ಅಂಕಣಗಳು

Subscribe


 

ಶ್ರೀರಾಮಾಯಣ ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ -ಭಾಗ2

Posted On: Saturday, March 29th, 2014
1 Star2 Stars3 Stars4 Stars5 Stars (No Ratings Yet)
Loading...

Author: Vidwan Korgi Venkateshwara Upadhyaya, Kateel

ಪಿತಾಪುತ್ರ ಸಂಬಂಧ

ಸ್ಥಾನಮಾನ ಹಿರಿಮೆ
ತಾಯ್ತಂದೆಯರ ಸ್ಥಾನ ಸ್ಮೃತಿಗಳ ಪ್ರಕಾರ ಅತಿ ಎತ್ತರದ್ದು.
ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇನೃಣಂ|
ನತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷ ಶತೈರಪಿ || (ಮನು 2-227)
ಸಂತಾನಕ್ಕಾಗಿ ಹೆತ್ತು ಹೊತ್ತು ಸಾಕಿ ಸಲಹಿ ತಿದ್ದಿ ತೀಡಿ ತಾಯ್ತಂದೆಯರು ಇನ್ನಿಲ್ಲದ ಕಷ್ಟವನ್ನು ಅನುಭವಿಸುತ್ತಾರೆ. ಆ ಋಣವನ್ನು ನೂರು ವರ್ಷಗಳ ಕಾಲ ಸೇವೆ ಮಾಡಿದರೂ ಮಕ್ಕಳಿಂದ ತೀರಿಸಲು ಸಾಧ್ಯವಿಲ್ಲ.
ಉಪಾಧ್ಯಾಯಾನ್ ದಶಾಚಾರ್ಯಃ ಆಚಾರ್ಯಾಣಂ ಶತಂಪಿತಾ |
ಸಹಸ್ರಂತು ಪಿತೃನ್ಮಾತಾ ಗೌರವೇಣ ತಿರಿಚ್ಯತೇ || ( ಮನು 2-145)
ವೇದದ ಏಕದೇಶವನ್ನು ಕಲಿಸುವ ಉಪಾಧ್ಯಾಯರಿಗಿಂತ ಹತ್ತು ಪಟ್ಟು ಹೆಚ್ಚಿನವನು ಸಾರ್ಥವಾಗಿ ಸಾಂಗವಾಗಿ ಸರಹಸ್ಯವಾಗಿ ವೇದಗಳನ್ನು ಕಲಿಸುವ ಆಚಾರ್ಯ. ಆಚಾರ್ಯನಿಗಿಂತ ನೂರುಪಟ್ಟು ಹೆಚ್ಚಿನವನು ತಂದೆ. ತಂದೆಗಿಂತ ಸಾವಿರಪಟ್ಟು ಹೆಚ್ಚಿನವಳು ತಾಯಿ.
ತಯೋರ್ನಿತಂ ಪ್ರಿಯಂಕುರ್ಯಾತ್ ಆಚಾರ್ಯಸ್ಯಚಸರ್ವದಾ |
ತೇಷ್ಟೇವ ತ್ರಿಷುತುಷ್ಟೇಷು ತಪಃ ಸ್ವರ್ವಂ ಸಮಾಪ್ಯತೇ || (ಮನು 2-228)
ತಾಯಿತಂದೆ ಆಚಾರ್ಯರು ಪ್ರಸನ್ನರಾದರೆ ತಪಸ್ಸು ಪೂರ್ಣವಾಗುತ್ತದೆ.
ತೇಷಾಂ ತ್ರಯಾಣಂ ಶುಶ್ರೂಷಾ ಪರಮಂ ತಪ ಉಚ್ಯತೇ |
ನ ತೈರನಭ್ಯನುಜ್ಞಾತಃ ಧರ್ಮಮನ್ಯಂ ಸಮಾಚರೇತ್ || ( ಮನು 2-229)
ಈ ಮೂರುಮಂದಿಯ ಶುಶ್ರೂಷೆಯೇ ತಪಸ್ಸು. ಅವರ ಅಪ್ಪಣೆ ಇಲ್ಲದೇ ಅನ್ಯಧರ್ಮವನ್ನು ಅವಲಂಬಿಸಕೂಡದು.
ತವವಹಿ ತ್ರಯೋಲೋಕಾಃ ತವವ ತ್ರಯಆಶ್ರಮಾಃ |
ತವವಹಿ ತ್ರಯೋವೇದಾಃ ತವವೋಕ್ತಾಸ್ತ್ರಯೋಗ್ನಯಃ || (ಮನು 2-230)
ಮೂರುಲೋಕ –ಮೂರು ಆಶ್ರಮ-ಮೂರು ವೇದ-ಮೂರು ಅಗ್ನಿಗಳೂ ಅವರೇ.
ಪಿತಾವೈಗಾರ್ಹಪತ್ತ್ಯೋಗ್ನಿಃ ಮಾತಾಗ್ನಿರ್ದಕ್ಷಿಣಃ ಸ್ಮೃತಃ |
ಪುನರಾವಹನೀಯಸ್ತು ಸಾಗ್ನಿತ್ರೇತಾಗರೀಯಸೀ || (ಮನು 2-231)
ತಂದೆ-ಗಾರ್ಹಪತ್ಯ, ತಾಯಿ-ದಕ್ಷಿಣ, ಗುರು-ಆಹವನೀಯ ಇವರೇ ಶ್ರೇಷ್ಠವಾದ ಅಗ್ನಿತ್ರಯರು.
ಇಮಂಲೋಕಾಂ ಮಾತೃಭಕ್ತ್ಯಾ ಪಿತೃಭಕ್ತ್ಯಾತು ಮಧ್ಯಮಮ್ |
ಗುರುಶುಶ್ರೂಷಯಾತ್ವೇವಂ ಬ್ರಹ್ಮಲೋಕಾಂ ಸಮಶ್ನುತೇ ||(ಮನು 2-233)
ತಾಯಿಯ ಸೇವೆಯಿಂದ ಮೃತ್ಯುಲೋಕವನ್ನು, ತಂದೆಯ ಸೇವೆಯಿಂದ ಮಧ್ಯಮಲೋಕವನ್ನು ಆಚಾರ್ಯನ ಸೇವೆಯಿಂದ ಬ್ರಹ್ಮಲೋಕವನ್ನು ಮಾನವ ಹೊಂದುತ್ತಾನೆ.
ಸರ್ವೇತಸ್ಯಾದೃತಾಧರ್ಮಾಃ ಯಸ್ಯೈತೇತ್ರಯ ಆದೃತಾಃ |
ಅನಾದೃತಾಸ್ತು ಯಸ್ಯೈತೇ ಸರ್ವಾಸ್ತಸ್ಯಾಫಲಾಃ ಕ್ರಿಯಾಃ ||( ಮನು 2-234)
ಈ ಮೂರು ಮಂದಿಯನ್ನು ಆದರಿಸುವುದರಿಂದ ಸಮಸ್ತ ಧರ್ಮವನ್ನೇ ಆದರಿಸಿದಂತಾಗುತ್ತದೆ. ಈ ಮೂವರಲ್ಲಿ ಅನಾದರವನ್ನು ತೋರಿದರೆ ಎಲ್ಲಾ ಧರ್ಮಕರ್ಮಗಳೂ ಬಂಜೆಯಾಗುತ್ತವೆ. ಎಲ್ಲವೂ ನಿಶ್ಫಲವಾಗುತ್ತವೆ.

ತಾಯ್ತಂದೆಯರ ಕರ್ತವ್ಯ
ತಾಯ್ತಂದೆಯರ ಕರ್ತವ್ಯವನ್ನು ಅರಿಷ್ಟನೇಮಿಭಾರತೀ ಹೀಗೆ ಹೇಳಿದೆ.
ಸಂಭಾವ್ಯ ಪುತ್ರಾನ್ ಕಾಲೇನ್ ಯೌವನಸ್ಥಾನ್ವಿವೇಶ್ಯ ಚ |
ಸಮರ್ಥಾನ ಜೀವನೇ ಜ್ಞಾತ್ವಾ ಮುಕ್ತಶ್ಚರ ಯಥಾಸುಖಮ್ ||
ಪಾಲಕರಾದವರು ದೇವರ ಅನುಗ್ರಹದಿಂದ ಯೋಗ್ಯಕಾಲದಲ್ಲಿ ಮಕ್ಕಳನು ಪಡೆಯಬೇಕು. ಅವರಿಗೆ ಸಂಸ್ಕಾರಗಳನ್ನು ನೀಡಿ ಕಾಲಕಾಲಕ್ಕೆ ಸನ್ಮಾರ್ಗದರ್ಶನವನ್ನು ಮಾಡಬೇಕು. ಅವರಿಗೆ ತಾರುಣ್ಯಾವಸ್ಥೆ ಬಂದನಂತರ ಮದುವೆಯನ್ನು ಮಾಡಿ, ಯಾರ ಹಂಗಿಲ್ಲದೇ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮತ್ತು ನಿಭಾಯಿಸಲು ಸಮರ್ಥರಾಗುವಂತೆ ನಿರ್ದೇಶನವನ್ನು ಕೊಡಬೇಕು. ಮಕ್ಕಳು ಬಾಳನ್ನು ಸುಗಮವಾಗಿ ಸಾಗಿಸಲು ಸಮರ್ಥರು ಎಂದು ತಿಳಿದನಂತರ ಸಂಸಾರದ ಬಗ್ಗೆ ಇರುವ ಅಭಿಮಾನವನ್ನು ತೊರೆದು ಸಾಧನಾಪ್ರಪಂಚದಲ್ಲಿ ವಿಹರಿಸುತ್ತ ಸುಖಿಗಳಾಗಿ ಸಂಚರಿಸಬೇಕು. ಹೀಗಿದ್ದಾಗ ಮಕ್ಕಳಿಗೆ, ಬಂಧುಗಳಿಗೆ ಇಂತಹ ಪಾಲಕರ ಬಗ್ಗೆ ಭಕ್ತಿ, ಗೌರವಾದರಗಳು ದ್ವಿಗುಣವಾಗುತ್ತವೆ.
ತಾಯ್ತಂದೆಯರು ಮಕ್ಕಳನ್ನು ಹೇಗೆ ಬೆಳೆಸಿ ಬಾಳಿಸಬೇಕೆಂಬುದು ಚಾಣಕ್ಯನೀತಿದರ್ಪಣದಲ್ಲಿದೆ.
ಪುತ್ರಾಶ್ಚವಿವಿಧೈಃ ಶೀಲೈಃ ನಿಯೋಜ್ಯಾಃ ಸತತಂಬುಧೈಃ |
ನೀತಿಜ್ಞಾ ಶೀಲಸಂಪನ್ನಾಃ ಭವಂತಿಕುಲಪೂಜಿತಾಃ ||
ವಿವಿಧಶೀಲಗಳಿಂದ ಕೂಡಿದ ಪುತ್ರರನ್ನು ನಿಯೋಜಿಸಬೇಕು. ನೀತಿಜ್ಞರಾದ, ಶೀಲಸಂಪನ್ನರಾದ ಇಂತವರು ಕುಲದಿಂದ ಆದರಿಸಲ್ಪಡುತ್ತಾರೆ.
ಮಾತಾರಿಪುಃ ಪಿತಾಶತ್ರುಃ ಯಾಭ್ಯಾಂ ಬಾಲೋ ನಪಾಠ್ಯತೇ |
ಸಭಾಮಧ್ಯೇ ನಶೋಭೇತ ಹಂಸಮಧ್ಯೇಬಕೋಯಥಾ ||
ಮಕ್ಕಳನ್ನು ವಿದ್ಯಾವಂತರನ್ನಾಗಿಸದ ಹೆತ್ತವರು ಸಾಕ್ಷಾತ್ ಶತ್ರುಗಳು. ಅಂತವರಿಂದ ಬೆಳೆಸಲ್ಪಟ್ಟ ಮಕ್ಕಳು ಹಂಸಗಳ ಮಧ್ಯೆ ಹೇಗೆ ಬಕವು ಹೇಗೆ ಶೋಭಿಸುವುದಿಲ್ಲವೋ ಅಂತೆಯೇ ಸಭಾಮಧ್ಯದಲ್ಲಿ ಶೋಭಿಸುವುದಿಲ್ಲ.
ಲಾಲನಾದ್ಬಹವೋದೋಷಾಃ ತಾಡನಾದ್ಬಹವೋಗುಣಃ |
ತಸ್ಮಾತ್ ಪುತ್ರಂಚ ಶಿಷ್ಯಂಚ ತಾಡಯೇತ್ ನತುಲಾಲಯೇತ್ ||
ಶಿಷ್ಯರನ್ನು ಮುದ್ದಿಸಿ ಹಾಳುಮಾಡಬಾರದು. ಸಂದರ್ಭೋಚಿತವಾಗಿ ಶಿಕ್ಷಿಸಬೇಕು.
ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್ |
ಪ್ರಾಪ್ತೇತು ಷೋಡಶೇವರ್ಷೇ ಪುತ್ರಂ ಮಿತ್ರವದಾಚರೇತ್ ||
ಐದುವರ್ಷಗಳವರೆಗೆ ಮುದ್ದಿಸಬೇಕು. ಮತ್ತೆ ಹತ್ತು ವರ್ಷ ದಂಡಿಸಬೇಕು. 16 ತುಂಬಿದ ಬಳಿಕ ಮಕ್ಕಳನ್ನು ಗೆಳೆಯರಂತೆ ಕಾಣಬೇಕು.
ಸತ್ಕುಲೇಯೋಜಯೇತ್ಕನ್ಯಾಂ ಪುತ್ರಂ ವಿದ್ಯಾಸುಯೋಜಯೇತ್ |
ಮಗಳನ್ನು ಕುಲವಂತರ ಮನೆಗೆ ಮದುವೆ ಮಾಡಿಕೊಡಬೇಕು. ಮಗನಿಗೆ ಒಳ್ಳೆಯ ವಿದ್ಯೆಯನ್ನು ಕೊಡಿಸಬೇಕು.

ಹಿತವಚನ
ಗುರುಕುಲದಲ್ಲಿ ಅಧ್ಯಯನ ಮುಗಿಸಿ ಹೊರಡೂವ ಹೊತ್ತಿಗೆ ಆಚಾರ್ಯರು ಶಿಷ್ಯನಿಗೆ ಹಿತವಚನವನ್ನು ಹೇಳುತ್ತಾರೆ.ಅದು ಉಪದೇಶವೂ ಹೌದು;ಆದೇಶವೂ ಹೌದು. ‘ಏಷ ಆದೇಶಃ ಏಷ ಉಪದೇಶಃ”. ಮಾತೆಂದರೆ- ‘ಓ ಬ್ರಹ್ಮಚಾರಿನ್ ನೀನು ಮನೆಗೆ ಮರಳಿದ ಬಳಿಕ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ವಂಶವಲ್ಲರಿಯನ್ನು ಪಲ್ಲವಿಸಬೇಕು. “ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ” ಸಂತಾನದ ಬಳ್ಳಿಯನ್ನು ಕತ್ತರಿಸದೇ ಬೆಳೆಸಬೇಕು. ಧರ್ಮಪ್ರಜಾಸಂಪತ್ಸಂಪಾದನೆಯೇ ಗಾರ್ಹಸ್ಥ್ಯದ ಪರಮ-ಚರಮೋದ್ದೇಶ. ಋಣತ್ರಯಾಪನಯನಕ್ಕೆ ಸಂತಾನ ಅತ್ಯವಶ್ಯ.
ಅಗ್ನಿಹೋತ್ರಫಲಾವೇದಾಃ ಶೀಲವೃತ್ತಫಲಂಶ್ರುತಂ |
ರತಿಪುತ್ರಫಲಾದಾರಾಃ ದತ್ತಭುಕ್ತಫಲಂಧನಂ || (ಮಹಾಭಾರತ)
ವೇದಗಳಿಗೆ ಅಗ್ನಿಹೋತ್ರವೇ ಪ್ರಯೋಜನ.ಪಾಂಡಿತ್ಯಕ್ಕೆ ಒಳ್ಳೆಯ ನಡತೆಯೇ ಅರ್ಥಾತ್ ಚಾರಿತ್ರ್ಯಶುದ್ಧಿಯೇ ಫಲ. ಮಡದಿಯನ್ನು ಸ್ವೀಕರಿಸಿದ್ದಕ್ಕೆ ಸುಖ ಹಾಗು ಸಂತಾನವೇ ಪ್ರಯೋಜನ. ಉಣ್ಣುವುದು ನೀಡುವುದೆಂಬುದೇ ಧನಕ್ಕೆ ಪ್ರಯೋಜನ. ಸಂತಾನಾಪೇಕ್ಷೆಯಿಲ್ಲದೇ ಮದುವೆಯಾಗುವುದು ವ್ಯಭಿಚಾರಕ್ಕೆ ಸಮಾನವಾಗುತ್ತದೆ.
ಏಕೋಪಿಗುಣವಾನ್ ಪುತ್ರಃ ನಿರ್ಗುಣೈಶ್ಚಶತೈರ್ವರಃ |
ಗುಣಹೀನರಾದ ನೂರಾರು ಮಕ್ಕಳಿರುವುದಕ್ಕಿಂತ ಗುಣವಂತನಾದ ಒಬ್ಬನೇ ಒಬ್ಬ ಮಗನಿದ್ದರೂ ಸಾಕು.
“ಅಪುತ್ರಸ್ಯ ಗೃಹಂಶೂನ್ಯಂ” ಮಕ್ಕಳಿಲ್ಲದವನ ಮನೆ ಬರಿದು.
ಮೂರ್ಖಶ್ಚಿರಾಯರ್ಜಾತೋಪಿ ತಸ್ಮಾಜ್ಜಾತಮೃತೋವರಃ |
ಮೃತಸ್ತುಚಾಲ್ಪದುಃಖಾಯ ಯಾವಜ್ಜೀವಂ ಜಡೋದಹೇತ್ ||
ದೀರ್ಘಾಯುವಾದ ಮೂರ್ಖಪುತ್ರನು ಹುಟ್ಟುವುದಕ್ಕಿಂತ ಹುಟ್ಟುವಾಗಲೇ ಸತ್ತುಹೋಗುವುದು ಲೇಸು. ಸತ್ತ ಮಗು ಸ್ವಲ್ಪಕಾಲ ದುಃಖಕೊಟ್ಟರೆ ಮೂರ್ಖ ಸಾಯುವ ತನಕ ದುಃಖ ಕೊಡುತ್ತಾನೆ.

Leave a Reply

*

code