ಅಂಕಣಗಳು

Subscribe


 

ಶಿಲೆಯಲ್ಲಿ ಶಿವತಾಂಡವ

Posted On: Sunday, June 5th, 2022
1 Star2 Stars3 Stars4 Stars5 Stars (2 votes, average: 4.50 out of 5)
Loading...

Author: ಶ್ರೀಮತಿ  ದಿವ್ಯಾ ಪ್ರಸಾದ್, ಬೆಂಗಳೂರು

ದೇವಾಲಯಗಳಲ್ಲಿರುವ ಶಿಲ್ಪಕಲೆ ನಮ್ಮ ಭಾರತದ ಭವ್ಯ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯ ಪ್ರತೀಕ. ನಮ್ಮ ಬೆಂಗಳೂರಿನ ಅತಿ ಪ್ರಾಚೀನವಾದ ದೇವಾಲಯಗಳಲ್ಲಿ ಒಂದಾದ ಹಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನವು ಕೂಡ ಇದಕ್ಕೆ ಹೊರತಾಗಿಲ್ಲ.

ಚಿತ್ರಕೃಪೆ : ವಿಶ್ವನಾಥ್

“ನೂಪುರ ಭ್ರಮರಿ” ಸಂಸ್ಥೆಯಿಂದ ಆಯೋಜಿಸಲಾದ ನೃತ್ಯಶಿಲ್ಪಾ ಯಾತ್ರ  ಎಂಬ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಈ ದೇವಾಲಯವನ್ನು ದರ್ಶಿಸುವ ಸದಾವಕಾಶ ಒದಗಿ ಬಂತು. ಅಲ್ಲಿ ಪ್ರಥಮವಾಗಿ ನನ್ನನ್ನು ಆಕರ್ಷಿಸಿದ್ದು ದೇವಾಲಯದ ಮುಖ್ಯದ್ವಾರದ ಬಿತ್ತಿಯಲ್ಲಿ ಕಂಡು ಬಂದ ಅತ್ಯಂತ ಭವ್ಯವಾದ ನಟರಾಜನ ಶಿಲ್ಪ. ಶಿವನ ದೇವಾಲಯಗಳಲ್ಲಿ ನಟರಾಜನ ಶಿಲ್ಪ ಕಾಣುವುದು ಅತಿಶಯೋಕ್ತಿಯಲ್ಲ, ಆದರೆ ಈ ಶಿಲ್ಪದಲ್ಲಿ ನನಗೆ ವಿಶೇಷವೆನಿಸಿದ್ದು ನಟರಾಜನ ಓಲಗದಲ್ಲಿ ನಂದಿ, ಬ್ರಹ್ಮ, ವಿಷ್ಣು, ಇಂದ್ರ ಹಾಗೂ ಸರಸ್ವತೀಯರೂ ಸಹ ತಮ್ಮ ವಾದ್ಯಗಳೊಂದಿಗೆ ನಟರಾಜನ ನೃತ್ಯ ಸಂಭ್ರಮದಲ್ಲಿ ಭಾಗಿಯಾಗಿರುವುದು.

ನೃತ್ಯದ ಅಧಿಪತಿಯೆಂದೇ ಕರೆಯುಲ್ಪಡುವ ಶಿವನ ದೈವಿಕ ನಾಟ್ಯವನ್ನು ತಾಂಡವ ಎನ್ನುತ್ತಾರೆ. ಶಿವನ ತಾಂಡವವು ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಒಳಗೊಂಡ  ಹುರುಪಿನ ನಾಟ್ಯವೆಂದು ಪರಿಗಣಿಸಲಾಗಿದೆ. ತಾಂಡವ ನೃತ್ಯದಲ್ಲಿ ಎರಡು ಪ್ರಕಾರಗಳಿವೆ. ಮೊದಲನೆಯ ಪ್ರಕಾರವು ಶಿವನ ಸಂತಸ ಭಾವವನ್ನು ಸೂಚಿಸಿದರೆ ಎರಡನೆಯದು ವಿನಾಶ ಅಥವಾ ಲಯಸೂಚಕವಾಗಿದೆ. ಸಂತಸ ಭಾವದಲ್ಲಿರುವ ತಾಂಡವಗಳೆಂದರೆ ಆನಂದ ತಾಂಡವ ಹಾಗೂ ಸಂಧ್ಯಾ ತಾಂಡವ. ರುದ್ರ ತಾಂಡವದಡಿಯಲ್ಲಿ ಕಾಳಿಕಾ ತಾಂಡವ, ತ್ರಿಪುರ ತಾಂಡವ, ಗೌರಿ ತಾಂಡವ, ಸಂಹಾರ ತಾಂಡವ ಹಾಗೂ ಉಮಾ ತಾಂಡವಗಳು. ಹೀಗೆ ಭಾವದ ಆಧಾರದ ಮೇಲೆ ಶಿವ ತಾಂಡವವನ್ನು ಏಳು ಪ್ರಕಾರವಾಗಿ ವಿಂಗಡಿಸಬಹುದು.

ಮೊದಲೇ ಉಲ್ಲೇಖಿಸಿದಂತೆ ಈ ದೇವಾಲಯದ ಮುಖ್ಯದ್ವಾರದ ಬಲಭಾಗದ ನಡುವಿನಲ್ಲಿ ಚತುರ್ಭುಜ ನಟರಾಜನ ಶಿಲ್ಪವಿದೆ. ಇಲ್ಲಿ ನಟರಾಜನು ಬಲಭುಜದ ಮೇಲ್ಭಾಗದ ಹಸ್ತದಲ್ಲಿ ಡಮರು ಹಿಡಿದಿದ್ದು, ಇದು ಕಾಲ ಹಾಗೂ ಲಯವನ್ನು ಸೂಚಿಸುತ್ತದೆ. ಎಡಭುಜದ ಮೇಲ್ಭಾಗದ ಹಸ್ತದಲ್ಲಿ ಅಗ್ನಿಯನ್ನು ಹಿಡಿದಿದ್ದು. ಇದು ಸೃಷ್ಟಿ ಮತ್ತು ವಿನಾಶದ ಶಕ್ತಿಗಳನ್ನು ಸೂಚಿಸುತ್ತದೆ. ಬಲಭುಜದ ಕೆಳಭಾಗದಲ್ಲಿ ಅಭಯ ಹಸ್ತವನ್ನು ಹೊಂದಿದ್ದು ಇದು ನಮ್ಮನ್ನು ಆವರಿಸಿರುವ ದುಷ್ಟಶಕ್ತಿಗಳಿಂದ ನಮಗೆ ರಕ್ಷೆಯನ್ನು ನೀಡುವ ಸಂಕೇತ. ಎಡಭುಜದ ಕೆಳಭಾಗದಲ್ಲಿ ಗಜಹಸ್ತವನ್ನು ಹೊಂದಿದ್ದಾನೆ. ಹಾಗೆಯೇ ಅಪಸ್ಮಾರ ಎಂಬ ರಾಕ್ಷಸನನ್ನು ಮೆಟ್ಟಿ ನಿಂತು ಶಿವನು ನರ್ತಿಸುತ್ತಿರುವುದನ್ನು ಕಾಣಬಹುದು.ಇದು ಅಜ್ಞಾನವನ್ನು ಮೆಟ್ಟಿ ನಿಲ್ಲುವ ಸೂಚಕ.  ಶಿವನ ಜಟೆಯು ನೃತ್ಯದ ರಭಸದಿಂದ ಸುಂದರವಾಗಿ ನವಿಲು ಗರಿಗೆದರುವಂತೆ ಹರಡಿರುವದನ್ನೂ ನೋಡಬಹುದು. ಇನ್ನೊಂದು ವಿಶೇಷವೆಂದರೆ ನಟರಾಜನ ಪಾದಗಳ ಬಳಿ ಇರುವ ರುಂಡಗಳ ಮಾಲೆ. ಇದು ಮಾನವ ಜನ್ಮ ಎಂದಿಗೂ ಶಾಶ್ವತವಲ್ಲ ನಾವೆಲ್ಲರೂ ಒಂದು ದಿನ ಭಗವಂತನ ಪಾದಕಮಲಗಳನ್ನು ಸೇರಲೇಬೇಕೆಂಬ ಕಹಿ ಸತ್ಯವನ್ನು ನಮಗೆ ಅರಿವು ಮೂಡಿಸುವ ಸಂದೇಶದಂತೆ ಭಾಸವಾಗುತ್ತದೆ. ನಟರಾಜನ ಬಲಪಾರ್ಶ್ವದಲ್ಲಿ ಮದ್ದಳೆ ಹಿಡಿದ ನಂದಿಯೂ ತಾಳವನ್ನು ಹಿಡಿದ ಬ್ರಹ್ಮನನ್ನೂ ಕಾಣಬಹುದು. ತಾಳ ಮದ್ದಳೆಗಳನ್ನು ಮೀರಿಸುವಂತೆ ಎಡ ಪಾರ್ಶ್ವದಲ್ಲಿ ಹುಡುಕ್ಕದೊಂದಿಗೆ ವಿಷ್ಣುವು ಮತ್ತು ಪುಂಗಿಯಂತಹ ಸುಷಿರ ವಾದ್ಯದೊಂದಿಗೆ ಇಂದ್ರನೂ ಸ್ಥಿತರಾಗಿದ್ದಾರೆ. ಹಾಗೆಯೇ ಇಂದ್ರನ ಪಕ್ಕದಲ್ಲಿ ವೀಣಾಪಾಣಿಯಾಗಿ ನಿಂತ ಸಾಕ್ಷಾತ್ ಸರಸ್ವತಿ ದೇವಿಯು ಮೇಳಕ್ಕೆ ಮೆರುಗನ್ನು ನೀಡಿದ್ದಾಳೆ.

ಈ ಶಿಲ್ಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿನ ನಟರಾಜನ ಭಂಗಿ ಆನಂದ ತಾಂಡವದಲ್ಲಿ ವರ್ಣಿಸಿರುವ ಶಿವನನ್ನು ಬಹಳವಾಗಿ ಹೋಲುತ್ತದೆ ಮತ್ತು ಆನಂದ ತಾಂಡವದಲ್ಲಿ ಆಪಸ್ಮಾರನ ಮೇಲೆ ಶಿವನು ಮಂದಸ್ಮಿತನಾಗಿ ನರ್ತಿಸುವ ಉಲ್ಲೇಖವೂ ಇರುವುದರಿಂದ ಈ ಶಿಲ್ಪವೂ ಸಹ ಆನಂದ ತಾಂಡವದ ವರ್ಣನೆಯೆಂದೇ ಭಾವಿಸ ಬಹುದಾಗಿದೆ. ಆದರೆ ಹಿಮ್ಮೇಳ ವಾದ್ಯಗಾರರನ್ನು ಕಂಡಾಗ ಸಂಧ್ಯಾ ತಾಂಡವದ ಪರಿಕಲ್ಪನೆಯೂ ಬರುತ್ತದೆ.

ಇನ್ನು ನಟರಾಜನ ಶಿರದ ಮೇಲೆ ವಿಚಿತ್ರವಾದ ರಾಕ್ಷಸ ಮುಖವೊಂದನ್ನು ಕೆತ್ತಲಾಗಿದೆ. ಈ ರಾಕ್ಷಸ ಮುಖವು ಪುರಾಣಗಳಲ್ಲಿ ‘ಕೀರ್ತಿಮುಖ’ ಎಂಬ ಹೆಸರಿನಿಂದ ಪ್ರಚಲಿತವಾಗಿದೆ. ಶಿವಪುರಾಣದಲ್ಲಿ ಬರುವ ಅಸುರರ ರಾಜ ಜಲಂಧರನ ಕಥೆ ನಮಗೆ ಚಿರಪರಿಚಿತ. ರಾಕ್ಷಸರ ಗುರು ಶುಕ್ರಾಚಾರ್ಯರ ಪರಮಶಿಷ್ಯನಾಗಿ ಸ್ವತಃ ಪಾರ್ವತಿ ದೇವಿಯನ್ನೇ ಮೋಹಿಸಿದ್ದ  ಜಲಂಧರನ ದೃಷ್ಟಿ ಅದೊಂದು ದಿನ ಶಿವನ ತಲೆಯಲ್ಲಿ ಅಲಂಕೃತನಾಗಿ ಸದಾ ತಂಪು ಸೂಸುವ ಚಂದ್ರನ ಮೇಲೆ ಬೀಳುತ್ತದೆ. ಪರಮಶಿವನಿಗೆ ಅಲಂಕಾರ ಪ್ರಾಯನಾದ ಚಂದ್ರನನ್ನು ತನಗೆ ತಂದೊಪ್ಪಿಸುವಂತೆ ಆತ ತನ್ನ ಪರಮಾಪ್ತ ರಾಹುವಿಗೆ ಆದೇಶಿಸುತ್ತಾನೆ. ಜಲಂಧರನ ಆಜ್ಞೆಯಂತೆ ಹೊರಟ ರಾಹುವು ಚಂದ್ರನನ್ನು ಕಿತ್ತು ತರುವ ಭರದಲ್ಲಿ ಶಿವನ ಧ್ಯಾನಕ್ಕೆ ಭಂಗವನ್ನುಂಟುಮಾಡುತ್ತಾನೆ. ಇದರಿಂದ ಕುಪಿತನಾದ ಶಿವ, ತನ್ನ ಮೂರನೇ ಕಣ್ಣನ್ನು ತೆರೆದು, ಅದರ ಅಗ್ನಿಜ್ವಾಲೆಗಲಿಂದ ಹೊರಬಂದ ಸಿಂಹಮುಖಿ ರಕ್ಕಸನಿಗೆ ರಾಹುವನ್ನು ಕಬಳಿಸುವಂತೆ ಆದೇಶಿಸುತ್ತಾನೆ. ಇದರಿಂದ ಭಯಭೀತನಾದ ರಾಹು, ತನ್ನಿಂದಾದ ಪ್ರಮಾದವನ್ನು ಅರಿತು ತನ್ನನ್ನು ಕ್ಷಮಿಸುವಂತೆ ಶಿವನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ರಾಹುವಿನ ಕ್ಷಮಾಯಾಚನೆಯಿಂದ ಪ್ರಸನ್ನನಾದ ಶಿವ, ಆತನನ್ನು ಭಕ್ಷಿಸದಂತೆ ಸಿಂಹಮುಖಿಗೆ ಆದೇಶಿಸುತ್ತಾನೆ.

ಆದರೆ ಹಸಿವನ್ನು ತಾಳಲಾರದೆ ಬೇರೆ ಉಪಾಯ ತೋರದೆ ಕಂಗೆಟ್ಟಿದ್ದ ಸಿಂಹಮುಖಿಯು, ಶಿವನ ಆದೇಶದ ಮೇರೆಗೆ ಹಸಿವನ್ನು ನೀಗಿಸಿಕೊಳ್ಳಲು ತನ್ನನ್ನು ತಾನೇ ತಿನ್ನಲು ಆರಂಭಿಸುತ್ತಾನೆ. ಪಾದದಿಂದ ಮೊದಲ್ಗೊಂಡು ತನ್ನ ದೇಹದ ಒಂದೊಂದೇ ಅಂಗಗಳನ್ನು ತಿನ್ನುತ್ತಾ ಬಂದ ಸಿಂಹಮುಖಿ, ಕೊನೆಗೆ ತನ್ನೆರಡು ಕೈಗಳನ್ನೂ ಸಹಾ ತಿಂದು ಮುಗಿಸುವ ಹೊತ್ತಿಗೆ ಶಿವನು, ಆ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ರಕ್ಕಸನಿಗೆ ಸೂಚಿಸಿಸುತ್ತಾನೆ. ಆಗ ಕೊನೆಯಲ್ಲಿ ಉಳಿದಿದ್ದು ಆತನ ಮುಖ ಮಾತ್ರ. ಹೀಗೆ ತಿನ್ನದೇ ಉಳಿದ ಮುಖಕ್ಕೆ ಪರಶಿವ, ಕೀರ್ತಿಮುಖ ಎಂಬ ಬಿರುದನ್ನು ನೀಡುತ್ತಾನೆ. ತನ್ನನ್ನು ತಾನು ಇಲ್ಲವಾಗಿಸಿಕೊಂಡ ಈ ರಕ್ಕಸನ ಮುಖ ದೇಗುಲಗಳಲ್ಲಿ ಕೀರ್ತಿಮುಖವಾಗಿ ವಿರಾಜಿಸಲಿ ಎಂದು ಆಶೀರ್ವದಿಸಿದನಂತೆ ಪರಶಿವ.

ಈ ನಯನ ಮನೋಹರವಾದ ಕೆತ್ತನೆಯು ನಮಗೆ ಶಿವನ ಆನಂದತಾಂಡವವನ್ನು ಪ್ರತ್ಯಕ್ಷವಾಗಿ ದರ್ಶಿಸಿದ ರೋಮಾಂಚನ ಅನುಭವವನ್ನು ನೀಡುತ್ತದೆ. ಹೀಗೆ ಸೋಮೇಶ್ವರ ದೇವಾಲಯದಲ್ಲಿರುವ ಒಂದೊಂದು ಕೆತ್ತನೆಯು ನೋಡುಗರ ಮನಸೂರೆಗೊಳ್ಳುತ್ತದೆ ಹಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನ ನಾವೆಲ್ಲರೂ ನೋಡಲೇಬೇಕಾದ ಸ್ಥಳ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

 

ಲೇಖಿಕೆಯ ಪರಿಚಯ :

ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ  ದಿವ್ಯಾ ಪ್ರಸಾದ್, ಹಲವು ವರ್ಷಗಳ ಕಾಲ ಶ್ರೀಮತಿ ಸಂಧ್ಯಾ ಕೇಶವರಾವ್ ಅವರಲ್ಲಿ ನೃತ್ಯಾಭ್ಯಾಸವನ್ನು ಮಾಡಿ, ನಂತರ ಗುರು ಕರ್ನಾಟಕ ಕಲಾಶ್ರೀ ಬಿ. ಭಾನುಮತಿ  ಹಾಗೂ ಶ್ರೀಮತಿ ಶೀಲಾ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿಯನ್ನು ಮುಂದುವರೆಸಿದ್ದಾರೆ. ಭರತನಾಟ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ವಿದ್ವತ್ ಪದವಿ ಹಾಗು ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದಿರುವ ಇವರು, 2008ರಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಪೂರೈಸಿ, ದೇಶ ವಿದೇಶಗಳಲ್ಲಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಇಂಜಿನಿಯರಿಂಗ್  ಪದವಿಯನ್ನು ಗಳಿಸಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಹಲವು ವರ್ಷಗಳ ಹಿಂದೆ ತಮ್ಮ ವೃತ್ತಿಯನ್ನು ತ್ಯಜಿಸಿ “ಕಲಾಬಿಂದು“ ಎಂಬ ನಾಟ್ಯ ಶಾಲೆಯನ್ನು ಸ್ಥಾಪಿಸಿ, ಹಲವಾರು ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಾ ಕಲಾಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ನೂಫುರ ಭ್ರಮರಿಯ ನೃತ್ಯಶಿಲ್ಪಯಾತ್ರೆ ಎಂಬ ಅಧ್ಯಯನ ಕಾರ್ಯಕ್ರಮದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

2 Responses to ಶಿಲೆಯಲ್ಲಿ ಶಿವತಾಂಡವ

  1. Bhavya

    Beautifully written. Divya is very talented.

  2. Deepak

    ಶಿಲೆಯಲ್ಲಿ ಶಿವತಾಂಡವ, ಶ್ರೀಮತಿ ದಿವ್ಯಾ ಪ್ರಸಾದ್ ಅವರಿಂದ ಒಂದು ಅದ್ಭುತ ಬರವಣಿಗೆ, ನಿಮ್ಮ ಬರವಣಿಗೆಗೆ ಹೃದಯಪೂರ್ವಕ ಅಭಿನಂದನೆಗಳು

Leave a Reply

*

code