ ನೀನು ಸುಟ್ಟ ಸೀತೆಯ ತ್ಯಜಿಸಿದ ಸಂಗಾತಿಯ ಒಡಲುರಿಯಿಂದ ಕೆಂಪಾದ ಸ್ವರ್ಣ ಸೀತೆ ಮಾತ್ರ..

[ಕುಹೂ . . .ಕುಹೂ. . .ಧ್ವನಿ ರಿಂಗುಣಿಸಿದಾಗ ಭಾರವಾದ ಹೆಜ್ಜೆಯಲ್ಲಿ ಸೀತೆ ಒಳಸರಿಯುತ್ತಿದ್ದಂತೆ]

ರಾಗ: ಕುರಿಂಜಿ, ಆದಿತಾಳ
ಹಾಡು: ಉತ್ತರ ರಾಮಾಯಣದಲಿ ತುಂಬಿದ|
ಪ್ರಶ್ನೆಗಳನುತ್ತರಿಸಲು|
ವಲ್ಮೀಕದಾಳದಲಿ ನೆಲೆನಿಂತ ಸೀತೆ|
ಮತ್ತೆ ಕೇಳಿದಳೆ ವಾಲ್ಮೀಕಿ ಕೋಕಿಲ ಗಾನ|
ಕುಹೂ. . . ಕುಹೂ. . .

ರಾಗ: ಸೌರಾಸ್ಟ್ರ/ಶ್ರೀ, ಆದಿತಾಳ
ಹೆತ್ತು ಅವಳಿಗಳ ರವಿವಂಶ ಬೆಳಗಿಸಿ|
ಮತ್ತೆ ಹಾಡಿದಳೆ ಶುಭಮಂಗಳವ|
ಹುಟ್ಟು ಮಣ್ಣಿನಲಿ| ಕನಸು ಕಾಡಿನಲಿ|
ಕಳೆದ ಬದುಕಿನಲಿ| ಬಸಿರ ಭಾರದಲಿ|
ಸೀತೆಯಾದಳು ಮಾತೆ| ಮಾತೆಗೆ ಶುಭಮಂಗಳ|

Leave a Reply

*

code