Author: ಉಜಿರೆ ಅಶೋಕ ಭಟ್
‘ಜಗತ್ತಿನ ಯಾವುದೇ ಸಾಂಸ್ಕೃತಿಕ ರಂಗಭೂಮಿಯೊಳಗಿನ ಗುಣಾತ್ಮಕ ಅಂಶಗಳು ಹೊರಹೋದದ್ದು ಮತ್ತೆ ಒಳಬರಲಿಲ್ಲ. ಹಾಗೆಯೇ ಅನ್ಯಕ್ಷೇತ್ರದಿಂದ ಒಳಬಂದ ಋಣಾತ್ಮಕ ಅಂಶಗಳು ಮತ್ತೆ ಹೊರಹೋಗಲಿಲ್ಲ’ ಎಂಬ ಡಾ.ಜೋಷಿಯವರ ಮಾತು ಸದಾ ವರ್ತಮಾನವಾಗಿರುತ್ತದೋ ಎಂಬ ಆತಂಕ ಕಲಾವಲಯದಲ್ಲಿದೆ. ಅದರಲ್ಲೂ ಯಕ್ಷಗಾನ ರಂಗಭೂಮಿ ವಿಚಲನೆಯ ಹಾದಿಯಲ್ಲಿದೆ. ಆಂಗಿಕ, ಸಾತ್ತ್ವಿಕ, ವಾಚಿಕ, ಆಹಾರ್ಯವೆಂಬ ನಾಲ್ಕು ವಿಭಾಗಗಳೂ ಆವಿಷ್ಕಾರ, ಪರಿಷ್ಕಾರವೆಂಬ ಹೆಸರಿನಲ್ಲಿ ತನ್ನ ಮೂಲಸ್ವರೂಪವನ್ನು ಮತ್ತು ಸ್ವಭಾವವನ್ನು ಕಳಕೊಂಡು ಬರೇ ರಮ್ಯಾದ್ಭುತವೆಂಬ ಶಬ್ದಾಡಂಬರಗಳಲ್ಲಿ ಮಾತ್ರ ಉಳಿದುಕೊಂಡಿದೆ. ಯಕ್ಷಗಾನದ ನೈಜ ಸ್ವರೂಪ (ಬೇಕಾದರೆ ಪರಂಪರೆ ಎಂದೇ ಹೇಳೋಣ) ಯಾವುದೆಂಬ ಗೊಂದಲದಲ್ಲಿದ್ದೇವೆ.
ಸುಮಾರು ೧೯೪೦ರಿಂದೀಚೆಗೆ ವೇಷಗಾರಿಕೆ, ಬಣ್ಣಗಾರಿಕೆ, ನೃತ್ಯವಿಧಾನ, ಮಾತುಗಾರಿಕೆ ಹೀಗೆ ಎಲ್ಲಾ ವಿಭಾಗಗಳಲ್ಲೂ ಸೃಜನಶೀಲವಾದ ಪರಿಷ್ಕಾರಗಳು ಆಗುತ್ತಾ ಬಂದವು. ಇದರಿಂದಾಗಿ ತೀರಾ ಜಾನಪದವಾಗಿದ್ದ ಕಲಾಸ್ವಭಾವಗಳು, ಸ್ವರೂಪಗಳು ಸಾಕಷ್ಟು ಶಾಸ್ತ್ರೀಯ ಅಂಶಗಳನ್ನು ಮೈಗೂಡಿಸಿಕೊಂಡಿತು. ಭಾರತೀಯ ರಂಗಭೂಮಿಯ ಇನ್ನಿತರ ಸೋದರಕಲೆಗಳ ಪ್ರಭಾವ ಯಕ್ಷಗಾನದ ಮೇಲೂ ಆಯಿತು. ಕಲಾವಿದ್ವಾಂಸರು ಸೇರಿದ ಗೋಷ್ಠಿ, ಕಮ್ಮಟಗಳಲ್ಲಿ ಒಳ್ಳೆಯ ಆರೋಗ್ಯಪೂರ್ಣ ಚರ್ಚೆ, ವಿಮರ್ಶೆಗಳು ನಡೆದವು. ಅಲ್ಲಿನ ಚಿಂತನಮಂಥನಗಳಿಂದ ಮೂಡಿಬಂದ ಒಳ್ಳೆಯ ಸಂಗತಿಗಳನ್ನು ರಂಗದಲ್ಲಿ ಅನುಯೋಜ್ಯವಾಗಿ ಅಳವಡಿಸಿದ ಪರಿಣಾಮದಿಂದ ಯಕ್ಷಗಾನವು ಸರ್ವಾಂಗಸುಂದರ ಸಮೃದ್ಧವಾದ ಪರಿಪೂರ್ಣ ಕಲೆಯೆಂದೇ ವಿದ್ದ್ವಜ್ಜನ ಮನ್ನಣೆ ಪಡೆಯಿತು. ಯಕ್ಷಗಾನ ವಿದ್ವಾಂಸರಾದ ಡಾ. ಶೇಣಿಯವರು ‘ಸಂಗೀತ ನಾಟ್ಯಾದಿ ಸಕಲ ಕಲೆಗಳು ಮೂಲದಲ್ಲಿ ಜಾನಪದವಾಗಿದ್ದು ಆಮೇಲೆ ವಿದ್ವಾಂಸರಿಂದ ಪರಿಷ್ಕರಿಸಲ್ಪಟ್ಟು ಶಾಸ್ತ್ರೀಯವೆಂದು ಒಪ್ಪುವುದಾದರೆ, ಸದ್ಯ ಯಕ್ಷಗಾನವನ್ನು ಶಾಸ್ತ್ರೀಯವೆನ್ನಲು ಯಾವ ಆತಂಕವೂ ಬೇಡ’ ಎಂಬುದಾಗಿ ತನ್ನ ಭಾಷಣದಲ್ಲಿ ಹೇಳಿದ್ದರು.
ಈ ಕಲಾವೈಭವ ೨೦೦೦ ಇಸವಿಯ ತನಕ ಸಾಗಿಬಂತು. ಆವಾಗಲೇ ಕನ್ನಡತಿಟ್ಟು, ತುಳುತಿಟ್ಟು ಎಂಬ ಸಣ್ಣ ಬಿರುಕೂ ಕಾಣಿಸಿಕೊಂಡಿತು. ಯಕ್ಷಗಾನ ನಾಟಕೀಯಸ್ವರೂಪಕ್ಕೆ ವಾಲಿತು. ಈ ಕಾಲಘಟ್ಟದಲ್ಲಿ ಪತ್ರಿಕಾಮಾಧ್ಯಮಗಳಲ್ಲೂ ಸಾಕಷ್ಟು ಪ್ರಸಾರ, ಪ್ರಚಾರ ಪಡೆಯಿತು. ರಂಗಭೂಮಿಯು ಪ್ರಸಾರಕ್ಕಾಗಿ ಮಾಧ್ಯಮವನ್ನು ಅವಲಂಬಿಸಿಕೊಂಡಿತೋ, ಇಲ್ಲವೇ ಮಾಧ್ಯಮವೇ ರಂಗಭೂಮಿಯನ್ನು ಆವರಿಸಿತೋ ಹೇಳುವುದು ಕಷ್ಟ. ಒಂದು ಹಂತದಲ್ಲಿ ಕಲಾಕಾರರಿಗೂ ಪ್ರಚಾರ ಬೇಕೆನ್ನಿಸಿತು. ದೈನಿಕ, ಪಾಕ್ಷಿಕ, ಮಾಸಿಕ ಹೀಗೆ ಸಾಹಿತ್ಯಿಕವಾಗಿ ಯಕ್ಷಗಾನದ ವಿಚಾರಗಳನ್ನು ಓದಿ, ನೋಡಿ, ಕೇಳಿ ಸಂತೋಷವೂ ಆಯಿತು.
ಆದರೆ ಈ ಸ್ವಾತಂತ್ರ್ಯ ಸ್ವೇಚ್ಛೆಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಕಲೆ, ಕಲಾವಿದ, ಸಂಘಟಕರಿಂದ ಮೊದಲ್ಗೊಂಡು ಕಲಾರಂಗಭೂಮಿಯ ಪ್ರತಿಯೊಂದು ವಿಚಾರದಲ್ಲೂ ಬೆಳೆದ ಕಮರ್ಷಿಯಲ್ ದೃಷ್ಟಿಕೋನ ಕಲಾವ್ಯಾಪಾರವನ್ನು ಕಲಾವ್ಯಭಿಚಾರವಾಗಿಸಲು ತಡ ಮಾಡಲಿಲ್ಲ. ಇದಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು ಫೇಸ್ಬುಕ್, ವಾಟ್ಯ್ಸಾಪ್, ಯೂಟ್ಯೂಬ್, ಹೈಕ್ ಇತ್ಯಾದಿ ಸೋಶಿಯಲ್ ಮೀಡಿಯಾಗಳು.
ಈಗೀಗಂತೂ ರಂಗಸ್ಥಳದಲ್ಲಿರುವ ಕಲಾವಿದರು ಸೋಶಿಯಲ್ ಮೀಡಿಯಾಗಳಿಗನುಗುಣವಾಗಿ ಮುಖ ಕೊಡುವ ಆತುರದಲ್ಲಿ ರಂಗಪ್ರಜ್ಞೆ, ಪಾತ್ರಪ್ರಜ್ಞೆ ಮರೆತು ವ್ಯವಹರಿಸುವಲ್ಲಿಯ ತನಕ ಸಂಚಲನ ಸೃಷ್ಟಿಯಾಗಿದೆ. ಅದಕ್ಕೂ ‘ದಾಖಲೀಕರಣ’ವೆಂಬ ಮೊಗವಾಡ. ಎರಡುವರ್ಷಗಳಿಂದೀಚೆಗಂತೂ ಇವು ಯಕ್ಷಗಾನವನ್ನು ‘ಐಟೆಕ್ಸ್’ಬೇಲಿಯಂತೆ ಆವರಿಸಿಬಿಟ್ಟಿದೆ. ಇದರ ವಿನಾ ಒಳಹೋಗಲೂ ಸಾಧ್ಯವಿಲ್ಲ. ಇತ್ತ ಅದರಿಂದ ಹೊರಬರಲೂ ಸಾಧ್ಯವಿಲ್ಲ.
ಹಾಗೆ ನೋಡಿದರೆ ಈ ಸೋಶಿಯಲ್ ಮೀಡೀಯಾಗಳಲ್ಲಿ ತುಂಬಿರುವ ಸಂಗತಿಗಳಲ್ಲಿ ಪ್ರತಿಶತ ೯೦ರಷ್ಟು ಯಕ್ಷಗಾನದ ನೈಜತೆಯಿಂದ ತೀರಾ ಭಿನ್ನವಾಗಿದೆ. ಬಣ್ಣಗಾರಿಕೆ, ಕುಣಿತ, ವೇಷಭೂಷಣ, ಅಭಿನಯಗಳು ಅವರವರಿಗೆ ಬೇಕಾದಂತೆ ಕಂಡಕಂಡಂತೆ ತಿದ್ದಿ ತೀಡಲ್ಪಟ್ಟಿದೆ. ನೃತ್ಯನಾಟ್ಯಗಳು ಐಟಮ್ ಡ್ಯಾನ್ಸ್‌ನಂತಾದರೆ ಪುಂಡುವೇಷಗಳಲ್ಲಿ ಸರ್ಕಸ್ ಕುಣಿತದ ಜಾಲ. ಹಾಸ್ಯಪಾತ್ರಗಳೋ ಇಂದ್ರಜಾಲ-ಡೊಂಬರಾಟಕ್ಕಿಳಿದರೆ, ಸ್ತ್ರೀಪಾತ್ರಗಳ ವಿಕಾರ-ವಿಪರೀತ ವೇಷವಿಧಾನ, ಗಾಂಭೀರ್ಯವಿಲ್ಲದ ರಾಜವೇಷಗಳು, ಮುಖವಾಡಗಳಲ್ಲಿ ಮುಳುಗಿರುವ ಬಣ್ಣದ ವೇಷಗಳು, ಜೊತೆಗೊಂದಷ್ಟು ಜಿಗಿಜಿಗಿ ಮಿಗಿಮಿಗಿ ಮಾತುಗಾರಿಕೆ ಯಕ್ಷಗಾನೀಯತೆಯನ್ನು ದೂರಕ್ಕಟ್ಟಿವೆ. ಶ್ರುತಿದೂರವಾದ ಚೆಂಡೆಯಬ್ಬರದಲ್ಲೇ ಮುಳುಗಿರುವ ರಂಗಸ್ಥಳ ಪಂಚಾಯ್ತಿಕಟ್ಟೆಯಂತಾಗಿದೆ. ಕಾಲಮಿತಿಗೊಳಪಟ್ಟ ಯಕ್ಷಗಾನ ಮೇಳಗಳೂ ಕೂಡಾ ರಂಗವ್ಯವಹಾರದಲ್ಲಿ ಪ್ರದರ್ಶನದೊಳಗೆ ಕಾಲಗತಿಯಲ್ಲಿ ಲಯಬದ್ಧತೆಯನ್ನು ತೋರಿಸುತ್ತಿಲ್ಲ. ಎಲ್ಲರಿಗೂ ವೇಗ-ತ್ವರಿತಗತಿಯೇ ಬೇಕು! ಹಂಡ್ರೆಡ್ ಮೀಟರ್ ಓಟಗಾರರು ಹೆಚ್ಚಿದ್ದಾರೆಯೇ ವಿನಾ ವಿಲಂಬದ ನಾಜೂಕಿನ ನಡೆ ಮಾಯವಾಗಿದೆ.
ಇದನ್ನೆಲ್ಲಾ ಅರಿಯದೆ, ಅರಿವಿಲ್ಲದೆ ‘ದಾಖಲೀಕರಣ’ವೆಂಬ ನೆಪದಲ್ಲಿ ತಮ್ಮ ತಮ್ಮ ಮೀಡಿಯಾಗಳಲ್ಲಿ ಬೇಕಾಬಿಟ್ಟಿ ಸೆರೆಹಿಡಿಯುವ ಧಾವಂತ ಇನ್ನೇನು ಒಳಿತನ್ನು ಸೃಷ್ಟಿಸೀತು? ಎಲ್ಲದರಲ್ಲೂ ರಾಗಲಾಪ, ನಾಟ್ಯಾಲಾಪ, ಗಾನಾಲಾಪಗಳೇ ತುಳುಕುತ್ತಿವೆ. ಅದಕ್ಕೂ ಅಭಿಮಾನಿ ಬಳಗದ ಸೋಗು ಬೇರೆ. ಈ ಮಲಿನತೆಯನ್ನು ಕಲಾಪ್ರೇಮ, ಕಲಾಪೋಷಕ, ಕಲೋಪಾಸಕ, ಕಲಾರಕ್ಷಕವೆಂದು ಬೆನ್ನುತಟ್ಟಿಕೊಳ್ಳುವ ಅಮಲು ಮತ್ತೊಂದು ಸೋಗಲಾಡಿತನ.
ಯಕ್ಷಗಾನಕ್ಕೆ ಸದ್ಯದ ಕಾಲಘಟ್ಟದಲ್ಲಿ ಅತಿಶಯವೆನಿಸುವ ಪ್ರಚಾರ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯೇನೋ ನಿಜ. ಆದರೆ ಸಮಷ್ಟಿದೃಷ್ಟಿಯ ಬದಲು ವ್ಯಷ್ಟಿಚಿಂತೆಯಲ್ಲಿರುವ ಇಂತಹ ಗಂಭೀರವಲ್ಲದ ಸುಳಿಯುವಿಕೆಗಳಲ್ಲಿ ಯಾವ ತೆರನಾದ ಪ್ರಯೋಜನ ನಿರೀಕ್ಷಿಸಲಾದೀತು? ಕಲೆಯ ಕುರಿತು ಯಾವ ಪ್ರಾಥಮಿಕ ಪ್ರಜ್ಞೆಯೂ ಇಲ್ಲದೆ, ಮಾಧ್ಯಮತಿಳಿವಳಿಕೆ, ಕಲಾಮೌಲ್ಯ, ರಂಗಗೌರವದ ಮಿತಿಗಳನ್ನು ತಿಳಿಯದೇ ಸುಖಾಸುಮ್ಮನೆ ದಾಖಲಿಸುತ್ತಾ ಹೋದರೆ ಅವುಗಳಿಂದ ದೊರೆಯುವ ಸಾರ್ಥಕತೆ ಏನು? ದಾಖಲೀಕರಣಕ್ಕೆ ಜವಾಬ್ದಾರಿ ಇದ್ದು ಅದು ಭವಿಷ್ಯಕ್ಕೆ ಹಸ್ತಾಂತರಗೊಳ್ಳುವ ಕ್ರಮವಿದ್ದರೇನೇ ಅದಕ್ಕೊಂದು ಮೌಲ್ಯ ಇರಲು ಸಾಧ್ಯ. ಇದನ್ನು ಅರಿತು ನಡೆಯುವುದೆಂದು?