ಅಂಕಣಗಳು

Subscribe


 

ಶಿಕ್ಷಣ ಎಂಬ ನಾಟಕವೂ – ನಾಟಕ ಎಂಬ ಶಿಕ್ಷಣವೂ

Posted On: Wednesday, May 27th, 2015
1 Star2 Stars3 Stars4 Stars5 Stars (No Ratings Yet)
Loading...

Author: - by ಮೂರ್ತಿ ದೇರಾಜೆ, ವಿಟ್ಲ

ಶ್ರೀಯುತ ಮೂರ್ತಿ ದೇರಾಜೆ, ದಕ್ಷಿಣಕನ್ನಡದ ಪುಟ್ಟ ಊರು ವಿಟ್ಲದಲ್ಲಿ ನೆಲೆಸಿರುವ ಹಿರಿಯ ರಂಗಕರ್ಮಿ, ಸಂಘಟಕರು, ವಿಮರ್ಶಕರು, ‘ಸಮಸಾಂಪ್ರತಿ’ ಮತ್ತು ತಮ್ಮ ತಂದೆ ಯಕ್ಷಗಾನ ಅರ್ಥಧಾರಿ, ಸಾಹಿತಿ ದೇರಾಜೆ ಸೀತಾರಾಮಯ್ಯರ ಸ್ಮರಣಾರ್ಥವಾಗಿ ಸಂಸ್ಥೆಯನ್ನು ರೂಪಿಸಿ ಅನೇಕ ಪ್ರಕಾಶನ, ಯಕ್ಷಗಾನ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದ್ದಾರೆ. ಅವರ ಬರೆಹಗಳು ಈಗಾಗಲೇ ನಾಡಿನ ಹಲವು ನಿಯತಕಾಲಿಕೆ, ಪತ್ರಿಕೆ, ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗುತ್ತಲೇ ಬಂದಿವೆ.

ಅದು ರಂಗಭೂಂಇಯಾಗಿರಲಿ, ನೃತ್ಯವಾಗಿರಲಿ, ಸಂಗೀತ, ಶಿಲ್ಪ, ಕುಶಲಕಲೆ, ಚಿತ್ರಕಲೆಗಳಾಗಿರಲಿ.. ಇವರ ಅನುಭವಜನ್ಯವಾದ ಮಾತುಗಳಲ್ಲಿ ಕಲಾವಿದರು ಮನನ ಮಾಡಿಕೊಳ್ಳಬೇಕಾದ ಸಾಕಷ್ಟು ವಿಚಾರಗಳಿವೆ.  ಇಂದಿಗೆ ಕಲೆ ಮತ್ತು ಶಿಕ್ಷಣದ ಪರಸ್ಪರ ಸಂಬಂಧವು ಮಕ್ಕಳಲ್ಲಿ ಮೂಡಬೇಕಾದ ಬಗೆಯನ್ನು ಚಿತ್ರಿಸಿದ್ದಾರೆ.

ಇದು ಈ ಹೊತ್ತಿನ ಅನಿವಾರ್ಯವೂ ಆಗಿದೆ. ಮೂರ್ತಿ ದೇರಾಜೆಯವರ ರಂಗಸಂಬಂಧಿತವಾದ ಹಲವು ಲೇಖನಗಳು ‘ಅಂಗಳ ಮಾತು ತಿಂಗಳ ಚರ್ಚೆಯಲ್ಲಿ ಮುಂದಿನ ದಿನಗಳಲ್ಲಿ ಒಡಮೂಡಲಿವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ಸಂಬಂಧ ಯಾವುದೇ ಚರ್ಚೆ, ಸಂವಾದ, ಅನಿಸಿಕೆಗಳಿಗೆ ಮುಕ್ತ ಅವಕಾಶವಿದೆ-ಸಂ)

ನಾನು ಚಿಕ್ಕವನಿದ್ದಾಗ, ನನಗೆ ಕಾಣುತ್ತಿದ್ದ ಒಂದು ಸಂಗತಿ ಏನೆಂದರೆ, – ‘ಈ ಶಾಲೆ ಎನ್ನುವುದು ಇಲ್ಲದಿರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು ……..’ ಅಂತ. ಎಲ್ಲಾ ಮಕ್ಕಳೂ ಗುಟ್ಟಿನಲ್ಲಿ ಈ ವಿಷಯವನ್ನು ಹಂಚಿಕೊಂಡು ಖುಷಿ ಪಟ್ಟವರೇ, ಬಿಡಿ ! ಇಂದಿಗೂ ‘ಈ ಯೋಚನೆ ಬಹು ದೊಡ್ಡ ಅಪರಾಧ’ ಎನ್ನುವ ಪಾಪ ಪ್ರಜ್ನೆ ಏನೂ ನನ್ನನ್ನು ಕಾಡುತ್ತಾ ಇಲ್ಲ. ಆದರೆ ಶಾಲಾ ಶಿಕ್ಷಣದ ಹೆಸರಿನಲ್ಲಿ ನಾವಿಂದು ಮಕ್ಕಳ ಉಲ್ಲಾಸ, ಆನಂದಕ್ಕೆ ಅವಕಾಶ ನೀಡುತ್ತಿಲ್ಲವೇನೋ ಎನ್ನುವ ಸಂದೇಹ ನನ್ನದು. ನಾವು ಹಿರಿಯರು ಇಚ್ಚಿಸಿದಂತೆ ಮಕ್ಕಳು ಬೆಳೆಯಬೇಕೆಂದು ಅಪೇಕ್ಷಿಸುತ್ತಾ, ಮಕ್ಕಳನ್ನು ಒಂದು ಯಂತ್ರದಂತೆ ಸಿದ್ದಗೊಳಿಸುತ್ತಿದ್ದೇವೋ ಏನೋ…
ನಗರದ ಹುಚ್ಚು ಇಂದು ಹಳ್ಳಿಗೂ ಕಾಲಿಟ್ಟಿದೆ. ಹಿರಿಯರ ಪ್ರತಿಷ್ಟೆಗೆ ಮಕ್ಕಳು ಬಲಿಯಾಗುತ್ತಿರುವಂತೆ ಕಂಡುಬರ್ತಾ ಇದೆ.

ಈಗ ನನ್ನ ಪ್ರಶ್ನೆ ಏನೆಂದರೆ- ಮಕ್ಕಳ ಬೆಳವಣಿಗೆಗೆ, ಪ್ರತಿಭಾ ವಿಕಾಸಕ್ಕೆ ‘ಸ್ಪರ್ಧೆ’ ತೀರಾ ಅಗತ್ಯ ಎನ್ನುವುದು ಒಂದು ಭ್ರಮೆ ಅನಿಸುವುದಿಲ್ಲವೇ ! ಹೀಗನ್ನುವುದಕ್ಕೂ ಕಾರಣವಿದೆ. ಆಟೋಟಗಳಲ್ಲಿ ಸ್ಪರ್ಧೆ ಸರಿಯಾದದ್ದು, ಅಲ್ಲಿ ವೈಜ್ಞಾನಿಕ ನಿಖರತೆ ಇರುವುದರಿಂದ, ಸೋತ ಮಗುವಿಗೆ ತನ್ನ ಅಸಾಮರ್ಥ್ಯದ ಅರಿವು ಆಗಿ ಬೆಳೆಯುವ ಛಲ ಮೂಡುತ್ತದೆ. ಆದರೆ ಶಿಕ್ಷಣದಲ್ಲಿ, ಕಲೆಯಲ್ಲಿ ಸ್ಪರ್ಧೆ ಎನ್ನುವುದು ತೀರಾ ತೀರಾ ಅವೈಜ್ಞಾನಿಕÀವಾದದ್ದು, ಅದಕ್ಕೆ ನಿರ್ದಿಷ್ಟ ಮಾನದಂಡಗಳೇ ಇಲ್ಲ ಎನ್ನುವುದು ನನ್ನ ಭಾವನೆ.
‘ತಮ್ಮ ಮಗುವಿಗೇ ಪ್ರಥಮ ಸ್ಥಾನ ಸಿಗಬೇಕಿತ್ತು’ ಎನ್ನುವುದು ಪ್ರತಿಯೊಬ್ಬ ಹೆತ್ತವರ, ಶಾಲೆಯವರ ಅನಿಸಿಕೆ. ಸ್ಪರ್ಧೆಯಲ್ಲಿ ಗೆದ್ದ ಮಗುವಿಗೆ ‘ತಾನು ಶ್ರೇಷ್ಠ’ ಎನ್ನುವ ಮೇಲರಿಮೆ; ಸೋತ ಮಗುವಿಗೆ ‘ತಾನು ಕನಿಷ್ಟ’ ಎನ್ನುವ ಕೀಳರಿಮೆ ಉಂಟಾಗುವ ಸಾಧ್ಯತೆಯೇ ಹೆಚ್ಚಲ್ಲವೇ !

ನಮಗೆ ಗೊತ್ತಿಲ್ಲದೇ ನಾವೆಲ್ಲರೂ ಬಿಡುವಿಲ್ಲದ ಓಟದಲ್ಲಿದ್ದೇವೆ. ದುಡ್ಡು, ಅಧಿಕಾರ, ಪ್ರತಿಷ್ಠೆಗಳೇ ಇಂದು ನಮ್ಮ ಮನದಾಳದ ಬಯಕೆಗಳು ! ಮಾನವತೆ, ಸಮಾನತೆ, ವಿಶ್ವಬ್ರಾತೃತ್ವ, ವ್ಯಕ್ತಿತ್ವ ವಿಕಸನ, ಮೌಲ್ಯಗಳು, ಆರೋಗ್ಯಕರ ಸ್ಪರ್ಧೆ – ಇಂತಹ ಪದಗಳೆಲ್ಲ ಯದ್ವಾತದ್ವ ಬಳಕೆಯಿಂದಾಗಿ ತಮ್ಮ ಅರ್ಥವನ್ನು ಕಳಕೊಂಡಿದೆ ಎಂದೆನಿಸುತ್ತದೆ.
ನಮ್ಮ ಶಿಕ್ಷಣವನ್ನು ಸರಿಯಾಗಿ ಗಮನಿಸಿದವರಿಗೆ ಇದು ನಿತ್ಯ ಕಾಡುವ ಸಂಗತಿ. ಹೀಗಿರುವಾಗ ಶಿಕ್ಷಣ ಎಂದರೆ – ‘ಮಗುವಿನ ತಲೆಯೊಳಗೆ ಎಷ್ಟು ಸಾಧ್ಯವೋ ಅಷ್ಟು ತುಂಬಿಸುವುದು’ ಎನ್ನುವ ಯೋಚನೆ ಸರಿಯೇ ? ಬದಲಿಗೆ ‘ಮಗುವಿನಲ್ಲಿರುವ ಸಾಮರ್ಥ್ಯವನ್ನು ಹೊರಗೆಳೆಯುವಂತಾದ್ದು, ಮಗುವಿನ ಸಾಮರ್ಥ್ಯವನ್ನು ಬೆಳೆಸುವಂತಾದ್ದು’ ಎನ್ನುವ ಭಾವನೆ ಹಿರಿಯರಲ್ಲಿ ಮೂಡಿದರೆ ಒಳಿತಲ್ಲವೇ?

ಮನಶಾಸ್ತ್ರಜ್ಞರ ಪ್ರಕಾರ ‘ಕಲಿಕೆ’ ಎನ್ನುವುದು ಬಾಲ್ಯದ ಮೊದಲ ವರ್ಷಗಳಲ್ಲೇ ಮುಗಿದಿರುತ್ತದಂತೆ, ನಂತರ ಏನಿದ್ದರೂ ಅದರ ವಿಸ್ತರಣೆ ಅಷ್ಟೆ. ತಮ್ಮ ಸುತ್ತಮುತ್ತಲಿನ ಪ್ರಕೃತಿ, ಪರಿಸರ, ಪ್ರಾಣಿ -ಪಕ್ಷಿಗಳು, ಹಿರಿಯರು, ಓರಗೆಯವರು ಎಲ್ಲವನ್ನೂ ನೋಡುತ್ತಾ, ಕೇಳುತ್ತಾ, ಗಮನಿಸುತ್ತಾ ಮಕ್ಕಳು ಕಲಿಯುತ್ತಾರೆ. ಆ ‘ಕಲಿಯುವುದು’ ಕುರಿತಾಗಿ ಅಲ್ಲ, ಬದಲಾಗಿ ಅರಿವಿಲ್ಲದೇ ನಡೆಯುವುದು.
ಹಸಿವು ನಿದ್ರೆಗಳಂತೆ, ಆಟ ನಾಟಕಗಳೂ ಮನುಷ್ಯನ ಮೂಲಭೂತ ಪ್ರವೃತ್ತಿ.
ಮನುಷ್ಯನ ಹುಟ್ಟಿನೊಂದಿಗೇ ಇದೆ. ಮಗುವಿಗೆ ಆಟ ಬೇಕು. ಅದು ಕಂಡದ್ದು, ಕೇಳಿದ್ದು, ಮುಟ್ಟಿದ್ದು, ಮೂಸಿದ್ದು, ಸವಿದದ್ದು ಎಲ್ಲಾ ಮತ್ತೊಮ್ಮೆ ಪ್ರಕಟವಾಗಲೇಬೇಕು. ಮಗುವಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವೆ ಬಹಳ ಅಂತರವೇನೂ ಇರುವುದಿಲ್ಲ. ಅದೂ ಅದಕ್ಕೆ ಆಟ. ಮಗುವಿಗೆ ಅದರ ಆಟಕ್ಕೆ, ಒಡನಾಟಕ್ಕೆ ಸ್ಪಂದನ ಬೇಕು. ಆಟಕ್ಕೆ ಜೊತೆ ಇದ್ದರೆ ಮಗುವಿಗೆ ಅಪ್ಪನೂ ಬೇಡ, ಅಮ್ಮನೂ ಬೇಡ. ಆಟ ಮಗುವಿಗೆ ಆನಂದದಾಯಕವಾದದ್ದು. ಆಟದಿಂದ ಮಗುವಿನ ಮನಸ್ಸು ಉಲ್ಲಸಿತವಾಗುತ್ತದೆ. ಕಲ್ಪನೆಗಳು ಗರಿಗೆದರತೊಡಗುತ್ತವೆ. ಪ್ರತಿಕ್ಷಣ ಹೊಸ ವಿಷಯಗಳ ಬಗ್ಗೆ ಕುತೂಹಲ, ಬೆರಗು ಮೂಡುತ್ತದೆ. ಆಟದ ಮೂಲಕವೇ ಮಗುವಿನ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಬೆಳೆಯುತ್ತಾ ಹೋಗುತ್ತದೆ.

‘ರಂಗಭೂಮಿಯ ಮೂಲಕ ಶಿಕ್ಷಣ’ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡದ್ದೇ ಮಕ್ಕಳ ಚಿಂತನೆಯನ್ನು ಸೃಷ್ಟಿಶೀಲವಾಗಿಸುವುದಕ್ಕೆ. ಆದರೆ, ಈ ಪರಿಕಲ್ಪನೆಯನ್ನು – ‘ಮಕ್ಕಳಿಗೆ ನಾಟಕದ ಶಾಸ್ತ್ರ, ಸಿದ್ದಾಂತಗಳನ್ನು ಕಲಿಸುವುದು……’ ಎಂದು ತಿಳಿದವರೂ ಇದ್ದಾರೆ. ಅಂತೆಯೇ ಮಕ್ಕಳಿಗೆ ನಾಟಕ ಯಾಕೆ ಎಂದು ಕೇಳುವವರೂ ಇದ್ದಾರೆ. ‘ಮಕ್ಕಳು ಸಂಭಾಷಣೆಯನ್ನು ಕಂಠಪಾಟ ಮಾಡಿ, ಸ್ವಲ್ಪವೂ ತಪ್ಪಿಲ್ಲದೇ ಒಪ್ಪಿಸುವುದೇ…..
ಮಕ್ಕಳನಾಟಕ’ ಎಂದು ತಪ್ಪಾಗಿ ಅರ್ಥೈಸಿಕೊಂಡದ್ದೇ ಇದಕ್ಕೆ ಕಾರಣ ಅಷ್ಟೆ. ಆದರೆ ಅದು ಹಾಗಲ್ಲ, ಮಕ್ಕಳ ನಾಟಕ ಅಥವಾ ಮಕ್ಕಳ ರಂಗಭೂಮಿ ಚಟುವಟಿಕೆ ಅಂದರೆ ಅದೂ ಒಂದು ಆಟವೇ. ಅಲ್ಲಿ ಆಟ ಇದೆ, ಓಟ ಇದೆ, ನಾಟಕ ಇದೆ, ಹಾಡು-ಕುಣಿತಗಳಿವೆ, ಚಿತ್ರ ಇದೆ, ಹೀಗೆ ಏನೆಲ್ಲ ಇರುತ್ತವೆ. ಇದೊಂದು ಹೊಸಾ ಪರಿಕಲ್ಪನೆ ಎಂದು ಭಾವಿಸಬೇಕಾಗಿಲ್ಲ. ಗಮನಿಸಿ.., ಹಿಂದಿನಿಂದಲೂ, ಮಕ್ಕಳಿಗೆ ಇಷ್ಟವಾದ ಒಬ್ಬ ಒಳ್ಳೆಯ ಅಧ್ಯಾಪಕನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಚಿಂತನೆ ಇತ್ತು ಎಂಬುದನ್ನು ನೆನಪಿಸಿಕೊಂಡರೆ ಈ ವಿಚಾರ ಸ್ಪಷ್ಟವಾಗುತ್ತದೆ.
ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದಾಗ ಏಕಾಗ್ರತೆ ಅದಾಗಿ ಉಂಟಾಗುತ್ತದೆ, ಪ್ರಯತ್ನವೇ ಬೇಡ. ನಮಗೆ ಇಷ್ಟವಾದದ್ದು ಮರೆತೂ ಹೋಗುವುದಿಲ್ಲ.

ಶಾಲಾ ಪೂರ್ವ ದಿನಗಳಲ್ಲಿ ಮಕ್ಕಳ ಆಟವನ್ನು, ಆ ಆಟದೊಳಗಿನ ನಾಟಕವನ್ನು ನೋಡದವರು, ನೋಡಿ ಮೆಚ್ಚದವರು ಯಾರೂ ಇಲ್ಲ. ಶಾಲಾ ಸಂದರ್ಭದಲ್ಲೂ ಮಕ್ಕಳ ಈ ಚಟುವಟಿಕೆಯನ್ನು ಬದಿಗೊತ್ತದೇ, ಅದನ್ನು ಮುಂದುವರಿಸುವಂತೆ ಪ್ರೊತ್ಸಾಹಿಸುತ್ತಾ, ಮಕ್ಕಳು ಕಲಿಯಬೇಕಾದ ವಾತಾವರಣವನ್ನು ಸೃಷ್ಟಿಸಬೇಕಾದದ್ದು ಶಿಕ್ಷಕರ ಹಾಗೂ ಹೆತ್ತವರ ಹೊಣೆ.

ಮಕ್ಕಳಿಗೆ ಸಾದ್ಯವಾದಷ್ಟೂ ಚಿತ್ರ ಬರೆಯಲು, ನಾಟಕ ಆಡಲು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಕತೆಗಳನ್ನು ಅವರ ಅನುಭವಗಳಿಗೆ ಹೊಂದಿಕೆಯಾಗುವಂತೆ ಹೇಳಿ, ಆ ಕತೆಗಳನ್ನು ನಾಟಕವಾಡಲು ಹುರಿದುಂಬಿಸಬೇಕು. ಮಾತುಗಳನ್ನು ಮಕ್ಕಳೇ ಹೊಂದಿಸಿಕೊಳ್ಳುತ್ತಾರೆ. ಮಾತುಗಳು ಹಿರಿಯರ ದೃಷ್ಟಿಯಿಂದ ಸರಿ ಇಲ್ಲ ಎನಿಸಿದರೂ, ತಿದ್ದಲು ಹೋಗದೇ, ಅವರವರೊಳಗೆ ಸರಿ ತಪ್ಪುಗಳ ಚರ್ಚೆ ನಡೆಯುವಂತೆ ಮಾಡಿ, ನಿಧಾನವಾಗಿ ಅದು ಅವರ ಅರಿವಿಗೆ ಬರುವಂತೆ ಮಾಡುವುದು ಅಪೇಕ್ಷಣೀಯ. ಈ ಪ್ರಕ್ರಿಯೆಯೇ ಮಕ್ಕಳಿಗೆ ಸಿಗುವ ಅದ್ಭುತ ಶಿಕ್ಷಣ. ಮತ್ತು ‘ಈ ಪ್ರಕ್ರಿಯೆಯೇ ನಿರಂತರ…..ಪ್ರದರ್ಶನ ಮುಖ್ಯವಲ್ಲ’ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ಆಗ ಚಿಕ್ಕಮಕ್ಕಳಿಗೆ ಪ್ರದರ್ಶನದ ಚಿಂತೆಯೇ ಇರುವುದಿಲ್ಲ. ಅವರಿಗೆ ಈ ಪ್ರಕ್ರಿಯೆಯೇ ಪ್ರದರ್ಶನವಾಗುತ್ತದೆ. ಇಲ್ಲವಾದರೆ ದೊಡ್ಡವರಾದಂತೆ ಪ್ರದರ್ಶನದ ಹುಚ್ಚು ಬೆಳೆಯುತ್ತಾ ಹೋಗುತ್ತದೆ.

ಒಟ್ಟಿನಲ್ಲಿ ಮಕ್ಕಳು ‘ಈ ಇನ್ನೊಂದು ರೀತಿ’ಯಲ್ಲಿ ಯೋಚಿಸುವಂತೆ ಮಾಡುವುದೇ ಶಿಕ್ಷಣದ ಗುರಿ. ಇದನ್ನು ನಾಟಕವೇ ಮಕ್ಕಳಿಗೆ ಕಲಿಸುತ್ತದೆ. ಈ ರೀತಿಯಲ್ಲಿ ನಾಟಕ, ಮಕ್ಕಳಿಗೆ ಆಟವಾಗುವುದರಿಂದ, ಅದು ಅವರಿಗೆ ಆಸಕ್ತಿದಾಯಕವಾಗಿ ಏಕಾಗ್ರತೆಯು ತನ್ನಿಂದ ತಾನೇ ಉಂಟಾಗುತ್ತದೆ. ಕ್ರಮೇಣ ಈ ಏಕಾಗ್ರತೆ ಅವರ ವ್ಯಕ್ತಿತ್ವದ ಭಾಗವಾಗಿ ಬಿಡುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತಾ ಬರುತ್ತದೆ, ಗಮನಿಸುವ ಶಕ್ತಿ ಚುರುಕಾಗುತ್ತದೆ, ಕಲ್ಪನಾ ಸಾಮರ್ಥ್ಯ ಬೆಳೆಯುತ್ತದೆ. ಮಕ್ಕಳ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಪ್ರಕಟವಾಗುತ್ತದೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತಾ ಬರುತ್ತದೆ. ಮಕ್ಕಳು ಚಿಂತಿಸಲು ತೊಡಗುತ್ತಾರೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಕಲಿಯುತ್ತಾರೆ. ಸೋಲು–ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಸಿದ್ದರಾಗುತ್ತಾರೆ. ಶಿಕ್ಷಣ ಮಾಡಬೇಕಾದ ಕೆಲಸ ಇದೇ ಅಲ್ಲವೇ… ಎಂದಷ್ಟೆ ನನಗೆ ಕಾಣುತ್ತಿರುವುದು !
********************

Leave a Reply

*

code