ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು (ಭಾಗ ೭)

Posted On: Friday, October 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ಒಂದು ಪ್ರದರ್ಶನ ಕಾಲದ ಸಂದಿಗ್ಧ ಸನ್ನಿವೇಶದಲ್ಲಿ ಏಕವ್ಯಕ್ತಿಯಿಂದ ನಡೆವ ಕ್ರಿಯೆಯಲ್ಲಿ ಜಾಗರೂಕ ಪ್ರಜ್ಞೆ ಮುಖ್ಯವಾಗಿದೆ. ಕಲಾಗಾರನಿಗೂ ಅವನಿದಿರು ಕುಳಿತ ಪ್ರೇಕ್ಷಕನಿಗೂ ಇರುವ ಬಾಂಧವ್ಯದಲ್ಲಿ, ಅವನ ವಿಚಾರದಲ್ಲೇ ಆಗಲಿ ಅಥವ ಕಲೆಯ ವಿಚಾರದಲ್ಲೇ ಆಗಲಿ ಒಂದು ತರದ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಉದಾ : ಒಬ್ಬ ಕೊಲೆಗಡುಕನು ಕೆಲಬಾರಿ ಜೀವನದ ಸಿಹಿ ಅನುಭವವನ್ನು ಮನಸ್ಸಿಗೆ ತಂದು ತೃಪ್ತಿಪಡುತ್ತಾನೆ. ಕಾರಣ-ಇಂತಹ ಯೋಚನೆಗಳು ಅವನ ಮನಸ್ಸಿಗೆ ಬಂದಾಗ ಸ್ವಲ್ಪ ಮಟ್ಟಿಗೆ ಆತನನ್ನು ನಗುವಿನಲ್ಲಿ ಹೊಸ ರೂಪ ಕೊಟ್ಟಿರಲೂಬಹುದು. ಆದರೆ ಕಲಾವಿದನು ದೂರದಲ್ಲಿದ್ದರೆ ಪರಸ್ಪರ ದೃಷ್ಟಿಗೆ ಆ ತರದ ಕೂಡುವಿಕೆ ಕಳಚಿ ಹೋಗುತ್ತದೆ. ಕಲಾಗಾರನ ಮುಖದ ಮೇಲಿನ ಭಾವನೆಯಾಗಲೀ, ಅವುಗಳ ಬದಲಾವಣೆಯಾಗಲೀ ಕಣ್ಣಿಗೆ ಕಾಣಿಸದಷ್ಟು ದೂರವಿದ್ದರಂತೂ ಇನ್ನೂ ಕಷ್ಟ. ಅದೂ ಸಾಲದೆ ತೆಲುಗು ಅಥವಾ ತಮಿಳು ಭಾಷೆಯ ಸಂಪೂರ್ಣ ಅರಿವು ಪ್ರೇಕ್ಷಕನಿಗೆ ಇರುವುದು ಕಡಿಮೆ.
ನಮ್ಮಲ್ಲಿ ಪದವರ್ಣಗಳು, ಪದಾಭಿನಯಗಳು, ಕೆಲಬಾರಿ ಜಾವಳಿಗಳೂ ಇವೆ. ಜಾವಳಿಗಳಾದರೋ ಕನ್ನಡದಲ್ಲಿ ಕೆಲವಿವೆ. ಉಳಿದುದನ್ನು ಅರ್ಥ ತಿಳಿದು ಅಭಿನಯಿಸುವವರು ಕಡಿಮೆ. ತೆಲುಗು ಅಥವಾ ತಮಿಳು ವರ್ಣಗಳಿಗೆ ತೀರಾ ಸಾಮಾನ್ಯವಾದ ಸನ್ನಿವೇಶಗಳನ್ನು ನೀಡಿ ತೃಪ್ತಿ ಹೊಂದುವವರಿದ್ದಾರೆ. ಕೆಲವೊಮ್ಮೆ ತಾವು ಹಿಂದೆ ಮಾಡಿದ ಅಥವಾ ಇತರರು ಮಾಡಿದ ಅನುಭವ ಅಥವಾ ಪ್ರತಿಕೃತಿಯನ್ನು ಸೇರಿಸಿ ಮುಗಿಸುತ್ತಾರೆ. ಪದವರ್ಣ ಹಾಗೂ ಪದಾಭಿನಯಗಳೂ ನಮ್ಮಲ್ಲಿ ಅತ್ಯಲ್ಪ. ಇಂದಿಗೂ ನಮ್ಮ ನಡುವಿನಲ್ಲಿ ವರ್ಣ ಅಥವಾ ಅಭಿನಯಗಳಿಗೆ ಸಂಗೀತ ಹಾಗೂ ನಾಟ್ಯಸಂಬಂಧಿಯಾದ ಕೃತಿ ರಚಿಸುವವರು ಬಹಳ ಕಡಿಮೆ.
ಸಾಧಾರಣವಾಗಿ ರಂಗಸ್ಥಳದಲ್ಲಿ ನಾಟ್ಯವು ಹೇಳಿ ತಿಳಿಸುವುದು- ಒಂದು ಗಂಡು ಹೆಣ್ಣಿನ ಅಂತರ್ಭಾವವನ್ನು. ಭರತನಾಟ್ಯದ ನಾಯಿಕಾ ಒಂದು ನಿರಾಡಂಬರದ ಲಾಲಿತ್ಯ ಲಾವಣ್ಯದಿಂದ ಕೂಡಿರುವವಳು. ತನ್ನ ಮನದಿಚ್ಚಿಸಿದ ವರನಿಗಾಗಿ ತನ್ನನ್ನೂ ಅಲಂಕಾರಗೊಳಿಸುವವಳು ; ಅವಳ ಮನಸಿನಲ್ಲೆದ್ದ ಭಾವನೆಗಳು ಹಲವಾರು ರೀತಿಗಳಲ್ಲಿದೆ; ಅವನನ್ನು ಕಾಣಲು ಹೋಗುವಳು; ಮನ್ಮಥನ ಬಾಣಗಳಿಂದಾಗುವ ಮನಸ್ಸಿನ ನೋವು, ಸಂಕಟ, ಆತ ಇನ್ನೊಂದು ಸ್ತ್ರೀಯಲ್ಲಿ ಅನುರಕ್ತನಾದಾಗ ಅವಳಿಗಾಗುವ ಕಸಿವಿಸಿ ; ನಾಯಕನು ಪುನಃ ಮನೆಗೆ ಬಂದಾಗ ಖಂಡಿಸಿ ಮಾತನಾಡಿ, ಕೊನೆಗೆ ಅದಕ್ಕಾಗಿ ಕೊರಗಿ, ಅವನನ್ನೂ ಒಲಿಸಿ ತಾನೂ ಒಲಿದು ತೃಪ್ತಿ-ಸಮಾಧಾನಗೊಳ್ಳುವವಳು.
ಆದರೆ ಇಂದು, ನರ್ತಕಿಯರು ತಾಳಾವರ್ತವನ್ನು ಹೊಂದಲಾರದೆ ಕಷ್ಟಪಡುತ್ತಿದ್ದರೂ, ನಾಟ್ಯದ ಇತರ ಭಾವಗಳಲ್ಲಿ ತಾವು ಮೆರೆಯದಿದ್ದರೂ ನಾಲ್ಕು ಜನರು ತಮ್ಮ ನಡೆಯನ್ನು ಕಂಡು ಸಂತೋಷ ಪಡುತ್ತಿದ್ದಾರಲ್ಲ ಎಂಬ ಹುಮ್ಮಸ್ಸು ಸೇರಿದಾಗ ಬರಿಯ ಆಂಗಿಕದ ಜತಿ ನಿರೂಪಣೆಯಲ್ಲೇ ನಮ್ಮ ಕಲೆ ಮುಂದುವರಿಯುತ್ತದೆ. ಈ ರೀತಿ ಭರತನಾಟ್ಯ ಮೆರೆಯಬೇಕೇ? ನೃತ್ಯವೆಂದರೆ ಬರಿಯ ಹಾರುವಿಕೆ ಮತ್ತು ಅಂಗಗಳ ನಡೆಗಳಲ್ಲಿಯೇ ನೃತ್ಯ ಪ್ರದರ್ಶನ ಮುಗಿಯಬೇಕೇ?
ನೋಡುತ್ತೇವೆ-ಹಾಲ್‌ನಲ್ಲೂ ಜನ ತುಂಬಿದ್ದಾರೆ. ನೃತ್ಯ ನೋಡಲು ಬಂದ ಅನೇಕರಿಗೆ ಅಲ್ಲಿ ಕುಳಿತಿರಲೂ ಜಾಗವಿಲ್ಲ. ಆದರೂ ನಿಂತು ನೋಡುತ್ತಾರೆ. ಪ್ರಥಮ ಬಾರಿಗೆ ಬಾಲಕಿ ರಂಗದ ಮೇಲೆ ಬಂದಿದ್ದಾರೆ. ಎರಡು ನಿಮಿಷಗಳಲ್ಲಿ ನಮ್ಮ ಕಣ್ಣು ತೆರೆದಿದೆ. ಆದರೆ ಅಲ್ಲಿ ಕಾಣುತ್ತಿದ್ದದ್ದು ಭರತನಾಟ್ಯದ ಮಹತ್ತರ ಸೋಲನ್ನು. ಕಾರಣ, ಮೊದಲಿನಿಂದ ಕೊನೆಯ ವರೆಗೂ ಆ ಬಾಲಕಿ ಮಾಡಿದ್ದದು ಡೊಂಬರಾಟವನ್ನು ಮಾತ್ರ !
ಸ್ಟೇಜಿನ ಮೇಲೆ ಕುಳಿತಿದ್ದಾರೆ- ದೊಡ್ಡ ವ್ಯಕ್ತಿಗಳು. ಕಾಣಿಸಿದ್ದು ಕೆಟ್ಟದಾದರೂ ಮುಖದಲ್ಲಿ ಮುಗುಳುನಗೆಯಿಂದ, ಬಾಯಿಮಾತಿನಿಂದ ಇಂಥ ಗೌರವಯುತ ಸಭೆಗೆ ತಾವು ಬಂದದ್ದು ನಮ್ಮ ಪುಣ್ಯ ಎಂದು ತಮ್ಮ ಮಾನ ಹಾಗೂ ಪ್ರದರ್ಶನದ ಯೋಗ್ಯತೆಯನ್ನು ಮುಚ್ಚಿಡುತ್ತಾರೆ. ದೊಡ್ಡ ಮನುಷ್ಯರೂ ಹೊಗಳಿ ಹೊಗಳಿ ತೆರೆಮರೆಗೆ ಹೋಗುತ್ತಾರೆ. ಗುರುಗಳ ಮನ್ನಣೆ ಇತ್ಯಾದಿ ನಿರಾತಂಕವಾಗಿ ನಡೆಯುತ್ತದೆ. ಪೋಟೋಗ್ರಾಫರ್ ಕೆಲಬಾರಿ ನಮ್ಮ ದೃಷ್ಟಿಯ ಮುಂದೆ ಕ್ಲಿಕ್ಕಿಸುತ್ತಾರೆ. ನಾವು ಕಾಣುವುದು ಅವರ ನರ್ತನಲೀಲೆಯನ್ನು ಎನ್ನುವಂತೆ ಕೆಲವು ವಿಮರ್ಶೆ ಬರೆದುಕೊಳ್ಳುತ್ತಾರೆ.
ಅಂದಿನ ಕಾಲಕ್ಕೆ ಗುರುಗಳೆನಿಸಿಕೊಂಡರೂ ತಾವು ನರ್ತಿಸದಿದ್ದರೂ ವಿದ್ಯಾರ್ಥಿಗಳಿಗೆ ವಿಷಯವನ್ನು ಬುಡಸಮೇತ ಹೇಳಿಕೊಡುತ್ತಿದ್ದರು. ತಮ್ಮಿದಿರು ಬೇರೆ ವಿದ್ಯಾರ್ಥಿಯನ್ನು ಕರೆಸಿ ಅವರಿಂದ ಮಾಡಿಸಿದರೂ ವಿದ್ಯಾಥಿಯ ರೂಪಕ್ಕೆ, ದೇಹಕ್ಕೆ, ವಯಸ್ಸಿಗೆ ತಕ್ಕಂತೆ ಹೊಂದುವ ಬಗೆಯಿತ್ತು. ಆದರೆ ಇಂದು ತಮ್ಮ ಗುರುಗಳಂತೆ, ಉತ್ತಮ ನಾಟ್ಯಪ್ರಕಾರದ ಬದಲಿಗೆ ಹಾಸ್ಯಾಸ್ಪದ ವ್ಯಕ್ತಿಗಳಾಗಿ ನರ್ತಿಸುವವರು ಕಾಣಿಸುತ್ತಾರೆ. ನಟುವಾನ್ನಾರ್‌ಗಳಿಂದ ಕಲಿತು ಲಾಭ ಪಡೆದವರು ಇಂದು ಇದಿರಿಗೆ ನೆಲದ ಮೇಲೆ ಚಾಪೆ ಹಾಕಿ ಕುಳಿತಿದ್ದಾರೆ. ದುಡ್ಡು ಮುಂದಕ್ಕೆ ಬಾರದೇ ಹೋದೀತು-ಎಂಬ ಭಯದಲ್ಲಿ ಶಿಕ್ಷಕರು ಆದಷ್ಟು ಬೇಗ ಮಕ್ಕಳಿಗೆ ನಾಲ್ಕು ಹೆಜ್ಜೆ ಕಲಿಸಿಕೊಡುತ್ತಾರೆ. ಹೊಸ ಡ್ರೆಸ್ಸು, ಉತ್ತಮ ಗುರುಗಳು-ಕಲಾವಿದರು, ಸಮಾಜದ ಪ್ರತಿಷ್ಟಿತ ವ್ಯಕ್ತಿಗಳ ಸಮ್ಮುಖದಲ್ಲಿ ತಾವು ನರ್ತನವಾಡುವ ಸುಯೋಗವನ್ನು ಬಿಡುವ ಮಕ್ಕಳು ಇದ್ದಾರೆಯೇ? ಏನೆಲ್ಲ ಕಲಿಸಿದರು ಎಂಬ ಪ್ರಶ್ನೆಯಿಲ್ಲ. ಜೊತೆಗೆ ಅವರಲ್ಲೂ ಸೌಂದರ್ಯವೇನೆಂಬ ಅರಿವು ಇರಲಾರದು. ಆದರೆ ಗುರುಗಳು ಹೇಳಿದ ಮೇಲೇನು? ಕಂಡಂತೆ ಮಾಡುವುದು, ಹೇಳಿದಂತೆ ಕುಣಿಯುವುದು-ಇವೆಲ್ಲಾ ಅವರ ಜೀವನವನ್ನು ಬೆಳಗಿಸುವ ಅಂಶಗಳಾಗಿವೆ !
ಸೃಷ್ಟ್ಯಾತ್ಮಕ ವ್ಯಕ್ತಿಗಳಾಗುವ ಮೊದಲೇ ನಮ್ಮ ಶಿಕ್ಷಕರು ಹೊಸ ಬಗೆ ಬೇಕು ಎಂಬ ಉದ್ಗಾರ ತೆಗೆಯುತ್ತಿರುವುದರಿಂದಲೇ ನಮ್ಮ ಜನರಲ್ಲಿ ಒಂದು ಮಾರಾಟದ ಸ್ಥಿತಿ ಕಾಣಿಸುತ್ತಿದೆ ! ಹಾಗಂತ ಅವರು ಹೇಳುವುದು ಅಲ್ಲವೆಂದಲ್ಲ. ಪ್ರತಿಯೊಂದು ಬಾರಿ ತಾವು ನರ್ತಿಸುತ್ತಿದುದ್ದನ್ನೇ ಬದಲಾಯಿಸದಿದ್ದರೆ, ಅದು ಸತ್ತ್ವವನ್ನೇ ಕಳಕೊಂಡಿದೆ ಎಂಬ ಸ್ಥಿತಿ ಇಂದಿನದು.
ಕಲೆಯಲ್ಲಿ ಸ್ವತಂತ್ರಕಲ್ಪನಾ ಶಕ್ತಿ ಬಾರದಿರಲು ಕಾರಣ-ಬಹುಪಾಲು ಕಲಾವಿದರೆನಿಸಿಕೊಂಡವರಿಗೆ ಸಂಗೀತದ ಲಕ್ಷಣಗಳೇ ತಿಳಿಯದಿರುವುದು. ಸಂಗೀತ ಜ್ಞಾನ ಜತೆಗಿದ್ದರೆ ನರ್ತಕಿಯು ತನ್ನ ಅಭಿನಯದ ಕೈಕಾಲು ನಡೆಗಳನ್ನು ಒಂದು ಸುಲಲಿತಸ್ಥಿತಿಗೆ ತರುವುದಲ್ಲದೆ; ಸಾಗರದ ತರಂಗೋಪಾದಿಯ ಸ್ಪರ್ಶ ಸುಖವನ್ನು ನೀಡುತ್ತದೆ. ಸಂಗೀತದ ಜತೆ ಚಲಿಸುವಾಗ ನರ್ತಕಿಯ ಕಾಲು ಅನುರಣಿಸುತ್ತದೆ. ಇಂಥ ವಸ್ತುಗಳು ಸರಿಯಿದ್ದರೆ ನಮ್ಮ ನರ್ತನವನ್ನು ಯಾರೂ ಮರೆಯುವುದಿಲ್ಲ. ಆದರೆ ಇಂದಿಗೂ ಬಹಳಷ್ಟು ಕಲಾವಿದರು (?) ನೃತ್ಯಕ್ಕೆ ಅಗತ್ಯವಿರುವ ಹಾಡುಗಳನ್ನು ಬಾಯಿಪಾಠ ಮಾಡುವುದಲ್ಲದೆ, ಸಂಗೀತದ ಒಳಹೋಗುವ ಸಾಹಸವೇ ಅವರಲ್ಲಿಲ್ಲ ; ಅದಕ್ಕೆ ತಗಲುವ ಕಾಲವೂ ಜೊತೆಗಿಲ್ಲ. ಸಂಗೀತದ ತಾಳಲಯಗಳಲ್ಲಿ ಅಮೂಲ್ಯ ಹೃದಯಸ್ಪರ್ಶಿ ಸ್ವರಗುಣ ಹಾಗೂ ಆಯಾ ರಾಗಕ್ಕೆ ಭಾವವನ್ನು ಒದಗಿಸುವ ಕ್ಲಪ್ತ ಸಾಮರ್ಥ್ಯವೆಲ್ಲವೂ ಇದೆ ಮತ್ತು ಈ ರೀತಿಯ ಮನೋಲ್ಲಾಸವು ನಮ್ಮಲ್ಲಿ ಭಾವನೆಗಳನ್ನು ಹೊಡೆದೆಬ್ಬಿಸುತ್ತದೆ, ಅಭಿನಯಕ್ಕೆ ಸಲುವ ಸೂಕ್ಷ್ಮತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಾಡುಗಳ ತಿಳಿವಳಿಕೆ ಮತ್ತು ಕಾವ್ಯಗಳ ನೆರವು, ಪ್ರತಿಮಾಶಿಲ್ಪ, ಸ್ಥಳ ಪುರಾಣಗಳೆಲ್ಲವೂ ಈ ಕಲೆಗೆ ನೆರವು ನೀಡುತ್ತದೆ ಎಂಬ ಅರಿವು ಮೊದಲೇ ಇಲ್ಲ್ಲ !
**********

Leave a Reply

*

code