ಅಂಕಣಗಳು

Subscribe


 

ನಾಟ್ಯವಶಂಕರನಾದ ಶಂಕರಕಂದಸ್ವಾಮಿ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ಕವಿಗಳು, ಅವಧಾನ ಪೃಚ್ಛಕರು, ಬೆಂಗಳೂರು

ನಾಟ್ಯಕಲಾವಿದ ಶಂಕರಕಂದಸ್ವಾಮಿ ಹುಟ್ಟಿನಿಂದ ಸಿಂಹಳೀಯ. ದೇಶೀಯವಾಗಿ ಮಲೇಶಿಯಾ. ತ್ರಿಕರಣದಲ್ಲಿ ಅಪ್ಪಟ ಭಾರತೀಯ. ಸ್ವಾಮಿ ಶಿವಾನಂದರ ಶಿಷ್ಯ ಶಾಂತಾನಂದರಿಂದ ಸನಾತನ ಭಾರತೀಯತೆಯ ಆತ್ಮದೀಕ್ಷೆ ಪಡೆದ ಕಲೋಪಾಸಕ. ಪುರಾಣ ಪ್ರಪಂಚ ಉಪನಿಷತ್ತು ದರ್ಶನ ಗ್ರಂಥಗಳನ್ನು ಸಾಕಷ್ಟು ಅರಗಿಸಿಕೊಂಡ ನಾಟ್ಯಾರಾಧಕ. ಭಾರತದ ಮಣ್ಣಿನಲ್ಲಿ ಆರ್ಷಸ್ಪಂದನವಿದೆ ಎಂದು ಭಾವುಕನಾಗುವ ವೇದಾಂತವಿನಯಿ. ಹಾಗಾಗಿಯೇ ಶಂಕರಕಂದಸ್ವಾಮಿ ರಂಗದಲ್ಲಿ ಇರುವವರೆಗೂ ಅವರ ನರ್ತನವ್ಯವಸಾಯದಲಿ ಭರತಮುನಿ ಮೈಹೊಕ್ಕಿರುತ್ತಾನೆ.

Shankar kandaswamy

ಅದೊಂದು ಕಸುವಿನ ಕಣಜ. ಕಲೆಯ ಕೌಶಲದ ಕುಸುರಿ ಕೆಲಸ. ನೃತ್ಯದ ಸಮಗ್ರ ಸಾಧ್ಯತೆಗಳ ಸಾಕ್ಷಾತ್ಕರಣ. ಅನಗತ್ಯವಾದ ಕಾಲವ್ಯಯಕ್ಕೆ ಆಸ್ಪದವೇ ಇಲ್ಲದ ನಿರಂತರ ನಾಟ್ಯ ನಿರ್ಝರಿಣಿ. ನಮಗಿರಬಹುದಾದ ಭಾರತತ್ವವನ್ನು ನಾಚಿಸುವ/ನೆನಪಿಸುವ ಆರ್ಷೇಯ ವಿವರಗಳೊಂದಿಗೆ ಸಾಕಾರಗೊಳ್ಳುವ ಪುರಾಣಪ್ರತಿಮೆಗಳ ರಂಗೋತ್ಸವ. ಇದು ಸ್ಥೂಲವಾಗಿ ಹೇಳಬಹುದಾದ ಕಂದಸ್ವಾಮಿಯವರ ಭರತನಾಟ್ಯಪ್ರಸ್ತುತಿಯ ಯಶೋಯಾನ. ಇತ್ತೀಚೆಗೆ ವಿ‌ಆರ್‌ಸಿ ಫೌಂಡೇಶನ್ ಮತ್ತು ಅನನ್ಯ ಕಲಾಸಂಸ್ಥೆ ಸಮಾಯೋಜಿಸಿದ ಕಾರ್ಯಕ್ರಮದಲ್ಲಿ ಶಂಕರಕಂದಸ್ವಾಮಿ ಸುಮಾರು ಎರಡು ಗಂಟೆಗಳ ಭರತನಾಟ್ಯವನ್ನು ಬೆಂಗಳೂರಿನ ನಯನಸಭಾಂಗಣದಲ್ಲಿ ಪ್ರದರ್ಶಿಸಿದರು. ನೃತ್ತದಲ್ಲೂ, ನೃತ್ಯದಲ್ಲೂ, ನಾಟ್ಯದಲ್ಲೂ ಪೂರಪೂರಾ ಸ್ವಂತಿಕೆಯನ್ನು ಮೈಗೂಡಿಸಿಕೊಂಡ ಕಲಾಕಲಾಪ ಅದು. ಯಾವ ಗಿಮಿಕ್ಕು, ಚಮಕ್ಕು ಬೆರಕೆ ಇಲ್ಲದ, ಎಲ್ಲೂ ಸಂಕರವಾಗದ ಶುದ್ಧಶಂಕರಮಾರ್ಗ. ನಾಟ್ಯಶಾಸ್ತ್ರದ ನಿರ್ದೇಶನಕ್ಕೆ ಹೊರತಾದ ಯಾವ ಹರಕೂ ಸರಕೂ ಇಲ್ಲ. ಆದರೂ, ಸಿದ್ಢಸೂತ್ರದ ನಿಬದ್ಧ ನಿಯಮದ ನೃತ್ಯಗಳನ್ನು ನೋಡಿದ ಕಣ್ಣುಗಳಲ್ಲಿ ಬೆರಗಿನ ಸೆಳೆಗೋಲನ್ನು ಹೊಮ್ಮಿಸುವ ಚಿಮ್ಮಿಸುವ ಅನನ್ಯತೆ ಇವರ ನಾಟ್ಯದಲ್ಲಿ ವಿರಾಜಿಸುತ್ತದೆ. ಏನಾ ವಿಶಿಷ್ಟತೆ? ಉತ್ತರ ಸುಲಭದಲ್ಲಿ ದಕ್ಕುವಂಥದಲ್ಲ. ಯಾಕೆಂದರೆ ಯಾವ ಅಂಗದಲ್ಲಿ ಇವರು ದಾರಿ ಮೀರಿದ್ದಾರೆ ಎಂದು ಗೆರೆಹಾಕಿ ತೋರುವ ಪೈಕಿಯದ್ದಲ್ಲ ಇವರ ನಾಟ್ಯಶೈಲಿ. ಭರತನಾಟ್ಯದ ಪೂರ್ಣ ವಿನಿಯೋಗವನ್ನು ಪರಂಪರಾನಿಷ್ಠವಾಗಿಯೇ ಮಾಡಿದರೂ ಅದರೊಳಗೆ ಅವರು ತುಂಬುವ ಹೃದಯದ ಹೂರಣ ಸುಲಭಗ್ರಾಹ್ಯವಲ್ಲ ಅಂತಲೇ ಹೇಳಬೇಕು.


ಶಂಕರಕಂದಸ್ವಾಮಿಯವರ ಪ್ರಯೋಗದ ಆದ್ಯಂತ ನಮಗೆ ಕಂಡುಬರುವುದು ಅಸ್ಖಲಿತವಾದ ಊರ್ಜೆ. ಈ ಊರ್ಜಾಗುಣವೇ ಅವರ ನಾಟ್ಯಬಿಂಬವನ್ನು ರಸಿಕರ ಹೃದಯಪೀಠದಲ್ಲಿ ಪ್ರತಿಷ್ಠಾಪಿಸಿಬಿಡುತ್ತದೆ. ನರ್ತನದಲ್ಲಾಗಲೀ ವರ್ತನದಲ್ಲಾಗಲೀ ಈ ಕಲಾವಿದ ಬಳಲುವುದೇ ಇಲ್ಲ. ಅದು ಎಂತಹಾ ಹೇರೊಜ್ಜೆಯ ಹಾಸುಬೀಸಿನ ಹೊಲಬು! ಅಕ್ಷರಶಃ ಇವರದು ಪಾದ-ರಸ. ಕ್ಷಣವೂ ವಿರಮಿಸದ ಪದ-ಗತಿ. ಸರಲವಾಗಿ ಹೇಳುವುದಾದರೆ ಕುಣಿತಕ್ಕೆ ನಿಲುಗಡೆ ಇಲ್ಲ. ಆದರೆ ಆಪಾದಾಭಿಸರಣವೂ ರಸೋತ್ಕರ್ಷವನ್ನು ಕಾಯ್ದುಕೊಳ್ಳುತ್ತದೆ. ಆದ್ದರಿಂದ ಅದು ಪಾದ-ರಸ. ಲಯಾನ್ವಿತವಾದ ಹೆಜ್ಜೆಯನ್ನು ಎಲ್ಲೂ ನಿಲ್ಲಿಸದೇ ಅನವರತವಾಗಿ ಅಭಿನಯವನ್ನು ಜಾರಿಯಲ್ಲಿಡಬಲ್ಲ ಜಾಣಗಾರುಡಿಗ.

ಕಾಲಿಗೂ ಕಣ್ಣಿಗೂ ಅದೆಂತಹ ಹೊಂದಾಣಿಕೆಯನ್ನು ಹೆಣೆದಿದ್ದಾನೆ ಈತ! ಅದರಲ್ಲೂ, ಕಚಗುಳಿಯಿಡುವ ಒಳಗೊಳಗಿನ ಕಿರುಮುಕ್ತಾಯಗಳನ್ನು ಬರೆದುಕೊಳ್ಳುವಷ್ಟು ಸ್ಪಷ್ಟವಾಗಿ ಹೆಜ್ಜೆಪೆಟ್ಟುಗಳಲ್ಲಿ ರಂಗೋಲಿ ಇಡುತ್ತಾ ಜೊತೆಜೊತೆಗೆ ಸಾಹಿತ್ಯಿಕವಾದ ಶಬ್ದಾಭಿನಯವನ್ನು ನಿಖರವಾಗಿ ಬಿಡಿಬಿಡಿಯಾಗಿ ಹುಬ್ಬೇರುವಂತೆ ಗಚ್ಚುಗೊಳಿಸುತ್ತಾ ಸಾಗುವ ಇವರ ರಂಗನಿರ್ವಹಣೆ, ಪ್ರೇಕ್ಷಕರ ಉಸಿರಿಗೆ ಮೇಲುಬ್ಬಸ ತರುವಂತಹದ್ದು. ನರ್ತನ-ಅಭಿನಯಗಳನ್ನು ಅಖಂಡವಾಗಿ ಕೈವಾರಿಸುವುದು ಕೈಮೀರಿದ ಕೆಲಸ. ಅದನ್ನು ಇವರು ಸಲೀಲವಾಗಿ ಸಾಧಿಸುತ್ತಾರೆ. ಶಂಕರಕಂದಸ್ವಾಮಿಯವರದ್ದು ಪ್ರಾಯಶ: ನಾಟ್ಯಪ್ರಪತ್ತಿ. ಅದೇ ಅವರ ನಾಟ್ಯಪ್ರವೃತ್ತಿ ಕೂಡ. ಕ್ಷಣಕ್ಷಣವೂ ಅವರ ಸರ್ವಾರ್ಪಣ ಮನೋವೃತ್ತಿ ನೋಡುಗನ ಅನುಭವಕ್ಕೂ ಬರುತ್ತದೆ. ಅಂದು ಅವರು ಪ್ರಸ್ತುತಪಡಿಸಿದ ಹನೂಮದ್ವರ್ಣವೇ ಇದಕ್ಕೆ ನಿತಾಂತ ನಿದರ್ಶನ.


ಲಯ ಪ್ರೌಢಿಮೆಯೇ ಮೇರುಮಾನವಾದ ವರ್ಣ ಕಂದಸ್ವಾಮಿಯವರ ಮಾಕಂದಮಾರ್ಗದಲ್ಲಿ ಹಾಲಹೆಗ್ಗಡಲ ಹದವನ್ನೂ ಹಯನನ್ನೂ ಪಡೆಯುತ್ತದೆ. ಶಿವ ಪಾರ್ವತಿಯರು ವಾನರರೂಪಿಗಳಾಗಿ ಸಮಾಗಮವಾಗಿ ಜನಿಸಿದ ಕಪಿಶಿಶು ಅಂಜನಾದೇವಿಯ ಮಡಿಲಲ್ಲಿ ಬೆಳೆದು ಚಂದ್ರನನ್ನು ನುಂಗಿ ಉಗಿದು ಸಮುದ್ರಲಂಘನ ಮಾಡಿ ಸೀತಾಸಂದರ್ಶನ ಮುಗಿಸುವ ಕತೆಯ ಚೌಕಟ್ಟು ಹೊರನೋಟಕ್ಕೆ. ಸಾಮಾನ್ಯವಾಗಿ ಆಂಜನೇಯನನ್ನು ಕಲಾವಿದರು ಕಟೆದು ನಿಲ್ಲಿಸುವುದು ಬಾಯೊಳಗೆ ಗಾಳಿ ತುಂಬಿ ದವಡೆ ಹಿಗ್ಗಿಸಿ ಮೂತಿ ಮುಮ್ಮಾಡುವುದರ ಮೂಲಕ. ಶಂಕರಕಂದಸ್ವಾಮಿಯವರು ಇದಕ್ಕೆ ಹೊರತಾಗಿ ಮಾರುತಿಯ ಗುಣಲಕ್ಷಣಗಳನ್ನೆಲ್ಲಾ ಅಳವಡಿಸಿಕೊಳ್ಳುತ್ತಾರೆ. ಒಂದೊಂದು ಜತಿಯ ಚೌಕಕ್ಕೂ ಒಂದೊಂದು ಆಂಗಿಕದ ಅಡಿಪಾಯ ಹಾಕುತ್ತಾರೆ. ಮಾಮೂಲಿಯಾಗಿ ಜಡವಾಗುವ ಬೈರಿಗೆಯಾಗುವ ಲಯಾರಣ್ಯದ ಬಿರುಬೀಳಾಗುವ (ಅದೂ‌ಒಂದುಯಾಂತ್ರಿಕಸ್ವಾರಸ್ಯವೇ) ತಾಲಪ್ರಭುತ್ವದ ಪ್ರದರ್ಶನದ ಪ್ರತಿಷ್ಠಾವೇದಿಯಾಗುವ ಜತಿ, ಶಂಕರರ ಕೈಕಾಲುಗಳಲ್ಲಿ ಕಲೆಯ ಕಸೂತಿಯಾಗುತ್ತದೆ. ಇವರ ಜತಿ ಎಷ್ಟು ಕುತೂಹಲಕರವೆಂದರೆ, ಸಾಹಿತ್ಯ ಮುಗಿದು ಜತಿಗೆ ತೊಡಗುವ ಮೊದಲೇ ಪ್ರೇಕ್ಷಕರಲ್ಲಿ ಈಗ ಇಂವ ಯಾವ ಅಂಗಭಂಗಿಯಿಂದ ಶುರುಮಾಡುತ್ತಾನೋ ಅಂತ ನಿರುಕಿಸುವಷ್ಟು. ಒಂದರಂತೆ ಒಂದಿಲ್ಲ. ಜತಿಯ ಜೊತೆಗೆ, ಇದೀಗ ಮುಗಿಸಿದ ಕತೆಯ ಶಬ್ದಚಿತ್ರದ ಮುಂದುವರಿಕೆಯಾಗಿ ಸಾತ್ವಿಕವನ್ನು ಹಿಡಿದಿಟ್ಟುಕೊಂಡು, ಆ ಕತೆಗೊಪ್ಪುವ ಆಂಗಿಕವನ್ನು ಅಳವಡಿಸಿಕೊಂಡು ಪದಗತಿಯ ಚುರುಕಿನಲ್ಲಿ ಚೋದ್ಯವನ್ನೂ ಚಲಾವಣೆಯಲ್ಲಿಟ್ಟು, ಜತಿಯ ಒಟ್ಟು ಪ್ರಸ್ತುತಿ ತುಂಬಾ ಆಪ್ತವಾಗುವಂತೆ ತಟ್ಟಿಕೊಡುತ್ತಾರೆ. ಅದರಲ್ಲೂ ಕಲಾವಿದನ ಸೂಕ್ಷ್ಮಪರಿಶೀಲನವನ್ನು ಜತಿಯ ಮುಕ್ತಾಯದ ಆಂಗಿಕವಾದ ನಿಲುವಿನಲ್ಲಿ ನೋಡಬಹುದು. ಪ್ರತಿಮುಕ್ತಾಯಕ್ಕೂ – ಹಾಡಿನಲ್ಲಿ ಚರಣದಿಂದ ಪಲ್ಲವಿಯ ಎತ್ತುಗಡೆಗೆ ಅದೇ ಸ್ವರಕ್ಕೆ ಬಂದು ಮುಟ್ಟುವಂತೆ- ವಜ್ರಾಂಗಬಲಿಯ (ಬಜರಂಗಬಲಿ) ದೇಹಶಿಲ್ಪವನ್ನು ಕಡೆದಕಲ್ಲಂತೆ ನಿಲ್ಲಿಸುವ ಖಚಿತ ಅಂಗರೇಖೆಯು ಬೆವರುಬಸಿವ ಕ್ಲಿಷ್ಟವಾದ ಹುಡಿಗಾರಿಕೆಯ ಕುಣಿತವಿದ್ದೂ, ಒಂದಿಂಚೂ ಆಚೀಚೆ ಜಾರುತ್ತಿರಲಿಲ್ಲ. ಅದು ಕಲಾವಿದನ ಊರ್ಜಾಗುಣ.


ಇನ್ನು ಅಭಿನಯದಲ್ಲಿ ಅವರದ್ದು ರಸನಿಮಗ್ನತೆ ಅಂದರೆ ಎಲ್ಲಾ ಹೇಳಿದಂತೆ. ಕಣ್ಣಿನರೆಪ್ಪೆಗಳ ಮೇಲೆ ಅಸಾಧಾರಣ ಹಿಡಿತ ಇರುವ ಈ ಕಲಾವಿದ ಭಾವವಿಸ್ತರಣಕ್ಕೆ ವಾಕ್ಯಾಭಿನಯವನ್ನು ಆಶ್ರಯಿಸಲಿಲ್ಲವೆಂದೇ ಹೇಳಬೇಕು. ಹಾಡಿನಲ್ಲಿ ಹಾದುಹೋಗುವ ಶಬ್ದ (ವರ್ಡ್)ಗಳ ಉಚ್ಚಾರದ ಕಾಲಾವಧಿಯ ಒಳಗೇ ಆ ಶಬ್ದದ ಧ್ವನಿ-ವಾಚ್ಯಗಳನ್ನು ಅಭಿನಯಿಸುವ ಚುರುಕು, ವೇಗ, ಸ್ಪಷ್ಟತೆ, ಖಚಿತತೆ, ದೃಢತೆ.. ಅದುಕಂದಸ್ವಾಮಿಗೇ ಮೀಸಲೋ ಏನೋ! ನೀರಿನ ಅಲೆಯಷ್ಟು ತ್ವರೆಯಲ್ಲಿ ಭಾವತರಂಗವನ್ನು ಮುಖಭಿತ್ತಿಯಲ್ಲಿ ಮೂಡಿಸಿ ಮರೆಸುವ ಅಭಿನಯದ ಅಂತಸ್ಸತ್ತ್ವ ಅಚ್ಚರಿ ಹುಟ್ಟಿಸುತ್ತದೆ.ಇಡೀ ಹನೂಮದ್ವರ್ಣದಲ್ಲಿ ಆಂಜನೇಯನ ದಾಸೋಹಂಕೋಸಲೇಂದ್ರಸ್ಯ’ ವ್ಯಕ್ತಿತ್ವದಶರಣಾಗತಿ ’ಭಕ್ತಿ’ಸ್ಥಾಯಿಯಾಗಿ ಆವರಿಸಿತ್ತು. ರಾಮಭಕ್ತರು ನಡೆವ ದಾರಿಯ ಹುಡಿಮಣ್ಣನ್ನು ಬೊಗಸೆ ತುಂಬಿ ಎತ್ತಿ ಮೈಮೇಲೆ ಸುರಿದುಕೊಂಡು ಪುಲಕಾಂಕನಾದ ಹನುಮಂತನ ಧನ್ಯತೆಯನ್ನು ಶಂಕರಕಂದಸ್ವಾಮಿ ಅಭಿನಯಿಸಲಿಲ್ಲ, ಅನುಭವಿಸಿದರು; ಅಲ್ಲ, ನೋಡುಗರ ಕಣ್ಣೊಳಗೆ ಹನುಮನನ್ನು ಹೊಗಿಸಿ ಹೃದಯದಲ್ಲಿ ಹೂತುಬಿಟ್ಟರು. ಅದು ಕಲಾವಿದನ ಊರ್ಜೆ. ಅರ್ಧಸೆಕೆಂಡಿನ ಅಲ್ಪಾವಧಿಯಲ್ಲಿ ಸೀತೆಯ ದುಸ್ಥಿತಿ. ಮರುಹೊತ್ತಲ್ಲಿ ಹನುಮನ ಅಸಹಾಯಕತೆ, ಕ್ಷಣಾರ್ಧದಲ್ಲಿ ಭಕ್ತಿಪ್ಲಾವಿತವಾದ ಮಾರುತಿಯ ಅರ್ಧನಿಮೀಲಿತ ನೇತ್ರ, ಮಿಂಚಿನ ಸೆಳವಲ್ಲಿ ಲೋಕವನ್ನು ಗಡಗುಟ್ಟಿಸುವ ಉರುಳುಗಣ್ಣಿನ ಹೊಂತಕಾರಿ ರಾವಣನ ಬರ್ಬರ ಠೇಂಕಾರ, ಯಾವ ಪಾತ್ರ ಯಾವ ಭಾವಕ್ಕೂ ಚೇಂಜಿಂಗ್ ಓವರ್ಟೈಮ್ಗೆ ಎಡೆಯೇ ಇಲ್ಲ. ಬಿಡುವಿಲ್ಲದ ಬಿರುಸು ಹೆಜ್ಜೆಯ ಕುಣಿತವನ್ನು, ಬೆಚ್ಚುವ ಚಮಚ್ಚಾರಿಗಳನ್ನು ಮಾಡಮಾಡುತ್ತಲೇ, ಪಾತ್ರೋಚಿತವಾದ ಅಭಿನಯದ ರೌದ್ರ-ಶಾಂತಗಳ ವಿಷಮ ಮಿಶ್ರಣವನ್ನೂ ಮುಕ್ಕಾಗದಂತೆ ಕಟ್ಟಿಕೊಡುತ್ತಿದ್ದುದು ಅಪರೂಪದಲ್ಲಿ ಅಪರೂಪ ನೃತ್ಯಯೋಗ.

ತಮಿಳುನಾಡಿನ ಚಿದಂಬರೇಶ್ವರನಿಗೆ ಸಂಬಂಧಿಸಿದಂತೆ ಪ್ರಚಲಿತವಿರುವ ನಂದನಾರ್ ಕಿರುಗತೆಯ ನಾಟ್ಯರೂಪವೂ ಲೋಕಧರ್ಮಿಯನ್ನು ಹೇಗೆ ರಸೋಚಿತವಾಗಿ ಬಳಸಬಹುದು/ಬಳಸಬೇಕು ಎಂಬುದಕ್ಕೆ ತೋರುಗಂಬವಾಗಿತ್ತು. ಅಂತ್ಯಜನಾದ ನಯನಾರನ ಲಯಬದ್ಧವಾದ ಪ್ರವೇಶವೇಆಹಾ ಎನ್ನುವಂತಿತ್ತು. ಹೆಗಲ ಮೇಲಿದ್ದ ಚೌಕಬಟ್ಟೆಯನ್ನು ಸೆಳೆದು ಕಂಕುಳಲ್ಲಿ ಸಿಕ್ಕಿಸಿ ಬೆನ್ನುಬಗ್ಗಿ ಕೈಮೊಗ್ಗು ಜೋಡಿಸಿ ಧಣಿಗಳ ಮನೆಯಂಗಳಕ್ಕೆ ಬಂದು ತಲೆಗಿಂಡುತ್ತಾ ನಿಲ್ಲುವ ನಯನಾರ ಯಾವತ್ತೂ ನೋಡುಗರ ಕಣ್ಣಪಾಪೆಯಿಂದ ಕದಲಲಾರ. ಹಾಗೆಯೇ ಮೇಲುಜಾತಿಯ ಧಣಿಯ ಸ್ಪೃಶ್ಯತ್ವದ ಅಂತಸ್ತನ್ನು, ಕೇವಲ ತಾಂಬೂಲ ಮೆಲ್ಲುವ ಮರ್ಜಿಯಲ್ಲಿ ಕೆತ್ತಿಟ್ಟದ್ದು ನೂರುಶಬ್ದಗಳ ವ್ಯಾಖ್ಯೆಗೆ ಸಮ. ವೀಳ್ಯದೆಲೆಗೆ ಸುಣ್ಣಹಚ್ಚಿ ಅಡಿಕೆ ಗೊಟಾಯಿಸಿ ಒಟ್ಟು ಮಡಿಕೆ ಮಾಡಿ ಬಲಗೈಯ ಬೆರಳಲ್ಲಿ ಗುದುಮಿ, ಎಡದ ಅಂಗೈಯನ್ನು ಬಲಗೈಯಲ್ಲಿ ಝಾಡಿಸಿ ಕೊಡಹಿ, ತಾಂಬೂಲವನ್ನು ವಕ್ರಮುಖ ಭಂಗಿಯಲ್ಲಿ ದವಡೆ ಸಂದಿಗೆ ತೂರಿ ಮದವನ್ನು ಸುರಿಸುವ ಕೂರ್ನೋಟವನ್ನು ಎಸೆದು, ನಾಲಿಗೆಯ ಸೌಟಿನಿಂದ ಬಾಯೊಳಗಿರುವ ತಾಂಬೂಲದುಂಡೆಯನ್ನು ಎಡದವಡೆಯಿಂದ ಬಲದವಡೆಗೆ ರವಾನಿಸಿದ ಗತ್ತು, ಅದು ಶಂಕರಕಂದಸ್ವಾಮಿ ಅಭಿನಯಸಾಮರ್ಥ್ಯದ ಜಗತ್ತು. ಪಾತ್ರನಿರ್ದೇಶನಕ್ಕೆ ಕೇವಲ ಬಲದವಡೆಯಲ್ಲಿ ಉಂಡೆಯಾಗಿ ಕೂತ ತಾಂಬೂಲವನ್ನೇ ಪ್ರತಿಮೀಕರಿಸಿದ್ದು ಕಲಾವಿದನ ಲೋಕಪರಿಶೀಲನದ ಎಚ್ಚರಕ್ಕೆ ತೆರೆಗನ್ನಡಿ.


ಆನಂದತಾಂಡವ ನಟನ ಶಿವನಪ್ರಕರಣ ಸಂಸ್ಕೃತಸಾಹಿತ್ಯವಾದರೂ ಒಂದು ಶಬ್ದವನ್ನೂ ನಿರುಪಯೋಗವಾಗಿ ಮೂಲೆಗೆಸೆಯಲಿಲ್ಲ. ಚಿಟಿಕೆಯ ಚುರುಕಲ್ಲಿ ಇಡೀ ಬೆಳ್ಳಿಬೆಟ್ಟದ ಶಿವಸಂಸಾರದ ರಂಗಸೃಷ್ಟಿಯಾಗಿ ಬಿಟ್ಟಿತು. ಎಲ್ಲೂ ಪಾತ್ರಶಿಲ್ಪನದಲ್ಲಿಓವರ್ಲ್ಯಾಪ್’ಇಲ್ಲ; ರಿಪಿಟಿಶನ್’ಇಲ್ಲ. ಶಿವಗಣಗಳ ಗಂಡುಹಿಂಡಿನಲ್ಲಿ ಮಿಂಚಾಗಿ ಮಿರುಗಿದ್ದು ಪಾರ್ವತಿಯ ಲಾಸ್ಯಪ್ರತಿಮೆ. ಈ ಪ್ರಕರಣದಲ್ಲಿ ಕಲಾವಿದ ಸಾಕಷ್ಟು ಕರಣಗಳನ್ನು ಜಡೆಜಡೆಯಾಗಿ ಹೆಣೆದದ್ದು ಚೇತೋಹಾರಿಯಾಗಿತ್ತು. ಪಟಾಕಿ ಸಿಡಿದಂತೆ ಬೆನ್ನುಬೆನ್ನಿಗೆ ಫಳಕಿಸಿದ ವಿದ್ಯುದ್ಭ್ರಾಂತಕರಣ ಪ್ರೇಕ್ಷಕನಹೃತ್ಕರಣವನ್ನು ಏರುಪೇರುಗೊಳಿಸಿದ್ದಲ್ಲಿ ಆಶ್ಚರ್ಯವಿಲ್ಲ. ಅಂತೆಯೇ ಶಿವನ ತಾಂಡವಭಂಗಿಗಳ ಅಂಗರೇಖೆ, ಅದರ ಬಾಗು-ಬಿಗು-ಬಳುಕು-ಬಿಸುಪು… ಅವು ಯಾವುದೂ ಪೋಸು ತೋರಿಸಲಿಕ್ಕಾಗಿ ಹೊಸೆದ ಹೊಡೆಯಲ್ಲ; ತನ್ನ ದೈಹಿಕವಾದ ಲಾಘವವನ್ನು ಪ್ರದರ್ಶನಕ್ಕಿಡುವ ಚಾಪಲ್ಯ ತೋರದೆ, ಆದರೆ ಅಂಗಾವಯವಗಳ ಎಲ್ಲ ನಮನೀಯತೆಯನ್ನು ಸುಂದರವಾಗಿ ಸೂಕ್ತವಾಗಿ ಆರಿಸಿಕೊಂಡ ವಸ್ತುವಿಗೆ ಅನಿವಾರ್ಯ ಎನ್ನುವಂತೆ ಹೊಂದಿಸಿ ನಾಟ್ಯಾಂಬರವನ್ನು ನೇಯ್ದದ್ದು, ಅದನ್ನು ರಸಿಕರಿಗೇ ಹೊದೆಸಿದ್ದು ಶಂಕರಕಂದಸ್ವಾಮಿಯ ತಪ:ಫಲ.

ನಾಟ್ಯ ಹೀಗಿರುವುದಾದರೆ ಅನ್ನನೀರು ಬಿಟ್ಟಾದರೂ ನೋಡಬೇಕು ಅನ್ನಿಸುವಂತೆ ಹೃದ್ಯವಾಗಿ ಆಸ್ವಾದ್ಯವಾಗಿ ಮೆಲುಕುವಂತೆ ನಾಟ್ಯಶಾರದೆಯನ್ನು ರಂಗದಲ್ಲಿ ಪ್ರತ್ಯಕ್ಷೀಕರಿಸಿದ ಮಲೇಶಿಯಾ ಕಲಾವಿದನಿಗೆ ಮಹತ್ಪ್ರಣಾಮಗಳು. ಇಲ್ಲಿಯ ಹಿಮ್ಮೇಳದವರೊಂದಿಗೆ ಯಾವ ಗೊಂದಲವೂ ಇಲ್ಲದೆ ಗಜಗತಿಯಲ್ಲಿ ನೃತ್ಯೋದ್ಯಾನವಿಹಾರ ಮಾಡಿದ ಶಂಕರಕಂದಸ್ವಾಮಿಯವರ ಆತ್ಮಪ್ರತ್ಯಯಕ್ಕೆ ಅನಂತವಂದನೆ. ಹಿಮ್ಮೇಳದಲ್ಲಿ ಗಾಯಕ ನಂದಕುಮಾರ್, ಮೃದಂಗದಲ್ಲಿ ಚಂದ್ರಶೇಖರ್, ಕೊಳಲಿನಲ್ಲಿ ವಿವೇಕ್, ನಟ್ಟುವಾಂಗದಲ್ಲಿ ಪ್ರಸನ್ನ ಅವರು ಶಂಕರಕಂದಸ್ವಾಮಿಯವರ ಮನೋಲಯಕ್ಕೆ ಮೂರ್ತರೂಪ ಕೊಡುವಲ್ಲಿ ಕಸುಬುದಾರ-ಗುಡಿಗಾರತನದಿಂದ ಕಾರ್ಯಕ್ರಮಕ್ಕೆ ಪ್ರಭಾವಳಿ ಒದಗಿಸಿದರು.

(ಲೇಖಕರು ಕವಿ, ಕೃತಿಕರ್ತೃ, ವಿದ್ವಾಂಸರು, ವಿಮರ್ಶಕರು ಮತ್ತು ಅವಧಾನ ಪೃಚ್ಛಕರು)

3 Responses to ನಾಟ್ಯವಶಂಕರನಾದ ಶಂಕರಕಂದಸ್ವಾಮಿ

 1. ಮನೋರಮಾ.ಬಿ.ಎನ್

  ’ಶಂಕರ’ನ ನೃತ್ಯಸಾಕ್ಷಾತ್ಕಾರಕ್ಕೆ ’ ಶಂಕರನಾರಾಯಣರ ಬರೆಹ!!! Wahhh….
  ಶಂಕರ ಕಂದಸ್ವಾಮಿಯವರ ನೃತ್ಯ ಕಂಡ ಮೇಲೆ ಕೊರ್ಗಿ ಉಪಾಧ್ಯಾಯರ ಮಾತು, ಬರೆಹ ನನ್ನ ಅನುಭವವಾಯಿತು. ಯಾವುದೋ ಆತ್ಮವೇ ಮೈಯಲ್ಲಿ ಹೊಕ್ಕಂತೆ ನೃತ್ಯವಾಡಿದ ಶಂಕರ್ ಆಂಗಿಕ, ಸಾತ್ತ್ವಿಕವೆರಡರಲ್ಲೂ ಮಿಂಚು !! ಸರಳ, ಸಹೃದಯೀ ಕಲಾವಿದ. ಎಂದಿನ ಭರತನಾಟ್ಯದ ಸವಕಲೆನಿಸುವ ಪದಾರ್ಥಾಭಿನಯದಲ್ಲೂ ಸಾತ್ತ್ವಿಕತೆಯ ದರ್ಶನ ಮಾಡಿಸಲು ಸಾಧ್ಯ ಎಂಬುದನ್ನು ಈ ಕಲಾವಿದನಿಂದ ನೋಡಿ ಕಲಿಯಬೇಕು.

 2. Deepak Kumar

  Nija. manoramala jothe shankarannana nrityada divyanubhava padeda dhanyaralli naanuu obba…

 3. ಕಾಂಚನ ರೋಹಿಣಿ ಸುಬ್ಬರತ್ನಂ

  ಎಂದಿನಂತೆ ತಮ್ಮ ಅಪೂರ್ವ ಪದಗಳಿಂದ ಲಾಸ್ಯ – ತಾಂಡವಗಳ ಮಾರ್ಗ – ದೇಶಿಯ ನೃತ್ತ, ನೃತ್ಯ, ನಾಟ್ಯ,ನರ್ತನಗಳನ್ನು ನಮ್ಮ ಚಿತ್ತದಲ್ಲಿ ಸುಮನೋಲ್ಲಾಸವಾಗಿ ಉಪಾಧ್ಯಾಯರು ಮಾಡಿಸಿಬಿಡುತ್ತಾರೆ. ಈ ಕಾರ್ಯಕ್ರಮವನ್ನು ನೋಡದೆ ಇದ್ದದ್ದು ನಮ್ಮ ಜನ್ಮಾಂತರದ ನಷ್ಟವೇ ಎಂದು ಕೈ ಕೈ ಹೊಸೆದುಕೊಳ್ಳುವ ಹಾಗೆ ಮಾಡುತ್ತಾರೆ! ಪ್ರತಿಬಾರಿಯೂ ನೃತ್ಯ ಕಲಾವಿದರು ಅಳವಡಿಸಿಕೊಳ್ಳಲೇಬೇಕಾದ ವಿಷಯಗಳನ್ನು ಈ ರೀತಿಯ ವಿಮರ್ಶೆಗಳಲ್ಲಿ ದಿಗ್ದರ್ಶನ ಮಾಡಿಸುತ್ತಲೇ ಇರುತ್ತಾರೆ. ಕಲಿತವರು ಪುಣ್ಯಾತ್ಮರು.! ಎಲ್ಲ ವಿಮರ್ಶಾಕಾರರಿಗೂ ಗಾಯಕ ವಾದಕರನ್ನು ಹಿನ್ನೆಲೆಯಲ್ಲಿಯೇ ಇಡಲು ಮನಸ್ಸು! ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳಿಗೂ ಅವರ ಕಲಾತ್ಮಕ ಕುಸುರಿ ಕೆಲಸವೋ, ಅಥವಾ ಅದಿಲ್ಲದೆ ಆಭಾಸವೋ, ಅಥವಾ ಅವರೂ ಮಾಡಿಕೊಳ್ಳಬೇಕಾಗಿರುವಂತಹ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ನೀಡುವುದನ್ನೋ ತಿಳಿಯಾಗಿ ಮಾಡಿದರೆ ಉಪಕಾರವಾದೀತು.

Leave a Reply

*

code