ಅಂಕಣಗಳು

Subscribe


 

ಶ್ರೀರಾಮಾಯಣ ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ- ಭಾಗ 3

Posted On: Tuesday, May 27th, 2014
1 Star2 Stars3 Stars4 Stars5 Stars (No Ratings Yet)
Loading...

Author: Vidwan Korgi Venkateshwara Upadhyaya, Kateel

ಕ್ಷೇತ್ರಭೂತಾಸ್ಮೃತಾನಾರೀ ಬೀಝಭೂತಃ ಸ್ಮೃತಪುಮಾನ್
ಕ್ಷೇತ್ರಬೀಜಸಮಯೋಗಾತ್ ಸಂಭಾವಃ ಸರ್ವದೇಹಿನಾಮ್ || (ಮನು 9-33)
ಹೆಣ್ಣು ಹೊಲವಿದ್ದಂತೆ, ಗಂಡು ಬೀಜವಿದ್ದಂತೆ. ಕ್ಷೇತ್ರಬೀಜ ಸಮಾಯೋಗದಿಂದ ಸಮಸ್ತ ಜೀವರೂ ಮೆಯ್‍ವಡೆಯುತ್ತಾರೆ.

ಪುತ್ರ ಶಬ್ದ ವ್ಯುತ್ಪತ್ತಿ
ಪೂಞ ಏವನೇ ಎಂಬ ಧಾತುವಿನಿಂದ ಪುತ್ರ ಶಬ್ದವು ನಿಷ್ಪನ್ನವಾಗುತ್ತದೆ. ‘ಪುನಾತಿ ಪುತ್ರಾದೀನ್ ಇತಿ ಪುತ್ರಃಋಣಪನಯನದ್ವಾರಾ’ ಹೆತ್ತವರನ್ನು ಪವಿತ್ರೀಕರಿಸುವುದರಿಂದ ಪುತ್ರ ಅಥವಾ
ಪುನ್ನಾಮ್ನೋನರರಾತ್ ಯಸ್ಮಾತ್ತ್ರಾಯತೇ ಪಿತರಂಸುತಃ |
ತಸ್ಮಾತ್ ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ||(ಮನು 9-138)
ಪುತ್ ಎಂಬ ನರಕದಿಂದ ಪಿತೃಗಳನ್ನು ಉದ್ಧರಿಸುವುದರಿಂದ ಪುತ್ರ.
ಆತ್ಮಜಸ್ತನಯಃ ಸುತಃ ಪುತ್ರಸ್ತ್ರಿಯಾಂ ತ್ವಮೀ ||
ಆತ್ಮಜ- ತನಯ- ಸೂನು-ಸುತ ಇವು ಪರ್ಯಾಯಪದಗಳು.
ಆತ್ಮನೋ ದೇಹಾತ್ ಜಾತಃ ಇತಿ ಆತ್ಮಜಃ, ತನೋತಿಕುಲಮಿತಿ
ತನಯಃ ಸೂಯತೇ ಇತಿ ಸೂನುಃ, ಸುತಃ, ಪುನಾತಿ ಸ್ವವಂಶಾನ್ ಇತಿಪುತ್ರಃ ||
ವೀರ್ಯದಿಂದ ಹುಟ್ಟಿದ ಕಾರಣ ಆತ್ಮಜ, ಕುಲವನ್ನು ವಿಸ್ತರಿಸುವುದರಿಂದ ತನಯ, ಹುಟ್ಟಿದ್ದರಿಂದ ಸುತ-ಸೂನು, ವಂಶಪಾವನತೆಯಿಂದ ಪುತ್ರ. ಈ ಪದಗಳಿಗೆ ಸ್ತ್ರೀ ಪ್ರತ್ಯಯ ಬಂದಾಗ ತನಯಾ ಆತ್ಮಜಾ ಸುತಾ ಪುತ್ರೀ ಎಂಬಂತೆ ರೂಪಸಿದ್ಧಿಯಾಗಿ ಮಗಳು ಎಂಬ ಅರ್ಥವನ್ನು ಕೊಡುತ್ತದೆ. ದೂರೇ ಹಿತಾ-ದುಹಿತಾ. ದುಹಿತ್ವಹಕ್ಕು ಎಂಬ ಪದ ಅತ್ಯಂತ ಪ್ರಚಲಿತ. ದೂರದಲ್ಲಿದ್ದರೆ ಒಳ್ಳೆಯದು ಎಂಬರ್ಥ ಕೊಡುವ ದುಹಿತಾ ಎಂಬ ಪದ ಮಗಳಿಗೆ ವಿಶೇಷವಾಗಿ ಅನ್ವಯಿಸಲಾಗಿದೆ.
ಪುತ್ರಪುತ್ರಿಯರು ಒಟ್ಟು ಸೇರಿ ಸಂತಾನಂ, ತೋಕಂ, ಸಂತತಿಃ, ಅಹತ್ಯಂ ಎಂಬ ನಾಲ್ಕು ಪದಗಳಿವೆ. ನಪತತಿಅನೇನ ಇತಿ ಅಪತ್ಯಂ (ಕುಲವು ಪತನವಾಗುವುದಿಲ್ಲ) ತನು ವಿಸ್ತಾರೇ ಎಂಬ ಧಾತುವಿಗೆ ಸಮ್ ಉಪಸರ್ಗ ಸೇರಿದಾಗ ಸಂತಾನಂ, ಸಂತತಿಃ ಎಂಬ ಪದಗಳು ಸಿದ್ಧವಾಗುತ್ತವೆ. ವಂಶವಿಸ್ತಾರ ಎಂಬುದು ಇದರ ಅರ್ಥ. ತೌಚೀತಿಕಃ –ತೋಕಂ ಇದು ಗತ್ಯರ್ಥಕಧಾತುವಿನಿಂದ ನಿಶ್ಪನ್ನ. ಅಂದರೆ ಸಂತಾನ ಮುಂದುವರಿಯುವುದು ಎಂದರ್ಥ.

ಪುತ್ರ ಪ್ರಭೇದ 
ಪುತ್ರರು ಹನ್ನೆರಡು ಬಗೆ.
ಪುತ್ರಾನ್ ದ್ವಾದಶಯಾನಾಹ ನೃಣಂ ಸ್ವಾಯಂಭುವೋಮನುಃ |
ತೇಷಂ ಶಡ್ಬಂಧುದಯಾದಾಃ ಷಡದಾಯಾದ ಭಾಂಧವಾಃ || (ಮನು 2-158)
ಹನ್ನೆರಡು ವಿಧ ಪುತ್ರರಲ್ಲಿ ಮೊದಲ ಆರು ವಿಧದ ಪುತ್ರರು ಮಾತ್ರ ಆಸ್ತಿಗೆ ಹಕ್ಕುದಾರರಾಗುತ್ತಾರೆ. ಆದರೆ ಶ್ರಾದ್ಧಾದಿಗಳಲ್ಲಿ ಈ ಹನ್ನೆರಡು ಮಮ್ದಿಯೂ ಸಮಾನಾಧಿಕಾರಿಗಳು.ಅವರು ಯಾರೆಂದರೆ-
ಔರಸಃ ಕ್ಷೇತ್ರಜಶ್ಚೈವದತ್ತಃ ಕೃತಿಮಏವಚ |
ಗೂಢೋತ್ಪನ್ನೋಪವಿದ್ಧಶ್ಚ ದಾಯಾದಾಬಾಂಧವಾಶ್ಚಷಟ್ || ( ಮನು 2-159)
ಆಸ್ತಿಯಲ್ಲಿ ಹಕ್ಕಿರುವ ಆರು ಮಂದಿ ಪುತ್ರರು 1. ಔರಸ- ತನ್ನ ಮಡದಿಯಲ್ಲಿ ತನ್ನಿಂದಾಗಿ ಪಡೆದ ಪುತ್ರ 2. ಕ್ಶೇತ್ರಜ – ತನ್ನ ಮಡದಿಯಲ್ಲಿ ಅನ್ಯರಿಂದ ಪಡೆದ ಪುತ್ರ 3. ದತ್ತ – ತನ್ನ ಜಾತಿಯ ತಾಯ್ತಂದೆಯರಿಂದ ಜಲಧಾರಾಪುರಃಸರ ಸಂತೋಷದಿಂದ ತಾನು ಸ್ವೀಕರಿಸಿದ ಪುತ್ರ. 4.ಕೃತ್ರಿಮ- ತನ್ನ ಜಾತಿಯ ಹುಡುಗನನ್ನು ಮಗನೆಂದು ಭಾವಿಸಿ ಪಾಲಿಸುವುದು. 5. ಗೂಢೋತ್ಪನ್ನ – ತನ್ನ ಮನೆಯಲ್ಲೇ ತನ್ನ ಅರಿವಿಗೆ ಬಾರದೆ ತನ್ನ ಮಡದಿಯಲ್ಲಿ ಜನಿಸಿದ ಮಗು ಅಜ್ಞಾತಪಿತೃಕ. 6.ಅಪವಿದ್ಧ – ತಾಯ್ತಂದ್ಯರಿಂದ ಪರಿತ್ಯಕ್ತನಾದವನನ್ನು ಪರಿಗ್ರಹಿಸಿ ರಕ್ಷಿಸುವುದು.
ಔರಸನಿಂದ ಅಪವಿದ್ಧನವರೆಗೆ ಪೂರ್ವ ಪೂರ್ವ ಶ್ರೇಷ್ಠ; ಉತ್ತರೋತ್ತರ ಅಧಮ.ಆದರೆ ಈ ಆರುಮಂದಿಗೂ ಆಸ್ತಿಯಲ್ಲಿ ಪಾಲಿದೆ.
ಆಸ್ತಿಯಲ್ಲಿ ಹಕ್ಕಿರದ ಪುತ್ರರು.
ಕಾನೀನಶ್ಚ ಸೋಢಶ್ಚ ಕ್ರೀತಃ ಪೌನರ್ಭಾವಸ್ತಥಾ |
ಸ್ವಯಂದತ್ತಶ್ಚ ಶೌದ್ರಶ್ಚ ಷಡದಾಯಾದ ಭಾಂಧವಾಃ || (ಮನು 9-160)
1. ಕಾನೀನ – ವಿವಾಹತ್ ಪೂರ್ವ ಕನ್ಯಾವಸ್ಥೆಯಲ್ಲಿ ಹುಟ್ಟಿದವ. 2. ಸಹೋಢ- ಗರ್ಭಿಣಿಯನ್ನು ವಿವಾಹವಾಗಿ ಹುಟ್ಟಿದವ. 3. ಕ್ರೀತ- ಬೇರೊಬ್ಬರಿಂದ ಕ್ರಯಕ್ಕೆ ತೆಗೆದುಕೊಂಡವ. 4- ಪೌನರ್ಭಾವ- ವಿಧವೆ ಸ್ವ ಇಚ್ಛೆಯಿಂದ ಮತ್ತೊಬ್ಬನಿಂದ ಪಡೆದ ಪುತ್ರ (ಆಕೆ ಅಕ್ಷತಯೋನಿಯಾಗಿರಬೇಕು). 5.ಸ್ವಯಂದತ್ತ- ಅನಾಥನಾಗಿ ಬಂದು ತಾನಾಗಿಯೇ ತಾಯ್ತಂದೆಯರನ್ನು ಅಂಗೀಕರಿಸಿದವ. 6. ಪಾರಶವ- ತಾನು ವರಿಸಿದ ಶೂದ್ರಸ್ತ್ರೀಯಲ್ಲಿ ಹುಟ್ಟಿದವ.
ಇವರೆಲ್ಲರಿಗೂ ಪಿಂಡಾಧಿಕಾರವಿದೆ.

ಪುತ್ರರ ಕರ್ತವ್ಯ

ಮಗನಿಗೆ ಪುತ್ರತ್ವ ಸಿದ್ಧಿಸಬೇಕಾದರೆ ಆತ ಮೂರು ಕೆಲಸಗಳನ್ನು ಮಾಡಿಯೇ ತೀರಬೇಕು.
ಜೀವತೋರ್ವಾಕ್ಯಕರಣಾತ್ ಪ್ರತ್ಯಬ್ಧಂ ಭೂರಿಭೋಜನಾತ್ |
ಗಯಾಯಾಂಪಿಂಡದಾನಾಚ್ಚ ತ್ರಿಭಿಃ ಪುತ್ರಸ್ಯ ಪುತ್ರತಾ ||
ತಾಯ್ತಂದೆಯರು ಬದುಕಿದ್ದಾಗ ಅವರ ಆದೇಶವನ್ನು ಪ್ರಶ್ನಾತಿತವಾಗಿ ಒಪ್ಪಿ ಮಾತನ್ನು ನಡೆಸಿಕೊಡುವುದು. ಸತ್ತ ಬಳಿಕ ಸಾಂವತ್ಸರಿಕ ಶ್ರಾದ್ಧ ಮಾಡಿ ಅನ್ನ ಸಂತರ್ಪಣೆ ಮಾಡಿಸುವುದು. ಗಯೆಗೆ ಹೋಗಿ ಪಿಂಡದಾನವನ್ನು ಮಾಡುವುದು. ಇವನ್ನು ಮಾಡದೇ ಪುತ್ರತ್ವ ಸಿದ್ಧಿಸುವುದಿಲ್ಲ.

   ( ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.. ರಾಮಾಯಣದಲ್ಲಿ ಪಿತಾಪುತ್ರಸಂಬಂಧ)

Leave a Reply

*

code