ಅಂಕಣಗಳು

Subscribe


 

‘ಶಕುಂತ ಕೂಜನ’- ರಂಗಪ್ರಸ್ತುತಿಯೆಡೆಗೆ ಒಂದು ಮರುನೋಟ

Posted On: Thursday, April 15th, 2010
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ವಿದುಷಿ ಭ್ರಮರಿ ಶಿವಪ್ರಕಾಶ್, ನೃತ್ಯ ಗುರುಗಳು, ರೋಡ್ ಐಲ್ಯಾಂಡ್, ಯುಎಸ್ಎ

ಬಾರಿಯ ಒಂದು ತಿಂಗಳ ಭಾರತ ಪ್ರವಾಸದಲ್ಲಿ ಅಪೂರ್ವ ಅನುಭವಗಳು ನನ್ನ ನೆನಪಿನ ಬುಟ್ಟಿಯನ್ನು ಸೇರಿವೆ. ಮೊದಲನೆಯದಾಗಿ ಪ್ರೊ| ಉದ್ಯಾವರ ಮಾಧವ ಆಚಾರ್ಯ ವಿರಚಿತ “ಶಕುಂತ ಕೂಜನ” ರಂಗ ಕೃತಿ ಗುರು ಡಾ| ವಸುಂಧರಾ ದೊರೆಸ್ವಾಮಿಯವರಿಂದ ನೃತ್ಯ ಪ್ರಸ್ತುತಿಯಾದದ್ದನ್ನು ಕಂಡದ್ದು. ಎರಡನೆಯದಾಗಿ ಹಿರಿಯ ದಾರ್ಶನಿಕ ಕವಿ ಪು.ತಿ.ನ. ಅವರ ಕೃತಿ “ಕುಚೇಲ ಕೃಷ್ಣ”ದ ರಂಗಾಂತರಕ್ಕೆ ಪ್ರೊ| ಆಚಾರ್ಯರ ನಿರ್ದೇಶನದಲ್ಲಿ ನೃತ್ಯ ಸಂಯೋಜನೆ ಮಾಡಿದ್ದು.

Vasundhara doraiswamy

ಕಳೆದ ೨೪ ವರ್ಷಗಳಿಂದ ಹಿರಿಯ ನೃತ್ಯ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರ ಆಯೋಜಿಸುತ್ತಾ ಬಂದಿರುವ ಪಾರಂಗತೋತ್ಸವದಲ್ಲಿ ಈ ಬಾರಿಯ ಪ್ರಯತ್ನ ಪುರಾಣದ ಹಿನ್ನೆಲೆಯಿಂದಲೇ ಆಯ್ದ ಕವಿಯ ಕಲ್ಪನೆಯ ಸ್ಪಶದ ಒಂದು ವಸ್ತು “ಶಕುಂತ ಕೂಜನ”. ಮಾಲಿನೀ ನದಿಯ ತಟದಲ್ಲಿ ಸ್ವರ್ಗದಿಂದಿಳಿದು ಬಂದ ಅಪ್ಸರೆ ಮೇನಕೆ ಮತ್ತು ಇಂದ್ರ ಪದವಿಯನ್ನು ಸಾಧಿಸಲು ಹೊರಟ ಮುನಿ ವಿಶ್ವಾಮಿತ್ರರ ಪ್ರೇಮ ಪ್ರಕರಣದ ಫಲವಾಗಿ ಶಕುಂತಳೆ ಹುಟ್ಟಿದಾಗ ಕೂಗಿದ ಶಕುಂತ ಎಂಬ ಹಕ್ಕಿಯ ಕುಹೂ ಕುಹೂ ಪ್ರತಿಧ್ವನಿಸಿತ್ತು ಅಂದು ಜಗನ್ಮೋಹನ ಅರಮನೆಯ ರಂಗಮಂದಿರದಲ್ಲಿ.

ಪ್ರಸ್ತುತಿಯ ಪೂರ್ವಾರ್ಧ ಪೌರಾಣಿಕ ಕಥೆಯ ಆಧಾರದಲ್ಲೇ ಅಂದರೆ ಮುನಿ ವಿಶ್ವಾಮಿತ್ರರ ತಪೋಭಂಗಕ್ಕಾಗಿ ಧರೆಗಿಳಿದ ಮೇನಕೆಯ ಸ್ವರ್ಗ ಸದೃಶ ನೃತ್ಯ, ತಪೋಭಂಗ ಮತ್ತು ಸ್ಫುರದ್ರೂಪಿಯನ್ನು ಕಂಡ ಮುನಿಯ ಚಂಚಲ ಮನಸ್ಸು, ಈರ್ವರ ಮಿಲನ, ಸಂಸಾರ ಜೀವನದ ಸುಖ, ಶಕುಂತಳೆಯ ಜನನ ಹಾಗೆ ತ್ಯಾಗ ಇವೆಲ್ಲಾ ಕಾವ್ಯಾತ್ಮಕವಾಗಿ ಮೂಡಿಬಂದವು. ಉತ್ತರಾರ್ಧದಲ್ಲಿ ಮಾಲಿನಿ ತೀರಕ್ಕೆ ಮರಳಿ ಬಂದ ತಾಯಿ ಮೇನಕೆಯನ್ನು ಸಂವಾದಕ್ಕೆಳೆಯುವ ಶಕುಂತಳೆಯ ಕಲ್ಪನಾತ್ಮಕ ಲಹರಿ ನೆರೆದ ಸಹೃದಯರನ್ನು ಹೊಸ ಸಂವೇದನೆಗೆ ಒಳಪಡಿಸಿತು.

ಹೆತ್ತ ಹಸುಳೆಯನ್ನೇಕೆ ಅನಾಥಳನ್ನಾಗಿಸಿದೆ ಅಮ್ಮ? ಎಂಬ ಮಗಳ ಪ್ರಶ್ನೆಗೆ ಸ್ವರ್ಗದಲ್ಲಿ ತಾನು ಯಾರಿಗೂ ಹೆಂಡತಿಯಲ್ಲ, ಅಮ್ಮನಲ್ಲ, ಸಹೋದರಿಯಲ್ಲ, ಬರೀ ಅಪ್ಸರೆ. ಭೂಮಿಯಲ್ಲಿನ ಆ ಎಲ್ಲ ರಸಮಯ ಕ್ಷಣಗಳು ನಿನಗೆ ಸಿಗಲಿ ಮಗಳೇ ಎಂಬ ಮಾತೃ ಹೃದಯದ ಆಶಯವನ್ನು ವ್ಯಕ್ತಪಡಿಸುವ ಮೇನಕೆಯ ಉತ್ತರ ಹೃದಯಸ್ಪರ್ಷಿ ಕಾವ್ಯದ ಸಾಲುಗಳಾಗಿದ್ದವು. ಶಕುಂತ ಹಕ್ಕಿಗಳು ಪ್ರಕೃತಿಸಹಜ ವಾತ್ಸಲ್ಯದಿಂದ ನೀಡಿದ ಹಣ್ಣಿನ ರಸವನ್ನುಂಡು, ಕಣ್ವರ ಆಶ್ರಮದಲ್ಲಿ ಬೆಳೆದು ದೊಡ್ಡವಳಾದ ಶಕುಂತಳೆ ಅಮ್ಮನ ಪ್ರೀತಿಯಿಂದ ಎಲ್ಲೆಲ್ಲಿ ವಂಚಿತಳಾದಳೆಂಬುದು ಮತ್ತೆ ವಿಷದಗೊಳ್ಳುತ್ತದೆ. ಅಮ್ಮ ನೀನು ಬೇಕಿತ್ತು ನಾನು ಮೈನೆರೆದಾಗ, ದುಶ್ಯಂತ ಮಹಾರಾಜರನ್ನು ಕಂಡು ನಾಚಿದಾಗ, ಗಾಂಧರ್ವ ವಿವಾಹವಾದಾಗ, ಮಗು ಭರತನನ್ನು ಪಡೆಯುವಾಗಿನ ಪ್ರಸವ ವೇದನೆಯನ್ನೆದುರಿಸಲು, ಮತ್ತೆ ದುಶ್ಯಂತನಿಂದ ಪರಿತ್ಯಕ್ತಳಾದಾಗ ನನ್ನ ಆಸರೆಗೆ ನೀನು ನನ್ನೊಂದಿಗಿರಬೇಕಿತ್ತು ಅಮ್ಮ ಎಂಬ ಮಗಳ ದುಗುಡ ಎಲ್ಲರ ಮನಸ್ಸನ್ನು ತಟ್ಟಿತು. ಕೊನೆಗೂ ಅಜ್ಜಿಯಾಗಿ ಮೊಮ್ಮಗ ಭರತನ ಲಾಲನೆ ಪಾಲನೆಯಲ್ಲಿ ಮುಳುಗಿದ ಮೇನಕೆಯೊಂದಿಗೆ ಶಕುಂತಳೆ ಹೆರುವ ಹೆಣ್ಣಿಗೆ ಉಳಿದದ್ದೇನು? ನಿಸರ್ಗ ನೀಡುವ ಚೇತನವೇ ಅಥವಾ ಇನ್ನೇನು? ಸಾರಸ್ವತ ಲೋಕದ ಮುಂದಿಡುವ ವೈಚಾರಿಕ ಪ್ರಶ್ನೆಯೊಂದಿಗೆ ಕೃತಿ ಮಂಗಳಗೊಳ್ಳುತ್ತದೆ.

ಕನ್ನಡದ ಸುಮಾರು ೫೦ಕ್ಕೂ ಮಿಕ್ಕಿ ವಿಶಿಷ್ಟ ಹಾಗೆಯೇ ಕ್ಲಿಷ್ಟ ಸಾಹಿತ್ಯ ಕೃತಿಗಳಲ್ಲಿನ ರಂಗ ಸಾಧ್ಯತೆಗಳನ್ನು ಅನ್ವೇಷಿಸಿ ಪ್ರಸ್ತುತಪಡಿಸಿದ ಅನುಭವ ಉಡುಪಿಯ ಸಮೂಹದ ನಿರ್ದೇಶಕ ಪ್ರೊ| ಉದ್ಯಾವರ ಮಾಧವ ಆಚಾರ್ಯರದ್ದು. ಈ ಪರಿಪಕ್ವತೆಯ ಫಲವಾಗಿ ಮೂಡಿಬಂದ ಒಟ್ಟು ಏಳು ಸ್ವತಂತ್ರ ಏಕವ್ಯಕ್ತಿ ರಂಗಕೃತಿಗಳನ್ನು ನೃತ್ಯ ಹಾಗೂ ರಂಗ ಭಾಷೆಯಾಗಿಸುವಲ್ಲಿ ಮೈಸೂರಿನ ಡಾ| ವಸುಂಧರಾ, ಬೆಂಗಳೂರಿನ ವೈಜಯಂತಿ ಕಾಶಿ, ಉಡುಪಿಯ ವಸುಮತಿ ಭಟ್ ಸೇರಿದಂತೆ ಹಲವು ತಜ್ಞ ಕಲಾವಿದರಿಗೆ ಸವಾಲನ್ನೆಸೆದಿವೆ.  ಮೂಲ ವಸ್ತುವನ್ನು ಅದರಲ್ಲಿ ಹಾಯ್ದು ಹೋಗುವ ವಿವಿಧ ಪಾತ್ರಗಳ ಮೂಲಕ ಏಕವ್ಯಕ್ತಿಯಾಗಿ ಪ್ರಸ್ತುತಪಡಿಸುವುದೇ ಈ ಸವಾಲು. ಈ ನೆಲೆಯಲ್ಲಿ ಮೂಡಿ ಬಂದ ಕೃತಿಗಳು – ಪಾಂಚಾಲಿ, ಸೌಂದರ್ಯ ಲಹರಿ, ಗಂಗಾ ಲಹರಿ, ಗಾಂಧಾರಿ, ಸ್ತಬ್ಧ, ಅಂಬೆ ಹಾಗೂ ಶಕುಂತ ಕೂಜನ.

ಡಾ| ವಸುಂಧರಾ ಅವರ ಶಾಸ್ತ್ರೀಯ ನೃತ್ಯ ಪ್ರೌಢಿಮೆ, ಯಾವುದೇ ಒಂದು ಶಾಸ್ತ್ರೀಯ ನೃತ್ಯ ಪದ್ಧತಿಯ ಸಂಪೂರ್ಣ ತಾಂತ್ರಿಕತೆಯನ್ನು ಅಳವಡಿಸಲು ಅವಕಾಶವಿದ್ದಂತಹ ಪ್ರೊ| ಆಚಾರ್ಯರ ಪ್ರಭಾವೀ ಸಾಹಿತ್ಯ ಹಾಗೂ ಭರತನಾಟ್ಯ ಕಾರ್ಯಕ್ರಮಗಳಿಗೆ ಭಾವಪೂರ್ಣ ಪೂರಕ ಹಿನ್ನೆಲೆ ಸಂಗೀತ ಒದಗಿಸುವಲ್ಲಿ ನುರಿತ ಮಧುರ ಕಂಠದ ವಿದುಷಿ ಪಿ. ರಮಾ ಅವರ ಹಾಡುಗಾರಿಕೆ ಇವೆಲ್ಲವೂ ಸಮನಾಗಿ ಮೇಳೈಸಿ ಸಂಪೂರ್ಣ ರಸಾನುಭವ ನೀಡುವಲ್ಲಿ ಶಕುಂತ ಕೂಜನ ಸಾಹಿತ್ಯದ ನೃತ್ಯ ಪ್ರಸ್ತುತಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಕಣ್ಮನ ಸೆಳೆದ ಕೆಲವು ಭಾಗಗಳನ್ನು ಇಲ್ಲಿ ಉದಾಹರಿಸುವುದಾದರೆ – ಸಗ್ಗದಿಂದಿಳಿದು ಬಂದ ಅಪ್ಸರೆ ಮೇನಕೆಯ ಅಪೂರ್ವ ನೃತ್ಯ ಮಾಲಿಕೆಗೆ ಅಳವಡಿಸಲಾದ ಕ್ಲಿಷ್ಟಕರವಾದ ತತ್ಕಾರಗಳಿದ್ದ ಹೊಸ ಜತಿಗಳಿಗೆ ತಕ್ಕ ಬಿಗಿ ಲಯಗಾರಿಕೆಯ ಕರಣ ಮತ್ತು ಅಡವುಗಳ ಸಂಯೋಜನೆ. ಕಥಾ ವಿಸ್ತರಣೆಯ ವಿವಿಧ ಹಂತಗಳಲ್ಲಿ ಪ್ರಕೃತಿ ಸೌಂದರ್ಯವನ್ನು ವಿವರಿಸುವಲ್ಲಿ ಡಾ| ವಸುಂಧರಾ ಅವರ ಮನಮುಟ್ಟುವ ಅಭಿನಯ ಮತ್ತು ಹೆಜ್ಜೆಗಾರಿಕೆ. ವಿಶ್ವಾಮಿತ್ರ ಮತ್ತು ಮೇನಕೆಯ ಯುಗಳ ನೃತ್ಯಕ್ಕಾಗುವಾಗ ಒಂದೇ ಜತಿಯ ತಾಂಡವ ಭಾವ ಮತ್ತು ಲಾಸ್ಯ ಭಾವದ ಪರ್ಯಾಯ ಪ್ರಸ್ತುತಿ. ವಿವಿಧ ತಾಳಗಳ ಜತಿಗಳ, ಸಂಚಾರಿ ಭಾವಗಳ ಬಳಕೆಯಾಗಲೀ, ಶಾಸ್ತ್ರೀಯ ನೃತ್ಯಬಂಧವಾದ ತಿಲ್ಲಾನದ ಬಳಕೆಯಾಗಲೀ; ಯಾವುದೂ ನಿರ್ದಿಷ್ಟ ಅಳತೆಯನ್ನು ಮೀರದೆ ಕಥಾ ಚೌಕಟ್ಟಿನೊಳಗೆ ಮೆರೆದು ಪ್ರೇಕ್ಷಕನ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ, ಕಾರ್ಯಕ್ರಮದ ಒಟ್ಟಾರೆ ಸಮತೋಲನವನ್ನು ಕಾಪಾಡುವುದರಲ್ಲಿ ಯಶಸ್ವಿಯಾದವು.

Shakunta koojana

ವಿದುಷಿ ಪಿ. ರಮಾ ಅವರ ಇಂಪಿನ ಕಂಠದಿಂದ ಪ್ರತಿಧ್ವನಿಸಿದ ಶಕುಂತದ ಕುಯಿಲು ನಮ್ಮನ್ನೆಲ್ಲ ಮಾಲಿನೀ ನದಿ ತೀರಕ್ಕೆಳೆದೊಯ್ಯುವಲ್ಲಿ ಸಫಲವಾಯಿತು. ತಪೋನಿರತ ವಿಶ್ವಾಮಿತ್ರನನ್ನು ವರ್ಣಿಸುವ ಸಾಲುಗಳಲ್ಲಿ ಮನೋಧರ್ಮದ ಸಂಗೀತ, ವಿಶ್ವಾಮಿತ್ರ ಮೇನಕೆಯ ಸಾಂಸಾರಿಕ ಜೀವನದ ರಸ ನಿಮಿಷಗಳಲ್ಲಿ ಒಂದಾದ ಉಯ್ಯಾಲೆಯಾಟಕ್ಕೆ ಕುರಿಂಜಿ ರಾಗದ ಬಳಕೆ ರಮಿಸುವಂತಿತ್ತು. ಶಕುಂತ ಹಕ್ಕಿಗಳು ಹಣ್ಣಿನ ರಸವನ್ನು ನೀಡಿ ಹಸುಗೂಸನ್ನು ಆರೈಸುವ ಸಾಲುಗಳಲ್ಲಿ ಬೃಂದಾವನಸಾರಂಗ ರಾಗವನ್ನು ಸಂಯೋಜಿಸಿದ ರೀತಿ ರಂಗದ ಮೇಲಿನ ಅಭಿನಯಕ್ಕೆ ಇನ್ನಷ್ಟು ಪುಷ್ಟಿ ನೀಡಿತು. ಹಿನ್ನೆಲೆ ಸಂಗೀತದವರೆಲ್ಲರಿಗೆ ನೀಡಿದ ಏರಿದ ಧ್ವನಿವರ್ಧಕ ಮಟ್ಟ ಕೆಲ ಸಹೃದಯರಿಗೆ ರಸಾಸ್ವಾದನೆಗೆ ಅಡ್ಡಿ ತಂದಿತೆಂಬುದು ಇಡಿಯ ಕಾರ್ಯಕ್ರಮಕ್ಕೆ ದೃಷ್ಟಿ ಬೊಟ್ಟಾಯಿತು.

ತಪೋಭಂಗಕ್ಕಾಗಿ ಧರೆಗಿಳಿದು ಬಂದರೂ, ಸ್ತ್ರೀ ಸಹಜವಾದ ಶೃಂಗಾರದಾಸೆ, ಸಂಸಾರ ನಡೆಸುವಾಸೆ, ಮಕ್ಕಳ ಲಾಲನೆ ಪಾಲನೆಯಾಸೆಗಳನ್ನು ವರ್ಣಿಸುವಲ್ಲಿ, ಇವೆಲ್ಲ ನಡೆದು ಕರ್ತವ್ಯ ಪ್ರಜ್ಞೆಯಿಂದ ಹಸುಗೂಸನ್ನು ತ್ಯಜಿಸುವ ಭಾಗ, ಮಗಳ ಪ್ರಶ್ನೆಗೆ ಅಮ್ಮ ಉತ್ತರ ನೀಡುವ ಭಾಗ, ಮತ್ತೆ ಸಹೃದಯರೆದುರು ಇಡುವ ವೈಚಾರಿಕ ಪ್ರಶ್ನೆಯ ಭಾಗಗಳಲ್ಲೆಲ್ಲ ಪ್ರೊ| ಆಚಾರ್ಯರ ಸಾಹಿತ್ಯ ಸರಳವಾಗಿಯೂ ಅಷ್ಟೇ ಪ್ರಬುದ್ಧವಾಗಿಯೂ ಸಹೃದಯರ ಮನಸ್ಸಿನಲ್ಲಿ ಭಾವನೆಗಳೆಲ್ಲವನ್ನೂ ಏರಿಳಿಸಿದವು.

ವಿದ್ವಾನ್ ಸಂದೇಶ್ ಭಾರ್ಗವ ಅವರ ಬಿರುಸಿನ ನಟ್ಟುವಾಂಗ, ವಿದ್ವಾನ್ ಶಿವಶಂಕರಸ್ವಾಮಿ ಅವರ ಪೂರಕ ಮೃದಂಗ ವಾದನ, ಭಾವ ಸಂವಹನಕ್ಕೆ ಸಹಕಾರಿಯಾಗುವಂತೆ ಸಮಯೋಚಿತ ವಿಶೇಷ ಪರಿಣಾಮಗಳನ್ನು ಕೊಳಲು ಮತ್ತು ರಿದಂ ಪ್ಯಾಡ್‌ನಲ್ಲಿ ನೀಡಿದ ವಿದ್ವಾನ್ ಜಯರಾಮ್ ಕಿಕ್ಕೇರಿ ಹಾಗೂ ವಿದ್ವಾನ್ ಪ್ರಸನ್ನ ಕುಮಾರ್, ವಯೋಲಿನ್‌ನಲ್ಲಿ ಸಹಕರಿಸಿದ ವಿದ್ವಾನ್ ಅಶ್ವತ್ಥನಾರಾಯಣ್ ಇವರೆಲ್ಲರ ಕೊಡುಗೆ ಕಥಾವಸ್ತುವಿನ ಪ್ರಭಾವಿ ಚಿತ್ರಣಕ್ಕೆ ಮತ್ತಷ್ಟು ಸಹಕಾರಿಯಾದವು.

(ಮೂಲತಃ ಉಡುಪಿಯವರಾದ ಲೇಖಕಿ ಪ್ರಸ್ತುತ ಯು‌ಎಸ್‌ಎಯಲ್ಲಿ ತಮ್ಮದೇ ಸಂಸ್ಥೆಯಲ್ಲಿ ನೃತ್ಯ ಗುರು)

*******

1 Response to ‘ಶಕುಂತ ಕೂಜನ’- ರಂಗಪ್ರಸ್ತುತಿಯೆಡೆಗೆ ಒಂದು ಮರುನೋಟ

  1. ramaa

    I enjoyed composing music to this Dance drama. Professor Udyavara Madhavacharya is a great Sahithi and Dr. Vasundhara Doraiswamy is a great dancer. The Article has come out beautifully.

Leave a Reply

*

code