ಅಂಕಣಗಳು

Subscribe


 

ಪ್ರೌಢ ಅಭಿವ್ಯಕ್ತಿಯ ರಂಗಪ್ರವೇಶ : ಶ್ರುತಿ ಮಹದೇವನ್

Posted On: Friday, June 8th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ರಸ-ಭಾವಾಶ್ರಯವಾದ ಕಲೆಗೆ ನೃತ್ಯ ರಂಗಪ್ರವೇಶಗಳು ನೀಡುವ ಕೊಡುಗೆ ಗೌಣವಾಗುತ್ತಾ ವೈಭವೀಕರಣವೇ ಪ್ರಧಾನವಾಗುತ್ತಾ ಸಾಗಿರುವ ಇಂದಿನ ದಿನಗಳಲ್ಲಿ ಕಲೆಯ ಕುರಿತ ಸ್ಪಂದನಕ್ಕೆ ಆಸ್ಥೆಯನ್ನು ನೀಡುವ ಪ್ರವೇಶವಾಗಿ ಕಂಡಿದ್ದು ಜೂನ್ ೩ರಂದು ನಗರದ ಎಡಿ‌ಎ ರಂಗಮಂದಿರದಲ್ಲಿ ನಡೆದ ಶ್ರುತಿ ಮಹದೇವನ್ ಅವರ ಭರತನಾಟ್ಯ ರಂಗಪ್ರವೇಶ. ಕೇವಲ ಗಿಣಿಪಾಠವೆಂಬಂತೆ ಭಾಸವಾಗುತ್ತಿರುವ ರಂಗಪ್ರವೇಶಗಳ ಮಧ್ಯೆ ಕಲಾವಿದೆಯ ವ್ಯಕ್ತಿತ್ವದ ಸಹಜ ನಡೆಗಳಿಗೆ ಸ್ವಾತಂತ್ರ್ಯವನ್ನು ಇತ್ತದ್ದು ಇಲ್ಲಿನ ಪ್ರಧಾನ ಅಂಶ. ಒಂದರ್ಥದಲ್ಲಿ ಅದು ಕೇವಲ ರಂಗಪ್ರವೇಶವೆಂಬಷ್ಟೇ ಭಾಸವಾಗದೆ ಪ್ರೌಢಿಮೆಯ ಹಂತದಲ್ಲಿ ಸಾಗುತ್ತಿರುವ ಕಲಾವಿದೆಯ ಗುಣಮಟ್ಟದ ಕಾರ್ಯಕ್ರಮವೆನಿಸಿದ್ದು ವಿಶೇಷ. ಈ ಹಿನ್ನೆಲೆಯಲ್ಲಿ ಆಕೆಯ ಗುರು ಮಯೂರಿ ನಾಟ್ಯಶಾಲೆಯ (ಅರೆಕೆರೆ ಲೇ‌ಔಟ್) ನಿರ್ದೇಶಕಿ ಡಾ. ಶೋಭಾ ಶಶಿಕುಮಾರ್ ಅಭಿನಂದನಾರ್ಹರು.

ಗುರು ಡಾ. ಶೋಭಾಶಶಿಕುಮಾರ್ ಭರತನಾಟ್ಯದ ಸಾತ್ತ್ವಿಕ, ಆಂಗಿಕ ವಿಷಯದ ರಸತತ್ತ್ವದ ಕುರಿತು ಪಿ‌ಎಚ್‌ಡಿ ಪದವೀಧರರು. ಹಾಗೆ ನೋಡಿದರೆ ಕರ್ನಾಟಕದಲ್ಲಿ ನಾಟ್ಯಶಾಸ್ತ್ರ ಪ್ರಯುಕ್ತ ಕರಣಪ್ರಕರಣಗಳನ್ನು ನಿಷ್ಠೆಯಿಂದ ಕಲಿತು ಅದನ್ನು ಆಧರಿಸಿ ಭರತನಾಟ್ಯದ ರಸದೃಷ್ಟಿಯನ್ನು ಅಭ್ಯಸಿಸಿ ಪಿ‌ಎಚ್‌ಡಿ ಪದವಿಯನ್ನು ಪಡೆದವರ ಪೈಕಿ ಶೋಭಾ ಶಶಿಕುಮಾರ್ ಪ್ರಪ್ರಥಮರು ಎಂದರೆ ಅತಿಶಯವಲ್ಲ. ಪ್ರಸ್ತುತ ಜೈನ್ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ವಿಭಾಗದಲ್ಲಿ ಡಾ.ಶೋಭಾ ಕರಣ ಪ್ರಕರಣಗಳ ಕುರಿತ ತರಗತಿಗೆ ಉಪನ್ಯಾಸಕಿಯಾಗಿದ್ದಾರೆ. ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದರೊಂದಿಗೆ ಸಂಶೋಧನೆಗಳಿಗೆ ಮಾರ್ಗದರ್ಶಕಿಯೂ ಆಗಿರುವ ಇವರು ನೃತ್ಯ ಸಂಶೋಧಕರ ಒಕ್ಕೂಟದ ಪ್ರದರ್ಶಕ ವಿಭಾಗದ ಮುಖ್ಯಸ್ಥೆಯೂ ಕೂಡಾ. ಅವರ ರಸದೃಷ್ಟಿಯುಳ್ಳ ನಡೆಗೆ ಹೊಂದುವ ಶಿಷ್ಯೆ ಶ್ರುತಿ ಮಹದೇವನ್. ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯಷ್ಟೇ ತೇರ್ಗಡೆಯಾಗಿದ್ದರೂ ವಿದ್ವತ್ ಹೊಂದಿರುವ ಯಾವ ಕಲಾವಿದೆಗೂ ಸರಿಸಾಟಿಯೆಂಬಂತೆ ನಿರಾಯಾಸವಾಗಿ ತಮ್ಮ ಕಲಾಸಂವೇದನೆಯನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಶ್ರುತಿ ಕ್ರೈಸ್ಟ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ಅರ್ಥಶಾಸ್ತ್ರ ವಿದ್ಯಾರ್ಥಿನಿ.

Shruti Mahadevan

ಗಂಭೀರ ನಾಟರಾಗದ ಪುಷ್ಪಾಂಜಲಿ ಮತ್ತು ಗಣಪತಿಯ ಕುರಿತ ಶ್ಲೋಕದೊಂದಿಗೆ ಅಡಿಯಿಟ್ಟ ಶ್ರುತಿ ಮಹದೇವನ್ ಖಂಡ ಅಲರಿಪ್ಪುವಿನಲ್ಲಿ ನೃತ್ತದ ಸೊಬಗನ್ನು ಅರಳಿಸಿದರು. ಹಂಸಧ್ವನಿ ರಾಗದ ನಟೇಶ ಕೌತ್ವಂ, ಮೋಹನರಾಗದ ಜತಿಸ್ವರ ಆಕೆಯ ನೃತ್ಯ ಮಾಧುರ್ಯಕ್ಕೆ ಕನ್ನಡಿ ಹಿಡಿಯಿತು. ಆದರೆ ಶ್ರುತಿಯೊಡಲಲ್ಲಿದ್ದ ಭಾವಪ್ರಕಾಶವು ಸೊಗಸಾಗಿ ರಸಚೈತನ್ಯವನ್ನು ಸ್ಪರ್ಶಿಸಲು ಹೊರಟಿದ್ದು ರಾಗಮಾಲಿಕೆಗೆ ಹೆಣೆದ ಪುರಂದರದಾಸರ ಬುದ್ಧಿಮಾತು ಹೇಳಿದರೆ ಎಂಬ ಪ್ರಸಿದ್ಧವಾದ ದೇವರನಾಮದಲ್ಲಿ. ಗಂಡನೊಂದಿಗೆ ಜಗಳವಾಡಿ ತವರಿಗೆ ಬಂದ ಮಗಳಿಗೆ ಬುದ್ಧಿ ಮಾತು ಹೇಳುವಲ್ಲಿ ಮಾತೃಹೃದಯದ ತಲ್ಲಣಗಳನ್ನು, ತೊಳಲಾಟಗಳನ್ನು ಅರ್ಥೈಸಿಕೊಂಡು ಸಮರ್ಥವಾಗಿ ಬಿಂಬಿಸಿದ್ದನ್ನು ಗಮನಿಸಿದಾಗ ಶ್ರುತಿ ಕೇವಲ ಕಿಶೋರಿ ಬಾಲೆಯೆನಿಸದೆ ಪ್ರೌಢಳಾಗಿಯೇ ಭಾಸವಾದರು.

ಶ್ರುತಿಯನ್ನು ಭಾವಪರಾಕಾಷ್ಟೆಗೊಯ್ದು ಪ್ರತಿಭೆಯ ಪೂರ್ಣ ದರ್ಶನ ಮಾಡಿಸಿದ್ದು ಷಣ್ಮುಗಪ್ರಿಯ ರಾಗದ ದೇವರ್ ಮುನಿವರ್– ಪ್ರಸಿದ್ಧ ಪದವರ್ಣ. ಈ ಹಿನ್ನೆಲೆಯಲ್ಲಿ ನೃತ್ತ-ನೃತ್ಯದ ಪರಸ್ಪರ ಸಾಹಚರ್ಯವನ್ನು ರಸಾನುಗ್ರಹಣದ ದೃಷ್ಟಿಯಿಂದ ಅರ್ಥೈಸಿಕೊಂಡು ವರ್ಣದ ಎಂದಿನ ಅಪಸವ್ಯಗಳಿಲ್ಲದ ನೃತ್ಯ ಸಂಯೋಜನೆ ಮಾಡಿದ ಗುರು ಡಾ. ಶೋಭಾ ಅವರ ಪರಿಶ್ರಮ, ಕಲಾದೃಷ್ಟಿ ಅನನ್ಯ. ವರ್ಣದ ಯಾವ ಭಾಗವೂ ಸ್ಥಾಯಿಭಾವವನ್ನು ಬಿಟ್ಟುಕೊಡದೆ ಪೂರ್ಣಚಂದ್ರನಂತೆ ಭಾಸವಾಗಿದ್ದಷ್ಟೇ ಅಲ್ಲದೆ; ಸವಾಲೆನಿಸುವ ವರ್ಣವನ್ನು ಶ್ರುತಿಯು ಸರಳ-ಸಹಜವೆಂಬಂತೆ ಅನಾವರಣಗೊಳಿಸಿದ್ದು ಕಾರ್ಯಕ್ರಮದ ಮುಖ್ಯಘಟ್ಟ. ಕರಣ, ಚಾರಿಗಳೊಂದಿಗೆ ಅಡವುಗಳ ಸೂಕ್ತ ಹೊಂದಾಣಿಕೆ, ಔಚಿತ್ಯವರಿತ ಅಭಿನಯವೆಲ್ಲವೂ ಪದವರ್ಣವೊಂದು ಮಾಡಬೇಕಾದ ಕಾರ್ಯ ಸ್ಪಷ್ಟವಾಗುತ್ತಾ ಸಾಗಿತ್ತು. ಅದರಲ್ಲೂ ಸಂಚಾರಿಗಳ ಪ್ರಕಾಶದಲ್ಲಿ ಗಜೇಂದ್ರಮೋಕ್ಷ, ಭಕ್ತನ ಸಮರ್ಪಣಾಭಾವ ಪ್ರೇಕ್ಷಕರಲ್ಲೂ ಧನ್ಯತೆಯನ್ನು ಉಂಟುಮಾಡಿ ಮುಕ್ತವಾಗಿ ಶ್ಲಾಘನೆ ಪಡೆದುಕೊಂಡಿದ್ದು ಸ್ಮರಣೀಯ. ನಂತರದಲ್ಲಿ ಜನರಂಜನಿ ರಾಗದ ಪಾಹಿಮಾಂ ಶ್ರೀ ರಾಜರಾಜೇಶ್ವರಿ ಕೃತಿ, ಸೌರಾಷ್ಟ್ರ ರಾಗದ ಅದುವೊಂ ಸೊಲ್ಲುವಾಳ್ಪದಂ, ಧನಶ್ರೀ ತಿಲ್ಲಾನವೂ ನೃತ್ಯದ ಓಘವನ್ನು, ರಸ-ಭಾವ ಸಾದೃಶ್ಯವನ್ನು, ಲಯದ ಮೇಲಿನ ಹಿಡಿತವನ್ನೂ ಕಾಪಿಟ್ಟುಕೊಂಡಿತು.ಆದಾಗ್ಯೂ ಕಾರ್ಯಕ್ರಮದ ಉತ್ತರಾರ್ಧ ಭಾಗವನ್ನು ಶ್ರುತಿ ಇನ್ನೂ ಸಮರ್ಥವಾಗಿ, ಅನಾಯಾಸದಿಂದ ಹಿಡಿದಿರಿಸಿಕೊಳ್ಳಬಹುದಾಗಿತ್ತು.

ನೃತ್ಯದ ಒನಪು, ಗಾಂಭೀರ್ಯಕ್ಕೆ ಹದವಾಗಿ ನಟುವಾಂಗದಲ್ಲಿ ಡಾ. ಶೋಭಾ ಶಶಿಕುಮಾರ್ ಮೇಳೈಸಿದರೆ, ಹಾಡುಗಾರಿಕೆಯೊಂದಿಗೆ ಸಂಗೀತ ಸಂಯೋಜನೆಯನ್ನೂ ಮಾಡಿದ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ಗಾಯನ ಅಂದಿನ ಹೈಲೈಟ್. ಅವರ ಗಾಯನ ಕರ್ಣಾನಂದಕರವಷ್ಟೇ ಆಗಿರದೆ; ಸಾಹಿತ್ಯ ಮತ್ತು ಭಾವಕ್ಕೆ ಹೊಂದುವಂತೆ ಅವರಿತ್ತ ಲಾಲಿತ್ಯದ ಪೋಷಣೆ ನಿಜಕ್ಕೂ ಅಭಿನಂದನೀಯ. ಖಂಜೀರ-ಡ್ರಮ್ ಪ್ಯಾಡ್‌ನಲ್ಲಿ ಪ್ರಸನ್ನ, ಮೃದಂಗದಲ್ಲಿ ಸಿ.ಲಿಂಗರಾಜು, ಕೊಳಲಿನಲ್ಲಿ ಜಯರಾಂ, ವೀಣೆಯಲ್ಲಿ ಶಂಕರ ರಾಮನ್ ಅವರದ್ದು ಪೂರಕವೆನಿಸುವ ಅನುಸರಣೀಯ ಅಭಿವ್ಯಕ್ತಿ. ಒಟ್ಟಿನಲ್ಲಿ ನೃತ್ಯ-ಗಾಯನ ಪರಸ್ಪರ ವಿಚ್ಛೇದವೆನಿಸದೆ ಪೂರ್ಣತೆಯ ಸ್ಪರ್ಶವನ್ನು ನೀಡಿದ್ದು ನೆನಪಿನಲ್ಲಿಟ್ಟುಕೊಳ್ಳುವಂತದ್ದು.

ಇದರ ಹೊರತಾಗಿಯೂ ಹೇಳುವುದಿದ್ದಲ್ಲಿ ರಂಗದೆಡೆಗಿನ ಪೂರ್ಣ ಧ್ಯಾನಸ್ಥ ಸ್ಥಿತಿಯನ್ನು ಪೂರ್ವಾರ್ಧದಲ್ಲೇ ನಿರೂಪಿಸಿಕೊಂಡರೆ ಪ್ರೇಕ್ಷಕರನ್ನು ಮತ್ತಷ್ಟು ಏಕಚಿತ್ತರನ್ನಾಗಿಸಬಹುದು.ನೇತ್ರಾಭಿನಯ ನಿರ್ದಿಷ್ಟತೆ, ಬಾಹುಬೇಧಗಳಲ್ಲಿ ಸ್ಪಷ್ಟತೆ, ಚಲನಾವಿಶೇಷಗಳಲ್ಲಿ ದೃಢತೆಯತ್ತ ಶ್ರುತಿ ಹೆಚ್ಚಿನ ಗಮನ ಹರಿಸಿದರೆ ಆಕೆಯ ನೃತ್ಯ ಹೆಚ್ಚಿನ ಅಂದವನ್ನು ಪಡೆಯಬಲ್ಲುದು. ಭವಿಷ್ಯದಲ್ಲಿಯೂ ಕಲೆಯ ಕುರಿತಾಗಿ ಶ್ರುತಿಯ ಆಸಕ್ತಿ, ಶ್ರದ್ಧೆ, ಅಭ್ಯಾಸ, ಅಧ್ಯಯನಗಳು ನಿರಂತರವಾಗಿ ಹೊರಹೊಮ್ಮಿದರೆ ಕರ್ನಾಟಕಕ್ಕೆ ಒಳ್ಳೆಯ ಕಲಾವಿದೆ ಪ್ರಾಪ್ತಿಯಾಗುತ್ತಾಳೆ.

Comments are closed.