ಅಂಕಣಗಳು

Subscribe


 

ನಾಟ್ಯಶಾಸ್ತ್ರ ಗತಿಪ್ರಚಾರದ ಕೆಲವು ಪಾರಿಭಾಷಿಕ ಶಬ್ದಗಳು (ಅಧ್ಯಾಯ 13)

Posted On: Tuesday, April 11th, 2023
1 Star2 Stars3 Stars4 Stars5 Stars (No Ratings Yet)
Loading...

Author: ಏ ಆರ್ ರೋಹಿಣಿ, ಬೆಂಗಳೂರು

ನೂಪುರ ಭ್ರಮರಿ (ರಿ.)  IKS Centre– ಶಾಸ್ತ್ರರಂಗ ಅಧ್ಯಯನ ತರಬೇತಿಯ (Internship/Fellowship) ಅಂಗಭಾಗವಾಗಿ  ಪ್ರಕಟವಾದ ಲೇಖನ – 18

  1. ಉಪವಹನ (ಶ್ಲೋಕ 2):

ವಹ್ ಎಂಬ ಧಾತುವಿಗೆ ಉಪ ಎಂಬ ಉಪಸರ್ಗ ಸೇರಿ ಲ್ಯೂಟ್ ಲಕಾರದಲ್ಲಿ ಉಪವಹನವೆಂದು ರೂಪಗೊಳ್ಳುತ್ತದೆ.  ಮುಂದೆ ಬರಲಿರುವ ಹಾಡಿಗೆ ಹೊಂದಿಕೊಂಡಂತೆ, ಅದಕ್ಕೆ ಸಹಾಯಕವಾಗಿರುವಂತೆ ಮಾಡುವ ಆಲಾಪನೆ.

ಉಪವಹನ ಪೂರ್ವರಂಗ ವಿಧಿಯ ಒಂದು ಭಾಗ. ಆಲಾಪನೆ.

ಉಪವಹನಕ್ಕೆ ವ್ಯಕ್ತಿ, ಭಾವನೆ, ಪರಿಸ್ಥಿತಿ, ಸ್ಥಳ ಹಾಗೂ ಸಂದರ್ಭವನ್ನು ಗಮನಿಸಿಕೊಂಡು ಗತಿ ನಿಗದಿಪಡಿಸಲಾಗುತ್ತದೆ ಎಂದು ಅಭಿನವಗುಪ್ತನು ತಿಳಿಸುತ್ತಾನೆ.

 

  1. ಭಾಂಡವಾದ್ಯ : (ಶ್ಲೋಕ 2) ಭಾಂಡ ಎಂದರೆ ಘಟದಂಥ ವಾದ್ಯ.

ಭಾಂಡ : ನಾ.ಶಾ. 33ನೇ ಅಧ್ಯಾಯದಲ್ಲಿ ಭರತ ಮುನಿಗಳು ಇದರ ಕುರಿತು ವಿವರವಾಗಿ  ಉಲ್ಲೇಖಿಸಿದ್ದಾರೆ. ಪ್ರಾಚೀನ ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಒಂದು ಸಂಗೀತ ವಾದ್ಯ ಎಂದು ನೀಲಮತಪೂರಣದಲ್ಲಿ ಉಲ್ಲೇಖವಿದೆ.

 

  1. ಧ್ರುವಾ : (ಶ್ಲೋಕ 3) ಧ್ರುವಾ ಎಂದರೆ ನಿರಂತರವಾಗಿ ಎಂಬ ಅರ್ಥ.

ವಾಕ್ಯವರ್ಣಾಲಂಕಾರಾ  ಲಯಾ ಯತ್ಯಥ ಪಾಣಯಃ |

ಧ್ರುವಮನ್ಯೋನ್ಯಸಂಬದ್ಧಾ  ಯಸ್ಮಾನ್ತಸ್ಮಾದ್  ಧ್ರುವಾ ಸ್ಮೃತಾ  ||                     (ಅಧ್ಯಾಯ 32, ಶ್ಲೋಕ 8)

ಧ್ರುವಾ ಹಾಡುಗಳಲ್ಲಿ ವಾಕ್ಯ, ವರ್ಣಗಳು, ಅಲಂಕಾರ (ಅಲಂಕಾರಗಳು ನಾಲ್ಕು ವಿಧದ ವರ್ಣಗಳ ಮೇಲೆ ಅವಲಂಬಿತವಾಗಿವೆ, ಇದು ಸಂಗೀತದ ಟಿಪ್ಪಣಿಗಳ (ಸ್ವರ) ನಿರ್ದಿಷ್ಟ ಕ್ರಮ ಅಥವಾ ಅನುಕ್ರಮವಾಗಿದೆ), ಗತಿ (ಲಯ ಮಾದರಿಗಳ ಅನುಕ್ರಮ), ಜಾತಿ ( ಮಧುರ ಪ್ರಕಾರಗಳನ್ನು ಸೂಚಿಸುತ್ತದೆ – ನಾ.ಶಾ. ಅಧ್ಯಾಯ 28) ಪಾಣಿ (ತಾಳದ ಇಪ್ಪತ್ತು ಅಂಶಗಳಲ್ಲಿ ಒಂದನ್ನು ಸೂಚಿಸುತ್ತದೆ – ನಾ.ಶಾ. ಅಧ್ಯಾಯ 28), ತಾಳ ಹಾಗೂ ಲಯ ಪರಸ್ಪರ ಸಂಬಂಧದಲ್ಲಿ (ಧ್ರುವಾ) ಸಾಮರಸ್ಯದಿಂದ ಸ್ಥಿರವಾಗಿದೆ –  ಎಂದು ಅಭಿನವಗುಪ್ತನು ತಿಳಿಸುತ್ತಾನೆ.

ಭರತ ಮುನಿಗಳು ನಾಟ್ಯಶಾಸ್ತ್ರದ 32ನೇ ಅಧ್ಯಾಯ ಧ್ರುವಾವಿಧಾನಂ ಎಂಬಲ್ಲಿ ಇದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.    ಧ್ರುವಾಗಾನವು ಪದ್ಯರೂಪದ, ನಾಟಕಕ್ಕೆ ಅತ್ಯಗತ್ಯವಾದ ಅಂಶವಾದ ರಂಗಗೀತೆಗಳು. ಅವು ನಾಟಕದ ಸಮಯದಲ್ಲಿ ಸಂಗೀತದ ಪಕ್ಕವಾದ್ಯಕ್ಕೆ ರಂಗದ ಮೇಲೆ ನಟರು ಹಾಗೂ ರಂಗಸ್ಥಳದ ಪಾರ್ಶ್ವದಲ್ಲಿ ಗಾಯಕರು ಹಾಡುವ ಹಾಡುಗಳಾಗಿದ್ದವು.

ಅಧ್ಯಾಯ 32 ಶ್ಲೋಕ 482 ರಲ್ಲಿ ಭರತ ಮುನಿಗಳು ಧ್ರುವಾಗಾನದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಹೀಗೆ ಹೇಳುತ್ತಾರೆ:    

  ಯಥಾ ವರ್ಣಾಧೃತೆ ಚಿತ್ರಂ ಶೋಭತೆ  ನ ನಿವೇಶನಮ್ |

    ಏವಮೇವಂ ವೀಣಾಗಾನಂ ನಾಟ್ಯಂ ರಾಗಂ ನ ಗಚ್ಛತಿ ||

ಅಂದರೆ “ಸುಸಜ್ಜಿತವಾದ ವಾಸಸ್ಥಾನವು ಬಣ್ಣವಿಲ್ಲದೆ ಸುಂದರವಾಗರುವುದಿಲ್ಲವೋ, ಹಾಗೆಯೇ ಹಾಡಿಲ್ಲದೆ ನಾಟಕವು ಸಂತೋಷವನ್ನು ನೀಡುವುದಿಲ್ಲ”.

 

  1. ಕಲಾ: (10 ನೇ ಶ್ಲೋಕದಲ್ಲಿ ಆರಂಭವಾಗುತ್ತದೆ)

ಇಲ್ಲಿ ಕಲಾ ಎಂದರೆ ಲಯ ಮತ್ತು ಸ್ಥಾನಾವಕಾಶದ ತಾಲಪ್ರಮಾಣ** ಎಂದು ವಿವೇಚಿಸಲಾಗಿದೆ.

ಕಳೆ /ಕಲಾ ಎಂಬುದಕ್ಕೆ ನಾಟ್ಯಶಾಸ್ತ್ರದಲ್ಲೇ ಹಲವು ಬಗೆಯ ವಿವರಣೆಗಳು ದೊರಕುತ್ತವೆ. ಆ ಪೈಕಿ ಮೊದಲನೆಯ ಐದು ನಿಮೇಷಗಳು (ನಿಮೇಷ : ಕಣ್ಣು ಮಿಟುಕಿಸುವುದರ ಮೂಲಕ ಅಳೆಯಲಾದ ಸಮಯದ ಒಂದು ಸಣ್ಣ ಘಟಕ) ಕೂಡಿಬಂದರೆ ಒಂದು ಮಾತ್ರಾ. ಮಾತ್ರಾಗಳು ಕೂಡಿಬಂದರೆ ಕಲಾ ಎಂಬುದಾಗಿ ಯಕ್ಷಮಾರ್ಗಮುಕುರದಲ್ಲಿ ಸಂಶೋಧಕರಾದ ಡಾ. ಮನೋರಮಾ ಬಿ.ಎನ್ ಅವರು (ಅಧ್ಯಾಯ 6, ಪುಟ 437) ತಿಳಿಸುತ್ತಾರೆ.

ಉತ್ತಮ ಪಾತ್ರಗಳು ಅಂದರೆ ರಾಜ ಹಾಗೂ ದೇವತೆಗಳಿಗೆ ಚತುಷ್ಕಳೆ, ಮಧ್ಯಮ ಶ್ರೇಣಿಯ ಪಾತ್ರಗಳಿಗೆ ದ್ವಿಕಳೆ ಹಾಗೂ ನೀಚ ಪಾತ್ರ – ಸ್ತ್ರೀ ಹಾಗೂ ಸಾಮಾನ್ಯ ಮನುಷ್ಯರ ಪಾತ್ರಕ್ಕೆ ಏಕಕಳೆ ಎಂದು ಗತಿಪ್ರಚಾರದ ನಿಯಮ[1].

**ತಾಲಪ್ರಮಾಣ : ತಾಲ ಅಂದರೆ ಅಂಗುಷ್ಠ ಹಾಗೂ ಮಾಧ್ಯಮ ಬೆರಳುಗಳ ನಡುವಿನ ಮಾಪನ

 

  1. ಪಾರ್ಶ್ವಕ್ರಾಂತಾ ಚಾರಿ : (ನಾಟ್ಯಶಾಸ್ತ್ರ, ಅಧ್ಯಾಯ 11, ಶ್ಲೋಕ 32 )

ಪಾದ, ಮೊಣಕಾಲು ಹಾಗೂ ಸೊಂಟದ ಕ್ರಿಯಾತ್ಮಕ ಚಲನೆಗಳನ್ನು ಚಾರಿ ಎನ್ನುತ್ತಾರೆ. ನಿಯಮಗಳಿಂದ ಕೂಡಿರುವ ಮತ್ತು ಪರಸ್ಪರ ಅಂಗಗಳನ್ನು ಆಶ್ರಯಿಸುವ ಕಾರಣ ಚಾರಿಗಳನ್ನು ವ್ಯಾಯಾಮಗಳೆಂದು ಅಭಿನವಗುಪ್ತನು ಪರಿಗಣಿಸುತ್ತಾನೆ. ಭೂಮಿಯಿಂದ ಕಾಲುಗಳನ್ನು ಮೇಲೆತ್ತಿ ಚಲಿಸುವ ಪ್ರಕಾರಗಳನ್ನು ಆಕಾಶ ಚಾರಿ / ನಭಶ್ಚಾರಿ / ವ್ಯೋಮ ಚಾರಿಗಳೆನ್ನುತ್ತಾರೆ. ಇವುಗಳು 16 ಬಗೆ. ಪಾರ್ಶ್ವಕ್ರಾಂತಾ ಚಾರಿ 3ನೇ ಚಾರಿ .ಇದರ ಲಕ್ಷಣ ಹೀಗಿದೆ:

ಕುಂಚಿತಂ ಪಾದಮುತ್ಕ್ಷಿಪ್ಯ ಪಾರ್ಶ್ವೇನೋತ್ಪತನಂ ನ್ಯಸೇತ್  |

ಉದ್ಘಟ್ಟಿತೇನ ಪಾದೇನ ಪಾರ್ಶ್ವಕ್ರಾಂತಾ ವಿಧೀಯತೇ||

ತಾತ್ಪರ್ಯ : ಕುಂಚಿತ ಪಾದವನ್ನು ಮೇಲಕ್ಕೆ ಎತ್ತಿ ನಂತರ ಇನ್ನೊಂದು ಪಾದದ ಮಂಡಿಯಮೇಲೆ ತಂದು ತದನಂತರ ಪಾದವನ್ನು ಪಾರ್ಶ್ವಕ್ಕೆ (ಹಿಮ್ಮಡಿಯನ್ನು) ಉದ್ಘಟ್ಟಿತದಲ್ಲಿ ಇಡುವುದು. ಈ  ಚಾರಿಯನ್ನು ಪಾರ್ಷ್ಣಿಚಂಡಘಾತವೆಂದೂ ಕರೆಯಲಾಗುತ್ತದೆ (ಕೀರ್ತಿಧರನು  ನೃತ್ತರತ್ನಾವಳಿಯಲ್ಲಿಯೂ ತಿಳಿಸಿದ್ದಾನೆ). ಭರತನಾಟ್ಯದ ವಿಶ್ರು ಅಡವುವಿನಲ್ಲಿ ಈ ರೀತಿಯಾದ ವಿನ್ಯಾಸದ ಹೋಲಿಕೆ ಇರುವುದರಿಂದ ಈ ಅಡವು ಪಾರ್ಶ್ವಕ್ರಾಂತಚಾರಿಯ ಗತಿರೂಪವೆಂದು ಕರೆಯಲು ಅರ್ಹವಾದಂಥದ್ದು ಎಂಬುದಾಗಿ ಡಾ. ಮನೋರಮಾ ಅವರು ಉಲ್ಲೇಖಿಸಿದ್ದಾರೆ[2].

 

6. ಅತಿಕ್ರಾಂತಾ ಚಾರಿ : (ನಾಟ್ಯಶಾಸ್ತ್ರ, ಅಧ್ಯಾಯ 11, ಶ್ಲೋಕ 30) ಆಕಾಶಚಾರಿಗಳಲ್ಲಿ ಇದು ಮೊದಲನೆಯದ್ದಾಗಿದೆ. ಇದರ ಲಕ್ಷಣ ಹೀಗಿದೆ :

     ಕುಂಚಿತಂ ಪಾದಮುತ್ಕ್ಷಿಪ್ಯ  ಪುರತಃ ಸಂಪ್ರಸಾರಯೇತ್ |

ಉತ್ಕ್ಷಿಪ್ಯ ಪಾತಯೇಚ್ಚೈನಂ  ಅತಿಕ್ರಾಂತಾ ತು ಸಾ ಸ್ಮೃತಾ ||

ತಾತ್ಪರ್ಯ: ಕುಂಚಿತ ಪಾದವನ್ನು ಎತ್ತಿ, ಮುಂದಕ್ಕೆ ಚಾಚಿ ನೆಲದಲ್ಲಿ ಪತನ ಮಾಡುವುದು. ಅತಿಕ್ರಾಂತಾಚಾರಿ ಎಂದರೆ ಉಲ್ಲಂಘಿಸಲ್ಪಟ್ಟ, ವಿಸ್ತರಿಸಲ್ಪಟ್ಟ, ಆಕ್ರಮಣ, ಮೀರಿದ, ದಾಟುವುದು ಎಂಬ ಅರ್ಥ. ಹಸ್ತಕರಣದೊಂದಿಗೆ ಈ ಚಾರಿಯನ್ನು ಪ್ರಯೋಗಿಸಿದಾಗ ಕರಣವಾಗುತ್ತದೆ. ಈ ಚಾರಿಯನ್ನು ಶೃಂಗಾರ ಸನ್ನಿವೇಶಗಳಲ್ಲಿ ಪಾತ್ರಪ್ರವೇಶದ ಸಮಯದಲ್ಲಿ ಬಳಸಬಹುದೆಂಬುದನ್ನು ನಾಟ್ಯಶಾಸ್ತ್ರದ ಗತಿಪ್ರಚಾರ ಅಧ್ಯಾಯದಿಂದ ತಿಳಿದುಬರುತ್ತದೆ[3].

 

7. ಆವಿದ್ಧಾ ಚಾರಿ – (ನಾಟ್ಯಶಾಸ್ತ್ರ, ಅಧ್ಯಾಯ 11, ಶ್ಲೋಕ 38) : ಆಕಾಶಚಾರಿಗಳಲ್ಲಿ ಇದು ಒಂಬತ್ತನೆಯದ್ದಾಗಿದೆ. ಇದರ ಲಕ್ಷಣ ಹೀಗಿದೆ :

ಸ್ವಸ್ತಿಕಸ್ಯಾಗ್ರತಃ ಪಾದಃ ಕುಂಚಿತಸ್ತು ಪ್ರಸಾರಿತಃ |

          ನಿಪತೇದಂಚಿತಾವಿದ್ಧ ಆವಿದ್ಧಾ ನಾಮ ಸಾ ಸ್ಮೃತಾ ||

ತಾತ್ಪರ್ಯ: ಸ್ವಸ್ತಿಕ ಸ್ಥಾನದಿಂದ ಪಾದವನ್ನು ಮುಂದಕ್ಕೆ  ಕುಂಚಿತದಲ್ಲಿ ವಿಸ್ತರಿಸಿ ತ್ವರಿತಗತಿಯಲ್ಲಿ  ಭೂಮಿಯ ಮೇಲೆ ಪತನ ಮಾಡುವುದು.ಆವಿದ್ಧಾ ಎಂದರೆ ತೂಗಾಡುವುದು (sway / swing), ಹೊಡೆತ (struck) ಎಂಬ ಅರ್ಥ. ಒಂದು ಪಾದವನ್ನು ನೆಲದಮೇಲಿಟ್ಟು ಇನ್ನೊಂದು ಪಾದವನ್ನು ಒಳತರುವುದು, ವಿಸ್ತರಿಸುವುದು ಹೀಗೆ ಉದ್ದತ  ಚಲನೆಯಲ್ಲಿರುವುದು ಎಂದು ನಾಟ್ಯಶಾಸ್ತ್ರವು ಬೇರೆ ಬೇರೆ ಸನ್ನಿವೇಶಗಳಲ್ಲಿ ತಿಳಿಸುತ್ತದೆ ಎಂಬುದು ಯಕ್ಷಮಾರ್ಗಮುಕುರದಿಂದ ತಿಳಿದುಬರುತ್ತದೆ[4].

 

8. ಆಕ್ಷಿಪ್ತಾ ಚಾರಿ (ನಾಟ್ಯಶಾಸ್ತ್ರ, ಅಧ್ಯಾಯ 11,  ಶ್ಲೋಕ 37) : ಆಕಾಶಚಾರಿಗಳಲ್ಲಿ ಇದು ಎಂಟನೆಯದ್ದಾಗಿದೆ. ಇದರ ಲಕ್ಷಣ ಹೀಗಿದೆ :

              ಕುಂಚಿತಂ ಪಾದಾಮುತ್ಕ್ಷಿಪ್ಯ ಆಕ್ಷಿಪ್ಯ ತ್ವಂಚಿತಂ ನ್ಯಸೇತ್ |            ಜಂಘಾಸ್ವಸ್ತಿಕಸಂಯುಕ್ತಾ ಚಾಕ್ಷಿಪ್ತಾ ನಾಮ ಸಾ ಸ್ಮೃತಾ ||

ತಾತ್ಪರ್ಯ: ಕುಂಚಿತಪಾದವನ್ನು ಮೇಲಕ್ಕೆತ್ತಿ ನೇರವಾಗಿಸಿ ಹಿಮ್ಮಡಿಯನ್ನು ಅಂಚಿತದಲ್ಲಿಟ್ಟು ಮೊಣಕಾಲನ್ನು ಸ್ವಸ್ತಿಕದಲ್ಲಿ (ಜಂಘಾಸ್ವಸ್ತಿಕ) ಇರಿಸುವುದು. ನಾಟ್ಯಶಾಸ್ತ್ರದ ಕರಣಾಧ್ಯಾಯದಲ್ಲಿ ಆಕ್ಷಿಪ್ತಾ ಪಾದವನ್ನು ಎತ್ತುವುದು,ಒಳಗೆಸೆಯುವುದು,ಎಂಬ ಅರ್ಥದಲ್ಲಿ ಬಳಸಲ್ಪಟ್ಟಿದೆ. ಆಕ್ಷಿಪ್ತಾ ಚಾರಿಯನ್ನು ಅಭಿನವಭಾರತಿಯು ಈ ರೀತಿಯಾಗಿ ಉಲ್ಲೇಖಿಸುತ್ತದೆ – ಒಂದು ಪಾದವನ್ನು ಮೂರು ತಾಲಗಳಷ್ಟು ಅಂತರದಲ್ಲಿ ಅರ್ಧಮಂಡಲದಲ್ಲಿ ಎತ್ತಿ  ಒಳಬರುತ್ತಾ   ಪಾರ್ಶ್ವದಲ್ಲಿ ಚಾಚಿ ಸ್ವಸ್ತಿಕವನ್ನು ಮಾಡುತ್ತ ಹಿಮ್ಮಡಿಯನ್ನು ನೆಲದ ಮೇಲೆ  ಪತನಮಾಡುವುದು[5].

 

9. ಸೂಚೀ ಚಾರಿ : (ನಾಟ್ಯಶಾಸ್ತ್ರ, ಅಧ್ಯಾಯ 11, ಶ್ಲೋಕ 34) : ಆಕಾಶಚಾರಿಗಳಲ್ಲಿ ಇದು ಐದನೇಯದ್ದಾಗಿದೆ. ಲಕ್ಷಣ :

ಕುಂಚಿತಂ ಪಾದಮುತ್ಕ್ಷಿಪ್ಯ ಜಾನೂರ್ಧ್ವಂ ಸಂಪ್ರಸಾರಯೇತ್  |    ಪಾತಯೇಚ್ಚಾಗ್ರಯೋಗೇನ ಸಾ ಸೂಚೀ ಪರಿಕೀರ್ತಿತಾ ||

ತಾತ್ಪರ್ಯ: ಕುಂಚಿತಪಾದವನ್ನು ಮಂಡಿಯವರೆಗೆ  ಎತ್ತಿ ಮುಂದಕ್ಕೆ ಚಾಚಬೇಕು. ನಂತರ ಕಾಲನ್ನು ನೆಲದಮೇಲೆ ಇಡುವಾಗ ಹೆಬ್ಬೆರಳನ್ನು ಭೂಮಿಯ ಮೇಲೆ ಊರಬೇಕು.सूच + णिच् ( ಸ್ತ್ರೀ) ಸೂಜಿ ಎಂಬ ಅರ್ಥ. ಸೂಚೀಪಾದಭೇದವನ್ನು ಚಲನೆಯೊಂದಿಗೆ ಮಾಡಿದಾಗ ಸೂಚೀ ಚಾರಿಯಾಗುತ್ತದೆ. ಇದು ಅತಿಕ್ರಾಂತಾ ಚಾರಿಯನ್ನು ಕೆಲವೊಂದು ಲಕ್ಷಣಗಳಲ್ಲಿ ಹೋಲುತ್ತದೆ[6].

 

10. ಏಲಕಾಕ್ರೀಡಿತ / ಏಡಕಾಕ್ರೀಡಿತ ಚಾರಿ ( (ನಾಟ್ಯಶಾಸ್ತ್ರ,ಅಧ್ಯಾಯ 11, ಶ್ಲೋಕ 21) : ಭೂಮಿಯಿಂದ ಕಾಲೆತ್ತದೆ ಮಾಡುವ ಚಲನೆಗಳ ವಿಭಾಗವೇ ಭೌಮೀ ಚಾರಿ. ಇವು 16 ಬಗೆ. ಏಡಕಾಕ್ರೀಡಿತ ಚಾರಿ 7ನೇ ಬಗೆ.ಲಕ್ಷಣ :

ತಲಸಂಚರಪಾದಭ್ಯಾಮುತ್ಪ್ಲುತ್ಯ ಪತನಂ ತು ಯತ್ |

     ಪರ್ಯಾಯತಶ್ಚ ಕ್ರಿಯತೇ ಏಡಕಾಕ್ರೀಡಿತಾ ತು ಸಾ ||

ತಾತ್ಪರ್ಯ: ಅಗ್ರತಲಸಂಚರದಲ್ಲಿ ಮೃದುವಾದ ಪ್ಲುತಿಯನ್ನು (jump)ಮಾಡುತ್ತಾ ಮೇಲೆ ಕೆಳಗೆ ಪಾದಗಳು ಇಟ್ಟು ನಡೆಯುವುದು.  ಏಡಕಾ ಎಂದರೆ ಹೆಣ್ಣು ಕುರಿ. ಕ್ರೀಡಿತ ಎಂದರೆ ಕ್ರೀಡೆ. ಈ ಚಾರಿಯು ಕುರಿಯ ಗತಿಯನ್ನು ಸೂಚಿಸುತ್ತದೆ. ಈ ಚಾರಿಯನ್ನು ಹೆಚ್ಚಾಗಿ ಜಾನಪದ ನೃತ್ಯ ಶೈಲಿಯಲ್ಲಿ ಹಾಗೂ ಚಲನಚಿತ್ರದಲ್ಲಿ ಬರುವ ನೃತ್ಯ ಸಂಯೋಜನೆಗಳಲ್ಲಿ ಕಾಣಬಹುದು. ಈ ನೃತ್ಯಗಳನ್ನು  ಔಪಚಾರಿಕ ತರಬೇತಿ (formal training) ಇಲ್ಲದೆ ಮಾಡಬಹುದಾದಂತಹ ರೀತಿಯದ್ದಾಗಿದೆ[7]. ಉದಾ: ಕೊರವಂಜಿಯು ದಂಡ ಹಿಡಿದು ನರ್ತಿಸುವಾಗ, ಚಲನಚಿತ್ರದಲ್ಲಿ ಲಲನೆಯರು ಜಡೆ, ಸೀರೆಯ ಸೆರಗನ್ನು ಹಿಡಿದು ನರ್ತಿಸುವಾಗ ಈ ಚಾರಿ ಕಂಡುಬರುತ್ತದೆ.

 

ಪೂರಕ ಉಲ್ಲೇಖಗಳು

[1]  ನಾಟ್ಯಶಾಸ್ತ್ರ, ಮಧುಸೂದನ್ ಶಾಸ್ತ್ರಿ, ಅಧ್ಯಾಯ 12,  ಪುಟ. 1027

[2] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 339

[3] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 333

[4] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 348

[5] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 347

[6] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 343

[7] ಯಕ್ಷಮಾರ್ಗಮುಕುರ, ಡಾ. ಮನೋರಮಾ ಬಿ. ಎನ್. ಅಧ್ಯಾಯ 5, ಚಾರಿಕ್ರಮ, ಪುಟ 292

Leave a Reply

*

code