ಅಂಕಣಗಳು

Subscribe


 

ಆತ್ಮವೇ ಆವಾಹನೆಯಾಗುತ್ತಿದೆಯೆಂಬ ಅಭಿವ್ಯಕ್ತಿ : ಶಂಕರ್ ಕಂದಸ್ವಾಮಿ

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಆತ ನರ್ತಿಸುತ್ತಿದ್ದರೆ ಯಾವುದೋ ಆತ್ಮ ಮೈಯ್ಯಲ್ಲಿ ಹೊಕ್ಕಿದೆ ಎಂದು ಪ್ರೇಕ್ಷಕಪ್ರಭುಗಳಿಗೆ ಭಾಸವಾಗುವುದಾದರೆ ಅದಕ್ಕೇ ಮೂಲ ಶಂಕರ್ ಕಂದಸ್ವಾಮಿ ಎಂದು ನಿಸ್ಸಂದೇಹವಾಗಿ ಹೇಳಬಹುದು. ಎಂದಿನ ನೃತ್ಯಕಲಿಕಾಸ್ತರದ ಹೆಜ್ಜೆಗಳಿಂದ ಪ್ರತ್ಯೇಕಗೊಂಡಂತೆ ಆವಿರ್ಭವಿಸುವ ಪದವಿನ್ಯಾಸಗಳು; ಆಗಾಗ್ಗೆ ಆವಾಹನೆಯಾಗಿ ದಂಗುಬಡಿಸುವ ರೇಚಕಗಳು; ಮೈಯನ್ನೇ ನೃತ್ಯಕ್ಕೆ ಸಾಣೆ ಹಿಡಿಯುತ್ತಿರುವಂತೆ ತೋರುವ ಶ್ರಮ; ಎಷ್ಟು ಕುಣಿದರೂ ದಣಿವಾಗದಂತಹ ದೇಹದಾರ್ಢ್ಯತೆ-ಮನೋಬಲ, ಮಾರ್ಗೀ, ದೇಸೀ ಚಲನೆಯ ಬೆರಗು-ಚಮತ್ಕಾರದೊಂದಿಗೆ ಅಪ್ಪಟ ಆನಂದದಲ್ಲೂ ಮುಳುಗೇಳಬಹುದಾದ ಸಮನ್ವಯೀ ಸಾಧ್ಯತೆ…ಒಟ್ಟಿನಲ್ಲಿ ಕಣ್ಣ್ಣು ಮುಚ್ಚಿ ಬಿಡುವುದರಲ್ಲೇ ಮಿಂಚೊಂದು ಮರೆಯಾದಂತಿರುತ್ತದೆ ಶಂಕರರ ಸಂಚಾರ.DSC_0071

ಇಂತಹ ಪ್ರಶಂಸೆ ಯುಕ್ತವಾದದ್ದು ಇತ್ತೀಚೆಗೆ ಬೆಂಗಳೂರಿನ ಎಡಿ‌ಎ ರಂಗಮಂದಿರದಲ್ಲಿ ವಿ‌ಆರ್‌ಸಿ ಅಕಾಡೆಮಿ ಮತ್ತು ಅನನ್ಯ ಕಲಾಸಂಸ್ಥೆ ಸಮಾಯೋಜಿಸಿದ ಮೂರು ದಿನಗಳ ಸಂಗೀತ-ನೃತ್ಯೋತ್ಸವ-೨೦೧೩ರ ಸಮಾರೋಪದಂದು. ಯಾವುದೇ ಲಾಭ-ನಷ್ಟಗಳ ಲೆಕ್ಕಾಚಾರಗಳಿಗಿಂತ ಮಿಗಿಲಾಗಿ, ಸರ್ಕಾರ-ಸರ್ಕಾರೇತರ ಸಂಘ-ಸಂಸ್ಥೆಗಳ ಅನುದಾನಗಳಿಂದ ಹೊರತಾಗಿ ಸ್ವಂತ ಪರಿಶ್ರಮವನ್ನೇ ಧಾರೆಯೆರೆದು ಹಮ್ಮಿಕೊಳ್ಳುವ ಇವೆರಡೂ ಸಂಸ್ಥೆಗಳ ಆಯೋಜನೆಗೆ ಸಾರ್ಥಕ ಸಮಾರೋಪ ಅಂದಾಗಿತ್ತು.DSC_0135

ಪ್ರಪ್ರಥಮವಾಗಿ ವಿಜಯವಸಂತ ರಾಗದ ಆದಿತಾಳದ ಮೂಲಕ ಅಡಿಯಿಟ್ಟ ಶಂಕರ್ ಕಂದಸ್ವಾಮಿ ನಂತರ ಕೈಗೆತ್ತಿಕೊಂಡದ್ದು ಲತಾಂಗಿ ರಾಗದ ಪ್ರಸಿದ್ಧವರ್ಣ ನೀ ಮನಮಿರಂಗಿ ವಂದರುಳ್ವಾಯ್. ಯಾವುದೇ ಪ್ರಸಿದ್ಧ ಅಥವಾ ಬಹುಚಾಲ್ತಿಯಲ್ಲಿರುವ ನೃತ್ಯಬಂಧಗಳನ್ನು ಅಭಿನಯಿಸುವುದೆಂದರೆ ಅದು ಕಲಾವಿದನಿಗೊದಗುವ ಗುರುತರವಾದ ಸವಾಲು. ಈಗಾಗಲೇ ಹಲವು ಕಲಾವಿದರ ಅಭಿವ್ಯಕ್ತಿಯಲ್ಲಿ ನೃತ್ಯಬಂಧವೊಂದನ್ನು ಕಂಡ ಕಣ್ಣುಗಳಿಗೆ ಹೊಸತೆನಿಸುವ ನಿರೂಪಣೆಯನ್ನೀಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಈ ಹಿನ್ನೆಲೆಯಲ್ಲಿ ಶಂಕರ್ ಕಂದಸ್ವಾಮಿಯವರದ್ದು ಹಿಂದಿನ ನೆನಪುಗಳನ್ನು ನಾಚಿಸುವ, ಮರೆಮಾಚುವ ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆನಿಸುವ ಆಹ್ಲಾದಸರಣಿ. ಸಾಹಿತ್ಯದಿಂದ ಸಾಹಿತ್ಯಕ್ಕೆ ಜತಿಯ ಚೌಕಟ್ಟಿನ ಬಿಗು ವಿಚ್ಛೇದವಿದ್ದರೂ, ಅಡವುಗಳ ಸರಣಿಯಿದ್ದರೂ ಅದು ರಸಾಸ್ವಾದಕ್ಕೆ ತೊಡಕೆನಿಸದೇಹೋಗುವುದು ಬಹುಷಃ ಕಂದಸ್ವಾಮಿಯವರಿಗೆ ಒಲಿದ ವರ ! ಜೊತೆಗೆ ಪದಪದವನ್ನೂ ಬಿಡಿಸಿ ಅದಕ್ಕೆ ಹಸ್ತಾಭಿನಯವನ್ನಷ್ಟೇ ಪ್ರದರ್ಶಿಸುತ್ತಾ ಸಂಚಾರಿಭಾವಗಳಲ್ಲಷ್ಟೇ ಅಭಿನಯವನ್ನು ಗುಟುಕೀಕರಿಸುತ್ತಾ ರಸಪೇತಲವಾಗುತ್ತಿರುವ ಇಂದಿನ ನೃತ್ಯ ವಾತಾವರಣಕ್ಕೆ ಪದಾರ್ಥಾಭಿನಯದಲ್ಲೂ ಗಟ್ಟಿತನವನ್ನು, ಹೊಸತನವನ್ನು ಕ್ಷಣಕ್ಷಣಕ್ಕೂ ಕೊಡಬಹುದು; ಆ ಮೂಲಕ ಪ್ರೇಕ್ಷಕ-ಕಲಾವಿದನ ನಡುವೆ ಬೆರಗಿನ ಸಂವಹನವನ್ನೂ, ಸಾಹಿತ್ಯ-ಅರ್ಥ ಸಾಂಗತ್ಯವನ್ನು ನೀಡಬಹುದು ಎಂಬುದನ್ನು ಕಲಿಯಬೇಕಿದ್ದರೆ ಅದು ಕೂಡಾ ಶಂಕರರಲ್ಲಿಯೇ ! ಒಟ್ಟಿನಲ್ಲಿ ರಸಶಿಖರಕ್ಕೆ ಪದಾರ್ಥಾಭಿನಯವೂ ನಮ್ಮನ್ನು ಕರೆದೊಯ್ಯಬಹುದಾದರೆ ಅದು ಕೇವಲ ಪದದ ಅರ್ಥವಷ್ಟೇ ಹೇಳುವ ಅಭಿನಯದ ಪರಿಧಿಯಲ್ಲಷ್ಟೇ ನಿಂತಿರುವುದಿಲ್ಲ ಎಂಬುದನ್ನು ಶಂಕರರನ್ನು ನೋಡಿಯೇ ಒಪ್ಪುವ ವಿಚಾರ. ಅದರಲ್ಲಿಯೂ ವಿಶೇಷವಾಗಿ ವರ್ಣದುದ್ದಕ್ಕೂ ಸುಬ್ರಹ್ಮಣ್ಯನ ರೂಪ-ಲಾವಣ್ಯ-ಹುಡುಗುತನವನ್ನು ಎಷ್ಟು ಚೆನ್ನಾಗಿ ಹಿಡಿದಿಟ್ಟುಕೊಂಡರೆಂದರೆ, ಆಗ ತಾನೇ ಹುಟ್ಟಿ ಬೆಳೆದ ಬಾಲಕನ ಮುಗ್ಧತೆ, ಪ್ರೌಢತೆ, ಶೌರ್ಯವನ್ನು ಮುದ್ದುಮುದ್ದೆನಿಸುವಂತೆ ಅನುಭವಿಸುವಷ್ಟು ! ಕಂದನ ಎಳೆತನದ ಗತ್ತುಗಾರಿಕೆಗೆ ವ್ಹಾವ್ ಎಂಬ ಉದ್ಗಾರದಿಂದೀಚೆಗೆ ಶಬ್ದಗಳು ನಿಲುಕುವುದಿಲ್ಲ. ಪಾರ್ವತಿಯ ತಾಯ್ತನದ ಪ್ರೀತಿ, ಶ್ರೀವಲ್ಲಿ-ದೇವಸೇನೆಯರ ಪ್ರೇಮದ ಅಂತರವನ್ನು ಏಕಕಾಲಕ್ಕೇ ಗರ್ಭೀಕರಿಸಿದ್ದನ್ನು ಗಮನಿಸಿದರೆ ಕಲಾವಿದನ ಸುಕೃತ ಪುಣ್ಯ ಸಾಕಷ್ಟಿದ್ದಿರಲೇಬೇಕು!

DSC_0059

ಕೆಳವರ್ಗದ ಭಕ್ತನೊಬ್ಬನ ಮೊರೆಗೆ ನಂದಿಯೇ ಬದಿಗೆ ಸರಿದು ಶಿವನ ದರ್ಶನಾನುಕೂಲ ಒದಗುವ ನಂದನಾರ್ ಚರಿತ್ರೆಯನ್ನು ಹೇಳುವ ನಾಟಕುರಂಜಿ ರಾಗದ ಕೀರ್ತನೆಯೊಂದಕ್ಕೆ ಶಂಕರರು ಭಾವಪರವಶರಾದರು; ಕರುಣಾಮೂರ್ತಿಯೆನಿಸಿದರು; ಅದ್ಭುತ, ಧನ್ಯತೆಗಳ ದರ್ಶನವೂ ಸಹೃದಯರಿಗೆ ಒಲಿಯಿತು. ನಂತರದಲ್ಲಿ ನಾಯಿಕಾಭಾವದ ಪದವೊಂದನ್ನು ಅಭಿನಯಿಸುವ ಸವಾಲನ್ನು ಮೊದಲಬಾರಿಗೆ ಎದುರಿಸುತ್ತಿದ್ದೇನೆಂದು ಶಂಕರ್ ಹೇಳಿಕೊಂಡದ್ದೇನೋ ನಿಜ. ಆದರೆ ನಾಯಿಕೆಯ ಮುಗ್ಧತೆ, ಕಾತರತೆಯಿಂದ ತೆಕ್ಕೆಗೆ ಸೆಳೆಯುತ್ತಲೇ ಏಕಕಾಲಕ್ಕೆ ಶಿವನ ಗಾಂಭೀರ್ಯವನ್ನು, ಕುಡಿಗಣ್ಣ ನೋಟದ ಮಾರ್ದವತೆಯನ್ನೂ ಅನುಭವಿಸುವಾಗ ಅದು ಜನ್ಮಜನ್ಮಾಂತರದ ಪುಣ್ಯವಿಶೇಷವೆಂದೇ ಕಂಡಿತ್ತು. ಕ್ಷಣಮಾತ್ರದಲ್ಲೇ ಸಿದ್ಧ ಎಂದು ಹೇಳಿಸಿದಂತಿತ್ತು. ! ಶಿವನ ಆಗಮನ, ನೋಟಕ್ಕೆ ಹಂಬಲಿಸುವ ವಾಸಕಸಜ್ಜಿಕೆಯ ಪರಕಾಯಪ್ರವೇಶದಲ್ಲಿ ಶಂಕರ್ ಭರತನಾಟ್ಯದಲ್ಲಿ ಪುರುಷಾಭಿವ್ಯಕ್ತಿಗೆ ಇರುವ ಸವಾಲು, ತೊಂದರೆಗಳ ಕೂಗಿಗೆ ಅಪವಾದದಂತೆಯೇ ಕಂಡರು.

ಈ ಎಲ್ಲ ನೃತ್ಯಸಂದರ್ಭಗಳಿಗೆ ಹೋಲಿಸಿದರೆ ಏರುಗತಿಯಲ್ಲಿ ಪರ್ಯಾಪ್ತವಾಗಬೇಕಾದ ತಿಲ್ಲಾನ ಸಪ್ಪೆಯೆನಿಸಿತ್ತು. ಮಧುರೈ ಕೃಷ್ಣನ್ ರಚನೆಯ ಮೋಹನರಾಗದ ತಿಲ್ಲಾನಕ್ಕೆ ಅಳವಡಿಸಿದ್ದ ಅಡೆಯಾರ್ ಲಕ್ಷ್ಮಣ್ ಅವರ ಕೊರಿಯೋಗ್ರಫಿಯನ್ನು ಯಥಾವತ್ತು ಹಾಗೆಯೇ ಶಂಕರ್ ಮೈಯೊಳಗೆ ಇಳಿಸಿಕೊಂಡರು. ಆದರೆ ಅದು ಅವರ ಬಿರುಸಿನ ಭಾವ-ಲಯಗಳಿಗೆ ಅದು ಒಪ್ಪುವಂತಿರಲಿಲ್ಲ. ಕೊನೆಯ ಮುಕ್ತಾಯವೊಂದಕ್ಕೆ ತನ್ನತನ ಪ್ರಕಟವಾಗಿದ್ದು ಬಿಟ್ಟರೆ, ತಿಲ್ಲಾನ ವಿಶೇಷವೆನಿಸದೇ ಹೋಯಿತು. ಆದಾಗ್ಯೂ ಮೇರುಪ್ರಾಯರಾದ ಪ್ರತಿಭಾಸಂಪನ್ನರ ಇಂತಹ ಸಣ್ಣ-ಪುಟ್ಟ ರಾಜಿಗಳು ಸಹಜ ಮೈ-ಮನಸ್ಸನ್ನು ಒಳಗೊಳ್ಳದೇ ಹೋದರೆ ಹೇಗೆ ನರ್ತನಸಂದರ್ಭದ ತೊಂದರೆಗಳ ಸಾದೃಶ್ಯವಾಗುತ್ತದೆಯೆಂಬುದನ್ನು ತಿಳಿಯುವಲ್ಲಿ ನೆರವಾದದ್ದಕ್ಕೆ ತೃಪ್ತಿಪಟ್ಟುಕೊಳ್ಳಬಹುದು. ಹತ್ತರಲ್ಲಿ ಹನ್ನೊಂದನೆಯವರಾಗದ ಶಂಕರ್‌ನಂತಹ ಪುಟಿಯುವ ಚೆಂಡಿಗೆ ಎಂದಿನ ಭರತನಾಟ್ಯದ ನೃತ್ಯತಂತ್ರಗಳು ಒಪ್ಪುವುದು ಕೊಂಚ ತ್ರಾಸದಾಯಕವೇ ! ಒಂದುವೇಳೆ ಒಪ್ಪಿಸಿಕೊಂಡರೂ ಅದು ಬಲವಂತದ ಮಾಘಸ್ನಾನ ಆದೀತೇ ವಿನಾ ಮೊಗ್ಗು ಹೂವಾಗುವ ಕಲ್ಪನೆ ಹಿಸುಕಿಹೋಗುತ್ತದೆ. ಇಂತಹ ಅಭಿಪ್ರಾಯಕ್ಕೆ ಬರಲು ಕಾರಣ ಕೂಡಾ ಅವರದ್ದೇ ಆದ ನೃತ್ಯಸಂಯೋಜನೆಯ ವೈಶಿಷ್ಟ್ಯ ಮತ್ತು ನರ್ತನದ ಸೊಗಸು ಎಂಬುದೂ ಅವರ ಹೆಚ್ಚುಗಾರಿಕೆಯೇ !

ರೂಪಶ್ರೀ ಮಧುಸೂದನ್ ಅವರ ಅಸ್ಖಲಿತ ನಿರೂಪಣೆ ಕಾರ್ಯಕ್ರಮಕ್ಕೆ ಪ್ರಭಾವಳಿಯಾದರೆ; ಪ್ರಸನ್ನಕುಮಾರ್ ಅವರ ತಾಳದ ನುಡಿಸಾಣಿಕೆಯ ಬಿಗಿ, ಗಾಯನದಲ್ಲಿ ನಂದಕುಮಾರ್‌ರ ಒನಪು, ಮಾರ್ದಂಗಿಕರಾಗಿ ವಿ.ಚಂದ್ರಶೇಖರ್‌ರ ಕೈವಾರಿಕೆ, ವೇಣುಗಾನದಲ್ಲಿ ನಾಗಭೂಷಣ್‌ರ ಮಾಧುರ್ಯವೆಲ್ಲವೂ ಶಂಕರ್ ಕಂದಸ್ವಾಮಿಯರ ತನು-ಮನದ ಅಸಾದೃಶ್ಯ ಲಯಪ್ರಜ್ಞೆಗೆ ದನಿಗೂಡಿಸಿದವು.

1 Response to ಆತ್ಮವೇ ಆವಾಹನೆಯಾಗುತ್ತಿದೆಯೆಂಬ ಅಭಿವ್ಯಕ್ತಿ : ಶಂಕರ್ ಕಂದಸ್ವಾಮಿ

  1. ಕಾಂಚನ ರೋಹಿಣಿ ಸುಬ್ಬರತ್ನಂ

    ಬಹಳ ಒಳ್ಳೆಯ ವಿಮರ್ಶೆ. ವಿವರಣೆಯಿಂದಾಗಿ ಕಲಾವಿದರ ಪ್ರಸ್ತುತಿಯು ಹೀಗೇ ಇದ್ದಿರಬಹುದು ಎಂಬ ಊಹೆಯ ದೃಶ್ಯವು ಕಣ್ಣ ಮುಂದೆ ಬರುತ್ತದೆ. ಪ್ರತಿಯೊಬ್ಬರ ವಿಮರ್ಶೆಯಲ್ಲಿ ಪಕ್ಕವಾದ್ಯ, ಅಥವಾ ಹಾಡುಗಾರಿಕೆಯನ್ನು ಪಕ್ಕಕ್ಕೂ ಇಡದೆ ಕಡೆಯೇ ಇಡುವುದೇತಕ್ಕೆಂದು ತಿಳಿಯುವುದಿಲ್ಲ!

Leave a Reply

*

code