ಅಂಕಣಗಳು

Subscribe


 

ಸಿಂಹಮುಖ ಹಸ್ತ

Posted On: Tuesday, December 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ : ಮಧ್ಯ ಮತ್ತು ತೋರುಬೆರಳನ್ನು ಬಾಗಿಸಿ ಅವುಗಳ ತುದಿಯನ್ನು ಹೆಬ್ಬೆರಳೊಂದಿಗೆ ಸೇರಿಸಿ, ಕಿರು ಮತ್ತು ತೋರುಬೆರಳನ್ನು ನೀಡಿದರೆ ಸಿಂಹಮುಖ ಹಸ್ತ. ಸಿಂಹಮುಖವೆಂದರೆ ಸಿಂಹದ ಮುಖ ಎಂಬ ಅರ್ಥ. ನಾಟ್ಯಶಾಸ್ತ್ರದಲ್ಲಿ ಈ ಹೆಸರಿನ ಹಸ್ತವಿಲ್ಲ. ಹಸ್ತಮುಕ್ತಾವಳಿಯಲ್ಲಿ ಇದನ್ನು ಸಿಂಹಾಸ್ಯ ಎನ್ನಲಾಗಿದ್ದು ಲಕ್ಷಣವು ಹೆಬ್ಬೆರಳು ಮತ್ತು ಕಿರುಬೆರಳನ್ನು ಪ್ರತ್ಯೇಕವಾಗಿ ಹಿಡಿದು ಉಳಿದ ಬೆರಳುಗಳನ್ನು ಬಗ್ಗಿಸಬೇಕೆಂದು ಸೂಚಿಸಿದೆ. ಇದು ಮಿಶ್ರ ಹಸ್ತದ ಗುಂಪಿಗೆ ಸೇರುತ್ತದೆ.

ಸಿಂಹಮುಖ ಹಸ್ತ

Copyrights reserved. No use Without prior permission.

ವಿನಿಯೋಗ : ಹವಳ-ಮುತ್ತನ್ನು ತೋರುವುದು, ಸುವಾಸನೆ, ಮುಂಗುರುಳು ತಿದ್ದುವಿಕೆ, ಕೇಳುವುದು, ಬಿಂದು, ಮೋಕ್ಷಾಭಿಲಾಷೆ, ಹೋಮ ಮಾಡುವುದು, ಮೊಲ, ಆನೆ, ದರ್ಭೆಯನ್ನು ಬಿಡಿಸುವುದು, ಕಮಲದ ಹಾರ, ಸಿಂಹದ ಮುಖ, ಔಷಧಿಯನ್ನು ಪರೀಕ್ಷಿಸುವುದು.

ಇತರೇ ವಿನಿಯೋಗ : ಸಿಂಹಾಸನ, ಪಲ್ಲಕ್ಕಿ, ಮಂಚ, ಆನೆಯ ದಂತ, ಕುಚದಿಂದ ಲೇಪಿಸುವುದು, ಮತ್ತೆ ಮತ್ತೆ ನೋಡುವುದು, ಎತ್ತು, ಬಾಣ, ಸಾಯುಜ್ಯ, ಅಕ್ಷತೆಗಳನ್ನು ಕೊಡುವುದು, ಉದ್ದನೆಯ ಹಾರವನ್ನು ಸರಿಪಡಿಸುವುದು ಮತ್ತು ಧರಿಸುವುದು, ಹಸನ್ಮುಖ, ಭಾವೋತ್ಕರ್ಷ, ಉಜ್ಜುವಂತಹ ಭಾವ, ಆಲಿಸುವುದು, ಸ್ಮಿತವದನ, ಸಿಂಹ, ನಾಯಿ, ನಾಯಿಯ ತೋಳು, ಹುಲಿಯ ಮುಖ, ಮಗುವಿಗೆ ತಿನ್ನಿಸಲಿರುವ ಗಂಜಿ ಮುಂತಾದ ತಿನಿಸುಗಳು, ಕರಡಿಯ ಮುಖ, ಕರಡಿ, ಮೊಸಳೆ, ಹೆದರಿದವನು ಇತ್ಯಾದಿ.

ಸಂಕರ ಹಸ್ತ ವಿಭಾಗದಲ್ಲಿ ಸಿಂಹಮುಖ ಹಸ್ತವನ್ನು ಅಡ್ಡಲಾಗಿ ಹಿಡಿದರೆ ಕಪ್ಪು ಅಥವಾ ಶ್ಯಾಮಲ ವರ್ಣ ಎಂದೂ ಅರ್ಥ. ನಾನಾರ್ಥ ಹಸ್ತ ವಿಭಾಗದಲ್ಲಿ ಅಲಪದ್ಮ ಮತ್ತು ಸಿಂಹಮುಖ ಈ ಎರಡೂ ಹಸ್ತಗಳನ್ನು ಕರ್ಣ ಪ್ರದೇಶದಲ್ಲಿ ಚಾಲಿಸಿದರೆ ಶರದೃತುವೆಂದು ಅರ್ಥ.

ಚಾರಿಗಳಲ್ಲಿ, ಹರಿಣಪ್ಲುತಕ ಕರಣದಲ್ಲಿ ಇದರ ಬಳಕೆಯಿದೆ. ನಟರಾಜ, ಈಶಾನ, ನೃಸಿಂಹ ಹಸ್ತಗಳಲ್ಲೂ ; ಗಾಢ ಹಸಿರು, ಕೃಷ್ಣಾನದಿ, ಕೃಷ್ಣವೇಣಿ, ಅರ್ಜುನವೃಕ್ಷಗಳ ಸೂಚನೆಗೂ ಸಿಂಹಮುಖದ ಬಳಕೆಯಿದೆ. ಸಿಂಹಮುಖದ ಹೆಬ್ಬೆರಳನ್ನು ಅತ್ತಿತ್ತ ಅಲ್ಲಾಡಿಸುವುದು ತಿಕ್ತ (ಒಗರು) ಎಂದು ಸೂಚಿಸಿದರೆ ; ಯಕ್ಷಗಾನದಲ್ಲಿ ಜಿಂಕೆ, ಆನೆ, ಸಾಧು ಪ್ರಾಣಿಗಳು, ಸಂಪತ್ತು, ಮುಂತಾದ ವಿವರಣೆ ಕೊಡಲು ಬಳಸುತ್ತಾರೆ.

ನಿತ್ಯಜೀವನದಲ್ಲಿ ಈ ಹಸ್ತವನ್ನು ಚಿಟಿಕೆ ಹೊಡೆಯಲು, ಕುಂಕುಮದ ಬೊಟ್ಟಿಡಲು, ಪವಿತ್ರವಾದ ವಸ್ತುಗಳನ್ನು ಹಿಡಿಯಲು, ವಸ್ತುವಿನ ನಯವನ್ನು ಪರೀಕ್ಷಿಸಲು ಇತ್ಯಾದಿ ಬಳಸುತ್ತಾರೆ.

ಸಿಂಹಮುಖದಲ್ಲಿನ ಹೆಬ್ಬೆರಳನ್ನು ಸ್ವಸ್ಥಾನಕ್ಕೆ ತಂದು ಕೊಂಡರೆ ಅದು ಭದ್ರಹಸ್ತವೆನಿಸುತ್ತದೆ. ಭದ್ರ ಎಂದರೆ ಕ್ಷೇಮ ಎಂದರ್ಥ. ಬಾಲರಾಮಭರತದಲ್ಲಿ ಉಲ್ಲೇಖಿತ.

ವಿನಿಯೋಗ : ಹೃದಯ ಮತ್ತು ಹಣೆಯಲ್ಲಿ ಚಂದ್ರನನ್ನು ಧರಿಸುವುದು, ಸಂವಾದ, ಸಂಶಯ, ತರ್ಕ, ಪ್ರೋಕ್ಷಣೆ, ದ್ವಾರಪಾಲಕರ ಸೂಚನೆ.

ಸಿಂಹಮುಖ ಹಸ್ತದ ತೋರು ಮತ್ತು ಕಿರು ಬೆರಳನ್ನು ಬಾಗಿಸುವುದು ಅಥವಾ ತೋರು ಮತ್ತು ಕಿರು ಬೆರಳುಗಳನ್ನು ಕ್ರಮವಾಗಿ ಉಂಗುರ ಮತ್ತು ಮಧ್ಯ ಬೆರಳುಗಳ ಹಿಂದೆಯಿರಿಸುವುದನ್ನು ಅಜಮುಖ ಹಸ್ತವೆನ್ನಲಾಗಿದೆ. ಇದು ಭರತಾರ್ಣವದಲ್ಲಿ ಉಲ್ಲೇಖಿತ.

ವಿನಿಯೋಗ : ಆಡಿನ ಮುಖ, ಕೊಂಬುಗಳಿಲ್ಲದ ಪ್ರಾಣಿಗಳ ಮುಖ, ಮಲ್ಲಯುದ್ಧ, ಆನೆಯ ಕುಂಭಸ್ಥಳ, ಯುದ್ಧ, ವಿದೇಶಾಂಗ ನೀತಿ.

ಎರಡು ಕೈಯ್ಯಲ್ಲೂ ಮಧ್ಯ ಮತ್ತು ಉಂಗುರ ಬೆರಳನ್ನು ಅಂಗೈಯೊಳಗೆ ಮಡಚಿ, ಹೆಬ್ಬೆರಳನ್ನು ಅದರ ಮೇಲಿಟ್ಟು, ಉಳಿದ ಬೆರಳನ್ನು ಉದ್ದಕ್ಕೆ ಚಾಚುವುದನ್ನು ತಳ-ಸಿಂಹಮುಖಹಸ್ತ ಎನ್ನುತ್ತಾರೆ. ವಿನಿಯೋಗ : ಎತ್ತು.

ಕಥಕಳಿಯಲ್ಲಿ ಮುಕುರ, ಒಡಿಸ್ಸಿಯಲ್ಲಿ ಗೋಮುಖ, ಮಣಿಪುರಿಯಲ್ಲಿ ಮೃಗಶೀರ್ಷವೆನ್ನುತ್ತಾರೆ. ಕಥಕಳಿಯಲ್ಲಿ ಮುಕುರ ಹಸ್ತದ ಲಕ್ಷಣ ; ಕಿರು ಮತ್ತು ತೋರು ಬೆರಳನ್ನು ಸ್ವಲ್ಪವೇ ಬಗ್ಗಿಸಿ, ಮಧ್ಯ ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿನ ತುದಿಗೆ ಒಳಬಗ್ಗಿ ಸ್ಪರ್ಶಿಸುವಂತೆ ಮಾಡುವುದು.

ವಿನಿಯೋಗ : ಗಂಡುಹಂದಿಯ ಕೋಡು, ವಿರಹ, ಪಾದದ ಕೀಲು, ಸೊಂಟ, ವೇದ, ಸೋದರ, ಅಡಿಪಾಯ, ಪಿಶಾಚ, ವೇಗ, ಕವಚ, ದಪ್ಪ, ಅನಿಷ್ಟ, ಕಪ್ಪು ಜೀರುಂಡೆ, ಕಿರಣ, ಉತ್ತಮ, ಬಳೆ. ಕಂಕಣ, ನಿಷೇಧ, ನಿರಾಕರಣ, ಭುಜದ ಆಭರಣ.

ಕಾಳಿಕಾ ಪುರಾಣವೂ ಸಿಂಹಮುಖವನ್ನು ಉಲ್ಲೇಖಿಸಿದ್ದು ; ಮೃಗಮುದ್ರೆ ಎಂದು ಆಗಮವೇದ ಕರೆದಿದೆ. ಆದರೆ ಮಧ್ಯ ಉಂಗುರ ಬೆರಳುಗಳ ಮಧ್ಯ ಭಾಗಕ್ಕೆ ಹೆಬ್ಬೆರಳನ್ನು ಸ್ಪರ್ಶಿಸುವುದು ಕ್ರಮ. ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಮುದ್ರೆಗಳ ಪೈಕಿ ಹೆಬ್ಬೆರಳಿನೊಂದಿಗೆ ಮಧ್ಯ ಮತ್ತು ಉಂಗುರ ಬೆರಳನ್ನು ಸೇರಿಸುವುದು ಹೋಮ (ಸೂಕರ) ಮುದ್ರಾ ಎನಿಸಿಕೊಳ್ಳುತ್ತದೆ. ಯೋಗಶಾಸ್ತ್ರದ ಮುದ್ರಾ ವಿಜ್ಞಾನವು ಅಂಗೈ ಮೇಲ್ಮುಖವಾಗಿರಿಸಿ ಹೆಬ್ಬೆರಳು, ಉಂಗುರ ಬೆರಳು ಮತ್ತು ಮಧ್ಯ ಬೆರಳ ತುದಿಗಳನ್ನು ಹಿಡಿಯುವ ಸಿಂಹಮುಖವನ್ನು ಅಪಾನಮುದ್ರೆ ಎಂದಿದೆ. ಇದು ಬೆವರು-ಮಲ-ಮೂತ್ರ ಮುಂತಾದ ದೇಹದ ಕಷ್ಮಲ ವಿಸರ್ಜನೆಯಸಂಬಂಧಿ ತೊಂದರೆಯನ್ನು ನಿವಾರಿಸಿ ಮೂತ್ರಪಿಂಡಗಳ ಸಮರ್ಥ ನಿರ್ವಹಣೆಗೆ, ಸುಲಭ ಪ್ರಸವಕ್ಕೆ, ಉದರವಾಯುಶೂಲೆ, ಮೂಲವ್ಯಾಧಿ, ಅಪಚನ-ಅತಿ ಬೆವರುವಿಕೆ-ಕೈಕಾಲು ಎದೆ ಹೊಟ್ಟೆ ಉರಿ- ಬಾಯಿ-ಮೂಗು-ಕಿವಿ-ವಸಡು-ಹಲ್ಲಿನ ತೊಂದರೆಗಳ ನಿವಾರಣೆಗೆ, ವಾಕರಿಕೆ-ಬಿಕ್ಕಳಿಕೆ-ಮಧುಮೇಹದ ಶಮನಕ್ಕೆ, ಹೃದಯ ಸಂವರ್ಧನೆಗೆ, ಶಾಂತಿ-ಸಾತ್ವಿಕ-ಸದ್ಭಾವನೆಗಳ ಉದ್ದೀಪನೆಗೆ ಸಹಕಾರಿ.

Leave a Reply

*

code